ಅರಳದ ಮಲ್ಲಿಗೆ

ಅರಳದ ಮಲ್ಲಿಗೆ

ಚಿತ್ರ: ಲೂಯ್ಡ್‌ಮಿಲ ಕೊಟ್
ಚಿತ್ರ: ಲೂಯ್ಡ್‌ಮಿಲ ಕೊಟ್

“ಏಳು ಪುಟ್ಟ, ಏಳಮ್ಮ  ಆಗ್ಲೆ ಎಂಟು ಗಂಟೆ. ಸ್ಕೂಲಿಗೆ ಹೋಗಲ್ವಾ ಚಿನ್ನ” ಎನ್ನುತ್ತ ರೇಣುಕ ಮಗಳನ್ನು ನಿದ್ರೆಯಿಂದ ಎಚ್ಚರಿಸಲು ಸಾಹಸ ಪಡುತ್ತಿದ್ದಳು.
ಇದು ಪ್ರತಿನಿತ್ಯದ ಹಾಡು. ಬೆಚ್ಚಗೆ ಹೊದ್ದು ಮಲಗಿದ್ದ ಸುನಿ ಎಚ್ಚರವಿದ್ದರೂ ಅಮ್ಮನ ಮುದ್ದು, ಕೋಪಕ್ಕೆ ತಿರುಗುವವರೆಗೂ ಏಳದೆ ನಿದ್ರೆಯಲ್ಲಿ ಇರುವಂತೆ ನಟಿಸುತ್ತಿದ್ದಳು. ಏಳಿಸಿ ಏಳಿಸಿ ಸೋತ ರೇಣುಕ ಕೊನೆಗೆ ರೇಗಿ ಹೊಡೆಯಲು ಕೈಯೆತ್ತಿದಾಗ ತಟ್ಟನೆ ಎದ್ದು ತುಂಟತನದಿ ಕೆನ್ನೆಯುಬ್ಬಿಸಿದಾಗ ಮಗಳನ್ನು ತಬ್ಬಿ ಮುದ್ದಿನ ಮಳೆ ಸುರಿಸುವಳು.

ಹೇಮಂತ್, ರೇಣುಕರ ಮುದ್ದಿನ ಮಗಳು ಸುನೀತ. ವರ್ಷದ ಮಗು ಸುಫಲನಿದ್ದರೂ ಇವರಿಬ್ಬರಿಗೂ ಮಗಳ ಮೇಲೆಯೇ ಹೆಚ್ಚಿನ ಪ್ರೀತಿ. ಇವರಿಬ್ಬರ ಅತೀ
ಪ್ರೀತಿ ಸುನಿಯನ್ನು ಹೆಚ್ಚಿನ ತುಂಟಿಯನ್ನಾಗಿಸಿತ್ತು. ಸದಾ ಏನನ್ನಾದರೂ ಮಾಡಿ ಅಮ್ಮನಿಂದ ಬೈಗುಳ ತಿನ್ನದಿದ್ದರೆ ಅವಳಿಗೆ ತೃಪ್ತಿಯೇ ಇಲ್ಲಾ. ಅಮ್ಮನ ಕಣ್ತಪ್ಪಿಸಿ ರಸ್ತೆಗೆ ಓಡುವ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಿತ್ತು. ಪಾಪುವನ್ನು ಆಡಿಸುವ ನೆವದಲ್ಲಿ ಅವನ ಕೆನ್ನೆ ಚಿವುಟಿ ರಕ್ತ ಬರಿಸಿ ಅವನು ಅತ್ತಾಗ ಅಮ್ಮನ ಕೈಗೆ ಸಿಗದೆ ಓಡುತ್ತಿದ್ದಳು. ನೀರಿನಲ್ಲಿ ಆಡುವುದೆಂದರೆ ಅದೆಷ್ಟು ಹಿಗ್ಗು. ಆದರೆ ಶಾಲೆಗೆ ಹೋಗುವುದೆಂದರೆ ಅಷ್ಟೇ ಸಂಕಟ. ಅವಳನ್ನು ಶಾಲೆಗೆ ಕಳುಹಿಸಲು ರೇಣುಕ ಎರಡೂ ಕೈಗಳಲ್ಲೂ ಚಾಕಲೇಟ್ಗಳನ್ನು ಇರಿಸಿ ಪುಸಲಾಯಿಸಿ ಕಳುಹಿಸುತ್ತಿದ್ದಳು. ಓದಿ ಬರೆಯುವುದೆಂದರೆ ತಲೆ ನೋವು, ಅಮ್ಮನ ಸಂತೋಷಕ್ಕಾಗಿ ಪುಸ್ತಕ ಹಿಡಿದ ಶಾಸ್ತ್ರ ಮಾಡಿ ಹಸಿವು ಎನ್ನುತ್ತ ಅಮ್ಮನ ಹಿಂದೆ ಓಡುತ್ತಿದ್ದಳು. ಮುದ್ದಿನ ಖನಿ ಸುನಿಯ ತುಂಟತನಗಳೆಲ್ಲ ರೇಣುಕಾಳಿಗೆ ಪ್ರಿಯವಾಗಿದ್ದರೂ ಒಮ್ಮೊಮ್ಮೆ ಸಹನೆ ಕೆಡಿಸುತ್ತಿದ್ದಳು. ಆಡಲೆಂದು ರಸ್ತೆಗೆ ಓಡಿದ ಸುನಿ ಸೈಕಲ್ಗೆ ಸಿಕ್ಕಾಗ ಎರಡು ದಿನ
ಆಸ್ಪತ್ರೆಯಲ್ಲಿರಬೇಕಾಯಿತು. ಐಸ್ಕ್ರೀಂ ಬೇಕೆಂದು ಹಟ ಹಿಡಿದು ರಸ್ತೆಯಲ್ಲಿ ಹೊರಳಾಡುವಾಗ ಸಿಟ್ಟು ಬಂದರೆ, ಐಸ್ಕ್ರೀಂ ತಿಂದು, ನೀರಿನಲ್ಲಿ ಆಡಿ ಜ್ವರ ಬರಿಸಿಕೊಂಡು ನರಳುವಾಗ ಅವಳ ಜೊತೆ ರೇಣುಕಾಳೂ ನರಳುತ್ತಿದ್ದಳು.

ಇಂಜೀನಿಯರ್ ಆಗಿದ್ದ ಹೇಮಂತ್ ಅಣೆಕಟ್ಟೆ ಕಟ್ಟುತ್ತಿರುವ ಹಳ್ಳಿಯಲ್ಲಿಯೇ ವಾಸವಾಗಿದ್ದ. ಯಾವ ಅನುಕೂಲವು ಇಲ್ಲದ ಹಳ್ಳಿಗೆ ಸಂಸಾರವನ್ನು ಕರೆತರುವ ಸಾಹಸ ಮಾಡದೆ ವಾರಕ್ಕೊಮ್ಮೆ ಬಂದು ಹೋಗುತ್ತಿದ್ದ. ಸದಾ ಮನೆಯಲ್ಲಿರದ ಪಪ್ಪನ ಬಗ್ಗೆ ಸುನಿಗೆ ಅಸಮಾಧಾನ. ತಾನು ಕಲಿತಿದ್ದ ಪಾಠಗಳನ್ನೆಲ್ಲ ಕೇಳಿ ಖುಷಿಯಿಂದ ಮುದ್ದಿಸಿ ತನ್ನನ್ನು ರಮಿಸುತ್ತಿದ್ದ ಪಪ್ಪ ಸದಾ ತನ್ನ ಜೊತೆಯಲ್ಲಿಯೇ ಇರಬೇಕು ಎಂಬ ಆಸೆಯಿಂದ ಪ್ರತಿಸಾರಿ ಹೇಮಂತ್ ಬಂದು ಹೋಗುವಾಗಲೆಲ್ಲಾ ಅತ್ತು-ಕರೆದು ರಂಪ ಮಾಡುತ್ತಿದ್ದಳು. ಅವಳನ್ನು ಸಮಾಧಾನ ಮಾಡಿ ಹೋಗುವಷ್ಟರಲ್ಲಿ ಹೇಮಂತ್ ಹಣ್ಣಾಗುತ್ತಿದ್ದ. ಮಗಳ ಗೋಳನ್ನು ನೋಡಲಾರದೆ ರೇಣುಕ ಇಲ್ಲಿಗೆ ವರ್ಗ ಮಾಡಿಸಿಕೊಳ್ಳಲು ಒತ್ತಾಯಿಸುತ್ತಿದ್ದಳು. ಆದರೆ ಬಡ್ತಿ ಸಿಗುವ ಸಾಧ್ಯತೆ ಇರುವುದರಿಂದ ಇನ್ನೆರಡು ವರ್ಷ
ಅಲ್ಲಿಯೇ ಇರಲು ಹೇಮಂತ್ ನಿರ್ಧರಿಸಿದ್ದ. ಪತ್ನಿ, ಮುದ್ದಿನ ಮಕ್ಕಳನ್ನು ಅಗಲಿರುವುದು ಕಷ್ಪವೇ ಆದರೂ ಮುಂದಿನ ಒಳ್ಳೆಯ ಭವಿಷ್ಯಕ್ಕಾಗಿ ಕಷ್ಟ ಸಹಿಸಲು ಸಿದ್ಧನಾಗಿದ್ದ.

ಅದೊಂದು ದಿನ ಸುನಿ ಹೊಟ್ಟೆನೋವೆಂದು ನರಳತೊಡಗಿದಾಗ ಶಾಲೆಗೆ ತಪ್ಪಿಸುವ ನೆವವೆಂದೇ ತಿಳಿದು ಅಲಕ್ಷಿಸಿ ಬಲವಂತವಾಗಿ ಶಾಲೆಗೆ ಕಳುಹಿಸಿದಳು. ಆದರೆ ಗಂಟೆಯೊಳಗಾಗಿ ಮನೆಗೆ ಬಂದ ಸುನಿಯನ್ನು ಕಂಡು ಗಾಬರಿಯಾಗಿ ಆಸ್ಪತ್ರೆಗೆ ಕರೆದೊಯ್ದಳು. ಹೊಟ್ಟೆನೋವು ಕಡಿಮೆಯಾದರೂ ಸುನಿ ದಿನದಿನಕ್ಕೆ
ನವೆಯಲಾರಂಭಿಸಿದಳು. ಸದಾ ಚಟುವಟಿಕೆಯಿಂದ ನಲಿದಾಡುತ್ತ ಪಟಪಟನೆ ಮಾತನಾಡುತ್ತಾ ಚುರುಕಾಗಿರುತ್ತಿದ್ದ ಸುನಿ ಈಗ ಬಾಡಿದ ಹೂವಿನಂತಾದಳು. ಅವಳ ಚೇಷ್ಟೆ, ತುಂಟಾಟ ಮಾಯವಾಗಿತ್ತು. ಹುಣ್ಣಿಮೆ ಕಳೆದ ಚಂದ್ರನಂತೆ ಮಂಕಾಗತೊಡಗಿದ ಸುನಿಯನ್ನು ಪ್ರಸಿದ್ದ ಮಕ್ಕಳ ವೈದ್ಯರಲ್ಲಿಗೆ ಕರೆದೊಯ್ದಳು. ಅಲ್ಲಿ ತಪಾಸಣೆ ನಡೆಸಿ ಎಕ್ಸರೇ ತೆಗೆದು ಮಾರನೆ ದಿನ ಬರುವಂತೆ ತಿಳಿಸಿದಾಗ ರೇಣುಕ ಚಡಪಡಿಸಿದಳು. ನಿಂತಲ್ಲಿ ನಿಲ್ಲದಾದಳು. ತನ್ನ ಕಂದನಿಗೇನೂ ಆಗದಿರಲೆಂದು ದೇವರಲ್ಲಿ ಮೊರೆ ಇಟ್ಟಳು. ತೋಚಿದ ದೇವರಿಗೆಲ್ಲಾ ಮುಡಿಪು ಕಟ್ಟಿದಳು.

ರಾತ್ರಿಯೆಲ್ಲ ನಿದ್ದೆ ಇಲ್ಲದೆ ಕಳೆದ ರೇಣುಕ ಬೆಳಿಗ್ಗೆ ಅವಸರವಾಗಿ ಎದ್ದು ಕೆಲಸ ಮುಗಿಸಿ ಮಗುವನ್ನು ಪಕ್ಕದ ಮನೆಯಲ್ಲಿ ಬಿಟ್ಟು, ಸುನಿಯ ಜೊತೆ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿ ಮಾಡಿದಳು. ಅವರೇನು ಹೇಳುವರೋ ಎಂದು ಮೈಯೆಲ್ಲ ಕಣ್ಣಾಗಿಸಿಕೊಂಡು ಕಾದಳು. ಅವಳ ಕಾತರವನ್ನು ಗಮನಿಸದವರಂತೆ ವೈದ್ಯರು ಸುನಿಯನ್ನು ಮಾತಾಡಿಸುತ್ತಾ ಕಾಲಹರಣ ಮಾಡತೊಡಗಿದರು. ಇದನ್ನು ಕಂಡ ರೇಣುಕ ಅಸಹನೆಯಿಂದ ಚಡಪಡಿಸಿದಳು. ವೈದ್ಯರು ಸುನಿಯನ್ನು ಎತ್ತಿಕೊಂಡು ಕಿಟಕಿಯತ್ತ ಸರಿದು ತೋಟದಲ್ಲಿನ ಹೂಗಳನ್ನು ತೋರಿಸುತ, “ಬೇಬಿ, ಅಲ್ಲಿ ನೋಡು ಎಷ್ಟೊಂದು ಹೂಗಳಿವೆ. ನಿನಗೆ
ಬೇಕಾ” ಅಂದಾಗ ಆಸೆಯಿಂದ ಬೇಕೆಂದು ಕತ್ತಾಡಿಸಿದಳು. ನರ್ಸನ್ನು ಕರೆದು, “ಈ ಬೇಬಿಗೆ ತೋಟ ತೋರಿಸಿ ಅವಳಿಗಿಷ್ಟವಾದ ಹೂ ಕುಯ್ದುಕೊಡು” ಎಂದು ಹೇಳಿ ನರ್ಸಿನ ಜೊತೆ ಕಳುಹಿಸಿದರು.

ನರ್ಸಿನ ಜೊತೆ ತೋಟಕ್ಕೆ ಬಂದ ಸುನಿಗೆ ಅಷ್ಟೊಂದು ಹೂಗಳನ್ನು ಒಮ್ಮೆಲೆ ಕಂಡಾಗ ಸಂಭ್ರಮದಿಂದ ದುಂಬಿಯಂತೆ ಅವುಗಳ ಸುತ್ತಾಕುಣಿದಾಡಿದಳು. ಕೈತುಂಬಾ
ಹೂ ಸಿಕ್ಕಾಗ ಆನಂದದಿಂದ ತಾಯಿಗೆ ತೋರಿಸುವ ಆತುರದಿಂದ ಓಡಿ ಬಂದಾಗ ಅಳುತ್ತಿದ್ದ ಅಮ್ಮನನ್ನು ಕಂಡು ದಂಗಾಗಿ ಅಲ್ಲಿಯೇ ನಿಂತುಬಿಟ್ಟಳು.

“ನೋ, ನೋ, ಡಾಕ್ಟರ್ ಸರಿಯಾಗಿ ಇನ್ನೊಂದು ಸಲ ಪರೀಕ್ಷೆ ಮಾಡಿ. ನೀವು ನಿಜ ಹೇಳಿ, ನನ್ನ ಕಂದನಿಗೆ, ನನ್ನ ಸುನಿಗೆ ಅಯ್ಯೋ ದೇವ್ರೆ, ನನ್ನ ಕೈಲಿ ತಡೆಯೋಕೆ ಆಗ್ತಾ ಇಲ್ಲಾ” ದುಃಖದಿಂದ ಮಾತುಗಳು ಕಡಿದು ರೇಣುಕ ಅಲ್ಲಿಯೇ ಕುಸಿದು ಬಿಕ್ಕಿ ಬಿಕ್ಕಿ ಅತ್ತಳು. ವೈದ್ಯರು ಸಂತೈಸುವ ಸ್ವರದಲ್ಲಿ ಸಮಾಧಾನ ಮಾಡಿಕೊಳ್ಳಿ. ನೀವು ಇಷ್ಟೊಂದು ನಿರಾಶರಾಗಬೇಕಿಲ್ಲ. ಬೇಬಿ ಆರೋಗ್ಯ ಸುಧಾರಿಸಲು ನಾವು ಶಕ್ತಿ ಮೀರಿ ಪ್ರಯತ್ನ ಪಡುತ್ತೇವೆ. ಈಗ ವೈದ್ಯಕೀಯ ವ್ರಪಂಚ ಬಹಳಷ್ಟು ಮುಂದುವರೆದಿದೆ. ಧೈರ್ಯ ತಂದುಕೊಂಡು ಮುಂದಿನದನ್ನು ಎದುರಿಸಲು ಸಿದ್ದವಾಗಿ. ಮಗು ಕಿವಿಗೆ ಈ ವಿಷಯ ಬೀಳದ ಹಾಗೆ ಎಚ್ಚರವಹಿಸಿ” ಎಂದರು. ಇಂತಹ ದೃಶ್ಯಗಳು ಪ್ರತಿದಿನ ಕಾಣುವುದು ಸಾಮಾನ್ಯವಾದರೂ ಇಂದಿನ ಈ ಘಟನೆ ಅವರ ವೈದ್ಯ ಹೃದಯವನ್ನು ಕಲಕಿತ್ತು. ದೇವಾ ನೀನೇಕೆ ಕ್ರೂರಿಯಾದೆ. ಈ ಹಾಲುಗಲ್ಲದ ಹಸುಳೆಯೇ ಬೇಕಾಗಿತ್ತೆ ನಿನಗೆ” ಎಂದುಕೊಳ್ಳುತ್ತ ನಿಟ್ಟುಸಿರು ಬಿಟ್ಟರು.

ಎಷ್ಟು ಹೊತ್ತಾದರೂ ಅಮ್ಮ ತನ್ನನ್ನು ಏಳಿಸಲು ಬಾರದಿದ್ದದು ಸುನಿಗೆ ಅಚ್ಚರಿಯಾಯಿತು ಕಳ್ಳನೋಟ ಬೀರುತ್ತಾ ಆಗ ಬರುತ್ತಾಳೆ, ಈಗ ಬರುತ್ತಾಳೆ ಎಂದು
ಕಾಯುತ್ತಿದ್ದಳು. ಆದರೆ ಬರಲೇ ಇಲ್ಲಾ. ಅವಳು ಬರುವ ತನಕ ತಾನು ಏಳಬಾರದೆಂದು ಮೊಂಡಿಯಂತೆ ಕಣ್ಮುಚ್ಚಿಯೇ ಇದ್ದಳು. ಎಂಟೂವರೆಯಾದರೂ ಮಿಸುಕಾಡದೆ ಮಲಗಿದ್ದ ಮಗಳನ್ನು ಕಂಡು ಗಾಬರಿಯಿಂದ ಬಂದ ರೇಣುಕ ಹೊದಿಕೆ ಸರಿಸಿ ನೋಡಿದಳು. ಕಿರುಗಣ್ಣಿನಿಂದ ಗಮನಿಸುತ್ತಿದ್ದ ಮಗಳ ನಾಟಕವನ್ನು ಗಮನಿಸುವ ವ್ಯವಧಾನವೆಲ್ಲಿತ್ತು. ತುಂಬು ನಿದ್ರೆಯಲ್ಲಿರುವಂತೆ ಮಲಗಿದ್ದ ಮಗಳನ್ನು ಏಳಿಸುವ ಮನಸ್ಸಾಗದೆ ಅವಳ ಪಕ್ಕದಲ್ಲಿಯೇ ಕುಳಿತುಬಿಟ್ಟಳು. ಮಗಳ ಮುಗ್ಧ ಮೊಗ ನೋಡುತ್ತಲೇ ತಡೆಹಿಡಿದಿದ್ದ ದುಃಖ ಒತ್ತರಿಸಿ ಬಂತು. ತನ್ನ ಮುದ್ದಿನ ಕುಡಿ, ಚೆಲುವಿನ ಖನಿ ಸುನಿಗೆ ಆ ದೇವ ಎಂಥ ಅನ್ಯಾಯ ಮಾಡಿಬಿಟ್ಟ. ಅವಳಿಗಾಗಿ ತಾನು ಪಟ್ಟ ಕಷ್ಟವೆಷ್ಟು ಹುಟ್ಟಿದ ಹಸುಳೆ ಬದುಕುವುದೇ ಇಲ್ಲ ಎನ್ನುವಾಗ ಸಾವಿನೊಡನೆ ಹೋರಾಡಿ ಬದುಕಿಸಿಕೊಂಡಿರಲಿಲ್ಲವೇ.
ಮಗಳನ್ನು ಕಂಡರೆ ಅವರಿಗೆಷ್ಟು ಪ್ರೀತಿ, ಮಗಳು ಅಂದರೆ ಪ್ರಾಣವನ್ನೇ ಬಿಡುತ್ತಾರೆ. ಅವಳ ಮೇಲೆ ಅವರಿಗೆಷ್ಟು ಕನಸುಗಳು, ಆಸೆಗಳು. ಮಗಳನ್ನು ನೋಡಲು ಓಡೋಡಿ ಬರುವ ಅವರಿಗೆ ಈ ವಿಷಯ ಹೇಗೆ ತಿಳಿಸಲಿ. ಅವರು ಇದನ್ನು ಸಹಿಸಿಯಾರೆ. ಕಳೆದ ಬಾರಿ ಬಂದಾಗ ಮಗಳ ನೋವನ್ನು ಕಂಡು ತಾವೇ ಅನುಭವಿಸುವಂತೆ ಅಡಿದ್ದರೂ, ಮಗಳನ್ನು ಅಗಲಲಾರದೆ ಒಲ್ಲದ ಮನಸ್ಸಿನಿಂದಲೇ ಹೋಗಿದ್ದರು. ಹೋಗುವಾಗ ಅವಳ ಆರೋಗ್ಯದ ಬಗ್ಗೆ ಸಾರಿ ಸಾರಿ ಹೇಳಿ ಹೇಳಿ ಹೋಗಿದ್ದರು. ಅವರಿಗೆ ಏನೆಂದು ಉತ್ತರಿಸಲಿ. ಈ ವಿಷಯ ತಿಳಿದರೆ ಅವರೆದೆ ಒಡೆದೇ ಹೋಗಬಹುದೇನೋ. ದೇವಾ ಹೀಗೇಕೆ ನನ್ನ ಕಾಡುತ್ತಿರುವೆ. ನನ್ನ ಕಂದಮ್ಮ ನಿನಗೇನು ಮಾಡಿತ್ತು. ಇಂಥ ಶಿಕ್ಷೆ ಏಕೆ ಕೊಟ್ಟು ಕಾಡುತ್ತಿರುವೆ, ಕರುಣಾಮಯಿ. ನನ್ನ ಸುನಿಗೇನು ಮಾಡದಿರು. ಅವಳ ಹೃದಯ ಮೌನವಾಗಿ ಮೊರೆ ಇಡುತ್ತಿತ್ತು. ಕಣ್ಣಿಂದ ಕಂಬನಿ ಧಾರೆಯಾಗಿ ಹರಿಯುತ್ತಲೇ ಇದೆ. ಅದನ್ನು ಒರೆಸಿಕೊಳ್ಳುವ ಪರಿವೆಯೂ ಇಲ್ಲದೆ ನೆಟ್ಟ ನೋಟದಿಂದ ಮಗಳ ಮೋರೆಯನ್ನು
ದಿಟ್ಟಿಸುತ್ತಿದ್ದಾಳೆ.

ತಾಯಿಯನ್ನು ಕಂಡೊಡನೆ ಕಣ್ಮುಚ್ಚಿದ ಸುನಿ ಅಮ್ಮನ ಕೂಗೇ ಕೇಳದಿದ್ದರಿಂದ ಮೆಲ್ಲನೆ ಕಿರುಗಣ್ಣಿನಿಂದ ಕದ್ದು ನೋಡಿದಳು. ತಾಯಿಯ ಕೆಂಪೇರಿದ್ದ ಕಣ್ಣುಗಳಲ್ಲಿ ಸುರಿಯುತ್ತಿದ್ದ ನೀರನ್ನು ಕಂಡು ಸರಕ್ಕನೇ ಎದ್ದು ಕುಳಿತಳು. ಬೆಚ್ಚಿದ ರೇಣುಕ ತಟ್ಟನೆ ಸೆರಗಿನಿಂದ ಕಣ್ಣೀರು ಒರೆಸಿಕೊಂಡಳು. ನೆನ್ನೆಯೂ ಅಮ್ಮ ಆಸ್ಪತ್ರೆಯಲ್ಲಿ ಅಳುತ್ತಿದ್ದಳು ಮತ್ತು ಈಗ ಕೂಡ ಅಳುತ್ತಿದ್ದಾಳೆ. ಅಳುವಿನ ಅರ್ಥ ತಿಳಿಯದ ಸುನಿ, “ಅಮ್ಮ, ಯಾಕಳ್ತಾ ಇದ್ದೀಯಾ, ನಿನಗೂ ಹೊಟ್ಟೆ ನೋವುತ್ತಾ” ಮುಗ್ಧವಾಗಿ ಪ್ರಶ್ನಿಸಿದಳು. ಸುನಿಯ ಪ್ರಶ್ನೆಗೆ ಕಣ್ಣೀರು ಚಿಮ್ಮಿತ್ತು. “ಹೌದು ಪುಟ್ಟ, ನಂಗೂ ಹೊಟ್ಟೆ ನೋವು” ಎನ್ನುತ್ತ ಮಗಳನ್ನು ತಬ್ಬಿಕೊಂಡು ಅಳುವನ್ನು ನುಂಗಿದಳು.

ಮೊನ್ನೆ ತಾನೇ ಹೋಗಿದ್ದ ಪಪ್ಪ ದಿಢೀರನೆ ಬಂದಿದ್ದು ಸುನಿಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿತ್ತು. ಪಪ್ಪ ಎನ್ನುತ್ತ ತಬ್ಬಿಕೊಂಡಳು. ಮೆಲ್ಲನೇ ಅವಳಿಂದ
ಬಿಡಿಸಿಕೊಂಡು ಅವಳಿಗೆ ಒಂದು ಮುತ್ತನ್ನೂ ಕೊಡದೆ ಅವಸರವಾಗಿ ಒಳಹೋದದ್ದು ಕೋಪ ತರಸಿತು ಸುನಿಗೆ. ಸಿಟ್ಟಿನಿಂದ ಕೆನ್ನೆಯುಬ್ಬಿಸಿ, “ಪಪ್ಪ ನಿನ್ನ ಸಂಗ ಟೂ. ನನ್ನ ಮಾತಾಡಿಸಬೇಡ” ಎನ್ನುತ್ತ ತನ್ನ ಶಾಲೆಯ ವ್ಯಾನ್ ಹತ್ತಿದಳು. ರೇಣುಕಳ ಟೆಲಿಗ್ರಾಂನಿಂದ ಗಾಬರಿಯಾಗಿ ಓಡೋಡಿ ಬಂದಿದ್ದ ಹೇಮಂತನಿಗೆ ಸುನಿಯ ಕೋಪವನ್ನು ತಿಳಿಯುವ ತಾಳ್ಮಯಾದರೂ ಎಲ್ಲಿತ್ತು.

ಸಂಜೆ ಸುನಿ ಮನೆಗೆ ಬಂದಾಗ ಹೇಮಂತ್ ಛಾವಣಿಯನ್ನು ಶೂನ್ಯವಾಗಿ ದಿಟ್ಟಿಸುತ್ತ ಮಲಗಿದ್ದನು. ದುಃಖದಿಂದ ಎದೆ ಭಾರವಾಗಿತ್ತು. ಅವ್ಯಕ್ತ ಸಂಕಟದಿಂದ ಕರುಳು ತುಡಿಯುತ್ತಿತ್ತು. ಕಂಬನಿ ಹರಿದು ಹರಿದು ಕಣ್ಣೆಲ್ಲ ಕೆಂಪಾಗಿತ್ತು. ಮಂಚದ ಮೇಲೆ ಮಲಗಿದ್ದ ಪಪ್ಪನನ್ನು ಗಮನಿಸಿದರೂ ಬೆಳಗಿನ ಕೋಪದಿಂದ ಗಮನಿಸದವಳಂತೆ ಅಮ್ಮಾ ಎಂದು ಕೂಗುತ್ತಾ ಒಳಗೆ ಓಡಿದಳು. ಮಗಳ ಸ್ವರ ಕೇಳಿ ದಿಗ್ಗನೆದ್ದ ಹೇಮಂತ್ ಅವಳ ಹಿಂದೆಯೇ ಧಾವಿಸಿ, “ಸುನಿ, ನನ್ನ ಚಿನ್ನ, ಬಂಗಾರ” ಎನ್ನುತ್ತಾ ಅವಳನ್ನು ಎತ್ತಿಕೊಂಡು ಮುತ್ತಿನ ಮಳೆಗರೆದ. ಪಪ್ಪನ ಕಣ್ಣು ಕೆಂಪಾಗಿದ್ದನ್ನು ಕಂಡು “ಪಪ್ಪಾ ಅಳ್ತಾ ಇದ್ದೀಯಾ. ನೀನೇನು ಪಾಪಚ್ಚಿನಾ” ಎನ್ನುತ್ತಾ ಕಿಲಕಿಲನೆ ನಕ್ಕಳು. “ಇಲ್ಲಾ ಬಂಗಾರ ಕಣ್ಣಿಗೆ ಕಸ ಬಿದ್ದಿತ್ತು” ಪೆಚ್ಚು ಪೆಚ್ಚಾಗಿ ನಕ್ಕ.

ಸುನಿ ಈಗ ಆತುರವಾಗಿ ಬೆಳಿಗ್ಗೆ ಬೇಗನೆ ಏಳುವ ಹಾಗಿಲ್ಲ. ನಿದ್ರೆಯಿಂದ ಎಚ್ಚೆತ್ತು ತಾನಾಗಿಯೇ ಏಳುವ ಪ್ರಯತ್ನ ಮಾಡಿದರೂ ರೇಣುಕ ಓಡಿ ಬಂದು, “ಮಲಕ್ಕೋ
ಸುನಿ, ಇಷ್ಟು ಬೇಗ ಏಕೆ ಏಳ್ತೀಯಾ” ಎನ್ನುತ್ತ ಹೊದಿಸಿ ಹೋಗುತ್ತಿದ್ದಳು. ಹಾಲು ಬೇಡ ನಂಗೆ ಕಾಫೀನೇ ಕೊಡು ಎಂದು ಕೇಳಿದಾಕ್ಷಣ ಕಾಫಿ ಬೆರೆಸಿ ಕೊಡುತ್ತಿದ್ದಳು.
ಅಮ್ಮಾ ಇವತ್ತು ಸ್ಕೂಲಿಗೆ ಹೋಗಲ್ಲ ಅಂದರೂ ಬೈಯದೆ ಆಗಲಿ ಸುನಿ ಮನೆಯಲ್ಲಿಯೆ ಇರು ಎನ್ನುವ ಅಮ್ಮನನ್ನು ಕಂಡರೆ ಖುಷಿಯೋ ಖುಷಿ. ಸುರಿಯುತ್ತಿರುವ ನೀರಿನಲ್ಲಿ ಆಡುತ್ತಿದ್ದರೂ ರೇಣುಕ ನೋಡಿದರೂ ನೋಡವವಳಂತೆ ಇರುತ್ತಾಳೆ. ಬೀದಿಯಲ್ಲಿ ಮನದಣಿಯುವಷ್ಟು ಕುಣಿಯುತ್ತಾಳೆ. ಮರಳ ಮೇಲೆ ಕಪ್ಪೆಗೂಡು ಕಟ್ಟುತ್ತಾಳೆ. ಬಟ್ಟೆ ಎಷ್ಟೇ ಕೊಳೆಯಾದರೂ ಈಗ ಮಮ್ಮಿ ಬೈಯುವುದಿಲ್ಲ ಎಂಬ ಧೈರ್ಯ ಸುನಿಗೆ. ಐಸ್ಕ್ರೀಂಗಾಗಿ ಹಟ ಹಿಡಿಯುತ್ತಿದ್ದ ಸುನಿಗೆ ಈಗ ಐಸ್ಕ್ರೀಂ ಎಂದೊಡನೆ ಕೊಡಿಸುತ್ತಾಳೆ ರೇಣುಕ. ಎರಡೂ ಕೈಲೂ ಒಂದೊಂದು ಐಸ್ಕ್ರೀಂ ಹಿಡಿದು ಆಸೆಯಿಂದ ಚಪ್ಪರಿಸುವ ಮಗಳನ್ನು ಶೋಕವೇ ಮೂರ್ತಿವೆತ್ತಂತೆ ದಿಟ್ಟಿಸುತ್ತಾಳೆ.

ಪಾಪುವಿನೊಡನೆ ಎಷ್ಟು ಹೊತ್ತು ಆಡಿದರೂ ಅಮ್ಮ ಬೈಯ್ಯುವುದಿಲ್ಲ. ಪಾಪುವಿನ ಕೆಂಪಾದ ಕೆನ್ನೆ ಚಿವುಟಿ ಅದು ಅತ್ತಾಗ ಸುನಿ ಭಯದಿಂದ ಅಮ್ಮ ಆಗ ತನಗೆ ಬಂದು ಹೊಡೆಯುತ್ತಾಳೆಂದು ಹೆದರಿದಾಗ ಅಮ್ಮ ಬೈಯ್ಯದೆ ಪಾಪಚ್ಚಿಗೆ, “ಇವನೊಬ್ಬ ಮುಟ್ಟಿದ್ರೆ ಅಳುತ್ತೆ” ಎನ್ನುತ್ತ ತೊಟ್ಟಿಲಿನಲ್ಲಿ ಮಲಗಿಸಿದಾಗ ಸುನಿ ಅಚ್ಚರಿಗೊಂಡಳು. ಈಗೀಗ ಅಮ್ಮನ ಮುದ್ದು ನಂಗೇ ಜಾಸ್ತಿಯಾಗ್ತಾ ಇದೆ. ಪಾಪ, ಪಾಪಚ್ಚಿಗೆ ಮುದ್ದೇ ಇಲ್ಲಾ ಎಂದುಕೊಂಡಳು.

ಪ್ರತಿದಿನವೂ ಪಪ್ಪ ತನ್ನ ಜೊತೆ ಇರಬೇಕು ಎಂದು ಹಂಬಲಿಸುತ್ತಿದ್ದ ಸುನಿಗೆ ಪಪ್ಪ ಇಲ್ಲಿಯೇ ಇರುವುದು ಸಂತೋಷವಾಗಿತ್ತು. ಇಲ್ಲಿಗೇ ವರ್ಗ ಮಾಡಿಸಿಕೊಳ್ಳಲು
ಪ್ರಯತ್ನಿಸಿದ್ದ ಹೇಮಂತ್ ವರ್ಗ ಆಗುವ ತನಕ ರಜಾ ಮುಂದುವರೆಸಿದ್ದ.

ಪಪ್ಪ, ಮಮ್ಮಿ ತನ್ನನ್ನು ಓದು ಎನ್ನದೆ ತನಗಿಷ್ಪ ಬಂದಂತೆ ಆಡಲು ಬಿಟ್ಟಿದ್ದು ದೊಡ್ಡ ಉಪಕಾರಮಾಡಿದಂತಿತ್ತು. ಪಪ್ಪನ ಜೊತೆ ಸಿಟಿಗೆ ಹೋಗಿ ಕಣ್ಣಿಗೆ ಕಂಡಿದ್ದನ್ನೆಲ್ಲ ತೆಗೆಸಿಕೊಳ್ಳುತ್ತಾಳೆ. ಸವಿತಳ ಬಿಳಿ ಫ್ರಾಕ್ ಚೆನ್ನಾಗಿದೆ ಅಲ್ವಾ ಪಪ್ಪಾ ಎಂದ ಸಂಜೆಯೇ ಅಂತಹುದೇ ಫ್ರಾಕನ್ನು ತಂದುಕೊಟ್ಟಾಗ ಸುನಿ ಸಂತೋಷದಿಂದ ಕುಣಿದಾಡಿದಳು. ಈಗ ಪಪ್ಪ, ಅಮ್ಮ ಎಷ್ಟು ಒಳ್ಳೆಯವರಾಗಿ ಬಿಟ್ಟಿದ್ದಾರೆ. ನಂಗೆ ಒಂಚೂರು ಬೈಯ್ಯಲ್ಲ. ನಾನು ಕೇಳಿದ್ದೆಲ್ಲ ತಕ್ಕೊಡುತ್ತಾರೆ. ಯಾವಾಗಲೂ ಮುದ್ದು ಮಾಡುತ್ತಾರೆ. ಆದರೆ ದಿನಾ ಈ ಔಷಧಿ ಕುಡಿಯೋಕೆ ಬೇಜಾರು. ದಿನಾ ಸೂಜಿ ಚುಚ್ಚಿಸಿಕೊಳ್ಳಬೇಕು. ನಾಳೆಯಿಂದ ನಾನು ಆಸ್ಪತ್ರೆಗೆ ಹೋಗಲ್ಲ. ಪಾಪ ಮಮ್ಮಿ ಒಂದೊಂದ್ಸಲ ತುಂಬಾ ಅಳುತ್ತಾ ಇರುತ್ತಾಳೆ. ಅವಳಿಗೂ ನನ್ನಂಗೆ ಹೊಟ್ಟೆನೋವು. ಅಬ್ಬಾ! ಈ ಹೊಟ್ಟೆನೋವು ತಡೆಯೋಕೆ ಆಗಲ್ಲ. ಪಪ್ಪ ಯಾಕೆ ಈಗ ನಗೋದೇ ಇಲ್ಲಾ. ಯಾವಾಗಲೂ ಜೋಕ್ಸ್ ಹೇಳಿ ನಗಿಸುತ್ತಿದ್ದ ಪಪ್ಪ ಈಗ ಜೋಕ್ಸ್ ಹೇಳೋದೇ ಇಲ್ಲ. ನಾನು ದೊಡ್ಡವಳಾದ ಮೇಲೆ ಪಪ್ಪಂಗೆ ಜೋಕ್ಸ್ ಹೇಳಿ ನಗುತ್ತೀನಿ. ಆಮೇಲೆ ಜಾಸ್ತಿ ಓದಿ ಆಸ್ಪತ್ರೇಲಿ ಇರೋ ಅಂಕಲ್ಗೆ ಡಾಕ್ಟ್ರಾಗಿ ಸೂಜಿ ಚುಚ್ಚುತ್ತೇನೆ. ಅಮ್ಮನ್ನ ಅಳಿಸೋ ಹೊಟ್ಟೆನೋವಿಗೆ ಔಷಧಿ ಕೊಡ್ತೀನಿ. ಪಾಪನ್ನ ರೈಲಲ್ಲಿ ಕರೆದುಕೊಂಡು ಹೋಗ್ತಿನಿ. ಆಮೇಲೆ ಆಮೇಲೆ ಇನ್ನೂ ಏನೇನನ್ನೋ ಮಾಡ್ತೀನಿ. ನಾನು ನಾಳೇನೇ ದೊಡ್ಡವಳಾದ್ರೆ ಎಷ್ಟು ಚೆನ್ನಾಗಿರುತ್ತೆ. ಸೂಜಿ ತಗೊಂಡು ಎಲ್ಲಿಗೂ ಚುಚ್ಚಬಹುದು. ಅಯ್ಯೋ…. ಅಮ್ಮಾ….. ಹೊಟ್ಟೆನೋವು” ನರಳಲಾರಂಭಿಸಿದಳು.

ಮಗಳ ನರುಳುವಿಕೆಯಿಂದ ಎಚ್ಚೆತ್ತ ಹೇಮಂತ್, ರೇಣುಕ ಎದ್ದು ಕುಳಿತರು. ಆತಂಕದಿಂದ ತುಂಬಾ ನೋಯ್ತಾ ಇದ್ದೇಯಾ ಸುನಿ ಎನ್ನುತ್ತ ಹೇಮಂತ್ ತನ್ನ ತೊಡೆಯ
ಮೇಲೆ ಮಲಗಿಸಿಕೊಂಡ. ರೇಣುಕ ನೀರು ತಂದು ಮಾತ್ರೆ ನುಂಗಿಸಿದಳು. ಸ್ವಲ್ಪ ಹೂತ್ತಿಗೆ ನರುಳುತ್ತಲೆ ಸುಖ ನಿದ್ರೆ ಹೋದಳು. ಕರುಳಕುಡಿಯ ಸಂಕಟವನ್ನು ಕಂಡು ಹೆತ್ತವರಿಗೆ ಕರಳು ಹಿಂಡಿದಂತಾಯಿತು. ಸಂಕಟದಿಂದ ರೇಣುಕ ಹೇಮಂತನ ಎದೆಗೊರಗಿ ಬಿಕ್ಕಿದಳು. ರೇಣುಕಳ ಬೆನ್ನು ಸವರುತ್ತ ಕಂಬನಿ ಮಿಡಿದ ಹೇಮಂತ್.

ತನ್ನ ಗೆಳತಿ ಪಪ್ಪಿಯ ಬರ್ತ್‌ಡೇಗೆ ಹೋಗಿದ್ದ ಸುನಿ ಅಲ್ಲಿಂದ ಬಂದೊಡನೆ ತನ್ನ ಬರ್ತಡೆ ಯಾವಾಗ ಎಂದು ತಾಯಿಯನ್ನು ಪ್ರಶ್ನಿಸಿದಳು. ಉತ್ತರಿಸಲಾರದೆ ರೇಣುಕ ತಡವರಿಸಿದಳು. ಸುನಿಯ ಹುಟ್ಟಿದ ಹಬ್ಬ ಮಾಡಿ ಎರಡುವರ್ಷವಾಗಿತ್ತು. ಹೋದ ವರ್ಷ ಪಾಪು ಹುಟ್ಟಿದ ಸೂತಕದಲ್ಲಿ ಸುನಿಯ ಹುಟ್ಟಿದ ದಿನ ಕಳೆದೇ ಹೋಗಿತ್ತು. ಅದರ ಹಿಂದಿನ ವರ್ಷ ತಾಯಿಗೆ ಸೀರಿಯಸ್ ಆದ ಗಾಬರಿಯಲ್ಲಿ ಹುಟ್ಟಿದ ಹಬ್ಬ ಮಾಡಲೇ ಆಗಲಿಲ್ಲ. ಅಂದ್ರೆ ಸುನಿಯ ಹುಟ್ಟಿದ ಹಬ್ಬ ಕಳೆದ ತಿಂಗಳೇ ಮಾಡಬೇಕಿತ್ತು.

ಈ ಗಲಾಟೆಯಲ್ಲಿ ಮರೆತೇ ಹೋಗಿತ್ತು. ಸುನಿಗೆ ಏನಾದರೂ ಉತ್ತರಿಸಬೇಕು ಎನ್ನುವಷ್ಟರಲ್ಲಿ ಅವಳಾಗಲೇ ಪಕ್ಕದ ಮನೆಗೆ ಓಡಿಯಾಗಿತ್ತು. ಅಲ್ಲಿಂದ ಬಂದ ಸುನಿ, “ಅಮ್ಮ, ಸಾಯುವುದು ಎಂದರೆ ಏನಮ್ಮ” ಎಂದಾಗ ಬೆಚ್ಚಿ ಬಿದ್ದ ರೇಣುಕ ಕಂಪಿಸುತ್ತ, “ಏಕೆ ಸುನಿ, ಹೀಗೆ ಕೇಳುತ್ತಾ ಇದ್ದೀಯಾ”

“ಮತ್ತೆ ಸವಿತಾ ತಾತಾ ಸತ್ತು ಹೋದರಂತೆ. ಅವರೆಲ್ಲ ಊರಿಗೆ ಹೋಗುತ್ತಾ ಇದ್ದಾರೆ. ಮತ್ತೆ ಸವಿತ ಹೇಳಿದಳು, ಸಾಯುವುದು ಅಂದ್ರೆ ಎಲ್ಲರನ್ನು ಬಿಟ್ಟು ದೇವರತ್ರ ಹೋಗುವುದಂತೆ. ಅಲ್ಲಿ ಒಬ್ರೆ ಇರಬೇಕಂತೆ. ಥೂ ಎಷ್ಟು ಬೇಜಾರು ಅಲ್ವೇನಮ್ಮ. ನಾನಂತೂ ಸಾಯಲ್ಲಪ್ಪ” ಸುನಿಯ ಮಾತುಗಳು ಶೂಲದಂತೆ ರೇಣುಕಳ ಎದೆಯನ್ನು ಇರಿದವು.

ಇಂದು ಸುನಿಯ ಹುಟ್ಟಿದ ಹಬ್ಬವೆಂದು ಅವಳಿಗೆ ಹೊಸ ಬಟ್ಟೆ ತಂದರು ರೇಣುಕ- ಹೇಮಂತ್. ಎಲ್ಲರನ್ನು ಆಹ್ವಾನಿಸಿ ಸುನಿಯ ಗೆಳತಿಯರನ್ನು ಮರೆಯದೆ ಕರೆದರು. ಉರಿಯುತ್ತಿದ್ದ ಐದು ಮೇಣದ ಬತ್ತಿಯನ್ನು ಆರಿಸಿ ಕೇಕ್ ಕತ್ತರಿಸಿದಳು ಸುನಿ. ಬಂದವರೆಲ್ಲ ಉಡುಗೊರೆ ನೀಡಿದರು. ನಗುವಿನ ಮುಖವಾಡ ಧರಿಸಿ ಬಂದವರನ್ನೆಲ್ಲ ರೇಣುಕ, ಹೇಮಂತ್ ಉಪಚರಿಸುತ್ತಿದ್ದರು. ಎಲ್ಲರ ಕೇಂದ್ರ ಬಿಂದುವಾಗಿ ನಲಿದ ಸುನಿ ಹೆಮ್ಮೆಯಿಂದ ಬೀಗಿದಳು.

ಆಡಲು ಹೋಗಿದ್ದ ಸುನಿ ಕಂದಿದ ಮುಖದೊಡನೆ ಮನೆಗೆ ಬಂದಾಗ ರೇಣುಕ ಆತಂಕದಿಂದ ವಿಚಾರಿಸಿದಳು. ಬಿಕ್ಕುತ್ತಲೇ ನುಡಿದ ಸುನಿಯ ಮಾತುಗಳಿಂದ ಸಿಡಿಲು
ಬಡಿದಂತಾಯ್ತು. “ಅಮ್ಮ, ಮತ್ತೆ ಪಪ್ಪಿ ಹೇಳಿದಳು, ನಂಗೆ ಏನೋ ದೊಡ್ಡ ಕಾಯಿಲೆಯಂತೆ. ನಾನು ಸತ್ತೋಗ್ತಿನಂತೆ. ಹೌದಾ ಅಮ್ಮ? ಸತ್ತೋದ್ರೆ ಒಬ್ಳೇ ದೂರ
ಹೋಗಬೇಕು ಅಲ್ವಾ ಅಮ್ಮ. ನನಗೆ ಒಬ್ಬಳಿಗೆ ಹೆದರಿಕೆಯಮ್ಮ. ನಾನು ಹೋಗಲ್ಲ ಅಮ್ಮ. ಪಾಪಂಗೆ ಆಡಲಿಕ್ಕೆ ನಾನು ಬೇಡ್ವಾ ಅಮ್ಮ. ನನ್ನ ಕಳಿಸಬೇಡ ಅಮ್ಮ. ನಾನು ಸಾಯಲ್ಲ. ನಿಂಜೊತನೇ ಇರ್ತೀನಿ. ಪಪ್ಪನ್ನ ಬಿಟ್ಟು ನಾ ಸಾಯಲ್ಲ” ಸುನಿಯ ಮಾತುಗಳು ರೇಣುಕಳ ಒಡಲನ್ನು ಸೀಳಿತು.

“ಅಯ್ಯೋ ಕಂದ, ನೀನು ಸಾಯಲ್ಲ, ನಿನ್ನ ಸಾಯೋಕೆ ನಾನು ಬಿಡಲ್ಲ ಕಂದ. ನನ್ನ ಪ್ರಾಣನಾದ್ರೂ ಕೊಟ್ಟು ನಿನ್ನ ಉಳಿಸಿಕೊಳ್ತೀನಿ. ಎನ್ನುತ್ತ ಮಗಳನ್ನು ತಬ್ಬಿಕೊಂಡು ಗೋಳೋ ಎಂದು ಅತ್ತಳು. ಹನಿಗಣ್ಣಾಗಿ ನೋಡುತ್ತಿದ್ದ ಹೇಮಂತನ ಮೊಗದಲಿ ಜಗತ್ತಿನ ಶೋಕವೆಲ್ಲ ಮಡುಗಟ್ಟಿತು. ಮುಖ ಮುಚ್ಚಿಕೊಂಡು ಬಿಕ್ಕಳಿಸುತ್ತ ಸೋಫಾದ ಮೇಲೆ ಕುಸಿದ.
*****

ಪುಸ್ತಕ: ದರ್ಪಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೮೭
Next post ಇಲ್ಲ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys