ಅಂಗಿಯೊಳ ಅಂಗಿಯಲ್ಲಡಗಿರುವ ಇವನು
ಒಂದೊಂದೇ ಪದರ ಕಳಚಿ
ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ
ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ
ಬಟ್ಟ ಬಯಲಾಗಲಿಲ್ಲ
ಬರೀ ಕಲ್ಲು ಕೆಸರುಗಳೇ ತುಂಬಿದ
ಸರೋವರದ ತಳದಲ್ಲಿ ರತ್ನ ಮುತ್ತುಗಳು
ಹೊಳೆಯಲೆ ಇಲ್ಲ
ಕತ್ತರಿ ಕೋಲುಗಳಿಗೆ ಸಿಕ್ಕಿ ಮೋಟಾದ
ಇವನ ಜೀವವೃಕ್ಷಕ್ಕೆ
ಚೈತನ್ಯದ ಕೊಂಬೆರೆಂಬೆಗಳೊಡೆಯಲೆ ಇಲ್ಲ
ಚೆಲುವಿನೆಲೆ ಹೂ ಹಣ್ಣುರಸ ಚಿಮ್ಮಲೇ ಇಲ್ಲ
ಆ ಹೂಗಳಿಗೆರಗುವ ದುಂಬಿಗಳಿಲ್ಲ
ಆ ಹಣ್ಣ ಕುಕ್ಕಿ ಸವಿಯೀಂಟುವ ಹಕ್ಕಿಗಳಿಲ್ಲ
ಆ ಕೊಂಬೆಗಳಲ್ಲಿ ಗೂಡು ಕಟ್ಟಿ ಕಲಕಲನಾದ ಹೊಮ್ಮಲೆ ಇಲ
ಕತ್ತಲ ಮೆತ್ತಿದೀ ಚಿತ್ರದಾಗಸದಲ್ಲಿ
ಚಿತ್ತಾರ ತಾರಗೆಗಳು ಮಿನುಗಲೆ ಇಲ್ಲ
ತಂಗದಿರ ಚಂದಿರನು ಆಡಲೆ ಇಲ್ಲ
ಬಲವಂತ ಬಾಯಿ ಹೊಲಿದ ಮೌನದಿಂದ
ಹಿಗ್ಗಿನ ಹಾಡೊಂದೂ ಸೆಲೆಯೊಡೆಯಲಿಲ್ಲ
ಮುಖ ಮುಚ್ಚಿದ ಮಬ್ಬು ಮೋಡದಂಚಿಗೆ
ತಿಳಿನಗೆಯ ತೆರೆಮಿಂಚು ಸುಳಿಯಲೆ ಇಲ್ಲ
ಬಗೆ ಮೊಗ್ಗು ಗಾಳಿಗೆದೆಯೊಡ್ಡಲರಳಲೆ ಇಲ್ಲ
ನುಸಿವಿಡಿದ ಮತಿಯಲ್ಲಿ ಚಿಕ್ಕೆ ಮೊಗ್ಗೆಯ ಸಾಲು
ಥಳಥಳಿಸಿ ಕಸವನ್ನು ಕಳೆಯಲೆ ಇಲ್ಲ
ಕುಳಿತು ಕೈಕಾಲು ಸೇದಿಹೋದ ಇವನ ನಡೆ
ನೂರಾರು ನರ್ತನ ಲೀಲೆಗಳ ಮೆರೆಯಲಿಲ್ಲ
ಮನಸಿನೊಳ ಮಂದಾರ ತಳ ಬಿಟ್ಟು ಮೇಲೆ ಬಂದು
ನೀರ ಮೇಲಲೆಗಳನು ಚುಂಬಿಸಲೆ ಇಲ್ಲ
ಬೆಳೆಯುತ್ತಲೇ ಬರದಾದ ಕೊರಡು ಕೈಗಳು
ಯಾವ ಕೋಮಲತೆಯನೂ ತಬ್ಬಲಿಲ್ಲ ತಬ್ಬಿ ಉಬ್ಬಲಿಲ್ಲ
ಹಿಮದಂಥ ಬಿಗಿದ ತುಟಿಯು
ಯಾವ ಮಧುವನು ಹೀರಿ ಸವಿಯಲೆ ಇಲ್ಲ
ಬರೀ ಕರಿಮೋಡವಾದಿವನ ಒಡಲಿಂದ
ಹೆಪ್ಪಮುರಿವ ಹೆಬ್ಬಯಕೆ ಧಾರೆಯಾಗಿಳಿಯಲೆ ಇಲ್ಲ
ಇಳಿದರೂ ಯಾವ ಬೀಜವೂ ಬಾಯ್ದೆರೆದು ಮೃತ್ಯುವನಣಕಿಸಲಿಲ್ಲ
ಮರುಭೂಮಿಯ ಒಣಮರಳಿನಲ್ಲಿ
ಯಾವ ಹಸಿಮಣ್ಣು ಉಸಿರಾಡಿ ಚಿಗುರಲೆ ಇಲ್ಲ
ಅಲೆದಾಡಿದರೂ ಯಾವ ಕಣ್ಣಬಟ್ಟಲೂ ತುಂಬಿ ಹನಿಸಲೆ ಇಲ್ಲ
ಯಾವ ಗಂಟಲು ತುಂಬಿ ತಿನಿಸಲೆ ಇಲ್ಲ
ಯಾವ ಹಕ್ಕಿಯು ಹಾಡಿ ಹರಸಲೆ ಇಲ್ಲ
*****