ಇರುಳಿನಲಿ ಮೊಗ್ಗಾಗಿ ಮರೆಯಾದ ಮೋಡಗಳ
ಚೆಂಗುಲಾಬಿಯ ದಳಗಳರಳುತಿವೆ, ರವಿಯುದಯ
ಎರಚುತಿರೆ ಓಕುಳಿಯನೆಲ್ಲೆಲ್ಲು ! – ಹಕ್ಕಿಗಳ
ರಾಗದುನ್ಮಾದದಲಿ, ಹಸುರು ನೆಲ ಜಗದೆದೆಯ
ಒಲವ ಹರಕೆಯ ಹೊತ್ತು ತೋರುತಿದೆ ಹನಿಗಳಲಿ !
ತಂಗಾಳಿ ಬೀರುತಿದೆ ಹಿಂದೆಂದು ಕಾಣದಿಹ
ಸುಖ ಕಂಪನೆಲ್ಲಿಂದಲೋ ಬಂದು ಕನಸಿನಲಿ
ಮುತ್ತಿಟ್ಟ ಮಾಯಾಂಗನೆಯ ತೆರದಿ ! ಅಗೋ, ವಿರಹ
ತಾಪದಲಿ ಬಿಸುಸುಯ್ದ ತೆಂಗು ಗರಿ – ತನ್ನಿಂದ
ಬಿಟ್ಟೋಡಿದಾ ಕೋಗಿಲೆಯ ಒಲವ ನೆನೆಯುತಿದೆ !
ಸುತ್ತೆಲ್ಲ ಸೌಂದರ್ಯ ತುಳುಕುತ್ತಿದೆ. ನಿನ್ನಂದ-
ನೋಟಗಳ ಸೆರೆಯಿಟ್ಟ ಕಣ್ಣೆವೆಯು ತೆರೆಯುತಿರೆ
ಬೆಳಗಾಯಿತೇಳು ಉಷೆ ! ಒಲವ ಬೀರೆನ್ನೆದೆಗೆ,
ನೀನೇಳದಿರೆ ಜಗದ ಸೌಂದರ್ಯ ಅರಳುವುದೆ?
*****