ಸ್ವಿಸ್ (Switzerland)ಗೇ
ಬಿಗಿ ಬೆಂಗಾವಲಾಗಿರುವ
‘ಆಲ್ಪ್ಸ್’ ಪರ್ವತ ಶ್ರೇಣಿಗಳು
ಆಕಾಶದ ಏಕಾಂತದೊಳಗೆ
ತನ್ನ ಹಿಮದೊಡಲು ಹರವಿಕೊಂಡು
ಪಿಸು ಮಾತಾಡುತ್ತ ಮುತ್ತಿಸುತ್ತಿದೆ.
ಮುತ್ತಿನ ಜೇನು ರಸ ತುಂಬಿಕೊಳ್ಳುತ್ತಿರುವ
‘ಜಿನೇವಾ ಸರೋವರ’
ಬಿಸಿಲು ಕಣ್ಣು ಮುಚ್ಚಾಲೆಯಲಿ
ಫಳ ಫಳ ಹೊಳೆಯುವ ತನ್ನ
ಸ್ಫಟಿಕ ಹಿಮ
ಪಾತವಾಗದಂತೆ
ಸೂರ್ಯನಿಗೆ ಆಹುತಿಯಾಗದಂತೆ
ಒಂದಕ್ಕಿಂತ ಒಂದು ಶ್ರೇಣಿಗಳು
ರಮಣೀಯ ಕಣ್ಣುಮುಚ್ಚಾಲೆಯಾಡಿ
ಮರೆಸುವಂತಿದ್ದರೂ….
ಕೊನೆಗೆ ದಣಿದ ದೇಹ
ಆಯತಪ್ಪಿ ಗಿರಕಿ ಹೊಡೆಯುತ್ತ
ಕೊಳ್ಳಗಳೊಳಗೆ ಜಾರುತ್ತ
ತನ್ನ ಬಿಸಿ ಉಸಿರಿನಲ್ಲಿ
ತಾನೇ ಕರಗಿ
ಸದ್ದಿಲ್ಲದೆ ಸರೋವರ ಸೇರಿ
ನೀಲಕಾಂತೆಯಾಗಿ ವಿಶ್ರಮಿಸುವುದು.
(‘ಜಿನೇವಾ’ ಮಾರ್ಗವಾಗಿ ‘ರೋಮ್’ಗೆ ಹೊರಟಾಗ ವಿಮಾನದಿಂದ ಕಾಣಿಸುವ ಆಲ್ಫ್ಸ್ ಪರ್ವತಶ್ರೇಣಿಗಳು ಮತ್ತು ಜಿನೇವಾ ಸರೋವರದ ದೃಶ್ಯ ಮನಮೋಹಕವಾದುದು.)
*****