ಗರ್ಭಗುಡಿಯ ಶಿಶು ಚೇತನ

ತಿಂಗಳು ಒಂದು

ನಾನೊಂದು ‘ಭ್ರೂಣ’
ಅಮ್ಮನ ಗರ್ಭ ನನ್ನಯ ತಾಣ
ಪ್ರೀತಿಯಲಿ ಅಂಕುರಿಸಿರುವೆ
ಆರಂಭ, ನನ್ನ ಮಂಗಳದ
ಮಾನವ ಜನ್ಮ.
ಜೀವ ಕೋಶಗಳ
ನಿಖರ ತಾಳ ಹಿಮ್ಮೇಳದಲಿ
ಬೆಳೆಯುತ್ತಿರುವೆ, ಬೆಳಗಲು
ಕುಲದೀಪ, ಮರಿಕೂಸು ನಾನು
ಬಾನ ಬೆಳಗುವ ಚಂದಿರನಂತೆ.
ಅಣಿಮಾ ಮಹಿಮಾಳಾಗಿ
ಸೀತೆಯಂತೆ ಬೆಳೆದು ನಿಂತಾಗ
ಚೆಲುವಿಕೆ ಜವನಿಕೆಗೆ
ಸಿರಿಕಳಸ ವಿಟ್ಟಂತೆ
ನೀಳ ಕುಂತಳದಲ್ಲಿ
ಹೂ ಮುಡಿವ ಆಶೆ
ನೀಲಿ ನಯನಗಳಿಗೆ
ಕಾಡಿಗೆ ತೀಡುವಾಸೆ
ನನ್ನಲ್ಲಿ ಈಗಲೇ ಕನಸು ಅರಳುತಿದೆ
ಚೇತನದ ಚಿಲುಮೆ
ಬುಗ್ಗೆಯಾಗಿ ಹಾಡುತಿದೆ
ಹೆಣ್ಣಾದರೆ ಜೀವ
ಇದು ನನ್ನ ಕನಸಿನ ಭಾವ.
ಸೂರ್ಯ ತೇಜಪ್ರಖರದ
ಗಂಡುಗಲಿ ನಾನಾದರೆ
ಮೋಹನ ರಾಮನಂತೆ
ಕೊಳಲೂದುವ ಶ್ಯಾಮನಂತೆ
ಒಲವು, ಚೆಲುವಿನ ನಿಲುವು
ಸುಂದರ ಸಜೀವ ಶಿಲ್ಪವಾಗಿ
ಬೆಳೆಯುತ್ತಿರುವೆ ಅಮ್ಮನ
ಗರ್ಭ ಗುಡಿಯಲಿ ಕಲ್ಪವಾಗಿ
ಅಪ್ಪ‌ಅಮ್ಮನ ಕಣ್ಮಣಿಯು ಆಗಿ.

ತಿಂಗಳು ಎರಡು

ಇದು ನನ್ನ ಮಾನವ
ರೂಪಕ್ಕೆ, ಮೊದಲ ಹಂತ
ಅಪ್ಪನಿರಬಹುದು ಬೀಜ ಶಕ್ತಿ
ಅಮ್ಮನಿರಬಹುದು ಒಂದು
ನಿರ್ದಿಷ್ಟ ವ್ಯಕ್ತಿ
ನಾನು ಅವಳಲ್ಲಿ ಅಡಗಿರುವ
ಬೆಳೆವ ಸಿರಿ ಶಕ್ತಿ
ಹೂವಲ್ಲಿ ಮೊಗ್ಗು
ನದಿಯಲ್ಲಿ ಹನಿ
ನಾನೊಂದು ಮಿನಿ
ಇದು ನನ್ನ ಇರುವಿಕೆಯ
ಸಾಕಾರ ಸಿದ್ಧಾಂತ
ಪುಟ್ಟ ಸರಳ ರಗಳೆ
ಪ್ರತಿಭಾ ಚೇತನದ
ಮಹಾಕಾವ್ಯದ
ಮೊದಲ ಅಂಕಕೆ
ನಾ ಹಾಡುವ ನಲಿವಿನ
ನಾಂದಿ ಶ್ಲೋಕ.
ಹೆಣ್ಣು, ಗಂಡಲ್ಲದ
ಬರಿ ಭ್ರೂಣ ಲೋಕ
ದಿನದಿನವು ಗರ್ಭದ
ರೂಪು ರೇಷೆಯಲಿ
ಬೆಳೆಯುವ ತವಕ
ನನ್ನ ಜನ್ಮ ಅಂಕುರಕ್ಕೆ
ಅಮ್ಮನಾಗರ್ಭಾಂಗಣದಲ್ಲಿ
ನನ್ನ ಅವಲೋಕ
ನಾ ಬೆಳೆಯುತಿರುವೆ
ಜೀವ ಭಾವದಲಿ
ರೂಪ, ರಂಗ ರಸೋಲ್ಲಾಸದಲಿ
ಭೂ ಲೋಕಕೆ ಬರುವ ಕನಸಿನಲಿ.

ತಿಂಗಳು ಮೂರೂ

ನನಗೆ ಈಗ ಸಂದಿದೆ.
ಮೂರು ತಿಂಗಳು
ನನ್ನ ವದನಾರವಿಂದದಲ್ಲಿ
ಬಾಯಿಗೆ ಅದೆಷ್ಟು ಮಹತ್ವ
ಇನ್ನು ಕೆಲವೇ ತಿಂಗಳಲ್ಲಿ
ಅಮ್ಮನ ಕೈಯ ಊಟ ಮೇಜಿನಲಿ
ಹಾಲು ಜೇನು ಸವಿಯುವುದನೆನೆಸಿ
ಖುಷಿ ಎನಿಸುತಿದೆ ಎನಗೆ
ಹೂ ಎಸಳ ತುಟಿ ಅರಳಿ ನಗಬಲ್ಲೆ
ಅಮ್ಮಾ! ಅಪ್ಪ, ಅಜ್ಜ, ಅಜ್ಜಿ
ಅಕ್ಕ, ಅಣ್ಣ, ತಂಗಿ, ತಮ್ಮರೆಂದು
ಮೆಲ್ಲುಲಿಯ ಬಲ್ಲೆ
ಮತ್ತೆ ಮತ್ತೆ ಅಮ್ಮ ಅಮ್ಮಾ ಎಂದು
ಅಮೃತದ ಮಳೆ ಗರೆಯಬಲ್ಲೆ
ಸವಿಗೀತಗಳ ಗುನಗ ಬಲ್ಲೆ
ಮಾತಿನ ಮಳೆಗರೆದು
ಮನಗಳನು ಒಲಿಸಬಲ್ಲೆ
ರಸದೂಟ ತಿಂಡಿ ತಿನಿಸುಗಳನು
ಮನಸಾರೆ ಮೆಲ್ಲ ಬಲ್ಲೆ
ಈಗಂತೂ ಎಲ್ಲಾ ಕನಸಾಗಿ
ಕನವರಿಸಿ ಕೊಳ್ಳುತ್ತಿರುವೆ.
ಗಂಡಾದರೇನಂತೆ
ಹೆಣ್ಣಾದರೇನಂತೆ
ನನ್ನ ಹುಡುಗಾಟ, ಓಟದಲಿ
ಅಮ್ಮನ ಆಡಿಸಿ, ಓಡಿಸಿ ಬಿಡುವೆ
ಅಪ್ಪನ ಕನಸಿಗೆ ಕನ್ನಡಿ ಹಿಡಿದು
ಕುಣಿಸಿ ತಣಿಸಿ ಬಿಡುವೆ.
ಅಜ್ಜಿ, ತಾತನ ಆಶೆ ಆಕಾಂಕ್ಷೆಗೆ
ರಂಗಿ ನೋಕುಳಿಯ ತೂರಿ ಬಿಡುವೆ.

ತಿಂಗಳು ನಾಲ್ಕು

ಸೃಷ್ಟಿಯ ಜೀವ, ಬಡಿತ
ಇದೊಂದು ಹೊಸ ಅನುಭವ
ನನ್ನ ಪುಟ್ಟ ಹೃದಯ ಸ್ಪಂದನಕ್ಕೆ
ತಾಳ ಹಾಕುವ ಅಮ್ಮನ ಸಂವೇದನೆ
ಜೀವ ಜೀವಾಳದ ಶೃತಿಗತಿ
ನಿರಂತರ ಡಬಡಬನಾದ
ಬದುಕನು ಬೆಳಗುವ ವೇದ
ಜೀವದ ಕೊನೆಯ ವರೆಗೂ
ಈ ಬಡಿತ, ಈ ನಾದ
ನಿಂತರೆ ಸಾವಿನ ಇರಿತ.
ಎಲ್ಲವನೂ ಸಾಕ್ಷಾತ್ಕರಿಸಿ
ಬೆಳೆಯುತಿರುವೆ
ಹೃದಯದ ಬಡಿತಕ್ಕೆ
ಕನಸುಗಳ ಕುಣಿಸುತಿರುವೆ
ಹೃದಯ ದೊಲವಿಗೆ
ನೇಹ ಚೆಲುವಿಕೆಗೆ
ಅದೆಷ್ಟು ಸಮರವ
ಗೆದ್ದು ಸೋಲ ಬೇಕು
ಎದೆಯ ನಾದಕ್ಕೆ
ಸಂತಸದ ಗೀತ ಪಲ್ಲವಿ
ಹಾಡಬೇಕು.
ನನ್ನಾಳುವ ಹೃದಯವಿಂದು
ಜಗವನ್ನಾಳ್ವುದು ಮುಂದೆ ಎಂದು
ಕನಸಿನಲ್ಲಿ ನಾ ಬೆಳೆಯುತಿರುವೆ
ಕವಿತೆ ಸರಸಿಯಲಿ
ಕಲ್ಪನೆಗೆ ಸಾಕಾರವೀವ
ನನ್ನ ಅಮ್ಮನ ಗರ್ಭದಲಿ
ಮೀಯುತಿರುವೆ.

ತಿಂಗಳು ಐದು

ದಿನ ಉರುಳುತಿವೆ
ಪ್ರವರ್ಧಿಸುತ್ತಿರುವೆ
ಮುಂಜಾವಿನ ಸೂರ್ಯನ
ಕಿರಣಗಳಂತೆ ನನಗೆ
ಕೈಕಾಲು ಮೂಡುತ್ತಿವೆ
ಅಂದವಾಗಿದ್ದ ನಾನು
ಅಂದವಾಗಿ ಸಬಲವಾಗಿ
ಪೂರ್ಣ ರೂಪ ರೇಷೆಯಲಿ
ಬೆಳೆಯುತಿರುವೆ
ಉದರದಾ ಮೈದಾನದಲ್ಲಿ
ಆಡುವೆ, ಈಜುವೆ
ಮೋಜು ಮಾಡುವೆ
ಸೀಮಿತ ಗರ್ಭವಾದರೇನು
ಅಸೀಮ ಅಮ್ಮನ ಪ್ರೀತಿ
ಮಾಸಗಳು ಮುಗಿದಂತೆ
ಜನ್ಮ ತಾಳಿ ಅಮ್ಮನ
ಮಡಿಲಲ್ಲಿ ಆಡಿ ಮುದ್ದು ಗರಿವೆ
ಪುಟ್ಟ ಕೈ ಕಾಲುಗಳಲಿ
ಥಕಥೈ ನಾಟ್ಯವಾಡಿ ಬಿಡುವೆ
ಕೈ ಬೆರಳಲಿ ಹೂವ ಪೋಣಿಸಿ
ಅಣಿ ಗೊಳಿಸಿ ಅಪ್ಪಗೈಯುವ
ಪೂಜೆಗಿಡುವೆ.
ನನ್ನ ದುಂಡು ಕೈ ಮಾಲೆಯನು
ಅಪ್ಪನ ಕೊರಳಿಗಿಟ್ಟು ಮುದ್ದು ಗರೆವೆ.
ಹುಡುಗುತನದಲಿ ನಾ
ಚೆಂಡು ದಾಂಡು ಹೊಡೆವೆ
ಬೆಣ್ಣೆ, ಹಾಲು ಕೆನೆ ಮೊಸರ ಮೆದ್ದು
ಅಮ್ಮನ ಮುದ್ದಿಸಿ ಬಿಡುವೆ
ಒಮ್ಮೆ ಕೃಷ್ಣನಂತೆ
ಒಮ್ಮೆ ರಾಮನಂತೆ
ಅಮ್ಮನ ಗರ್ಭದಲಿ ನನ್ನ ಹೆಣ್ಣುತನ
ಗಂಡತನದ ಕನಸುಗಳ
ಕಾಮನ ಬಿಲ್ಲಲಿ ಜೋಕಾಲಿ
ಯಾಡುತಿರುವೆ.
ಅಪ್ಪ, ಅಮ್ಮ, ಮತ್ತು ನನ್ನ ಹೃದಯ
ತ್ರಿವೇಣಿ ಸಂಗಮದಲ್ಲಿ
ಜಗತ್ತಿಗೆ ಪ್ರೀತಿ ಹಂಚಿಬಿಡುವೆ.
ಮೂಡಿದ ಮೃದು ಬೆರಳುಗಳಲ್ಲಿ
ಅಮ್ಮನ ಹಣೆಗೂದಲ ಜಗ್ಗಿ ಬಿಡುವೆ.
ಅಪ್ಪನ ಕೈ ಬೆರಳಲ್ಲಿ
ನನ್ನ ಬೆರಳನು ಹೊಸೆದು
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಪೇಟೆ, ಅಂಗಡಿ, ವ್ಯಾಪಾರ
ಮುಗಿಸಿಬಿಡುವೆ.
ಈಗ ಇದು ಕನಸಾದರೇನಂತೆ
ನನಸಾಗುವ ದಿನ ಬರುತ್ತಿದೆ
ಸನಿಹಕ್ಕೆ, ನಾ ಕಾಯುತ್ತಿರುವೆ.

ತಿಂಗಳು ಆರು

ಅಪ್ಪ, ಅಮ್ಮನಿಗೆ ವಿಸ್ಮಯ
ತರುತಿದೆ, ವೈದ್ಯರ ನುಡಿ
ನಾ ಬೆಳೆದು ದೊಡ್ಡವಳಾಗಿ
ಅಮ್ಮನ ಹೊಟ್ಟೆಯ ಚೀಲದಲಿ
ಕಣ್ಣಾ ಮುಚ್ಚಾಲೆ ಆಡುತಿರುವೆ.
ಮತ್ತೆ ಅಮ್ಮನೊಡನೆ
ಜೂಟಾಟ ಓಡಾಟದ ಚೇಡಿಸುವ
ದಿನಕಾಗಿ ಕಾಯುತಿರುವೆ.
ಅತ್ತು ರಗಳೆಯ ಮಾಡಿ
ಹೊತ್ತಿಲ್ಲದ ಹೊತ್ತಿನಲಿ
ಚಂದಿರನ ತಾರೆಂದು
ನನ್ನ ಗತ್ತು ತೋರಿಸಿ
ಅಮ್ಮನಿಗೆ ಗಮ್ಮತ್ತು
ಮಾಡುವ ದಿನವ ಕಾಯುತಿರುವೆ.
ಅಪ್ಪನ ಚಪ್ಪಲಿಯಲ್ಲಿ
ಸಪ್ಪಳಿಲ್ಲದೆ ನಡೆದು
ಅಂಗಳದಿ ಕುಣಿವ ದಿನಗಳ
ಎದುರು ನೋಡುತಿರುವೆ.
ಅಜ್ಜನ ಕೋಲು, ಕನ್ನಡಿಹಿಡಿದು
ಆಟ ಆಡುವ ದಿನಗಳು
ಅಜ್ಜಿಯ ಶಾಲಲ್ಲಿ ಬೆಚ್ಚಗೆ
ಬಚ್ಚಿಟ್ಟು ಕೊಂಡು
ಅಮ್ಮನ ಆಡಿಸುವ ದಿನಗಳು
ಶಾಲೆಗೆ ಚಕ್ಕರ್ ಹೊಡೆದು
ಮನೆಯಲ್ಲಿ ಚಕ್ಕಂದ ವಾಡಿ
ನಲಿಯುವ ದಿನಗಳು
ಸನಿಹವಾಗುತಿವೆ ನನ್ನ
ಮನದ ಚಿತ್ರ ಶಾಲೆಯ
ಪ್ರದರ್ಶನದಂತೆ
ಮುಂಬರುವ ಚಿತ್ರಗಳೂ
ಓಡುತಿವೆ ಕಣ್ಣ ಮುಂದೆ.

ತಿಂಗಳು ಏಳು

ಕೂಸು ಮರಿ, ಪುಟ್ಟ ಶಿಸು
ನಾನು ‘ಅನಾಮಿಕಾ’ ಆಗಿರುವೆ
ಸಂಜನ, ಸಂಜೀವಿ
ಸೃಜನ, ಸೃಷ್ಟಿ, ಶೃತಿ
ಒಂದು ಸುಂದರ ನಾಮವೇಕೆ?
ನನಗೆ ಹೆಣ್ಣು, ಗಂಡಿನ
ಸಹಸ್ರನಾಮ ಶೋಧಕರು
ನನ್ನ ಹೆರುವವರು.
ನನ್ನ ಚೈತನ್ಯ ಚಿಲುಮೆ ಗುರುತಿಸಿ
ನನ್ನ ನಿಲುವು, ಇರುವಿಕೆಗೆ
ಸಲ್ಲುವ ಹೆಸರು ಕೊಡುವವರು
ಗುಲಾಬಿಗೆ ಯಾವ ಹೆಸರಾದರೇನು?
ಆದರೆ ಅಮ್ಮ. ಕಂದಮ್ಮನಿಗೆ
ಕೊಡುವ ಹೆಸರು ನೂರಾರು.
ಕುಲದೇವದಾ ಹೆಸರು, ಪ್ರೀತಿಯ ಹೆಸರು
ನವ್ಯ ನಾಮಗಳು, ದಿವ್ಯ ನಾಮಗಳು
ಜಾಮ ಜಾಮಕ್ಕೊಂದು
ನಿಮಿಷ ನಿಮಿಷಕ್ಕೊಂದು
ತೊಟ್ಟಿಲಲಿ, ಶಾಲೆಯಲಿ
ಗೆಳೆಯರಲಿ, ಎಳೆಯರಲಿ
ಮಿಂಚುವ ನಾಮಧೇಯಗಳು
ಜನ್ಮದಾತರ ಹೃದಯದಲಿ
ಮೊಟಕು ಹೆಸರುಗಳು,
ಚುಟುಕು ಹೆಸರುಗಳು
ಪ್ರೀತಿಯಲಿ ತುಟುಕು ತುಂಡಾಗಿ
ಕರೆವ ಮುದ್ದು ಹೆಸರುಗಳು
ಕೆಲವೊಮ್ಮೆ ಪ್ರೀತಿ ಅಕ್ಷಯದ
ಲಕ್ಷ ಲಕ್ಷ ಹೆಸರುಗಳು
ಎಲ್ಲವೂ ಓದಿಕೊಳ್ಳುತ್ತಿರುವೆ
ಅಚ್ಫಾಗದ ಕವಿತಾ ನನ್ನ ನಾಮಗಳು.

ತಿಂಗಳು ಎಂಟು

ನನಗೆ ಕಣ್ಣು ಮೂಡಿವೆ
ಅವು ಎಷ್ಟು ಸುಂದರ ಅದ್ಭುತ!
ಗರ್ಭದ ಗವಿಯಲ್ಲಿ
ಕತ್ತಲೆಯಾದರೇನು?
ಜಗತ್ತಿನ ಸೂರ್ಯ, ಚಂದ್ರದರ್ಶನ
ಹೊಂಬಿಸಿಲು ಚೆಲ್ಲಿದ
ಹಸಿರು ಹುಲ್ಲು ಗಾವಲು
ಬೆಳದಿಂಗಳ ಹೂ ದೋಟ
ಕಾಡು, ಮೇಡು, ನಾಡುಗಳು
ದೃಷ್ಟಿಯಲಿ ಸೃಷ್ಟಿ
ಸುಂದರತೆ ನೇಯ್ದು ಸಮಷ್ಟಿ
ಕಣ್ಣಿನ ರೆಪ್ಪೆ ಹೊಸಿಲಲ್ಲಿ
ಹರಡಿ ಹೊಮ್ಮಿ ಕೊಂಡಿರುವ
ವಿಶ್ವ ರಂಗಕೆ ನಾ
ಕಾತರಿಸುತಿರುವೆ.
ಕಣ್ಣಿನ ಕಾಂತಿಯಲಿ
ಒಲುಮೆಯ ಅಂತರಂಗ
ಆಡುತಿವೆ ಕನಸುಗಳು
ಕೋಲಾಟ ಬಹಿರಂಗ.
ದೀನದಲಿ ತರಲಿ ಕರುಣಾವಾಹಿನಿ
ನೇಹನಲ್ಮೆಯ ತಾರುಣ್ಯ ಮೋಹಿನಿ
ಬಾಳ ರಂಗದ ನಾಟ್ಯವಾಡೆ
ನವ ನವೋಭಾವಗಳ
ಸೀಮೋಲ್ಲಂಘನದಿ
ಆಗಸ, ಭೂಮಿ, ಸಾಗರ
ಕಣ್ಣಲ್ಲಿ ಕಾಣುವ ತವಕ
ಎಲ್ಲಕೂ ಮಿಗಿಲಾಗಿ ನನ್ನ
ಜನನಿ ಜನಕರ ನೋಡುವ
ದಿನದ, ಕನಸು ನನಸಾಗುವತನಕ
ದಿನಗಳು ದೂರವಿಲ್ಲವೆಂದು
ನನ್ನ ಹೃದಯವ ಹಗುರ
ಮಾಡುತಿರುವೆ.

ತಿಂಗಳು ಒಂಭತ್ತು

ಅಮ್ಮಾ! ಕೇಳಿಸಿತೇ?
ನನ್ನ ಹೃದಯ ಬಡಿತ
ನಿಮ್ಮನ್ನು ಕಾಣುವ ತುಡಿತ
ಅಪ್ಪನಿಗೆ ಹೇಳಿ ಬಿಡು
ಕೂಸು ಮರಿಯ
ಆರೋಗ್ಯ ಕುಶಲ.
ನಿಮ್ಮಲ್ಲಿ ನನ್ನ ಪ್ರೀತಿ ಅಚಲ.
ಅಪ್ಪ ನನ್ನ ಎದೆಗೆ ಅಪ್ಪಿ
ಹೃದಯ ಪುಳಕಿದಾಗ
ನನ್ನ ಕರಗಳು ಅಪ್ಪನ
ಕಂಠಸುತ್ತಿ ಬಿಗಿದು ಮುತ್ತಿಟ್ಟಾಗ
ಕಿಟಾರನೆ ಕಿರುಚಿ ಬಿಡುವೆ
ಅಮ್ಮಾ! ಹೆದರಿದೆಯಾ?
ಗಡ್ಡ, ಮೀಸೆ ಕಾಟ ನನಗೆ ಬೇಡ
ಎಂದು ಅಪ್ಪನಿಗೆ ಹೇಳಿ ಬಿಡು
ಬಾಯ್! ಅಮ್ಮಾ!
ಬೇಗನೆ ಸ್ವತಃ ಬಂದು ಬಿಡುವೆ
ಜಗದಂಗಳಕೆ
ನಿನ್ನ ಮಮಗೆ ಮಡಿಲಿಗೆ.
ಒಂಭತ್ತು ತಿಂಗಳು ತುಂಬಿದಂತೆ
ಗರ್ಭದ ಗುಡಿಯಲ್ಲಿ
ಶಿಶು ಚೇತನ ನಾನಾಗಿ
ನಿನ್ನೊಲುಮೆಯ ನವಮಾಸ
ವಾಸದಲಿ ನಾ ನಿನಗೆ ಋಣಿಯಾಗಿ
ಮುತ್ತಿನ ಖಣಿಯಾಗಿ
ಜಗಕೆ ಬರುವೆ
ಹೆತ್ತಮ್ಮನ ಮಡಿಲ ತುಂಬಿ
ಜಗವಕಣ್ ಬಿಟ್ಟು ನೋಡುವ
ಕಾತುರತೆಯಿಂದ
ನಾ ಕಾಯುತಿರುವೆ.

ಅಮ್ಮನ ಆಶೋತ್ತರ
ಕಂದ! ನಿನ್ನ ಕನಸುಗಳು
ನನಸಾಗುವ ಸಮಯ
ಸನಿಹಕ್ಕೆ ಬರುತ್ತಿರುವಂತೆ
ನನ್ನದೆಯಲ್ಲಿ ನಿನ್ನ
ನೋಡುವ ತವಕವಾಗುತ್ತಿದೆ.
ಎದೆಗೆ ಅವಚಿ ಆಲಂಗಿಸಿ
ಹಾಲೂಡಿಸುವ ಕಾತುರ
ರೋಮಾಂಚನ ತರುತಿದೆ.
ನಿನಗೆ ಜಗತ್ತಿನ
ಪರಿಚಯ ಪಿಸುಮಾತಿನಲ್ಲಿ
ಈಗಲೇ ಮಾಡಿ ಬಿಡುವೆ,
ನಿನ್ನ ಆಶೋತ್ತರಗಳು
ಕುಸಿಯದಿರಲೆಂದು, ಕಮರದಿರಲೆಂದು
ಹೇಳುವೆ ಕೇಳು ನನ್ನ ಮನದ ಭಾವಗಳ
ಕಂದ! ದೈವ ಸೃಷ್ಟಿಯ
ಈ ಜಗವು ಬಲು ಸುಂದರ
ಮಾನವನ ಶಕ್ತಿಯುತ ತೋಳಲ್ಲಿ
ಹವನ ಮನೋವೇಗದಲಿ
ಭಾವನೆ, ವಿವೇಕ ಬುದ್ಧಿಯಲಿ
ಹೃದಯದ ಸಂವೇದನೆ
ಸ್ಪಂದನದಲಿ ಭವ್ಯವಾಗಿ
ಬೆಳದಿದೆ ಈ ಜಗದ ಹಂದರ
ಹರಡಿದೆ ಸ್ನೇಹ ಪ್ರೀತಿಗಳು
ವಿಶ್ವವೊಂದು ಕುಟುಂಬವಾಗಿದೆ.
ಇಪ್ಪತ್ತೊಂದನೆಯ ಶತಮಾನದಲಿ
ಹೆಜ್ಜೆ ಇಡಲು ಬರುತಿರುವ ನೀನು
ಸುದೈವಿ ಹಾಗೂ, ದುರ್ದೈವಿಯೂ ಹೌದು
ಪೂರ್ವ‍ಜರಿಗಿಂತಲೂ
ನಾವು ಮುನ್ನಡೆದಿದ್ದೇವೆ
ಮುನ್ನಡೆವ ಪಥದಲ್ಲಿ
ಅತಿರೇಕಗಳಿಂದ
ಮುಗ್ಗರಿಸುವ ಮುಗ್ಗಟ್ಟನ್ನು
ತಂದೊಡ್ಡಿ ಕೊಂಡಿದ್ದೇವೆ.
ಐತಿಕ ಪ್ರಗತಿಯಲಿ
ಮಾನಸಿಕ ಸಮತೋಲನ
ಕಳೆದು ಕೊಂಡಿದ್ದೇವೆ.
ಚಿಟಿಕೆ ಬಡಿಯುವುದರಲ್ಲಿ
ಚಟುವಟಿಕೆಗಳು ಪೂರೈಸುತ್ತವೆ.
ಆಮೆ, ಬಸವನಹುಳು ಮಂದ ಜೀವಿಗಳು
ಎಂದೂ ಅವಸರದ ಪಾದಗಳ
ಕೆಳಗೆ ಅಸುನೀಗದಂತಿರಬೇಕು.
ಇದು ಒಂದು ಓಡುವ ಜೀವನ.
ಪುಟ್ಟು! ನೀನು ಹೆಜ್ಜೆ ಇಟ್ಟು
ನಡೆಯಲು ಕಲಿತೊಡನೆ
ಮತ್ತೊಂದು ಹೆಜ್ಜೆ ಓಟದ ಹೆಜ್ಜೆ
ಯಾಗದಿರಲೆಂಬ ದುಗುಡ
ನನ್ನ ಈಗಲೇ ಕಾಡುತಿದೆ.
ನಿಂತು ನೋಡುವ ನಿಮಿಷಗಳು
ನಮ್ಮ ಕೈಯಲ್ಲಿ ಇರುವುದೇ ಇಲ್ಲ.
ಜಾರಿ ಹೋಗುವ ಕಾಲನ
ಕೈ ಕಾಲು ಕಟ್ಟಲು ನಮಗೆ ಸಾಧ್ಯವಿಲ್ಲ
ನಾವೂ ಓಡುತ್ತಿರ ಬೇಕು
ಬ್ರೇಕು ಹಾಕಿದರೆ ಗುರಿ
ಮಸಕಾಗಬಹುದು.
ಅವಸರದಲ್ಲೂ, ಹಿಡಿದು
ನಿಲ್ಲಿಸಬೇಕು, ನೀನು ಕ್ಷಣಗಳನ್ನು
ಆಕಾಶದ ನೀಲಿಯನು
ನಿಂತು ನೋಡ ಬೇಕು
ಕಾಮನ ಬಿಲ್ಲ ಕೆಳಗೆ ನೀ
ಕನಸಕಾಣಬೇಕು.
ಸೂರ್ಯಾಸ್ತಮದ ಓಕುಳಿಯಾಟದಲಿ
ನೀ ಪಾಲ್ಗೊಳ್ಳ ಬೇಕು.
ಸೂರ್ಯೋದಯದ ಹಕ್ಕಿ
ಚಿಲಿ ಪಿಲಿ ಉಲಿಗೆ
ನೀ ಎದ್ದು ಉದ್ಘಾಟನೆ
ಮಾಡಬೇಕು.
ಮೊಗ್ಗು, ಹೂವ ಸನಿಹಕ್ಕೆ ಹೋಗಿ
ಹೃದಯ ಬಿಚ್ಚಿ
ನೀ ಮಾತಾಡ ಬೇಕು.
ಹಸಿರು ಹುಲ್ಲುಗಾವಲಿನಲಿ
ಮೈ ಮನಗಳ ಹರಡಿ
ಸಂತಸದಿ ಕುಣಿಯ ಬೇಕು.
ಜಲಪಾತ ಸಾಗರದೆಡೆಯಲಿ
ನಿನ್ನ ನೀ ಮರೆಯ ಬೇಕು.
ಭೂ ತಾಯಿಯ ಮಖಮಲ್
ಹಸಿರು ಜಮ ಖಾನೆಯಲಿ
ನೀ ಆರಾಮದಿ ಆಡಿ ಬೆಳೆಯಬೇಕು
ಭೂಮಿ ಪುಳಕದ ಹಸಿರ
ರೋಮಾಂಚದಲ್ಲಿ ನೀ ಒಂದಾಗಬೇಕು.
ಗಿಡಮರಕ್ಕೆ ಜೋತು
ಹಕ್ಕಿ ಗೂಡಿನ ಕುಶಲತೆಯ
ನೀಬೆರಗಾಗಿ ನೋಡಬೇಕು
ಹೂವಿನೊಂದೊಂದು
ಪಕಳೆ, ಅಂತರಂಗವ ತೆರೆಯೆ
ಅಲ್ಲಿ ಸಮಾಗಮವಾಗ ಬೇಕು.
ಮಣ್ಣಲ್ಲಿ ಬಿತ್ತಿದ ಬೀಜ
ಮನವ ಬಿಚ್ಚಿಕೊಂಡು
ಪುಟ್ಟ ಎಲೆಗಳ ತನ್ನ
ಎರಡು ಕೈಗಳನು ಮೊಳಕೆಯಲಿ
ಜೋಡಿಸಿ, ದೈವಕೆ ಬೇಡುವದ
ನೀ ನೋಡ ಬೇಕು.
ಅದು ದೊಡ್ಡ ಮರ ವೃಕ್ಷವಾಗಿ
ಶಾಖೋಪ ಶಾಖವಾಗುವುದು
ನಿನ್ನಲ್ಲಿ ವೈಶಾಲ್ಯ ಬೆಳೆಸಬೇಕು.
ಹಸಿರು ಚಿಗುರನು ನೋಡಿ ನೀ
ಬಾಳ ಒಗರು ಮರೆಯಬೇಕು.
ಮೊಗ್ಗುಗಳು ಹವಾಮಾನಕ್ಕೆ
ಒಗ್ಗಿ ಹೋಗುವಂತೆ
ಕಂದ! ನೀ ಈ ಬಾಳಿಗೆ
ಒಗ್ಗಿ ಹೋಗಬೇಕು.
ಅರಳಿದ ಹೂವಂತೆ ನೀನೆಂದೂ
ನಗುತಲಿರಬೇಕು.
ಕಾಲು, ಹಣ್ಣಿನಂತೆ ಸಿಹಿ ಹುಳಿಯ
ಅನುಭಾವ ನೀ ಪಡೆಯಬೇಕು.
ತೇಲುವ ಮೋಡಗಳಲಿ
ನಿನ್ನ ಕಿನ್ನರ ಲೋಕ ಸೇರಬೇಕು
ಹೆಜ್ಜೆ ಹೆಜ್ಜೆಗೆ ಕೇಳುವ
ನಿಮಿಷಗಳ ಕಾಲ್ಗೆಜ್ಜೆ ಕೇಳಿಸಿದರೇನು?
ನಿಲ್ಲುವುದು, ಸವೆಯುವುದು
ಪ್ರಕೃತಿಯ ಸೊಬಗ ಮೆಲ್ಲುವುದು
ನೀ ರೂಢಿಸಿ ಕೊಳ್ಳ ಬೇಕು.
ಹೊತ್ತೆಂಬ ಕುದರೆಯಲಿ
ಸವಾರಿ ಹೊರಟ ನಮಗೆ
ಹೊತ್ತಿನ ಲಗಾಮು ಕೈಯಲಿರಬೇಕು
ಹಗಲು ರಾತ್ರಿಯ ಗಾಡಿಗೆ
ಕಟ್ಟಿದ ಎತ್ತುಗಳು
ನಾವೇಕೆ ಆಗಬೇಕು?
ಮಿಣಕುವ ತಾರೆಗಳು
ನಿನ್ನ ಕರೆದಾಗ
ಕಣ್ಣುಗಳು ತೂಕಡಿಸುತ್ತಿದ್ದರು
ಮಲಗುವ ಮುನ್ನ
ತಾರೆ ಚಂದ್ರಮ ರೊಡನೆ
ಹರಟೆ ಹೊಡೆಯ ಬೇಕು.
ಚೆಂದಿರನ ಬೆಳದಿಂಗಳ
ಪಾಯಸವ ನೀ ಸವಿಯಬೇಕು.
ವಯಸ್ಸು, ಎರಡು ಮೂರಾಗಲು
ನಿನಗೆ ಶಾಲೆಯ ನಾಲ್ಕು ಗೋಡೆವಾಸ.
ಮಿಸ್ಸುಗಳ ಮಾತು ಕೇಳಬೇಕು
ಬಸ್ಸುಗಳ ಏರಬೇಕು.
ಶಾಲೆಗೆ ಹೋಗಿ, ಅಮ್ಮನ
ಮಿಸ್ಸು ಮಾಡಬೇಕು.
ಪುಟ್ಟನಾದರೂ ನೀನು
ರಾತ್ರಿ ಹಗಲು ಕಳೆಯಲು
ಶಾಲೆ ಕೊಡುವ ಮನೆಗೆಲಸ
ನಿನ್ನ ಮನಕೆ ಮೋಡ
ಕವಿಯದಂತಿರಬೇಕು.
ಕೆಲವೊಮ್ಮೆ ಅಮ್ಮನಿಗೂ
ಅಪ್ಪನಿಗೂ ಹಂಚಿ
ನಿನ್ನ ಶಾಲೆಯ ಕೆಲಸ, ನೀ
ನಗುತ ಕುಣಿದಾಡುತಿರಬೇಕು.
ಲೆಕ್ಕ, ಮಗ್ಗಿ, ಭಾಷೆ
ಭೂಗೋಳ, ವಿಜ್ಞಾನ
ಇತಿಹಾಸ ಇದರ ಮಧ್ಯೆ
ನೀ ತೋರಬೇಕು
ಮಂದಹಾಸ ಲಾಸ್ಯ!
ಶಾಲೆಯ ಆಟ ಪಾಟಗಳಲ್ಲಿ
ಹಾಡು ನಾಟಕಗಳಲ್ಲಿ
ನೀ ಮುಂದಾಗಬೇಕು
ಮನಕೆ ಸಂಸ್ಕಾರ ನೀಯಬೇಕು.
ಬಿರುಗಾಳಿ ಸುಳಿಯಂತೆ
ಕಾಡುವ ನಿನ್ನ ಶಾಲೆಯ
ಪರೀಕ್ಷೆಗಳಲಿ ನೀ
ಕೊಚ್ಚಿ ಹೋಗದಿರಬೇಕು.
ಮೌಲ್ಯಗಳ ನಡೆನುಡಿಯಲ್ಲಿ
ಲಕ್ಷ್ಯವಿಟ್ಟು ನೀ
ಬಾಳ ಗುಡಿಯ ಕಟ್ಟ ಬೇಕು.
ನನ್ನ ಈ ಪಿಸುಮಾತುಗಳೆಲ್ಲ
ನಿನ್ನಲ್ಲಿ ಊರ ಬೇಕು.
ನೀ ಸಂಧಿಗ್ಧತೆಯಲಿ
ಸಿಕ್ಕಿ ಬೀಳದಂತೆ
ನೀ ಬರುವ ಈ ಜಗದಲ್ಲಿ
ಸಂತಸದ ಪತಾಕೆಯನ್ನೆತ್ತಬೇಕು.
ಬುವಿ, ಆಗಸ, ಸಾಗರ
ನದಿ, ಜಲಪಾತ ಸರೋವರ
ಬೆಟ್ಟ ಗುಡ್ಡ, ಕಾಡುಗಳು
ನಾಡುಗಳು, ಜನಸ್ತೋಮಗಳು
ಪಶು-ಪಕ್ಷಿ-ಪ್ರಾಣಿಗಳೂ
ಎಲ್ಲವೂ ಅಡಗಿರುವ
ಈ ಬ್ರಹ್ಮಾಂಡ ಅದೆಷ್ಟು ದೊಡ್ಡದು!
ನಿನ್ನ ಪುಟ್ಟ ಕೈ ಅಗಲಿಸಿ
ನೀ ಬಾಯಿ ತೆರೆದು
ಇಷ್ಟು ದೊಡ್ಡದಾ ಎಂದು
ಕೇಳುವೆಯೋ ಏನೋ?
ದೊಡ್ಡದಾದರೇನು?
ಜನ ಹೆಚ್ಚಿದಟ್ಟವಾಗಿದೆ
ಎಲ್ಲಿ ನೋಡಿದರೂ ಪರಿಸರ ಮಾಲಿನ್ಯ
ಕುಪ್ಪೆ ಸೆಗಣಿ ದುರ್ನಾತ
ಮೂಗಿಗೆ ಧರಿಸಿ ಕೊಳ್ಳಬೇಕು ಜರಡಿ
ಧೂಳು ಕಣ, ಕ್ರಿಮಿಗಳೂ ಹರಡಿ
ಬೇಯುತಿದೆ ಭೂಮಿ ಬೇಯ್ಗೆಯಲಿ
ಬತ್ತುತ್ತಿವೆ ಜಲ ಧಾರೆಗಳು
ಮಾನವನ ಕ್ರೌರ್ಯ, ಕಾಡುಗಳ
ಕೊನೆ ಗಾಣಿಸುತ್ತಿದೆ.
ಗದ್ಗಗದಾನಡುಗುತಿನೆ
ಮೋಡಗಳು ಹರಕು ಚಿಂದಿಗಳಾಗಿ,
ಮಳೆಯ ನುಂಗಿ ಕೊಳ್ಳುತ್ತಿವೆ
ಮಣ್ಣು ಬಂಜರಾಗುತ್ತಿದೆ
ಹಸಿರು ಕೊನೆಯುಸಿರನೆಳೆದು.
ಗೋಳದಲಿ ತಾಪ ಮಾಪವು ಏರಿ
ಜಗ್ತಿನ ಗೋರಿ ಕಟ್ಟುತ್ತಿದೆ.
ಕಂದ! ಇದು ನೀ ಬರುವ
ಕಟು ಸತ್ಯದ ಜಗತ್ತು
ನಿನ್ನಂತಹ ಕಂದಗಳಿಗೆ ಹಿಮ್ಮತ್ತು
ಇರಬೇಕು ಈ ಲೋಕಕೆ ಮತ್ತೆ
ತರಲು ಗಮ್ಮತ್ತು
ನಿರ್ವಹಿಸಿ ಜಗತ್ತಿನ ವಕಾಲತ್ತು
ನಿಭಾಯಿಸಿ ನಿನ್ನ ತಾಕತ್ತು,
ಜಗತ್ತಿನಲ್ಲಿ ಉಸಿರಾಡಲು
ಕುಸ್ತಿ ಮಾಡಬೇಕು.
ಮನೆಯಲ್ಲಿ ಮಂದಿ ಇಲ್ಲದೆ
ಅಮ್ಮ ಕೆಲಸದಿಂದ ಬರುವವರೆಗೂ
ನೀ ಒಂಟಿಯಾಗಿ ನೊಣ ಹೊಡೆಯಬೇಕು
ಅಜ್ಜ, ಅಜ್ಜಿ, ಅತ್ತೆ, ಮಾವ
ಬಂಧು ಬಳಗವು ಈಗ ಎಲ್ಲಿ?
ಪುಟ್ಟ ಸಂಸಾರಗಳು
ಸಮುದ್ರ ದ್ವೀಪದಂತೆ.
ಆತ್ಮೀಯ ಸಂಪರ್ಕಕ್ಕೆ
ನಿನಗೆ ದೂರವಾಣಿ, ಪಿ.ಸಿ.ಗಳು
ತುಂಬಿವೆ ಮೇಜು
ನೀ ಕರೆದಾಗ ಅಜ್ಜ, ಅಜ್ಜಿ
ಧ್ವನಿ ಕೇಳಿ ಮಾಡು, ಮೋಜು.
ಗಿಣಿ, ಮೊಲ, ನಾಯಿ, ಬೆಕ್ಕು
ನಿನ್ನ ಮುದ್ದಿನ ಸಾಕು ಮರಿಗಳು
ನಿನ್ನ ಆಟಿಕೆ ಅವೇ ದಿಕ್ಕು
ನಲಿದಾಡುತ ಬಾಳಲು ಕಲಿ
ನೀ ಗಹಿಗಹಿಸಿ ನಕ್ಕು.
ಇದು ನೀ ಬರುವ ನವ್ಯ ಜಗತ್ತಿನ ಸಮಸ್ಯೆ
ನಿನಗಿದು ವಿಚಿತ್ರ ಅಮಾವಸ್ಯೆ.
ಅಮ್ಮ ಅಪ್ಪ ಕೆಲಸದಿಂದ
ಬರೆವವರೆಗೂ
ನಿನಗೆ ಒಂಟಿ ಕಾಲತಪಸ್ಸೇ!
ಅಪ್ಪಗೆ ನಿನ್ನ ಸಂಪರ್ಕಕ್ಕೆ
ಇದ್ದರು ನೂರಾರು ಸೇತುವೆ
ಕೆಲಸ ತಂದೊಡ್ಡುತ್ತದೆ
ಕಲ್ಲಿನ ಕೋಟೆ ನಡುವೆ.
ನೀ ಬೆಳೆಯ ಬೇಕು
ತುಂತುರು ಮಳೆ ತಂಗಾಳಿಯಲಿ
ತೂಗಾಡಿ ಮಾಡಿ ಏರುವ ಬಳ್ಳಿಯಂತೆ!
ಕಂದ ನೀ ಬೆಳದಂತೆ
ಬೆಳೆಯುತ್ತದೆ ನಿನ್ನ ಹೃದಯ ತೋಟ.
ನಿನ್ನ ಬೇಕು ಬೇಡಗಳು
ನಿನ್ನ ಇಷ್ಟ ಕಷ್ಟಗಳು
ನಿನ್ನ ಹಾವ ಭಾವಗಳು
ನಿನ್ನ ತನವ ಅರಳಿಸುತ್ತ
ಹೋಗುತ್ತವೆ, ಚೆಲ್ವಿಕೆಯನೀಯುತ್ತ.
ಮತ್ತೆ ಮೋಡ ಮುಸುಕು
ದುಗುಡ, ದುಮ್ಮಾನಗಳ
ಎದೆ ಹದೆಯ ಪಾಕಗಳ
ನಿರಾಶೆ ಹತಾಶೆಗಳು ನಿನ್ನ
ನಿಲುವೆಕೆಗೆ ಮತ್ತೆ ಬತ್ತಳಿಕೆ
ಆಸೆ ಇತ್ತು ನಿನ್ನ ಇನ್ನು
ಗಟ್ಟಿಯಾಗಿಸುತ್ತವೆ
ನಿನ್ನ ವಿದ್ಯೆ ವಿನಯಗಳ ಪ್ರಗತಿ
ಬೆಳಸುತ್ತವೆ ನಿನ್ನ ಪ್ರವೃತ್ತಿ
ತೊಳಲಾಡಿ, ಬಳಲಾಡಿ
ನಿರ್ಧರಿಸಿಕೊಳ್ಳುವ ನಿನ್ನ ವೃತ್ತಿ
ನಿನ್ನ ಬಾಳ ವಸಂತೋದಯದ
ಮೌನದ ದ್ವಿಗ್ವಿಜಯ ಪತಾಕೆ
ಹಾರಿಸುತ್ತದೆ.
ಕಂದನ, ಬಾಳೆತ್ತರದ ಮೆಟ್ಟಿಲಲಿ
ಅಮ್ಮ, ಅಪ್ಪ ನಿಂತು ವೀಕ್ಷಿಸುತ
ಕಣ್ಣ ತುಂಬುತ್ತದೆ.
ಭಾವ ಮಿಡಿಯುತ್ತದೆ
ಜೀವ ಹಾಡುತ್ತದೆ
ತಾನ ತಂತಾನನ
ಹೃದಯ ಹರಿಸುತ್ತದೆ
ಉದಯವಾಗಿ ಅಮ್ಮನ ಕನಸು
ಮುಗಿದು, ಉದರದ ಕಂದನ್ನ
ತಡವುತ್ತ, ಕನವರಿಸಿ ಏಳುತ್ತಾಳೆ
ಕಂದನ ಭವಿಷ್ಯದ ಬಾಳಿಗೆ
ಮಮತೆ ತೊಟ್ಟಿಲ ಕಟ್ಟಿ ತೂಗಿ
ಬೆಳಸಿ, ಹಡಗ ನೇರಿಸುತ್ತಾಳೆ
ಜಗದ ಅನುಭವದ ಸಾಗರದಿ
ತೇಲುತ್ತ ಸಾಗಲು
ದೂರತೀರದ ಗುರಿ ಮುಟ್ಟಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪು
Next post ಜಾರಿದವರು

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…