ಮತ್ತೆ ಅಳಿದುಳಿದ ಮಂದಿ ಹೊರಟಾಗ
ಕತ್ತಲೆಗೆ
ದೂಳು ಹೊಗೆ ಮತ್ತು ಶಬ್ದ ನಿಂತಾಗ
ಕತ್ತಲೆಗೆ
ಬದುಕಿ ಉಳಿದ ಭೂಮಿಯತ್ತ ನೋಡಿದಾಗ
ಕತ್ತಲೆಗೆ

ಕಂಡದ್ದು ಕಾಣಿಸಲಿಲ್ಲ ಕೇಳಿದ್ದು ಕೇಳಿಸಲಿಲ್ಲ
ಸಮುದ್ರ ಕೊರೆದು ಹೊಡೆವ ಧ್ವನಿ ಮಾತ್ರ
ಕೇಳಿಸಿತು-ಮನುಷ್ಯ ಧ್ವನಿಯಲ್ಲ
ನೊರೆಯಾಡುವ ನೆರೆ ನೀರು ನೀರೇ
ಕಾಣಿಸಿತು-ಮಣ್ಣಲ್ಲ

ಹೀಗೆ ಅಂದಿರುಳು ಪ್ರಯಾಣದಲ್ಲಿ ಕಳೆದು ಮಸುಕಾದಾಗ
ಹೊಸ ಭೂಮಿಗೆ ಬಂದೆವು ಹೊಸ ಪರಿಸರದಲ್ಲಿ ಯಾವುದೂ
ಅರ್ಥವಾಗದೆ ನಮಗೆ ನಾವೇ ಗುರುತಿಲ್ಲದೆ ಅಲೆದೆವು
ಒಂದು ದುರಂತ ಮೌನದ ಭಾರದ ಕೆಳಗೆ ಕುಸಿದೆವು

ಭವಿಷ್ಯದಲ್ಲಿ ವಂಚಿತರಾಗಿ ಕಳೆದ ಕಲ್ಪದ ಅರೆಮರೆವಿನಲ್ಲಿ
ಚಳಿಗೆ ಗಾಳಿಗೆ ಸ್ವಲ್ಪ ಸ್ವಲ್ಪವೇ ಸವೆದೆವು
ಅನಾಥ ಶಿಲ್ಪಗಳಾಗಿ ಉಳಿದೆವು
ಅವಶೇಷಗಳಂತೆ ಕಾದೆವು
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)