ಬಿದ್ದಿಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದಿಯಬೇ ಮುದುಕಿ ||ಪ||

ಸಧ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದಿಯಬೇ ಮುದುಕಿ ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟೀಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದಿಯಬೇ ಮುದುಕಿ ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದಿಯಬೇ ಮುದುಕಿ ||೩||
****