ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಎಂದಾದರೊಮ್ಮೆ  ಹದಿ ಹರೆಯದ ಮಕ್ಕಳಿರುವ ಅಮ್ಮನೊಂದಿಗೆ ಮಾತಿಗಿಳಿದಿದ್ದೀಯಾ ? ಅವಳ ಮಕ್ಕಳ ಬಗ್ಗೆ ವಿಚಾರಿಸಿದ್ದೀಯಾ ? ವಿಚಾರಿಸಿದ್ದರೆ ಅವಳ ಮಾತಿನುದ್ದಕ್ಕೂ ಅವಳ ಆತಂಕಗಳು ದ್ರೌಪದಿಗೆ ಶ್ರೀ ಕೃಷ್ಣ ನೀಡಿದ ಅಕ್ಷಯ ಸೀರೆಯ ಹಾಗೆ ಕೊನೆಯಿಲ್ಲದಂತೆ ಬಿಚ್ಚಿಕೊಳ್ಳುವುದು ನೀನು ಗಮನಿಸಿರಬಹುದು.

ಹರೆಯದ ಮಗ ಇತ್ತಿತ್ತಲಾಗಿ ರಾತ್ರಿ ಹತ್ತಾದರೂ ಮನೆಗೆ ಬರದಿರುವುದು ಅವನ ಗೆಳೆಯರ ಬಳಗ ಸರಿ ಇಲ್ಲದಿರುವುದು. ಅವನ ರೂಮಿನ ತುಂಬಾ ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಸಚ್ಚಿನ್ ತೆಂಡುಲ್ಕರ್, ಐಶ್ವರ್ಯರೈ, ಪ್ರೀತಿ ಜಿಂಟಾರ ಫೋಟೋಗಳು ತುಂಬಿರುವುದು. ಓದಿನಲ್ಲಿ ತೋರಿಸುತ್ತಿರುವ ನಿರಾಸಕ್ತಿ ವಿಪರೀತ ವೇಗವಾಗಿ ಬೈಕ್ ಓಡಿಸುವುದು. ಚಿತ್ರ ವಿಚಿತ್ರ ಸ್ಟೈಲ್ ಮಾಡುವುದು. ಮಾತಿಗೆ ಮುಂಚೆ ರೇಗಾಡುವುದು. ಉಡಾಫೆ ಮಾತಾಡುವುದು. ಅಬ್ಬರ ದನಿಯಲ್ಲಿ ಪಾಶ್ಚಾತ್ಯ ಸಂಗೀತ ಕೇಳುವುದು? ಹುಚ್ಚು ಹುಚ್ಚಾಗಿ ಕೈಕಾಲಾಡಿಸುವುದು, ಅಶ್ಲೀಲ, ಹಿಂಸೆ, ಕ್ರೌರ್ಯ ತುಂಬಿದ ದೂರದರ್ಶನದ ಚಾನೆಲ್ಗಳನ್ನು ನೋಡುವುದು, ವಿಪರೀತ ಕ್ರಿಕೆಟ್ ಹುಚ್ಚು… ಒಂದೇ ಎರಡೇ ಅಮ್ಮನ ಆತಂಕಗಳಿಗೆ ಕೊನೆ ಮೊದಲಿಲ್ಲ, ಮಗನ ಕುರಿತು ಈ ಚಿಂತೆಗಳಾದರೆ,

ಹರೆಯದ ಮಗಳನ್ನು ಕುರಿತು ಬೇರೆಯದೆ ಆತಂಕಗಳು, ಮಗಳನ್ನು ಎಷ್ಟು ಕಣ್ಣುಗಳಿಂದ ಕಾದರೂ ಅವಳಿಗೆ ಸಮಾಧಾನವಿಲ್ಲ.. ಮಗಳಿಗೆ ಬರುವ ಫೋನ್ ಕರೆಗಳು, ಲೆಕ್ಕವಿಲ್ಲದಷ್ಟು ಬಾರಿ ಕನ್ನಡಿ ನೋಡಿಕೊಳ್ಳುವ ಅವಳ ಅಭ್ಯಾಸ. ವೇಷಭೂಷಣ ಗೆಳತಿಯರು. ಅವರ ಮಾತುಕತೆ, ಗೆಳೆಯರಿದ್ದರೆ ಅವರೊಂದಿಗಿನ ಸಲಿಗೆ, ಮಗಳು ಹೆಚ್ಚು ಹೊತ್ತು ರೂಮಿನ ಬಾಗಿಲು ಹಾಕಿಕೊಂಡರೆ, ಅನಾಸಕ್ತಿ ತೋರಿ ಕೆಲಸ ಕೆಡಸಿದರೆ, ಅವಳು ನೋಡುವ ಕಾರ್ಯಕ್ರಮಗಳು, ಅವಳ ವಿನಾಕಾರಣ ನಗು, ಮೌನ, ದುಗುಡ …… ಹೀಗೆ ಎಲ್ಲವೂ ಅಮ್ಮನನ್ನು ಕಾಡಿ ಕಂಗೆಡಿಸುತ್ತದೆ.

ಅಮ್ಮನ ಮಕ್ಕಳಿಗೆ ಅವಳ ಆತಂಕಗಳೆಲ್ಲಾ ಅರ್ಥವಿಲ್ಲದ್ಲು. ಹುಂಬತನದ್ದು. ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಅಮ್ಮ ಹೀಗೆ ಅಡಿಗಡಿಗೆ ತಮ್ಮ ವ್ಯವಹಾರದಲ್ಲೆಲ್ಲಾ ಮೂಗು ತೂರಿಸುತ್ತಿದ್ದಾಳೆ ಎಂದೆನಿಸಿದರೆ, ಅಮ್ಮನಿಗೆ ಮಕ್ಕಳು ಕೆಟ್ಟು ಹೋಗಬಾರದು. ಅವರು ಚೆನ್ನಾಗಿ ಓದಿ, ಉತ್ತಮ ರೀತಿಯಲ್ಲಿ ಬದುಕು ನಡೆಸುವ ಸುಸಂಸ್ಕೃತರಾಗಬೇಕು ಎಂಬ ಆಸೆ. ಅವಳ ಆತಂಕಗಳನ್ನೆಲ್ಲಾ ಅವಳು ಮಕ್ಕಳೊಂದಿಗೆ ಬಾಯಿಬಿಟ್ಟು ಹೇಳದಿದ್ದರೂ ದಿನನಿತ್ಯ ಸುತ್ತಿ ಬಳಸಿ ಏನಾದರೊಂದು ಉಪದೇಶ ನೀಡುತ್ತಿರುತ್ತಾಳೆ, ಅದನ್ನು ಮಕ್ಕಳು ಕೇಳುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಇವಳ ಆತಂಕಗಳು, ಇವಳು ಬಾಯಿ ಮುಚ್ಚಲು ಬಿಡುವುದಿಲ್ಲ. ಮಕ್ಕಳು ಮನೆಯೊಳಗಿದ್ದರೂ ಹೊರಗಿದ್ದರೂ ಅವರದ್ದೇ ಚಿಂತೆ. ಕಾಲೇಜು ತಪ್ಪಿಸಿ ಸಿನಿಮಾಕ್ಕೆ ಹೋಗಿದ್ದರೆ ಕಾಲೇಜು ಬಿಟ್ಟು ಒಂದು ಗಂಟೆಯ
ಮೇಲಾದರೂ ಇನ್ನೂ ಮನೆಗೆ ಬಂದಿಲ್ಲವಲ್ಲ ಮನೆಯಲ್ಲಿದ್ದರೆ ಅವರ ವರ್ತನೆಗಳ ಕಂಡು ಸಿಡಿಮಿಡಿ. ಹಾಗೆಂದು ಅಮ್ಮನಿಗೆ ಮಕ್ಕಳ ಮೇಲೆ ಪ್ರೀತಿ, ನಂಬಿಕೆಗಳಿಲ್ಲವೇ. ಹಾಗೇನೂ ಇಲ್ಲ. ಪ್ರೀತಿ ನಂಬಿಕೆಗಳಿವೆ. ಆದರೂ ಯಾಕೋ ಅವರು ಮಾಡುತ್ತಿರುವುದು ಸರಿ ಇಲ್ಲ ಎಂದವಳ ಆತಂಕ. ತಾನವರನ್ನು ಬೆಳೆಸುವುದರಲ್ಲಿ ಅರ್ಥ ಮಾಡಿಕೊಳ್ಳುವುದರಲ್ಲಿ ಸೋತಿದ್ದೇನೆಯೇ. ನಾನು ತಪ್ಪು ಅವರು ಸರಿಯೇ ಅಥವಾ ನಾನು ಸರಿ ಅವರು ತಪ್ಪೇ ಅಮ್ಮನಿಗೆ ಸದಾ ಗೊಂದಲ. ಅವಳ ಪ್ರಾಮಾಣಿಕ ಆತಂಕಗಳು ಮಕ್ಕಳಿಗೆ ಅರ್ಥವಾಗುತ್ತದೆಯೇ ಅಥವಾ ಇವರವಳಿಗೆ, ಅವರಿವಳಿಗೆ ಜನರೇಷನ್ ಗ್ಯಾಪ್‍ನ ಕಂದಕದಡಿ ಅರ್ಥವಾಗದೇ ಉಳಿದು ಬಿಡುತ್ತಾರೆಯೇ ?
*****