ಜಂಗಮವೇ ಗುರು, ಜಂಗಮವೇ ಲಿಂಗ,
ಜಂಗಮವೇ ಪ್ರಾಣವೆಂದರೆ, ಇಲ್ಲವೆಂಬ
ಅಂಗಹೀನರಿರ ನೀವು ಕೇಳಿರೋ.
ಜಂಗಮವು ಗುರುವಲ್ಲದಿದ್ದರೆ
ಕಾಮ, ಕ್ರೋಧ, ಲೋಭ, ಮೋಹ,
ಮದ, ಮತ್ಸರವ ಹಿಂಗಿಸುವನೆ?
ಜಂಗಮ ಪ್ರಾಣವಲ್ಲದಿದ್ದರೆ,
ಪ್ರಾಣಕ್ಕೆ ಪ್ರಸಾದವ ಕೊಡುವನೆ?
ಜಂಗಮವು ಲಿಂಗವಲ್ಲದಿದ್ದರೆ,
ಪ್ರಾಣಲಿಂಗವನೆ ತೋರುವನೆ?
ಇದ ಕಂಡು ಕಾಣೆನೆಂಬ ಭಂಗಿತರ
ನುಡಿಯ ಮೆಚ್ಚರು ನಮ್ಮ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****