ಸಮುದ್ರ ಕಿನಾರೆಯಲ್ಲಿ ಎಲ್ಲಿ ದೊಡ್ಡ ದೊಡ್ಡ ಅಲೆಗಳು
ಗೋಧಿಬಣ್ಣದ ಮರಳುಗಳನ್ನು ತಂದುಹಾಕಿವೆಯೋ
ಅಲ್ಲಿ ಅದೇ ಬಣ್ಣದ ಏಡಿಗಳು
ಯಥೇಷ್ಟ ಓಡಾಡುತ್ತವೆ.

ಎಷ್ಟು ಚಿಕ್ಕವಿವೆ ಇವು ಎಂದರೆ
ಒಂದು ಅಂಗಿಜೇಬಿನಲ್ಲಿ ಸುಮಾರು
ಒಂದು ನೂರನ್ನು ಸುಲಭವಾಗಿ
ತುಂಬಬಹುದು.

ಹಿಡಿಯಬಹುದಾದರೆ ಮಾತ್ರ.  ಕಾರಣ
ಮನುಷ್ಯರನ್ನು ಕಂಡರೆ ಇವು
ಮರಳಿನೊಳಕ್ಕೆ ನುಗ್ಗಿ
ಮಾಯವಾಗಿಬಿಡುತ್ತವೆ.

ಮೇಲೆ ಹಾದ ತೆರೆಗೆ ಇನ್ನೇನು ಕೊಚ್ಚಿಹೋದವು
ಎಂದು ನೀವು ನೆನೆದರೆ
ಇವು ಮಾತ್ರ ಮರಳಿನಿಂದ ಹೊರಬರುತ್ತವೆ
ಏನೂ ಆಗದವರಂತೆ!

ಒಂದೆರಡುಮೂರು ನೂರು-ಲೆಕ್ಕಕ್ಕೆ ಸಿಗದಷ್ಟು.
ಒಂದರಿಂದ ಇನ್ನೊಂದು ಪ್ರತ್ಯೇಕಿಸಲಾರಿರಿ.
ಎಲ್ಲ ಏಡಿಗಳೂ ಒಂದೇ ಥರ ನಮ್ಮ
ಕಣ್ಣಿಗೆ. ಹೇಗೆಂದರೆ:

ಒಂದು ವೇಳೆ ನಾವೀಗ ಇಂಥದೇ ಏಡಿಗಳಾಗಿರುತ್ತಿದ್ದರೆ
ಸಂಜೆ ವಾಯುಸೇವನೆಗೆಂದು ಹೊರಟ
ಈ ನಗರಸಭಾಪತಿಗಳನ್ನು ಪ್ರತ್ಯೇಕವಾಗಿ
ಗುರುತಿಸುತ್ತಿದ್ದೆವೆ?
*****