ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು!
ಕಪ್ಪಿನ ಮಹಿಮೆಯ ತಿಳಿದೆ ಈಗ
ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ
ರತ್ನಗಳಲಿರುವಂತೆ ನೀಲರಾಗ?
ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ
ದಟ್ಟೈಸಿ ನಡುವೆ ಮಿಂಚೆದ್ದಿದೆ,
ಕಪ್ಪ ಕೋಗಿಲೆ ದನಿ ಪಂಚಮದಿ ಹೊಮ್ಮಿದೆ
ಕಪ್ಪೇ ಅನುಪಮ ವರ್ಣ ಎನ್ನುತ್ತಿದೆ
ಬಾರೊ ಬಾರೋ ನನ್ನ ಕಪ್ಪ ನಲ್ಲ
ಬಾರೊ ಬಾರೋ ನಿನಗೆ ಸಮವೆ ಇಲ್ಲ
ಗಿರಿಧರ ನಾಗರನೆ, ಒಲವಿನ ಸಾಗರನೆ
ನಿನಗಿಂತ ಮಿಗಿಲಿಲ್ಲ ನೀನೆ ಎಲ್ಲ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.