ಹಾಯಿಕು-ಹಂದರ

ಉದಯ ವಿಹಾರದಲಿ
ಎರೆಹುಳು ಹುಡುಕುತಿದೆ
ಬಾನ ನಕ್ಷತ್ರ, ದಡದ ಶಂಕಚಕ್ರ

ಜಲಪಾತದಡಿಯಲ್ಲಿ
ಹಸಿರು ಹುಲ್ಲಿನ ನೃತ್ಯ
ಜೀವಸ್ಪಂದನ ಭೂಗರ್ಭದಲ್ಲಿ

ಒಂದು ಎರಡು ಅಂಗುಲ
ಬುವಿ ಮೇಲೆ, ಕೆಳಗೆ
ಬದುಕು ಸಾವಿನ ಭವ್ಯ ಸತ್ಯ

ಕ್ರಿಮಿಕೀಟದೊಂದಿಗೆ
ಕೆರೆಯ ನೀರಿನಲಿ ತೇಲುತಿದೆ
ನನ್ನ ಭಾವ ಪ್ರತಿಬಿಂಬ

ಹಸಿರು ಹುಲ್ಲು
ಜಾರುತ್ತ ಬರುತ್ತಿದೆ
ಬೆಟ್ಟದ ಜಾರು ಬಂಡೆಯಲ್ಲಿ

ಸೂರ್ಯೋದಯ
ಸೂರ್ಯಾಸ್ತಮದಲಿ
ಸಾಗುತಿದೆ ಪಕ್ಷಿಗಳ ಬಾಳ ಚಕ್ರ

ಬೆಳದಿಂಗಳಲಿ
ಕೋರೆಹುಳು ಕನಸಕಾಣುತಿದೆ
ಕಾಮನ ಬಿಲ್ಲಿನ ರೆಕ್ಕೆಗಾಗಿ

ಬೆನ್ನ ಮೇಲೆ ಕಂಬಳಿ ಶಾಲು
ಚಳಿಯಲ್ಲೂ ಉತ್ಸಾಹಿ
ಕೋರೆ ಹುಳದ ಸಾಲು ಸಾಲು

ಶರತ್ಕಾಲದ ರಂಗಿನ
ನಿಲುವಂಗಿಯಲಿ
ದೈವದಾ ಅವತರಣ

ಬರಿದಾದ ಗೂಡಿಂದ
ಒಂಟಿ ಗರಿಯೊಂದು
ಹಾರುತ್ತಿದೆ ಗಗನದೆತ್ತರಕ್ಕೆ

ಮರದ ನಗ್ನ ಶಾಖೆಗಳು
ನಿಂತಿವೆ ಧ್ಯಾನಮಗ್ನವಾಗಿ
ನಕ್ಷತ್ರ ಪ್ರಾರ್ಥನೆ ಮೌನವಾಗಿ

ಕಪ್ಪೆ ಚಿಪ್ಪು ಮಾಡುತ್ತಿದೆ
ಮತ್ತೆ ಸೂರ್ಯಸ್ನಾನ
ನದಿಯು ಆಲಿಂಗಿಸುತ್ತಿದೆ

ಒಂದೊಂದೇ ಎಲೆ ಉದುರುತ್ತಿದೆ
ಶರತ್ಕಾಲದ ಗಿಡದಲ್ಲಿ
ಕಣ್ಣೀರು ಸುರಿಸಿದಂತೆ

ಬೇಲಿ ಮೇಲಿನ ಇಬ್ಬನಿಯ
ನಿರ್ಗಮನಕ್ಕೆ ಎರಡುದಾರಿ
ಬುವಿ ಮತ್ತು ಬಾನು

ಸಂಜೆಯ ಮಳೆಯಲ್ಲಿ
ನನ್ನ ಹೆದ್ದಾರಿ
ತೇವದ ದಾರಿ

ಮಂಜಿನ ತೆರೆಯಲ್ಲಿ
ಹೇಮಂತ ಸೂರ್ಯ
ತೂಡಿಕೆಯಲ್ಲಿ

ಹೇಮಂತ ವೃಕ್ಷಗಳಲಿ
ಶಬ್ದಮೌನದ ಬಿಗುವು
ಮಂಜಿನ ಕಿಲಕಿಲ ನಗುವು

ನಿಖರ ಸತ್ಯವು
ದಿಟ್ಟಿಸುತ್ತಿದೆ ನಗ್ನವಾಗಿ
ಶರತ್ಕಾಲದ ಮರದಂತೆ

ಹಿತ್ತಲಲಿ ಹೂವುಗಳು
ದುಂಬಿಯ ಸ್ವಾಗತಿಸುತಿವೆ
ಅಂಗಳದ ಬಾಗಿಲ ಬೀಗ ಮುದ್ರೆ

ಕಿಡಕಿ ಮುಚ್ಚಿರೆ
ಚಂದಿರ ಕಾದಿರುವ
ತೋಟದ ಬಾಗಿಲಲ್ಲಿ

ಹೂವು ಅರಳಿದಾಗ
ನಾ ಮತ್ತೆ ಕಾಯುತ್ತೇನೆ
ಬಹಳಷ್ಟು ಕಾಲ

ಬೆಟ್ಟದ ತುದಿಗೆ
ಬೇಲಿಯಿಲ್ಲ
ಬರಿ ನಕ್ಷತ್ರದಾರಿ

ನಿಶೆಯ ದೀಪ
ಇನ್ನು ಎಚ್ಚರವಾಗಿದೆ
ಉಷೆಯ ಬೆಳಕಿನಲ್ಲಿ

ತಲೆಯ ಮೇಲೆ ಹಾರುತ್ತಿದೆ
ಸಾಲು ಸಾಲು ಕಾಗೆ
ಎಬ್ಬಿಸಲು ಬೆದರು ಬೊಂಬೆ

ಮಾತು ಸೋತಾಗ
ನೆರಳಿನ ಮೌನದಿಂದ
ಪಾಠ ಕಲಿವೆ

ಹೃದಯ ಗೊಣಗಾಡುತಿದೆ
ಬೇಲಿ ಹೂ ಎದೆ ತುಂಬಿ
ಹಾಡ ಹಾಡುತಿದೆ

ಉದುರಿದ ದಳವು
ದಾರಿ ತೋರುತಿದೆ
ಗೋರಿ ಸ್ವಾಗತಿಸುತಿದೆ

ಧೀರ ಬೆಟ್ಟವು
ಶತಮಾನ ನಿಂತಿದೆ
ಶಿರವ ಎತ್ತರಕೆ ಇರಿಸಿ

ಉಕ್ಕುವ ಸಾಗರದಿ
ಸತತ ಬಾಳುತಿವೆ
ಅಯ್ಯೋ! ಅಲೆಯ ತರಂಗ

ವಸಂತ ಬರುವ
ಮರಳಿ ಮನೆಗೆ
ಕಾದಿದೆ ಒಣಗಿದ ಮರ

ಜನಸಂದಣಿಯಲಿ
ಸೋಂಬೇರಿ ನೆರಳು
ಶಯನಿಸಿ ನಡೆಯುತ್ತಿದೆ

ಪ್ರತಿ ಅಲೆಯ ವ್ಯಕ್ತಿತ್ವ
ಅಯ್ಯೋ! ಮುಳುಗುತ್ತಿದೆ
ಆಳ ಸಾಗರದಲ್ಲಿ!

ತುಂಟ ಅಲೆಗಳೂ
ಓಡುತಿವೆ ದಡಕೆ
ತಾಯಿ ಸಾಗರ ಎಳೆಯುತಿದೆ

ದಾರ್ಶನಿಕ ಗಾರ್ದಭ
ಬಾಳುತಿದೆ ಶೂನ್ಯದಲಿ
ಕಾಲಾತೀತದಲ್ಲಿ

ಮೇಘಗಳೇ!
ನಗ್ನರಾಗುವಿರಾ?
ಭಗ್ನ ಸ್ವಪ್ನಕೆ ನೀರೆರದು

ಕತ್ತಲೆಯಲಿ
ಕುರುಡು ಲಾವಣ್ಯ
ರಹಸ್ಯದ ಕರಡುಮೌನ

ಬೆಳ್ಳಿಮೋಡ
ಬೆಳಗುತ್ತದೆ
ಬೆಟ್ಟದ ಮೊಗವ

ಬೆಟ್ಟದ ಹಾದಿಯಲಿ
ತೇಲುತಿದೆ ಮೋಡ
ಆತ್ಮಶೋಧದಲಿ

ಉಣ್ಣೆ ಮೋಡ ಹೊಲಿದಿತ್ತು
ಬೆಟ್ಟದ ತಲೆಗೆ
ಬೆಚ್ಚಗಿನ ಕುಲಾವಿ

ಮನದ ಕವಾಟ
ಓರಣವ ಮಾಡಿ
ಮತ್ತೆ ಶೋಧಿಸುತ್ತಿರುವೆ

ನನ್ನ ಮನ ಒಂದು
ಅಂತರಂಗಕೋಣೆ, ಹೋಗಿ
ಸೇರಲು ಬಲುದೂರ ತೀರ

ಮೋಡ ಬಂದರು
ಮೋಡ ಸರಿದರು
ಸತತ ಸೂರ್ಯಸಾಮ್ರಾಜ್ಯ

ವೇದಾಂತದ
ಬರಿ ಸಿದ್ಧಾಂತ ಹುಚ್ಚು
ಅರೆಬರೆಕರಡು ಅಚ್ಚು

ಕನ್ನಡಿಯ ಬಿಂಬದಲಿ
ನನ್ನ ಆತ್ಮದ
ಪ್ರತಿಬಿಂಬ ಹಿಡಿಯದಾದೆ

ತಲೆಗೊಂದು ಗೂಟ
ತೂಗಾಡುತ್ತಿವೆ ಅದಕೆ
ಯೋಚನೆ ಸಾವಿರಾರು

ಎಲೆ ಬದಿಗೆ
ಹೂ ಎದಿಗೆ
ಆತಿವೆ ಹೈಕು ಮೊಗ್ಗು

ಮಾನವ! ನೀನೊಂದು
ಭೂಮಿಯ ಕಣದ
ಉಪ್ಪಿನ ಹರಳು

ನನ್ನ ಕಣ್ಣೀರು ಕೊನೆಗೆ
ಆಶ್ರಯಪಡೆದಿವೆ
ಸೂರ್ಯಕಿರಣದಲ್ಲಿ

ಕಿರಣ, ಕುಸುಮ
ಕುಳಿತು ಮಾತನಾಡುತಿವೆ
ಜೊತೆಯಾಗಿ ಗೆಳೆಯರಂತೆ

ಕಣ್ಣೀರ ಕೊಳದಿಂದ
ಮಂಗಳ ಸ್ನಾನಮಾಡಿ
ಎದ್ದಿದೆ ನನ್ನ ನಗೆಯು

ಕನ್ನಡಿಯಲಿ
ಭೂತಭವಿಷ್ಯತ್ತಿಲ್ಲ
ಬರಿ ವರ್ತಮಾನ

ಕಣ್ ಮುಂದೆ ಆಡುತಿದೆ ಅಲೆ
ಕಾಣದಾಗಿದೆ
ಸಾಗರದ ಆಳ

‘ಅಹಂ‘ ಆಕಾಶ ಎತ್ತರಕೆ
ಬೆಳದಿಂಗಳು
ಬುವಿ ಮಡಿಲಿಗೆ

ಬದುಕಿರುವ ನಾನು
ನಗುವುದು ವಿರಳ
ಎಲುಬು ಗೂಡಲಿ ನಗೆಯು ಸತತ

ಹುಟ್ಟು ಸಾವಿನ ಸರದ
ಸರಪಳಿಯಲಿ
ಕಳೆದು ಸಿಕ್ಕಿದೆ ಆತ್ಮಪದಕ

ದೇಹ…..
ಪರಿವರ್ತಿಸುವ ಪ್ರಕೃತಿ
ಆತ್ಮ ಪವಿತ್ರ ಸುಕೃತಿ

ಪ್ರೀತಿಯ ಕರೆ
ಹೃದಯ ತೆರೆಯಲಿ
ಮುಕ್ತ ದ್ವಾರಕ್ಕೆ

ಬಾಳ ಅತಿಸಣ್ಣ
ನಿಗದಿಯಲ್ಲಿ, ಅಲೆ
ಸೇರಿದೆ ಅತಿ ದೂರದಡವ!

ಪ್ರೇಮ ಒಂದು
ಮಳೆ ಮೇಘ
ಸಿದ್ಧ, ಮಳೆ ಮುತ್ತು ಸುರಿಸಲು

ಸ್ವಾಂತಂತ್ರ್ಯ ಸಾಮ್ರಾಜ್ಯ
ಸಂಕೋಲೆ ರಹಿತ
ಹುಲ್ಲುಗಾವಲು  ಕಿರಣ ಭರಿತ

ಸಾಗರದ ಬಲವು
ಪ್ರತಿ ಅಲೆಯ
ಬೆನ್ನೆಲುಬಿಗೆ

ಬುದ್ಧ ಬಾಗಿಲ
ಬಡಿಯುತ್ತಿರುವ
ಕಿವುಡಾಗಿದೆ ಮನವು

ಕವಿ ತುಂಬುವ, ಕವಿತೆಯ
ಬಾಳ ಹಾಳೆಯಲ್ಲಿ
ಕೊನೆಗೆ ಖಾಲಿ, ಕೊನೆಯ ಹಾಳೆ.

ನಟನಟಿಸಬಹುದು
ನೂರಾರು ಬಾರಿ
ಕೊನೆ ಅಂಕ ಬರಿ ಶೂನ್ಯ

ವೇಗವೇಕೆ? ಓಟಬೇಕೆ?
ಬರಿ ಮೌನ ನಿರೀಕ್ಷೆ ಸಾಕು
ವಸಂತದಾಗಮನಕ್ಕೆ

ಭೂತ ಭವಿಷ್ಯದ
ನೆರಳುಗಳಢಿಕ್ಕಿ
ವರ್ತಮಾನದಲ್ಲಿ

ಅಲೆಗಳು ನಿರತ
ಕಲಿಯುತಿವೆ
ನೇರ ಎದ್ದುನಿಲ್ಲಲು

ದಾರಿಯಲಿ
ಅರಳೀ ಮರವು
ಕಟ್ಟಿತ್ತು ಹಸಿರು ಗೃಹವ

ಜನ್ಮ, ಸಣ್ಣದ್ವಾರದಲ್ಲಿ
ಜೀವನ ಸಾಗುತಿದೆ
ಅನಂತ ಹಾದಿಯಲ್ಲಿ

ಕನ್ನಡಿಯ ಮೊಗಕೆ
ಉಸಿರಾಟವಿಲ್ಲ, ಆದರೆ
ನನ್ನಷ್ಟೇ ಜೀವಂತ!

ಮನವೊಂದು ಲಂಬಕ
ವರ್ತಮಾನವ ತಪ್ಪಿಸಿ
ತೂಗಾಟ ಮುಂದು ಹಿಂದು

ಪ್ರಶ್ನೆ ಕೊರಳನು
ಕೊಕ್ಕರೆ ಕೆಳಗಿಸಿ
ತೇಲುತಿದೆ ಹಾಯಾಗಿ

ಗುಡ್ಡದ ಗರ್ಭದಲ್ಲಿ
ಒಂದು ಗೀತೆ ಕುಳಿತಿದೆ
ಮುದುರಿ ಮೌನದಲ್ಲಿ

ನನ್ನ ಉಸಿರಿನಲಿ
ಬುವಿ ಉಸಿರಾಡುತಿದೆ
ಬಾನು ಬೆಳಗುತಿದೆ

ಓ! ಬುದ್ಧ
ಬೇಡುವೆ ನಿನ್ನಲ್ಲಿ
ಬಟ್ಟಲ ತುಂಬ ನಗುವ!

ರಾತ್ರಿ ಹಾದಿಯಲಿ ಕನಸ ಚಕ್ರ
ಉರುಳುತಿದೆ ಹಾಯಾಗಿ
ಉದಯದಲಿ ಬೇರುಮೇಲಾಗಿ

ಬೀದಿನಾಯಿ
ಹುಡುಕುತಿದೆ ಸತತ
ತನ್ನ ಗುರುವಿಗಾಗಿ

ಗುಡ್ಡ ತೋಯುತ್ತಿದೆ
ಬಿಸಿಲು ಮಳೆಯಲ್ಲಿ
ಧೂಳು ಆರಾಮ ಮಿಲನದಲಿ

ನೋವಿನ ಉರಿ
ಬೆಳಕಾಗುತ್ತಿದೆ
ಹೃದಯ ಮಂದಿರಕ್ಕೆ

ಮಧ್ಯರಾತ್ರಿಯಾಗೆ
ಸೂರ್ಯ ಬಂದಿರುವ
ಅತಿಸನಿಹಕ್ಕೆ

ಕತ್ತಲೆ ಹಡೆಯುತ್ತಿದೆ
ಬೆಳಕ ಕೂಸನ್ನ
ಬಾಳು ಬೆಳಗುತ್ತಿದೆ

ಅಹಂ ಥಳ ಥಳಳಿಸೆ
ನಾನು ಸಾಯುತಿದೆ
ನಾದ ಬಿದಿರ ಕೊಳವೆಯಲಿ

ವೃಕ್ಷಾಲಿಂಗನದಲಿ
ಹೃದಯವಾಗಿದೆ
ಮಾಗಿದ ಫಲ

ಗುಡ್ಡದಲ್ಲಿ ‘ಗುಡ್ಡದಂತೆ‘
ಕುಳಿತು ಕರಗುತ್ತಿರುವೆ
ಸಮಸ್ತ ಜಗದಲ್ಲಿ

ದೇಹದ ಮೇಲೆ
ಪ್ರತಿ ಸಾಬೂನ ಗುಳ್ಳೆ
ಪಿಸುಗುಟ್ಟಿದೆ ಕ್ಷಣಿಕತೆಯ

ತುಂಬಿದ ಮಂಚದಲಿ
ರೋಗಿಯ ಬರಿ
ಖಾಲಿ ಬಾಳು

ನನ್ನ ಕಣ್ಣು ನನ್ನೇ
ನೋಡ ಮರೆತಿದೆ
ಇದು ಸಹಜನಿಜವೇ?

ಮತ್ಯ್ಸ ಸಾಗರದಲಿ
ಮತ್ತೆ ತೊಡಗಿದೆ ಸಾಗರದ
ಶೋಧನೆಯಲಿ

ಮತ್ಯ್ಸಸಾಗರವನೂಕಿ
ಖಾಲಿ ಜಾಗಕ್ಕೆ
ಹುಡುಕಾಡುತ್ತಿದೆ

ದೈವ, ಹತ್ತಲು ತಪ್ಪಿದ
ಓಡುವ ರೈಲಲ್ಲ
ಮುಟ್ಟುವ ಅಂತರಾತ್ಮದಮೈಲು

ನನ್ನ ಮನವು
‘ಮಾಯಾವಿ‘ ನಟ
ದೇಹರಂಗ ಮಂಟಪದಿ

ಕಮಲದೆಲೆ ಮೇಲೆ
ಹಿಮಮಣಿ
ಸ್ಪಟಿಕ ಬುದ್ಧ

ಮೊಳಕೆಗೆ ಮಣ್ಣಾಗು
ಬುದ್ದ ಹೂವಾಗು
ಅರಳು ಎದೆಯಲ್ಲಿ

ಅದೇ ಅಲೆಗಳು
ಸಾಗರದ ಹಾದಿಯಲ್ಲಿ
ವಿವಿಧ ಜನ ದಾರಿಯಲ್ಲಿ

ಮನವು ಮಲಗಿದೆ
ಚಂದ್ರನ ಬೇಲೆ ಮನದಲ್ಲಿ
ಬುದ್ಧನ ಸ್ಥಾನ ಅನತಿದೂರದಲಿ

ಕಿಟಕಿಗೆ ಹತ್ತಿರ ನಿಲ್ಲು
ದೂರದ ನಕ್ಷತ್ರಗಳ
ದೃಷ್ಟಿಸಿ ನೋಡು!

ಸಿಹಿರುಚಿ ಹುಡಿಕಿ
ಸೇರುಸವ್ವಾಸೇರು
ಮೆಣಸಿನಕಾಯಿ ತಿಂದಂತೆ!

ಬೆಳಗಿನ ಪ್ರಜ್ಜಾಪೂರ್ವಕ
ವಾಯುವಿಹಾರ
ನನ್ನ ಪ್ರಾರ್ಥನೆ

ಕನ್ನಡಿ ಇಲ್ಲದಿದ್ದರು
ನನಗೆ ಇದ್ದೇ ಇದೆ
ಆತ್ಮದ ಸೊಗಸು

ಬಾಳಿನ ಒಳ
ಕೊಠಡಿಯ ಕಿಡಕಿ
ಬಾಗಿಲ ತೆರೆದುನೋಡು

ಹಣವು ಗುಪ್ತ ಜೇಬಿನಲಿ
ನಕ್ಷತ್ರ ಹರಡಿದೆ
ತೆರೆದ ಆಗಸದಲಿ

ದಾರಿಯಿಲ್ಲದ ದಾರಿ
ದ್ವಾರವಿಲ್ಲ್ದದ ದ್ವಾರ
ಮಿನುಗುವ ಮಿಂಚಿನಲ್ಲಿ

ಅದಿ ಅಂತ್ಯಕೆ
ಬುವಿ ಬಾನು ಏಕೆ?
ಪ್ರತಿಕ್ಷಣವು ಮಹಾಜಿಗಿತ

ದೈವ ಸಾನಿಧ್ಯಸೇರು
ಸೈನಿಕನಂತಲ್ಲ
ಮದು ಮಗಳಂತೆ!

ರೇಖೆಯ ಕೊನೆಯ
ಕಂಡು ಹಿಡಿ, ನಂತರ
ಮಲಗು ಶಾಂತಿಯಲ್ಲಿ

ಕಣ್ಣಾಳ ನೋಡುತ್ತಿದೆ
ರೇಖೆಯು ಅಂತ್ಯ
ಅನಂತ ಅಮರತೆಯಲಿ

ಮನಸ್ಸಿನ ಕೋಶಾವಸ್ಥೆ
ಬುದ್ಧನ ಮೌನದಲ್ಲಿ
ಈಗ ಪೂರ್ಣಚಿಟ್ಟೆ.

ಬಾಳೊಂದು ಪ್ರಬಂಧ
ವಿರಾಮ ಬಿಂದುವಲಿ ಕುಳಿತು
ದಿಟ್ಟಿಸು ಅನಂತತೆಯ

ಬಾಳೊಂದು ಸರಳ ವಾಕ್ಯ
ಹೃದಯ ಹಾಳೆ ಜೋಡಿಸುತ್ತಿದೆ
ಸಾವ, ಸೇರಿಸಿ ಚಕ್ರ ಬಂಧದಲ್ಲಿ

ಬಾಳೊಂದು ವಾಕ್ಯರಚನೆ
ಪ್ರಾಸ, ಲಯ, ರಾಗ, ತಾಳದಲಿ
ಮಹಾ ಕಾವ್ಯ ಗ್ರಂಥ ರಚನೆ

ಮಳೆ ನಿಲ್ಲಲು
ಕಾಮನ ಬಿಲ್ಲು ಮೂಡಿದೆ
ನಿಶ್ಚಿಂತ ನೃತ್ಯ ಬೆಳಗಿನಲ್ಲಿ

ವೃದ್ಧನ ತೋರು ಬೆರಳು
ಕಲಿಸುತ್ತಿದೆ ಬಾಳಿಗೆ
ಅತಿ ಮುಖ್ಯ ಪಾಠ

ಗುರುವಿನ ಹೊಡೆತದಲಿ
ಆತ್ಮ ಉಳಿದಿದೆ
ಅತಿ ಸಂತಸದಲಿ

ತಳವನ್ನು ತೊರೆಯುತ್ತ
ಕರಗುವೆನು
ಸಮಸ್ತ ಜಗದಲ್ಲಿ

ದಡದಿಂದ ದಡಕ್ಕೆ
ತೇಲುವ ಹುಲ್ಲು ಕಡ್ಡಿ
ನನ್ನ ಆತ್ಮ ಕಥೆ

ಸಮಸ್ತ ಬಾಳಿನ
ಸೌಂದರ್ಯದಲಿ
ಚಪ್ಪರಿಸು ಝೆನ್ ರುಚಿ

ಮಹಾ ಮೌನದಲಿ
ಕರಗಿದಾಗ ಕಾಣುವೆ
ಪ್ರತ್ಯಕ್ಷ ಸತ್ಯ

ಒಂಟಿ ಎಲೆಯನು
ಗಾಳಿ ಕೈ, ಒಯ್ಯುತ್ತಿದೆ
ನಿರ್ಜನ ದಡಕೆ

ವಿಚಿತ್ರ ಮನದಲ್ಲಿ
ಅಪರಿಚಿತನ ಬಂಧನ
ನನ್ನ ಒಳ ಆಳದಲ್ಲಿ

ಮನವು ನಿಂತಿದೆ
ಕಂಬಿಯ ಹಿಡಿದು
ಕನಸು ದಾಟಿದೆ ಕಂಬಿಯ ಮುರಿದು

ಚೂಪು ಹಲ್ಲಿನ ಕೆಳಗೆ
ಬಯಕೆ ಬಿಡುತ್ತಿದೆ
ನಿಟ್ಟುಸಿರು

ದವಡೆಯಲ್ಲೇ
ಸಿಕ್ಕಿಕೊಂಡು
ನರಳಿದೆ ಬಯಕೆ ತುಂಡು

ನಾಲಿಗೆಯ ಮೆತ್ತೆಯಲಿ
ಮಲಗದಿರಲಿ
ಒರಟು ಶಬ್ದ

ಬೀಗ ಮುದ್ರೆಬಾಯಲ್ಲಿ
ನನ್ನ ಕನಸು
ಮೂಕ ಕುರಿ ಮರಿ

ಗಾಳಿ ಕರೆಯೋಲೆ
ಒಂಟಿ ಎಲೆಗೆ
ಹಾರುವ ಉತ್ಸಾಹ

ಮಗುವಿನ ಬಿಗಿ ಹಿಡಿಯಲಿ
ಮುಗ್ದತೆ ಎಂದೂ
ಜಾರಿ ಬೀಳಲಿಲ್ಲ

ನಮ್ಮ ಸ್ನೇಹ ಬಾಂಧವ್ಯಕೆ
ಸೂರ್ಯ ಚಂದ್ರರ
ಸಾಕ್ಷಿ ಹಸ್ತಾಕ್ಷರ

ಕಣ್ಣುರೆಪ್ಪೆ
ಕೆತ್ತುತ್ತಿದೆ ಕಾವ್ಯ
ಎದೆಯಲ್ಲಿ ಕಾರುಣ್ಯಭಾವ

ಬಾಳ ಪೂರ್ಣವೃತ್ತಕ್ಕೆ
ಸಾಕು ನೀಲಿ ಬಾನ ತೇಪೆ
ಬುವಿಯ ಹಸಿರುಚಾಪೆ

ಸತ್ತ ಹಕ್ಕಿ ಬುವಿ ಅಪ್ಪಿದೆ
ಗಾಳಿಯಲಿ ಗರಿ ಹಾರಿ
ಆಗಸವ ಮುಟ್ಟಿದೆ

ಮೋಡಕ್ಕೂ
ಗಾಳಿಪಟಕ್ಕೂ
ಓಹ್! ಆಗಸದಿ ಹೋರಾಟ

ಗಾಳಿ ಪಟದ ಕುಶಲವ
ಕೇಳುತಿದೆ ಮತ್ತೆ
ಮೋಡ ಮಮತೆಯಲಿ

ಗಾಳಿ ಪಟ ಭುಜದಿ ಹೊತ್ತು
ಮೋಡ ಸಾಗುತಿದೆ
ಮೆರವಣಿಗೆಯಲಿ

ಗಾಳಿಪಟದ ಹೃದಯ ಹಾಳೆಯಲಿ
ಪ್ರೇಮಪತ್ರ ಬರೆದಿತ್ತು
ಸೂರ್ಯ ಕಿರಣ

ಆಗಸದ ಆಲಿಂಗನದಿ
ಕನಸ ಕಾಣುತಿದೆ
ಗಾಳಿ ಪಟವು

ಗಾಳಿ ಪಟಕೆ
ಉಸಿರು ಕಟ್ಟುತಿದೆ
ಎಳೆ ಜಗ್ಗುತ್ತಿದೆ ಇಳೆಯಲ್ಲಿ

ಹಾರು ಹಕ್ಕಿ
ಹಲೋ! ಎನ್ನುತ್ತಿದೆ
ಗಾಳಿ ಪಟ ತಲೆಯಾಡಿಸಿದೆ

ಸೂರ್ಯೋದಯದಲಿ
ಇಂದು ಹುಟ್ಟಿದೆ
ನಾಳೆ ಎಂದೂ ಇಲ್ಲ

ಬಿಳಿಯ ಹಾಳೆಯಲಿ
ಪ್ರಯಾಣ ಬೆಳಸಿವೆ
ನನ್ನ ಹಾಯಿಕು ಸಾಲು

ನನ್ನ ಕರಿ ಮನವು
ಬಿಳಿ ಬಣ್ಣ ಬಡಿಯುತಿದೆ
ನೀಲಿ ಆಗಸಕೆ

ದೈವದ ಉಸಿರ
ಬಯಲಲ್ಲಿ
ನಂಬಿಕೆಯ ನೇಯ್ಗೆ

ಮೌನ…
ಆಗಸದ ಕನಸಿಗೆ
ಸೃಜನ ರಂಗ

ನನ್ನ ಹಾಯಿಕು ವರನಿಗೆ
ಶ್ವೇತ ಸುಂದರಿ ಹಾಳೆ
ಬಾಳ ಸಂಗಾತಿ

ಧ್ವನಿ ಮತ್ತು
ಪ್ರತಿ ಧ್ವನಿಯಲ್ಲಿ
ತಾದಾತ್ಮದಾ ಬಿಕ್ಕಟ್ಟು

ಹಸಿರು ಹುಲ್ಲುಗಾವಲಲಿ
ಮೇಯುವ ಕುರಿಗಳು
ಒಂದು ಸ್ಥಬ್ದ ಚಿತ್ರ

ಬೆದರು ಬೊಂಬೆ
ಬೆದರಿ ಸೆರೆಯಾಗಿದೆ
ಸಿಕ್ಕಿ ಜೇಡ ಜಾಲದಲ್ಲಿ

ಹಸಿರು ಗದ್ದೆ, ಆಗಸವ
ಹೊತ್ತು ಒಯ್ಯುತ್ತೇನೆ
ಕಣ್ಣ ಚಿತ್ರ ಚೌಕಟ್ಟಿನಲ್ಲಿ

ಗಾಳಿಯ ಆತ್ಮವ
ಸೆರೆ ಹಿಡಿಯುವರು
ಇಹರು ಯಾರು?

ಸೂರ್ಯನ ಅಪಹರಣ
ಬೆಟ್ಟದ ಭುಜದಲ್ಲಿ
ಅದು ಎಲ್ಲಿವರೆಗೆ?

ಸೂರ್ಯನ ಹಸ್ತಾಕ್ಷರದಿ
ಪ್ರೀತಿ ವಿಸ್ತರಿಸಿದೆ
ಬುವಿ ಬಾನಿನಲ್ಲಿ

ಸೂರ್ಯಾಸ್ತದಲಿ
ಸೂರ್ಯನಾ ಆತ್ಮದ
ಕೆಂಪು ಪ್ರೀತಿ ಸಾಮ್ರಾಜ್ಯ

ಬೇಸಿಗೆಯ ಗಾಳಿ
ಮತ್ತು ಭತ್ತದ ಗದ್ದೆ
ಒಂದು ಬಯಲ ರಂಗ ಭೂಮಿ

ಭತ್ತದ ತೆನೆ
ಬಂಗಾರ ಕಿರಣದ
ಆನಂದ ಚುಂಬನದಲ್ಲಿ

ರವಿ ಕಿರಣಗಳೊಡಗೂಡಿ
ಆಡುತಿವೆ ಮಕ್ಕಳು
ಮೈದಾನದಲ್ಲಿ

ಬೇಸಿಗೆಯ ಸೂರ್ಯ
ಹರಟುತ್ತ ಕುಳಿತಿದ್ದ
ಬಯಲ ಮಾಳಿಗೆ ಮೇಲೆ

ಹೂವು…
ವಸಂತದ ಗರ್ಭ
ಬುವಿ ಒಂದು ತೊಟ್ಟಿಲು

ತೇಲಾಡುವ ಗಾಳಿ ಪಟ
ಹುಡುಕುತಿದೆ
ಆಗಸದ ಅಡ್ಡಹಾದಿ

ಸಾವಿನಲಿ
ನನ್ನ ಉಸಿರು
ಪರಿತ್ಯಕ್ತ ಗೆಳೆಯ

ಋತುಗಳ ಉತ್ಸವದಲಿ
ಮನವೊಂದು
ವೈವಿಧ್ಯ ನಿಸರ್ಗ ಚಿತ್ರ

ದಿಶೆ ದಿಕ್ಕುಗಳನೆಳೆದು
ಸಿಕ್ಕಿ ಬಿದ್ದಿರುವೆ
ಕತ್ತರಿಸುವ ರೇಖೆಯಲ್ಲಿ

ಸೂರ್ಯ ಕಿರಣದ
ನೂಕು ನುಗ್ಗಲಾಟದಲಿ
ಗೋಡೆ, ಸ್ಥಿತ ಪ್ರಜ್ಞನಂತೆ

ಕೆರೆಯ ವರ್ತುಲ ಒಳ ಹೊರಗೆ
ಕಪ್ಪೆಯ ಸುಖ ಶಾಂತಿ ಬಾಳು
ಬಾರಿಸುತಿದೆ ವಟ ವಟ ಡೋಲು

ಅತ್ತ ಮೇಯುವದನ
ಇತ್ತ ಬೆದರುಬೊಂಬೆ ಮನ
ಮಧ್ಯೆ ಭತ್ತದ ಗದ್ದೆವನ

ಕೊಳದ ದಂಡೆಯಲಿ
ಕವಿ ಕಪ್ಪೆ ಕುಳಿತಿದೆ
ವಟ ವಟ ಕಾವ್ಯ ಲಹರಿ

ಹಸಿರು ಹುಲ್ಲನ್ನು ಕುರಿಯು
ಮೇಯುವ ಧ್ಯಾನದಲಿ
ಕಾಲ ನಿಂತಿದೆ ಮೌನವಾಗಿ

ರೆಕ್ಕೆಯ ಹುಳು
ಆಮಂತ್ರಿಸುತ್ತಿದೆ
ಬೆದರುಬೊಂಬೆಗೆ ಹಾರಾಡಲು

ದುಂಬಿಗಳ ಝೇಂಕಾರ
ವೃಂದಗಾನಕ್ಕೆ
ಕಿವುಡಾಗಿದೆ ಬೆದರು ಬೊಂಬೆ

ಮಣ್ಣು ತಿನ್ನುವ
ಮಗುವಿನ ತೆರೆದ ಬಾಯಿ
ಒಂದು ಸುಂದರ ಗ್ರಹ

ವಕ್ರ ಗತಿಯಲಿ
ಏಡಿಯ ಚಲನವಲನ
ಧ್ಯೇಯದಲಿ ನೇರಗಮನ

ನನ್ನ ‘ಮ್ಯಾಂಡರಿನ್‘
ನೆರಳು ಕಲಿಸುತ್ತಿದೆ
ಮೂಕ ಮೌನಾಭಿನಯ

ಬೇಸತ್ತ ನೆರಳು
ಬೇಡುತ್ತಿದೆ ಸ್ವಾತಂತ್ರ್ಯ
ಹುಟ್ಟು ಸಾವಿನಿಂದ

ಸತ್ಯ ಶೋಧನೆ
ಮಗುವಿನ ಅಂಬೆಗಾಲು
ಮುದುಕನ ಊರುಗೋಲು

ತೋಟದ ದಾರಿಯ
ಹೂವ ಹಾಸಿಗೆಯಲಿ
ದೈವದ ಶಯನೋತ್ಸವ

ಭೂಮಿಯಲಿ ಮುದುರಿ ಮಗಗಿದೆ
ಎಲೆ ಹುಳು ಧ್ಯಾನದಲಿ
ಕೋರೈಸಿದೆ ಸೂರ್ಯನ ಬೆಳಕು

ಬೇಲಿಯ ಮೇಲೆ
ಮೆರೆಯುವ ಇಬ್ಬನಿ
ಮಾನವನ ಬಾಳು

ಸಾವಿನಲಿ
ಕರಗುತ್ತಿದೆ ನೆರಳು
ಹುಟ್ಟಿನಲಿ ಎತ್ತುತ್ತಿದೆ ಕೊರಳು

ಮನವು ದಾಟುತಿದೆ
ಆಗಸ, ಸಾಗರ
ಇಳೆಯಲ್ಲಿ ಬಂಧನ ಬೇಡ

ಕಣ್ಣ ರೆಪ್ಪೆಯ ಮೇಲೆ
ಹಿಮದ ತುಂಡು
ಗಲ್ಲದ ಮೇಲೆ ಕಣ್ಣೀರು

ಹಿಮದ ಬೆಟ್ಟದಲಿ
ಪ್ರಶಾಂತ ನೀರವತೆ
ಬುದ್ಧನ ಮೌನಧ್ಯಾನ

ಒಂಟಿತನ ಒಂದು
ಹೆಪ್ಪುಗಟ್ಟಿದ
ಒಂಟಿ ಅಕ್ಷರ ಶಿಲ್ಪ

ನನ್ನ ಉಸಿರಿನ ಆಟ
ಜೋಕಾಲಿ ಆಟ
ಬಯಲ ಗಾಳಿಯಲಿ

ಗದ್ದೆಯಲಿ ಬೆಳದಿತ್ತು
ಸದ್ದುಗದ್ದಲಿಲ್ಲದೆ
ಉದ್ದನೆಯ ಬಂಗಾರತೆನೆ

ಹೊಲದ ತೆನೆಯಲ್ಲಿ
ನೆಲದ ಮುಡಿಗಳು ಸೇರಿ
ಒಲವು ಧಾನ್ಯ ಧ್ಯಾನಿಸಿತ್ತು

ಕವಿತೆಯ ಎಳೆಯಲ್ಲಿ
ಮೌನದ ಮೊಗ್ಗು
ಧ್ಯಾನದ ಚಿಗುರು

ಕಾಗೆ ಕಪ್ಪು ಉಡಿಗೆಯಲ್ಲಿ
ಹಾಡುತಿದೆ ಶೋಕ ಗೀತೆ
ಕೇಳುತಿದೆ ಬೋಳುರೆಂಬೆ

ಇಬ್ಬನಿಯಲಿ ತೋಯ್ದ
ಎರೆಹುಳು ಹೆಜ್ಞೆ ಗುರುತು
ಹಿಂಬಾಲಿಸುತಿದೆ ಸೂರ್ಯನನ್ನ

ಬೆಟ್ಟದೆದೆಯಲ್ಲಿ
ಹುಟ್ಟಿ ಬಂದ ನದಿಯು
ಕಣಿವೆಯಲಿ ತವರ ಮರೆತಿತ್ತು

ಪಾರಿವಾಳ ಅರಿತಿತ್ತು
ಮನದ ಆಳ
ಜನರ ಮನ ಹಾಕಿತ್ತು ಗಾಳ

ಕೆರೆಗೆ ಬಂದಿತ್ತು
ವಲಸೆ ಪಕ್ಷಿ
ನಿರ್ಗಮ ಸಾರಿತ್ತು ಸಾವೆ ಸಾಕ್ಷಿ

ವರ್ತುಲಗಳಲಿ
ಬಾಳುವವರಿಗೆ
ರೇಖೆಯಲಿ ದಾರಿ ಕಾಣದೇನು?

ಸೂರ್ಯ ಕಿರಣದಲಿ
ಬೆಳಕಿನ ಚೂರ್ಣ
ಬೆಳದಿಂಗಳಲಿ ಚಂದಿರ ಪೂರ್ಣ

ಬುಡದ ಬೇರಲ್ಲಿ ಜೀವ
ಅಡಗಿದೆ, ಚಿಮ್ಮಿಚೇತನ
ಬಿರಿದ ಹೂವಲ್ಲಿ ದೇವನಿಕೇತನ

ಚುಕ್ಕಿಚುಕ್ಕಿಗಳು ಸೇರಿ
ಆಗಲಿಚ್ಛಿಸಿದವು
ಪೂರ್ಣ ಚಂದ್ರ ಬಿಂಬ

ಓಹ್! ಜಗವು ಈಜುಕೊಳದಲ್ಲಿ
ನಾ ಕುಳಿತು ನೋಡವೆ
ಅನಂತ ದಡದಲ್ಲಿ

ಆತ್ಮ ನಿವೇದನೆಗೆ
ಕಾದು ಕುಳಿತಿದೆ
ನನ್ನ ಗೀಚು ಹಲಗೆ

ದ್ವಾರದಲಿ ಗಂಟೆನಾದ
ಹೆಜ್ಞೆ ಗುರುತುಗಳು
ಎದ್ದು ಓಡುತಿವೆ ದೂರತೀರ

ಕನಸುಗಳ ರೆಂಬೆಯಲಿ
ಬೆಳ್ಳಿ ಬಂಗಾರದ ಹೂವು
ಋತು ವಸಂತನ ಪ್ರೀತಿ ಕಾವು

ಹರಿವ ಹೊಳೆಯಲ್ಲಿ
ಮನವು ಹರಿಯಿತು
ಮೈ ತೊಳೆದು ಮಡಿಯಾಯಿತು

ಹಕ್ಕಿಯ ನೋಡಿ
ಮೋಡವು, ರೆಕ್ಕೆಯ
ಮೊಳ ಉದ್ದನೇಯ್ದಿತ್ತು

ಸೂರ್ಯಾಸ್ತದಲಿ
ಕತ್ತಲೆಯ ನೂಲು
ನೇಯ್ದಿದೆ ಕಪ್ಪು ರುಮಾಲು

ಮಡಿಕೆ
ಮಾನವನ
ಬಂಧುತ್ವ ಒಂದೇ!

ಹಲ್ಲಿಲ್ಲದಾ
ಮೊಗವು
ನಗಲಾರದೇನು?

ಸಾಗರದ ಗೆಳೆಯ
ಹನಿದನಿಯ
ಬೆಳಗಿನ ಇಬ್ಬನಿ

ಕವಿತೆಯ ಎಳೆಯಲ್ಲಿ
ಮೌನದ ಮೊಗ್ಗು
ಧ್ಯಾನದ ಚಿಗುರು

ಕನಸು ಮಿಣಕುವ ವೇಳೆ
ಮಿಂಚಿನ ಮಳೆ ಹುಯ್ದು
ಕಪ್ಪೆ ವಟಗುಟ್ಟುತ್ತಿತ್ತು

ಪೂರ್ಣ ವಿರಾಮದಲಿ
‘ವಿರಾಮ‘ ತೆಗೆದರೆ
ಎಲ್ಲಾ ಪೂರ್ಣವೇ

ಅವರವರ ಬುದ್ಧಿಗೆ
ಅವರವರ ಸಿದ್ದಿ
ಅವರಿಗೇ ಜಗವನಾಳ್ವ ಗದ್ದಿ

ನಾದ ನಿನಾದದಲಿ
ವೇದ ಝೇಂಕಾರ
ವಾದದಲಿ ಮಮಕಾರ ಹಾಹಾಕಾರ

ಆಗಸದಿ ಹಾರುವ
ಒಂಟಿ ಪಕ್ಷಿಗೆ ದೈವದ
ಜಂಟಿ ರೆಕ್ಕೆ ಸ್ನೇಹ ದೀಕ್ಷೆ

ಮಳೆಯಲಿ ತೋಯ್ದ
ಮೊಳ ಉದ್ದ ಮೊಳಕೆ ಬೆಳೆದು
ಇಳೆ ಅಳೆದು ಆಕಾಶ ಮುಟ್ಟಿತ್ತು

ನೆರಳ ನೆಟ್ಟಗೆ ನಿಲ್ಲಿಸಿ
ನಲಿಸಿ ನಗಿಸಲು
ಮೂರಾರು ಪಾಡು ಪಟ್ಟೆ

ಕಪ್ಪೆ ನೆಗೆದಾಗ
ಕೊಳದಲ್ಲಿ ವರ್ತುಲ
ಮನದ ಜಿಗಿತದಲಿ ಭಾವಸಂಕುಲ

ಕನ್ನಡಿಯ
ಕಂಬನಿಗೆ
ಕೈ ವಸ್ತ್ರವೇಕೆ?

ಬೆಟ್ಟದ ತುದಿಯಲ್ಲಿ
ಸೂರ್ಯ ಕಿರೀಟ
ಬೆಟ್ಟದಡಿಯಲ್ಲಿ ಅವನ ಅವಶೇಷ

ಗದ್ದೆಯಲಿ ಬೆಳೆದಿತ್ತು
ಸದ್ದುಗದ್ದಲಿಲ್ಲದೆ
ಉದ್ದನೆಯ ಬಂಗಾರತೆನೆ

ಹುಟ್ಟಿದ ಜೀವಕ್ಕೆ
ದೈವ ಕಾವಲು
ಸಾವು ಎಳೆವಾಗ ಯಾರ ಕಾವಲು?

ಮಡಿಕೆ ಹೋಳಾಗಿ
ಗೋಳಿಲ್ಲದೆ ಒಳ ಆಕಾಶ
ಹೊರ ಆಕಾಶ ಸೇರಿತ್ತು

ಉರಿವ ಬೆಂಕಿ ಕಡ್ಡಿಯಲಿ
ಕೊನೆಗೆ ಉಳಿದಿದ್ದು
ಸುಟ್ಟಕರಿ ಬೂದಿ

ಹಣತೆ ಮಾರಬಹುದು
ಬಿಡಿಕಾಸಿಗೆ, ಸೂರ್ಯನ
ಕೊಳ್ಳಬಹುದೇ ಬಿಡಿಕಾಸಿಗೆ?

ಯಾರು ಬಂದರೇನು?
ಯಾರು ಹೋದರೇನು?
ನನ್ನಲ್ಲೇ ನಾನು ಇರದಾಗ

ನನಗಿದೆ ಹೆಸರು
ನನ್ನೊಡನೆ ಹುಟ್ಟಿದ
ಮನಕೆ ಯಾವ ಹೆಸರು?

ಕೋಳಿ ಕೂಗಿದರೇನು?
ಗೂಳಿ ಗುದ್ದಿದರೇನು?
ಕುಂಭ ಕರ್ಣಗೆ ಬೆಳಗಾಗಲಿಲ್ಲ

ಹಗಲು ರಾತ್ರಿಗಳು
ಬಂಧಿಯಾಗಿವೆ
ಕಣ್ಣಿನ ಪೆಟ್ಟಿಗೆಯ ಮುಚ್ಚಳದಿ

ಮರದ ಕವಲು ಕೈ
ಸರಿಸುತಿದೆ ಆಗಸದ
ಮೋಡ ತೆರೆಯನ್ನ

ಶರತ್ಕಾಲದ
ಬೋಳು ರೆಂಬೆಗಳ
ಭುಜವು ಹೊತ್ತಿದೆ ವಿಶಾಲ ಗಗನ

ಅಸ್ತಮಿಸಿ ರವಿಯು
ಮಲಗಿರುವ
ಬೆಟ್ಟದ ದಿಂಬ ಮೇಲೆ

ಬೆತ್ತಲೆಯ ರೆಂಬೆಯಲಿ
ಕಪ್ಪು ಅಕ್ಷರಮಾಲೆ
ಕಾಗೆಯ ಕಾಕಾ

ಬೆಳಗಿನ ಇಬ್ಬನಿಯಲ್ಲಿ
ಜಗದ ಪ್ರತಿಬಿಂಬ
ಹಿಗ್ಗುತ್ತಿದೆ ಹಿಗ್ಗಾಗಿ

ಎಲೆಗಳು ಹೊರಟಿವೆ
ಅನ್ವೇಷಣೆಗೆ, ನಿಂತಿದೆ
ಶರತ್ಕಾಲದ ಒಂಟಿ ಮರ

ಹೇಮಂತ ಚಳಿಯಲಿ
ನಿಶೆ ಸಾಯುತಿದೆ ಮೌನದಲಿ
ಜೀವ ಸ್ಪಂದನ ಉದಯದಲಿ

ದಿನವು ತೂಕಡಿಸುತ್ತಿದೆ
ದಟ್ಟ ಮಂಜಿನ
ತೆರೆ ಎಳೆದ ಹಾದಿಯಲ್ಲಿ

ಎದರು ಬರುವ ರೈಲು
ಸೀಟಿ ಹೊಡೆಯುತ್ತಿದೆ
ಮಲಗಿದೆ ಹಳಿಗಳಿಗೆ

ಎರಡು ಗುಳ್ಳೆಗಳ
ವಿಸ್ತರಣ, ಮಿಲನ
ಸಾಗರದ ಚಲನ ವಲನ

ನಾನು ಆಗಾಗ ಮೌನಿ
ನನ್ನ ಮನ ಸತತ
ಮೌನದಲ್ಲಿ ವಾಗ್ಮಿ

ಮಂಜಿನ ಮರೆಯಲಿ
ಸೇತುವೆಯ ಮೆಟ್ಟಲು
ಪಾದವಿರದ ಪಾತಾಳ ತೊಟ್ಟಿಲು

ಮತ್ಸೇಂದ್ರ
ಚಲನ ವಲನದಲಿ
ಅಳೆಯುತಿರುವ ಸಾಗರದ ಆಳ

ವೃದ್ಧೆಯ ಸುಕ್ಕಿನಲಿ
ಒಣಗಿದೆ ಜೀವನದಿ
ಅಯ್ಯೋ! ಕಟ್ಟಿದೆ ಅಸ್ಥಿಗೋರಿ

ಮನ, ಬುದ್ದಿಯ
ದ್ವಂದ್ವ ಯುದ್ಧದಲಿ
ಕಮರಿತ್ತು ಆತ್ಮದ ಚೆಲುವು

ಮಿಂಚಿನ ಕಾವ್ಯ
ಆಕಾಶದ ತುಂಬಾ
ಓದು ಕತ್ತಲೆಗೆ ಮುನ್ನ

ಮರಳಲ್ಲಿ ಬಿದ್ದ
ಎಲ್ಲ ಚಿಪ್ಪುಗಳೂ
ಮಣ್ಣು ಮುಕ್ಕಿತ್ತು

ನಾನು ಗೆದ್ದಾಗ
ಬಿದ್ದಂತಾದೆ
ನಾನು ಬಿದ್ದಾಗ ಎದ್ದಂತಾದೆ

ಕಾಲ ಕಟ್ಟಿಹಾಕುತಿದೆ
ಎಲ್ಲರನು ಪ್ರತಿರಾತ್ರಿ
ಮಂಚದ ಕಾಲಿಗೆ ನಡೆವ ಆಶೆ

ಓಹ್! ಚಿ‘ಗುರು‘ಲ್ಲಿ
ಕಂಡೆ ನನ್ನ ಬಾಳ
ಗುರುವನ್ನ!

ಅಂತರಾತ್ಮನ
ಬಯಲು
ನನ್ನ ಒಳಗು ಹೊರಗು

ಓಹ್! ಬೆಟ್ಟದ ಉಸಿರಲ್ಲಿ
ನಿಶ್ಚಿಂತ ಹುಲ್ಲಿನ ನಾಟ್ಯ
ಹಸಿರ ವೃಂದ ಗಾನ

ಮಾಗಿದ ಶಿಶಿರ ಎಲೆಗಳಲಿ
ರಂಗು ರಂಗಿನ ಪಯಣ
ಕೊನೆಯ ಭವ್ಯ ಪ್ರಾಣ

ಹಸಿರು ಗದ್ದೆಗಳ
ರಸದೌತಣ ವಿರೆ
ಬೆದರು ಬೊಂಬೆಯ ಉಪವಾಸ ವೃತ

ತಂಗಾಳಿಯ ಹಸಿರು ಹುಲ್ಲಿನ
ವ್ಯವಹಾರ, ಕಾರ್ಯ ಭಾರ
ಇದಕಿಲ್ಲ ತೆಲೆ ಭಾರ, ಹೃದಯ ಕ್ಷಾರ

ಹಾರಿಳಿವ ಮನಕೆ
ಬುವಿ ಬಾನು
ಮೆತ್ತೆಯ ದಿಂಬು

ಲೇಖನಿ ನಿದ್ರಿಸುತ್ತಿದೆ
ಬಿಳಿ ಹಾಳೆ ಹಾಸಿಗೆಯಲಿ
ಚಳಿಗಾಲದ ಮಧ್ಯಾಹ್ನ ನಿದ್ರೆ

ಹಾರುಹಕ್ಕಿ ಬೆರೆಯುತ್ತಿದೆ
ಮಾರ್ಗ ದರ್ಶನ ನಕ್ಷೆ
ಹೊಳೆದಿದೆ ಸೂರ್ಯ ವೀದಿ

ಮನವು ತೊಟ್ಟಿದೆ
ಗಗನ ಯಾತ್ರಿ ಅಂಗಿ
ಕಣ್ಣಲ್ಲಿ ನಕ್ಷತ್ರ ಭಂಗಿ

ಬಟ್ಟೆ ಹಗ್ಗದಲಿ
ಗಗನ ಯಾತ್ರಿ ಅಂಗಿ
ಕಣ್ಣಲ್ಲಿ ನಕ್ಷತ್ರ ಭಂಗಿ

ಬಟ್ಟೆ ಹಗ್ಗದಲಿ
ವಸ್ತ್ರದ ನರ್ತನ
ಆಷಾಢ ಹಾಡುತ್ತಿದೆ ಹಾಡು

ಆಹಾ! ವಸಂತ ವಸ್ತ್ರದಲಿ
ಚಿಟ್ಟೆ ವಿಶ್ವ ಸುಂದರಿ
ವಿಶ್ವ ವೇದಿಕೆಯಲಿ

ಚಿಟ್ಟೆ, ಮೊಗ್ಗುಗಳ
ಧ್ಯಾನ ಮಿಲನ
ಹೂವಿನ ಹೃದಯಸ್ಕಲನ

ಸಾಗರದ ಎತ್ತರದಲೆಗೆ
ಶಿಖರದಾಲಿಂಗನ
ಮಾಡುವಾಸೆ

ಕಣ್ಣು ಚಿತ್ರಿಸಿದೆ
ಮುಂಗಾರು ಭಾವ ಅಭಿವ್ಯಕ್ತಿ
ಹನಿಯುತ್ತಿದೆ ಕಣ್ಣೀರು

ದಾರಿದೀಪದಲ್ಲಿ
ಖಾಲಿ ಮರದ
ಬೀಜಗಳ ಎಣಿಕೆ

ದಿಟ್ಟಿಸಿ ನೋಡೆ
ಆಗಸದ ಮುದ್ರಣದಲಿ
ಶಬ್ದವಿಲ್ಲದ ಕಾವ್ಯ

ಶಬ್ದಶಬ್ದಗಳು
ಖಡ್ಗ ಝಳಪಿಸೆ
ಉಳಿದದ್ದು ಭಾವ ದೀಪ್ತಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹೋದರಿ ಮೊರೆ
Next post ಝೆನ್ ಹಾಯಿಕುಗಳು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…