ಒಂದಾನೊಂದು ಊರಿನಲ್ಲಿ ಒಬ್ಬ ಬ್ರಾಹ್ಮಣನಿದ್ದನು. ಆತನು ಅಗ್ನಿ ಹೋತ್ರನನ್ನು ಇಟ್ಟುಕೊಂಡು ತನ್ನ ಪಾಡಿಗೆ ತಾನಿದ್ದನು. ಒಂದು ಸಲ ಆತನಿಗೆ ಯಜ್ಞ ಮಾಡಬೇಕು ಎನ್ನಿಸಿತು. ಅದಕ್ಕಾಗಿ ಒಂದು ಆಡು ತರಬೇಕು ಎಂದು ಬೇರೊಂದು ಗ್ರಾಮಕ್ಕೆ ಹೋಗಿ ಅಲ್ಲಿ ಒಬ್ಬ ಧನಿಕನನ್ನು ಕೇಳಿ ಒಂದು ಆಡನ್ನು ತಂದನು. ಅದನ್ನು ಆತನು ಹೊತ್ತುಕೊಂಡು ಬರುತ್ತಿರುವಾಗ, ಮೂವರು ದುಷ್ಟರು ಅದನ್ನು ಕಂಡು “ಆಡು ಚೆನ್ನಾಗಿದೆ. ಏನಾದರೂ ಮಾಡಿ ಹಾರಿಸ ಬೇಕು” ಎಂದು ಆಲೋಚಿಸಿಕೊಂಡರು. ಆವರಲ್ಲಿ ಒಬ್ಬನು ಮುಂದೆ ಬಂದು “ಎನಿದು, ಬ್ರಾಹ್ಮಣ, ಹೀಗೆ ಮಾಡುವವರುಂಟೆ? ಈ ನಾಯನ್ನು ನಿಮ್ಮಂಥವರು ಮುಟ್ಟಲೂಬಾರದು. ಹೀಗಿರಲು, ಇದನ್ನು ಹೊತ್ತುಕೊಂಡು ಹೋಗುವುದು ಎಂದರೆ. ಏನನ್ಯಾಯ?” ಎಂದನು. ಆ ಬ್ರಾಹ್ಮಣನು ಅದನ್ನು ಕೇಳಿ “ಏನನ್ಯಾಯ್ಯಾ, ನಿನಗೇನು ಕಣ್ಣು ಕಾಣಿಸುತ್ತದೆಯೋ ಇಲ್ಲವೋ? ಆಡನ್ನು ನಾಯಿಯೆನ್ನುತ್ತೀಯೇ?” ಎಂದು ರೇಗಿದನು. ಅವನು “ಹೋಗಲಿ ಬಿಡಿ, ಸ್ವಾಮಿ ನಿಮ್ಮ ಹಣೆಯ ಬರೆಹ ನಮಗೇನ?” ಎಂದುಕೊಂಡು ಅತ್ತ ಹೋದನು.
ಬ್ರಾಹ್ಮಣನು ಅಷ್ಟುದೂರ ಹೋಗುವುದರೊಳಗಾಗಿ ಇನ್ನೊಬ್ಬ ಬಂದು “ಶಿವ ಶಿವಾ, ಏನನ್ಯಾಯ? ಈ ಸತ್ತ ಮಗುವನ್ನು ಹೀಗೆ ಹೊತ್ತುಕೊಂಡು ಹೋಗುತ್ತಿರುವರಲ್ಲ!” ಎಂದನು. ಬ್ರಾಹ್ಮಣನು “ಛೇ, ಏನು ಮಾತನಾಡುತ್ತೀಯೆ? ಬದುಕಿರುವ ಆಡನ್ನು ಸತ್ತ ಮಗುವೆನ್ನುತ್ತಿದ್ದೀಯೆ?” ಎಂದು ಗದರಿಸಿದನು. ಅದ ಅವನು “ತಪ್ಪಾಯಿತು ಸ್ಟಾಮಿ, ನನಗೆ ಹಾಗೆ ಕಂಡಿತು, ಹಾಗೆಂದೆ. ತಮ್ಮ ಇಷ್ಟ. ತಮಗೆ ತೋರಿದಂತೆ ಮಾಡಿ” ಎಂದು ಕೈ ಮುಗಿದು ಹೋದನು.
ಇನ್ನಷ್ಟು ದೂರ ಹೋಗುವುದರೊಳಗೆ ಇನ್ನೊಬ್ಬ ಧೂರ್ತನು ಎದುರಿಗೆ ಬಂದನು. ಅವನು ಬ್ರಾಹ್ಮಣನ ಕಡೆಗೆ ನೋಡಿ ಆಶ್ಚರ್ಯಪಡುತ್ತಾ, “ಕೈ ಮುಗಿದುಕೊಂಡು, ಸ್ವಾಮಿ, ಇದು ಸರ್ವಥಾಯುಕ್ತವಲ್ಲ. ಕತ್ತೆಯನ್ನು ಹೊತ್ತುಕೊಂಡು ಹೋಗುವುದು ಎಂದರೇನು? ಮೊದಲು ಇದನ್ನು ಬಿಡಿ. ಇನ್ನಿಬ್ಬರು ನೋಡುವುದಕ್ಕಿ೦ತ ಮುಂಚೆ ಬಿಡಿ” ಎಂದನು. ಬ್ರಾಹ್ಮಣನಿಗೆ “ಇದೇನಿದು” ಒಬ್ಬನಿಗೆ ನಾಯಿಯಾಗಿ ಕಂಡಿತು. ಇನ್ನೊಬ್ಬನಿಗೆ ಸತ್ತ ಮಗುವಾಗಿ ಕಾಣಿಸಿತು. ಮತ್ತೊಬ್ಬನಿಗೆ ಕತ್ತೆಯಾಗಿ ಕಾಣಿಸಿತು. ನನಗೆ ಈಗಲೂ ಆಡಾಗಿ ಕಾಣಿಸುತ್ತಿದೆ. ಇದು ಹೀಗೆ ಒಬ್ಬೊಬ್ಬರಿಗೆ ಒಂದೊಂದಾಗಿ ಕಾಣಿಸಬೇಕಾದರೆ, ನಿಜವಾಗಿಯೂ ಪಿಶಾಚಿಯೇ ಆಗಿರಬೇಕು.” ಎನ್ನಿಸಿತು. ಆ ಕೂಡಲೇ ಅವನು ಅದನ್ನು ಧೊಪ್ಪನೆ ಎತ್ತಿಹಾಕಿ ಓಡಿ ಹೋದನು. ಧೂರ್ತರು ಅದನ್ನು ಹೊತ್ತುಕೊಂಡು ಹೋಗಿ ಪೂರೈಸಿದರು. ನಾವು ಹಾಗೇ ಮಾಡಬೇಕು.
ಸೇವಕನಾಗಿ ವಿನಯದಿಂದ ಓಲೈಸಿದರೆ, ಅತಿಥಿಯಾಗಿ ಹೋಗಿ ಒಳ್ಳೆಯ ಮಾತುಗಳನ್ನಾಡಿದರೆ, ಹೆಂಗಸು ಅತ್ತು ಹೆದರಿಸಿದರೆ, ಮೋಸಗಾರರು ಸವಿಮಾತು ಆಡಿದರೆ, ಮೋಸ ಹೋಗದವರು ಯಾರು? ದುರ್ಬಲರೇ ಆಗಿರಲಿ, ಹೆಚ್ಚಾಗಿದ್ದರೆ ಅವರ ಜೊತೆಯಲ್ಲೂ ವಿರೋಧ ಮಾಡಬಾರದು. ಕೇಳಿಲ್ಲವೆ?
ಸಂಖ್ಯೆಯಲಿ ಹಿರಿದಾದ ಜನರೊಡನೆ ಹಗೆಯಾಗದು ॥
ಹಾವು ಹಿರಿದಾದರೂ ಇರುವೆ ತಿಂದು ಹಾಕುವುದು ॥ ೨೨ ॥
*****