Home / ಲೇಖನ / ಪತ್ರ / ಪೂರ‍್ಣಿಮ – ೭

ಪೂರ‍್ಣಿಮ – ೭

ಪೂರ‍್ಣೀ,

ನಾನು ನಿನಗೆ ತಿಳಿಸದೆ, ನನ್ನ ವಿಷಯವಾಗಿಯೇ ನೀನು ನಿನ್ನ ಚಿನ್ನ ತಂಗಿ ಆಶಾಳೊಂದಿಗೆ ಮಾತನಾಡುತ್ತಿರುವಾಗಲೇ ನಾನು ಇಳಿದು ಬಂದು ನಿನ್ನ ಮುಂದೆ ಸಾಕ್ಷಾತ್ಕಾರವಾದುದು ನಿನಗೆ ಆಶ್ಚರ್ಯ-ಸಂತೋಷ ಇವೆರಡನ್ನು ಒಮ್ಮೆಲೆ ತುಂಬ ತೀವಿತಲ್ಲವೆ? ಬನ್ನಿ, ಕುಳಿತುಕೊಳ್ಳಿ ಯಾವಾಗ ಬಂದಿರಿ, ಎಂಬ ಅನುನಯದ ಕ್ಷೇಮ ಸಮಾಚಾರವೇ ಬೇಡವೇ? ಕುಶಲ ಪ್ರಶ್ನೆಯನ್ನು ಮಾಡಲಿಲ್ಲವೇಕೆ? ಮೂಕಿಯಂತೆ ಮೌನವಾಗಿ, ನನ್ನನ್ನೇ ನುಂಗುವ ದೃಷ್ಟಿಯಿಂದ ನೋಡುತ್ತಿದ್ದೆ. ಕಕ್ಕಾಬಿಕ್ಕಿಯಾಗಿ ನಿಂತ ತನ್ನ ಅಕ್ಕನನ್ನು ನೋಡಿ ಆಶಳಿಗೆ ನಗು ಬಂದರೂ, ತಡೆ, ಹಿಡಿದುಕೊಂಡು ನನ್ನ ಕಾಲಿಗೆ ನೀರು ಕೊಟ್ಟಳು. ಅಷ್ಟರೊಳಗಾಗಿ ನಿನ್ನ ತೊಡೆಯ ಪಕ್ಕದಲ್ಲಿ ತನ್ನ ಕೆಲಸದಲ್ಲೇ ನಿಮಗ್ನನಾಗಿದ್ದ ರಾಘು ನನ್ನ ಗುರುತು ಹಿಡಿದು ಕೊಂಡನು. ಅಪ್ಪ ಎಂದು ಯಾರು ಹೇಳಿಕೊಟ್ಟಿದ್ದರೋ ಅದನ್ನು ಪೂರ‍್ಣ ಉಚ್ಛರಿಸಲಾರದೆ ತನ್ನ ಬಲವನ್ನೆಲ್ಲಾ ಬಿಟ್ಟು ‘ಪ್ಪಾ’ ಎಂಬ ಶಬ್ದವೊಂದನ್ನೇ ಉಚ್ಛರಿಸಿದನು. ಪಾಪ, ಒಂದು ವರುಷ ತುಂಬಿದ ಪುಟ್ಟ ಬಾಯಿಗೆ, ಎರಡನೇ ವರುಷದ ವರ್ಧಂತಿ ಇನ್ನೂ ದೂರವಿರುವ ಆ ಹಾಲು ಜೊಲ್ಲಿಗೆ ಎರಡು ಶಬ್ದಗಳನ್ನು ಉಚ್ಛರಿಸುವುದೇ ಕಷ್ಟವಾಗಿರಬಹುದು. ಶಬ್ದ ಕಡಿಮೆಯಾದರೂ, ಆ ಕಪ್ಪು ಕಣ್ಣುಗಳಲ್ಲಿ ಅಲುಗುವ ತುಟಿ ಕುಣಿಯುವ ಗದ್ದ, ಇವುಗಳಲ್ಲಿ ತುಂಬಿ ತುಂಬಿ ಬರುತ್ತಿರುವ ಪ್ರೀತಿಗೇನು ಕಡಿಮೆ ಇರಲಿಲ್ಲ. ಬುಳ ಬುಳನೆ ನಾಲ್ಕು ಕಾಲುಗಳಲ್ಲಿ ನಡೆದು ಬಂದ ರಘುವನ್ನು ನಾನು ಎತ್ತಿಕೊಂಡು ಮುತ್ತಿಡುವ ಮೊದಲೇ, “ಕಾಲುತೊಳೆದುಕೊಳ್ಳ ಬಾರದೆ? ಮಗು ಓಡಿ ಹೋಗುವುದೇ ಅಷ್ಟು ಪ್ರೀತಿ ಇದ್ದರೆ ಆರುತಿಂಗಳು ಇತ್ತ ತಿರುಗಿಯೂ ಸಹ ನೋಡಲಿಲ್ಲವೇಕೆ” ಎಂದು ನಿನ್ನ ವಕೀಲಿಯನ್ನು ವಹಿಸಿಕೊಂಡು, ಮುಂದೆ ಬಂದ ಮಾತಾಡಿದ ಆಶಳ ಕೆನ್ನೆ ಚಿವುಟುವಂತಾಯಿತು. ಆದರೆ ರಸದಾಳೆಯ ಕಬ್ಬಿನಂತೆ ಬೆಳೆದು ನಿಂತ ಹುಡುಗಿ, ಲಾವಣ್ಯದ ಲಲ್ಲೆ ಗಲ್ಲದ ಮೇಲೆ ನಿಂತು ‘ನಾನಿಲ್ಲಿ’ ಎಂದು ಕೂಗಿ ಹೇಳುತ್ತಿರುವ ಅರಳುತ್ತಿರುವ ಆ ಮುಖ, ಆದರೂ ನಿನ್ನಷ್ಟೇ ಗಡುಸುತನದ ಮೂಗು. ಇವುಗಳೆಲ್ಲವನ್ನೂ ನೋಡಿದಾಗ ಆಕೆಯನ್ನು ಮುಟ್ಟುವ ಧೈರ್ಯ, ಸಲಿಗೆ ಎಲ್ಲಕ್ಕೂ ಬೇಡಿಬಿದ್ದಿತು. ನಿನ್ನ ಕಡೆಗೆ ತಿರುಗಿದೆ. ನಿನ್ನ ಮುಖದಲ್ಲಿ ಅದೇಕೋ ಮೊದಲಬಾರಿ ಅತ್ತೆಯ ಮನೆಗೆ ಬಂದ ಅಳಿಯನನ್ನು ಅತ್ತೆಯ ಮಗಳು ಬಾಗಿಲ ಹಿಂದೆ ನಿಂತು ಕದ್ದು ನೋಡುವ ಹೊಸಲಜ್ಜೆ ಬಂದಿದ್ದಿತು. ಅಲ್ಲವೇ ಪೂರ‍್ಣೀ. ಆರು ತಿಂಗಳ ನಂತರ ನನ್ನನ್ನು ನೋಡುವ ನೋಟದಲ್ಲಿ ಎಂತಹ ಹೊಸತನವನ್ನು ಕಂಡುಕೊಂಡಿರುವಿ. ಅದು ತಾನಾಗಿ ಬಂದುದೋ, ನೀನಾಗಿ ಅಳವಡಿಸಿಕೊಂಡುದೋ? ನನಗಂತೂ ಮತ್ತೊಮ್ಮೆ ಕತ್ತೆತ್ತಿ ನೋಡುವಂತಿದ್ದಿತು. ನಿನ್ನ ಪುಣ್ಯಕ್ಕೆ ನೀನೊಬ್ಬಳೇ ಅಲ್ಲಿರಲಿಲ್ಲ. ಸಂಜೆ, ಪೂರ‍್ಣ ಸಂಜೆಯಾಗಿ ರಾತ್ರಿಯಾಗುತ್ತಲೇ ಬಂದಿತ್ತು. ಮುಂಜಾನೆ, ಮುಸುಕು ಹರಿಯುವ ಮುನ್ನ ರೈಲಿನಲ್ಲಿ ಕುಳಿತು ಹದಿನೈದು ತಾಸು “ಎಕ್ಸಪ್ರೆಸ್” ಪ್ರಯಾಣ ಮಾಡಿ ರೈಲಿನ ವೇಗಕ್ಕಿಂತ ವೇಗವಾಗಿ ಓಡಿಬಂದ ದಣಿವು ಬಾಗಿಲಿಗೆ ಬರುತ್ತಲೇ ಆಯಿತು. ಆದರೆ ನೀನು ಮಾತ್ರ ನನಗೆ ದೃಷ್ಟಿ ತಾಗುವಂತೆ ನೋಡಿದೆ, ಏಕೆ? ಅದೇ ದೂಳು ಕುಳಿತ ಬಿಳಿಯ ಜುಬ್ಬ, ಬಾಚಲು ಹೋದರೆ ಬಗ್ಗದ ಪುಡಿಗೂದಲಿನ ತಲೆ, ಪುಟ್ಟ ಸೊಂಟ, ಚಿಕ್ಕ ಕಾಲುಗಳು ಹೊರಲಾರದ ದೊಡ್ಡ ಹೊಟ್ಟೆ. ಇವಿಷ್ಟೂ ಇದ್ದಂತೆಯೇ ಇದ್ದರೂ ನಾನು ನಿನಗದೆಷ್ಟು ಹೊಸದಾಗಿ ಕಂಡೆನು, ಈಗ ಗೊತ್ತಾಯಿತೆ? ನೋಡುವ ದೃಷ್ಟಿಯಲ್ಲಿ ಹೊಸತು ಹಳತು ಸೊಗಸು, ಸಂಕಟಗಳು ಅಡಗಿರುವುದೆಂಬುದು. ಸೃಷ್ಟಿಯ ರಹಸ್ಯವನ್ನೆಲ್ಲಾ ಈ ದೃಷ್ಟಿಯಲ್ಲಿ ಅಡಗಿಸಲಾಗಿದೆ. ಮುಪ್ಪು, ಯೌವನ, ಕುರೂಪ, ಸುರೂಪ ಇವುಗಳು ದೇಹಕ್ಕೆ ಬಂದರೆ, ದೃಷ್ಟಿಗೆ ಮಾತ್ರ ಇದಾವುದೂ ಅಲ್ಲ. ನೋಟವನ್ನೇ ಕವಿಯ ಮಾತಿನಲ್ಲಿ ಜೀವನದ ಬೆಳಕಿನ ಕಿಡಿ ಎಂದು ಕರೆಯುವುದು.

ಬಹು ಕೆಟ್ಟ ನೋಟ ನಿನ್ನದು. ಅಂದು ನನಗೆ ಊಟವೇ ಸೇರಲಿಲ್ಲ. ಗಂಟಲಿನಲ್ಲಿ ಅನ್ನವೇ ಇಳಿಯಲಿಲ್ಲ. ಕಾಯಿ ಪಲ್ಲೆಗಳಿಗೆ ಅದಕ್ಕೆ ಹಾಕಿದ್ದ ಉಪ್ಪು ಹುಳಿ ಹಿಡಿದಿದ್ದರೂ ನನ್ನ ನಾಲಿಗೆಗೆ ಹಿಡಿಸಲಿಲ್ಲ. ಊಟದ ಶಾಸ್ತ್ರ ಮಾಡಿದೆನು. ನೀನು ಊಟ ಮಾಡಿದೆಯೋ ಇಲ್ಲವೋ ಅದನ್ನು ವಿಚಾರಿಸಲಿಲ್ಲ. ನನ್ನ ಅವಸರ ನನ್ನ ಈ ಊಟಸೇರದಿರುವಿಕೆ ಇವೆಲ್ಲವುವನ್ನೂ ಅರ್ಥಮಾಡಿಕೊಂಡಿದ್ದ ನೀನು, ಬಾಯಿಯಿಂದ ಹೊರಬರದ ನಗುವನ್ನೇ ನಗುತ್ತಿದ್ದೆಯಲ್ಲವೆ?

ಬೆಂಗಳೂರಿನ ಬಾಡಿಗೆಯ ಮನೆಯ ಸುಖ ಅನುಭವಿಸಿದವರಿಗೇ ಗೊತ್ತು. ಉದ್ಯಮದ ಕೇಂದ್ರೀಕರಣದಲ್ಲಿ ಮುಂಬೈ ನಗರದೊಂದಿಗೆ ಸ್ಪರ್ಧಿಸುತ್ತಿರುವ ಬೆಂಗಳೂರಿನಲ್ಲಿ ಜನ ಹೆಚ್ಚಿದಷ್ಟು ಮನೆ ಹೆಚ್ಚಲಿಲ್ಲ. ಬಾಡಿಗೆ ಇರುವವರ ಸಂಪಾದನೆ ಹೆಚ್ಚದಿದ್ದರೂ ಬಾಡಿಗೆ ಮಾತ್ರ ಹೆಚ್ಚುತ್ತಿರುವುದು. ಬೆಂಗಳೂರಿನ ಲಾಲಬಾಗನ್ನು ಉದ್ದಗಲದರಸ್ತೆಗಳನ್ನು ಬಣ್ಣಿಸಿ ಬಾಯಾ ನೀರು ಕುಡಿಯುವರನ್ನು ನಮ್ಮ ಮನೆಯ ಮಲಗುವ ಕೊಠಡಿಯೆಂದು ನಾಮಕರಣ ಮಾಡಿಕೊಂಡಿರುವ ಕೊಠಡಿಗೆ ಕರೆದುತಂದು ತೋರಿಸಬೇಕು. ಆಗವರಿಗೆ ಬೆಂಗಳೂರಿನ ಗರ್ಭಗುಡಿಗಳ ಬಂಡವಳ ಗೊತ್ತಾಗುವದು. ವಯಸ್ಸಿನ ಅಂದಾಜದ ಮೇಲೆ ಉಡುಪುಗಳನ್ನು ಹೊಲೆದು ಸಿದ್ಧ ಪಡಿಸುವಂತೆ ಇಬ್ಬರ ಉದ್ದ-ಎತ್ತರದ ಸರಾಸರಿ ಪ್ರಮಾಣದ ಮೇಲೆ ಮಲಗುವ ಕೊಠಡಿಯನ್ನು ಕಟ್ಟಿಸುವಷ್ಟು ಮನೆಕಟ್ಟುವ ಮಾಲಕರು ಬುದ್ಧಿವಂತರಾಗಿರುವರು. ಧಾರಾಳವಾಗಿ ಉರಳಾಡುವ ಕೊಠಡಿಯನ್ನು ಪಡೆಯುವ ಭಾಗ್ಯ ಬೆಂಗಳೂರಿನ ಬಹು ದಂಪತಿಗಳಿಗಿಲ್ಲ. ಈ ಸಂದರ್ಭದಲ್ಲಿ ಮುಂಬೈಯ ಮಿತ್ರರೊಬ್ಬರು ನನ್ನೊಂದಿಗೆ ಮುಂಬೈಯಲ್ಲಿ ಅಂದ ಮಾತೊಂದು ನೆನಪಿಗೆ ಬರುವುದು. ಅವರು ಮುಂಬೈಯ ನಗರದ ವಿಸ್ತರಣವೊಂದರಲ್ಲಿ ವಾಸಿಸುತಿದ್ದರು. ಮುಂಬೈಗೆ ಹೋಗಿ ಸೇರಿದ ಐದಾರು ವರುಷಗಳಾಗಿದ್ದರೂ, ಅವರು ಮದುವೆಯಾಗಿ ಒಂದು ವರುಷವಾಯಿತಂತೆ. ನಾನು ಏಕೆ ಮದುವೆಗೆ ವಯಸ್ಸು ಸಾಲದಿತ್ತೋ, ಅಥವಾ ಹೆಣ್ಣಿನ ಕ್ಷಾಮವಿದ್ದಿತೋ ಎಂದು ನಗೆಯಾಡಿದೆ. ಅಷ್ಟು ಹೊತ್ತಿಗೆ ನನ್ನ ಸ್ನೇಹಿತನ ಅರ್ಧಾಂಗಿಯೂ ಒಳಗಿ ನಿಂದ ಬಂದರು. ನನ್ನ ಪ್ರಶ್ನೆಗೆ ಉತ್ತರ ಕೊಡುವ ಮೊದಲು ನನ್ನ ಪ್ರಶ್ನೆಯನ್ನು ಆಕೆಗೆ ಈತ ಚೆನ್ನಾಗಿ ವಿವರಿಸಿದ್ದನು. ವಿದ್ಯಾವಂತ ತರುಣಿ, ಈ ಪ್ರಶ್ನೆಗೆ ಆಕೆಯೇ ಉತ್ತರವನ್ನು ಕೊಡವ ಉತ್ಸಾಹ ತೋರಿದಳು. ಆದರೆ ಗಂಡನೇ ಮುಂದಾದನು. ಮಿಸ್ಟರ ಇದು ಮುಂಬೈ, ಮನೆ ಸಿಕ್ಕಿದ ಮೇಲೆ ಮದುವೆ ಮಾಡಿಕೊಳ್ಳಬೇಕು. ನನಗೆ ಹೆಣ್ಣು ಸಿಕ್ಕಿ ಮೂರು ವರುಷವಾಯಿತು. ಮನೆ ಸಿಕ್ಕು ವರುಷ ಮಾತ್ರವಾಯಿತು. ಮೊದಲು ಮನೆಯೊಂದಿಗೆ ಮದುವೆ, ಆ ಮೇಲೆ ಮಡದಿಯೊಂದಿಗೆ ಬಿಡದಿ ಸಿಕ್ಕಿದ ಮೇಲೆ ಮಡದಿ, ಎಂದೀತ ಪ್ರಾಸಬದ್ಧವಾಗಿ ಹೇಳತೊಡಗಿದನು. ಮದುವೆಯಾದ ಹುಡುಗಿ ಮುಸಿ ಮುಸಿ ನಕ್ಕಳು. ನಾನೂ ಘಟ್ಟಿಯಾಗಿ ನಕ್ಕು ರಸಾಭಾಸಮಾಡಲಿಲ್ಲ. ಆದರೆ ೧೫ ವರುಷಗಳ ಹಿಂದೆ ನಾನು ನಿನ್ನನ್ನು ಮದುವೆ ಮಾಡಿಕೊಂಡಾಗ, ಬಾಡಿಗೆ ಮನೆಯ ಸಮಸ್ಯೆಗೆ ಇಷ್ಟೊಂದು ಮರ‍್ಯಾದೆ ಇರಲಿಲ್ಲ ಅಲ್ಲವೆ. ನನಗೆ ಹೊತ್ತು ಹೋಗಲಿಲ್ಲ. ಎಲ್ಲೂ ಇಲ್ಲದ, ಎಂದೂ ಇರದ ಕೆಲಸ ನಿನಗೆ ಎಂದು, ಗೊಣಗುತ್ತ ಕಣ್ಣು ಮುಚ್ಚಲು ಪ್ರಯತ್ನಿಸಿದೆನು. ಪೂರ‍್ಣೀ ಕಣ್ಣು ಮುಚ್ಚುವುದೇ ತಡ ಕಣ್ಣಿಗೆ ಕಂಡುದೇನು ಗೊತ್ತೆ; ಕಾವೇರಿಯ ಬಂಡೆಗಲ್ಲು ನೀರು ಜಾರುತ್ತಿರುವ ಕರಿಯ ಕಲ್ಲುಗಳು, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯಷ್ಟೇ ಕಪ್ಪು ಬಂಡೆ, ಕಣ್ಣಿಗೇಕೆ ಬಿದ್ದಿತೆಂದೂ ಆ ಕಲ್ಲಿನತ್ತ ಕಣ್ಣೋಡಿಸಿದಾಗ, ಅಲ್ಲಿ ಕಂಡೆ ನೀನು, ಕಾವೇರಿಯು ನೀನು ಹುಟ್ಟಿದ್ದ ಬಟ್ಟೆಯಲ್ಲಿ ಒದ್ದೆಯಾಗಿ, ನಿನ್ನ ಭಕ್ತಿಗೆ ಮೆಚ್ಚಿಯೇ ಏನೋ ನಿನ್ನ ಮೈಗೇ ಅಂಟಿಕೊಂಡಿದ್ದಳು. ಇದನ್ನು ನೋಡಿ ಕಣ್ಣು ಮುಚ್ಚಲಿಲ್ಲ. ಕಣ್ಣು ಬಿಟ್ಟು ನೋಡಿದೆ. ನಿನ್ನ ಬಳೆಯ ಸದ್ದು ಇನ್ನೂ ಅಡಿಗೆಯ ಮನೆಯಲ್ಲೇ ಲಾಸ್ಯವಾಡುತ್ತಿದ್ದಿತು. ಆದರೆ ಶ್ರೀರಂಗಪಟ್ಟಣ ಕಾವೇರಿ, ಬಂಡೆ ಇವು ನನ್ನ ನೆನಹಿನ ತೆರೆಯನ್ನು ಓಸರಿಸಿಬಿಟ್ಟವು. ಪತ್ರ ಉದ್ದವಾಗಿ ಬಿಡುವುದು, ಆದ್ದರಿಂದ ಮತ್ತೊಮ್ಮೆ ಅವೆಲ್ಲವನ್ನು ಹಿಡಿತದಲ್ಲಿಟ್ಟು ಬರೆಯುವನು.

ಇತಿ ನಿನ್ನವನೇ.
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...