Home / ಕವನ / ಕವಿತೆ / ರಸ ಸರಸ್ವತಿ

ರಸ ಸರಸ್ವತಿ

     ೧
ಭವದ ಮೇಲಿಂದೆದ್ದು ಭಾವದೊಳು ಸಂಚರಿಸಿ
ನುಡಿನುಡಿಯ ಕೇಂದ್ರದೊಳು ರೂಪುಗೂಡಿ
ಅಕ್ಷಾಕ್ಷದಸ್ಪಷ್ಟಸೃಷ್ಟಿ ವಿಸ್ಫುಟವಾಗಿ
ಪ್ರತ್ಯಕ್ಷವಾಯಿತೆನೆ ಮಾಯೆ ಹೂಡಿ
ಈ ಲೋಕದಾಲೋಕ ಬೇರೆ ಲೋಕದದೆನ್ನೆ
ಸಕಲ ಸದ್ಯೋಜಾತವಾದುದೆನ್ನೆ
ಕಾಲದುಪಹತಿಶಮಿಸಿ ನವ್ಯವೆನಿಸಿ
ಭೌತ ಋತದಿಂ ರಸದ ಋತಕೆ ಸಲಿಸಿ
ನಿಯತಿಕೃತಿಗೀತೆರದಿ ನರನಾತ್ಮರಸಮಧುರ-
ಪರಿಕರ್ಮವನುಗೊಳಿಸಿ ಬಗೆಯ ಕೊಳುವ
ಕವಿಮರ್ಮವೇ ನಿನ್ನ ಏವೊಗಳುವ!
ನಿರ್ಜೀವದಿಂ ಜೀವದಚ್ಚರಿಯಿದೊಗೆದಂತೆ
ಜೀವದಿಂದೊಗೆತರುವ ರಸದಚ್ಚರೀ,
ಕಾಲದೇಶವ ರಚಿಪ ಭೂತಾತ್ಮಯೋಗದಿಂ-
ದುದಿಸಿಯೂ ಹೊರತವಕೆ ನೀ ನಚ್ಚರಿ.
ನಡೆವೆಡೆಗೆ ನಡೆತರುವ ರವಿಯ ತೆರ ರಾಮಾದಿ
ಮರ್ತ್ಯರೆಮ್ಮನು ಜನ್ಮಜನ್ಮದೊಳಗೆ
ಅದ್ಯಬಂಧುಗಳಂತೆ ಸಮ್ಮುಖದೊಳಿರುವ ತೆರ
ಮರ್ತ್ಯತೆಯ ತೊಡೆವೆ ಹೃನ್ನಭದಿ ತೊಳಗೆ.
ಕರ್ಮಸಾಕ್ಷಿಯದೆಂದೊ ಜೀವನಿಧಿಯಿಂದೆತ್ತಿ
ಸುರಿಸಿದನುಭವರಸದ ಹನಿಯ ಕೊಂಡು
ಜೀವವಾತ್ಮವ ತಳೆವ ನೋವನುಂಡು
ಹದುಳವನು ಗಳಿಸೆ ಕವಿ ಹೃದಯರಸಲೇಪದಿಂ
ಹದಗೊಳಿಪ ಹವಣಾದ ಕಾಂತಿಯಿಂದ
ಕಾಣೆ ಶಿವಶಿವಮೆಂಬ ಲೇಸಿನಿಂದ
ಕ್ಷಣದ ಚಿಚ್ಚಲಕಾಂತಿ ನಿತ್ಯಚಲವಾದುದೆನೆ
ಚಿತ್ತಚಿತ್ತವ ರಮಿಸಿ ಹೊಳೆವೆ ರಸದನ್ನೇ,
ಹೊಸ ಬೆಳಕನೇ ಲೋಕಕೆರೆದು ಕವಿಕನ್ನೇ.
ಪರಿಗಣನ ಮೌಲ್ಯದೀ ವಿಜ್ಞಾನಲೋಕದಿಂ
ಗುಣಮೌಲ್ಯದೊಳಜಗವ ನಿರ್ಮಿಸುವ ತಾಯೆ
ಮೃಣ್ಮಯಪ್ರಕೃತಿಯಿಂ ಮನೋವಿಕೃತಿಯ ರಚಿಸು-
ತಾತ್ಮವಿಸ್ತಾರವನು ಕಲ್ಪಿಸುವ ಮಾಯೆ,
ಮರವೆಂದು ಮಲೆಯೆಂದು ಕೊನೆಯೆಂದು ದರಿಯೆಂದು
ಕಾನೆಂದು ಬಾನೆಂದು ಹೊರಗ ತೋರಿ
ಪದ ಸಹಜಶಕ್ತಿಯಿಂದಿಂದ್ರಿಯಾರ್ಥವ ಬೆಳಗೆ
ಬೆಳಗುವರ್ಥಗಳೆಲ್ಲ ಬಗೆಯ ತೋರಿ
ಮೂರ್ತದಿಂದಲಮೂರ್ತ ಛಂದದಿಂ ಸ್ವಾಚ್ಛಂದ್ಯ
ವೃತ್ತಿಯಿಂ ನಿರ್‌ವೃತಿಯು ದೊರೆಯುವಂತೆ
ಅರ್ಥದೊಳು ರಮಿಸಿಯೂ ವಿರಮಿಸದ ತೆರದೊಳಗೆ
ಭಾವಸಾರಥ್ಯದೊಳೆ ಚರಿಸುವಂತೆ
ನುಡಿಯ ಬಳಸುವ ನಿನ್ನ ಚದುರೆ ಚದುರು
ಜಗದೊಳಾವೆಡೆಯಿಲ್ಲ ನಿನ್ನ ಸದರು?
ನೀ ಕೊಟ್ಟ ಪದವಿಯೆನೆ ನಿನ್ನ ಬಿರುದನು ಹೊತ್ತು
ನಿನ್ನ ಮಹಿಮೆಯ ಮೆರೆವ ಮೈಮೆವೆತ್ತು
ಲೋಕ ನಿರ್ಲಕ್ಷಿಸುವ ಕ್ಷಣದ ಸಂಭೂತಿಗಳು
ಸಕಲ ಶೃಂಗಾರದೊಳು ಹದವನರಿತು
ಅಗ್ರದೊಳು ಗಮಿಸುತಿರೆ ಉಚಿತವರಿತು
ನಾಮರೂಪದ ಲೋಕ ವಿಭ್ರಮಿಸುವಂದ
ಶಬ್ದಾಶ್ವ ಸಂಚಲನೆಗನುವಾಗೆ ಛಂದ
ಕವಿಯಾತ್ಮರಥವೇರಿ ಸಹೃದಯಮನಃಪಥದಿ
ಉತ್ಸವಿಪೆ ಇಹದರಿವ ಸ್ತಬ್ಧಗೊಳಿಸಿ,
ಸ್ವಪ್ನವೆನೆ ಜಾಗರವ ಚಕಿತಗೊಳಿಸಿ.
ರಸಸರಸ್ವತಿ, ದೇವಿ, ಕವಿಯಿಷ್ಟಸ್ವಪ್ನವೇ,
ಕವಿಯ ಹೃತ್ಕುಹರದಿಂ ರಸಿಕಜನ ಹೊರತೆಗೆವ ಭವರತ್ನವೇ,
ಒಳಹೊರಗ ಬೆರೆಸಿ ದಿಗ್‌ಭ್ರಮೆಗೊಳಿಸುವಪ್ಸರೇ,
ಇಂದ್ರಿಯಮನೋಬುದ್ಧಿ ಧೃತಸತ್ಯಮತ್ಸರೇ,
ಈರೇಳು ಲೋಕಗಳ ಈ ಲೋಕದಿಂದೆತ್ತಿ ಪದಗೊಂಡ ವಿಕ್ರಮೇ,
ತುಳಿಯುವೆಡೆ ಚೆಲುಚೆಲುವ ಕೊನರಿಸುತ ಜಗಮೊಲವ ಕೊಳುವ
ಹೃದಯಂಗಮೇ,
ವಿಟ, ವೇಶ್ಯೆ, ಜೂಜಾಳಿ, ಕಳ್ಳ, ಲಂಪಟ, ಕುಡುಕ-
ಕುಲಟಿ, ಪಾದರಿ, ಸುಳ್ಳಿ, ಧೂರ್ತ, ವಂಚಕ, ಕಡುಕ.-
ಹೆಸರಿಸುವುದೇನೆಲ್ಲ ಧರ್ಮಜ್ಞ ಧಿಕ್ಕೃತರ ಪತಿಕರಿಪ ತೆರದೆ
ಸಹೃದಯಾನಂದದೊಳು ನಿಷ್ಕೃತಿಯ ವರವೀವ ವರದೆ,
ಇರವಿಗೀತೆರನೆಂಬ ನೈತಿಕರ ನಗುವ ಸರಸೇ,
ಭೂಮವೇ ಸುಖವೆಂಬ ಕ್ಷುದ್ರವಿರಸೇ,
ಅನುಭವಗಳಿಂಗಡಲಿನಡಿಗಡಿಗೆ ದೇದೀಪ್ಯ ಸೃಷ್ಟಿಗಳ ಸೃಷ್ಟಿಸುವ ಚೆನ್ನೆ
ದೇವದಾನವದುಗ್ಧ ದುಗ್ಧಾಬ್ಧಿಯಿಂ ದಿವ್ಯವಸ್ತೂದಯಗಳಿನ್ನು
ತೀರಿಲ್ಲವೆನ್ನೆ,
ಭೌತಧರ್ಮಕೆ ಭಾವಧರ್ಮಗಳ ಹೊಂದಿಸುತ ಸೌಂದರ್ಯಶಿವವನೀ
ತಿರೆಗೆರೆವ ಭದ್ರೆ,
ಕವಿವತ್ಸವ್ಯಾಜದಿಂ ನಲವಿನಮೃತವ ಕರೆದು ಸಕಲರಾತ್ಮವ
ಪೊರೆವ ಸರ್ವಾರ್ದ್ರೇ,
ಗಂಗೆಯೆನೆ ಯಮುಸೆಯೆನೆ ಗೋದೆ ಕಾವೇರಿಯೆನೆ
ದಿವ್ಯ ಹಿಮಗಿರಿಯೆನ್ನೆ, ಕಾಶಿಯೆನೆ ಕಾಂಚಿಯೆನೆ
ಬಗೆಯಮಂಗಳ ಹಿಂಗೆ
ಕಮ್ಮಿದಲರಂತಿರವು ಹೊಂಗನಸಿನಿಂ ಹೊಂಗೆ
ಹೊಳೆಹೊಳೆಗು ಮಲೆಮಲೆಗು ಊರೂರಿಗೂ ಪ್ರೇಮ-
ರುಚಿಯಿತ್ತು ನಾಡಸೌಭಾಗ್ಯವನು ಕಲ್ಪಿಸುವ ವಾಣಿ,
ನೆನೆದೊಡನೆ ಮನದೆಲ್ಲ ಕಾರ್ಪಣ್ಯಗಳ ಹಿಂಗಿಸುವ ಕಲ್ಯಾಣಿ,
ಇರವಿನಾಂತರವಿಶ್ವದಾದಿಮಧ್ಯಾಂತಗಳನಾಳುತಿಹ ಪ್ರಕೃತಿ,
ಇಹವನಾಡಿಸುತಿರುವ ವಿಶ್ವಾತ್ಮನನೋಂಕೃತಿ,
ಭವಶರಧಿವೇಲೆ,
ನಿನ್ನ ನಾನೆರೆವೆನೌ, ಆಗೆನ್ನ ನಿರ್‌ವೃತಿಗೆ, ದೇವಿ, ಅನುಕೂಲೆ.
ತ್ಯಕ್ತನೆನಿಸದೆ ನನ್ನ ನಿನ್ನಂಕಕೆತ್ತು,
ಯೋಗಿಯೆನಲೆನಗಾಗೆ ಮುದದ ಮತ್ತು.
ಮರದೊಳೆಲೆಯಾಡುತಿರೆ ತೆರೆ ಕೆರೆಯೊಳೋಡುತಿರೆ
ಮುಸುಡನೆತ್ತಿಹ ಮಲೆಯ ಕೋಡಕರುವನು ತಣಿಸೆ
ಮೋಡ ಮೊಲೆಯೂಡುತಿರೆ
ಹಚ್ಚ ಹಸುರಿನ ಮೇಲೆ ಬಿಸಿಲೊರಗಿ ಪವಡಿಸಲು
ಒಳಕಿರಣದಿಂ ಮಂಜುಹನಿ ಮಣಿಯ ಹುರುಡಿಸಲು
ಎಲರಲೆಯ
ಹೊಳೆಹರಿಯೆ
ಖಗದಿಂಚರಂ ಜೀವದುಚ್ಛೃತಿಯ ಸವಿಯೊರೆಯೆ
ಎಳೆಯರೆಳನಗೆಯಿಂದೆ ಮುದುನಗೆಯು ಚಿಗುರಿಡೆ
ತರುಣತರುಣಿಯರೊಲುಮೆಗಿಳೆಯೆಲ್ಲ ಹೊಗರಿಡೆ
ತಿರೆಯಹುಡಿ ರವಿಯೊಡನೆ ಕೆಳೆಬಿಳಸಿ ಸುತ್ತ ನಿರ್ವಿಷಯಕ್ಕೆ
ನೀಡುತಿರೆ ಶ್ಯಾಮರಸರಾಗದಾನ
ನಗರೋಪನಗರಗಳ ಯಂತ್ರಾಟ್ಟಹಾಸಗಳ ಗರವಕೊಳುತಿರೆ
ನೀಲಮೌನ
ಹರಿಪದದ ಗಂಗೆಯೊಲು ಜಗದ್ಧಾತ್ರಿಯ ಕರುಣೆ
ಎದೆಯಮೊಗಕೊರಲಕೈತೆಕ್ಕೆಯೊಳು ಮಲಗಿರುವ
ತಿರುಪೆಮಕ್ಕಳ ಸ್ವಾಪಸುಖದೊಳಗೆ ಹರಿಯುತಿರೆ
ಕೋಗಿಲೆಯ ನಿಡುಸರಕೆ ಬಾನು ಕದ ತೆರೆಯುತಿರೆ
ರವಿತೋರಿದೀ ಭವವ ಮರೆಸಿ ನಿಶೆಯೈತರೆ
ಅಪ್ಸರೋಂತಃಪುರದ ಕಿಟಿಕಿಯರೆತೆರೆದುದೆನೆ ತೋರಿಬರಲೆಳವೆರೆ
ತನ್ನ ನಲ್ಲನನೆನ್ನ ಹೃದಯದೊಳು ಹುಡುಕುವೊಲು
ತುಡಿವ ಹೊಳಪಿನ ನೋಟವೆರೆಯುತಿರೆ ಕಿರುತಾರೆ
ಜಗದರಿವ ಮಾಗಿಸುವ ಜಗದೀಶ್ವರನ ರತಿಯ
ಬಗೆಗೆ ತರುವಂದದೊಳು ಮುಗ್ಧರುಲಿವ ಸ್ತೋತ್ರ
ಬುದ್ಧಿ ತರ್ಕದ ಹೆಡೆಯ ಮುಚ್ಚುವೊಲು ಕಿವಿ ಸಾರೆ
ಕಾಣದುದ ಕಾಣಿಸುವ ಮಧುರಸ್ವರಲಹರಿಯೊಳು
ಪುರುಷೋತ್ತಮಂ ಮೂಡೆ
ಎಡೆಯೊಪ್ಪಿತಕೆ ಮತಿಯ ಹಸ್ತಾವಲಂಬದೊಲು
ಮೊಳಗುವ ಮೃದಂಗದೊಳಗಗಜಾಧವಂ ಕೂಡೆ
ಕವಿಸೂಕ್ತಿಯೊಳು ನಿನ್ನ ದರ್ಶನಂ ಸಂಗಡಿಸೆ
ಸಚ್ಚಿತ್ತಮಧುಪಾನವೆದೆವಿಷಾದವ ಕೆಡಿಸೆ,
ಅಲ್ಲೆನಿಲ್ಲೆಂದಿಹದ ವ್ಯಾಪಾರವನು ನಿಲಿಸಿ
ಅರಿಷಟ್ಕ ಸಮೆದ ಸೆರೆಯಿಂ ಮದನ ಬಿಡಿಸಿ
ಕರಣಕಾತ್ಮನೆ ವಿಷಯವಾದುದೆನೆ ಕಂಡಕಂಡೆಡೆಯಲ್ಲಿ ಚೆಲುವನಿರಿಸಿ
ಇಂದುವರೆಗೆನ್ನನೀನಮೃತಕರದಿಂದೆತ್ತಿ ಪೊರೆದ ತೆರದಿ
ಭವವನರಿತದ ಮೀರಿ ನಿಲುವ ರಸಪದಕೆನ್ನ ಸಲಿಸು ಜವದಿ.
ನಿನ್ನ ದಯೆಯಿಂದೆನ್ನ ಮನಕಾಗಲೌ, ದೇವಿ
ಸತ್ಯಶಿವಸಂಜನಿತಸೌಂದರಮುದಾಗಮಂ
ನೀನೆಯುತ್ಸವಿಪಂತೆ ಪದಪದದಿ ನಡೆಯಲೌ
ವಸ್ತ್ವಾತ್ಮಮಧುರಸಮ್ಮಿಳನೋತ್ಸವಾಗಮಂ
ಜಗದಾತ್ಮ ಬಿತ್ತರಿಸಲೌ ನಮ್ಮ ಕವಿಜನದ ಸೂಕ್ತಿಯಿಂದ
ನಿನ್ನ ಮರ್ಮವನರಿತ ಮೌಲ್ಯಜ್ಞ ಸಹೃದಯಾಸಕ್ತಿಯಿಂದ.
*****
Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...