
೧
ಬಂದನು ಅಗೊ ಹೃನ್-
ಮಂದಿರದಲಿ ಇಗೊ
ನಿಂದನು ನನ್ನಯ ರಾಮಾ
ಇನ್ನು
ಎಂದಿಗೂ ಜನುಮಕೆ ಕ್ಷೇಮಾ!
೨
ಮನವೇ ಗರ್ಜಿಸು
ತನುವೇ ಗರ್ಜಿಸು
ಸ್ನೇಹಸಿಂಧುವಿನ ನಾಮಾ!
ನನ್ನಾ
ಧರ್ಮಬಂಧುವಿನ ನಾಮಾ!
೩
ಎನಿತು ಮಧುರವೋ
ಇನಿಯನ ನಾಮಾ|
ರಾಮಚಂದಿರನ ನಾಮಾ
ಘನ್ನಾ
ಪ್ರೇಮಸುಂದರನ ನಾಮಾ|
೪
ಕೂಡಿದೆನೀಗಲೆ
ಹಾಡುವೆನೀಗಲೆ
ಉಳುಹಿತು ಸಲುಹಿತು ಇಂದೇ
ಚೆನ್ನಾ
ಶ್ರೀರಾಮನಾಮವೊಂದೇ!
೫
ದೊರೆಯಿಂದಭಯವು
ದೊರೆಯಿತು ಇಂದೇ!
ಉದಯದ ಈ ರಾಗವನು
ಹಾಡುವೆ
ಅಭಯದ ಈ ಯೋಗವನು!
*****
















