ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ಸಹ ಒದ್ದೆ ಮುದ್ದೆಯಾಗಿತ್ತು ಅಂದರೆ ಮಳೆಯ ಹೊಡೆತ ಎಷ್ಟಿರಬೇಕು!
ಹೀಗೆ ಮಳೆ ಬರುತ್ತದೆ ಎಂದು ತಿಳಿದಿದ್ದರೆ, ನಾನು ಮನೆ ಬಿಟ್ಟು ಹೊರಡುತ್ತಲೇ ಇರಲಿಲ್ಲ. ಕನ್ನಂಬಾಡಿಯಲ್ಲಿ ಪ್ರವಾಹ ನೋಡಲು ಹೋಗಿದ್ದವನು, ಬರುವಾಗ ಆ ಶನಿ ಮಳೆಯಲ್ಲಿ ಸಿಕ್ಕಿಹೋಗಿ ಬಹಳ ಅವಸ್ಥೆ ಪಟ್ಟು ಹೋಗಿಬಿಟ್ಟೆ. ಇನ್ನೊಂದು ಒಂದು ಫರ್ಲಾಂಗು ಕಳೆದರೆ ಬಳಗೊಳ ಸ್ಟೇಷನ್ನು ಸಿಕ್ಕ ಬೇಕು ; ಬೇಗ ಬೇಗ ಬರುತ್ತಿದ್ದೆ.
ಪಕ್ಕದಲ್ಲಿ “ನನ್ನೊಡೆಯಾ!” ಎಂದ ಹಾಗಾಯಿತು.
ತಿರುಗಿ ನೋಡಿದೆ. ಬದಿಯಲ್ಲಿ ಒಂದು ಮೊರಿ . . . ಅದರ ತುಂಬ ತುಂಬಿ ಮೇಲೆ ಹರಿಯುತ್ತಿದೆ ನೀರು … ಕನ್ನಂಬಾಡಿಯ ಪ್ರವಾಹದಂತೆಯೇ ಜೋರಾಗಿ . . . ಅದರ ಬಳಿ ರಸ್ತೆಯ ಪಕ್ಕದಲ್ಲಿ ಹಳ್ಳಿಯವನೊಬ್ಬ … ಕಟ್ಟಿದ್ದ ಲಂಗೋಟಿ ವಿನಾ ತೀರ ಬೆತ್ತಲೆ. ನಡುನಡುಗುತ, ಕುಗ್ಗಿದ ದನಿಯಿಂದ ‘ಬುದ್ದೀ’ ಎಂದ.
“ಏನಯ್ಯಾ?”
“ಬುದ್ದಿ! ಕನ್ನಂಬಾಡಿಯಲ್ಲಿ ನೀರು ನೋಡುವ ಅಂತ ಬಗ್ಗಿದೆ ಬುದ್ದೀ… ಹೊದ್ದಿದ್ದ ಕರಿಯ ಕಂಬಳಿ ಕೊಚ್ಚಿ ಕೊಂಡು ಹೋಯಿತು ಬುದ್ದೀ… ಛಳಿ ಆಗ್ತಿದೆ… ಟೇಸನ್ಗೆ ಹೋಗುವ ಎಂದರೆ ನಾಚಿಕೆ ಆಗುತ್ತೆ… ಊರು ಸೇರಬೇಕಲ್ಲಾ ಬುದ್ದಿ…”
“ಅದಕ್ಕೆ ನಾನು ಏನು ಮಾಡಬೇಕಯ್ಯಾ? ಕನ್ನಂಬಾಡಿಯಲ್ಲಿ ಕರಿಯ ಕಂಬಳಿ ಕಳೆದುಕೊಂಡು, ಬಳಗೊಳದಲ್ಲಿ ಬಾಯಿಬಡಿದುಕೊಂಡರೆ ಏನಾದ ಹಾಗಾಯಿತು?”
ಆ ಹಳ್ಳಿಯವನು ನನ್ನ ಜಮಖಾನೆಯ ಕಡೆ ನೋಡಿ “ಏನೋ ಬುದ್ದಿಯವರು ಹಿರಿಮನಸು ಮಾಡಿದರೆ” ಎಂದ.
ಜಮಖಾನೆ ನೋಡಿದೆ. ಮಳೆಯಲ್ಲಿ ನೆನೆದು ಆ ಕೆಂಪುಬಣ್ಣ, ಹಸುರುಬಣ್ಣ ಚೆನ್ನಾಗಿ ಎತ್ತಿ ಕಾಣುತ್ತಿತ್ತು. ಏಕೊ ಕೊಡುವುದಕ್ಕೆ ಮನಸ್ಸು ಬರಲಿಲ್ಲ. ಆದರೂ “ಪಾಪ! ಇವನು ಬರಿಯಬೆತ್ತಲೆ ಇದ್ದಾನಲ್ಲ!” ಎಂದು ಉಟ್ಟಿದ ಎರಡು ಗಾಂಧಿ ಪಂಚೆಗಳಲ್ಲಿ ಒಂದನ್ನು ಬಿಚ್ಚಿ ಕೊಟ್ಟೆ. ಆ ಹಳ್ಳಿಯವನ ಸಂತೋಷ, ಅವನು ನನಗೆ ಅಡ್ಡ ಬಿದ್ದದ್ದು, ಇವುಗಳನ್ನು ಹೇಳತೀರದು.
“ಬಾರಯ್ಯ ಸ್ಟೇಷನ್ನಿಗೆ ; ಊರಿಗೆ ಬೇಕಾದರೆ ಕಳುಹಿಸುತ್ತೇನೆ. ಮೈಸೂರೇನಯ್ಯಾ?” ಎಂದೆ.
ಅವನು ನಮಸ್ಕರಿಸುತ್ತಾ “ಹೌದು ಬುದ್ದಿ… ಕ್ಷಮಿಸಿ ಬುದ್ದಿ… ಅರಕ್ಸಣದಾಗೆ ಬಂದುಬಿಡ್ತೀನಿ ಬುದ್ದೀ” ಎಂದು ಹೇಳಿ ಹೊರಟ; ಪೊದೆ ಮರೆಗೆ.
ಮಳೆ ನಿಂತಿತ್ತು. ನನಗೂ ನಡೆದು ಸಾಕಾಗಿತ್ತು. ರೈಲು ಬರಲು ಇನ್ನೂ ಕಾಲವಿದ್ದುದರಿಂದ, ರಸ್ತೆಯ ಪಕ್ಕದ ದೊಡ್ಡ ಅರೆಯೊಂದರ ಮೇಲೆ ಕುಳಿತು, ಹಳ್ಳಿಯವನೂ ಬರಲೆಂದು ಕಾದಿದ್ದೆ.
ಸ್ವಲ್ಪ ಹೊತ್ತಾದ ಮೇಲೆ ಅದೇ ಹಳ್ಳಿಯವನು, ಯಾವುದೋ ಲಾವಣಿ ಹಾಡುತ್ತಾ ಕನ್ನಂಬಾಡಿಯ ಕಡೆಗೆ ಹೊರಟ. ನಾನು ಸ್ಟೇಷನ್ನಿಗೆ ಹೊರಟು ಹೊದೆನೆಂದು ಅವನೆಣಿಸಿರಬೇಕು. ನೋಡಿದರೆ… ನನ್ನ ಪಂಚೆ ಉಟ್ಟಿದ್ದಾನೆ! ಕರಿಯ ಕಂಬಳಿ ಹೊದ್ದಿದ್ದಾನೆ! ನನಗೆ ಏಕೋ ಬಹಳ ರೇಗಿತು.
“ಅಯ್ಯಾ! ಗೌಡ!!” ಎಂದು ಕೂಗಿದೆ.
ಅವನು ಹೋಗುತ್ತಿದ್ದ ಹಾಗೆಯೇ ನಿಂತು, ನನ್ನ ಕಡೆ ತಿರುಗಿ, “ಏನು ನನ್ನೊಡೆಯಾ?” ಎಂದು ಕೈ ಜೋಡಿಸಿ ನಿಂತ, ನಗುತ್ತ ನಿಂತ!
ನನಗೆ ಕೋಪ ಹೆಚ್ಚಿತು. ‘ಏನಯ್ಯಾ? ಗೃಹಸ್ಥ! ಈ ರೀತಿ ಠಕ್ಕು ಹೊಡೆದು ಪಂಚೆ ಕಸಿಯಬೇಕೇನಯ್ಯಾ? … ಇದಕ್ಕಿಂತ ಗತಿಯಿಲ್ಲ ಎಂತ ಕೇಳಿಕೊಳ್ಳಬಾರದೇ?”
“ನಾನು ಏನು ಹೇಳಲಿ ನನ್ನೊಡೆಯಾ! ನೀವು ನನಗೆ ಪಂಚೆ ಕೊಟ್ಟ ಮುಹೂರ್ತ ಬಹಳ ಒಳ್ಳೆಯದು ಬುದ್ದಿ! ಪಂಚೆ ಉಟ್ಟು ಆಚೋರಿ ಹೊರಟರೆ, ಕನ್ನಂಬಾಡಿಯಲ್ಲಿ ಕಳಕೊಂಡ ಕರಿಯ ಕಂಬಳಿ ಈ ಮೋರಿಯಲ್ಲಿ ತೇಲಿಕೊಂಡು ನನ್ನೆಡೆಗೇ ಬರಬೇಕೆ! ನಿಮ್ಮ ಹಸ್ತಗುಣ ಬಹಳ ಚೆಂದಾಗದೆ ಬುದ್ದಿ…!”
ಅವನ ಅರಳಿಸಿದ ಕಣ್ಣುಗಳನ್ನೂ, ಅಂಗ ವಿನ್ಯಾಸಗಳನ್ನೂ ನೋಡುತ್ತಿದ್ದರೆ ನನಗೆ ಸುಮ್ಮನೆ ಮೈ ಯುರಿಯುತ್ತಿತ್ತು-ಈ ಹಳ್ಳಿಯವನಿಗಿಂತ ಹಳ್ಳಿ ಗಮಾರನಾದೆನೇ ನಾನು ಎಂದು.
ಅವನ ಕಡೆ ತಿರುಗಿ, “ಅಲ್ಲವಯ್ಯಾ! ಹಳ್ಳಿಯವರಿಗೆ ಹೇಳುವ ಹಾಗೆ ಹೇಳುತ್ತೀಯಲ್ಲ ಕತೇನ! ಮೋರಿ ಹರಿಯುತ್ತಿರುವುದು ಕನ್ನಂಬಾಡಿ ಕಡೆಗೆ… ನಿನ್ನ ಕಡೆಗೆ ಹೇಗಯ್ಯಾ ತೇಲಿಕೊಂಡು ಬರುತ್ತದೆ ಕಂಬಳಿ? ಹ್ಞಾ?… ಅದೂ ಹೋಗಲಿ ಅಂದರೆ, ಕಂಬಳಿ ಕೊಂಚವಾದರೂ ನೆನೆದಿಲ್ಲ! ಏನಯ್ಯಾ? ಹ್ಞಾ?” ಎಂದು ಕೋಪದಿಂದ ಒದರಿದೆ.
ಅವನು ಬಹಳ ವಿನೀತನಾಗಿ, “ಎಲ್ಲಾ ನನ್ನೊಡೆಯ ಶಿವನ ಮಾಯೆ, ಬುದ್ದಿ! ಅಲ್ಲ, ನಾನು ಕಂಬಳಿ ಹೋಯಿತೆಂದು ಗೋಳಾಡುತಿದ್ದರೆ, ಹೋದ ಕಂಬಳಿ ಹೊದಹಾಗೆಯೇ, ಸ್ವಲ್ಪವೂ ಒದ್ದೆ ಯಾಗದೆ ನನ್ನ ಹತ್ತಿರ ಬರಬೇಕು ಎಂದರೆ, ಅದು ಶಿವನ ಆಟ ಬುದ್ದೀ! ಚಿಗಟನ ಕಣ್ಣೊಳಗೆ ಆನೆ ಹೋಗಿ ಕುಂತರೂ ನಾವು ಆಶ್ಚರ್ಯಪಡಬೇಕಾಗಿಲ್ಲ, ಬುದ್ದಿ! ಆ ಶಿವ ಏನು ಬೇಕಾದರೂ ಮಾಡುತ್ತಾನೆ… ನನಗೆ ಗೊತ್ತು…” ಎಂದು ನಿದಾನವಾಗಿ, ಕಣ್ಣುಗುಡ್ಡೆ ಮೇಲಕ್ಕೆತ್ತಿ, ಕೈ ಆಡಿಸುತ್ತಾ ಎನ್ನುತ್ತಿದ್ದರೆ, ನನಗೆ ಹೇಗೆ ಹೇಗೋ ಆಗುತ್ತಿತ್ತು… ಏನಾದರೆ ತಾನೇ ಏನು?… ಪಂಚೆ ಕೊಟ್ಟದ್ದಾಯಿತು… ಆಳು ನನಗೆ ಮೂರು ಮೂರುವರೆಯಷ್ಟಿದ್ದಾನೆ…
ಇನ್ನು ಮಾತನಾಡಿ ಸುಖವಿಲ್ಲವೆಂದು ವ್ಯಂಗ್ಯವಾಗಿ, “ಅಯ್ಯಾ ! ನಿನಗೆ ಕಂಬಳಿ ಹಿಂದಕ್ಕೆ ಕೊಟ್ಟ ದೇವರಿಗೆ ಹಣ್ಣು ಕಾಯಿ ಮಾಡಿಸು, ತೆಕೊ!” ಎಂದು ಒಂದು ಮೂರುಕಾಸಿನ ಬಿಲ್ಲೆಯನ್ನು ಅಸಡ್ಡೆಯಿಂದ ಅವನ ಕಡೆಗೆ ಎಸೆದೆ.
ಬೆಳ್ಳಿ ಹೊಳೆದಂತಾಯಿತು! ನಾನು ಮೂರು ಕಾಸೆಂದು ಎಸೆದುದು ಎಂಟಾಣೆ ನಾಣ್ಯ!
ಆ ಹಳ್ಳಿಯವನು “ನಿಮ್ಮ ಪಾದಕ್ಕೆ ಅಡ್ಡ ಬಿದ್ದೆ ಬುದ್ದಿ! ನನ್ನ ಮಕ್ಕಳಿಗೂ ನನಗೂ ಮೂರು ದಿನದ ಹಿಟ್ಟು ಸಿಕ್ಕಿತು. ನಿಮ್ಮ ಹೆಂಡರು ಮಕ್ಕಳು ತಣ್ಣಗಿರಲಿ, ಬುದ್ದಿ, ನಾನು ಬರುತ್ತೇನೆ ನನ್ನೊಡೆಯಾ?” ಎಂದು ಹೇಳುತ್ತಾ ಕನ್ನಂಬಾಡಿಯ ಕಡೆ ಹೊರಟ.
ನಾನು “ಸದ್ಯ ನಾನು ಬೆಚ್ಚಗೆ ಆದರೆ ಸಾಕು” ಎಂದುಕೊಳ್ಳುತ್ತಾ, ಒದ್ದೆ ಜಮಖಾನೆಯನ್ನು ಗಟ್ಟಿಯಾಗಿ ಮುದುರಿಕೊಂಡು ಸ್ಟೇಷನ್ನಿಗೆ ಬಂದೆ. ರೈಲೂ ಬಂತು. ರೈಲಿನಲ್ಲಿ ಕುಳಿತು ನಡೆದುದನ್ನೆಲ್ಲಾ ಯೋಚಿಸಿದೆ.
ಹಳ್ಳಿಯವನಿಗೆ ಈ ಚರ್‍ಯೆಯೇ ಏನಾದರೂ ಕಸುಬೆ?… ಅಥವ ಈ ದಿನ ಮಾತ್ರ ಹೊಟ್ಟೆಗಾಗಿ ಹೀಗೆ ಮಾಡಿದನೆ?… ನಾನು ಮೂರು ಕಾಸೆಂದು ಎಸೆದುದು ಎಂಟಾಣೆಯಾದುದೇಕೆ?… ಆ ಹಳ್ಳಿಯವನೆಂದಂತೆ, ಈಗಾದುದೆಲ್ಲವೂ ಭಗವಂತನ ಲೀಲೆಯೋ?…
*****









