ಸೊಸೆ

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು.
ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್ಸಿಗೆ ಸೇರಿ ಮೆಟ್ಟಲು ಮೆಟ್ಟಲಾಗಿ ಪರೀಕ್ಷೆಗಳನ್ನು ಪಾಸು ಮಾಡಿಕೊಂಡು ಬಂದಳು. ಪ್ರಭು ಒಂದೊಂದು ಪರೀಕ್ಷೆಯಲ್ಲೂ ಒಂದು ವರ್‍ಷ, ಎರಡು ವರ್‍ಷ ಎಡವಿ, ಮುಗ್ಗರಿಸಿ, ಬಿದೆದ್ದು ಬಂದ. ಇಬ್ಬರೂ ಕೊನೆಯ ತರಗತಿಯಲ್ಲಿ ಸಹಪಾಠಿಗಳಾದರು. ಇಬ್ಬರಿಗೂ ದೂರದ ಬಳಗ.
ಕ್ಲಾಸಿನಲ್ಲಿ ಕೂತಾಗಲೆಲ್ಲ ಲಲಿತೆಯನ್ನು ಕದ್ದು ನೋಡುವುದೇ ಪ್ರಭುವಿಗೆ ಕೆಲಸ. ನೋಡಿ ನೋಡಿದಷ್ಟೂ ಅವನಿಗೆ ದಣಿವು ದೂರವಾಗುವುದು. ಪ್ರಾಕ್ಟಿಕಲ್‌ ಕ್ಲಾಸಿನಲ್ಲಿ ಇಬ್ಬರೂ ಜೊತೆಯಲ್ಲಿಯೇ ಕೂಡುತ್ತಿದ್ದರು. ಆಗ ಅವನ ಆನಂದಕ್ಕೆ ಮಿತಿಯೇ ಇಲ್ಲ.
ಒಂದು ದಿನ ಪ್ರಾಕ್ಟಿಕಲ್‌ ಕ್ಲಾಸಿನಲ್ಲಿ ಹೀಗೆ ಅವನು ಬಿಚ್ಚು ಗಣ್ಣಿಂದ ನೋಡುತ್ತಿದ್ದಾಗ ಅವಳು ತಲೆಯೆತ್ತಿ ನೋಡಿದಳು; ಪುನಃ ನಾಚಿಕೆಯಿಂದ ತಲೆತಗ್ಗಿಸಿಬಿಟ್ಟಳು. ಪ್ರಭು ತನ್ನನ್ನು ಪ್ರೀತಿಯಿಂದ ಪ್ರೀತಿಸುತ್ತಾನೆಂದು ಈ ಮುಂಚೆ ಅವಳಿಗೆ ಸುಳಿವು ತೋರಿತ್ತು. ಈಗ ಅದು ನಿರ್‍ಧಾರವಾಗಿ ಹೋಯ್ತು. ಆದರೆ ಅವನು ಹಾಗೆ ಪ್ರೀತಿಸುವುದು ತನಗೆ ಧರ್‍ಮವೇ ಎಂದು ಪೃಚ್ಛಿಸಿಕೊಂಡಾಗ ಅವಳೊಂದು ನಿಟ್ಟುಸಿರುಬಿಟ್ಟಳು. ತಾನು ಬಾಳುಕೆಟ್ಟವಳು, ಕುಂಕುಮ ಅಳಿಸಿದವಳು ಬಿಚ್ಚು ತುರುಬಿನವಳು, ವಿಧವೆ! ಗಂಡ ಸತ್ತ ಚಂಡಾಲಿ; ಆಜೀವ ಪರ್‍ಯಂತ ಒಂಟಿಯಾಗಿ, ಒಬ್ಬಂಟಿಯಾಗಿ ಬದುಕಬೇಕಾದ ಪಾಪಿನಿ!
ಅವಳ “ಕಣ್ಣಿ೦ದ ಒಂದು ತೊಟ್ಟು ಹನಿ ಮೇಜದ ಮೇಲಿದ್ದ ಪುಸ್ತಕದ ಮೇಲೆ ತೊಪ್ಪನೆ ಬಿತ್ತು. ಅದನ್ನು ಪ್ರಭು ನೋಡಿದ.
“ಲಲಿತ”
“ಆ?”
“ಅಳುತ್ತೀಯಲ್ಲ?”
“ಇಲ್ಲ.”
ಲಲಿತ ಸೆರಗಿನಿಂದ ಕಣ್ಣೊರಸಿಕೊಂಡಳು. ಪ್ರಭು ಮುಂದೆ ಪ್ರಶ್ನೆ ಮಾಡಲಿಲ್ಲ. ಅವಳು ಏಕೆ ಅತ್ತಳೆಂದು ಅವನಿಗೆ ಸ್ಪಷ್ಟವಾಗಿತ್ತು. ಅಂದು ರಾತ್ರಿಯೆಲ್ಲ ಅವನು ಅವಳ ಬಗೆಯನ್ನು ನೆನೆದು ನೆನೆದು ಚಿಂತಿಸಿದ. ಏನೇನೋ ಗುಣಾಕಾರ ಹಾಕಿದ. ಆ ಕ್ಷಣವೇ ಅವಳನ್ನು ಹಿಡಿದು ಎತ್ತಿ ಕೊಂಡು ಹೋಗಿ ಬೊಂಬಾಯಿ, ಮದರಾಸು, ಡೆಲ್ಲಿ, ಲಂಡನ್‌, ಅಮೆರಿಕಾ, ಜಪಾನ್, ಟಾಸ್ಮೇನಿಯಾ ಎಲ್ಲಾ ಕಡೆಗಳಲ್ಲೂ ಸುತ್ತಿಕೊಂಡು ಬರಬೇಕೆಂದು ತವಕಗೊಂಡ. ಅವಳ ದುಃಖವನ್ನು ಹೇಗಾದರೂ ಮರೆಸಬೇಕು. ಬರಡು ಮರವನ್ನು ಹೇಗಾದರೂ ಚಿಗುರಿಸಬೇಕು. ದುರ್‍ಮಾರ್‍ಗವಾಗಿ ಬೇಡ. ಸತ್ಯ ಸದ್ಧರ್‍ಮವಾಗಿ ಅಷ್ಟ ದಿಕ್ಕುಗಳ ಸಾಕ್ಷಿಯಾಗಿ, ಚಂದ್ರಸೂರ್‍ಯರು, ಹದಿನಾಲ್ಕು ಲೋಕಗಳಲ್ಲಿರುವ ದೇವ ದೇವತೆಗಳ ಸಾಕ್ಷಿಯಾಗಿ, ಅವಳ ಕೈಹಿಡಿದು ಅವಳ ಗೆಲವನ್ನು ಒಲಿಸಬೇಕು ….
ಹೀಗೆ ಏನೇನೋ ಚಿಂತಿಸುತ್ತ ಮಲಗಿದ. ಮರುದಿನ ಕ್ಲಾಸಿನಲ್ಲಿ ಕಂಡಾಗ ಲಲಿತೆಯನ್ನು ಬಾಯಿಬಿಚ್ಚಿ ಕೇಳಿಬಿಡುವುದೆಂದು ನಿರ್‍ಧರಿಸಿ ಕೊಂಡ. ಆದರೆ ಅವಳನ್ನು ಕಂಡ ಕೂಡಲೆ ಹೇಗೆ ಆರಂಭಿಸಬೇಕೆಂದು ಅವನಿಗೆ ತೋರಲೇ ಇಲ್ಲ. ಅವಳು ಕ್ಲಾಸಿಗೆ ಎಂದಿನಂತೆ ಮೌನವಾಗಿ ಬಂದು ಮೌನವಾಗಿ ಹೊರಟುಹೋದಳು. ಪ್ರಭು ಆ ರಾತ್ರಿ ತನ್ನ ಎದೆಯನ್ನೆಲ್ಲ ಬಿಚ್ಚಿ ಕಾಗದದಲ್ಲಿ ಬರೆದಿಟ್ಟು ನಿದ್ದೆಹೋದ.
೦೦೦
“ಪ್ರಭು ಇನ್ನು ಮೇಲೆ ಇಂಥ ಕಾಗದ ಬರೀಬೇಡಿ.”
“ನನ್ನ ಎದೆಯೊಳಗಿಂದ ಬಂದ ಕಾಗದ ಲಲಿತ ಅದು. ಬಾಯಲ್ಲಿ ಹೇಳಹೋದರೆ ಗಂಟಲು ಕಟ್ಟಿಕೊಳ್ಳುತ್ತೆ. ಅಷ್ಟನ್ನು ಹೇಳಲು ಈಗ ಸಾಧ್ಯವೂ ಇಲ್ಲ, ನಿನಗೆ ನನ್ನಲ್ಲಿ ಪ್ರೀತಿ ಇಲ್ಲವಾದರೆ ಹೇಳಿಬಿಡು, ಖಂಡಿತವಾಗಿ ನಿನ್ನ ಗೋಜಿಗೆ ಬರೋಲ್ಲ”
“ಅಯ್ಯೋ ಅದಲ್ಲ ಪ್ರಭು. ಹೆಂಗಸರ ಮನಸ್ಸು ಗಂಡಸರಿಗೆ ಏನು ಗೊತ್ತಾಗುತ್ತೆ ಹೇಳಿ? ವೃಥಾ ಕಾಗದಗಳನ್ನು ಬರೆದು ನನ್ನ ಮನಸ್ಸನ್ನೂ ನೋಯಿಸಿ, ನಿಮ್ಮ ಮನಸ್ಸನ್ನೂ ನೋಯಿಸಿಕೊಳ್ಳುತ್ತೀರಿ ನೋಡಿ.”
“ಅಂದರೆ ನನ್ನ ಮೇಲೆ ನಿನಗೆ”…
“ಮತ್ತೆ ಮತ್ತೆ ಅದನ್ನೇ ಹೇಳುತ್ತೀರಲ್ಲ. ಇನ್ನು ಮೇಲೆ ಹೀಗೆಲ್ಲ ಬರೆಯಬಾರದು, ಅಷ್ಟೆ? ಎನ್ನುತ್ತ ಲಲಿತ ಪುಸ್ತಕಗಳನ್ನು ಜೋಡಿಸಿ ಕೊಂಡು ಹೊರಗೆ ಹೊರಟುಹೋದಳು. ಪ್ರಭುವಿಗೆ ದಿಕ್ಕೇ ತೋರಲಿಲ್ಲ. ತಾನೂ ಪುಸ್ತಕಗಳನ್ನು ಬೈಸಿಕಲ್ಲಿಗೆ ಕಟ್ಟಿ ಸಿಗರೇಟು ಸೇದುತ್ತ ಸಿನಿಮಾಕ್ಕೆ ಹೊರಟ.
ಒಂದೆರಡು ದಿನ ಇಬ್ಬರೂ ಮಾತಾಡಲಿಲ್ಲ. ಒಂದು ಮಧ್ಯಾಹ್ನ ಅವರು ಪ್ಲೇಗು ಹಿಡಿದ ಇಲಿಯನ್ನು ಕುಯಿದು ಭೂತ ಕನ್ನಡಿಯಲ್ಲಿ ಪರೀಕ್ಷಿಸುತ್ತಿದ್ದರು. ಆಗ ಲಲಿತೆ ಪ್ರಭುವನ್ನು ಕಡೆಗಣ್ಣಿಂದ ನೋಡಿದಳು. ಅದನ್ನರಿತ ಪ್ರಭುವಿನ ಮುಖ ಇಷ್ಟಗಲ ಅರಳಿತು. ಮೃದುವಾಗಿ ನಕ್ಕ. ಅವಳೂ ಮುಗುಳು ನಕ್ಕಳು.
“ಲಲಿತ ನನ್ನ ಮೇಲೆ ಕೋಪವೆ?”
“ಇಲ್ಲ.”
“ಮತ್ತೆ, ಇಷ್ಟು ದಿನ ಮಾತೇ ಆಡಿಸಲಿಲ್ಲ?”
“ಏನೆಂತ ಮಾತಾಡಿಸಲಿ?”
ಪ್ರಭು ಉತ್ತರ ಕೊಡಲಾರದೆ ಹೋದ.
“ಹಾಗಾದರೆ ಕೋಪವಿಲ್ಲ ತಾನೇ?” ಎಂದು ಅಗಲವಾಗಿ ನಗುತ್ತ ಕೇಳಿದ.
“ಅಯ್ಯೋ ಸುಮ್ಮನಿರಿ. ಪ್ರೊಫೆಸರ್‌ ಬರ್‍ತಾ ಇದ್ದಾರೆ.” ಎನ್ನುತ್ತ ಲಲಿತ ತನ್ನ ಕೆಲಸಕ್ಕೆ ತೊಡಗಿದಳು. ಪ್ರಭುವೂ ಭೂತ ಕನ್ನಡಿಯನ್ನು ಕಣ್ಣಿಗೆ ಹೊಂದಿಸಿಕೊಳ್ಳುತ್ತ ತಲೆತಗ್ಗಿಸಿದ. ಪ್ರೊಫೆಸರ್‌ ಅತ್ತ ಹೊರಟು ಹೋದ ಮೇಲೆ ಪ್ರಭು ಜೇಬಿಗೆ ಕೈಹಾಕಿ ಭಾರವಾದ ಕವರನ್ನು ತೆಗೆದು ಅಲಿತೆಯ ನೋಟು ಬುಕ್ಕಿನಲ್ಲಿ ಸೇರಿಸಿಟ್ಟ. ಅವಳು ಬಿರುಗಣ್ಣಿಂದ ಪ್ರಭುವನ್ನು ನೋಡಿದಳು.
“ಕ್ಷಮಿಸು ಲಲಿತ. ಬೇಡಾ ಅಂದರೆ ಇನ್ನು ಮೇಲೆ ಕಾಗದವೇ ಬರೆಯೊಲ್ಲ.” ಎನ್ನುತ್ತ ಪ್ರಭು ಸುಮ್ಮನಾದ. ಲಲಿತೆ ತನ್ನ ಕೆಲಸವನ್ನು ಮುಗಿಸಿಕೊಂಡು ಹೊರಗೆ ಬಂದಳು. ಕಾಗದವನ್ನು ತೆರೆದು ಓದಿದಳು. ಓದಿದ ನಂತರ ಮಡಿಯಲ್ಲಿ ಸೆಕ್ಕಿಸಿಕೊಂಡಳು. ರಾತ್ರಿ ಹಾಸಿಗೆಯಲ್ಲಿ ಮಲಗಿಕೊಂಡು ಇನ್ನೊಮ್ಮೆ ಓದಿ ಎದೆಗೆ ಅಪ್ಪಿಕೊಂಡು ಮಲಗಿದಳು. ಮರುದಿನ ಪ್ರಭು ಕೇಳಿದ. “ಲಲಿತ, ಪತ್ರವನ್ನು ಓದಿದೆಯಾ?”
“ಇಲ್ಲ.” ಲಲಿತ ನಗುತ್ತ ಉತ್ತರವಿತ್ತಳು.
“ನನ್ನ ಮನಸ್ಸು ನಿನಗಿನ್ನೂ ಗೊತ್ತಾಗಿಲ್ಲ ಲಲಿತ, ನಿನ್ನದು ಕಲ್ಲೆದೆ”
“ಹೌದು”
“ಹಾಗಾದರೆ ನಾನು ಕಾಗದದಲ್ಲಿ ಕೇಳಿದ ಪ್ರಶ್ನೆಗೆ ಇದೇ ತಾನೇ ಉತ್ತರ?”
“ನಿಮ್ಮ ಪ್ರಶ್ನೆಗೆ ಉತ್ತರವೇ ಇಲ್ಲ ಪ್ರಭು”
“ಅಂದ ಮೇಲೆ ನಿನಗೆ ನನ್ನಲ್ಲಿ…”
“ಅಯ್ಯೋ, ತಿರುಗ ಅದೇ ಮಾತು ಹೇಳುತ್ತೀರಲ್ಲ. ನಿಮ್ಮನ್ನು ಪ್ರೀತಿಸುತ್ತೇನೆಂದು ನಿಮ್ಮನ್ನು ಅಧರ್‍ಮಕ್ಕೆಳೆಯಲೆ?”
“ಬೇಡ ಬೇಡ. ಪ್ರತ್ಯಕ್ಷವಾಗಿ ನಿನ್ನನ್ನು ಮದುವೆ ಆಗುತ್ತೇನೆಂದು ಸಾರಿಸಾರಿ ಹೇಳಿದೆನಲ್ಲ?”
“ಪ್ರಭು, ಸುಮ್ಮನೆ ಹೀಗೇಕೆ ದುಡುಕುತ್ತೀರಿ? ಈ ಭ್ರಾಂತಿ ಬೇಡ. ಚೆನ್ನಾಗಿ ಯೋಚಿಸಿದ್ದೀರಾ? ಇದು ನಿಮಗೆ ಶ್ರೇಯಸ್ಕರವೆ? ನಿಮ್ಮನ್ನು ಮನೆ ಮಂದಿ ಮೆಚ್ಚುತ್ತಾರೆಯೆ? ನಿಮ್ಮ ತಂದೆ ಒಪ್ಪಿದ್ದಾರೆಯೆ? ತಾಯಿ ಒಪ್ಪಿದ್ದಾರೆಯೆ? ಅವರನ್ನು ಕೇಳದೆ ನಿಮ್ಮಷ್ಟಕ್ಕೆ ನೀವು ಹೀಗೆ ಮಾಡೇನು, ಹಾಗೆ ಮಾಡೇನು ಎಂದರೆ ಅಧ್ಯಾಯ ಮುಗಿದುಹೋಯ್ತೇನು?”
“ನೀನು ಒಪ್ಪಿದರೆ ಸಾಲದೆ ಲಲಿತ? ನೀನೇ ನನಗೆ ಶ್ರೇಯಸ್ಸು. ನೀನು ಒಪ್ಪಿದರೆ ಎಲ್ಲರೂ ಒಪ್ಪಿದ ಹಾಗೆ. ತಾಯ್ತಂದೆಗಳ ಮಾತುಬಿಡು. ತಂದೆ ತಾಯಿಯ ನೆಳಲು. ನಾಳೆಯೇ ನಮ್ಮ ತಾಯಿಯ ಕೈಲಿ ಒಪ್ಪಿಗೆ ಪಡೆದು ಮದುವೆ ಮಾಡಿಕೋತೇನೆ ನೋಡು. ತಪ್ಪಿದರೆ ನನಗೆ ಅಡ್ಡ ಹೆಸರಿಡು”
“ದುಡುಕಬೇಡಿ ಪ್ರಭು. ಇದೆಲ್ಲ ಒಂದೆರಡು ನಿಮಿಷದಲ್ಲಿ ಮುಗಿಯುವ ಕೆಲಸವಲ್ಲ. ಪರೀಕ್ಷೆ ಇನ್ನೊಂದು ತಿಂಗಳಿದೆ, ಆದು ಮುಗಿಯಲಿ. ಆ ಮೇಲೆ ನಿಮ್ಮ ತಾಯೀನ ಒಪ್ಪಿಸಿ. ಈಗಾಗಲೇ ಈ ಗೊಂದಲದಲ್ಲಿ ಬಿದ್ದು ಬಿಟ್ಟರೆ ಪರೀಕ್ಷೆ ಕೆಟ್ಟು ಹೋದೀತು.”
“ಆಂತೂ ಅವರೆಲ್ಲರೂ ಒಪ್ಪಿದರೆ ನಿನ್ನ ಅಡ್ಡಿ ಇಲ್ಲಲ್ಲ? ಅದು ಮೊದಲು ಹೇಳು”
“ಅಯ್ಯೋ ಹೋಗಿ, ನಿಮ್ಮ ತಾಯೀನ ಮೊದಲು ಒಪ್ಪಿಸಿ”
೦೦ ೦
ಪರೀಕ್ಷೆಯು ಮುಗಿಯಿತು. ಅದರ ಫಲಿತಾಂಶವೂ ತಿಳಿಯಿತು. ಇಬ್ಬರೂ ಪಾಸಾಗಿದ್ದರು. ಅಷ್ಟರೊಳಗೆ ಪ್ರಭು ತಾಯಿಯೆಡೆ ಅತ್ತೂ ಕರೆದೂ ಹೆದರಿಸಿ ಬೆದರಿಸಿದ್ದ. ಅವರ ತಾಯಿ ಕಮಲಮ್ಮ ಕರ್‍ನಾಟಕ ಸಂಪ್ರದಾಯದವರು.
“ಇಲ್ಲದ ಸಲ್ಲದ ಸಂಬಂಧ ಹೊಸದಾಗಿ ಬೆಳಸಬಾರದೋ ಪ್ರಭು. ತಾಲಿ ಕಿತ್ತ ಹುಡುಗೇರನ್ನು ಮತ್ತೆ ಹಸೇ ಮೇಲೆ ಕೂಡಿಸಬಾರದು ಕಣೋ. ಶ್ರೇಯಸ್ಕರವಲ್ಲವೋ’ ಎಂದು ಬೇಡಿಕೊಂಡರು ಕಮಲಮ್ಮ.
“ನನಗೆ ಶ್ರೇಯಸ್ಸು ಬೇಡ, ಅವಳು ಬರಲಿ ಸಾಕು”
“ಚೆನ್ನಾಯಿತು, ಚೆನ್ನಾಯಿತು! ಅದೇನು ಮಾಟ ಮಾಡಿ ಕಣ್ಣು ಕಟ್ಟಿಬಿಟ್ಟಿದ್ದಾಳೋ ಗೊತ್ತಿಲ್ಲವಲ್ಲ ಆ ಹುಡುಗಿ! ಗಂಡ ಸತ್ತ ರಂಡೇರನ್ನು ಮಾಡಿಕೊಂಡರೆ ಅಲ್ಪಾಯಸ್ಸಂತೆ ಕಣೋಪ್ಪ- ಹೆತ್ತ ತಾಯಿ ಇದನ್ನೆಲ್ಲ ಹೇಳಬಾರದು ನೋಡು”
“ಚಿಂತೆ ಇಲ್ಲಮ್ಮ. ನೀನು ನಾಳೆಯೇ ಸತ್ತುಹೋಗುವಿ” ಅಂತ ಕೂಡ ಹೇಳು, ನನಗೇನೂ ಅಂಜಿಕೆಯಿಲ್ಲ. ಸತ್ತ ಹೆಣಗಳನ್ನು ದಿನ ಬೆಳೆಗೂ ಕೈಯಾರ ಕೊಯ್ದು ಮೂಸಿನೋಡುವ ನನಗೆ ಸಾವಿನಿಂದ ಯಾವ ಭಯವೂ ಇಲ್ಲ. ನಾನು ಸತ್ತುಹೋದೇನೆಂದು ನಿನಗೆ ಭಯವೂ ಬೇಡ. ಇದೋ ನೋಡಮ್ಮ ಲಲಿತೇನೇ ನನಗೆ ಹೆಂಡತಿ. ಅದು ಆಗುವುದಿಲ್ಲವೆಂದರೆ ಒಂದೇ ಮಾತಿನಲ್ಲಿ ಹೇಳಿಬಿಡು. ಈಗಿಂದೀಗಲೇ ಸಂನ್ಯಾಸವನ್ನು ತೆಗೆದುಕೊಂಡು ದೇಶಾಂತರ ಹೊರಟುಹೋಗುತ್ತೇನೆ, ಖಂಡಿತ.”
ಕಮಲಮ್ಮನಿಗೆ ಇದು ಒಳ್ಳೇ ಪೇಚಾಟಕ್ಕಿಟ್ಟುಕೊಂಡಿತು. ತಲೆ ತಲಾಂತರದಿಂದ ಬಂದ ಸಂಪ್ರದಾಯವನ್ನೆಲ್ಲ ಮೂಲೆಗೊತ್ತಿ ಹೀಗೆಲ್ಲ ಹುಚ್ಚುಹುಚ್ಚಾಗಿ ನಡೆಯುತ್ತಾನಲ್ಲ, ಎಂದು ಮಗನ ಮೇಲೆ ಆಕೆಗೆ ಆಗ್ರಹ ಬಂದಿತು. ಅದರೆ ಮಗ ಒಂದೇ ಹಠದಿಂದ ಕೂತಿದ್ದ. ಸಂನ್ಯಾಸಿಯಾಗಿ ಹೊರಟು ಹೋಗುತ್ತೇನೆಂದು ಬೆದರಿಸಿದ್ದ. ಆಕೆಗೆ ಕರುಳು ಚುಚ್ಚಿತು. ಹೇಗಾದರೂ ಮಗನು ನೆಮ್ಮದಿಯಾಗಿರಬೇಕಾದುದು ಆಕೆಯ ಆಕಾಂಕ್ಷೆ. ಯಾವ ಹುಡುಗಿಯನ್ನು ಮದುವೆ ಮಾಡಿಕೊಂಡರೇನಂತೆ? ಎಂದು ತನ್ನಲ್ಲಿ ತಾನೇ ಸಮಾಧಾನಪಟ್ಟು ಕೊಂಡಳು.” ನಿನ್ನಿಷ್ಟ ಬಂದಂತೆ ಮಾಡಿಕೋ ಹೋಗು, ಎಲ್ಲಿಯಾದರೂ ಸುಖವಾಗಿದ್ದರೆ ಸರಿ, ಸಂನ್ಯಾಸಿ ಯಾಗಿ ಮಾತ್ರ ಹೋಗಬೇಡ?” ಎಂದು ಗೊಣಗಿದರು.
ಮದುವೆ ಆಯಿತು. ತೀರ ಹತ್ತಿರದ ಬಳಗದವರಿಗೆ ಹೇಳಿ ಕಳುಹಿಸಿ ಸದ್ದಿಲ್ಲದಂತೆ ಪಶ್ಚಿಮವಾಹಿನಿಯಲ್ಲಿ ಒಂದು ದಿನ ತಾಲಿ ಕಟ್ಟಿ, ಸಪ್ತಪದಿ ನಡೆಸಿದರು. ಅಂದವಾಗಿ ಮುದ್ರಿಸಿದ ಲಗ್ನ ಪತ್ರಿಕೆಗಳು ಮದುವೆಯ ಮಾರನೆಯ ದಿನ ಎಂಟು ದಿಕ್ಕುಗಳಿಗೂ ಹಂಚಿಕೆಯಾಯಿತು.
ಲಲಿತ ಮನೆಗೆ ಬಂದಾಗ ಕಮಲಮ್ಮನಿಗೆ ಮನಸ್ಸಿನಲ್ಲಿಯೇ ಸುರು ಸುರು ಅನ್ನಿಸಿತು. ಕೆಟ್ಟುಹೋದ ಹುಡುಗಿಯನ್ನು ಮನೆಗೆ ಸೇರಿಸಿದೆವಲ್ಲ ಎಂತ ಆಕೆಗೆ ಆಗ್ರಹ ಇನ್ನೂ ಆರಲಿಲ್ಲ.
“ನೀರು ಕಾದಿದೆ ಅತ್ತೆಮ್ಮ, ಮಡಿ ಉಟ್ಟುಕೊಂಡು ಬಂದು ಎಸರಿ ಗಿಡುತ್ತೇನೆ” ಎಂದಳು ಲಲಿತ, ಒಂದು ಬೆಳಿಗ್ಗೆ ಕಾಫಿ ಕುಡಿಯುತ್ತ.
“ಆ” ಎಂದು ಗರ್‍ಜಿಸಿದಳು ಕಮಲಮ್ಮ. ಲಲಿತ ಮುಂದೆ ಮಾತಾಡಲಿಲ್ಲ. ಘರ್‍ಜನೆಯ ಕೋಪವನ್ನೆಲ್ಲ ನುಂಗಿಕೊಂಡ ಮೇಲೆ ಕಮಲಮ್ಮ ಹೇಳಿದಳು. “ನಾನೇ ಮಡಿ ಉಟ್ಟುಕೊಂಡು ಎಸರಿಗಿಟುಕೋತೇನಮ್ಮ. ನೀನು ಇದೋ ಈ ಪಾತ್ರೆಗಳನ್ನೆಲ್ಲ ತೊಳೆದು ಹಿತ್ತಲಿನಲ್ಲಿ ನಲ್ಲಿ ಕೆಳಗೆ ಇಟ್ಟಿರು; ಶುದ್ಧಮಾಡಿ ಒಳಗೆ ತಂದಿಟ್ಟುಕೋತೇನೆ”
ಹೀಗೆ ಹೇಳುತ್ತ ಕಮಲಮ್ಮ ಕಾಫೀ ಪಾತ್ರೆಗಳನ್ನೂ ಉಪ್ಪಿಟ್ಟಿನ ಬಾಣಲೆಯನ್ನೂ ಹೊರಕ್ಕೆ ಹಾಕಿದರು. ಲಲಿತೆ ಅವುಗಳನ್ನೆತ್ತಿ ನಲ್ಲಿಯ ಕೆಳಗಿಟ್ಟು ಬಂದಳು. ಗಂಡಸರು ಉಪ್ಪಿಟ್ಟು ತಿಂದು ಬಿಟ್ಟಿದ್ದ ಎಂಜಲು ತಟ್ಟೆಗಳನ್ನೆತ್ತಿ ಗೋಮಯ ಹಚ್ಚಿದಳು. ನಡುಮನೆಯಲ್ಲಿ ಕಸ ಬಳಿದು ನಲ್ಲಿಯ ಬಳಿ ಕೂತು ಪಾತ್ರೆ ತಿಕ್ಕಿದಳು. ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ನಚ್ಚಿಲ್ಲದ ಮೊದಲನೆ ಮದುವೆ ಜರುಗದೆ ಹೋಗಿದ್ದರೆ ಈಗ ಅತ್ತೆಮ್ಮ ಅಡಿಗೆ ಮನೆಯಿಂದ ಹೀಗೆ ಹೊರಕ್ಕೆ ದೂಡುತ್ತಿರಲಿಲ್ಲ. ತನ್ನನ್ನು ಶೂದ್ರಳಂತೆ ಭಾವಿಸುತ್ತಿರಲಿಲ್ಲ. ನೆಲೆ ಇಲ್ಲದ ಮೂರು ದಿನದ ಬೆಡಗಿನ ಮದುವೆಯಿಂದ ತನ್ನ ಬಾಳೆಲ್ಲ ಹೇಯವಾಯಿತ್ತು, ತುಚ್ಛವಾಯಿತು.
ಲಲಿತೆ ಮುಸುರೆಯ ಕೈಯನ್ನು ತೊಳೆದುಕೊಂಡು ಸೆರಗಿನ ಅಂಚಿ ನಿಂದ ಕಣ್ಣೊರೆಸಿಕೊಂಡಳು. ತನ್ನಷ್ಟಕ್ಕೆ ತಾನೇ ಸಮಾಧಾನಪಟ್ಟುಕೊಂಡಳು. ಅತ್ತೆಮ್ಮ ಏನು ಮಾಡಾರು? ಇದು ಅವರ ಸ್ವಂತ ಆಚಾರವಲ್ಲ, ಲೋಕಾಚಾರ. ಲಲಿತೆ ಪ್ರಭುವಿಗೆ ಮೆಚ್ಚುಗೆಯಾದ ಮಡದಿಯಾಗಿರಬಹುದು. ಪ್ರಪಂಚಕ್ಕೆ ಅವಳು ಹೊಸದಾಗಿ ಕುಂಕುಮವಿಟ್ಟ ಹಳೆಯ ವಿಧವೆ ತಾನೇ? ಸತ್ತ ಹೆಣಕ್ಕೆ ಜೀವ ಬಂದಾಗ ಜನಗಳಿಗೆ ಎಷ್ಟು ಭಯವೂ ಸಂದೇಹವೂ ಉಂಟಾಗುತ್ತೋ, ವಿಧವೆಗೆ ಮದುವೆಯಾದಾಗಲೂ ಜನಗಳಿಗೆ ಅಷ್ಟೇ ಭಯವೂ ಸಂದೇಹವೂ ಉಂಟಾಗುತ್ತೆ. ಮೈಯ ಒಂದೊಂದು ನಾಡಿಯಲ್ಲೂ ತುಂಬಿ ಹರಿಯುತ್ತಿರುವ ಹಳೆಯ ಆಚಾರ ವ್ಯವಹಾರಗಳನ್ನು ಕಿತ್ತೊಗೆಯಬೇಕಾದರೆ ದೇವಸ್ಥಾನವನ್ನು ಕಿತ್ತೊಗೆಯುವಷ್ಟು ಸಂಕಟವಾದ ಕೆಲಸ…
ಲಲಿತೆ ಪಾತ್ರೆಗಳನ್ನು ತಿಕ್ಕಿ ಚೊಕ್ಕಟವಾಗಿ ತೊಳೆದು ನಲ್ಲಿಯ ಕೆಳಗೆ ಒಪ್ಪನಾಗಿ ಇಟ್ಟಳು. ಮನೆಗೆ ಹೋಗಿ ಅಲ್ಲಿ ನೆನೆಸಿಟ್ಟಿದ್ದ ಸೀರೆ ಪಂಚೆಗಳನ್ನೆಲ್ಲ ಒಗೆದಳು. ಆ ಮೇಲೆ ಸ್ನಾನಮಾಡಿ ಮಹಡಿಯ ಮೇಲೆ ತನ್ನ ರೂಮಿಗೆ ಹೋದಳು.
ರಾತ್ರಿ ಗಂಡನಿಗೆ ಎಲೆ ಅಡಿಕೆಯನ್ನು ಮಡಿಸಿಕೊಟ್ಟು ತಾನೂ ಜಗಿದು ಅವನ ಕಾಲೊತ್ತುತ್ತ ಕೂತಳು.
“ಅಹಹ! ಎಷ್ಟು ಸುಖವಾಗಿದೆ ಕಣೆ! ಕಾಲಲ್ಲಿ ಇಷ್ಟು ನೋವಿತ್ತು ಅಂತ ಈಗ ತಾನೇ ಗೊತ್ತಾಗುತ್ತೆ. ಹಲ್ಲಿನ ಕೊಳೆ ತೆಗೆಯುವಾಗ ಅಯ್ಯೋ, ನನ್ನ ಹಲ್ಲಲ್ಲಿ ಇಷ್ಟು ಕೊಳೆ ಇತ್ತೆ ಡಾಕ್ಟರೇ? ಎಂತ ಆಶ್ಚರ್‍ಯಪಡುತ್ತಾರಲ್ಲ, ಹಾಗೆ”
“ಪಾಪ, ಎಷ್ಟು ತಿರುಗುತ್ತೀರಿ ಬೆಳಗಿನಿಂದ.”
“ಹೌದು, ಇಷ್ಟು ವರ್‍ಷ ಮನೇಲಿ ಕೂತಿದ್ದೆನೇನೋ? ರಾಣಿ ಮನೆಗೆ ಬಂದರೆ ಎಲ್ಲಿಯೂ ಇಲ್ಲದ ನೋವೆಲ್ಲ ಬರುತ್ತೆ, ದುಡ್ಡಿನ ಹಿಂದೆ ದುರಭ್ಯಾಸ ಬರುವ ಹಾಗೆ”
“ಛೆ, ನೀವು ಕೇಳಿದಿರೇನು ಕಾಲೊತ್ತು ಅಂತ. ನನಗೆ ನಿದ್ದೆ ಬರಲಿಲ್ಲ, ಒತ್ತುತ್ತೇನೆ. ಬಗಲಿಗೆ ಮಲಗಿ ಬೆನ್ನು ಹಿಸಕೋಣ. ಹಾಗಲ್ಲ ಅಂದ್ರೆ. ಇದೋ ಹೀಗೆ. ನೋಡಿ, ಭುಜಗಳಲ್ಲಿ ಎಷ್ಟು ನೋವಿದೆ ಅಂತೀರಿ?”
“ನನಗೆ ನೊಂದರೆ ನಿನಗೆ ಹೇಗೇ ಗೊತ್ತಾಗುತ್ತೆ? ನಿಜವಾಗೂ ಭುಜಗಳು ನೋವುತ್ತವೆ ಕಣೆ. ಅಬ್ಬ! ಎಷ್ಟು ಹಾಯಾಗಿದೆ ಅಂತೀ? ನಿನ್ನ ಕಟ್ಟಿಕೊಂಡದ್ದು ಸಾರ್‍ಥಕವಾಯಿತೂಂತ ಕಾಣುತ್ತೆ. ಆಂದ ಹಾಗೆ ಅಮ್ಮ ನಿನ್ನನ್ನ ಬೈದಳಂತೆ ಹೌದೇನು!”
“ಇಲ್ವಲ್ಲ ಯಾರು ಹೇಳಿದರು ನಿಮಗೆ?”
“ಅಮ್ಮ ಹೇಳಿದಳು. ನೀನು ಎಸರಿಗಿಡಲೇ ಅಂತ ಕೇಳಿದೆಯಂತೆ. ಅವಳು ಬೇಡಾ ಅಂದಳಂತೆ. ನೀನು ಮುನಿಸಿಕೊಂಡು ಹೊರಟುಹೋದೆಯಂತೆ. ನಾನಿರೋ ತನಕ ದೇವರ ದೀಪ ಹೆಚ್ಚಿಡೋ ಜಾಗದಲ್ಲಿ ಶುದ್ಧವಾಗಿರಲಿ ಕಣೋ ಅಂದಳು ಅಮ್ಮ. ದೇವರಿಗೆ ತೋರಿಸೋ ಅನ್ನ ಮಡಿ ಯಾಗಿರಬೇಕಂತೆ. ಅನ್ನ ಮಾಡೋ ಅಡಿಗೆ ಮನೆ ಮಡಿಯಾಗಿರಬೇಕಂತೆ. ನನಗೇಕೋ ಬೇಜಾರಾಗಿದೆ ಲಲಿತ. ಬೇರೆ ಮನೆ ಮಾಡೋಣವೇನು?”
“ಥು ಎಂಥ ಮಾತು ಹೇಳ್ತೀರಿ ಕಣ್ರಿ? ಬೇರೆ ಮನೆ ನೋಡೋ ಹಾಗೆ ಏನು ಬಂತು ಈಗ! ಅತ್ತೆಮ್ಮ ಹಾಗೇನೂ ನನ್ನ ಬೈಲಿಲ್ಲ. ನಾನು ಮುನಿಸಿಕೊಳ್ಳಲೂ ಇಲ್ಲ. ಅವರವರ ಆಚಾರ, ಭಕ್ತಿ, ಅವರವರಿಗಿರುತ್ತೆ. ಅದನ್ನು ಕೆಡಿಸಿದ ಪಾಪಕ್ಕೆ ನಾವೇಕೆ ಹೋಗಬೇಕು? ಘಂಟೆ ಹನ್ನೊಂದು ಹೊಡೀತು, ಮಲಗಿಕೊಳ್ಳಿ”
ಲಲಿತ ಪ್ರಭುವಿಗೆ ರಗ್ಗು ಹೊದ್ದಿಸಿ ದೀಪವನ್ನಾರಿಸಿ ತಾನೂ ಮಲಗಿದಳು.
“ಹೋಗಲಿ ಬಿಡು. ಒಂದೆರಡು ತಿಂಗಳು ತಾನೇ ಈ ಊರಿನ ಸಹವಾಸ? ಅದುವರೆಗೂ ಹಲ್ಲು ಕಚ್ಚಿಕೊಂಡಿರೋಣ.”
“ನಾನೇನೂ ಕಷ್ಟಪಡುತ್ತಿಲ್ಲಾ ಅಂದ್ರೆ. ಹಲ್ಲು ಕಚ್ಚಿಕೊಳ್ಳೋ ಹಾಗೆ ಕಷ್ಟ ಬಂದರೆ ನಾನೇ ಹೇಳ್ತೇನೆ. ದೊಡ್ಡವರನ್ನು ಅನ್ನಬಾರದು ನೋಡಿ. ಅವರು ದೇವರಿಗೆ ಸಮಾನ?”
“ಹೌದು ಹೌದು, ಸುಮ್ಮನೆ ಹರಟಬೇಡ, ಮಲಗಿಕೋ. ದೊಡ್ಡವರು ಹುಡುಗರನ್ನು ಮಮತೆಯಿಂದ ನೋಡಿಕೊಂಡರೆ ಹುಡುಗರಿಗೂ ದೊಡ್ಡವರಲ್ಲಿ ಭಕ್ತಿ ಹುಟ್ಟುತ್ತೆ. ದಿನ ದಿನಕ್ಕೂ ಹುಡುಗರನ್ನು ಹೀಗೆ ಅವಹೇಳನ ಮಾಡುತ್ತ ಬಂದರೆ….”
“ಸಾಕು ಸುಮ್ಮನಿರಿ. ನಿಮ್ಮಂಥಾ ಗಂಡಸರೇ ಅತ್ತೆಗೂ ಸೊಸೆಗೂ ಜಗಳ ತಂದಿಡೋರು. ನನ್ನನ್ನು ಅವರೇನೂ ಅವಹೇಳನ ಮಾಡಲಿಲ್ಲ”
“ಬಿಡು, ಆ ಮಾತೇಕೆ? ನೀನು ಕೆಲಸಕ್ಕೆ ಎಂದು ಸೇರುತ್ತಿ?”
“ಯಾವ ಕೆಲಸಕ್ಕೆರೀ?”
“ಬೆಳಿಗೆ ಆರ್ಡರ್‌ ಬಂತಲ್ಲ, ಹೆರಿಗೆ ಆಸ್ಪತ್ರೆಗೆ”
“ನನಗೆ ಕೆಲಸ ಬೇಡಾ ಅಂತ ಜವಾಬು ಬರೆದು ಕಳುಹಿಸಿ ಬಿಟ್ಟೆನಲ್ಲ”
“ಏಕೆ?”
“ಕೆಲಸಕ್ಕೆ ಸೇರಿ ಯಾರನ್ನು ಉದ್ದಾರ ಮಾಡಬೇಕಾಗಿದೆ ಹೇಳಿ. ನೀವೊಬ್ಬರು ಸಂಪಾದಿಸುವುದು ಸಾಲದೆ? ನಾನು ಕೆಲಸಕ್ಕೆ ಸೇರಿಕೊಂಡು ನನ್ನನ್ನು ಹರಿಹರಕ್ಕೂ ನಿಮ್ಮನ್ನು ಬೇತಮಂಗಲಕ್ಕೂ ವರ್‍ಗಮಾಡಿಬಿಟ್ಟರೆ ಸಂಸಾರ ಬಹಳ ಅಂದವಾಗಿರುತ್ತೆ ನೋಡಿ”
“ಮತ್ತೆ, ನಿಮ್ಮಪ್ಪ ಇಷ್ಟು ಕಷ್ಟಪಟ್ಟು ಓದಿಸಿದರಲ್ಲ?”
“ನೀವು ಒಲಿದು ಮದುವೆ ಆದಿರಲ್ಲ?”
“ಆದರೂ ನೀನು ಕೆಲಸಕ್ಕೆ ಒಪ್ಪಿಕೋಬೇಕಾಗಿತ್ತು”
“ಏಕೋ ಕಾಣೆ”
“ನೀನೂ ಸ್ವತಂತ್ರಳಾಗಿ ಸಂಪಾದಿಸಿಕೊಂಡು ಜೋರಾಗಿರಬಹುದಾಗಿತ್ತೋ,- ಅತ್ತೆ ಮಾವಂದಿರ ಕಾಟ ಇಲ್ಲದೆ”
“ಸಾಕು ಸುಮ್ಮನಿರಿ. ನನಗೆ ಸ್ವಾತಂತ್ರ್ಯ ದೊರೆತು ಯಾರ ಮನೆ ಉದ್ಧಾರವಾಗಬೇಕು! ಬೆಳಿಗ್ಗೆ ಬೇಗನೆ ಏಳಬೇಕು ಮಲಗಿಕೊಳ್ಳಿ”
ಆರು ತಿಂಗಳ ನಂತರ ಪ್ರಭುವನ್ನು ಚನ್ನಪಟ್ಟಣದ ಆಸ್ಪತ್ರೆಗೆ ಹಾಕಿದರು. ಅಲ್ಲಿ ಲಲಿತೆ-ಪ್ರಭು, ಇಬ್ಬರದೇ ಸಂಸಾರ. ಸ್ವತಂತ್ರವಾಗಿ ಸಂಸಾರ ನಡೆಸಿದೆನಲ್ಲ ಎಂದು ಲಲಿತೆ ಹೆಮ್ಮೆ ಪಡಲಿಲ್ಲ. ಗಂಡನಿಗೆ ಸರಿಯಾಗಿ ವಿದ್ಯಾವಂತಳಾಗಿದ್ದೇನೆಂದು ಅಹಂಕಾರ ಪಡಲಿಲ್ಲ. ಬೆಳಗ್ಗೆ ಗಂಡ ಏಳುವುದಕ್ಕೆ ಮುಂಚೆಯೇ ಎದ್ದು ಅವನ ಕಾಲುಗಳನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡು ತನ್ನ ಕೆಲಸಕ್ಕೆ ಹೋಗುವಳು. ಪ್ರಭು ಏಳುವ ವೇಳೆಗೆ ಕಾಫಿಯನ್ನು ತಯಾರು ಮಾಡುವಳು. ಗಂಡನ ಬಟ್ಟೆಗಳನ್ನು ತಾನೇ ಒಗೆಯುವಳು. ಹಾಸಿಗೆಯನ್ನು ತಾನೇ ಹಾಸುವಳು.
“ಲಲ್ಲೂ, ಹಾಳು ಅಗಸರವನು ಷರ್‍ಟಿನ ಕಾಲರನ್ನು ನೆಟ್ಟಗೆ ಇಸ್ತ್ರಿ ಮಾಡಿಲ್ಲ ಕಣೆ. ಸರಿಯಾಗಿ ನಿಲ್ಲೊಲ್ಲ ನೋಡೆ” ಎನ್ನುತ್ತ ಪ್ರಭು ಕನ್ನಡಿಯ ಮುಂದೆ ನಿಂತು ಟೈಯನ್ನೂ ಕಾಲರನ್ನೂ ಸರಿಮಾಡಿಕೊಳ್ಳುತ್ತಿದ್ದ.
“ಹೌದು ಹೌದು, ಕುಣಿಯಲಾರದ ಸೂಳೆ ಅದೇನೋ ಮಾಡಿದೆಳಂತಲ್ಲ” ಎನ್ನುತ್ತ ಲಲಿತ ಟೀ ತಂದು ಮೇಜದ ಮೇಲಿಟ್ಟಳು. ಟೈ ಗಂಟನ್ನು ನೆಟ್ಟಿಗೆ ನಿಲ್ಲಿಸಿ ಕಾಲರನ್ನು ಸುಕ್ಕಿಲ್ಲದಂತೆ ಸರಿಪಡಿಸಿದಳು. ಪ್ರಭು ಟೀ ಕುಡಿಯುವ ವೇಳೆಗೆ ಅವರ ಅಂಗಿಯನ್ನು ತೆಗೆದು ಬ್ರಷ್‌ ಮಾಡಿ ತೊಡಿಸಿದಳು.
“ನಿನ್ನ ಕೈ ಸೋಕಿದಾಕ್ಷಣ ಉಡುಪಿಗೆ ಕಳೆ ಬರುತ್ತೆ ಕಣೆ. ನಿಮಗೆ ಟೈ ಗಂಟು ಬಹಳ ಚೆನ್ನಾಗಿ ನಿಲ್ಲುತ್ತೆ ಡಾಕ್ಟರ್‌ ಅಂತ ಕ್ಲಬ್ಬಿನಲ್ಲಿ ಬಹಳ ಮಂದಿ ಅಸೂಯೆಪಡ್ತಾರೆ. ಗಂಡಸರಿಗೆಲ್ಲ ನಿನ್ನಂಥ ನಾಣ್ಯದ ಹೆಂಡತಿ ದೊರಕಿದರೆ ಬೇರೆ ಸ್ವರ್‍ಗಕ್ಕೆ ಹೋಗಬೇಕಾಗೇ ಇಲ್ಲ ನೋಡು. ಹ್ಯಾಟು ತೆಕೋ…….. ಅದು ಬೇಡವೇ. ಹಸುರು ಹ್ಯಾಟು ತೆಕೊ. ಹಾಗೇ… ಎಲ್ಲಿ, ಕೈಕೊಡು ಸ್ವಲ್ಪ ….. ನೋಡು ನೋಡು, ಹೊರಟುಬಿಟ್ಟೆಯಲ್ಲ ಆಗಲೇನೇ. ಒಂದು ಮಾತು ಹೇಳ್ತೇನೆ ಹತ್ತಿರ ಬಾ ಮತ್ತೆ.”
“ಹೋಗಿ ಈ ಚಕ್ಕಂದವೆಲ್ಲ ರಾತ್ರಿಗೆ, ಆಸ್ಪತ್ರೆಗೆ ಹೊತ್ತಾಯ್ತು ನೋಡಿ”
೦ ೦ ೦
ಲಲಿತೆ ಪ್ರಭುವನ್ನು ಮೈ ತುಂಬ ಪ್ರೀತಿಸುತ್ತಿದ್ದಳು. ತೆಳುವಾಗಿದ್ದ ಅವನ ಮೈ ದಿನ ದಿನಕ್ಕೆ ಉಬ್ಬಿತು. ಅವನ ಕೀರ್‍ತಿ ಬೆಳಗಿತು. ಅಂತಸ್ತು ಏರಿತು. ಬೆಂಗಳೂರು, ಕೋಲಾರ, ಹಾಸನ, ತರೀಕೆರೆ, ಕೆಂಗೇರಿ, ಶಿವಮೊಗ್ಗ ಇತ್ಯಾದಿ ಸಂಸ್ಥಾನದ ಒಂಭತ್ತು ಜಿಲ್ಲೆಗಳನ್ನು ನವಗ್ರಹಗಳಂತೆ ಸುತ್ತಿಹಾಕಿ ಕಡೆಗೆ ತುಮಕೂರಿಗೆ ಜಿಲ್ಲಾ ಮೆಡಿಕಲ್‌ ಆಫೀಸರಾಗಿ ಬಂದ. ಅವನ ದೊಡ್ಡಸ್ತಿಕೆಯನ್ನು ಗೌರವಿಸಿ ಜಿಲ್ಲಾ ಸ್ಕೌಟು ಕಮಾಷನರಾಗಿ ನೇಮಿಸಿದರು.
ಲಲಿತೆ ಪತಿಯನ್ನು ದೇವರಂತೆ ಪೂಜಿಸುತ್ತಿದ್ದಳು. ದಿನ ಬೆಳಗಾದರೆ ಸ್ನಾನಮಾಡಿ ದೇವರಿಗೆ ದೀಪವನ್ನು ಹೊತ್ತಿಸಿ ಮೂರು ಪಂಗ್ತಿ ರಾಮ ನಾಮವನ್ನು ಬರೆದು ಕೈಮುಗಿದು ಏಳುತ್ತಿದ್ದಳು. ಅವಳದು ಒಂದೇ ಒಂದು ಪ್ರಾರ್ಥನೆ. “ದೇವರೆ, ಅವರನ್ನು ಸದಾ ನೆಮ್ಮದಿಯಾಗಿಟ್ಟಿರಪ್ಪ ಮನೆಯಲ್ಲಿ ಮಕ್ಕಳು ತುಂಬಬೇಕು, ಬ್ಯಾಂಕು ಲೆಕ್ಕದಲ್ಲಿ ದುಡ್ಡು ತುಂಬಬೇಕು ಇತ್ಯಾದಿ ಪ್ರಾರ್‍ಥನೆಗಳು ಮನಸ್ಸಿಗೆ ಬರುವುದೇ ಇಲ್ಲ. ಪ್ರಭು ಒಬ್ಬ ನೆಮ್ಮದಿಯಾಗಿದ್ದರೆ ಸಾಕು. ಅವನೊಬ್ಬನಿದ್ದರೆ ಅವಳಿಗೆ ಎಲ್ಲ ಇದ್ದಂತೆ. ಅವನೇ ಅವಳ ಜೀವ, ಅವಳ ಸರ್‍ವಸ್ವ.
ಆದರೆ ಪ್ರಭು ಲಲಿತೆಯಲ್ಲಿ ಅಂಥ ಅಭಿಮಾನವಿಡಲಿಲ್ಲ. ಅವನು ಮಹತ್ವಾಕಾಂಕ್ಷಿ, ಅಂತಸ್ತು ಏರಿದಂತೆಲ್ಲ ಇನ್ನೂ ಮೇಲೆ ಮೇಲೆ ಹತ್ತಬೇಕೆಂದು ಆಸೆ. ಮೇಲಿಂದ ಮೇಲೆ ಪ್ರಮೋಷನ್ ಸಿಕ್ಕಿದ್ದರೂ ಇನ್ನೂ ಬೇಗನೆ ಸಿಗಲಿಲ್ಲವಲ್ಲ ಎಂದು ಆತುರ. ಕೆಲಸಕ್ಕೆ ಸೇರಿದ ಐದಾರು ವರ್‍ಷಗಳಲ್ಲಿ ಎರಡನೆ ದರ್‍ಜೆ ಅಸಿಸ್ಟೆಂಟು ಸರ್‍ಜನಾಗಿ ಬಂದಿದ್ದ. ತನಗಿಂತ ಮೇಲಿದ್ದ ಎಷ್ಟೋ ಮಂದಿಯನ್ನು ಮೆಟ್ಟಿ ಬಂದಿದ್ದ. ಇನ್ನೂ ಸಾಲದು. ಬೇಗ ಬೇಗ ಮೇಲೆ ಏರಬೇಕು. ಮೊದಲ ದರ್‍ಜೆಯ ಅಸಿಸ್ಟೆಂಟ್‌ ಸರ್‍ಜನಾಗಬೇಕು ; ಸೀನಿಯರ್‌ ಸರ್‍ಜನ್‌ ಆಗಬೇಕು. ಸ್ವಿಚ್‌ ಒತ್ತಿದ ಕೂಡಲೆ ಈ ದೀಪ ಆ ದೀಪ, ಇನ್ನೊಂದು ದೀಪ, ಮನೆಯ ದೀಪಗಳೆಲ್ಲ ಲಗುಬಗೆಯಿಂದ ಹತ್ತಿ ಕೊಳ್ಳುವಂತೆ ಅವನಿಗೆ ಪ್ರಮೋಷನ್ ಲಗುಬಗೆಯಿಂದ ಬಂದು ಬಿಡಬೇಕು.
ಇದು ಅವನ ಆಕಾಂಕ್ಷೆ. ಅವನ ಆಕಾಂಕ್ಷೆಯನ್ನು ನೆರವೇರಿಸಿಕೊಳ್ಳಲು ರೋಹಿಣಿಯ ಸಹವಾಸ ದೊರೆಯಿತು. ಅದು ಲಲಿತೆಗೆ ದ್ರೋಹ ಕರವಾದ ಸಹವಾಸ. ಮಹತ್ವಾಕಾಂಕ್ಷೆ‌ಉಳ್ಳವರಿಗೆ ದ್ರೋಹಾದ್ರೋಹಗಳನ್ನು ಪರ್‍ಯಾಲೋಚಿಸಲು ತಾಳ್ಮೆಯಿರುವುದಿಲ್ಲ. ಧರ್‍ಮವೋ ಅಧರ್‍ಮವೋ ತಮ್ಮ ಕೆಲಸ ಸಾಧಿಸಿದ್ದೊಂದು ಮುಖ್ಯ.
ಆಗ ಪ್ರಭು ಬೆಂಗಳೂರಲ್ಲಿ ಡಾಕ್ಟರಾಗಿದ್ದ. ರೋಹಿಣಿಯ ಮೈ ಪರೀಕ್ಷಿಸಲು ಅವಳ ಮನೆಗೆ ಹೋಗಬೇಕಾಯಿತು. ರೋಹಿಣಿ ಸಂಸ್ಥಾನದ ಭಾರಿ ಅಧಿಕಾರಿಗಳ ಮೂರನೆಯ ಕುಟುಂಬ. ಇಪ್ಪತ್ತು ವಯಸ್ಸು. ಆದಿನ ರೋಹಿಣಿಗೆ ವಿಪರೀತ ಜ್ವರ ಬಂದಿತ್ತು. ಮನೆಯಲ್ಲಿದ್ದವರೆಲ್ಲ ಅವಳ ಆಸೆಯನ್ನು ಬಿಟ್ಟು ಸುತ್ತ ನೆರೆದಿದ್ದರು. ಪ್ರಭು ರಾತ್ರಿ ಹಗಲು ಅವಳ ಬಳಿ ಕೂತು ಇಂಜಕ್ಷನ್‌ ಕೊಟ್ಟ. ಔಷಧಿ ಕುಡಿಸಿದ. ಎರಡು ದಿನಕ್ಕೆ ಹುಡುಗಿಗೆ ಹೋಗಿದ್ದ ಜೀವ ಹಿಂತಿರುಗಿ ಬಂತು.
ರೋಹಿಣಿ ಸಂಪೂರ್‍ಣವಾಗಿ ಗುಣಹೊಂದುವ ತನಕ ಪ್ರಭು ಅವರ ಮನೆಗೆ ದಿನಕ್ಕೆರಡು ಬಾರಿ ಬಂದು ಹೋಗುತ್ತಿದ್ದ. ಆ ಮೇಲೂ ಬಂದು ಹೋಗುತ್ತಿದ್ದ. ಅವಳನ್ನು ಇಲ್ಲಿಂದಲ್ಲಿಗೆ ನಡೆಸಿಕೊಂಡು ಹೋಗಬೇಕು, ಉದ್ಯಾನವನಕ್ಕೆ ಕರೆದುಕೊಂಡು ಹೋಗಬೇಕು, ಉಲ್ಲಾಸವಾದ ಮಾತುಗಳನ್ನಾಡಿಸಿ ಅವಳನ್ನು ಸದಾ ಸಂತೋಷವಾಗಿಟ್ವರಬೇಕು. ಇವಕ್ಕೆಲ್ಲ ಅವರ ಮನೆಯಲ್ಲಿ ಬೇರೆ ನೆಂಟರಿಷ್ಟರಿರಲಿಲ್ಲ.
ಉದ್ಯಾನವನದಲ್ಲಿ ಮಾತನಾಡುತ್ತ ಕೂತಿದ್ದಾಗೆಲ್ಲ ರೋಹಿಣಿಯ ಕಣ್ಣು ಅವನನ್ನು ಸೆಳೆಯುತ್ತಿತು. ಮುಖ ಮೋಹಿಸುತ್ತಿತ್ತು. ಮೈ ಕೋಮಲವಾಗಿತ್ತು.
ರೋಹಿಣಿ ಒಲಿದಳು. ಪ್ರಭು ನಲಿದ. ನಂದೀ ಬೆಟ್ಟ, ಜೋಗು ಜಲಪಾತ, ಬೃಂದಾವನ, ಕೆಮ್ಮಣ್ಣು ಗುಂಡಿ- ಈ ಸ್ಥಳಗಳಲ್ಲಿ ಅವರು ಸ್ವೇಚ್ಛೆಯಾಗಿ ಕುಣಿದಾಡಿದರು. ಆಗ ಪ್ರಭು ಇನ್ನೂ ಸಬ್‌ ಅಸಿಸ್ಟೆಂಟ್‌ ಸರ್‍ಜನಾಗಿದ್ದ. ರೋಹಿಣಿಯ ಪ್ರಯತ್ನದಿಂದ ಅಸಿಸ್ಟೆಂಟ್‌ ಸರ್‍ಜನಾಗಿ ಪ್ರಮೋಷನ್ ಸಿಕ್ಕಿತು. ಕೋಲಾರಕ್ಕೆ ವರ್‍ಗಮಾಡಿದರು.
“ನೀವೇನಪ್ಪ ಈಗ ದೊಡ್ಡ ಮನುಷ್ಯರಾಗಿ ಬಿಟ್ಟಿರಿ. ಇನ್ನು ನಮ್ಮನ್ನೆಲ್ಲ ಕಡೆಗಾಣುತ್ತೀರಿ ತಾನೇ?” ಎಂದು ಕೊಂಕಿನ ದನಿಯಲ್ಲಿ ಕೇಳಿದಳು ರೋಹಿಣಿ.
“ರೋಹಿಣಿ, ಹೀಗೆಲ್ಲ ಗೇಲಿ ಮಾಡಿದರೆ ನಾನು ಸುಮ್ಮನಿರೋಲ್ಲ ನೋಡು. ಎಲ್ಲಿ ಹೀಗೆ ಬಾ” ಎನ್ನುತ್ತ ಅವಳನ್ನು ಹಿಡಿದುಕೊಂಡು ಜೇಬಿನಲ್ಲಿಟ್ಟುಕೊಂಡಿದ್ದ ವಜ್ರದ ಬೆಂಡೋಲೆಗಳನ್ನು ಎರಡು ಕಿವಿಗಳಿಗೂ ಹಾಕಿದ. ರೋಹಿಣಿ ಹತ್ತಿರದಲ್ಲಿದ್ದ ನಿಲುವುಗನ್ನಡಿಯಲ್ಲಿ ನೋಡಿಕೊಂಡು, “ಹ್ಞಾ! ವಜ್ರದ ಬೆಂಡೋಲೆ! ಎನ್ನುತ್ತ ಊರಿನಷ್ಟಗಲ ನಕ್ಕಳು.
“ಹೌದು ವಜ್ರದ ಬೆಂಡೋಲೆ – ಬಡವನ ಬಳುವಳಿ”
ಪ್ರಭು ರೋಹಿಣಿಗೆ ಕೊಟ್ಟ ಬಳುವಳಿ ವಜ್ರದ ಬೆಂಡೋಲೆಯೊಂದಿಗೇ ನಿಂತು ಹೋಗಲಿಲ್ಲ. ಒಳ್ಳೊಳ್ಳೆಯ ಸೀರೆಗಳು, ಭಾರಿ ಕೈ ಗಡಿಯಾರ, ಆರೆಳೆ ಚೈನು, ಕಾರಾಮಣಿ ಸರ, ಶಂಖಿನ ಸರ, ವಜ್ರದ ಹರಳುಗಳನ್ನು ಹೊಂದಿಸಿಟ್ಟ ಬಳೆಗಳು – ಹೀಗೆ ಮೇಲಿಂದ ಮೇಲೆ ಅವಳ ಮೈ ತುಂಬಿಸಿದ. ಎಷ್ಟು ಮಳೆ ಬಿದ್ದರೂ ಸಮುದ್ರವು ಪ್ರೀತಿಯಿಂದ ಸ್ವೀಕರಿಸುವಂತೆ ರೋಹಿಣಿ ಅವುಗಳನ್ನು ಅಕ್ಕರೆಯಿಂದ ಸ್ವೀಕರಿಸಿದಳು. ಪ್ರಭುವಿಗೆ ಬರುತ್ತಿದ್ದ ಸಂಬಳವೂ ವ್ಯಯವಾಗಿ ಅಲ್ಲಿ ಇಲ್ಲಿ ಸಾಲವಾಯಿತು. ಅವನಿಗದು ಲಕ್ಷ್ಯಕ್ಕೆ ಬರಲಿಲ್ಲ. ಇಂದಿಲ್ಲ ನಾಳೆ ಸಂಬಳ ಇನ್ನೂ ಹೆಚ್ಚಾಗುತ್ತೆ. ಸಂಪಾದನೆ ಹೆಚ್ಚಾಗುತ್ತೆ, ಈ ಸಾಲವನ್ನೆಲ್ಲ ತೀರಿಸಿಬಿಡಬಹುದು ಎಂದುಕೊಂಡ. ಸಂಪಾದನೆ ಹೆಚ್ಚಿದಷ್ಟೂ ಖರ್‍ಚು ಹೆಚ್ಚಾಯಿತು. ಅವನು ಕೋಲಾರದಲ್ಲಿರಲಿ, ಶಿನಮೊಗ್ಗೆಯಲ್ಲಿರಲಿ, ತಿಂಗಳಿಗೊಮ್ಮೆ ಬೆಂಗಳೂರಿಗೆ ಹೋಗಿ ಬರಬೇಕು. ರೋಹಿಣಿಗೆ ಏನಾದರೊಂದು ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಕು. ಯಾವುದೂ ಸಿಗಲಿಲ್ಲವೆಂದರೆ ನಲವತ್ತು ರೂಪಾಯಿನಲ್ಲಿ ಒಂದು ಸೀರೆಯನ್ನಾದರೂ ತೆಗೆದುಕೊಂಡು ಹೋಗಬೇಕು.
ಪ್ರಭು ಲಲಿತೆಯನ್ನು ಅಸಡ್ಡೆ ಮಾಡಲಿಲ್ಲ. ಅವಳಿಗೂ ಮೈತುಂಬ ಒಡವೆ ಮಾಡಿಸಿದ್ದ. ತಾನೂ ಅವಳೂ ಓಡಾಡಲು ಚಿಕ್ಕ ಕಾರನ್ನು ಕೊಂಡುಕೊಂಡಿದ್ದ- ಅದು ರೋಹಿಣಿ ಮೆಚ್ಚಿ ಶಿಫಾರಸು ಮಾಡಿದ ಆಡ್ಲರು ಕಾರು.
ತುಮಕೂರಿಗೆ ಬಂದಾಗ ಬ್ಯಾಂಕಿನ ಸಾಲ ಅಟ್ಟಕ್ಕೇರಿತ್ತು. ಬ್ಯಾಂಕಿನಿಂದ ಮೆಲ್ಲ ಮೆಲ್ಲನೆ ಜ್ಞಾಪಕ ಪತ್ರಗಳು ಬಂದುವು. ರೋಹಿಣಿಗೆ ಕೊಟ್ಟು ಕೊಟ್ಟು ಸಾಕಾಗಿತ್ತು. “ಇನ್ನು ಮೇಲೆ ಅವಳ ಸಹವಾಸ ಸಾಕು. ಅವಳ ಬಳಿ ಹೋದರೆ ಖರ್‍ಚು ಹೆಚ್ಚೇ ವಿನಾ ಉಳಿತಾಯವಿಲ್ಲ. ಸಾಲ ತೀರುವೆ ವರಿಗಾದರೂ ಹೋಗದಿರುವುದೇ ಒಳ್ಳೆಯದು” ಎಂದು ತೀರ್‍ಮಾನಿಸಿದ. ಎರಡು ತಿಂಗಳು ಬೆಂಗಳೂರ ಕಡೆ ತಲೆಯಿಟ್ಟು ಸಹ ಮಲಗಲಿಲ್ಲ. ರೋಹಿಣಿಯಿಂದ ಕಾಗದ ಬಂತು. ಒಂದು, ಎರಡೂ ಅವಕ್ಕೆ ಜವಾಬು ಹಾಕಲಿಲ್ಲ. ಮೂರನೆಯ ಬಾರಿ ಅವಳು ಬರೆದಳು ನಿಮ್ಮನ್ನು ಎದುರು ನೋಡಿ ನೋಡಿ ಕಣ್ಣು ಗುಳಿ ಬಿದ್ದು ಹೋಯಿತು. ಈ ಕಾಗದಕ್ಕೂ ನೀವು ಬರದಿದ್ದರೆ ನಾನೇ ತುಮಕೂರಿಗೆ, ಬಂದುಬಿಡುತ್ತೇನೆ. ಸೋಮವಾರದ ತನಕ ನಿಮ್ಮ ನಿರೀಕ್ಷಣೆ”
ಪ್ರಭುವಿಗೆ ಮನಸ್ಸು ಕರಗಿತು. ಇಷ್ಟು ದಿನ ಬೆಳೆಸಿಟ್ಟ ಗೆಳೆತನ ಒಂದೇ ಸಲಕ್ಕೆ ಬಿಡಬಾರದು. ಹೋಗಿ ಬರೋಣ – ಒಂದು ಸಲ ಹೋಗಿ ಬರೋಣ ಅನ್ನಿಸಿತು. ಈ ಸಲ ಉಡುಗೊರೆ ಏನನ್ನೂ ತೆಗೆದುಕೊಂಡು ಹೋಗಲಿಲ್ಲ. ಉಡುಗೊರೆ ತೆಗೆದುಕೊಂಡು ಹೋಗದಿದ್ದರೆ ಅವಳು ಹೀಗೆ ಬರಮಾಡುತ್ತಾಳೋ ಎಂಬ ರೀತಿಯಲ್ಲಿ ಹೋದ.
“ಅಯ್ಯೋ, ನೀವು ಏನನ್ನೂ ತಂದು ಕೊಡಲಿಲ್ಲಾಂತ ನಾನು ಕರುಬುತ್ತೇನೆಯೇ ಹೇಳಿ.” ಎಂದು ಗೋಗರೆದಳು ರೋಹಿಣಿ. “ನೀವೇ ನನಗೆ ದೊಡ್ಡ ಉಡುಗೊರೆ. ನೀವು ಇಷ್ಟು ದಿನ ಬಾರದ್ದಕ್ಕೆ ನನ್ನ ಮನಸ್ಸು ಹೇಗೆ ಹಿಂಡಿಬಿಟ್ಟಿತು ಗೊತ್ತೆ? ಇನ್ನು ಮೇಲೆ ಹಾಗೆ ಮಾಡಬೇಡಿ ಪ್ರಭು. ನನಗೆ ಏನಾದರೂ ತಂದು ಕೊಡಬೇಕಲ್ಲ ಅಂತ ಚಿಂತಿಸಬೇಡಿ. ದೇವರು ನನಗೆ ಬೇಕಾದಷ್ಟು ಕೊಟ್ಟಿದಾನೆ. ನಿಮ್ಮ ಮನಸ್ಸು ಮಾತ್ರ ನನಗೆ ಕೊಟ್ಟು ಬಿಟ್ಟರೆ ಅದೇ ಕೋಟಿ ಸಂಪತ್ತು.”
ಪ್ರಭುವಿಗೆ ರೋಹಿಣಿಯ ಮೇಲಿದ್ದ ರೋಷವೆಲ್ಲ ಇಂಗಿಹೋಯಿತು. ಅವಳನ್ನು ಹಿಡಿದುಕೊಂಡು ಅವಳ ಕಣ್ಣುಗಳನ್ನೇ ದಿಟ್ಟಿಸುತ್ತ ಹೇಳಿದ. ರೋಹಿಣಿ, ರೋಹಿಣಿ, ನಿನ್ನನ್ನು ಏನು ಮಾಡಬೇಕು ಗೊತ್ತೆ?”
೦೦ ೦
ಒಂದು ದಿನ ಬ್ಯಾಂಕಿನ ಸಾಲಕ್ಕೆ ಬಲವಾದ ನೋಟೀಸ್‌ ಬಂದಿತು. ವರ್‍ಷದ ಕೊನೆಯಾದ್ದರಿಂದ ಲೆಕ್ಕವನ್ನು ಕೂಡಲೆ ಮುಗಿಸಬೇಕೆಂದು ತಗಾದೆ ಬಂದಿತು. ನಾಲ್ಕು ಸಾವಿರ ರೂಪಾಯಿ ಸಾಲವನ್ನು ಒಂದು ಸಾವಿರಕ್ಕೆ ಇಳಿಸಿದ್ದ. ಬ್ಯಾಂಕಿನವರಿಗೆ ಏನು ದುರ್‍ಬುದ್ಧಿ ಹುಟ್ಟಿತೋ ಆ ಒಂದು, ಸಾವಿರವನ್ನೂ ಕೂಡಲೇ ತೀರಿಸಬೇಕೆಂದು ಹಠ ಹಿಡಿದಿದ್ದರು. ಪ್ರಭು ತನ್ನ ಕಾರನ್ನು ಮಾರಿ ಸಾಲವನ್ನು ತೀರಿಸಬಹುದಾಗಿತ್ತು. ಲಲಿತೆಯ ಕೈ ಬಳೆಗಳನ್ನೊ ಕೊರಳ ಚೈನನ್ನೋ ತೆಗೆದುಕೊಂಡು ತೊಲಗಿಸ ಬಹುದಾಗಿತ್ತು. ಹೀಗೆ ಮಾಡಿದರೆ ಲಲಿತೆಗೆ ಗೊತ್ತಾಗುತ್ತೆ. ನಾಲ್ಕು ಜನಕ್ಕೆ ಹರಡುತ್ತೆ, ರೋಹಿಣಿಯೊಂದಿಗೆ ಬೆಳಸುತ್ತಿದ್ದ ಸಹವಾಸ ಬಯಲಿಗೆ ಬೀಳುತ್ತೆ, ಎಂದು ಎಣಿಸಿದ. ನಮ್ಮ ಕೆಟ್ಟ ಚಾಳಿಗಳು ಇಂದಿಲ್ಲದಿದ್ದರೆ, ಇನ್ನೆಂದಾದರೊಂದು ದಿನ ಬಯಲಿಗೆ ಬೀಳುತ್ತೆಂದು ಅವನು ಅರಿಯದೆ ಹೋದ. ಸ್ಕೌಟು ಹಣ ಪೋಸ್ಟಾಫೀಸು ಸೇವಿಂಗ್ಸ್‌ ಬ್ಯಾಂಕಿನಲ್ಲಿತ್ತು. ಅದರ ಲೆಕ್ಕ ಪುಸ್ತಕಗಳು ಅವನ ಬಳಿ ಇದ್ದುವು. ಆ ಹಣದಲ್ಲಿ ಏಳು ನೂರು ರೂಪಾಯಿ ತೆಗೆದ. ತನ್ನ ಸಂಬಳ ಇನ್ನೂರ ಐವತ್ತು ರೂಪಾಯಿ ಬಂತು. ಉಳಿದ ಐವತ್ತು ರೂಪಾಯಿ ಹಾಗೂ ಹೀಗೂ ಸರಿಮಾಡಿ ಒಟ್ಟು ಒಂದು ಸಾವಿರ ರೂಪಾಯಿ ಬ್ಯಾಂಕಿಗೆ ಸಲ್ಲಿಸಿ ಕೈ ತೊಳೆದುಕೊಂಡ.
ಮೂರು ನಾಲ್ಕು ತಿಂಗಳಲ್ಲಿ ಸ್ಕೌಟು ಹಣದಿಂದ ಕದ್ದಿದ್ದ ಹಣವನ್ನು ಕಟ್ಟಿ ಬಿಟ್ಟ. ಆದರೆ ಸ್ಕೌಟು ಲೆಕ್ಕಗಳನ್ನು ತನಿಖೆ ಮಾಡಿದಾಗ ಏಳು ನೂರು ರೂಪಾಯಿಗಳನ್ನು ಪ್ರಭು ತನ್ನ ಸ್ವಂತಕ್ಕೆ ನಾಲ್ಕು ತಿಂಗಳು ಕಾಲ ಉಪ ಯೋಗಿಸಿಕೊಂಡನೆಂದು ಆಡಿಟರು ಮೇಲಿನಧಿಕಾರಿಗಳಿಗೆ ತಿಳಿಸಿದರು. ವಿಷಯ ಗಾಢವಾಯಿತು. ದಿವಾನರ ತನಕ ಮುಟ್ಟಿತು. ಅವರು ದಯಾಳುವಾದ್ದರಿಂದ ಪ್ರಭು ತನ್ನ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ ಪಕ್ಷಕ್ಕೆ ಅವನ ಮೇಲೆ ಮುಂದಿನ ನಡೆವಳಿಕೆಗಳನ್ನು ನಿಲ್ಲಿಸಬೇಕೆಂದು ತೀರ್‍ಮಾನಿಸಿದರು.
ಪ್ರಭುವಿಗೆ ಈ ಅಪಮಾನವನ್ನು ಸಹಿಸಲಾಗಲಿಲ್ಲ. ಲಲಿತೆ ಇದು ತಿಳಿದರೆ ಏನೆಂದಾಳು? ತಾಯಿ, ತಂದೆ, ಅತ್ತೆ – ಮಾವ, ಇವರಿಗೆಲ್ಲ ತಿಳಿದರೆ ಏನೆಂದಾರು? ಊರಲ್ಲಿ ಜನಗಳ ಮುಂದೆ ತಲೆ ಎತ್ತುವುದು ತಾನೇ ಹೇಗೆ! ಎಂಬೀ ವಿವಿಧ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಮೊನೆ ಮೊನೆ ಯಾಗಿ ಚುಚ್ಚಿದುವು. ಸರಿ, ಇದನ್ನೆಲ್ಲ ಕೊನೆಗಾಣಿಸಲು ಒಂದೇ ಮಾರ್ಗ – ಒಂದೇ ಒಂದು ಮಾರ್‍ಗ ಎಂದು ನಿಶ್ಚಯಿಸಿದ. ಆಗಲೇ ಲಲಿತೆಗೆ ವಿಶದವಾಗಿ ಕಾಗದವನ್ನು ಬರೆದಿಟ್ಟ. ರೋಹಿಣಿಯೊಂದಿಗೆ ಸಹವಾಸ ಬೆಳೆದುದು, ಆಕೆಗೆ ಒಡವೆ ವಸ್ತುಗಳನ್ನು ತೆಗೆದುಕೊಟ್ಟುದು, ಬ್ಯಾಂಕಿನಲ್ಲಿ ಸಾಲವಾದುದು – ಇವನ್ನೆಲ್ಲ ಚಾಚೂ ತಪ್ಪದೆ, ಮುಚ್ಚಿಡದೆ ಬರೆದು, ಕವರಿನಲ್ಲಿ ಹಾಕಿ ಅಂಟಿಸಿ ವಿಳಾಸವನ್ನು ಬರೆದಿಟ್ಟ. ಕೆಲಸಕ್ಕೆ ರಾಜೀನಾಮೆಯನ್ನೂ ಬರೆದಿಟ್ಟ. ಆ ಕಡೆ ಮೂಲೆಯಲ್ಲಿಟ್ಟದ್ದ ಪಾದರಸದ ಜಾಡಿಯನ್ನು, ಎತ್ತಿ ಹಿಡಿದು ಗಟಗಟನೆ ಕುಡಿದು ಹಾಕಿದ. ಖಾಲಿ ಜಾಡಿಯನ್ನು ಮೇಜ ಮೇಲಿಟ್ಟು ಪ್ರಪಂಚವನ್ನು ನಗುತ್ತ ನೋಡುತ್ತಿದ್ದ. ಆ ಮೇಲೆ ಜ್ಞಾನ ತಪ್ಪಿತು. ಕುರ್ಚಿಯಿಂದ ಕೆಳಗುರುಳಿದ.
ಹೊರಗೆ ಕೂತಿದ್ದ ಜವಾನ ಸದ್ದು ಕೇಳಿ ಓಡಿಬಂದ. ಡಾಕ್ಟರು ಬಿದ್ದಿರುವುದನ್ನು ನೋಡಿ ಗಾಬರಿಯಾಯಿತು. ಬಾಯಿಂದ ಹೊಂಬಣ್ಣದ ಹೊಗೆ ಬರುತ್ತಿತ್ತು. ಓಡಿ ಹೋಗಿ ವಾರ್‍ಡಿನಲ್ಲಿದ್ದ ಡಾಕ್ಟರು ರೇವಣ್ಣ ನವರಿಗೆ ತಿಳಿಸಿದ. ಕಾಂಪೌಂಡರಿಗೆ ತಿಳಿಸಿದ. ಅಲ್ಲಿಂದ ಪ್ರಭುವಿನ ಮನೆಗೆ ಹೋಗಿ ಆತುರದಿಂದ “ಅಮ್ಮಾ, ಅಮ್ಮಾ,” ಎಂದು ಕರೆದ. ಲಲಿತೆ ಆಗ ತಾನೇ ದೇವರ ದೀಪವನ್ನು ಹೊತ್ತಿಸಿಟ್ಟು ರಾಮನಾಮವನ್ನು ಬರೆಯುತ್ತಿದ್ದಳು. ಮೂರು ಪಂಗ್ತಿ ಮುಗಿಸಿಟ್ಟು ಹೊರಗೆ ಬಂದಳು. “ಏನಪ್ಪ?”
“ಡಾಕ್ಟರು ವಿಷ ಕುಡಿದುಬಿಟ್ಟರಮ್ಮ, ಕೆಳಗೆ ಬಿದ್ದಿದ್ದಾರೆ”
“ರೇವಣ್ಣೋರು ಇನ್ನೂ ಬಂದಿಲ್ಲೇನೋ?”
“ಅವರೂ ನೋಡ್ತಿದಾರ್ರಮ್ಮ, ನಿಮಗೆ ತಿಳಿಸೋಣಾಂತ ಬಂದೆ”
“ರಾಮಚಂದ್ರ” ನೀನೇ ಗತಿಯಪ್ಪ! ಎಂದು ಉಸಿರುಗರೆಯುತ್ತ ಲಲಿತೆ ಆಸ್ಪತ್ರೆಗೆ ಓಡಿಬಂದಳು. ಆ ವೇಳೆಗೆ ಪ್ರಭುವನ್ನು ಆಪರೇಷನ್ ಥಿಯೇಟರಿಗೆ ಸಾಗಿಸಿ ಮೇಜಿನ ಮೇಲೆ ಮಲಗಿಸಿದ್ದರು. ಲಲಿತೆ ನಾಡಿಯನ್ನು ಹಿಡಿದು ನೋಡಿದಳು: ಅದು ನಿಂತು ತಣ್ಣಗಾಗಿತ್ತು. ಎದೆಯನ್ನು ತೆರೆದು ಸ್ಪೆತೋಸ್ಕೋಪನ್ನಿಟ್ಟು ನೋಡಿದಳು. ಎದೆಯ ಬಡಿತವು ನಿಂತುಹೋಗಿತ್ತು. ಮೈಶಾಖವು ಸ್ವಲ್ಪ ಸ್ವಲ್ಪ ಇತ್ತು. ಲಲಿತೆ ಮನಸ್ಸಿನಲ್ಲಿ ಏನೇನೋ ಗುಣಿಸುತ್ತಿದ್ದಳು. ಪಾದರಸವನ್ನು ಸಂಹರಿಸುವ ಔಷಧವು ಅವಳ ಜ್ಞಾಪಕಕ್ಕೆ ಬರಲಿಲ್ಲ. ಪಾದರಸವನ್ನು ಹೆಚ್ಚಾಗಿ ಕುಡಿದವರು ಬದುಕಿ ಬಂದಂತೆ ನೆನಪಿಲ್ಲ. ನಿನ್ನೆ ತಾನೇ ಇದಕ್ಕೆ ಹೊಸ ಮಿಶ್ರಣವನ್ನು ಅಮೆರಿಕದಲ್ಲಿ ಯಾರೋ ಡಾಕ್ಟರ್‌ ಕಂಡು ಹಿಡಿದಿದ್ದ ಹಾಗೆ ಪತ್ರಿಕೆಯಲ್ಲಿ ಓದಿದ್ದಳು. ಲಲಿತೆ ಅದನ್ನು ಜ್ಞಾಪಿಸಿಕೊಂಡು ಮನೆಗೆ ಓಡಿದಳು. ಪತ್ರಿಕೆಯನ್ನು ತೆಗೆದುಕೊಂಡು ಬಂದಳು. ರೇವಣ್ಣನವರಿಗೆ ಅದನ್ನು ತೋರಿಸಿ ಇಂಜೆಕ್ಷನ್‌ ಸೂಜಿಗಳನ್ನು ಹೊಂದಿಸಿಟ್ಟುಕೊಳ್ಳುವಂತೆ ಹೇಳಿ ಔಷಧಗಳಿದ್ದ ಮೇಜಿಗೆ ನೆಗೆದು ಹೋದಳು. ಚಟಿವಟಿಕೆಯಿಂದ ಔಷಧಿಯನ್ನು ಕಲೆಸಿ ತಂದಳು. ರೇವಣ್ಣನವರು ಸಿದ್ದವಾಗಿಟ್ಟಿದ್ದ ಇಂಜೆಕ್ಷನ್‌ ಸೂಜಿಯಿಂದ ಔಷಧವನ್ನು ಹೀರಿ ಪ್ರಭುವಿನ ಗಂಟಲು, ಹೊಟ್ಟೆ ಕರುಳುಗಳಲ್ಲಿ ಆಳವಾಗಿ ತೂರಿದಳು.
ಅದು ಹೊಸ ಔಷಧ. ಹೊಸ ತೆರನಾದ ಇಂಜೆಕ್ಷನ್‌. ಲಲಿತೆಗೆ ಅದರಲ್ಲಿ ಸಂಪೂರ್‍ಣವಾದ ಭರವಸೆಯಿರಲಿಲ್ಲ. ಇಂಜೆಕ್ಷನ್‌ ಕೊಟ್ಟು ಐದು ನಿಮಿಷವಾಯ್ತು. ಹತ್ತು ನಿಮಿಷವಾಯ್ತು, ಪ್ರಭುವಿಗೆ ಜ್ಞಾನ ತಿರುಗಲಿಲ್ಲ. ಆಗ ಲಲಿತೆ ಅಲ್ಲಿ ನೆರೆದಿದ್ದ ಕಾಂಪೌಂಡರು, ಹೆಣ್ಣು ಡಾಕ್ಟರು, ನರ್‍ಸುಗಳು, ರೇವಣ್ಣ ನವರು ಎಲ್ಲರನ್ನೂ ಹೊರಕ್ಕೆ ಅಟ್ಟಿಬಿಟ್ಟಳು. ಬಾಗಿಲು ಹಾಕಿ ಗಂಡನ ಬಳಿ ತಾನೊಬ್ಬಳೇ ಕೂತಳು. ಅವನನ್ನು ತೊಡೆಯ ಮೇಲಿಟ್ಟುಕೊಂಡು ಅವನ ಮುಖವನ್ನೇ ನೋಡುತ್ತ ಕೂತಳು. ಮನಸ್ಸಿನಲ್ಲಿ ರಾಮನಾಮನನ್ನು ಜಪಿಸಿದಳು. ಕೈಗಡಿಯಾರದಲ್ಲಿ ಐದು ನಿಮಿಷವಾಯ್ತು, ಹತ್ತು ನಿಮಿಷವಾಯ್ತು, ಅವನಿಗೆ ಪ್ರಜ್ಞೆ ಬರಲಿಲ್ಲ. ಇಪ್ಪತ್ತು ನಿಮಿಷ ಕಾಯುವುದು. ಅದರ ಮೇಲೆಯೂ ಅವನಿಗೆ ಜ್ಞಾನ ಬರದಿದ್ದರೆ ಅವನು ಸಂಪೂರ್‍ಣವಾಗಿ ಸತ್ತುಹೋಗಿ ಬಿಡುವ, ಅವನು ಹೋದ ಮೇಲೆ ತಾನು ಬದುಕಿದ್ದು ತಾನೇ ಏನು ಪ್ರಯೋಜನ? ಯಾರಿಗೆ ಸುಖ? ತಾನೂ ವಿಷ ಕುಡಿದು ಸಾಯುವುದೇ ಲೇಸು.
ಹದಿನೈದು ನಿಮಿಷವಾಯ್ತು, ಹದಿನೆಂಟು, ಹತ್ತೊಂಭತ್ತು, ಇಪ್ಪತ್ತು ನಿಮಿಷಗಳೂ ಮುಗಿದುವು. ಶವ ಅಲುಗಾಡಲಿಲ್ಲ. ನಾಡಿ ಓಡಲಿಲ್ಲ ಮೈ ತಣ್ಣಗೆ ಕೊರೆಯುತ್ತಿತ್ತು. ಲಲಿತೆ, “ರಾಮಚಂದ್ರ! ಸರಿ, ನಿನ್ನ ಸಂಕಲ್ಪದಂತೆ ನಡೆಯಲಿ” ಎಂದು ನಿಟ್ಟುಸಿರುಬಿಡುತ್ತ ಪ್ರಭುವಿನ ತಲೆಯನ್ನು ತೊಡೆಯಿಂದ ಇರಿಸಿ, ಮೇಜಿನಿಂದ ಕೆಳಗಿಳಿದು ಔಷಧಿಗಳಿದ್ದ ಮೇಜಿನ ಬಳಿ ಹೋದಳು. ಗಡುಸಾದ ವಿಷದ ಸೀಸೆಯನ್ನೆತ್ತಿ ಅದರಲ್ಲಿ ವಿಷವೇ ಇದೆಯೆಂದು ಮಂದಟ್ಟು ಮಾಡಿಕೊಳ್ಳಲು ಸೀಸೆಯ ಮೇಲೆ ಅಂಟಿ ಸಿದ್ದ ಚೀಟಿಯನ್ನು ಓದಿಕೊಂಡಳು, ಬಿರುಟಿಯನ್ನು ತೆಗೆದು ಬಾಯ ಹತ್ತಿರ ಹಿಡಿದಳು “ಇರು ಒಂದು ಸಲ ಅವರ ಮುಖ ನೋಡಿ ಬರುತ್ತೇನೆ. ಒಂದೇ ಒಂದು ಸಲ ಅವರ ಕಾಲುಗಳನ್ನು ಕಣ್ಣಿಗೆ ಒತ್ತಿ ಕೊಳ್ಳುತ್ತೇನೆ. ಈ ಜನ್ಮದಲ್ಲಂತೂ ನನ್ನನ್ನು ತ್ಯಜಿಸಿ ಹೋದರು. ಮುಂದಣ ಜನ್ಮದಲ್ಲಾದರೂ ನನಗೆ ಶಾಶ್ವತವಾಗಿ ದೊರೆಯಲಿ” ಎನ್ನುತ್ತ ಸೀಸೆಯನ್ನು ಅಲ್ಲಿಯೇ ಇಟ್ಟು ಗಂಡನ ಬಳಿ ಸಾರಿದಳು. ಮುಖವನ್ನು ಎರಡು ಕೈಗಳಿಂದಲೂ ನೇವರಿಸಿದಳು. ಅವನ ತೆರದ ತುಟಿಗಳಿಗೆ ಕಣ್ಣುಗಳನ್ನು ಕೊಟ್ಟಳು. ಕಾಲುಗಳೆರಡನ್ನೂ ಕಣ್ಣಿಗೆ ಒತ್ತಿ ಕೊಂಡಳು.
ಆ ಮೇಲೆ ಔಷಧದ ಮೇಜಿಗೆ ಪುನಃ ಹೋಗಿ ವಿಷದ ಸೀಸೆಯನ್ನು ತೆಗೆದುಕೊಂಡಳು. ನಿಶ್ಚಲವಾಗಿ ಮಲಗಿದ್ದ ಪ್ರಭುವನ್ನೇ ನೋಡುತ್ತ ಸೀಸೆಯನ್ನು ಬಾಯಿಗೆತ್ತಿ ಹಿಡಿದಳು. ಗಟಗಟನೆ ಕುಡಿದು ಹಾಕಿದಳು.
*****
Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...