Home / ಲೇಖನ / ಇತರೆ / ಇಲೆಕ್ಶನ್

ಇಲೆಕ್ಶನ್

“ಇಲೆಕ್ಶನ್” ಎಂದಾಕ್ಷಣ ಶಾಲೆಯ ಹುಡುಗರಿಗೆ ಡ್ರಿಲ್ ಮಾಸ್ತರರು “ಅಟೆನ್ಶನ್ ” ಅಂದಂತೆ ಆಗುತ್ತದೆ. ಅಂಗಾಂಗದಲ್ಲಿ ವಿದ್ಯುತ್ ಪ್ರವೇಶವಾದಂತೆ ಆಗುತ್ತದೆ. ಕಿವಿಗಳು ನೀಟಾಗುತ್ತವೆ. (ಅಂದರೆ ಉದ್ದವಾಗುತ್ತವೆಂದಲ್ಲ!) ಅಂಗಾಂಗದಲ್ಲಿ ರೋಮಾಂಚನವಾಗುತ್ತದೆ. ಕಣ್ಣುಗಳು ತೆರೆಯುತ್ತವೆ. ಬಾಯಿಯು ಮುಚ್ಚುತ್ತದೆ. ಮೂಗು ಹಿಡಿದರೆ ಬಾಯಿ ತಾನೇ ತೆರೆಯುತ್ತದೆಂದು ಇಲ್ಲಿ ಬರೆಯುವ ಆವಶ್ಯಕತೆ ಇಲ್ಲ !
****
ಇಲೆಕ್ಶನ್ದ ಸುದ್ದಿ ಹೊರಟರೆ ಮರಾಠಿ ಭಾಷೆಯಲ್ಲಿ ಬರೆದ “ಸ್ಥಾನಿಕ ಸ್ವರಾಜ್ಯ” ಎಂಬ ನಾಟಕವು ತನ್ನಿಂದ ತಾನೇ ನೆನಪಾಗುತ್ತದೆ. ಸಿರಿಗನ್ನಡಂ ಗೆಲ್ಗೆ ! ಕನ್ನಡದಲ್ಲಿ ಅಂಥ ನಾಟಕವಿರದಿದ್ದರೆ ಸುಮ್ಮನೆ ಕೂಡ್ರುವಾ, ಮರಾಠಿ ನಾಟಕದ ಉಲ್ಲೇಖವಿಲ್ಲೇಕೆ ?
ಇಲೆಕ್ಶನ ಬಂತೆಂದರೆ ಉಮೇದವಾರರಿಗೆ ಬಲು ಹುರುಪು, ಉಮೇದವಾರರ ಏಜಂಟರಿಗಂತೂ ಹೆಚ್ಚಿನ ಹುರುಪು. ಮತದಾರರ ಗೋಳಂತೂ ನಾಟಕ ಬರೆಯುವ ಹಾಗೆ ಆಗುತ್ತದೆ. ಅಂದರೆ ಮೋಜಿನದಾಗುತ್ತದೆಂದಲ್ಲ. “ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ !”
ಪಾಶ್ಚಾತ್ಯ ದೇಶಗಳಲ್ಲಿ ಇಲೆಕ್ಶನ್ ಬಂತೆಂದರೆ ಎತ್ತ ನೋಡಿದತ್ತ ಸಭೆಗಳು ಕೂಡುತ್ತವೆ. ಭಿನ್ನ ಭಿನ್ನ ಪಕ್ಷದ ಉಮೇದವಾರರು ತಾವು ಮಾಡಿದ ಕಾರ್ಯಕಲಾಪಗಳನ್ನು ವಿಸ್ತರಿಸಿ ಬೆಳಿಸಿ ಹೇಳೆ, ಮುಂದೆ ಮಾಡಬಹುದಾದ  ಕಾರ್ಯಕ್ರಮವನ್ನು ಮತದಾರರ ಎದುರಿಗೆ ಇಟ್ಟು, ಅವರ ಬೆಂಬಲವನ್ನು ಅಪೇಕ್ಷಿಸುತ್ತಾರೆ. ನಮ್ಮ ದೇಶದಲ್ಲಿ ಮೋಟರಿನ ಅನುಕೂಲತೆಯನ್ನು ಮಾಡಿ (ಅಂದರೆ ಮೋಟಾರಿನಲ್ಲಿ ಮತದಾರರನ್ನು ಹೊತ್ತು ತಂದು!) ತರ ತರದ ಪಕ್ವಾನ್ನಗಳನ್ನು ತಿನ್ನಿಸಿ ಹೋಟು ತೆಗೆದುಕೊಳ್ಳುತ್ತಾರೆ.
ತಾರತಮ್ಯವು ಇಲ್ಲಿಗೆ ಮುಗಿಯಲಿಲ್ಲ. ಪಶ್ಚಿಮದಲ್ಲಿ ಒಬ್ಬ ಉಮೇದವಾರನು ಆರಿಸಿ ಬಂದ ಮೇಲೆ ಮತದಾರಸಂಘಕ್ಕೆ ಇಲೆಕ್ಶನದ ವೇಳೆಯಲ್ಲಿ ಕೊಟ್ಟ ಕಾರ್ಯಕ್ರಮದ ವಚನವನ್ನು ಪಾಲಿಸಲು ಪ್ರಯತ್ನಿಸುತ್ತಾನೆ. ನಮ್ಮ ದೇಶದಲ್ಲಿ ಅದರ ವಿಪರೀತ. ಹೋಟು ಹಾಕಿ ಮತದಾರನು ಹೊರಗೆ ಬಂದ ಕೂಡಲೆ ಅವನನ್ನು ಕೇಳುವವರೇ ಇಲ್ಲ. ಮಾತನಾಡಿಸುವವರಿಲ್ಲ. ತಿರುಗಿ ಮನೆಗೆ ಒಯ್ಯಲು ಮೋಟಾರಿಲ್ಲ. ಪಕ್ವಾನ್ನದ ಮಾತಂತು ಇಲ್ಲೇ ಇಲ್ಲ. ಪಕ್ವಾನ್ನವು ಇನ್ನೂ ಹೋಟು ಹಾಕದ ಮತದಾರರ ಸಲುವಾಗಿ ಇರುತ್ತದಷ್ಟೇ. ಹೋಟು ಹಾಕಿ ಹೊರಗೆ ಬಂದವರ ಸಲುವಾಗಿ ಇರುವದಿಲ್ಲ. ಆದುದರಿಂದ ಮುಂದಿನ ಇಲೆಕ್ಶನದಲ್ಲಿ ಒಮ್ಮೆ ಬಿಟ್ಟು ಎರಡು ಸಾರೆ ಪಕ್ವಾನ್ನ ಭುಂಜಿಸಬೇಕೆನ್ನುವವರು ಸಂಜೆಯ ತನಕ ಹೋಟು ಹಾಕುವದನ್ನು ತಡೆದು ಚೈನಿ ಹೊಡೆಯಬೇಕೆಂದು ನಮ್ಮ ಪ್ರೇಮ ಪೂರ್ವಕ ಸಲಹೆ!
  * * * *
ಒಮ್ಮೆ ಇಂಗ್ಲೆಂಡಿನಲ್ಲಿ ಸಭೆಯು ಕೂಡಿತು ಇಲೆಕ್ಶನ ಸಭೆಯು. ಉಮೇದನಾರನೊಬ್ಬನು ಆವೇಶ ಪೂರ್ವಕವಾಗಿ ಭಾಷಣ ಮಾಡುತ್ತಿದ್ದನು. ಸಭಿಕರಲ್ಲಿ ವಿರೋಧ ಪಕ್ಷದ ಮತದಾರರೂ ಇದ್ದರು. ಅವರಲ್ಲೊಬ್ಬನು ಎದ್ದು ನಿಂತು ಉಮೇದವಾರನಿಗೆ ಅಂದ: “ನೀವು ಬೇಕಾದ್ದನ್ನು ಹೇಳಿರಿ, ಅದು ನನ್ನ ಒಂದು ಕಿವಿಯಿಯಿಂದ ಒಳಹೊಕ್ಕು ಎರಡನೆಯ ಕಿವಿಯಿಂದ ಹೊರಬೀಳುತ್ತದೆ.” ತಟ್ಟನೆ ಉಮದನಾರನು ನುಡಿದ: ಓಹೋ ! ನಿಮ್ಮ ಎರಡೂ ಕಿವಿಗಳ ನಡುವೆ ಆರಪಾರ ದಾರಿ ಇರಲಿಕ್ಕೆ ಬೇಕು!”
  * * * *
ಇಂಗ್ಲಂಡದಿಂದ ಪರದೇಶಗಳಿಗೆ ಹೋಗುವ ಮತ್ತು ಪರದೇಶದಿಂದ ಇಂಗ್ಲಂಡಕ್ಕೆ ಬರುವ ಸರಕುಗಳ ಮೇಲೆ ಬಹಳ ದಿವಸಗಳಿಂದ ಕರವಿದ್ದಿಲ್ಲ. ಕರವಿರಬಾರದೆಂದೇ ಪ್ರಸಿದ್ದ ಮುತ್ಸದ್ದಿಗಳ ಮತ್ತು ಅರ್ಥಶಾಸ್ತ್ರ ವಿಶಾರದರ ಅಭಿಪ್ರಾಯವಿತ್ತು. ಈಗಾದರೂ ರಾಜಕಾರಣ ಚತುರರಾದ ಲಾಯಿಡ ಜಾರ್ಜರ ಅಭಿಪ್ರಾಯವು ಹೀಗೇ ಇರುತ್ತದೆ. ಆದರೆ ೧೯೩೧ನೇ ಇಸ್ವಿಯಲ್ಲಿ ನಡೆದ ಇಲೆಕ್ಶನದ ಕಾಲಕ್ಕೆ ಮಂದ ಪಕ್ಷದವರು ಕರ ಹೇರಬೇಕೆಂದು ತಮ್ಮ ಕಾರ್ಯಕ್ರಮವನ್ನು ನಿಶ್ಚಯಿಸಿದರು. ಆಗ ಒಂದು ಇಲೆಕ್ಶನ ಸಭೆಯಾದ ನಂತರ ಇಬ್ಬರು ಪ್ರತಿಸ್ಪರ್ಧಿಗಳಲ್ಲಿ ಕೆಳಗಿನಂತೆ ಸಂಭಾಷಣೆಯಾಯಿತು:-
ಕರಕ್ಕೆ ಪ್ರತಿಕೂಲನು: “ಏನಯ್ಯ, ಸ್ವರ್ಗವಾಸಿ ಆಂಗ್ಲ ಮುತ್ಸದ್ದಿಗಳೆಲ್ಲ ಆಯಾತ-ನಿರ್ಯಾತವಾಗುವ ಸರಕುಗಳ ಮೇಲೆ ಕರ ಹೇರಬಾರದೆಂದು ಅನ್ನುತ್ತಿದ್ದರು. ನೀವು ಕರ ಹೇರಹತ್ತಿದಿರಿ. ಈ ವಿಷಯ ಅವರ ಆತ್ಮಕ್ಕೆ ಗೊತ್ತಾದರೆ ಕಳವಳ ಪಡದೆ ಇರರು.”
ಕರಕ್ಕೆ ಅನುಕೂಲನು:- ನಾನು ಸ್ವರ್ಗಕ್ಕೆ ಹೋದ ಮೇಲೆ ಅವರಿಗೆ ತಿಳಿಸಿ ಹೇಳುವೆನು.
ಕರಕ್ಕೆ ಪ್ರತಿಕೂಲನು:- ಒಂದು ವೇಳೆ ಅವರು ಸ್ವರ್ಗದಲ್ಲಿರದಿದ್ದರೆ ?
ಕರಕ್ಕೆ ಅನುಕೂಲನು; ನೀನು ಅವರಿಗೆ ತಿಳಿಸಿ ಹೇಳು !!
*****
Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...