ಕೋರ್ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ್ತಕವನ್ನು ಸೋಫಾದ ಮೇಲೆಸೆದು, ಆಯಾಸದಿಂದ ಬಳಲಿದವಳಂತೆ, ಕುರ್ಚಿಯಲ್ಲೊರಗಿ ಮೀರಾಳ ಹತ್ತಿರ ಬಂದ ಗೌರಿ,
“ಅಮ್ಮಾವ್ರೆ…” ಎಂದು ಮೃದುವಾಗಿ ಕರೆದಳು.
“ಹೂಂ…” ಕಣ್ಣು ತೆರೆಯದೇ ಹೇಳಿದಳು ಮೀರಾ.
“ಅಮ್ಮಾವ್ರೆ… ಕಾಫಿ ತಂದು ಕೊಡ್ಲಾ?”
“ಸಾಹೇಬ್ರು.. ಇನ್ನೂ ಕೋರ್ಟಿನಿಂದ ಬಂದಿಲ್ವಾ?”
“ಊಹೂ… ಇನ್ನೂ ಬಂದಿಲ್ಲ… ಇವತ್ತು ಬರೋದು ಸ್ವಲ್ಪ ತಡವಾಗುತ್ತೇಂತಾ ಫೋನು ಮಾಡಿದ್ದರು. ಮೀರಾಳ ದನಿಯಲ್ಲಿದ್ದ ಬದಲಾವಣೆಯನ್ನು ಗಮನಿಸಿದ ಗೌರಿ, ಹಿಂಜರಿಯುತ್ತಲೇ ಹೇಳಿದಳು.
“ಯಶಸ್ಸನ್ನು ಹಂಚಿಕೊಳ್ತಾ ಇರ್‍ಬೇಕು…” ಎಂದು ತನಗೆ ತಾನೇ ಎಂಬಂತೆ ಹೇಳಿಕೊಂಡ ಮೀರಾ, ನಿಧಾನವಾಗಿ ಕಣ್ಣು ತೆಗೆದು.
“ನಂಗೆ ತಲೆ ಸಿಡಿದು ಹೋಗುವಷ್ಟು ನೋಯ್ತಾ ಇದೆ. ಯಾರೇ ಬಂದ್ರು… ನಾನು ಮನೇಲಿಲ್ಲಾಂತ ಹೇಳು…” ಎನ್ನುತ್ತಾ ಮೇಲೆದ್ದ ಮೀರಾ, ಮಹಡಿಯತ್ತ ನಡೆದಳು.
“ಕಾಫಿ ಬೇಡವಾ?” ಎಂದು ಏನನ್ನೋ ಹೇಳಲು ಹೊರಟ ಗೌರಿಯನ್ನು ತಡೆದು ಮೀರಾ,
“ತಗೊಂಡು ಬಾ…” ಎಂದು ಹೇಳುತ್ತಾ, ಮೆಟ್ಟಿಲೇರಿ ಹೋದಳು. ಮೀರಾ ಮಾಯವಾಗುವವರೆಗೂ ನೋಡುತ್ತಾ ನಿಂತಿದ್ದ ಗೌರಿ,
“ಯಾಕೋ… ಎಂದಿನಂತಿಲ್ಲ…” ಎಂದುಕೊಳ್ಳುತ್ತಾ ಅಡಿಗೆಯ ಮನೆಯತ್ತ ನಡೆದಳು.
* * *
ಹಬೆಯಾಡುತ್ತಿದ್ದ ಕಾಫಿಯೊಂದಿಗೆ ಮೇಲೆ ಬಂದ ಗೌರಿಯ ಹೆಜ್ಜೆ ಸಪ್ಪಳಕ್ಕೆ ತಿರುಗಿಯೂ ನೋಡದೆ ಬಟ್ಟೆ ಬದಲಿಸುತ್ತಿದ್ದ ಮೀರಾ,
“ಅಲ್ಲೇ ಇಟ್ಟು ಹೋಗು…” ಎಂದಳು. ಕಾಫಿಯ ಲೋಟವನ್ನು ಟೀಪಾಯಿಯ ಮೇಲಿಟ್ಟ ಗೌರಿಗೆ, ಎಂದಿನಂತೆ ಸಲಿಗೆಯಿಂದ ಮೀರಾಳನ್ನು ಮಾತನಾಡಿಸಲು ಅಂಜಿಕೆಯಾಯಿತು. ಎಷ್ಟೇ ದಣಿವಾಗಿದ್ದರೂ ಮನೆಗೆ ಬಂದ ಕೂಡಲೇ ಹಸನ್ಮುಖಳಾಗುತ್ತಿದ್ದ ಮೀರಾ ಒಂದು ವಾರದಿಂದ ಬದಲಾಗಿದ್ದಾರೆ. ಅದೂ ಅಲ್ಲದೆ ನಗು, ಸರಸದ ಮಾತುಗಳಿಂದ ತುಂಬಿರುತ್ತಿದ್ದ ಮನೆಯಲ್ಲೀಗ ಎಂಥದ್ದೋ ವಾದ ವಿವಾದ, ಅಸಹನೆಯ ಸಿಟ್ಟಿನಿಂದ ತುಂಬಿದ ಉಸಿರು ಕಟ್ಟುವಂತಹ ವಾತಾವರಣ. ಯಾರನ್ನು ಮಾತನಾಡಿಸಲೂ ಹಿಂಜರಿಕೆ, ಒಂದು ವಿಧದ ಭಯ ಪ್ರಾರಂಭವಾಗಿತ್ತು.
“ರಾತ್ರಿಗೆ… ಅಡಿಗೆ… ಏನು ಮಾಡ್ಲಿ?” ಗೌರಿ ಮೀರಾಳತ್ತ ನೋಡುತ್ತಾ ಕೇಳಿದಳು.
“ಮಧ್ಯಾಹ್ನದ್ದು ಹಾಗೇ ಇರ್‍ಬೇಕಲ್ಲ ಬಿಸಿ ಮಾಡಿಡು.”
“ಸಾಹೇಬ್ರು.. ತಂಗಳದ್ದು ಬಿಸಿ ಮಾಡಿದ್ರೆ ತಿನ್ನಲ್ಲ…”
“ಮತ್ತ್ಯಾಕೆ ನಂಗೆ ಕೇಳ್ತಿಯಾ? ಅವರದ್ದೇ ತಾನೇ ಎಲ್ಲಾ ಕಡೆ ನಡೆಯೋದು… ಅವರಿಗಿಷ್ಟವಾದದ್ದನ್ನೇ ಮಾಡು.” ಅಸಹನೆಯಿಂದ ಕೈಯ್ಯಲ್ಲಿದ್ದ ಟವಲನ್ನು ಬೀಸಿ ಹಾಸಿಗೆಯ ಮೇಲೆಸೆದಳು.
ಗೌರಿಗೆ ಅಳು ಬಂದು ಬಿಟ್ಟಿತು. ಅವಳಿಗರಿವಿಲ್ಲದೇ ಕೈ ಸೆರಗಿಗೆ ಹೋದ ಕೂಡಲೇ ಮೀರಾ ಇನ್ನೂ ವ್ಯಗ್ರಳಾದಳು.
“ಹೆಂಗಸ್ರು… ಹೀಗೆ ಅಳೋದು ನಂಗಿಡಿಸಲ್ಲ… ನಿಂಗೆ ಗೊತ್ತು ತಾನೆ…”
ಗೌರಿ ಓಡುವ ನಡಿಗೆಯಲ್ಲಿ ಮೆಟ್ಟಿಲಿಳಿದು ಹೋದಳು. “ಎಲ್ಲದ್ದಕ್ಕೂ ಸೋತು ಅಳ್ತೀವೀಂತಾನೆ… ಈ ಗಂಡಸರು ಅಟ್ಟದ ಮೇಲೆ ಹೋಗಿ ಕೂತಿರೋದು. ತಮಗೆ ಬೇಕೆನಿಸಿದಾಗ ಅಳಿಸುವುದು. ಹೆಣ್ಣು ಅಂದ ಮಾತ್ರಕ್ಕೆ ಕಣ್ಣೀರು ಸುರಿಸ್ತಾ ಇರ್‍ಬೇಕೂಂತ ಏನಾದ್ರೂ ಫಾರ್‍ಮುಲಾ ಇದೆಯಾ?…”
ಮೀರಾಳ ಕೋಪವಿನ್ನೂ ಶಾಂತವಾಗಿರಲಿಲ್ಲ. ಮುಖದ ಮೇಲೆ ತಣ್ಣೀರೆರೆಚಿಕೊಂಡು, ಹಾಗೆಯೇ ಬಂದು ಕುಳಿತು, ಕಾಫಿಯ ಲೋಟವನ್ನು ಕೈಗೆತ್ತಿಕೊಂಡಳು. ಕಾಫಿ ಕುಡಿಯುತ್ತಿದ್ದರೂ ಅವಳ ಕಣ್ಣುಗಳ ಮುಂದೆ ಕೋರ್ಟಿನಲ್ಲಿ ನಡೆದ ಘಟನೆಯೇ ಬಂದು ನಿಂತಿತು.
* * *
ಹನ್ನೊಂದು ಗಂಟೆಗೆ ಸರಿಯಾಗಿ ಕೋರ್ಟಿನಲ್ಲಿ ವಿಚಾರಣೆ ಪ್ರಾರಂಭವಾಯಿತು. ಪೊಲೀಸ್ ಪೇದೆಗಳು, ಸಬ್ ಇನ್ಸ್ ಪೆಕ್ಟರ್… ಮನೆಯವರು ಮುಂತಾದವರ ವಿಚಾರಣೆಯು ಮುಗಿದು ಹೋಗಿದ್ದುದರಿಂದ ಪ್ರಮುಖ ಸಾಕ್ಷಿ ಹಾಗೂ ವೈದ್ಯೆಯಾಗಿದ್ದ ಮೀರಾಳ ಸಾಕ್ಷಿ ಅತ್ಯಂತ ಮುಖ್ಯವಾಗಿತ್ತು. ಅಡ್ವಕೇಟ್, ಗೋಪಾಲ ಅತ್ಯಂತ ಚಾಣಾಕ್ಷತನದಿಂದ, ಲವಲವಿಕೆಯಿಮದ ಓಡಾಡುತ್ತ ಮಾತನಾಡುತ್ತಿದ್ದ.
ತನ್ನ ಹೆಸರನ್ನು ಕರೆದ ಕೂಡಲೆ ಮೀರಾ ಬಂದು ಕಟಕಟೆಯಲ್ಲಿ ನಿಂತಳು. ಗಂಡನನ್ನು ನೋಡಿದ ಮೀರಾ ಕಣ್ಣುಗಳಲ್ಲೇ ಒಲವು ಆತ್ಮೀಯತೆ ಚಿಮ್ಮಿಸಿದರೂ ಗೋಪಾಲ ಕಂಡೂ ಕಾಣದವನಂತೆ ಗಂಭೀರವಾಗಿ ನಿಂತಿದ್ದ ಅಪರಿಚಿತ ಮುಖಭಾವ ಹೊತ್ತು ನಿಂತಿದ್ದ ಗಂಡನನ್ನು ಕಂಡು ಮೀರಾಳಿಗೆ ಒಂದು ಕ್ಷಣ ಪಿಚ್ಚೆನಿಸಿದರೂ ತಕ್ಷಣ ಸಾವರಿಸಿಕೊಂಡಳು. ಬೆಂಚ್ ಕ್ಲರ್ಕ್, ದಪ್ಪ ಪುಸ್ತಕವೊಂದನ್ನು ತಂದು ಕಟಕಟೆಯಲ್ಲಿ ನಿಂತಿದ್ದ ಮೀರಾಳ ಕೈಗಿತ್ತು.
“ನಾನು ಹೇಳುವುದೆಲ್ಲಾ ಸತ್ಯ… ಸತ್ಯವನ್ನು ಬಿಟ್ಟು ಬೇರೆ ಏನನ್ನೂ ಹೇಳುವುದಿಲ್ಲ… ಎಂದು ಹೇಳಿ” ಎಂದ.
ಅವನು ಹೇಳಿಕೊಟ್ಟಂತೆ ಗಿಳಿಪಾಠ ಒಪ್ಪಿಸಿದ ಮೀರಾ ಎದುರಿಗೇ ಬಂದು ನಿಂತ ಪಬ್ಲಿಕ್ ಪ್ರಾಸಿಕ್ಯೂಟರತ್ತ ನೋಡಿದಳು.
“ಹೆಸರು?”
“ಮೀರಾ”
“ವಯಸ್ಸು?”
“ಇಪ್ಪತೇಳು”
“ವೃತ್ತಿ?”
“ವೈದ್ಯೆ”
“ಗಂಡನ ಹೆಸರು?”
“ಗೋಪಾಲ್…”
ಕೇಳುವ ಪ್ರಶ್ನೆಗಳಿಗೆಲ್ಲಾ ಮೀರಾ ಉತ್ತರ ಹೇಳುತ್ತಾ ಹೋದಂತೆ, ನ್ಯಾಯಾಧೀಶರ ಪಕ್ಕದಲ್ಲಿದ್ದವಳು ಪಟಪಟನೆ ಟೈಪು ಮಾಡುತ್ತಿದ್ದಳು.
“ಮೃತಪಟ್ಟ ಯುವತಿ ದೇವಿರಮ್ಮನ ಪೋಸ್ಟ್ ಮಾರ್ಟಂ ಮಾಡಿದವರು ನೀವೇ ತಾನೆ?”
“ಹೌದು…”
“ಅದರ ಪೂರ್‍ಣ ವಿವರ… ಹೇಳ್ತೀರಾ?”
ಮೀರಾ ರಿಜಿಸ್ಟರ್ ಪುಸ್ತಕ ಬಿಡಿಸಿ, ಅಂದಿನ ದಿನ ತಾನು ಮೃತ ಯುವತಿಯ ದೇಹವನ್ನು ಪರೀಕ್ಷಿಸಿದ ನಂತರದಲ್ಲಿ ಕಂಡು ಗುರುತಿಸಿದ ಗಾಯಗಳು ಆಕೆಯ ಸ್ಥಿತಿ,
ಆಕೆಯ ಮೈಮೇಲಿದ್ದ ಬಟ್ಟೆಗಳ ವಿವರ, ನಂತರದ ಪೋಸ್ಟ್ ಮಾರ್ಟಂ ಮಾಡಿದ ವರದಿಯನ್ನು ವಿವರವಾಗಿ, ನಿಧಾನವಾಗಿ ಸ್ಫುಟವಾಗಿ ಓದಿ ಹೇಳಿದಳು. ಅತ್ಯಂತ
ಖಚಿತವಾದ, ಆತ್ಮವಿಶ್ವಾಸ ತುಂಬಿದ ಸ್ವರದಲ್ಲಿ ಹೇಳುತ್ತ ಹೋದ ಮೀರಾಳತ್ತ ನೋಡಿದ ವಕೀಲರು,
“ನಿಮ್ಮ ಅಭಿಪ್ರಾಯದಲ್ಲಿ ಸಾವು ಹೇಗೆ ಸಂಭವಿಸಿರಬಹುದು ಡಾಕ್ಟರ್?…” ಎಂದು ಕೇಳಿದರು.
“ಆಕೆಯನ್ನು ಉಸಿರು ಕಟ್ಟಿಸಿ ಕೊಲೆ ಮಾಡಲಾಗಿದೆ. ಕತ್ತು ಹಿಸುಕಲಾಗಿದೆ…” ಗಂಭೀರವಾಗಿ, ನಿರ್ಧಾರ ತುಂಬಿದ ಸ್ವರದಲ್ಲಿ ಹೇಳಿದಳು.
ಮೀರಾಳ ಅಭಿಪ್ರಾಯ ಕೇಳುತ್ತಿದ್ದಂತೆಯೇ ತನ್ನ ಕೆಲಸ ಮುಗಿಯಿತೆಂಬಂತೆ ಹಿಂದೆ ಸರಿದು ನಿಂತ ವಕೀಲರತ್ತ ನೋಡುತ್ತಿರುವಂತೆಯೇ ಗೋಪಾಲ ಬಂದು ಮೀರಾಳ ಬಳಿ ನಿಂತ.
ಮೀರಾಳ ಕೈಗಳು ಸೆರಗನ್ನು ಸರಿಪಡಿಸಿಕೊಂಡವು. ಮುಖವನ್ನು ಮತ್ತೂ ಗಂಭೀರವಾಗಿಸಿಕೊಂಡು ಗೋಪಾಲ,
“ಮತ್ತೊಮ್ಮೆ… ಮೃತ ಯುವತಿಯ ಪರೀಕ್ಷಿಸಿದ ವಿವರಗಳನ್ನು ಹೇಳುತ್ತೀರಾ ಡಾಕ್ಟರ್?” ಎಂದು ಕೇಳಿದ. ಒಮ್ಮೆ ಗಂಡನತ್ತ ನೋಡಿ, ಮೃತಳ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಓದಿ ಹೇಳತೊಡಗಿದಳು…
“ನೀವು ಹೇಗೆ ಇದು ಆತ್ಮಹತ್ಯೆಯಲ್ಲ, ಕೊಲೆಯಾಗಿದೇಂತ ತೀರ್ಮಾನಕ್ಕೆ ಬಂದಿರಿ?”
“ಅವಳ ಕೈಗಳ ಮೇಲೆ, ಕುತ್ತಿಗೆಯ ಮೇಲೆ ತರಚಿದ ಗಾಯಗಳಿವೆ, ಅವಳು ಬದುಕಲು ನಡೆಸಿದ ಹೋರಾಟದ ಗುರುತುಗಳು…”
“ಆ ವಿಧದ ತರಚಿದ ಗಾಯಗಳು ಅಕಸ್ಮಾತ್ ಗೋಡೆಗೆ ಜಾರಿ ಆತುಕೊಂಡಾಗಲೂ ಆಗಬಹುದಲ್ಲವೆ?”
“ಆಂ?… ಹೂಂ… ಆಗಬಹುದು. ಆದರೆ ಕುತ್ತಿಗೆಯ ಮೇಲಿನ ಗಾಯಗಳು?” ಮೀರಾ ಏರಿದ ದನಿಯಲ್ಲಿ ಹೇಳಿದಳು.
“ಸರಿ… ಡಾಕ್ಟರ್… ಇದರಲ್ಲಿ…. ಉದ್ವೇಗದಿಂದ ಹೇಳೋಂತ ಅವಶ್ಯಕತೆ ಏನಿದೆ?
ಕೇಳಿದ ಪ್ರಶ್ನೆಗಳಿಗಷ್ಟೇ ಉತ್ತರಕೊಡಿ.”
ಮೀರಾಳ ತುಟಿಗಳು ಬಿಗಿದುಕೊಂಡವು. ಅವಮಾನದಿಂದ ಮುಖ ಕೆಂಪಾಗತೊಡಗಿತ್ತು.
“ಆ ವಿಧದ ಗಾಯಗಳು, ಗೋಡೆಗೆ ತಾಗಿದಾಗಲೂ ಆಗಬಹುದು, ಕೆಳಗೆ ಬಿದ್ದಾಗಲೂ ಆ ವಿಧದ ತರಚಿದ ಗಾಯಗಳಾಗಬಹುದು ಅಲ್ಲವೆ?” ಅತ್ಯಂತ ಸಂಯಮದಿಂದೆಂಬಂತೆ ಕೇಳಿದ.
“ಹೌದು”
ಕುತ್ತಿಗೆಯ ಮೇಲಿನ ತರಚು ಗಾಯಗಳು, ಪೊಲೀಸ್ ಇಲಾಖೆಯ ವರದಿಯ ಪ್ರಕಾರ ಇಲ್ಲವೇ ಇಲ್ಲವೆಂದಿದೆ. ನೋಡಿ, ನಿಮ್ಮ ಪ್ರಕಾರ ಇದ್ದದ್ದೇ ಆದರೆ, ನೀವು ಹೇಳಿದ ಭಾಗದಲ್ಲಿ ಇರುವ ಎರಡು ಗೆರೆಯಂತಹ ಉಗುರಿನ ಗುರುತುಗಳು ಆಕೆಯದ್ದೇ ಆಗಿರಬಹುದಲ್ಲವಾ? ಸ್ನಾನ ಮಾಡುವಾಗ ಒರಟು ವಸ್ತುವಿನಿಂದ ತಿಕ್ಕಿಕೊಳ್ಳುವಾಗಲೂ ಆಗಬಹುದೂಂತ ನನ್ನ ಅನಿಸಿಕೆ…”
“ಆಂ?… ಹೂಂ… ಆದರೆ… ಇಲ್ಲಿ…”
“ಕೇಳಿದ್ದಕ್ಕಷ್ಟೇ ಉತ್ತರ ನೀಡಿ ಹೌದು ಅಥವಾ ಇಲ್ಲ ಇಷ್ಟೇ ಹೇಳಬೇಕು…”
ಮೀರಾಳಿಗೆ ರೇಗಿತು.
“ನೀವು ಹೇಳಿದ್ದಕ್ಕೆಲ್ಲಾ, ನೀವು ಹೇಳಿದ್ದಾಗೇನೆ ಉತ್ತರ ಕೊಡಲು ತನ್ನಂತಹ ಅನುಭವಿ ವೈದ್ಯರೇಕೆ ಬೇಕಾಗಿತ್ತು? ನಾವ್ಯಾಕೆ ಬಂದು ಈ ಕಟಕಟೆಯಲ್ಲಿ ನಿಲ್ಲಬೇಕು?” ಸಿಡಿದು ನುಡಿದಳು, ತುಟಿಗಳು ಕೋಪದಿಂದ ಕಂಪಿಸುತ್ತಿದ್ದವು.
“ವೈದ್ಯರುಗಳಿಗೆ ಸಹನೆ, ಸಂಯಮ ಮುಖ್ಯ ಅಲ್ಲವಾ?”
ಮುಖದ ತುಂಬಾ ಬಲವಂತದಿಂದ ನಗು ಧರಿಸಿಕೊಳ್ಳುತ್ತಾ ತನಗಾದ ಪೆಟ್ಟನ್ನು ಮರೆಮಾಚಿಸುವ ಪ್ರಯತ್ನ ಮಾಡಿದ ಗೋಪಾಲನತ್ತ ತೀಕ್ಷ್ಣವಾಗಿ ನೋಡುತ್ತಾ,
“ಸಹನೆ, ಸಂಯಮಗಳಿಗೂ ಒಂದು ಮಿತಿ ಇರುತ್ತದೆ..” ಎಂದಳು ಮೀರಾ ಖಾರವಾಗಿ, ತಾನು ಗೋಪಾಲನ ಪತ್ನಿಯೆಂಬುದನ್ನು ಆ ಕ್ಷಣದಲ್ಲಿ ಮರೆತಳು… ಅನ್ಯಾಯವನ್ನು ಅವಳ ದೇಹದ ಪ್ರತಿಯೊಂದು ಭಾಗವೂ ಪ್ರತಿಭಟಿಸಲು ಸಿದ್ಧವಾಗಿ ನಿಂತಿತು.
“ನೋಡಿ… ಈ ಕಲ್ಲಿನಿಂದ ಮುಖ, ಕುತ್ತಿಯನ್ನು ಸ್ನಾನ ಮಾಡುವಾಗ ಉಜ್ಜಿಕೊಂಡರೆ, ಆಗಬಹುದಲ್ಲವೆ?” ತನ್ನ ಬಳಿ ಹಿಡಿದ ಮುಷ್ಟಿಯಾಕಾರದ ಕಪ್ಪು ಕಲ್ಲನ್ನು ನೋಡಿದ ಮೀರಾ,
“ಆಗಬಹುದು…” ಎಂದಳು.
“ಈ ಕಲ್ಲಿನಿಂದಲೇ ಆ ಮೃತ ಯುವತಿಯು ಸ್ನಾನ ಮಾಡುವಾಗ ದೇಹವನ್ನು ಉಜ್ಜಿಕೊಳ್ಳುತ್ತಿದ್ದಳೂಂತ… ಮನೆಯವರು ಹೇಳುತ್ತಾರೆ. ಮತ್ತು ಇದು ಅವಳ ಮನೆಯ ಬಚ್ಚಲು ಕೋಣೆಯಲ್ಲಿ ಸಿಕ್ಕಿತ್ತು…”
ಒಂದು ಅಮಾನುಷ ಕೊಲೆಯನ್ನು, ಆತ್ಮಹತ್ಯೆಯೆಂದು ಪ್ರಾಮಾಣಿಕರಿಸಲು ತನ್ನ ಪತಿ ಪಡುತ್ತಿರುವ ಹೆಣಗಾಟ, ಅವನ ನೈಪುಣ್ಯತೆಯನ್ನು ಮೆಚ್ಚಿಕೊಳ್ಳುವ ಬದಲು ತಿರಸ್ಕಾರದಿಂದ ನೋಡಿದಳು. ಎಂದೂ ಗಂಡನ ಈ ಮುಖದ ಪರಿಚಯವಿರದ ಮೀರಾ, ಮೊದಲ ಬಾರಿಗೆ ಮುಖಾಮುಖಿಯಾದಾಗ ಅವನ ಮತ್ತೊಂದು ಮುಖದ ಪರಿಚಯವಾಗುತ್ತಾ ಹೋದಂತೆ ಅಸಹ್ಯಪಟ್ಟುಕೊಳ್ಳತೊಡಗಿದಳು. ತನ್ನಂತೆಯೇ ಅವನದ್ದೂ ಒಂದು ವೃತ್ತಿ. ಆ ವೃತ್ತಿ ನೀತಿ ಸಹಿಷ್ಣತೆಯಂತೆ ಅವನು ಹೋರಾಡಲೇಬೇಕೆಂಬುದಕ್ಕಿಂತ ಹೆಚ್ಚಾಗಿ ಅವನು ‘ಸುಳ್ಳು’ ಸೃಷ್ಟಿಸಿ, ಸುಳ್ಳನ್ನೇ ಸತ್ಯವೆಂದು ಮಾಡಹೊರಟಿರುವುದನ್ನು ವೃತ್ತಿಗೆ ಸಂಬಂಧಿಸಿದ್ದಲ್ಲವೆಂಬ ತೀರ್ಮಾನಕ್ಕೆ ಬರತೊಡಗಿದ್ದಳು. ಮೃತಳ ‘ಪೋಸ್ಟ್ ಮಾರ್ಟಂ’ ವಿವರ ಹೇಳುತ್ತಾ ಹೋದಂತೆಯೇ ಗಂಡನ ವ್ಯಕ್ತಿತ್ವದ ‘ಪೋಸ್ಟ್ ಮಾರ್ಟಂ’ನ್ನು ಅವಳ ಭಾವುಕ ಮನಸ್ಸು ಮಾಡತೊಡಗಿತ್ತು. ಅವಳಿಗರಿವಿಲ್ಲದಂತೆಯೇ ಅವಳ ದೇಹ ಪ್ರತಿಭಟಿಸುವಂತೆ ಸೆಟೆದು ನಿಂತಿತ್ತು.
“ಡಾಕ್ಟರ್…” ಗೋಪಾಲ ಕರೆಯುತ್ತಿದ್ದ.
“ಆಂ!…” ಮೀರಾ ಬೆಚ್ಚಿಬಿದ್ದು ನೋಡಿದಳು.
“ಅವಳ ಕಾಲುಗಳ ಮೇಲೆ ಸುಟ್ಟಗಾಯದ ಗುರುತಿದೆ. ಅವಳ ಮನೆಯವರ ಹೇಳಿಕೆಯು ಪುಷ್ಟಿಕೊಡುವಂತಿದ್ದು ನೀವು ಅದನ್ನು ‘ಹಿಂಸೆಯಿಂದಾದ’ ಸುಟ್ಟಗಾಯ ಎಂದುಕೊಂಡಿರಬಹುದಲ್ಲವೆ?”
“ನಾನು ‘ಪೋಸ್ಟ್ ಮಾರ್ಟಂ’ ಮಾಡಿ ಬರೆಯುವಾಗ ಅವರ ಮನೆಯವರಾರೂ ನನ್ನ ಮುಂದೆ ಇರಲಿಲ್ಲ… ಮೇಲಾಗಿ ನಾನು ಪೂರ್ವಾಗ್ರಹ ಪೀಡಿತ ಭಾವನೆಯಿಂದ ಯಾವುದನ್ನೂ ನೋಡಿಲ್ಲ. ನನ್ನ ವೃತ್ತಿಗೆ ಅತ್ಯಂತ ಪ್ರಾಮಾಣಿಕವಾಗಿದ್ದೇನೆ…”
“ಸರಿ… ನಿಮ್ಮ ಮಾತನ್ನೇ ಒಪ್ಪಿಕೊಳ್ಳೋಣ. ಆ ವಿಧದ ಗಾಯಗಳು, ಸುಡುವ ನೀರು, ಹಾಲು ಮೈಮೇಲೆ ಬಿದ್ದಾಗಲೂ ಆಗಬಹುದಲ್ಲವೆ?”
‘ಊಹುಂ.. ಇಲ್ಲ… ಸಾಧ್ಯವೇ ಇಲ್ಲ. ಬಿಸಿನೀರು, ಬಿಸಿಹಾಲು, ಬಿಸಿ ಅನ್ನದ ತಪ್ಪಲೆಯೇ ಇರಲಿ ಜಾರಿ ಬಿದ್ದಾಗಲೂ ಈ ವಿಧದ ಸುಟ್ಟ ಗಾಯಗಳಾಗುವುದಿಲ್ಲ… ಈ ವಿಧದ ಚರ್ಮ ಸುಟ್ಟು ಗಾಯವಾಗುವುದು, ಕೊಳ್ಳಿಯಿಂದ ಅಥವಾ ಕಾದ ಕಬ್ಬಿಣದ ವಸ್ತುವಿನಿಂದ ಬರೆಹಾಕಿದಂತೆ ಇದೆ. ಬೇಕಾದರೆ ಈ ಪುಸ್ತಕದಲ್ಲಿ ವಿವರ ಇದೆ. ಓದಿನೋಡಿ…” ಎನ್ನುತ್ತಾ ಮೀರಾ ವೈದ್ಯಕೀಯ ಪಠ್ಯಪುಸ್ತಕವನ್ನ ನೀಡಲು ಮುಂದೆ ಬಾಗಿದಳು. ಅವಳಿಂದ ಪುಸ್ತಕ ಕೈಗೆ ತೆಗೆದುಕೊಂಡು ಗೋಪಾಲ.
“ನಿಮ್ಮ ‘ಪೋಸ್ಟ್ ಮಾರ್ಟಂ’ ವರದಿಯ ಪ್ರಕಾರ, ಅವಳ ಸಾವು ಉಸಿರುಗಟ್ಟಿದುದರಿಂದ ಸಂಭವಿಸಿದೆ ಅಲ್ವಾ?” ಕೇಳಿದ.
“ಹೌದು…”
“ಆತ್ಮಹತ್ಯೆಯೂ ಆಗಿರಬಹುದು… ಉಸಿರುಕಟ್ಟಿಸುವಂತಹ ಯಾವುದಾದರೂ ವಸ್ತು ಗಂಟಲಲ್ಲಿ ಸಿಕ್ಕಿಯೂ ಆಗಿರಬಹುದಲ್ಲವೆ?”
“ಊಹುಂ.. ಈ ಕೇಸಿನಲ್ಲಿ ಆ ತರಹಾ ಆಗಿಲ್ಲ… ಅವಳ ಕುತ್ತಿಗೆಯನ್ನು ಒತ್ತಿ ಕೊಲ್ಲಲಾಗಿದೆ. ಕುತ್ತಿಗೆಯ ಮುಂಭಾಗ ಮೃದುವಾದ ಮೂಳೆಯೊಂದಿದೆ. ಆ ಮೂಳೆಯನ್ನು ಪರೀಕ್ಷಿಸಿದಾಗ ಮಾತ್ರ ಆ ವ್ಯತ್ಯಾಸ ತಿಳಿಯುತ್ತದೆ. ಈ ಪುಸ್ತಕದಲ್ಲೂ ಇದೆ.. ಒಮ್ಮೆ ನೋಡಿ…” ಮೀರಾ ಪಟ್ಟು ಬಿಡದೆ ಹೇಳಿದಳು.
“ದೊಡ್ಡ ‘ಪತ್ತೇದಾರ’ ಅಂತ ನಿಮ್ಮನ್ನು ನೀವೇ ತಿಳ್ಕೊಂಡಿದ್ದೀರಾ..?”
ಅವಳಿಂದ ಪುಸ್ತಕ ತೆಗೆದುಕೊಂಡು ಕಣ್ಣಾಯಿಸಿದ ಗೋಪಾಲ… ಆಕೆಯ ವೈದ್ಯಕೀಯ ಜ್ಞಾನಕ್ಕೆ ಸಮ್ಮತಿಯಿತ್ತರೂ ಆತನ ಮುಖ ನಿಧಾನವಾಗಿ ಬಣ್ಣ ಕಳೆದುಕೊಳ್ಳತೊಡಗಿತ್ತು. ತಾನಂದುಕೊಂಡಂತೆ ಅಡ್ಡಾದಿಡ್ಡಿ ಪ್ರಶ್ನೆಗಳಿಂದ ಮೀರಾಳನ್ನು ಹಾದಿ ತಪ್ಪಿಸುವಂತಿರಲಿಲ್ಲ. ತನ್ನಂತೆಯೇ ತನ್ನ ವೃತ್ತಿಯಲ್ಲಿ ಪರಿಣಿತಳೇ ಇರಬೇಕೆಂದುಕೊಂಡರೂ ತಾನು ವಹಿಸಿಕೊಂಡ ಕೇಸನ್ನು ಜಯಿಸಲೇಬೇಕಾಗಿತ್ತು. ಗೌರವದ, ಜ್ಞಾನಪರೀಕ್ಷೆಯ ಪ್ರಶ್ನೆಯಾಗಿತ್ತು. ಇವರ ವಾದವಿವಾದವನ್ನು ಕೋರ್ಟಿನ ತುಂಬಾ ಸೇರಿದ್ದವರು, ಉಸಿರು ಬಿಗಿಹಿಡಿದು ಆಲಿಸುತ್ತಿದ್ದರು. ಹೊರಗಡೆಯೂ ಜನ ಕಿಕ್ಕಿರಿದಿದ್ದರೂ ನಿಶ್ಯಬ್ದ ಆವರಿಸಿತ್ತು. ಗೋಪಾಲ ಎಷ್ಟೇ ಪ್ರಯತ್ನಪಟ್ಟು ‘ಸಾವು’ ಉಸಿರುಕಟ್ಟಿ ಅವಳಿಗೆ ಕಾಯಿಲೆಯಿಂದಲೋ ಅಥವಾ ಯಾವುದೋ ವಸ್ತು ಗಂಟಲಿಗೆ ಸಿಕ್ಕಿ ಉಸಿರಾಟದ ತೊಂದರೆಯಿಂದಲೋ ಸಂಭವಿಸಿರಬಹುದೆಂದು, ಖಚಿತಪಡಿಸಲು ಸಾಕಷ್ಟು ಪ್ರಯತ್ನ ಮಾಡತೊಡಗಿದ್ದ. ಆ ಮೃತ ಯುವತಿಗೆ ಕ್ಷಯರೋಗದ ಕಾಯಿಲೆಯಿಂದ, ಶ್ವಾಸಕೋಶ ಜರ್ಝರಿತವಾದ ಬಗ್ಗೆ ಕೆಲವು ವೈದ್ಯರ ಸರ್ಟಿಫಿಕೇಟುಗಳನ್ನು ತೋರಿಸಿದ. ಆದರೆ ಮೀರಾಳ, ವೈಜ್ಞಾನಿಕ ನೆಲೆಗಟ್ಟಿನ, ವೈದ್ಯಕೀಯ ಆಧಾರದ ಮುಖ್ಯ ಅಂಶಗಳಿಂದ ಯುವತಿಯ ಸಾವು ಸಹಜವಾದುದಲ್ಲವೆಂದು ತೀರ್ಮಾನವಾಯಿತು. ಆತ್ಮಹತ್ಯೆಯೂ ಅಲ್ಲ. ಅದೊಂದು ಕೊಲೆಯೆಂದು ಮೀರಾ ಸಾಕ್ಷಿ ಆಧಾರಗಳ ಸಮೇತ ವಾದಿಸಿ, ತನ್ನ ಅಭಿಪ್ರಾಯವನ್ನು ಖಚಿತಪಡಿಸಿ, ಕಟಕಟೆಯಿಂದ ಕೆಳಗಿಳಿದು ಬಂದಳು.
ಹೊರಗಡೆ ಬರುವ ಮೊದಲು ಗಂಡನತ್ತ ಒಮ್ಮೆ ನೋಡಿದಳು. ಹಣೆಯಲ್ಲಿ ಮೂಡಿದ ಬೆವರ ಹನಿಗಳನ್ನು ನಿಧಾನವಾಗಿ ಕರ್ಚಿಫಿನಿಂದ ಒರೆಸಿಕೊಳ್ಳುತ್ತಿದ್ದ ಗಂಡನ ಮುಖದ ಯಾವ ಭಾವನೆಗಳನ್ನು ಕಾಣದಾದಳು…
ತನಗಾಗಿ ಕಾಯುತ್ತಾ ನಿಂತಿದ್ದ ಪತ್ನಿಯ ಬಳಿ ಅವಸರದಿಂದೆಂಬಂತೆ ಬಂದ ಗೋಪಾಲ.
“ನೀನಿನ್ನು ಮನೆಗೆ ಹೋಗು.. ಕಾಯಬೇಡಾ…” ಎಂದ.
“ಈಗ ಊಟದ ಟೈಂ ಅಲ್ವಾ?” ಮೀರಾ ಗಂಡನ ಮುಖದಲ್ಲಿ ಯಾವುದೋ ಭಾವವನ್ನು ಹುಡುಕುವಂತೆ ನೋಡುತ್ತಾ ಕೇಳಿದಳು.
“ಇರಬಹುದು… ನೀನು ಮನೆಗೆ ಹೋಗಿ ಊಟ ಮಾಡು. ನನಗಾಗಿ ಕಾಯುವುದು ಬೇಡಾ…” ಎನ್ನುತ್ತಾ ಅವಳ ಉತ್ತರಕ್ಕೆ ಕಾಯದವನಂತೆ ಒಳಗೆ ಹೊರಟುಹೋದ. ದಂಗಾಗಿ ಅವನು ಹೋದತ್ತ ನೋಡುತ್ತಿದ್ದ ಮೀರಾ, ನಿಧಾನವಾಗಿ ಕೋರ್ಟಿನ ಮೆಟ್ಟಲಿಳಿಯತೊಡಗಿದಳು.
ಬಹಿರಂಗವಾಗಿ ವಾದಮಾಡಿ, ತಾನು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು, ಅವನಿಗೆ ಅವಮಾನಪಡಿಸಿದೆ. ಇದರಿಂದ ಅವನಿಗೆ ಸಿಟ್ಟುಬಂದು ತನ್ನ ಹಸಿವು ಬಾಯಾರಿಕೆಗಳ ಬಗ್ಗೆ ಗಮನ ನೀಡದವನಂತೆ ಹೊರಟು ಹೋದನೆ? ಅಥವಾ ಕೆಲಸದ ಒತ್ತಡದಿಂದ ಅವಸರಪಟ್ಟು ಹೋದನೆ? ಹುಚ್ಚುಚ್ಚಾಗಿ ವಿಶ್ಲೇಷಿಸಲು ಇದೇನು ಮನೆಯಲ್ಲವಲ್ಲ? ಸಮಾಧಾನ ತಂದುಕೊಂಡು ಮೀರಾ ಮನೆಯತ್ತ ಹೊರಟರೂ ಕೋರ್ಟಿನಲ್ಲಿ ಗಂಡನ ಅಪರಿಚಿತ ವರ್ತನೆ, ಮುಖ ಭಾವವನ್ನು ನಿರ್ಲಕ್ಷಿಸದಾದಳು.
ಬಾಯಿ ತುಂಬಾ ಮಾತನಾಡಬೇಕು… ಮನದಣೀಯೇ ವಾದಮಾಡಬೇಕು… ಮೆದುಳು ಸಿಡಿಯುವಂತೆ ಯೋಚಿಸಬೇಕು. ಚರ್ಚಿಸಬೇಕು. ವಿದ್ಯಾವಂತ, ಮೇಧಾವಿ, ವಿಶಾಲ ಹೃದಯದ ಗಂಡನಿಂದ ಮಾನಸಿಕ ಹಸಿವನ್ನು ಹಿಂಗಿಸಿಕೊಳ್ಳಲು ಮನೆಯವರ ವಿರೋಧ ಕಟ್ಟಿಕೊಂಡು ಗೋಪಾಲನನ್ನು ವಿವಾಹವಾಗಿದ್ದಳು. ಅವನೂ ಅವಳ ಕನಸಿನ ಸಾಕಾರಮೂರ್ತಿಯಾಗಿದ್ದ… ಎಂದೂ ಅವಳ ವೈದ್ಯಕೀಯ ವೃತ್ತಿಯನ್ನು ಅಗೌರವದಿಂದ ನೋಡಿರಲಿಲ್ಲ… ಅವಳ ಜಾಣ್ಮೆಗೆ ಮೆಚ್ಚುಗೆ ಸೂಚಿಸಲು ಎಂದೂ ಹಿಂದೇಟು ಹಾಕುತ್ತಿರಲಿಲ್ಲ. ಆದರೂ ಈ ದಿನ ಕೋರ್ಟಿನಲ್ಲಿ ಅವನ ವಾದಕ್ಕೆ ಸೋಲನ್ನೊಪ್ಪದ, ದಿಟ್ಟತನದಿಂದ ವಾದಿಸಿ, ಪ್ರಾಮಾಣಿಕರಿಸಿ ‘ಸತ್ಯವನ್ನು’ ತೋರಿಸಿದ ಹೆಂಡತಿಯನ್ನು ಎಲ್ಲರೂ ಅತ್ಯಂತ ಮೆಚ್ಚುಗೆಯಿಂದ ನೋಡಿದಾಗ ಅವನ ‘ಅಹಂ’ಗೆ ದೊಡ್ಡ ಪೆಟ್ಟು ಬಿದ್ದಂತಾಗಿದ್ದರೂ ತಟ್ಟನೆ ಮುಖದ ಭಾವವನ್ನು ಮರೆಮಾಚಿದ್ದ. ಆದರೆ ಮೀರಾಳ ಸೂಕ್ಷ್ಮ ಕಣ್ಣುಗಳಿಗೆ ಅದು ಗೋಚರಿಸದೇ ಇರಲಿಲ್ಲ. ಈ ಸಮಯದಲ್ಲೂ ತಾನು ಅವನ ಹೆಂಡತಿಯಿಂದ ಸೋತು ಬರಬೇಕಾಗಿತ್ತೆ? ಭಾವುಕತ, ಪ್ರೀತಿಯಿಂದ ಹಾಗೆ ಮಾಡಿದ್ದರೆ, ಒಂದು ‘ಕೊಲೆ’ ಮುಚ್ಚಿಹೋಗುತ್ತಿತ್ತು. ತನ್ನ ವೈದ್ಯಕೀಯ ವೃತ್ತಿಗೆ, ತನಗೆ ಅವಮಾನವಾಗುವುದಿರಲಿ, ನೀತಿ ಸಹಿಷ್ಣುತೆಗೆ ಒಂದು ಕಪ್ಪು ಚುಕ್ಕೆಯಾಗುತ್ತಿತ್ತು. ಈಗ ಯಾವುದೂ ಆಗಿರಲಿಲ್ಲ. ಆದರೂ.. ಮೀರಾಳ ಹೃದಯದ ಮೂಲೆಯಲ್ಲೊಂದು ಕ್ಷೀಣವಾದ ಅಪಸ್ವರ ಮಿಡಿಯಲಾರಂಭಿಸಿತ್ತು. ಅದಕ್ಕೆ ಕಾರಣ ಗಂಡನ ಬಿಗುವಾದ, ಅಪರಿಚಿತ ಮುಖದ ದರ್‍ಶನ.
ಕೋರ್‍ಟಿಗೆ ಸಾಕ್ಷಿಯಾಗಿ ಬರುವ ಹಿಂದಿನ ದಿನ, ತನ್ನ ಗಂಡ ವಾದಿಸಲಿರುವುದು, ಕೊಲೆಗಾರನೆಂದು ತೀರ್ಮಾನಿಸಿದ್ದ ಮೃತ ಯುವತಿ ದೇವೀರಮ್ಮನ ಗಂಡನೆಂದು ತಿಳಿದ ಮೀರಾ, ಗೋಪಾಲನೊಂದಿಗೆ ನೇರವಾಗಿಯೇ ವಾದಕ್ಕಿಳಿದಳು.
“ಇಡೀ ಹಳ್ಳೇನೇ ಹೇಳ್ತಾಯಿದೆ. ಅವನೇ ವರದಕ್ಷಿಣೆಯ ಆಸೆಗಾಗಿ ಹಿಂಸಿಸಿ, ಕೊನೆಗೆ ಕೊಲೆ ಮಾಡಿದ್ದಾನೇಂತ. ನೀವ್ಯಾಕೆ ಅವನ ಪರವಾಗಿ ವಾದಿಸುತ್ತೀರಾ?”
“ಸಾವಿರ ಜನ ಸಾವಿರ ಹೇಳ್ತಾರೆ… ಎಲ್ಲವನ್ನು ನಂಬುತ್ತಾ ಕುಳಿತುಕೊಳ್ಳಬೇಕೇನು?”
“ಅವನ ಹೆಂಡತಿಯ ‘ಪೋಸ್ಟ್ ಮಾರ್ಟಂ’ ಮಾಡಿದ ನಾನೇ ಅಭಿಪ್ರಾಯ ಕೊಟ್ಟಿದ್ದೇನಲ್ಲ. ಅದು ಸಹಜ ಸಾವಲ್ಲ, ಆತ್ಮಹತ್ಯೆಯೂ ಅಲ್ಲ… ಕೊಲೇಂತಾ… ಇನ್ನೇನು ಬೇಕು ನಿಮಗೆ?”
“ಸರೀಮ್ಮ… ನೀನು ಹೇಳಿದ ಹಾಗೇನೆ.. ಅದು ಕೊಲೇನೇ ಆಗಿರಲಿ… ಆದರೆ ಕೊಲೆಗಾರ ಅವನೇಂತ ಹೇಗೆ ಹೇಳ್ತೀಯಾ? ನೀನೇನಾದ್ರೂ ನೋಡಿದ್ದೆಯಾ?” ಸಾಕ್ಷಿಗಳಿದ್ದಾರೆಯೆ?”
“ಸಾಕ್ಷಿಗಳಿದ್ದಾರೆ… ಇಡೀ ಹಳ್ಳಿನೆ ಸಾಕ್ಷಿ ನೀಡುತ್ತೇರಿ” ಉದ್ವೇಗದಿಂದ ಹೇಳುತ್ತಿದ್ದ ಮೀರಾಳತ್ತ ನೋಡಿದ ಗೋಪಾಲ ನಕ್ಕು,
“ಅದಕ್ಕೇ ಹೇಳೋದು. ವಿದ್ಯೆ… ಡಿಗ್ರಿಯಿದ್ದರೆ ಸಾಲದು. ವ್ಯವಹಾರ ಜ್ಞಾನವೂ ಇರ್‍ಬೇಕೂಂತ. ಅದೇನೇ ಇರಲಿ ಬಿಡು ಸಾಕ್ಷಿಗಳು ಬರಲಿ. ಸಾಕ್ಷಿ ನೀಡಲಿ… ನಾವ್ಯಾಕೆ ಕಾದಾಡಬೇಕು? ಆಂ?” ಹೇಳುತ್ತಾ… ಸಿಗರೇಟನ್ನು ಹೊತ್ತಿಸುತ್ತಾ ಬಾಯಿಗಿಟ್ಟುಕೊಂಡ. ಮೀರಾಳಿಗೆ ಮತ್ತೂ ಕೋಪ ಬಂದಿತು.
“ನಿರಪರಾಧಿಗಳನ್ನು ಜೈಲು ಸೇರಿಸಿ, ಅಪರಾಧಿಗಳನ್ನು ಹೊರಗೆ ಓಡಾಡಲು ಬಿಡುವ ನಿಮ್ಮ ಕಾನೂನು ಎಂಥಾದ್ದೂರಿ?”
“ಆಧಾರಗಳಿಲ್ಲದೆ ಅಪರಾಧೀಂತ ಹೇಳಲಾಗದು ಮೀರಾ.. ಅಷ್ಟಕ್ಕೂ ನೀವು ಡಾಕ್ಟರುಗಳು ಕೊಡೋ ಸರ್ಟಿಫಿಕೇಟ್ ಆಧಾರದ ಮೇಲೆ ನಾವುಗಳು, ವಾದ
ಮಾಡೋದು? ಸುಳ್ಳು… ಸರ್ಟಿಫಿಕೇಟುಗಳನ್ನು ಯಾರೂ ಕೊಟ್ಟೆ ಇಲ್ವಾ?.” ಗೋಪಾಲ ಬೇಕೆಂದೇ ಕೆಣಕಿದ.
“ಇರಬಹುದು. ಆದರೆ ಎಲ್ರೂ ಹಾಗೆ ಮಾಡೋಲ್ಲ. ಒಂದು ವೇಳೆ ಎಲ್ಲಾದರೂ ಯಾರಾದರೂ ಆ ವಿಧದ ಸುಳ್ಳು ಸರ್ಟಿಫಿಕೇಟ್ ನೀಡಿದ್ದರೆ ಅದಕ್ಕೆ ಅನೇಕ ಮಹತ್ತರ ಕಾರಣಗಳಿದ್ದಿರಬೇಕು…”
“ಹೂಂ…”
“ಸರ್‍ಕಾರಿ ಕೆಲಸ ಮಾಡೋದರಿಂದ ರಾಜಕೀಯ ವ್ಯಕ್ತಿಗಳ ಬಲಿಷ್ಠ ಕಬಂಧ ಬಾಹುಗಳೀಗೆ ಹೆದರಿ, ತಮ್ಮ ಹೊಟ್ಟೆಪಾಡು ನಾಯಿಪಾಡಾಗಬಹುದೆಂಬ ಭಯವೂ ಇದ್ದಿರಬಹುದು…”
“ಹೂಂ… ಆಮೇಲೆ?”
“ಕೊಲೆ ಪ್ರಕರಣವಾದರೆ, ಪೋಸ್ಟ್ ಮಾರ್ಟಂ ರಿಪೋರ್ಟ್ ನಿಡುವಾಗ, ವಿರುದ್ಧ ಪಾರ್ಟಿಯವರಿಂದ ಜೀವ ಭಯದ ಬೆದರಿಕೆ ಅಥವಾ ಸೇಡಿಗಾಗಿ ತನ್ನ ಕುಟುಂಬವನ್ನೇ ಹಿಂಸಿಸಿ ಬಲಿ ತೆಗೆದುಕೊಂಡಾರೆಂಬ ಭಯದಿಂದಲೂ ಇರಬಹುದು…”
“ಆ ಸಮಯದಲ್ಲಿ, ಪೊಲೀಸ್ ಇಲಾಖೆಯ ಸಹಾಯ ಕೋರಬಹುದಲ್ವಾ?”
ವ್ಯಂಗ್ಯ ಅವಳ ತುಟಿಗಳಲ್ಲಿ ಸುಳಿಯಿತು.
“ಯಾವ ಇಲಾಖೇನೂ ಅವಮಾನಪಡಿಸುವ ಹಾಗಿಲ್ಲ ಮೀರಾ… ಎಲ್ಲಾ ಇಲಾಖೆಗಳೂ ಸಹಕಾರದಿಂದ ಮಾಡುವ ಕೆಲಸಗಳು ಅನೇಕವಿರುತ್ತದೆ….”
“ನಾನ್ಯಾಕೆ ಅನುಮಾನ ಪಡಿಸಲಿ?… ನನಗಾಗಿದ್ದ ಆ ಕಹಿ ಅನುಭವದಿಂದ ನಂಬಿಕೆ ಸತ್ತುಹೋಗಿ, ಸತ್ಯ ಹೇಳ್ತಾ ಇದ್ದೀನಿ ಅಷ್ಟೆ ಒಳ್ಳೆಯವರೂ ಇರಬಹುದು…” ಎನ್ನುತ್ತಾ ಮೀರಾ ಮುಂದೆ ವಾದ ಮಾಡಲು ಇಷ್ಟವಿಲ್ಲದವಳಂತೆ ತಟ್ಟನೆದ್ದು ಒಳಗೆ ಹೋದಳು.
ಗೋಪಾಲ ಅಲ್ಲೇ ಕುಳಿತಿದ್ದ. ಯಾವುದೋ ಚರ್ಚೆಗಿಳಿದರೆ, ಸೋತರೆ ಧಿಗ್ಗನೆದ್ದು ಹೋಗಿ ಬಿಡುವ, ಗೆದ್ದರೆ ಗೆಲುವಿನಿಂದ ಬೀಗುವ ಹೆಂಡತಿಯ ವರ್ತನೆ ಗೋಪಾಲನಿಗೆ ಹೊಸದಾಗಿರಲಿಲ್ಲ. ವೃತ್ತಿ ಬೇರೆ… ವೈಯಕ್ತಿಕ ಜೀವನ ಬೇರೆಯೆಂದು ಸಾರಿ ಸಾರಿ ಹೇಳಿದರೂ ಭಾವುಕಳಾದ ಮೀರಾ ಬದಲಾಗಿರಲಿಲ್ಲ. ಭಾವೋದ್ವೇಗಗಳ ಒತ್ತಡದಿಂದ ಅವಳು ಹೊರಬಂದು ಸಹಜ ಸ್ಥಿತಿಗೆ ಬರುವಷ್ಟರಲ್ಲಿ, ಮನೆಯು ಯುದ್ಧದ ನಂತರದ ರಣಭೂಮಿಯಂತೆ ಭಾಸವಾಗುತ್ತಿತ್ತು. ಈ ದಿನವೂ ಅದೇ ಸ್ಥಿತಿ ಉಂಟಾಗಿತ್ತು. ತನ್ನ ಬಳಿ ಬಂದವನನ್ನು ಉಳಿಸುವ ಕರ್ತವ್ಯ ತನ್ನದಾದುದರಿಂದ ಗೋಪಾಲ ತನ್ನ ಕೇಸನ್ನು ಬಿಟ್ಟುಕೊಡಲಿಲ್ಲ. ವಾದ ಮಾಡಿ ಗೆಲ್ಲುವೆನೆಂಬ ಆತ್ಮವಿಶ್ವಾಸವೂ ಅವನಲ್ಲಿತ್ತು.
* * *
ಕಾರು ಬಂದು ನಿಂತು, ಧಡಾರನೆ ಹಾಕಿದ ಶಬ್ದಕ್ಕೆ ಮೀರಾ ವಾಸ್ತವ ಲೋಕಕ್ಕೆ ಬಂದಳು, ರೂಮಿನಲ್ಲಿ ಕತ್ತಲಾವರಿಸಿತ್ತು. ಕಾಫಿಕೊಟ್ಟು ಹೋಗಿದ್ದ ಗೌರಿ ಪುನಃ ಮೇಲೆ ಬರಲು ಹೆದರಿ ಕೆಳಗೇ ಉಳಿದಿದ್ದಳು. ಕುರ್ಚಿಯಿಂದ ಮೇಲೆದ್ದ ಮೀರಾ ಕತ್ತಲಿನಲ್ಲಿಯೇ ಬಾಲ್ಕನಿಯತ್ತ ನಡೆದು ಬಂದು ನಿಂತಳು. ಪೊರ್‍ಟಿಕೋದ ಪ್ರಖರವಾದ ದೀಪದ ಬೆಳಕಿನಲ್ಲಿ, ಕಾರಿನಿಂದಿಳಿದ ಗೋಪಾಲ, ಮತ್ತವನ ಸ್ನೇಹಿತ ಹಿಂದಿದ್ದ ಮತ್ತೊಂದು ಕಾರಿನಿಂದಿಳಿದ ಗೋಪಾಲ, ಮತ್ತವನ ಸ್ನೇಹಿತ ಹಿಂದಿದ್ದ ಮತ್ತೊಂದು ಕಾರಿನಿಂದಿಳಿದು ಏನನ್ನೋ ಗೋಪಾಲನ ಕೈಗೆ ನೀಡಿದ.
“ಅವನು ತುಂಬಾ ಹೆದರಿದ್ದ ಕಣಯ್ಯ… ನಿನ್ನ ಹೆಂಡತೀನೆ ಪೋಸ್ಟ್ ಮಾರ್ಟಂ ಮಾಡಿದ್ದ ಡಾಕ್ಟರ್ ಅಂತ ಗೊತ್ತಾಗಿ, ತನ್ನ ಕತೆ ಮುಗಿಯಿತೂಂತ ಹೆದರಿ ಓಡಿಬಂದಿದ್ದ…” ಸ್ನೇಹಿತ ಹೇಳುತ್ತಿದ್ದಂತೆಯೇ ಅರ್ಧದಲ್ಲಿ ತಡೆದ ಗೋಪಾಲ,
“ನಾವು ಬ್ರಹ್ಮರಂತ ಈಗ ತಿಳಿದಿರಬೇಕು. ನಾವು ಸೃಷ್ಟಿಸುವ ಸುಳ್ಳು ಕೂಡಾ ಸತ್ಯದ ತಲೆಯ ಮೇಲೆ ಹೊಡೆದಂತಿರುತ್ತದೆ. ಏನಂತೀಯಾ?” ವಿಜಯದ ನಗುವಿನಿಂದ ಹೇಳುತ್ತಿದ್ದ.
“ನಾವಂದುಕೊಂಡ ಹಾಗೆ ಸರಳವಾದ ಕೇಸಾಗಿರಲಿಲ್ಲ. ಎರಡು ಗ್ರಾಮಗಳ ಎರಡು ಬಣಗಳ ಹೋರಾಟವಾಗಿತ್ತು. ಅಂತೂ ನೀನು ಅವನನ್ನು ಉಳಿಸಿದೆ. ನಿರಪರಾಧೀಂತ ಸಾಬೀತುಪಡಿಸಿದೆ… ನಾನಿನ್ನು ಬರ್‍ಲಾ?” ಸ್ನೇಹಿತ, ಹೊರಟು ತನ್ನ ಕಾರಿನ ಬಾಗಿಲು ತೆರೆದ.
“ಊಟ ಮಾಡ್ಕೊಂಡ್ ಹೋಗಬಹುದಿತ್ತು…”
“ಊಹೂಂ… ಇನ್ನೊಂದ್ಸಾರಿ ಬರ್‍ತೀನಿ… ಬರ್‍ಲಾ… ಗುಡ್ ನೈಟ್…”
ಅವನು ಹತ್ತಿ ಕುಳಿತ ಕೂಡಲೆ ಕಾರು ಹೊರಟಿತು. ಮೀರಾಳಿಗೆ ಮುಂದೆ ಅಲ್ಲಿ ನಿಲ್ಲಲಾಗಲಿಲ್ಲ. ಹುಚ್ಚಿಯಂತೆ ಓಡುತ್ತಾ ಕೆಳಗಿಳಿದು ಬಂದು ಗಂಡನ ಮುಂದೆ ನಿಂತು,
“ಯಾಕೆ ಹೀಗೆ ಮಾಡಿದಿರಿ?” ಉದ್ವೇಗದಿಂದ ಕೇಳಿದಳು. ವೇಗವಾಗಿ ಇಳಿದು ಬಂದಿದ್ದಕ್ಕೋ ಆವೇಶಕ್ಕೋ ಅವಳೆದೆ ಏರಿಳಿಯುತ್ತಿತ್ತು. ಮೂಗಿನ ಹೊಳ್ಳೆಗಳು ಅರಳಿ, ತುಟಿಗಳು ಕಂಪಿಸುತ್ತಿದ್ದವು.
“ನನ್ನ ಕರ್ತವ್ಯ ನಾನು ಮಾಡಿದೆ ಅಷ್ಟೆ…” ಎಂದ ನಿರ್ಲಿಪ್ತ ಸ್ವರದಲ್ಲಿ.
“ಇಲ್ಲ… ನೀವು ಒಬ್ಬ ಕೊಲೆಗಾರನನ್ನು ಬಿಡಿಸಿದಿರಿ.. ಒಂದು ಅಮಾಯಕ ಮುಗ್ಧ ಹೆಣ್ಣನ್ನು, ಕುತ್ತಿಗೆ ಹಿಸುಕಿ ಕೊಂದ ಪಾಪಿಯನ್ನು ಉಳಿಸಿದಿರಿ…”
“ಮೀರಾ..” ಆಸಹನೆಯಿಂದ ಹೆಂಡತಿಯನ್ನು ತಳ್ಳಿಕೊಂಡು ಒಳಗೆ ಬಂದ.
“ಹೇಗೆ?…ಹೇಗೆ? ಬಿಡಿಸಿದಿರಿ…” ಹುಚ್ಚಿಯಂತೆ ಕೇಳುತ್ತಾ ಹಿಂಬಾಲಿಸಿದಳು. ನಿರಾಶೆ, ಹತಾಶೆ, ನೋವು ಅವಮಾನದಿಂದ ಕಂಪಿಸುತ್ತಿದ್ದಳು.
“ಅಲಿಬಿ (Alibi)ಆಧಾರದ ಮೇಲೆ ಬಿಡಿಸಿದೆ…”
“ಅಂದರೆ?”
“ಆಕೆಯ ಸತ್ತ ಸಮಯದಲ್ಲಿ, ಅವನು ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಂತ ದಾಖಲೆಗಳು ಸಿಕ್ಕವು… ಅವುಗಳ ಆಧಾರದ ಮೇಲೆ…”
“ಸುಳ್ಳು… ಎಲ್ಲಾ ಸುಳ್ಳು… ನೀವೇ ಸೃಷ್ಟಿಸಿದ್ದು… ಉದ್ವೇಗದಿಂದ ಚೀರಿದಳು. ಒಂದು ಕ್ಷಣ ಹೆಂಡತಿಯತ್ತ ತೀಕ್ಷಣವಾಗಿ ನೋಡಿದ ಗೋಪಾಲ.
“ನೀನು ನೀಡಿರುವ ಪೋಸ್ಟ್ ಮಾರ್ಟಂ ವರದಿಯೂ ಸುಳ್ಳು. ಆಕೆಗೆ ಕ್ಷಯರೋಗವಿದ್ದುದರಿಂದ ಸತ್ತಳೂಂತ ದಾಖಲೆಗಳಿವೇಂತ ಹೇಳ್ತಾರೆ” ಎಂದ.
ಮೀರಾಳ ಮೈಮೇಲೆ ಹಿಮ ಸುರಿದಂತಾಯಿತು. “ಯಾರೂ ತಾವು ಅತ್ಯಂತ ಪ್ರವೀಣರು, ತಮಗಿಂತ ಚಾಣಾಕ್ಷರು ಯಾರೂ ಇಲ್ಲಾಂತ ಅಂದ್ಕೋಬಾರದು. ವಿದ್ಯೆ ಬೇರೆ… ವೃತ್ತಿ ಬೇರೆ… ನಿಜವಾದ ಬದುಕೇ ಬೇರೆ. ನಿನ್ನ ಪಾಲಿನ ಕೆಲಸ ನೀನು ಮಾಡಿದ್ದೀಯಾ… ನನ್ನ ಪಾಲಿನ ಕೆಲಸ ನಾನು ನಿರ್ವಹಿಸಿದ್ದೇನೆ. ಅದು ನಿನ್ನ ಪ್ರಕಾರ ಕೊಲೆಯೇ ಆಗಿದ್ದಿರಬಹುದು. ನಾನು ಅದನ್ನು ಕೊಲೆಯೇ ಅಲ್ಲಾಂತ ಹೇಳ್ತಾಯಿಲ್ಲವಲ್ಲ? ಆದರೆ ಆ ಕೊಲೆ ಮಾಡಿದ ವ್ಯಕ್ತಿ ಈತನಲ್ಲಾಂತ ಹೇಳಿದ್ದಾಯಿತು. ಕೊಲೆ ಮಾಡಿದವನು ಇವನಲ್ಲದ ಮೇಲೆ ಕೊಲೆ ಮಾಡಿದವರು ಮತ್ತಾರೋ ಇರಲೇಬೇಕಲ್ಲವಾ? ಅದನ್ನು ಹುಡುಕುವ ಹೊಣೆ ನನ್ನ ಮತ್ತು ನಿನ್ನ ಇಲಾಖೆಯದಲ್ಲ…”
“…”
“ಆ ವಿಷಯ ಮರೆತುಬಿಡು. ಇದು ಕೋರ್ಟಲ್ಲ. ನಿನ್ನ ಆಸ್ಪತ್ರೆಯೂ ಅಲ್ಲ… ನಮ್ಮ ಮನೆಯಿದು. ನಾನು ನಿನ್ನ ಗಂಡ… ನೀನು ನನ್ನ ಹೆಂಡತಿ… ಅಷ್ಟು ನೆನಪಿದ್ದರೆ ಸಾಕು…” ಎನ್ನುತ್ತಾ ಗೋಪಾಲ ದಡದಡನೆ ಮೆಟ್ಟಿಲೇರಿ ಮೇಲೆ ಹೋದ.
ಅವ್ಯಕ್ತ ಕೈಯೊಂದು ತನ್ನ ಗಂಟಲನ್ನು ಬಲವಾಗಿ ಹಿಡಿದು ಒತ್ತಿದಂತಾಗಿ, ಉಸಿರು
ಕಟ್ಟಿದವಳಂತೆ ನಿಂತಳು.
*****









