ಇಂದು ಬರುವಳು ನನ್ನ ಮನದನ್ನೆ, ಮಾನಸಕೆ
ಸಂತೋಷ ಸಂಭ್ರಮೋತ್ಸಾಹ ಸುರಿಸಿ,
ಒ೦ದು ತಿ೦ಗಳಗಾಧ ವಿರಹ ಸಾಗರವನ್ನು
ದಾಟಿಪಳು ಸಗ್ಗದೀವಿಯನೊದವಿಸಿ
ಎಲ್ಲಿ ನೋಡಿದರಲ್ಲಿ ನಲವಿನೈಸಿರಿಯೇರಿ,
ಒಲವಿನೊಸಗೆಯ ಕುಣಿತ ಕಣ್ಣ ಮುಂದೆ:-
ಉದಯ ಭಾಸ್ಕರನಿಂದು ರಾಗ ರಕ್ತತೆಯಿಂದ
ಪ್ರೇಮ ಪೂಜಕನಾಗಿ ಮೆರೆಯುತಿಹನು
ವಿಗಹ ಸಂಕುಲದುಲಿತ ಸುಪ್ರೀತಿ ಸಂಗೀತ
ರಾಗ ರಸ ಮಧುನಾದವಾಗಿರುವುದು
ಕಣ್ಣಿದಿರ ಪೈರ ಬೆಳೆ ಹಸುರು ಹೊಳೆ ಹರಿವಂತೆ
ಒಲುಮೆಯೊಲೆವಂತೆ ಭಾಸವಿಹುದು.
* * * *
ಹಗಲುಗಳ ಜಕ್ಕವಕ್ಕಿಗಳಂತೆ ನಾವಿಬ್ಬ-
ರೆಡೆವಿಡದೆ ಸ೦ತತ೦ ಸೇರುವೆಯನು
ಪಡೆದಿರಲು ಬೇಕೆಂದು ಒಡನಾಟವಿರಲೆಂದು
ಸ್ವಾರ್ಥ ದೃಷ್ಟಿಯ ಚಿತ್ತ ಚಿಂತಿಸಿದರೂ,
ಆಗೊಮ್ಮೆ ಈಗೊಮ್ಮೆ ತಾಯಮನೆ-ತವರುವನೆ
ಯೆಂದು ಹೋಗಲು ಬರಲು ನಲ್ಲೆಗಿಹುದು
ಎಳೆತನದಿ ಸಾಕಿರುವ ತಂದೆ-ತಾಯ್ವಿರ ಮಮತೆ
ಬ೦ದು ಮಡದಿಯ ಕರೆದು ಕೊಂಡುಯ್ವುದು
ಆಗವಳ ನಗುಮೊಗದ ಬೆಳಗು, ಕದಪಿನ ಮೆರುಗು,
ಸವಿದುಟಿಗಿಂಪು-ಬೆಳ್ಗೆಂಪು-ಸೊಂಪು,
ಮನಸೆಳೆವ ನೀಳ್ಗಣ್ಣುಗಳ ಕಾಂತಿ-ಚಂಚಲತೆ
ಮುಂಗುರುಳುಗಳ ಕೊಂಕು-ಸುಳಿಯು-ಕಂಪು-
ಕೆಲವು ದಿನಗಳ ವರೆಗೆ ನನ್ನಿಂ ವಿಯೋಗವನು
ಪಡೆದು, ಸಹ್ಯಾಸಾಧ್ಯತೆಯ ಪಡೆವುವು
ಆದರೂ ಮನವು ಮೌನದೊಳಿರದೆ, ಭಾವನೆಯ
ಭಿತ್ತಿಯಲಿ ನಲ್ಲೆಯಂಕಿತ ಗುರುತಿಸಿ,-
ಕಾಲವನು ತಳುವಿ, ಇಂದಿನ ತೆರದ ದಿನವನ್ನು
ಕಾಂಬ ಸೈಪಿನ ಸುಕೃತವನುಭವಿಪುದು
ಎಂದಿಗಿಂತಲು ಇಂದು ಸಂತೋಷದಾಧಿಕ್ಯ.
ವದರಿಂದ ವಿರಹದಲಿ ಲಾಭವಿಹುದು
ಇ೦ದೋಪಳೈತಂದು, ಪ್ರೇಮ ಪ್ರವಾಹದಲಿ
ಆನ೦ದ ಜಲದಿಂದ ಮೀಯಿಸುವಳು!
ತೋಳುಗಳ ಹೂಸರಗಳಿಂದೆನ್ನ ಸೆರೆವಿಡಿದು,
ಸವಿ ಮುತ್ತುಗಳ ಮಾಲೆ ತೊಡಿಸಲಿಹಳು !!
*****
ಹೆಂಡತಿಯು ತವರುಮನೆಯಿಂದ ಬರುವ ದಿವಸ
೧೯೪೨








