ಶೈಲಮಂದಿರದಲ್ಲಿ
ಮಂಡಿಸಿದ್ದಳು ದೇವಿ
ಮತ್ತಾವ ತೊಡಕಿಗೋ?
ಚಿ೦ತಿಸುತ ಕುಳಿತು.
ಮಂದಿರದಲೆತ್ತಲು
ಪ್ರಾಂಗಣದ ಸುತ್ತಲು
ತುಂಬಿತ್ತು ಕತ್ತಲು
ಕದ್ದು ನಡೆದು.
ಮಿನಿಗಿತು ಸೊಡರು
ಮೂರ್ತಿಮುಂದೆ
ದೇವಿಮೋಗದೊಲುಮೆ
ಚಲುವ ಹರಿಸಿ.
ಯೋಜನದ ಮುಗಿಲಿನಾ
ಚಲುವಿನಾ ತಾರೆ!
ಮಿನಿಗಿದಳು ಸ್ವರ್ಣದಲ್ಲಿ
ಪಙ್ತಿಗೂಡಿ.
ವಿಜನಾಲಯದಿ
ಮೌನನಿಧಿಗೆದುರಾಗಿ
ನಮಿಸಿದಳು ದೇವಿ
ತೇಜ ಹೊಳೆಸಿ.
ಮೀಟಿದಳು ಮಾಲಿನಿ
ಮಾಧುರ್ಯವೀಣಾ
ಶಿವಪೂಜೆಗೈವದಕೆ
ಚಿತ್ತ ಹರಿಸಿ.
ಚಿನ್ಮಯಾತ್ಮಕಮೂರ್ತಿ
ಸ್ಮರಣೆಯಲಿ ನೆನೆದು,
ಸಂತಸದ ವಾಹಿನಿಯ
ಸೆಳೆಸಿದಳು ರಾಗದಲಿ;
ಶಾಂತತೆಯ ಪಡಿನೆಳಲ
ಮಂದಿರದಿ ಸೃಷ್ಟಿಸಿ,
ನಾದಮಯ ನೋಟವನು
ದೇಗುಲದಿ ತೋರಿದಳು.
ಜಟಾಧಾರಿಣೀ-
ತೇಜೋಮಾಲಿನಿ!
ಆಲಯವಿಹಾರಿಣಿ
ಕಾಂತಿಸೃಷ್ಟಿ ಹರಿಸಿ.
ಸಲ್ಲಿಸಿದಳವಳು-
ಶೈವೋಪಾಸನೆ
ಭವ್ಯಮಂದಿರದಲ್ಲಿ
ಮೇಳ ನುಡಿಸಿ.
ಮೌನಮುದ್ರೆಯನೊತ್ತಿ
ಮಂಡಿಸಿದ ಶೈವಮೂರ್ತಿ!
ರಾಜಿಸುತ ದೇಗುಲದಿ
ಪ್ರಖ್ಯಾತಕಾಂತಿ!
ದೇವಿವದನದಲಿ
ನಲಿದಿತ್ತು ಮಂದಹಾಸ
ಶೈವಾರಾಧನೆಯ
ಪರಿತಾರ್ಥಹಾಸ.
ಜ್ಯೋತಿ ಜೋಗುಳದಲ್ಲಿ
ಮಿನಿಗಿತ್ತು ಶ್ವೇತಶಿಲೆ,
ಕಾಂತಿ ರಮಣೀಯ
ಪ್ರಾಶಸ್ತಕ್ರೀಡೆ.
ವಿಜನ ಮಂದಾರಣದಿ
ಶೈವೈಕ್ಯ ಸಾಧನದಿ,
ಹರಿದಿತ್ತು ವೃಷ್ಟಿಧಾರೆ!
ವಾಹಿನಿಯ ಸಾಂತ್ವಧಾರೆ!
*****









