ನೀನು ಮೆಚ್ಚಿ ಬರೆ, ನನ್ನ ಮನಸು ತೆರೆ, ನಂದನ ವನವಲ್ಲಿ
ಕಾನನವರಳಿ ಜೇನಿನ ಮಳೆಯು ಪ್ರೇಮಪಾಕದಲ್ಲಿ
ನಿನ್ನನುರಾಗದ ಬಿಸಿಲಿಗೆ ಎನ್ನಯ ಮಾನಸ ಹಿಮ ಕರಗೆ
ಸನ್ನುತ ಗಂಗಾಜಲ ಹರಿವುದು ನೀನಿರುತಿಹ ಎಡೆವರೆಗೆ
ಎನ್ನ ಕಲ್ಪನೆಯ ಕಾಮಧೇನುವಿನ ಕರುವೆ ನಿನ್ನ ಕರೆಗೆ
ಎನ್ನ ಎದೆಯ ಹಾಲು ಚಿಮ್ಮುವವು ನಿನ್ನ ಬಾಯವರೆಗೆ
ನಿನ್ನಡಿಗೆಜ್ಜೆಗೆ ಹೆಜ್ಜೆಯ ಹಾಕುತ ಎನ್ನ ಪರಮಹಂಸ
ತನ್ನನೆ ಮರೆದುನ್ಮತ್ತ ಭಾವದಲಿ ಮೆರೆವ ರಾಜಹಂಸ
ದೇಹವೆನ್ನಯ ಕಲ್ಪದ್ರುಮದಲಿ ಬಯಕೆ ಹಣ್ಣಿಗೇನು!
ಸ್ನೇಹಕರಗಳಿ೦ದೆತ್ತು ಅವುಗಳನ್ನು ಸುಹೃದ-ಹೃದಯ ನೀನು
*****

















