ತೆಂಗುಗರಿಗಳ ನಡುವೆ ಚಂದ್ರಮನು ನಗುತಿರಲು
ಸೊದೆಗದಿರ ಹೀರಿ ಗರಿ ತೂರಾಡುತಿರಲು,
ಇಳೆಯ ಪೆರೆಯೊಲು ಚೆನ್ನೆ ಬಳಿಯೊಳೇ ಒರಗಿರಲು,
ಪ್ರಶ್ನೆಯಿದ ಕೇಳಿದೆನು ನಗುವುಕ್ಕುತಿರಲು:
“ನೋಡಿದೋ ಒಲವರಸಿ! ಗರಿ ಕಿರಣಗಳ ಕಣ್ಣ-
ಮುಚ್ಚಾಲೆಯಾಟವಿದು ಸೊಗಸುತಿಹುದೆಂತು!
ಈ ರಮ್ಯ ದೃಶ್ಯದಾ ರಚನೆಯೊಳು, ಚಂದ್ರಮಗೆ
ಗರಿ ಋಣಿಯೊ, ಗರಿಗೆ ಚಂದ್ರನು ಋಣಿಯೊ ಎಂತು?”
ನನ್ನವಳ ಕಂಗಳನು ತುಂಟತನ ಕುಣಿಸುತಿರೆ
ಮಿಂಚಿನೊಲು ತರು ಬಳುಕೆ, ಒರೆದಳೆನಗಿಂತು:
“ಒಲವರಸ! ಈ ಬಾಳು ಇಂತು ಸೊಗಸಲು, ನನಗೆ
ನೀ ಋಣಿಯೊ, ನಿನಗೆ ನಾ ಋಣಿಯೊ ಎಂತು?”
*****

















