ಹೈಕೆ

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು ಬೇರೆ ಹೇಳಬೇಕಿಲ್ಲವಷ್ಟೆ. ಮೊಮ್ಮಗನು ಬೆಳೆದು ದೊಡ್ಡವನಾಗಿ ಹೈಕೆ ಬಣದ ಅಧಿಕಾರ ಶಾಶ್ವತವಾಗುವ ಕನಸನ್ನು ಅವಳು ಕಾಣುತ್ತಿದ್ದಳು.

ಹೈಕೆ ಬಣಕ್ಕೆ ವಿರುದ್ಧವಾದ ಇನ್ನೊಂದು ಬಣವಿತ್ತು. ಇವರು ಗೆಂಜಿಗಳು. ಎರಡೂ ಬಣಗಳು ಅಧಿಕಾರಕ್ಕೋಸ್ಕರ ಪದೇ ಪದೇ ಹೋರಾಟಗಳನ್ನು ನಡೆಸುತ್ತಿದ್ದುವು. ಅವರು ತಾವು ಒಬ್ಬರಿಗಿಂತ ಒಬ್ಬರು ಮೇಲ್ತರಗತಿಯವರು ಎಂದು ತಿಳಿದಿದ್ದರು. ಆದ್ದರಿಂದ ದೇಶದ ರಾಜ್ಯಭಾರ ತಮ್ಮ ಹಕ್ಕು ಎಂದು ಎರಡೂ ಬಣದವರ ವಾದ. ಹೀಗೆ ಪದೇ ಪದೇ ನಡೆಯುತ್ತಿದ್ದ ಹೋರಾಟದಲ್ಲಿ ಎಷ್ಟೋ ಮಂದಿ ಯೋಧರು ಸಾಯುತ್ತಿದ್ದರು. ಇವರು ಹರಿಸಿದ ರಕ್ತವೇ ಜಪಾನಿನ ನೆಲವನ್ನೂ ಜಲವನ್ನೂ ತೊಯ್ದು ಆ ದೇಶಕ್ಕೆ ಕೆಂಪು ಸೂರ್ಯನ ದೇಶವೆಂಬ ಹೆಸರು ಬಂದಿರಲಿಕ್ಕೂ ಸಾಕು. ಸಾಮುರಾಯಿಗಳು ಸಾವನ್ನೂ ಲೆಕ್ಕಿಸುವವರಲ್ಲ. ಅವರಿಗೆ ಹೆಸರು, ಗೌರವ, ಅಭಿಮಾನ ಇತ್ಯಾದಿಗಳು ಮುಖ್ಯ. ಆದ್ದರಿಂದ ಇಬ್ಬಣಗಳ ಯೋಧರೂ ಜೀವದ ಹಂಗು ತೊರೆದು ಹೋರಾಟವನ್ನು ಮುಂದುವರಿಸುತ್ತಿದ್ದರು.

ಹೈಕೆ ಮತ್ತು ಗೆಂಜಿಗಳ ನಡುವೆ ನಡೆದ ಕೊನೆಯ ಹೋರಾಟವನ್ನು ಈಗ ವಿವರಿಸುವೆನು. ಇದು ನಡೆದುದು ಡನ್ನೊ-ಉರಾ ಎಂಬ ದ್ವೀಪದ ಬಳಿ ಸಮುದ್ರದಲ್ಲಿ. ಈ ಸಮುದ್ರ ಯುದ್ಧದಲ್ಲಿ ಅನೇಕ ನೂರು ಹಡಗುಗಳನ್ನು ತೊಡಗಿಸಲಾಗಿತ್ತು. ಇದೇ ನಿರ್ಣಾಯಕ ಯುದ್ಧವೆಂಬುದು ನೀಗೆ ತಿಳಿದಿತ್ತು. ಅವಳು ತನ್ನ ಕಡೆಯ ಎಲ್ಲ ಯೋಧರನ್ನೂ ಹುರಿದುಂಬಿಸಿದಳು. ಅವರಿಗೆ ಹೈಕೆ ಮನೆತನದ ವೀರಗಾಥೆಗಳನ್ನು ನೆನಪು ಮಾಡಿದಳು. ವೈರಿಗಳನ್ನು ಸಂಪೂರ್ಣವಾಗಿ ನಾಶಮಾಡುವ ಪ್ರತಿಜ್ಞೆಯನ್ನು ಹೇಳಿದಳು.

ಏಳು ವರ್ಷ ವಯಸ್ಸಿನ ತಮ್ಮ ರಾಜನನ್ನು ಪರಿಚಾರಿಕೆಯರು ಅಲಂಕರಿಸಿದರು. ಅವನ ಕೂದಲನ್ನು ಬಾಚಿ ರಾಜನ ಪೋಷಾಕನ್ನು ತೊಡಿಸಿದರು. ಅದೇರೀತಿ ನೀ ಕೂಡ ವಸ್ತ್ರಾಲಂಕೃತೆಯಾದಳು. ಇಬ್ಬರೂ ಹಡಗನ್ನೇರಿ ಪಡೆಯನ್ನು ಸೇರಿಕೊಂಡರು.

ಹೋರಾಟ ಇಡಿಯ ದಿನ ಸತತವಾಗಿ ನಡೆಯಿತು. ಡೆನ್ನೂ-ಉರಾ ಕಡಲ ನೀರು ಯೋಧರ ನೆತ್ತರಿನಿಂದಲೂ ಸೂರ್ಯನ ಕಠಿಣವಾದ ಕಿರಣಗಳಿಂದಲೂ ಉಜ್ವಲವಾಗಿ ಹೊಳೆಯತೊಡಗಿತು. ಗೆಂಜಿಯರು ಸಂಖ್ಯಾಬಲದಲ್ಲೂ ಯುದ್ಧ ತಂತ್ರದಲ್ಲೂ ಮೇಲುಗೈಯಿದ್ದರು. ಹೈಕೆ ದಳದವರ ಸೋಲು ಖಚಿತವಾಗಿತ್ತು. ಅವರಲ್ಲಿ ಅನೇಕ ಜನರು ಈಗಾಗಲೆ ವಿರೋಧಿಗಳ ಬಾಣಗಳಿಗೆ ಗುರಿಯಾಗಿ ಸತ್ತುಬಿದ್ದಿದ್ದರು. ಉಳಿದವರು ಅಪ್ರತಿಭರಾದರು. ವಿರೋಧಿಗಳಿಗೆ ಸೆರೆಸಿಕ್ಕುವ ಅವಮಾನವನ್ನು ಅವರು ಸಹಿಸುವಂತಿರಲಿಲ್ಲ. ಅದ್ದರಿಂದ ಅವರು ಸಮುದ್ರಕ್ಕೆ ಹಾರಿ ಆಸುನೀಗಿದರು.

ಅಂತೋಕು ಎಲ್ಲವನ್ನೂ ನೋಡುತ್ತಿದ್ದನು. ಅವನಿಗೆ ಬಹಳ ಆಯಾಸವಾಗಿತ್ತು. ಆದರೂ ಅವನು ಬಹಳ ಸುಂದರವಾದ ಬಾಲಕ. ಅವನು ನಿಂತಲ್ಲಿ ಸುತ್ತಲೂ ಒಂದು ಪ್ರಭಾವಲಯ ಬೀಳುವಷ್ಟು ಚೆನ್ನಾಗಿ ಕಾಣಿಸುತ್ತಿದ್ದನು. ಅವನ ತಲೆಗೂದಲು ಕಪ್ಪಾಗಿ ನಯವಾಗಿ ಬೆನ್ನ ಹಿಂದೆ ಬಿದ್ದಿತ್ತು. ಅಂತೋಕು ಬಹಳ ಗೊಂದಲದಿಂದ ಅಜ್ಜಿಯನ್ನು ಕೇಳಿದನು:

“ನನ್ನನ್ನು ಎಲ್ಲಿಗೆ ಒಯ್ಯುತ್ತೀ?”

ನೀ ತನ್ನ ಮೊಮ್ಮಗನನ್ನು ಕಂಬನಿ ತುಂಬಿದ ಕಣ್ಣುಗಳಿಂದ ನೋಡಿದಳು.

ಕಣ್ಣೀರ ಹನಿಗಳು ಅವಳ ಕದಪುಗಳಲ್ಲಿ ಇಳಿಯುತ್ತ ಪ್ರಾತಃಕಾಲದ ಸೂರ್ಯನ ಕಿರಣಗಳಿಗೆ ತಳತಳನೆ ಹೊಳೆಯುತ್ತಿದ್ದವು. ಅವಳು ಮೊಮ್ಮಗನ ತಲೆಯನ್ನು ನೇವರಿಸಿದಳು. ಅವನ ಬೂದು ಬಣ್ಣದ ಅಂಗವಸ್ತ್ರದಲ್ಲಿ ಆ ದಟ್ಟ ತಲೆಗೂದಲನ್ನು ಎತ್ತಿ ಕಟ್ಟಿದಳು. ಅಂತೋಕುವಿಗೆ ತುಂಬ ದುಃಖವಾಯಿತು. ತನ್ನ ಪುಟ್ಟ ಸುಂದರ ಹಸ್ತಗಳನ್ನು ಜೋಡಿಸುತ್ತ ದೇವರಿಗೆ ವಿದಾಯ ಹೇಳಲು ಪೂರ್ವಕ್ಕೆ ತಿರುಗಿದನು. ನಂತರ ಪಶ್ಚಿಮ ದಿಕ್ಕಿಗೆ ತಿರುಗಿ ಅಮಿತಾಭ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿದನು. ನೀ ಅವನನ್ನು ಎತ್ತಿ ತನ್ನ ತೋಳುಗಳಲ್ಲಿ ಹಿಡಿದುಕೊಂಡು ನಮ್ಮ ರಾಜಧಾನಿ ಸಮುದ್ರದ ತಳದಲ್ಲಿದೆ ಎನ್ನುತ್ತ ಕೆಳಕ್ಕೆ ಜಿಗಿದಳು.

ನಲವತ್ತಮೂರು ಹೆಂಗಸರನ್ನುಳಿದು ಇಡಿಯ ಹೈಕೆ ಪಂಗಡವೇ ನಿರ್ಮೂಲವಾಗಿತ್ತು. ಈ ಹೆಂಗಸರು ಅರಮನೆಯ ಪರಿಚಾರಿಕೆಯರ ವರ್ಗಕ್ಕೆ ಸೇರಿದವರಾಗಿದ್ದರು. ಅವರು ಸಮುದ್ರ ತೀರದಲ್ಲಿ ಹೂವುಗಳನ್ನು ಮಾರುತ್ತ ಜೀವನ ನಡೆಸತೊಡಗಿದರು. ಕ್ರಮೇಣ ಅಲ್ಲಿನ ಬೆಸ್ತರೊಂದಿಗೆ ಅವರು ಬೆರೆತರು. ಸಂಸಾರ ಸಾಗತೊಡಗಿತು. ಹೈಕೆ ಮನೆತನ ಅವಸಾನಗೊಂಡರೂ ಅದರ ನೆನಪು ಅವಸಾನಗೊಳ್ಳಲಿಲ್ಲ.

ಒಂದು ದಿನ ಬೆಸ್ತನೊಬ್ಬನು ಕೆಲವು ಏಡಿಗಳನ್ನು ಹಿಡಿದನು. ಅವುಗಳಲ್ಲಿ ಒಂದು ಮಾತ್ರ ಇತರ ಏಡಿಗಳಂತೆ ಇರಲಿಲ್ಲ. ಅದರ ಮುಖ ಸಾಮುರಾಯಿಗಳ ಮುಖವನ್ನೆ ಹೋಲುತ್ತಿತ್ತು. ಅದನ್ನು ಗುಡಿಸಲಿಗೆ ತಂದಾಗ ಅವನ ಹೆಂಡತಿಯೂ ಅದನ್ನೇ ಹೇಳಿದಳು. ನೆರೆಕರೆಯವರೆಲ್ಲ ಬಂದು ಈ ವಿಚಿತ್ರವನ್ನು ನೋಡಿದರು. ಸಾಮುರಾಯಿ ಏಡಿಯನ್ನು ತಿನ್ನುವುದಕ್ಕೆ ಯಾರೂ ಒಪ್ಪಲಿಲ್ಲ. ಅದನ್ನು ಸಮುದ್ರಕ್ಕೆ ವಾಪಸು ಕಳಿಸಿಕೊಡಲಾಯಿತು. ಉಳಿದ ಏಡಿಗಳನ್ನು ಸಂತೆಗೆ ತೆಗೆದುಕೊಂಡು ಹೋದರು. ನಂತರ ಇತರ ಕೆಲವು ಬೆಸ್ತರಿಗೂ ಇದೇ ಅನುಭವವಾಯಿತು. ಸಾಮುರಾಯಿ ಏಡಿಗಳು ಸಿಕ್ಕಿದಾಗಲೆಲ್ಲ ಅವನ್ನು ಸಮುದ್ರಕ್ಕೆ ಬಿಟ್ಟುಬಿಡುವುದು ರೂಢಿಯಾಯಿತು. ಹೀಗೆ ಸಮುದ್ರದಲ್ಲಿ ಸಾಮುರಾಯಿ ಏಡಿಗಳ ಸಂಖ್ಯೆ ಜಾಸ್ತಿಯಾಯಿತು. ಅವು ಸಮುದ್ರದ ತಳದಲ್ಲೂ ತೀರದಲ್ಲೂ ಸ್ವೇಚ್ಛೆಯಿಂದ ಓಡಾಡುತ್ತಿದ್ದುವು.

ಈ ಎಡಿಗಳ ಸೇನೆ ಸಮುದ್ರದಿಂದ ಎದ್ದುಬಂದು ಪೈರಿಗಳನ್ನು ಮತ್ತೆ ಸೋಲಿಸುತ್ತವೆ ಎಂದು ಹೈಕೆ ಸಂತಾನದವರು ನಂಬಿದರು. ಅದಕ್ಕಾಗಿ ಕೆಲವರು ಈ ಕೆಳಗಿನ ಹಾಡನ್ನು ಹುಣ್ಣಿಮೆಯ ರಾತ್ರಿಗಳಲ್ಲಿ ಹಾಡುವುದಿತ್ತು :

ಹೈಕೆ ಹೈಕೆ
ಹರಿದಾಡುವಿರಿ
ಓಡಾಡುವಿರಿ
ಒಂದರ ಮೇಲೊಂದು
ಮುಗ್ಗರಿಸುವಿರಿ
ಕಡಲಿನ ತಳವನು
ಹುಡುಕುತ್ತಿರುವಿರಿ
ಮೂಳೆ ತುಂಡುಗಳ
ಜೋಡಿಸುತಿರುವಿರಿ
ಅಂತುಕೊ ಅರಸನ
ಎಬ್ಬಿಸುತ್ತಿರುವಿರಿ
ಹೈಕೆ ಹೈಕೆ —

ಕ್ರಮೇಣ ಅವರಿಗೆ ಇವು ಕೇವಲ ಏಡಿಗಳೆಂದೂ ಸಾಮುರಾಯಿಗಳಲ್ಲವೆಂದೂ ಗೊತ್ತಾಯಿತು. ಆದರೂ ಸಾಮುರಾಯಿ ಏಡಿಗಳನ್ನು ತಿನ್ನಲು ಅವರ ಮನಸ್ಸು ಒಪ್ಪಲಿಲ್ಲ. ಹಾಡು ಹಾಡುವುದನ್ನು ಅವರು ಬಿಡಲೂ ಇಲ್ಲ.
*****
(ಕಾರ್ಲ್ ಸಾಗಾನ್ ನ ಕಾಸ್ಮೋಸ್ ಎಂಬ ಪುಸ್ತಕ ಓದಿ ಬರೆದುದು)

ಕೀಲಿಕರಣ ಮಾಡಿದವರು: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Tagged:

Leave a Reply

Your email address will not be published. Required fields are marked *

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...