ನಿಬಿಡವನದಲಿ ಪಟ್ಟಮುದ್ರೆಯನೊತ್ತಿ,
ಮಿಳಿದಿರುವೆ ರಂಗದಲಿ ವನಜ್ಯೋತ್ಸ್ನೆ!
ನಿಲುವಾಭರಣ ಚಲುವಸುಂದರಿಪಾರೆ!
ಪ್ರಕೃತಿ ತೋರಣದಲ್ಲಿ ಕೂಡಿರುವೆ, ವೈಯ್ಯಾರವನಿತೆ!
ಕಲಕಲನಿನಾದ ಚಲಚಲನೆ ವೈಖರಿಯ
ತೋರಿರುವೆ, ಸೃಷ್ಟಿ ಚೇತನದಲ್ಲಿ; ಸಂಭೂತೆ!
ನಸುಗೆಂಪುಬಣ್ಣ ತೊಡಿಗೆಯನುತೋರಿ.
ನಿಟ್ಟಡವಿ ದಟ್ಟವನದಿ ಮೆರೆದಿರುವೆ ಕಲ್ಯಾಣಿ!
ಪಾವನನಯನೆ ವನಜ್ಯೋತ್ಸ್ನೆ ಪರಿಪೂರ್ಣೆ!
ಪ್ರಕೃತಿ ಉಸುರಿನಲಿ ಭಾವಸೊಬಗನುತೋರಿ
ಕಾವ್ಯಮಯ ಜಗದಿ ನೀ ವಿಹಾರಿಣಿ ಅತುಳೆ!
ಹೃದಯದಲಿ ಹೊಮ್ಮುತಿದೆ ಉಕ್ಕೇರಿ ಭಾವನೆ
ಹರಿದು ಹೊನಲಾಗಿ ಹರಿಯುತಿದೆ ಮಾಯೆ!
ವನಿತೆ ನಿನ್ನೆಡೆಯ ಸೇರಲು, ತವಕದಿಂ ಸ್ವಪ್ನೆ!
ಕರತಲ, ಕಮಲ, ಕಮನೀಯ ಕಲಾನಿಪುಣೆ
ವಾಣಿ! ವಾಗ್ದವಿ! ಕಾವ್ಯಸರಸಿಯು ನೀನು
ಅಸಾರತ್ವದಲ್ಲಿ, ನಿರ್ಮಾಣ ಸುರಭಿಯಲಿ
ನದ, ನಭ, ನಟನೆ; ತತ್ಸಮಸ್ತದಲಿ
ದರ್ಶನನೀಡಿ ತಳತಳಿಸು ಮಹತಾಯೆ!
ಅತುಳ ತಾಪಸಕುವರಿ ವಿಖ್ಯಾತಮಾನ್ಯೆ!
*****


















