ನಸುಗಾಳಿ ಸುಳಿದು ಗಗನದಲಿ ನೆಗೆದು,
ಹೊಸ ನಗೆಯ ಸೆಳೆದಿತ್ತು ರಜನಿಯಲಿ ಮಿಂದು;
ದೂರದಲಿ ತಟನಿಯಲಿ ಮೂಕದಲಿ ಹಾಯ್ದು,
ಬೆರೆದಿತ್ತು ಇಳೆಯಲ್ಲಿ ಒಮ್ಮೆಯಲೆ ಉಳಿದು;
ಯೋಜನದ ಗಗನದಲಿ ಕವಿದಿತ್ತು ಮುಸುಕು,
ಮಂಡಲವನೆಲ್ಲವನು ಹುದುಗಿಟ್ಟು ನುಗಿದು;
ಮಲೆಗಳಲಿ ನೆಲೆಗಳಲಿ ನೀರವದ ಸೆರಗು,
ಜಾರಿತ್ತು ಮಾಯದಲಿ ನಿಶಿತದಲಿ ನಲಿದು.
ಝರಿನೀರು ಹೊಳೆಯಾಗಿ ಹರಿದಿತ್ತು ತಪ್ಪಲಲಿ,
ಹಚ್ಚನೆಯ ಹಳುವಿನಲಿ ತೆನೆಹಸುರ ಜತೆಯಾಗಿ.
ಪಡುವಣದದೆಸೆಎಸೆಯೆ ನಸುಗಾಳಿ ಭರವು,
ಹೊಕ್ಕಿದುದು ಆದ್ಯಂತ ಮುಬ್ಬನೆಯ ಕೊನೆಯು
ಗಗನದಲಿ ಭೋರ್ಗೆರೆದು ಗುಡುಗಿದವು ಸಿಡಿಲುಗಳು
ಭರದಲ್ಲಿ ಛಲದಲ್ಲಿ ಎದುರಾಳಿಗೆದುರಾಗಿ.
ಬಾನ್ದೇವಿ ಕೈ ಅಲುಕ ಗಜರಿದವು ಝುಳಪಿ
ಕೋಲ್ಮೀಂಚು ನಗೆಮಿಂಚು ಹೊರಸೂಸಿ ಸೆಳೆಸಿ
ಗುಡುಗುಗಳು ಸಿಡಿಲುಗಳು ಅಬ್ಬರದಿ ಸಿಡಿದು
ಹನಿಧಾರೆ ಒರೆಯಾಗಿ ಉದರಿದವು ಭರದಿ.
ಹಳುವಿನಲಿ ತೆನೆಹಸುರು ತೋಯುತಲಿ ನಲಿಯುತಲಿ
ಹೊಸನೀರ ಹನಿಯಿಂದ ತೂಗುತಲಿ ಬಾಗುತಲಿ
ಮನ್ನಣೆಯನರ್ಪಿಸಲು ನರ್ತನದಿ ಬಳುಕಿ
ಬಾಗಿದವು ಹೆಮ್ಮೆಯಲಿ ಬಾವಿಗೆದುರಾಗಿ.
*****


















