೧
ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ
ನಂದನ ಸರ್ಗದ ಸಮಾವೇಶವಿಹುದು
ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ-
ಳೇರಿರುವ ನಲವಿರದ ನರಕವಿಹುದು
೨
ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ-
ಳೊ೦ದಿರುವ ಶೃಂಗಾರ ಸೌರಭ್ಯವಿಹುದು
ಬೇರೊಂದು ಕಡೆ ವಿರಸ ವಿರಹದುರಿಯೆದ್ದಿರುವ
ನೈರಾಶ್ಯ-ಸ೦ತಾಪ ಸಂರೋಧವಿಹುದು
೩
ಒಂದೆಡೆ ಮನೋಹರ ಮೃದ೦ಗ ಸ೦ಗೀತ ಜಯ-
ದುಂದುಭಿಯ ಮಂಗಲ ಧ್ವಾನವಿಹುದು
ಬೇರೊಂದು ಕಡೆ ರೋದನದ ಕೀರುದನಿ ಸುಯ್ವ
ಮಾರುದ್ದ ನಿಟ್ಟುಸಿರ ನಾದವಿಹುದು
೪
ಒಂದು ಕಡೆ, ಕಿಲಕಿಲನೆ ನಗುತಿರುವ ಮೃದು ಹಸಿತ-
ದಿ೦ದಾದ ಮೆಲ್ಲುಲಿಯ ಬಿನದವಿಹುದು
ಬೇರೊಂದು ಕಡೆ ಮನವ ಮುಸುಕಿರುವ ಶೂನ್ಯತೆಯ
ಬೀರುತಿಹ ಚಿಂತಾನಲ ಜ್ವಾಲೆಯಿಹುದು
೫
ಒ೦ದು ಕಡೆ ಧನಿಕರಾಡಂಬರದ ಸಂರಂಭ-
ದೊಂದು ಮುದ-ಮದಯುತ ವಿಲಾಸವಿಹುದು
ಬೇರೊಂದು ಕಡೆ ಬಡವರಾನುವಾ ಹಸಿವಿಂದ
ಮೀರಿ ತೋರುವ ಬನ್ನ ಬಾಳ್ವೆಯಿಹುದು
೬
ಒಂದು ಕಡೆ ನಳನಳಿಸಿ, ನಲಿಯುತ್ತ, ಬೆಳೆಯುತ್ತ,
ಬಂದಿರುವ ಪಚ್ಚಪಸುರಿನ ಪೈರದಿಹುದು
ಬೇರೆ ಕಡೆ, ಬೆಂಗದಿರ ಬೀರುತಿಹ ಬಿಸಿಲಿಂದ
ಗಾರಾದ ನಿಷ್ಟ್ರಯೋಜನ ಭೂಮಿಯಿಹುದು
೭
ಒಂದು ಕಡೆ ಸುರಿಯುವೈಕಲ್ಸೋನೆಯಿಂ ಸೆಡೆದು,
ನಿ೦ದಿರದೆ ಗಡಗಡನೆ ನಡುಗುತಿರಬಹುದು
ಬೇರೊಂದು ಕಡೆ ಸೆಕೆಯ ಕಾವಿನೌಷ್ಣ್ಯವನಾನ-
ಲಾರದೇ ಸಂಕಟಂಬಡುತಲಿರಬಹುದು
೮
ಒಮ್ಮೆ ಸಮರದಿ ವೀರ-ವಿಜಯ ವಧು ಸಾಹಸದ
ಸಮ್ಮೋದದಿಂ ಸಾರ್ದು ಸಿರಿಯನುಗಬಹುದು
ಮತ್ತೊಮ್ಮೆ ಹೇಡಿತನವಡಹಸಿರಲು, ಹ೦ದೆಗೊಲಿ-
ದತ್ತಲೈತರಲಾರ್‍ಪಳಪಜಯಾಂಗನೆಯು
೯
-ಇಂತೆಸೆವ ವಿಧವಿಧ ವಿರುದ್ಧ ವಿಜ್ಞಾನಗಳ-
ನಾಂತಿಹುದು ಸ೦ತತಂ ತಿರೆಯಂತರಂಗ
ಇದರ ಚೆಲುವನು ನೋಡಿ, ನಲವಾಂತು ವಿಶ್ವಪತಿ
ಪುದಿದ ಬಿನದದಿ ಮುಗುಳುನಗುತಲಿರಬಹುದು.
೧೦
ಈ ದ್ವ೦ದ್ವೆಗಳಲೆಲ್ಲ ಸಾಮ್ಯವನ್ನಳವಡಿಸಿ,
ಸಾಧಿಸುತ, ಸಾಮರಸ್ಯವ ಸಂಧಿಸಿ,
ಯೋಗವನು ಯೋಜಿಪುದೆ, ಯೋಗಿಯೆಂದೆನಿಸುವುದೆ
ಯೋಗೇಶ್ವರಂ ಬೋಧಿಸಿದ ‘ಗೀತೆ’ ಯರಿವು
*****
೧೯೩೮

















