ಇರುಳಿನಲಿ ದೀವಿಗೆ-
ಸಿರಿನಾಡತೇರಿಗೆ
ಮುದುಭಾವ ಹಿರಿಮೆಯನು
ನಿಧಿಯಾಗಿ ಬೆಸೆಸಿತು.
ಪ್ರಬುದ್ಧ ಮಾರ್ಗದಲಿ-
ನಿಬ್ಬಣದ ಜತೆಯಾಗಿ
ಉಜ್ವಲದ ಕಾಂತಿಯನು
ಕೆಚ್ಚಿನಲಿ ತಂದಿತು.
ದೀವಿಗೆಯ ಮೆರಗು-
ಜೀವನದ ಅರಗು
ಸುತ್ತುತಲಿ ಬಳಿಸುತಲಿ
ಬಿತ್ತರದಿ ಮುಟ್ಟಿತು.
ಏಳಿಗೆಯನೋಲಗದಿ-
ಗೆಳೆತನದಮೇಳನದಿ
ಸಿರಿಯಾದ ಹೆಮ್ಮೆಯನು
ಒಲುವಾಗಿ ತಂದಿತು.
ದೇಗುಲದಮೂರ್ತಿ-
ಮಂಗಲದ ಕೀರ್ತಿ
ತೇಜಮಯ ಜ್ಯೋತಿಯನು
ಪ್ರಜ್ವಲಿಸಿ ಮೂಡಿತ್ತು.
ದೀವಿಗೆಯ ಬೆಳಕು-
ಚಲ್ವಿಕೆಯ ತಳಕು
ಪ್ರಖ್ಯಾತ ಮೂರ್ತಿಯನು
ಬಿಂಕದಲಿ ಮೆರೆಸಿತ್ತು.
ನೃತ್ಯಾವಿಲಾಸದಲಿ-
ಕೃತಿದೇವಿನೊಸಲಲ್ಲಿ
ಅಡಿಧಾರೆ ಮಣಿಹಿಡಿದು
ನಿಡಿದಾಗಿ ನಮಿಸಿತು.
ಕಾಂತಿಯನ್ನು ನೇವಿದಿಸಿ-
ಪರಿಶುದ್ದ ಮೊಗದಲ್ಲಿ
ದೇಗುಲದಿ ಚಿರವಾಗಿ
ಸೋಗಿನಲಿ ನಿಂತಿತು.
*****


















