Home / ಕಥೆ / ಸಣ್ಣ ಕಥೆ / ೨೪-೨-೧೯೩೦

೨೪-೨-೧೯೩೦

೨-೨-೧೯೩೦

“ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂದರೆ ಬೀಳುತ್ತಾನೆ. ಒಂದು ವೇಳೆ ಅವಳು ಸುರೂಪಿಯ ಅಲ್ಲದ, ಕುರೂಪಿಯೂ ಅಲ್ಲದಿದ್ದಲ್ಲಿ ಪುರುಷನು ಅವಳು ಸುಂದರಿಯೆಂದು ಭಾವಿಸಿಕೊಂಡು, ತಾನು ತಪ್ಪು ಮಾಡಿರುವೆನೆಂದು ತಿಳಿದುಕೊಂಡು, ಅದಕ್ಕಾಗಿ ಒದ್ದಾಡುತ್ತಾನೆ. ಇಷ್ಟೆಲ್ಲ ಒಬ್ಬ ಹೆಂಗಸಿನಿಂದ.”-ಗಾರ್ಕಿ

ನನಗೆ ಮದುವೆಯಾಗಿ ಇಂದಿಗೆ ಸರಿಯಾಗಿ ಎರಡು ವರ್ಷ ಆಯಿತು. ಈ ಎರಡು ವರ್ಷ ಪ್ರತಿ ದಿನವೂ ನನ್ನ ಮನಸ್ಸಿನಲ್ಲಿ ಏನು ಹೊಳೆಯುತಿತ್ತು ಅದನ್ನೇ ಈ ಗಾರ್ಕಿಯೂ ಹೇಳಿದ್ದಾನೆ. ಆದರೆ ನಾನು ಸರಸ್ವತಿಯನ್ನು ಪ್ರೀತಿಸದಿರುವುದು ಯಾರ ತಪ್ಪು? ನನ್ನದೆ ? ತಾಯಿಗಾಗಿ ಸಮ್ಮತಿಸಬೇಕಾಯಿತು. ಅಪ್ಪ ಸತ್ತು ಮೂರು ವರ್ಷವಾಗಿತ್ತು. ನನಗೆ ಕೆಲಸವಾಗಿ ಆರು ತಿಂಗಳಾಗಿತ್ತು. ಅಮ್ಮ ಈ ಮದುವೆ ಏರ್ಪಡಿಸಿದಳು. ಅವಳ ಮಾತಿಗೆ ಬದಲು ಹೇಳುವ ಧೈರ್ಯ ಇರಲಿಲ್ಲ. ಅದಕ್ಕಾಗಿ, ಗಂಡನಿಲ್ಲದ ಹೆಂಗಸಾದ ನನ್ನ ತಾಯನ್ನು ತೃಪ್ತಿ ಪಡಿಸುವುದಕ್ಕಾಗಿ, ನಾನು ಈ ಮದುವೆ ಮಾಡಿಕೊಂಡುದಕ್ಕೆ ಈಗ ಅನುಭವಿಸ ಬೇಕೇ! ಅವಳಿಗೆ ನಾನೂ ವ್ಯತಿರಿಕ್ತವಾಗಿ ನಡೆದಿದ್ದರೆ ಅವಳಿಗೆ ಹಿತ ಚಿಂತಕರು ಯಾರು? ಇದ್ದವನೊಬ್ಬ ಮಗ ಒಪ್ಪಬೇಕಾಯಿತು. ನನಗಾಗಲಿ ಸರಸ್ವತಿಗಾಗಲಿ ಈ ಮದುವೆಯಿಂದ ಏನು ಸುಖ? ಅವಳೇನೊ ಮನಃಪೂರ್‍ವಕ ನನ್ನನ್ನು ಪ್ರೀತಿಸುತ್ತಾಳೆ. ಆದರೆ ನಾನು ಪ್ರೀತಿಸಲಾರೆ. ಪ್ರೀತಿಸಬೇಕು … ಗೊತ್ತು … ಆದರೆ ಅಯ್ಯೋ! ಅವಳನ್ನು ನೋಡಿದರೆ ಹೆಂಚಿಕಡ್ಡಿಗೆ ಸೀರೆ ಸುತ್ತಿದಂತಿದೆ. ಗೆದ್ದಲು ತಿಂದ ಪುಸ್ತಕದ ಹಾಗಿದೆ ಅವಳ ಮುಖ, ತುಟಿ … ಅಬ್ಬಾ! ಆದರೆ ಅದು ಅವಳ ತಪ್ಪೆ? ನಾನು ಕಂಡೂ ಕಂಡೂ ತಾಯತೃಪ್ತಿಗಾಗಿ ಮಾಡಿಕೊಂಡೆ. ಮಾಡಿಕೊಂಡುದಕ್ಕೆ ಪ್ರೀತಿಸಬೇಕು. ‘ಈಸಬೇಕು, ಇದ್ದು ಜೈಸಬೇಕು!’ ದೇವರೇ ನನಗೆ ಧೈರ್ಯ ಕೊಡಬೇಕು.
* * *

೩-೨-೧೯೩೦
ಈ ದಿನ ಮಾವನವರಿಂದ ಕಾಗದ ಬಂತು. ಇದೇ ತಿಂಗಳು ೨೪ಕ್ಕೆ ನಮ್ಮ ಶಾಂತಿಪ್ರಸ್ತ ನಿಷ್ಕರ್ಷೆಯಾಗಿದೆಯಂತೆ! ಅಮ್ಮನಿಗೋ ಹಿಡಿಸಲಾರದ ಸಂತೋಷ, ನನ್ನ ಒಳಗುದಿ ಯಾರಿಗೆ ಹೇಳಲಿ! ಜನರು ನನ್ನ ಗೆಲವಿನ ಮುಖ ಕಂಡು ‘ಇವನಿಗೇನಪ್ಪ ರಾಜ’ ಎನ್ನುತ್ತಾರೆ. ನನ್ನ ಸಂಕಟ ತೋಡಿಕೊಂಡರೆ ಯಾವ ಮಗ ನನಗೆ ಸಹಾಯವಾಗಿ ನನ್ನ ಸಂಕಟ ನಿವಾರಣೆ ಮಾಡುವವನು? ಇವರೆಲ್ಲ ಮಾಡುವುದೆಂದರೆ ‘ಅಯ್ಯೋ ಪಾಪ’ ಎಂದಾರು. ಈ ಅಯ್ಯೋ ಪಾಪದಿಂದ ನನ್ನ ಬೇಗೆಯಡಗುವುದಾದರೆ ಬೇಕಾದಷ್ಟು ಗೋಳಾಡುತ್ತಿದ್ದೆ.

ಆಗಬಹುದೆಂದು ಮಾವನವರಿಗೆ ಮರುಮಾತು ಬರೆದೆ. ೨೪ರ ನೆನಪು ಬಂದು ಅನ್ನ ಸಹ ಸೇರಲಿಲ್ಲ. ಅಮ್ಮ ಎಂದಳು. ನನಗೆ ಸಂತೋಷವುಕ್ಕುತ್ತಿರುವಾಗ ಅನ್ನವೆಲ್ಲ ಬೇಕಾಗುವುದೆಂದು. ಪಾಪ! ಅವಳ ಸವಿಗನಸನ್ನು ನಾನೇಕೆ ಚೆದರಿಸಬೇಕು … ನಾನು ಮಾಡುವ ಗುಮಾಸ್ತೆ ಗಿರಿಯು ನನಗೆ ಸಂತೋಷವೆ? ಇಲ್ಲ; ಅದು ನಾನು ಹೊಟ್ಟೆ ತುಂಬಲು ಮಾಡಬೇಕಾದ ಕರ್ತವ್ಯ. ಹಾಗೆಯೇ ನಾನು ಈಗ ಒಪ್ಪಿದುದೂ ಮದುವೆಯಾದುದಕ್ಕಾಗಿ ಮಾಡಬೇಕಾದ ಕರ್ತವ್ಯ.

ಬಲ್ಲವ ಬಲ್ಲ ಬೆನ್ನಿನ ಬಿಗಿತ!
ಅಯ್ಯೋ! ನಾನು ಮದುವೆ ಮಾಡಿಕೊಳ್ಳದಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ! … ಅದಕ್ಕಿಂತ ನನ್ನ ತಂದೆಗೆ ಮದುವೆಯಾಗದಿದ್ದಿದ್ದರೆ…!
* * *

೪-೨-೧೯೩೦
ಈ ದಿನ ಬೆಳಿಗ್ಗೆ ರೂಂನಲ್ಲಿ ಕುಳಿತು ಬೀದಿಯಲ್ಲಿ ಕೊಳದ ಕಡೆಗೆ ನೀರಿಗೆ ಹೋಗುವ ಹೆಂಗಸರನ್ನು ಕಂಡೆ. ಆ ಮಯೂರಾ ಕಲರ್ ಸೀರೆಯವಳು ! ನನಗೆ ಅವಳನ್ನು ಮದುವೆಯಾಗುವ ಯೋಗವಿದ್ದಿದ್ದರೆ! ಆ ೨೪ ಇಂದೇ ಬರಬಾರದೇ! ಬದುಕು ಎಷ್ಟು ಸವಿಯಾಗಿರುತ್ತಿತ್ತು!

ಛೇ! ನಾನು ಮದುವೆಯಾದವನು. ೨೪ರಿಂದ ಅವಳೊಡನೆ ಸಂಸಾರ ಮಾಡಬೇಕು. ಬೀದಿಯ ಹೆಂಗಸರ ಮೇಲೆ ನಾನು ಕಣ್ಣು ಹಾಕುವುದೆ? ಎಂತಹ ಕೆಲಸ! ಇದು ಪಾಪ! ನಾನು ಹೀಗೆ ಮಾಡಿದರೆ ನನ್ನ ಹೆಂಡತಿಯೇಕೆ ಬೇರೆಯವರನ್ನು ನೋಡಬಾರದು? ಅದೂ ಪಾಪ! ಇಷ್ಟಕ್ಕೂ ಅವಳ ರೂಪಿಗೆ ಮೆಚ್ಚುವವರಾರು?

ಅಯ್ಯೋ! ಏನಿದೀ ಹಾಳು ಯೋಚನೆಗಳು! ಈಚೆಗೆ ಏಕೆ ಹೀಗಾಯ್ತು ನನ್ನ ಮನಸ್ಸು! ಕೈ ಹಿಡಿದವಳನ್ನು ತೃಪ್ತಿ ಪಡಿಸಬೇಕಾದುದು ನನ್ನ ಕರ್ತವ್ಯ-ಯಾವ ಕರ್ತವ್ಯಕ್ಕೆ ಶರಣಾಗಿ ತಾಯ ಮಾತಂತೆ ಮದುವೆಯಾದೆನೋ ಅದೇ ಕರ್ತವ್ಯ. ಆದರೇನು ಮಾಡಲಿ? ಅವಳನ್ನು ಪ್ರೀತಿಸಲಾರೆ. ಅವಳ ನೆನಪು ಬಂದಾಗಲೆಲ್ಲ ತಣ್ಣನೆಯ ಬೆವರು ಬಸಿಯುತ್ತದೆ. ಪ್ರೀತಿಸಬೇಕು … ಪ್ರೀತಿಸಬೇಕು … ಹೌದು … ಅರಿವುಂಟು … ಆದರೆ ಪ್ರೀತಿಸಲಾರೆ…
* * *

ಪ್ರೀತಿ … ! ೨೪ … ! ಅಯ್ಯೋ ದೇವರೆ!
* * * *

೫-೨-೧೯೩೦
ನೆನ್ನೆ ರಾತ್ರಿ ಒಂದು ಕನಸು. ನನ್ನ ಬದುಕಿಗೂ ಅದಕ್ಕೂ ಏನಾದರೂ ಸಂಬಂಧವುಂಟೆ? ಏನೋ!

ಯಮುನಾತೀರಕ್ಕೆ ಹೋಗಿದ್ದೆ. ಅಲ್ಲಿ ಹದಿನಾರು ಸಾವಿರ ಗೊಪಿಯರೊಡನೆ ಕೃಷ್ಣ ರಾಸವಾಡುತ್ತಿದ್ದ. ಗೋಪಿಯರ ರೂಪು ಕಂಡು, ಉನ್ಮತ್ತನಾಗಿ, ಅವರೆಡೆಗೋಡಿ, ನಡುವಿನ ಕೃಷ್ಣನನ್ನು ಸೆಳೆದು ಯಮುನೆಗೆಸೆದೆ. ಅವನು ಮುಳುಗಿದ ಸ್ಥಳದಲ್ಲಿ ದೊಡ್ಡದೊಂದು ಗುಳ್ಳೆ ಎದ್ದು ಸಿಡಿಯಿತು. ಗೋಪಿಯರೆಲ್ಲ ನನ್ನ ಸುತ್ತ ಒಲಿದು ಬಂದರು. ಅಷ್ಟರಲ್ಲಿ ಕಮಲಗಳ ನಡುವೆ ನೆಗೆದ ಬರಲ ಕಡ್ಡಿಯಂತೆ ಆ ಗೋಪಿಯರ ನಡುವೆ ಸರಸ್ವತಿ ಬಂದು ನನ್ನನ್ನು ಬೇಡಿದಳು. ನನಗೆ ರೇಗಿತು. ಕೃಷ್ಣನನ್ನು ಒಗೆದಂತೆಯೇ ಅವಳನ್ನೂ ಹೊಳೆಗೊಗೆದೆ. ಮುಳುಗಿದವಳು ಮೇಲೇಳಲಿಲ್ಲ. ಮರಳಿ ಬಂದು ಗೋಪಿಯರೊಡನೆ ನಲಿದೆ.

ಬೆಳಗಿನವರೆಗು ಇದೇ ಕನಸು. ಇದರರ್‍ಥವೇನೊ? ಸರಸ್ವತಿ ಸಾಯುವಳೆ? ಛೇ! ನಾನು ಅಂತಹದನ್ನು ಯೋಚಿಸಬಹುದೆ! ನನ್ನ ಹೆಂಡತಿ! ಏನೇ ಆದರೂ ನನ್ನ ಹೆಂಡತಿ! ಆದರಯ್ಯೋ! ಪ್ರೀತಿಸಲಾರೆ… ಸಾಧ್ಯವಿಲ್ಲ … ಏನು ಹೆಂಡತಿಯೊ! ದೇವರೆ! ನನಗಿದರಿಂದ ಪಾರು ಎಂದಿಗೋ!
* * * *

೬-೨-೧೯೩೦
ಈ ದಿನ ಯಶೋಧರ ಚರಿತ್ರೆ ಓದಿದೆ. “ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್?” ಪೊಲ್ಲಮೆಯಿದ್ದರೂ ನಲುಮೆ ಹುಟ್ಟುವುದೊ? ಅಥವ ನಲುಮೆಯಿದ್ದಲ್ಲಿ ಪೊಲ್ಲಮೆಯು ಕಾಣಿಸುವುದಿಲ್ಲವೊ? ಯೋಚಿಸಲಾರೆ … ಮೆದುಳು ಕುದಿಯುತ್ತದೆ. ಯೋಚಿಸಿದರೆ ತಾನೆ ಏನು? ಸಾವು ಬರುವ ತನಕ ನಮ್ಮಿಬ್ಬರಿಗು ಬಿಗಿದ ಗಂಟು ಈ ಯೋಚನೆಗಳಿಗೆ ಬಿಚ್ಚುವುದೆ ! ಅಯ್ಯೋ ! ಅಮ್ಮನ ತೃಪ್ತಿಗಾಗಿ … ಬಂತಲ್ಲ ೨೪ …!

ಅದೇ ಯಶೋಧರಚರಿತ್ರೆಯಲ್ಲಿ ಕಂಡೆ. “ತೀರದುದಕ್ಕಲವರಲಾಗದು.” ಸಂಕಲ್ಪ ಒಳ್ಳೆಯದು. ಮದುವೆಯಾದ ನನಗೆ ಇರುವ ಹೆಂಡತಿಯನ್ನು ಬಿಡುವ ಯೋಚನೆಯೇಕೆ? ಬೇರೆ ಹೆಂಗಸರ ಬಯಕೆಯೇಕೆ? … “ತೀರದುದಕ್ಕಲವರಲಾಗದು”

ಹೇಳುವುದು ಸುಖ. ಬೇರೆ ಹೆಂಗಸರನ್ನು ಕಂಡ ಕ್ಷಣ ಹಿಂದಿನ ಸಂಕಲ್ಪಗಳೆಲ್ಲ ಮಾಯವಾಗುತ್ತವೆ. ನಾನು ಹಿಂದಿನ ಗುಂಡನಲ್ಲ. ನನಗೇನು ಬಂದಿದೆಯೊ ಕೇಡುಗಾಲ!
* * * *

೧೫-೨-೧೯೩೦
ಈ ಹತ್ತು ದಿನಗಳಲ್ಲಿ ಮಹಾತ್ಮಾಜೀಯವರ ಆತ್ಮಕಥೆಯನ್ನು ಎರಡು ಬಾರಿ ಓದಿದೆ. ಮನಸ್ಸಿಗೆ ಶಾಂತಿ ಮರಳಿತು. ಮತ್ತೆಯೂ ಓದಬೇಕು. ಏನೇ ಆಗಲಿ … ಸರಸಿ ನನ್ನ ಹೆಂಡತಿ, ನನ್ನನ್ನವಳು ಪ್ರೀತಿಸುತ್ತಾಳೆ. ನಾನು ಅವಳನ್ನು ಪ್ರೀತಿಸಲೇಬೇಕು. ಅವಳ ಕುರೂಪದಲ್ಲಿಯೆ ಸುರೂಪ ಕಾಣುತ್ತೇನೆ. ಪ್ರೀತಿಸಿಯೇ ಪ್ರೀತಿಸುತ್ತೇನೆ. ಈಗ ಅವಳನ್ನು ನೆನೆದರೆ ಮೈಯಲ್ಲೊಂದು ತರಹ ಹಿತಕರವಾದ ಜುಮ್ಮುಂಟಾಗುತ್ತದೆ. ಅವಳ ಹೆಸರಿನಲ್ಲಿ ಏನೋ ಮಂತ್ರವಿರುವಂತಿದೆ. ಸ.. ರ.. ಸಿ! ಏನು ಮೋಹನದ ಹೆಸರು!

ನನಗೀ ವಿವೇಕೋದಯಕ್ಕೆ ಕಾರಣನಾದ ಮಹಾತ್ಮನಿಗೆ ಎಷ್ಟು ಎರಗಿದರೂ ತೀರದು. ಸರಸಿಗೆ ಒಂದು ಪ್ರೇಮಪತ್ರ ಬರೆದೆ. ಚೆನ್ನೆಗೆ ಎಷ್ಟು ಸಂತೋಷವಾಗುತ್ತದೆ! ಸದ್ಯ ನನ್ನ ಸಂಕಟ ದೂರಾಯಿತು. ದೇವರು ಮಹಿಮಾಸಮುದ್ರನು! ಈ ಹತ್ತು ದಿನಗಳಲ್ಲಿ ಪರಸ್ತ್ರೀಯ ಚಿಂತೆ ಬಂದಿಲ್ಲ. ಪರಸ್ತ್ರೀ! ಏಕೆ? ನನ್ನ ಹೆಂಡತಿ … ಥು! ಸರಸಿ ಚೆಲುವೆ. ಹಾ ! ೨೪ …!

ಹಾಳು ಕನಸುಗಳೂ ಇಲ್ಲ.
* * *

೧೬-೨-೧೯೩೦
ಇಂದು ಗುರುಗಳ ಮನೆಯಲ್ಲಿ ರಾಮಪಟ್ಟಾಭಿಷೇಕ. ಕರೆದಿದ್ದರು. ಹೋಗಿದ್ದೆ. ಕಳೆಯಿತಂದಿದ್ದ ಪೀಡೆ ಬಿಟ್ಟಿಲ್ಲವಿನ್ನೂ, ರಾಮೋತ್ಸವ ಸಂಭ್ರಮದಲ್ಲಿ ಓಡಾಡುತ್ತಿದ್ದ ನಿರಿಸೀರೆಯಾಕೆಯ ಮೇಲೆ ಹಗಲೆಲ್ಲ ನನ್ನ ಕಣ್ಣಿತ್ತು. ನೋಡದಿರಲಾಗಲಿಲ್ಲ. ಅವಳನ್ನು ನೋಡುತ್ತಿದ್ದಷ್ಟು ಹೊತ್ತೂ, ಸರಸ್ವತಿಗಿಂತ ಅವಳನ್ನು ಮದುವೆಯಾಗಿದ್ದರೆ… ಎಂದೆನಿಸುತಿತ್ತು. ನನಗೆ ಇನ್ನು ಮೇಲೆ ಮೇಲಿಲ್ಲ. ಅವಳು … ಅಲ್ಲ… ಅವರು ನನ್ನ ಗುರುಗಳಾಕೆ ! ದೇವರೆ ! ನಿನ್ನ ಸೇವೆಗೆ ಬಂದರೂ ನನಗೆ ಈ ಕೋಟಲೆಯಿಂದ ಮುಕ್ತಿಯಿಲ್ಲವೆ! ಗುರುಪತ್ನಿಗಾಶಿಸಿದ ಚಂದ್ರನೇನಾದ!

ಇದು ಹೀಗೆಯೇ ಇದ್ದರೆ, ಖಂಡಿತ ನನಗೆ ಹುಚ್ಚು ಹಿಡಿಯುತ್ತೆ. ಇಲ್ಲ, ಸಹಿಸಲಶಕ್ಯವಾದರೆ ಉರುಲು ಹಾಕಿಕೊಳ್ಳುತ್ತೇನೆ. ದೇವರು ಮನುಷ್ಯನನ್ನಿಷ್ಟು ಪರೀಕ್ಷೆ ಮಾಡಬಾರದು. ಅಯ್ಯೋ! ನೆನ್ನೆಯ ಸಂಕಲ್ಪಗಳೇ!
* * * *

೧೭-೨-೧೯೩೦
ನೆನ್ನೆ ರಾತ್ರೆ ಮತ್ತೆ ಹಿಂದಿನಂತೆಯೆ ಕನಸು. ಆದರೆ ಕೃಷ್ಣನಿರಲಿಲ್ಲ. ಸರಸ್ವತಿಯೂ ಬರಲಿಲ್ಲ. ಗೋಪಿಯರೊಡನೆ ಕುಣಿಯುತ್ತಿದ್ದಾಗ ರಾಧೆ ಹತ್ತಿರ ಬಂದು ಮುತ್ತ ಕೋರಿದಳು. ಅವಳನ್ನು ಅಪ್ಪಿದೆ. ರಾಧೆಯೆಂದು ನಾನು ಅಪ್ಪಿದುದು ಒಂದು ಪಾಪಾಸುಕಳ್ಳಿ ಪೊದೆ! ಅಯ್ಯೋ! ಈ ಕನಸುಗಳಿಗೆ ಕೊನೆ ಎಂದೋ!

ಮಧ್ಯಾಹ್ನ ಕನ್ನಂಬಾಡಿಗೆ ಹೋಗಿದ್ದೆ. ಇರ್ವಿನ್‌ಕ್ಯಾನಲಿನಲ್ಲಿ ನೀರು ಬಿಟ್ಟರು. ಪ್ರವಾಹದಂತಿತ್ತು. ಪ್ರಾಯದ ಹುಡುಗಿಯೊಬ್ಬಳು ನಿಂತಿದ್ದಳು. ಒಳ್ಳೆಯ ತುಂಬ ದೇಹ. ಜುಮ್ಮೆಬ್ಬಿಸುವ ಮೈಕಟ್ಟು. ಸರಸ್ವತಿಯ ನೆನಪಾಗಿ, ‘ಸರಸ್ವತಿಯ ಬದಲು ಈ ಹುಡುಗಿ ನನ್ನವಳಾಗಿದ್ದಾರೆ’ ಎಂದುಕೊಂಡೆ.

ಆ ಹುಡುಗಿಯನ್ನು ಕಂಡು ನನಗೆ ಮದುವೆಯಾಗಿದೆಯೆಂಬ ನೆನಪು ಅಳಿಯಿತು. ‘ಈ ಹುಡುಗಿ ಈ ಪ್ರವಾಹದಲ್ಲಿ ಬಿದ್ದರೆ, ನೋಡುತ್ತ ಬಿದ್ದರೆ, ನಾನೂ ಬಿದ್ದು ಅವಳನ್ನು ಮೇಲಕ್ಕೆತ್ತುತ್ತೇನೆ. ನಾವಿಬ್ಬರೂ ಒಂದೇ ಜಾತಿ. ನಮ್ಮಿಬ್ಬರಿಗೂ ಮದುವೆಯಾಗುತ್ತದೆ. ಆ ಮೇಲೆ ೨೪ ನೆಯ ತಾರೀಖು…’ ಎಂದು ಯೋಚನೆ ಬಂತು.

ಅಷ್ಟರಲ್ಲೆ ಹಗಲ ಕನಸು ಚೆದರಿತು. ನಾಚುಗೆಯಾಯಿತು. ಹಿಂದಿರುಗಿದೆ.
ನಾನು, ಮದುವೆಯಾದವನು, ಪರಸ್ತ್ರೀಯರನ್ನು ಬಯಸುವುದೆಂದರೇನು! ನನ್ನ ಪ್ರೀತಿ ನನ್ನ ಹೆಂಡತಿಗೆ ಮೊದಲು ಸಲ್ಲ ತಕ್ಕದ್ದು. ಸರಸ್ವತಿಯನ್ನು ನಾನು ಪ್ರೀತಿಸಬೇಕು. ಪ್ರಾಣ ಹೋದರೂ ಸರಿಯೆ-ಇಲ್ಲದ ಪ್ರೀತಿಯನ್ನು ಆಗಿಸಬೇಕು. ಕಂಡ ಕಂಡ ಹೆಂಗಸರನ್ನೆಲ್ಲಾ ಬಯಸಲು ನನಗೇನಾದರೂ ಮೆದುಳು ಕೆಟ್ಟಿದೆಯೆ? ಇಲ್ಲ, ಇಲ್ಲ. ೨೪ ನೆಯ ತಾರೀಖು ಇಂದೇ ಬಂದರೆ, ಯಾವುದಕ್ಕೆ ಹೆದರುವೆನೋ ಅದು ಬೇಗ ತೊಲಗಿದರೆ … ದೇವರೆ! ದಿನದಂತೆ ಈ ಹೊತ್ತೂ ಬೇಡುವೆನು. ನನ್ನ ಹೆಂಡತಿಯಲ್ಲಿ ನನಗೆ ಪ್ರೀತಿಯುಂಟಾಗುವಂತೆ ಕರುಣಿಸು.
* * * *

೧೮-೨-೧೯೩೦
ರಾಮು ಹೆಂಡತಿ ರುಕ್ಕು ಜಾಣೆ, ಚೆಲುವೆ. ಸರಸ್ವತಿ ಹಳ್ಳಿಗೊಡ್ಡು, ಕುರೂಪಿ. ಏನಾದರೂ ರೋಗ ಬಂದು ರಾಮು ಸರಸ್ವತಿ ಇಬ್ಬರೂ ಸತ್ತರೆ, ರುಕ್ಕುಗೆ ಗಂಡನಿರುವುದಿಲ್ಲ, ನನಗೆ ಹೆಂಡತಿ ಇರುವುದಿಲ್ಲ. ನಾವಿಬ್ಬರೂ ಮದುವೆಯಾದರೆ … ೨೪ನೆಯ ತಾರೀಖು … ಆದರೆ ರುಕ್ಕು ಅವಳ ತಂದೆ ತಾಯಿಗಳು ವಿಧವಾ ವಿವಾಹಕ್ಕೊಪ್ಪಬೇಕು. ಒಪ್ಪಿದರೆ …

ಅಯ್ಯೋ! ಏನಿದು ಅನ್ಯಾಯ ನಾನು ಚಿಂತಿಸುವುದು! ಮಿತ್ರ ದ್ರೋಹ! ಅವನು ಸಾಯುವುದಲ್ಲದೆ ಅವನ ಹೆಂಡತಿ … ಅಯ್ಯೋ ನನಗಿನ್ನು ಉದ್ಧಾರವಿಲ್ಲ. ಸರಸ್ವತಿ ಸಾಯಬೇಕೆಂದೆನೇ! ಕೊಲೆಪಾತಕನಾದೆನೇ! ಇಲ್ಲ. ಖಂಡಿತ ನನಗೆ ಹುಚ್ಚು ಹಿಡಿಯುತ್ತೆ. ಅಮ್ಮನಿಗೆ ತೃಪ್ತಿ … ೨೪ನೆಯ ತಾರೀಖು … ಏನು ತೃಪ್ತಿಯೋ …!
* * * *

೧೯-೨-೧೯೩೦
ನೆನ್ನೆ ರಾತ್ರಿ ಮತ್ತೆ ಹಾಳು ಕನಸು. ಹದಿನಾರು ಸಾವಿರ ಗೋಪಿಯರೊಡನೆ ಯಮುನಾತೀರವಿಹಾರಿಯಾಗಿದ್ದೆ. ರಾಧೆಯು ಬಂದು ಒಂದು ಕೊಳಲನ್ನು ನನ್ನ ಕೈಯಲ್ಲಿಟ್ಟು ಬಾರಿಸ ಹೇಳಿದಳು. ತುಟಿಗೊತ್ತಿದೆ. ಊದಲು ಸಿಡಿಲಿನ ಸರಗಳು ಉರುಳಿದುವು. ಕೈಯ ಕೊಳಲು ಹಾವಾಯ್ತು. ನಾನು ಮೋಟುಮರವಾದೆ. ಹದಿನಾರು ಸಾವಿರ ಗೋಪಿಯರು ಹದಿನಾರು ಸಾವಿರ ಮುಳ್ಳು ಪೊದೆಗಳಾಗಿ ನನ್ನ ಸುತ್ತ ಮನಸ್ವಿ ಕುಣಿಯತೊಡಗಿದರು. ಯಮುನೆಯು ಬತ್ತಿ ಅದರಡಿಯ ಮರಳಿನ ಮೇಲಿದ್ದ ಕೃಷ್ಣನ ಶವವು ಕಿಲಕಿಲ ನಕ್ಕಿತು. ಆಕಾಶವೂ ಚಂದ್ರನೂ ಕೆಂಪಗಾದುವು. ಯಮುನೆಯ ಬಯಲು ರಕ್ತದಲ್ಲಿ ನೆನೆದಂತಿತ್ತು. ಕಿಟ್ಟನೆ ಕಿರಿಚಿದೆ. ಎಚ್ಚರಾಯ್ತು. ರೂಮಿನ ದೀಪವಾರಿ ಕತ್ತಲಾವರಿಸಿತ್ತು.

ಇಲ್ಲ … ಇನ್ನೂ ಹುಚ್ಚು ಹಿಡಿದಿಲ್ಲ …

ಇಂದು ಮಧ್ಯಾಹ್ನ ! ಅಬ್ಬ ! ನನ್ನ ಕತೆ ಮುಗಿಯಿತು. ನನಗಿನ್ನು ಏಳಿಗೆಯಿಲ್ಲ. ಮಧ್ಯಾಹ್ನ ನನ್ನ ಕೊಠಡಿಗೆ ನನ್ನ ತಂಗಿ ಬಂದು, ‘ಅಣ್ಣಯ್ಯ’ ಎಂದಳು. ರಾತ್ರಿ, ದೂರದ ದಿಗಂತದಲ್ಲಿ ಮಲಗಿದ ಕತ್ತಲೆಯ ಮುಸುಕೆತ್ತಿ ಇಣುಕುತ್ತಿರುವ ಚಂದ್ರಬಿಂಬದಂತೆ ಅವಳ ಕಪ್ಪನೆಯ ಕೇಶರಾಶಿಯ ಮಧ್ಯದಲ್ಲಿತ್ತು ಅವಳ ನಗುಮೊಗ, ಅವಳ ಕೆನ್ನೆಗಳು ಹಾಲಿನಲ್ಲಿ ತೇಲಿಬಿಟ್ಟ ಕಮಲದಂತಿದ್ದುವು. ಸರಸ್ವತಿ … ೨೪ನೆಯ… ‘ಬಾಮ್ಮ’ ಎಂದೆ. ಹತ್ತಿರ ಬಂದಳು. ತಂಗಿಯೆಂಬುದನ್ನೂ ಮರೆತು ಅವಳನ್ನು ತಬ್ಬಿಕೊಂಡು, ಕೆನ್ನೆ… ಕೆನ್ನೆಯ ಚರ್ಮ ನನ್ನ ಬಾಯಲ್ಲಿ ನಿಂತು … ಅಯ್ಯೋ!

ಇಲ್ಲ, ನನಗೆ ಹುಚ್ಚು ಹಿಡಿದಿಲ್ಲ. ಇದೆಲ್ಲ ನಡೆದುದು ನನಗೆ ಚೆನ್ನಾಗಿ ನೆನಪಿದೆ. ಎಲ್ಲ ಸರಿಯಾಗಿ ಬರೆಯುತ್ತಿದ್ದೇನೆ. ಇದೆಲ್ಲ ಬರೆಯುವುದೇಕೆ? … ನನಗೆ ಹುಚ್ಚು ಹಿಡಿದಿದೆ… ೨೪ನೆಯ … ಸ್ವಂತ ತಂಗಿಯಲ್ಲಿ ಅತ್ಯಾಚಾರ! ಅಯ್ಯೋ ನನ್ನ ಬಾಳೇ!

ಇಲ್ಲ, ಹುಚ್ಚಲ್ಲ. ಉರುಲೇ ಇದಕ್ಕೆ ತಕ್ಕ ಮಾರ್ಗ, ಬಾಳು ಬೇಸರವಾಗಿದೆ. ದೇವರು ನಮ್ಮ ನೆರವಿಗೆ ಬರದಿದ್ದರೆ, ನಮ್ಮ ನಾಡು ನಾವೇ ನೋಡಿಕೊಳ್ಳಬೇಕು. ಆದರೆ ಕೈ ಹಿಡಿದ ಸರಸ್ವತಿ … ?

೨೪ನೆಯ ತಾರೀಖು …..
* * *

೨೦-೨-೩೦
ಇವತ್ತು ಡಾಕ್ಟರು ಬಂದಿದ್ದ … ಹುಚ್ಚಂತೆ …! ನನಗೆ….! ಅವನಿಗೆ ಹುಚ್ಚು … ಹುಚ್ಚು ಅವರಪ್ಪನಿಗೆ … ನನ್ನ ತಂಗಿಯ ಕೆನ್ನೆ ಗಾಯ ಮಾಡಿದನಂತೆ … ಹಲಾಲಕೋರ …! ಸುಳ್ಳು ಹೇಳು ತಾನೆ …! ಅವರ ತಾತನಿಗೆ ಹುಚ್ಚು ಹಿಡಿಸುತ್ತೇನೆ …

೩೯ ಖ ೮೦೦೮ ೬೨೦೧ …
ನಿಮ್ಮುತ್ತಾತ ಹುಚ್ಚ … ಹುಚ್ಚಂತೆ … ತಾಯಿಗ್ಗಂಡ … ನಿನಗೆ ಹು…
* * *

(ತಾರೀಕಿಲ್ಲ ಬರವಣಿಗೆ ಮಾತ್ರ ಹಿಂದಿನದೇ)
ಈ ಕೋಣೆ … ಕಬ್ಬಿಣ … ದೊರೆ … ಬಂಗಾರದ ಸಲಾಕಿ … ಏ … ನಾನೂ ನೀನೂ ಜೋಡಿ … ಹೊಲೆಯ … ಬೊಮ್ಮರಸ ….

೮೯೬೪-೯೯೦-೭೭೦೦೪
ಖಮಭಂ ರಾಯಾಞಜ

ಬಾಗಿಲಿನಲ್ಲಿ ಗುಮ್ಮ ಖಾಕಿ ಬಟ್ಟೆ ಹಾಕಿಕೊಂಡು ನಿಂತಿದೆ…

೪x೩
/೮೯೯

೧೭x೫
/
೦೮೨

೬೦
೭/
೦೦೦೦೦ ಉತ್ತರ

ಅಮಪಞaxpm ಭಂಭಂಭೈ.
ನಮ್ಮ ತಾಯಿಗೆ ಅಜ್ಜಿಗೆ ಮೂರು ಕೊಂಬು
ಬಾರೆ ಹುಡುಗಿ ನನ್ನ ಹಿಂದೆ!
ಹುಚ್ಚಲೇ …!
ಅಯ್ಯೋ! ಸರಸ್ವತಿ! ಇಲ್ಲಿಗೂ ಬಂತೇ!
* * *

(ಅದರ ಮಗ್ಗಲು ಹಾಳೆಯಲ್ಲಿ)
Poor chap!…rather…Lucky Dog! Committed suicide this morning.

24-2-1930
Lyf d ‘Sgustos,
Supdt.
Mental Hospital.
*****

Tagged:

Leave a Reply

Your email address will not be published. Required fields are marked *

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...