(೧)
ನಾನು :
ಗೆಳೆಯ ಬೆನಕ! ಕನ್ನಡಕ್ಕೆ
ದೊರೆತಪೂರ‍್ವ ಕನಕ ನಿನಗೆ ನನ್ನ ನೆನಸಿಕೆ
ಬೆಂದು ಬಾಯಿ ತೆರೆದ ನೆಲಕೆ
ತಂಪುಗಾಳಿ ಮಳೆಯ ತೆರದೆ ಬಂದ ಕವನಕೆ. ೧
ನಿನ್ನ ಕೂರುನೋಟ ಕಂಡ
ನನ್ನ ಇರವಿನರಿವು ನನಗೆ ಆತ್ಮದರ‍್ಶಕ
ನಿನ್ನ ಸ್ನೇಹರಸದ ತಳಿಯು
ನನ್ನ ಬಳವಳ್ಳಿಗೆಂಥ ಪ್ರಾಣಪೋಷಕ. ೨
ಸತ್ಯವೆಂಬುದತ್ಯಗಾಧ
ತಾನು ತನ್ನ ತಿಳಿಯೆ ಮೋಹ ಮರೆಸಿ ಮೆರೆವುದು
ಅನ್ಯರದನು ತಿಳಿಯ ಬಯಸೆ
ಅವರ ದೃಷ್ಟಿಯೆಂಬ ತೆರೆಯು ನಡುವೆ ಸರಿವುದು. ೩
ಮೋಹ ಸರಿಸಿ ದೃಷ್ಟಿ ಮೀರಿ
ತಾನು ಪರರು ತಿಳಿಯ ಬುದ್ಧಿಯೆಂಬ ಕನ್ನಡಿ
ಹಿಡಿದು ಜೀವ ಜಗವ ನೋಡೆ
ಮೂಡಬಹುದು ಓಡುತಿರುವ ದಿಟದ ಮೈ ಯಡಿ. ೪
ಬಾಳಬನದ ಚಿಟ್ಟೆಯಾದ
ರಸಿಕನಹುದು ನಾನು ಹರುಷಭೋಗ ನಿರ‍್ಭರ
ಚೆಲುವುಕಂಡು ಕುಣಿದು ತಣಿದು
ಮೊದಲು ತೊದಲಿ ಮುಂದೆ ಉಲಿದೆ ಹಾಡುಸವಿಸರ. ೫
ಬಾಳಿನಲ್ಲಿ ರಸವ ಕಂಡೆ
ಅದನು ಸವಿಯಎ ಬಲವು ಸಾಲದೆಂದು ಕಂಡೆನು
ಅಂತೆ ಮೈಯ ಮನದ ಬಲಕೆ
ಹಂಬಲಿಸುತ ಸಾಧನೆಯಲ್ಲಿ ಮುಂದುಗಂಡೆನು. ೬
ಒಲವು ಚೆಲವು ನಲಿವು ದಿಟವು
ಬಾಳಕಲೆಯ ಹೂವ ನಾಲ್ಕೆಸಳುಗಳಾಗಲಿ
ನನ್ನ ನುಡಿಯಲದರ ಕಂಪು
ದಿಶೆದಿಶೆಯಲಿ ಹರಡುವಂತೆ ನೆಲೆಸಿ ನಿಲ್ಲಲಿ. ೭
ಎಂಬ ಹಿರಿಯ ಆಸೆಬಾಸೆ
ಮೂಡಿ ಮೊಳಗೆ ಕೇಳಿ ಮಧುರಮುಗ್ಧನಾದೆನು
ನನ್ನ ಕಿರಿಯ ಪಾತ್ರೆಯಲ್ಲಿ
ದಿವ್ಯರಸವ ತುಂಬಲೆಂದು ಸಿದ್ದನಾದೆನು ೮
ಮೇಲುಬಾಳಿಗಿಂತು ನೋಂತು
ಕನಸುಬಾನಿನಲ್ಲಿ ರೆಕ್ಕೆ ಹರಡಿ ಹಾರಿರೆ
ಕೆಳಪ್ರಕೃತಿಯ ಎಳೆತಸೆಳೆತ
ನೆಲದ ತೊಡರುಬಳ್ಳಿಯಾಗಿ ಸೆಳೆದು ಸಾರಿರೆ- ೯
ತಪವೆ ನನ್ನ ಉದ್ಧರಣದ
ಜಪವದೆಂದು ಎಂದೊ ನಾನು ಮನದಿ ಅರಿತೆನು
ಧರ್ಮ ದೃಷ್ಟಿ ನೇಮನಿಷ್ಟೆ
ಅಂದಿನಿಂದ ತಿಳಿವುಗೂಡೆ ನುರಿತೆನು. ೧೦
ಗೆಲ್ಲಕಾಗಿ ಸಾಸಗೈದು
ಅಡಿಯನಿಟ್ಟ ಕಡೆಯಲೆಲ್ಲ ಸೋಲುಬಂದಿತು
ಭಯ ನಿರಾಶೆ ಮುತ್ತಿ ಮುಸುಕಿ
ತನ್ನ ಗೆಲ್ಲದಣಕವಾಡಿ ಹೂಡಿ ನಿಂದಿತು. ೧೧
ಕರ‍್ಮಲೀಲೆಯರಿತೆನಾಗ
ಕೆಳಗೆ ಬಿದ್ದು ಮತ್ತೆ ಎದ್ದೆ ಹೊಸತುಸಾಸಕೆ
ಜಗವನಾಳ್ವ ದಿವ್ಯಶಕ್ತಿ
ಕೈಯಲೆತ್ತಿ ಕರೆವುದೆನಲು ಹಿರಿಯ ನಂಬಿಕೆ. ೧೨
ಆತ್ಮತತ್ವದಲ್ಲಿ ರಮಿಸಿ
ಧರ್ಮಸಾರವನ್ನು ಗ್ರಹಿಸಿ ಬಾಳ ಬೆಳಸಿದೆ
ಕಡಲ ತೆರೆಯ ಏರು ಇಳಿತ
ತೋರೆ ಹಿಗ್ಗಿ ಕುಗ್ಗಿ ಮುಂದೆ ನುಗ್ಗಲೆಳಸಿದೆ. ೧೩
ನನ್ನ ಹೃದಯಗೀತಗಳಲಿ
ಚೆನ್ನಬನ್ನ ದಿಂಥ ಬಾಳು ಮೈಯ ತಾಳಿದೆ
ಎಂಥ ನೋವ ಮುಳ್ಳ ಜೊತೆಗೆ
ಮುಂದಣಾಸೆ ಹಿಗ್ಗಿನರಳು ಬಿರಿದು ಬಾಳಿದೆ. ೧೪
ತನ್ನ ಸತ್ಯ ತಾನಿದಿರಿಸಿ
ತನ್ನ ದಾರಿ ತನ್ನ ನಡೆಯ ತಾನೆ ಅರಿವುದು
ಕೊನೆಯ ಗುರಿಯದೊಂದೆ ಆಗೆ
ಮನದ ಪರಿಯನರಿತು ಘನಕೆ ಹೂಡುತಿರುವುದು. ೧೫
ಚೆಲುವು ಕಂಡರಸಿಕ ಚಿತ್ತ
ಸ್ವಾತಂತ್ರ್ಯದ ಸವಿಯನುಂಡು ಸಾರಿ ಹಾಡಿದೆ
ಘೋರದುಃಖ ಮೋಹಮಾಯೆ
ಮುತ್ತಿಬರಲು ಸ್ವಾತಂತ್ರ್ಯಕೆ ಬಿಗಿಪುಹೂಡಿದೆ. ೧೬
ಸ್ವಾತಂತ್ರವು ನಿಶಿತಧಾರೆ
ಅರಿತು ಹಿರಿಯ ಬಾಳವೀರದೊರೆಯು ತಾನು
ಮರೆತು ಹಿಡಿಯೆ ತನ್ನ ಕತ್ತ-
ನಿರಿದು ತಾನೆ ಮುಳುಗಲಿರುವ ರಕ್ತಭಾನು. ೧೭
ಚಿಟ್ಟೆ ಮನವು ಜೇಡಬಲೆಗೆ
ಸಿಲುಕಿದಾಗ ಮುಕ್ತ ಚೆಲುವದೆಂತು ಉಲಿವುದು?
ಬುದ್ದಿಗಲ್ಲ ಬಾಳೆ ತೊಡಕು
ಆಗೆ ಚೆಲುವಿನೊಡನೆ ಬೇರೆ ಸ್ವರವು ಬೆರೆವುದು. ೧೮
ರಸದಿ ಇಂತು ವಿರಸಸೇರಿ
ಪರಮರಸದ ಪಾಕಕೆಂದು ಮುಂದುವರಿದಿರೆ
ಸ್ವಾತಂತ್ರ್ಯದ ಧ್ರುವದ ತಾರೆ
ಗುರಿಯದಾಗೆ ತಪ್ಪದೇನು ತಡೆದು ನಡೆದಿರೆ. ೧೯
ಸಹಜಚಿದ್ವಿಲಾಸ ಮೇರೆ-
ವರಿವುದೆಂಬ ಬರಿಯ ಬಗೆಯ ಎಣಿಕೆಯಲ್ಲವು
ವಿಧಿಯ ದುರ್ವಿಲಾಸ ಕವಿಯೆ
ಬಾಳ ಕಹಿಯು ಕಲಿಸಿತಯ್ಯ ನೇಮನಿಷ್ಠೆಯ. ೨೦
ಚೆಲುವು ಕಣ್ಗಳಿಂದ ನೋಡಿ
ಹೊಲೆಯ ಕಳೆದು ಇಹದಿ ಮುಕ್ತಿ ಪಡೆಯಬಲ್ಲೆವು
ಕಣ್ಗೆ ಪರೆಯು ಸಂದಣಿಸಿರೆ
ಕಳೆಯದದನು ಶುಚಿಯನೆಂತು ಪಡೆಯಬಲ್ಲೆವು? ೨೧
ರಸದ ದೃಷ್ಟಿ ಧರ‍್ಮದೃಷ್ಟಿ
ಬೆಳೆವ ಬಾಳಕುದಿಗೆ ಸಿಲುಕಿ ತಾಕಲಾಡಿವೆ
ಹೊಸವಿವೇಕದಲ್ಲಿ ಏಕ-
ರಸವದಾಗಿ ಕಿಡಿಹಾರಿಕೆಯನ್ನು ದೂಡಿವೆ. ೨೨
ರಸದಾ ಸ್ವಚ್ಛಂದಛಂದ
ಧರ್ಮನಿಯಮಬಂಧ ಗಂಗೆಯಮುನೆಯಾಗಿದೆ
ಅಲ್ಲಿ ಮಿಂದ ನುಡಿಯ ಮೀನ
ತನ್ನದೊಂದು ಲೀಲೆಯಲ್ಲಿ ಮೂಡಿ ಮುಳುಗಿದೆ. ೨೩
ಆತ್ಮಸೂರ‍್ಯ ಬದುಕುಮೋಡ-
ಹನಿಯ ಸೇರೆ ಕಾಂಬ ಮಳೆಯ ಬಿಲ್ಲ ಸೌಸವ
ಹೊಂದಿಕೆಯಲಿ ಅಂದವಡೆಯೆ
ಅದರ ಮಿಶ್ರವೆಳಕು ಬಾಳ ಗುರುತುಗೌರವ. ೨೪
ನಿಚ್ಚ ಬಾಳಿನಲ್ಲಿ ಎರಡು ಕಿರಣ
ಕಾದುವಂತೆ ಆಗ ಈಗ ತೋರೆ ಮಾಜವು
ತೊಡರುತೋಟಿ ಮೀರಿದಂಥ
ತಿಳಿವಳಿಕೆಯು ತೀವಿ ನೆಲಸೆ ಅದುವೆ ಸಾಜವು. ೨೫
ಚೆಲುವು-ಗೆಯ್ಮೆ, ಬಿಚ್ಚು-ಬಿಗಿಪು
ಇದರ ತೋಟಿ ಹಿರಿಯದಲ್ಲ ಇಂದು ನನ್ನಲಿ
ಘೋರಸತ್ಯ- ಹಿರಿಯಗುರಿಯು
ಇದರ ತಾಕಲಾಟವಿಹುದು ಇರವು ಕಣದಲಿ. ೨೬
ಮುಂಗಾಣದ ಭವಣಿ ಬಂದು
ಕಂಗೆಡಿಸುತ ಭಯವ ಬಿತ್ತಿ ಬಲವ ಕಸಿದಿರೆ
ಕಟುಸತ್ಯದ ಕೈ ಕುಲುಕಲು
ಎದೆಸಾಲದೆ ಗುರಿಯ ಮರೆವೆ ಕೆಳಗೆ ಕುಸಿದಿರೆ. ೨೭
ಪೂರ‍್ಣಬಾಳ ಧ್ರುವವನೆಮ್ಮಿ
ಮುಂದರಿಯಲು, ಎಲ್ಲಿಂದಲೋ ಬಂದು ಬೆಂತರ
ಹಿಂಗಾಲನು ಎಳೆದು ನನ್ನ
ಮುಂದಡಿಯನು ಕೆಡಪಿ ಕಾಡುತಿಹವು ತರತರ ೨೮
ಹಾಲಿನಂತೆ ಬೆಳ್ಳಗೆಲ್ಲ
ಎಂಬ ಮುಗ್ಧಚಿಗರೆಯಂಥ ಬಾಳಿದಲ್ಲವು
ಮೋಹಮೋಸ ಸುಖದುಃಖವ-
ನರಿತು ನೇರನಡೆದ ಮೃದುಹೃದಯದ ಜೀವವು. ೨೯
ಕನಸುಮನಸಿನಲ್ಲಿ ಕಾಣದಂಥ
ನನಸು ನೂರುತಾಪವಾಗಿ ಸುತ್ತುವರಿಯಲು
ನನ್ನ ನಡೆಯ ಚ್ಯುತಿಗಳಿಂದ
ವಿಧಿಯ ಅಣಕದುರಿಗೆ ಹೊಯ್ದೆ ನೆಯ್ಯ ಸರಿಯನ್ನು ೩೦
ಶಾಪಗ್ರಸ್ತ ಜೀವನವಿದು
ತನ್ನ ಹರುಷಚಿಲುಮೆಯನ್ನು ಬತ್ತಿಸಿಲ್ಲವು
ಗ್ರಹಣಮುಕ್ತಚಂದ್ರನಂತೆ
ಒಯ್ಯೊಯ್ಯನೆ ಪೂರ‍್ಣಕಾಂತಿ ಪಡೆವುದೆಲ್ಲವು ೩೧
ಸತ್ತ ಮಗುವ ತೂಗುವಂಥ
ಬರಿಯ ಶೋಕಗೀತ ವಿರಳವೆನ್ನ ಬರೆಹದಿ
ಸತ್ತ ಮಗುವ ಮುದ್ರೆಯಲ್ಲಿ
ಮತ್ತೆ ಬಾಳ ಕನಸುಕಂಡ ಬಗೆಯ ತೋರೆ ಕವನದಿ. ೩೨
ಇಂತಿದೇನೆ ಇರಲಿ ಗೆಳೆಯ
ನೀನರಿತುದು ನಿಜವು, ಫಲಿಸದಿಹುದು ಚೆಲುವಿಕೆ
ದರುಶನವದು ನಿಚ್ಚಳವಿರೆ
ಇಂದುನಾಳೆ ತೋರಬಹುದು ಬಾಳತುಂಬಿಕೆ. ೩೩
* * *
(೨) ನೀನು :
ಎಳಮೆಯಲ್ಲೆ ದಿವ್ಯಸ್ನೇಹ-
ರಸವ ಚೆಲುವಿನಾಳ ತಿಳಿವಿನೊಡನೆ ಬೆರಸುತ
ಹನಿಯು ಕಿರಣಸೇರಿಯಾದ
ಬಾನಬಿಲ್ಲಿನಂತೆ ಬಂದೆ ಕೆಳೆಯನರಸುತ. ೧
ನಿನ್ನ ಚೆನ್ನ ಕನಸಿನಲ್ಲಿ
ಮುಳುಗಿ ಮುಗುದನಾಗಿ ಎಳೆಯ ಹರೆಯ ಕಳೆದಿರೆ
ಪರುಷಜಗಕೆ ಬೆಗಡುಗೊಂಡು
ಬಂದ ದೇವಬಾಲನಾದೆ ಕಾಂತಿತಳೆದಿರೆ. ೨
ದೂರಸೀಮೆಯಲ್ಲಿ ಸಂದ
ಕವನಕಥನಗಳಲಿ ಲೀನನಾಗಿ ಆಡಿದೆ
ಕೈಗೆಬಂದ ಮಾತುಕಟ್ಟಿ
ಚಿಕ್ಕೆಯಂತೆ ಲೆಕ್ಕವಿರದ ಕವನಮಾಡಿದೆ. ೩
ಗೆಳೆತನವೇ ಬಯಸುವೆಲ್ಲ
ಸಿದ್ಧಿಯಾಗಿ ಭಾವಲೋಕವನ್ನೆ ಎಳಸಿದೆ
ಮರೆಯ ಹೂವಿನಂತೆ ವಿನಯ-
ಮೆರೆದು ಲೋಕವರಿಯದಂತೆ ಮತಿಯ ಬೆಳೆಸಿದೆ. ೪
ಕೆಳೆಯ ತಪಕೆ ನಿಶಿತಮತಿಗೆ
ಮೆಚ್ಚಿದಂತೆ ದೈವ ನಿನ್ನ ಬಾಳನೆತ್ತಿಕೊಳ್ಳುತ
ಕೀರ‍್ತಿ ಶಿಖರದಲ್ಲಿ ನಿಲಿಸೆ
ತನ್ನ ಗೆಲವುಗಂಬಗೈದು ಸೋಲುತಳ್ಳುತ. ೫
ಒಮ್ಮಿದೊಮ್ಮೆ ನಿನ್ನಶಕ್ತಿ
ನೆಗೆದೆದ್ದಿತು ಗಾಳಿಪಟದ ಗಾನಮಾಡುತ
ಮುಟ್ಟದೆಲ್ಲ ಚಿನ್ನವಾಗೆ
ಬಾಳುಬೆಳೆಯೆ ಚೆಲುವಗುರಿಗೆ ಚಿತ್ತ ಹೂಡುತ. ೬
ಕವಿತೆಗೊಬ್ಬ ಗುರುವ ಕಂಡೆ
ಹಿರಿಯ ಕಾವ್ಯದರ‍್ಶನಕ್ಕೆ ಮನವ ತೆರೆಯುತ
ಕೃತಿಯ ರಚಿಸಿ ಕೃತಿಯ ತೂಗಿ
ಹಿರಿಮೆಗಾಗಿ ವೀಳ್ಯವೆತ್ತಿ ಇರುವೆ ಮೆರೆಯುತ. ೭
ಕವನಸೃಷ್ಟಿ ನಿನ್ನ ಭುವನ-
ದಲ್ಲಿ ಬಿಟ್ಟು ಬಿಡದ ಮೇಘವೃಷ್ಟಿ ಸಫಲವು
ನಿನ್ನ ರಚನೆ ಸಹಜ-ಗಾಢ,
ದೃಷ್ಟಿ ಭವ್ಯ, ಚಿತ್ತ ತತ್ತ್ವನಿರತ ಸತ್ವವು. ೮
ಪೂರ‍್ವಪುಣ್ಯ ರಾಶಿ ಸೂಸಿ
ದೈವವಿತ್ತ ರಾಜಯೋಗ ನಿನಗೆ ಲಭಿಸಿದೆ
ಕಾಣದಭಯಛತ್ರವಾಗಿ
ನಡೆಸುತ್ತಿದ್ದ ಗುರುವ ದಯೆಯ ಹಿರಿಯ ಶುಭವಿದೆ. ೯
ಪರಿಸರ ಪ್ರಪಂಚದಲ್ಲಿ
ಆಗ ಈಗ ದುಃಖ ಮಿಕ್ಕು ಮೀರಿ ಬಂದಿದೆ
ಸುತ್ತುಹೊಳೆವ ದೈವಬಲದ
ಪರಿವೇಷವ ಕಂಡು ಸುಗಿದು ತಾನೆ ಸಂದಿದೆ ೧೦
`ನಾಡು ನುಡಿಗೆ ನನ್ನ ಸೇವೆ
ಮೀಸಲೆ ‘ಂದು ಬೇಡಿದಾಗ ದೂರದೇಶದಿ
ಕುತ್ತ ನೆವದಿ ಬಂದ ಮರಣ
ಸರಿಯಿತತ್ತ ಪಾರುಗೊಂಡೆ ನೀನು ಕ್ಲೇಶದಿ. ೧೧
ಹಿರಿಯ ವ್ಯಥೆಯ ಕಣ್ಣ ಸನ್ನೆ,
ಮುಂದೆ ಮಿಗಿಲು ಜಸದ ಕತೆಯು ನಿನ್ನ ದೈವವು
ಇಂತೆ ಇಹುದು ಅರ‍್ಥವಿಲ್ಲ-
ವೆಂದರೂ ಪರಾರ‍್ಥಕಾಗಿ ಶರಣು ಜೀವವು. ೧೨
ಕೆಳಪ್ರಕೃತಿಯ ಅಂಕೆಯಿಂದ
ಪುಣ್ಯ ನಿನ್ನ ಬಾಳ ಬಿಡಿಸಿ ಶುಚಿಯ ಬಿತ್ತಿದೆ
ಮೇಲುನಾಡಿನಲ್ಲಿ ಸೆಳೆವ
ಗಾಳಿಗಳಲಿ ಎಚ್ಚರಿಂದ ಸಾಗು ಸುತ್ತದೆ. ೧೩
ಆತ್ಮಪ್ರೌಢಿಯರುಬಿನಲ್ಲಿ
ನಾನು ನನ್ನದೆಂಬ ಜವಳಿನಲ್ಲಿ ಸಿಲುಕದೆ
ನನಗೆ ಗೆಲವು ನಲಿವು ಎಂದು
ಜಗದ ನೋವುಸಾವು ಏಕೆ ಎನಗೆ ಎನ್ನದೆ. ೧೪
ಚೆಲುವುನೋಟ ನಿಚ್ಚಳವೆನೆ
ಕಡುಟೀಕೆಯ ಹಂಕೃತಿಯ ಬಲೆಗೆ ಬೀಳದೆ
ಸ್ವಪ್ರೀತಿಯ ಮೋಹಮಾಯೆ
ಬಲಿಯದಂತೆ ಬಾಳಬೆಳಸು ಅತಿವಿಶಾಲದೆ. ೧೫
ಸಮರ‍್ಪಣದ ಮುಕ್ತಮನದ
ಆವೇಶದಿ ಸಾಧನೆಯದು ಏಕೆ ಎನ್ನುತ
ಲಹರಿಜೀವನವನು ನಂಬಿ
ಸಾಗರವನು ಮರೆಯಬೇಡವಿದು ಸುನಿಶ್ಚಿತ ೧೬
ನಿನ್ನ ಕಾರ‍್ಯ ನಿನ್ನ ಕೀರ‍್ತಿ
ಕೂಡಿ ಹಿಗ್ಗಿ ಕನ್ನಡಕ್ಕೆ ಗುಡಿಯ ಕಟ್ಟಲಿ
ನಿನ್ನ ಆತ್ಮಪ್ರಜ್ಞೆ ಮಾಗಿ
ಶ್ರೇಯಪಥದಿ ಸಾಗಿ ಗುರಿಯ ಬೇಗ ಮುಟ್ಟಲಿ. ೧೭
* * *
(೩) ನಾನು-ನೀನು :
ಹರಿವ ಕಾಲ ತೆರೆಯ ಮೇಲೆ
ಎಂತೋ ಏನೊ ಸಂಧಿಸಿದೆವು ಕೆಳೆಯು ಕರೆಯಲು
ಒಲವುತಾಯ ಮಕ್ಕಳಾವು
ಒಡಹುಟ್ಟಿದರಂತೆ ಇಹವು ಹೃದಯ ಬೆರೆಯಲು. ೧
ನಿನ್ನ ಬೆಸನ ನನ್ನದೆಂದು
ಒಂದುಗೊಂಡು ನಡೆದೆ ಎಂದಿನಿಂದಲು
ನಿನ್ನ ಭಾಗ್ಯ ನನಗೆ ಹಿಗ್ಗು
ನಿನ್ನ ಕೀರ‍್ತಿಯಲ್ಲಿ ಸವದ ಪಾಲು ಸಂದಲು. ೨
ನನ್ನ ಬಾಳನೆಲೆಯು ನಿನ್ನ
ಚಿಂತೆಯಾಗಿ ದೊರೆತ ಫಲಕೆ ನೀನು ಸುಖಿಸಿದೆ
ನನ್ನ ಘೋರಯಾತನೆಯಲಿ
ಹೃದಯಬೆಂದು ಬಲವನೀವ ನುಡಿಯನಾಡಿದೆ. ೩
ನೋಡೆ ನಮ್ಮ ಪ್ರಕೃತಿ ಭಿನ್ನ,
ನೋಟ ಬೇರೆ, ಬೇರೆ ಬೆಳೆವ ತಿಳಿವ ಮಾಟವು,
ದೈವದಾನ ಬೇರೆಬೇರೆ,
ಬೇರಿನೊಳದ ರಸವೆ ಬೆರಸೆ, ಬೇರೆ ನಾಟವು. ೪
ನಾನು ರಸಿಕ, ಗುಣಕೆ ಲೋಭಿ
ಸಿಹಿಯ ಕಂಡು ಕಹಿಯ ನುಂಗಿ ಸಹಿಸುತ್ತಿರುವೆನು
ನೀನು ಚೆಲುವ ಭೋಕ್ತನಾಗಿ
ಹೊಲ್ಲಕಂಡು ಸಾರುವೆದೆಯ ಬಲದ ಗರುವನು. ೫
ನೀನು ತೀಕ್ಷ್ಣ, ನಾನು ಸೂಕ್ಷ್ಮ,
ನಮ್ಮ ಮತಿಯ ಮಟ್ಟ ಬೇರೆ, ಬೇರೆ ಭಾವನೆ.
ನನಗೆ ಕರ‍್ಮ, ನಿನಗೆ ಜ್ಞಾನ
ನಾನು ತಪದಿ ನಿಷ್ಠ, ನೀನು ಸಹಜಯೋಗನೆ. ೬
ನೀನು ಚೆಲುವಿನಾರಾಧಕ,
ನಾನು ನಲಿವನರಸುತಿರುವ ರಸದ ಶೋಧಕ
ನಿನ್ನ ಭಕ್ತಿ ಬುದ್ಧಿ ನಿಷ್ಠ,
ನಾನು ಹೃದಯನಿಷ್ಠ ದಾಸಪದವಿಸಾಧಕ. ೭
ನಿನ್ನ ಕವನ ಗಹನ-ಸಹಜ
ನಿನ್ನ ಬಾಳಿಗಿಂತ ಮೇಲು ಯುಗದ ಜಾಣ್ಮೆಯು
ನನ್ನ ಕವನ ತಪದ ಫಲವು
ತೂಗುಯ್ಯಲೆ ಪಡಿನೆಳಲದು ವಿರಳತಾಳ್ಮೆಯು. ೮
ನೀನು ಗೆಲವು ಗೌರಿಶಿಖರ-
ದಲ್ಲಿ ನಿಂತೆ ಮೇಲೆ ಹೆಜ್ಜೆ ಹೆಜ್ಜೆಗೇರುತ
ನಾನು ಸೋಲಕೊಳ್ಳದಲ್ಲಿ
ಕೆಡೆದೆ ವಿಧಿಯು ಬೆನ್ನ ತಿವಿಯೆ ಕಿಡಿಯ ಕಾರುತ. ೯
ನಿನ್ನದು ಸಂಸಾರವೆಲ್ಲ
ಹಸುರುಹೂವು ಹಣ್ಣು ತೀವಿದಂಥ ಉಪವನ
ನನ್ನದೆಲ್ಲ ಚಿಗುರಿ ಕಮರಿ
ಕರಿಕು ಆದ ಹಾಳುನೆಲದ ಬಗೆಯ ಭಣಭಣ. ೧೦
ನೀನು ಭರತಚಕ್ರಿಯಂತೆ
ದಿಗ್ವಿಜಯಿಯು ದರ್ಪ ಶಾಲಿಯಾತ್ಮಶ್ರದ್ಧನು
ನಾನು ಕಾಮದಾಳು ಕಾಮ-
ರೂಪಿ ಬಾಹುಬಲಿಯು ಭಯವು ನಮ್ಮ ಹೃದಯನು. ೧೧
ಭರತ ಕಾಮರಂತೆ ನಾವು
ಹೇವದಿಂದ ಕಲಹವಾಡಿ ಸೋತು ಗೆದ್ದೆವು
ವಿರತಿಯಲ್ಲಿ ಮನವು ನೆಟ್ಟು
ಘನದ ಪಥದಿ ಭಿನ್ನ ಪಯಣಕೆಂದು ಎದ್ದೆವು. ೧೨
ಮೂಡುಪಡುವಲೆಂತೊ ಅಂತೆ
ಕೂಡಿರುವೆವು ಜೋಡಿಯಾಗಿ ಮೋಡಿಮಾಟದಿ
ಬೇಡಲೇನು ಬೇಡ ಏನು
ನೇಹದೀ ಪವಾಡ ಮೆರಯಲಾಟದಿ. ೧೩
ವೃತ್ತಿಭೇದ ಕೋಪತಾಪ-
ವಿರಸ- ಹುರುಡುಗಳನು ಒಡ್ಡಿ ಕೆಳೆಯ ಕೆಣಕಿದೆ.
ಸತ್ವಸಾಮ್ಯ ಪ್ರೀತಿರಮ್ಯ-
ರಸವು ಬೆರಸುತೆಮ್ಮ ರಕ್ಷೆಯಾಗಿ ಹೆಣಗಿದೆ. ೧೪
ಬೇರೆ ನಿಜವು, ನಿಜವು ಒಂದೆ
ಬೇರಿನೊಳದ ರಸವು ಒಂದೆ ಒಂದೆ ಎನ್ನುತ
ಬೇರೆಬೇರೆಯಾಗಿ ಸಾರಿ
ನಾವು ಇರುವ, ಇರವ ದಿವ್ಯ ತರುವ ಗೆಯ್ಯುತ ೧೫
*****





