ಮೂಡುವೆಳೆನೇಸರನ ಕಮಲಮುಖ ಕಂಡಿಲ್ಲ
ಹಾಡುವೆಳೆಹಕ್ಕಿಗಳ ಹಾಡುಗಳ ಕೇಳಿಲ್ಲ
ಆಡುವೆಳೆಮಕ್ಕಳೊಡನಾಡಿಲ್ಲ, ಓಡುವೆಳೆ-
ಕರುಗಳೊಡನೋಡಲಿಲ್ಲ
ನೋಡಿದ್ದ ಕನಸನ್ನೆ ತಿರುತಿರುಗಿ ನೋಡುತ್ತ
ಬೇಡಿದ್ದರೂ ಮತ್ತೆ ಬೇಡಿದ್ದ ಹಾಗಾಗಿ
ಕಾಡಿದ್ದ ಕೇಡಿದ್ದ ಬಾಡಿದ್ದ ನಿದ್ದೆಯೊಡ-`
ಗೂಡಿದ್ದೆ ಕಾಮಿಯಂತೆ
ಸೊಲ್ಲಿದ್ದರೂ ನುಡಿಯ ಸೊಗಸುಸಿಗದೆಂದಿಗೂ
ಬಲ್ಪಿದ್ದರೂ ಬಲ್ಲತನಕೆ ಸಲ್ಲಾಗುವದು
ಎಲ್ಲಿದ್ದರೂ ಬಂದು ಗಂಟುಬಿದ್ದಿದ್ದ ನಿ-
ದ್ದೆಯ ಸಂಗ ಸಾಕು ಸಾಕು
ಒಲ್ಲೆನಿಸಿ ಒಮ್ಮೊಮ್ಮೆ ನನ್ನ ಎದೆಗುಂಡಿಕೆಯು
ಝಲ್ಲೆನಿಸಿ ಬೆಚ್ಚಿ ಎಚ್ಚರಿಯೆ ಮೆಚ್ಚನು ಹೊಚ್ಚಿ
ಕಲ್ಲೆನಿಸಿದಂತೆ ಮಾಡುವಳು ಇವಳೇ ನಿದ್ರೆ,
ಕಲ್ಪಾಂತ ಕಾಲ ರೌದ್ರೆ
ನಿದ್ದೆ ಪಂಚೇಂದ್ರಿಯಕೆ ಪಂಚತ್ವವೀವಂಥ
ವಿದ್ಯೆಯಿದು, ರಾಕ್ಷಸರು ಜಗಕೆ ಕಟ್ಟಿದ ರಕ್ಷೆ
ನಿದ್ದೆ ಸಂಸಾರಸಾರವನು ಹೀರುವ ಜಿಗಳಿ
ಸುಖ ನುಂಗುವಂಥ ನೆಗಳಿ
ನಿದ್ದೆಯೆಂದರೆ ಕಣ್ಣು-ಕಟ್ಟು ಮಾಡುವ ಮೋಡಿ
ನಿದ್ದೆಯೆಂದರೆ ಕಲ್ಲುಮಾಡ ಜಡೆದಿಹ ಬೇಡಿ
ನಿದ್ದೆಯೆಂದರೆ ಸಪ್ಪಗಿಹ ಸಾವು, ಮಾಗಿಯೊಳು
ಮಡಿಯೆ ಮಲಗಿದ್ದ ಹಾವು
ಏ ನಿದ್ದೆ! ಏನಿದ್ದೆ! ಏನಾದೆ ನೀನು ಹಾ!
ಏನು ಸಂಜೀವನೀ! ಜೀವಹರಳಾದೆ ನೀ!
ಏನಿದ್ದೆ! ಎಲೆ ನಿದ್ದೆ! ಇಕೊ ಬಿದ್ದೆ! ಎದ್ದಿದ್ದೆ!
ಧಡಡ ಕಡಕೊಂಡು ಬಿದ್ದೆ!
ಏ ನಿದ್ದೆ! ಏನಿದ್ದೆ? ಏನಾದೆ ನೀನು ಹೇ!
ಏನು ಸಂಜೀವಕನು ನಿರ್ಜೀವನಾದನೇ!
ಏ ನಿದ್ದೆ! ಎಲೆ ನಿದ್ದೆ! ಬಿದ್ದಿದ್ದೆ! ಇಗೋ ಎದ್ದೆ!
ಝಾಡಿಸಿದೆನಿದ್ದ ನಿದ್ದೆ!
*****








