Home / ಕಥೆ / ಸಣ್ಣ ಕಥೆ / ಬದುಕುವ ಬಯಕೆ

ಬದುಕುವ ಬಯಕೆ

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ!

ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮಗೆ ರುಚಿಸಬಹುದೋ ಇಲ್ಲವೋ……..ಆದರೂ…

ಸಾಕಿಷ್ಟೆ ಪೀಠಿಕೆ, ಇಗೋ ಕತೆ:

ಮತ್ತೆ ನೀಲಿ ಹಸುರು ಕೆಂಪು ಉರಿಯುವ ಬತ್ತಿ, ನಕ್ಷತ್ರಕಡ್ಡಿ, ಪಟಾಕಿ ಹುಡುಗರ ಧಾಂದಲೆಯೇ ಧಾಂದಲೆ, ನಮ್ಮ ಬೀದಿಯಲ್ಲೆಲ್ಲಾ ಅವರದೇ ರಾಜ್ಯ, ಹಗಲೂ ರಾತ್ರಿಯ!

ನಮ್ಮ ಒಬ್ಬಳೇ ಹುಡುಗಿ ಜಯಾಗೆ ಆ ಖಿಲಾಡಿಗಳ ಭೀತಿ ಎಳ್ಳಿನಷ್ಟೂ ಇಲ್ಲ. ಕತ್ತಲಾಗಿದೆ. ನಾನು ಕರೆದೆ, ನನ್ನಾಕೆ ಕರೆದಳು. ಆದರೆ ಜತೆಗಾರರನ್ನು ಬಿಟ್ಟು ಬರಲೊಲ್ಲಳು ಪೋಕರಿ.

“ಹೋಗಲಿ ಬಿಡೀಂದ್ರೆ, ಒಂದೆರಡು ದಿನ….ಓಡಾಡಲಿ” ಎಂದು ನಮ್ಮಾಕೆ ಮಗಳ ಪರವಾಗಿ ವಕೀಲಿ ವಹಿಸುತ್ತಾಳೆ.

ನಾವಿಬ್ಬರೂ ಹೊಸ್ತಿಲಹೊರಗೆ ಭುಜಕ್ಕೆ ಭುಜತಾಗಿಸಿ ನಿಂತು, ಬಣ್ಣ- ಬೆಳಕಿನ ಆ ರಾಜ್ಯದಲ್ಲಿ ಮೈಮರೆಯುತ್ತಿದ್ದೇವೆ.

ಎದುರು ಭಾಗದಲ್ಲಿ ಕವಲೊಡೆಯುವ ಗಲ್ಲಿಯ ಮೊದಲ ಮನೆಯತ್ತ ನನ್ನ ದೃಷ್ಟಿ ಹರಿಯುತ್ತಿದೆ-ಎಂದಿನಂತೆ. ನನ್ನಾಕೆಯೂ ಆ ದೃಷ್ಟಿಯನ್ನು ಹಿಂಬಾಲಿಸುತ್ತಿದ್ದಾಳೆ ಎಂದಿನಂತೆ.

ಬಾಗಿಲಲ್ಲಿ ನಿಂತಿರುವಳಲ್ಲ? ಮಂದ ಬೆಳಕಿನಲ್ಲಿ ಆ ಜೀವದ ಆಕೃತಿಯಷ್ಟೆ ಕಾಣಿಸುತ್ತಿದೆ. ಕಲ್ಲಿನ ಪ್ರತಿಮೆಯ ಹಾಗೆ ನಿಶ್ಚಲಳಾಗಿ ನಿಂತಿದ್ದಾಳೆ. ಎಂದಿನಂತೆ, ನಮ್ಮನ್ನೆ ನೋಡುತ್ತಿರಬೇಕು. ತಲೆಬಾಗಿಸುತ್ತಿದ್ದಾಳೆ. ಹೌದು, ನಮ್ಮನ್ನು ಆಕೆ ನೋಡಿರಬೇಕು.

ಕಮಲೆ, ಆಕೆಯ ಹೆಸರು, ಸಮಾಜ ಅವಳಿಗೆ ಸೂಳೆ ಎಂಬ ಬಿರುದು ಕೊಟ್ಟಿದೆ.

ಕಮಲೆ ಎಂಬುದು ನಿಮ್ಮಲ್ಲಿ ಎಷ್ಟು ಜನರಿಗೆ ಪ್ರೀತಿಯ ಹೆಸರೋ ಏನೋ. ಒಬ್ಬ ಸೂಳೆಗೆ ಆ ಹೆಸರೆ? ಎಂದು ನೀವು ಕೆಲವರು ಸಿಟ್ಟಾಗ ಬಹುದು. ಎಳೆಯ ವಯಸ್ಸಿನಲ್ಲಿ ತೀರಿಕೊಂಡ ನನ್ನ ಮುದ್ದು ತಂಗಿಯೊಬ್ಬಳಿಗೂ ಅದೇ ಹೆಸರಿತ್ತು.

ಹೌದು, ಆಕೆಯ ಹೆಸರು ಕಮಲೆ ಅವಳ ಮುದಿ ತಾಯಿ ದಿನಕ್ಕೆ ಹತ್ತು ಬಾರಿಯಾದರೂ ಹಾಗೆ ಹೆಸರು ಹಿಡಿದು ಕೂಗಿ, ಸುತ್ತು ಮುತ್ತಲಿನ ನಾಲ್ಕಾರು ಮನೆಗಳಿಗೆಲ್ಲ ಅದರ ನೆನಪು ಮಾಡಿಕೊಡುತ್ತಿದ್ದಾಳೆ.

ಆ ತಾಯಿಯ ಸ್ವರವೋ! ಮನೆಯ ಮ್ಯಾನೇಜರ್ ಆಕೆ. ಇನ್ನೊಬ್ಬನಿದ್ದುದು, ಆಕೆಯ ಗೂರಲು ಕೆಮ್ಮಿನ ಇಳಿವಯಸ್ಸಿನ ಜತೆಗಾರ ತಲೆಹಿಡುಕ. ನಾವು ಆ ಬೀದಿಗೆ ಬಂದುದಕ್ಕೆ ಒಂದು ವರ್ಷ ಹಿಂದೆಯೇ ಅವರು ಆ ಸಣ್ಣ ಮನೆ ಬಾಡಿಗೆಗೆ ಹಿಡಿದಿದ್ದರಂತೆ. ನಾವು ಬಂದೇ ಒಂದೂವರೆ ವರ್ಷವಾಯಿತು.

ತನ್ನ ನಿರೀಕ್ಷಣ ಬುದ್ಧಿಗೆ ಒಪ್ಪುವ ಹಾಗೆ, ಹೊಸ ಮನೆಗೆ ಬಂದ ಎರಡನೆಯ ದಿನವೇ ನನ್ನಾಕೆ ಆ ಮೂಲೆ ಮನೆಯತ್ತ ಬೊಟ್ಟು ಮಾಡಿ ವರದಿ ಒಪ್ಪಿಸಿದಳು.

ಅಂದಿನಿಂದ ಈವರೆಗೂ ಆ ಮನೆಯಲ್ಲಿ ನಡೆದಿರಬಹುದಾದ ಸಾವಿರ ಘಟನೆಗಳಲ್ಲಿ ನೂರಕ್ಕಾದರೂ ನಾವು ಸಾಕ್ಷ್ಯಗಾರರೇ ಸರಿ.

ನಾವು ಆ ಮನೆ ಎಂದಷ್ಟೇ ಹೇಳುತ್ತಿದ್ದೆವು. ಆ ಮನೆಯಲ್ಲಿ ಈ ದಿನ ಏನೋ ಗಲಾಟೆ, ಆ ಮನೆಗೆ ಯಾವನೋ ಪೋಲಿಸಿನವ ಬಂದಿದ್ದ. ಆ ಮನೆಗೆ ಶವರ್ಲೆಟ್ ಕಾರು ಬಂದಿದೆ…. ಇತ್ಯಾದಿ…

ಒಂದು ಭಾನುವಾರ ಜಯಾ ಎಲ್ಲೂ ಕಾಣಿಸಲಿಲ್ಲ; ನಾನೂ ಒಂದೆರಡು ಸಾರೆ ಹೆಸರು ಹಿಡಿದು ಕರೆದೆ. ನನ್ನಾಕೆಯೂ ಕಂಠಶೋಷಣೆ ಮಾಡಿ ಕೊಂಡಳು.

ತಡವಾಗಿ ಬಂದಳು ಹುಡುಗಿ.
‘ಎಲ್ಲೋಗಿದ್ದೆ ಜಯಾ?’
‘ಆ ಮನೆಗೆ’

ನನ್ನಾಕೆ ನನ್ನ ಮುಖ ನೋಡಿದಳು. ನಾನು ಆಕೆಯ ಮುಖ ನೋಡಿದೆ.

“ಅಮ್ಮ ಅಣ್ಣಾ…. ಕಮಲಾ ನಂಗೆ ಬಿಸ್ಕತ್ತು ಕೊಟ್ಟಳು. ಬಿಸ್ಕತ್ತಿನ ಮೇಲೆ ಬಣ್ಣದ ಹೂವು….ಊ ಊ….”

ನಾನೇನೂ ಮಗುವಿನ ಮೇಲೆ ರೇಗಲಿಲ್ಲ. ವೇಶೈಯರ ಬಗ್ಗೆ ನನ್ನಾಕೆಗೂ ನನಗೂ ನಮ್ಮದೇ ಆದ ಏಕ ಅಭಿಪ್ರಾಯವಿದೆ. ಕನಿಕರವೆನ್ನಿಸ ಬೇಕಾದರೆ, ನಾವು ದ್ವೇಷಿಸುವದು, ಆ ವೃತ್ತಿಯನ್ನು ಅನಿವಾರ್‍ಯಗೊಳಿಸಿದ ಸಾಧ್ಯಗೊಳಿಸಿದ ಸಮಾಜ ಪದ್ಧತಿಯನ್ನು. ಆದರೂ ನಮ್ಮ ಜಯಾ….

“ಒಳ್ಳೆಯ ಸಹವಾಸ” ಎಂದು ಉದ್ಗಾರ ತೆಗೆದಳು ನನ್ನಾಕೆ ನಾವಿಬ್ಬರೇ ಇದ್ದಾಗ. ನಾನು ಅವಳ ಮುಂಗುರುಳು ನೇವರಿಸಿದೆ. ಅದೆಂಥ ಮೂಕ ಸಂತೈಸುವಿಕೆಯೋ.

…. ಹದಿನೇಳು ವರ್ಷ ವಯಸ್ಸಾಗಿರಬಹುದು. ಕಮಲೆಗೆ ದೇಹ ಮಾತ್ರ ಇಪ್ಪತ್ತನ್ನು ದಾಟಿದ ಹಾಗೆ ಬೆಳೆದಿತ್ತು. ಗೌರವರ್‍ಣ, ತುಂಬು ಮುಖ, ಸುಂದರಿ. ಆಕೆ ಗಂಭೀರವಾಗಿದ್ದಾಗ ವಿದ್ಯಾವಂತೆಯಾದ ಸದ್ಗೃಹಸ್ಥೆಯ ಹಾಗೆ ಕಾಣುತ್ತಿದ್ದಳು. ಆಕೆ ನಕ್ಕಾಗ ಮಾತ್ರ ಆ ಮಾಟಗಾರಿಕೆ ಮನವರಿಕೆಯಾಗುವುದು.

ಆ ತಾಯಿಯ ಒಬ್ಬಳೇ ಮಗಳಂತೆ ಆಕೆ. ಜೀವನದ ಕಸಬನ್ನು ಮುಂದಕ್ಕೆ ಒಯ್ಯಲು ಉಳಿದಿದ್ದ ನಿಶಾನೆ. ಆ ಮನೆತನದ ಗೌರವಕ್ಕೆಲ್ಲ ವಾರಸುದಾರಳು. ಹಾಲಿನವಳೊಮ್ಮೆ ನನ್ನಾಕೆಗೆ ಹೇಳಿದಳಂತೆ ಹುಷಾರಾಗಿರು ಅಮ್ಮಣ್ಣಿ, ಮೋಹಿನಿ ಆಕೆ ತಾಯಿ.’

ನನ್ನನ್ನು ಜೋಪಾನವಾಗಿಡಬೇಕೆಂದು ಕೊಟ್ಟ ಸಲಹೆ ಅದು!

ನಸುನಗುತ್ತಾ ನನ್ನಾಕೆ ಹೆಚ್ಚಿನ ಪ್ರಶ್ನೆ ಕೇಳಿದಾಗ, ಎಲ್ಲಾ ಮಾಹಿತಿಯೂ ದೊರಕಿತು…….. ಆ ಹುಡುಗಿಯ ಸಂಪಾದನೆಯಿಂದಲೇ ಅವರ ಸಂಸಾರ ನಿರ್‍ವಹಣ. ಕಮಲೆ ಆ ಹೆಂಗಸಿನ ಮಗಳು ಹೌದೋ ಅಲ್ಲವೋ ಅದು ಸಂಶಯವೇ. ಅಂತೂ ತೋರಿಕೆಗೆ ಆಕೆ ತಾಯಿ, ಈಕೆ ಮಗಳು. ಎಳೆತನದಿಂದಲೇ ಸಿದ್ಧಗೊಳಿಸಿದ್ದು ……..

…. ನಾವಿಬ್ಬರೂ ದೀವಳಿಗೆ ಹಬ್ಬಕ್ಕೆ ಹಿಂದಿನ ಆ ರಾತ್ರಿ ಆ ಮನೆಯತ್ತ ನೋಡುತ್ತ ನಿಂತಾಗ ನನ್ನಾಕೆ ಹೇಳಿದಳು. ‘ಹೋದಸಾರೆಯ ದೀಪಾವಳಿ ನೆನಪೆ? ಆ ದಿನವೇ ಅಲ್ಲವೇ?’

“ಹೌದು. ಆ ದಿನವೇ….”

ಆ ಬಗ್ಗೆ ಬರೆಯಬೇಕು ಎಂದಾಗ ಕರುಳು ಕಿವುಚಿಕೊಂಡು ಬರುತ್ತಿದೆ. ಯಾಕೋ, ಮುದುಡಿಕೊಳ್ಳುತ್ತದೆ ಮನಸ್ಸು.

ಆ ವರ್‍ಷ ಕಮಲೆ ಬಸುರಿಯಾಗಿದ್ದಳು. ತಂದೆ ಯಾರೆಂದು ಅವಳೊಬ್ಬಳಿಗೆ ಗೊತ್ತಿದ್ದಿರಬಹುದು. ಮಂಡಿಯ ವರ್ತಕನೊಬ್ಬ; ಕಾರಿನಲ್ಲಿ ಬರುತ್ತಿದ್ದ ವಕೀಲರು; ಇನ್ಸೂರೆನ್ಸ್ ಏಜಂಟನ ಹಾಗೆ ತೋರುತ್ತಿದ್ದ ಸುಂದರ ಯುವಕನೊಬ್ಬ; ದೊಡ್ಡ ರುಮಾಲಿನ ಮಹಾನುಭಾವರೊಬ್ಬರು; ಚಿಲ್ಲರೆ ಜನರು; ಪರ‌ಊರಿನ ಗಿರಾಕಿಗಳು…. ಅಂತೂ ಯಾರದೋ ಪ್ರಸಾದ. ದಿನವೂ ಜಗಳ ನಡೆಯುತ್ತಿತ್ತು. ತಾಯಿ-ಮಗಳಿಗೆ, ಮನವೊಪ್ಪದ ಕೆಲಸಕ್ಕೆ ತಾಯಿ ಮಗಳನ್ನು ಒತ್ತಾಯಪಡಿಸುತ್ತಿದ್ದಾಳೆ ಎಂದು ತೋರುತ್ತಿತ್ತು.

ಬಸುರಿಯಾಗಿದ್ದಾಗಲೂ ಬಾಗಿಲ ಬಳಿ ಆಕೆ ಜನಪ್ರಿಯ ವಾರಪತ್ರಿಕೆಯ ಆ ವಾರದ ಸಂಚಿಕೆಯನ್ನು ಹಿಡಿದುಕೊಂಡು ಕುಳ್ಳಿರುತ್ತಿದ್ದಳು. ಈ ದೇಹ ಸ್ಥಿತಿಯ ಪ್ರದರ್ಶನ ಬೇಡವೆಂದೋ ಏನೋ, ತಾಯಿ “ಒಳ ಹೋಗೆಂ”ದು ಕಮಲೆಗೆ ಗದರಿಸುತ್ತಿದ್ದಳು. ಮತ್ತೆ ಜಗಳ….

ಎಂಥ ಆಸೆಗಳಿದ್ದವೋ ಆಕೆಗೆ ನನ್ನಾಕೆಯನ್ನೂ ನನ್ನನ್ನೂ ಜತೆಯಲ್ಲಿ ಕಂಡಾಗ ಆಕೆ ಬೀರುತ್ತಿದ್ದ ನೋಟ ಅಂಥಾದ್ದು. ತಾನು ನೊಂದ ಜೀವ ಎನ್ನುವಂತೆ ಅಸಹಾಯತೆಯನ್ನು ತೋರುತ್ತಿದ್ದ ದೃಷ್ಟಿ …. ಆ ಬಗ್ಗೆ ನಾನೂ ನನ್ನಾಕೆಯೂ ದೀರ್ಘ ಚರ್ಚೆ ನಡೆಸುತ್ತಿದ್ದೆವು.

ಓದಬೇಕು, ಹೆಚ್ಚು ಓದಬೇಕು ಎಂಬ ಲವಲವಿಕೆ ಅವಳಿಗೆ ಇತ್ತೇನೋ. ಯೋಗ್ಯವಾದ ಜೀವನ ಸಂಗಾತಿಯನ್ನು ದೊರಕಿಸಿಕೊಳ್ಳ ಬೇಕು, ಎಂಬ ಆಸೆ ಇತ್ತೇನೋ.

ಒಂಭತ್ತು ತಿಂಗಳು ತುಂಬಿ ಬಂದ ಹಾಗೆ, ಆಕೆಯ ಮುಖ ಮ್ಲಾನ ವಾಗಿರುತ್ತಿತ್ತು. ಆ ತಾಯಿಗಾದರೋ, ಮಗಳ ಈ ಬಸಿರು ಬೇಗ ಯಾಕೆ ಖಾಲಿಯಾಗಲೊಲ್ಲದೆಂಬ ಕಾತರ….

….ಅಂತೂ ಹೆರಿಗೆಯಾಯಿತು.

ಇನ್ನೂ ಯಾವಾಗ ಬರಬಹುದೆಂದು ಕೇಳಿಕೊಂಡು ಹೋಗುತ್ತಿದ್ದ ಆ ಜನವೋ-ಥೂ.

ಮಗುವಿನ ಬಗ್ಗೆ ಬಂದು ಹೇಳಿದವಳು ಜಯಾ: “ಪುಟ್ಟ ಮಗು ಮುದ್ದು ಮಗು, ಗಂಡು. ಕೆಂಪಗಿದೆ. ಬಿಗಿ ಹಿಡಿದಿದೆ ಮುಷ್ಟಿನಾ…. ಹೇಗೆ ಅಳುತ್ತೇ ಅಣ್ಣ!…. ಆ‌ಆಯ್…. ಕಣ್ಮುಚೊಂಡು ಅಳುತ್ತೆ….”

“ಹೂಂ….”

ಆ ಮನೆ ಅಜ್ಜಿ, ಹೋಗು ಹೋಗು ಅಂತು. ನನ್ನ ಕಮ್ಲಾ ಮಾತ್ರ ಬಾಂತಂದ್ಲು. ಪಾಪ ನೋಡು…. ಒಬ್ಬ ತಮ್ಮ ನಿಂಗೆ …. ಬೇಕಾ?ಂತದ್ಲು” ….

“ಓಹ್ಹೋ!”

ಮತ್ತೆ ಅದೆಂತ ಆಸೆಗಳಿದ್ದುವೊ ಆ ಕಮಲಿಗೆ. ಬಾಣಂತಿಯಾದ ಹತ್ತಾರು ದಿನಗಳ ಮೇಲೊಮ್ಮೆ ಸಂಜೆ ನಾನು ಮನೆಗೆ ಬರುತ್ತಿದ್ದಾಗ, ಮಗುವನ್ನೆತ್ತಿಕೊಂಡು ಜಟಕಾದಿಂದಿಳಿದು ಮನೆಯೊಳಗೆ ಹೋದ ಕಮಲೆಯನ್ನು ನೋಡಿದೆ.

“ಕಾಹಿಲೆಯೇನೋ ಪಾಪ! ಡಾಕ್ಟರಲ್ಲಿಗೆ ಹೋಗಿದ್ದಳೋ ಏನೋ? ಎಂದಳು ಯಜಮಾನಿತಿ ಕಾತರದ ಆ ದಿನಗಳು…. ಸಿಡುಕು ಮೋರೆಯ ಆ ಹಿರಿಯ ಹೆಂಗಸು! ಕಮಲೆ, ಯಾವ ಗಿರಾಕಿಯೂ ಇನ್ನು ಬೇಡ ಎಂದಳಂತೆ. ಹುಟ್ಟಿದ ಗಂಡೋ ಶನಿಸಂತಾನ ಹುಟ್ಟುತ್ತಲೇ ಸಾಯಬಾರದಾಗಿತ್ತಾ, ಸತ್ತೇ ಹುಟ್ಟು ಬಾರದಾಗಿತ್ತಾ, ಎಂದು ಆ ಮುದುಕಿ ಶನಿ ಶಪಿಸಿದಳಂತೆ. ಕಮಲೆ, ನಿನ್ನ ನಾಲಿಗೆ ಎರಡು ಸೀಳಾಗಲೆಂದು ಉರುವಲು ಸೌದೆಯೆತ್ತಿ ತಾಯಿಗೆ ಬೀಸಿದಳಂತೆ. ಆ ತಾಯಿ ಬಂದು ಮಗಳ ಕತ್ತನ್ನೇ ಹಿಸುಕಲು ಪ್ರಯತ್ನಿಸಿದಳಂತೆ…. ಈಯೆಲ್ಲಾ ವರದಿ ಹಾಲಿನವಳಿಂದ ನನ್ನಾಕೆಯ ಮೂಲಕ ನನಗೆ ತಲುಪಿದಾಗ, ನಾನು ತಾಳಲಾರದ ಸಂಕಟ ಅನುಭವಿಸುತ್ತಾ ಕುಳಿತೆ.

ಆ ದೀಪಾವಳಿಗೆ ತನ್ನ ಕೂಸು ಕೃಷ್ಣನಿಗೆ ಒಂದು ತಿಂಗಳು ತುಂಬುವುದೆಂದು ತಿಳಿದಿದ್ದಳೇನೋ ಆ ಹುಚ್ಚಿ, ನಿಜಕ್ಕೂ, ತಿಂಗಳು ತುಂಬಿತು. ಆದರೆ, ಆದರೆ, ತಿಂಗಳ ಮೇಲೆ ಮತ್ತೊಂದು ದಿನ ತುಂಬಲಿಲ್ಲ.

ಕಳೆದ ದೀಪಾವಳಿಯ ದಿನವೇ ಜ್ವರಪೀಡಿತ ಕೃಷ್ಣ ಕಣ್ಣು ಮುಚ್ಚಿದ್ದು

ಆ ವರ್ಷ ನಮ್ಮ ಬೀದಿಯ ಹುಡುಗರ ತಂಡ, ಆ ಶೋಕದ ಮೇಲೆ ಉತ್ಸವದ ಗೋರಿ ಕಟ್ಟಲು ಯತ್ನಿಸಿದ್ದುಂಟು. ಆದರೆ ಅದು ವ್ಯರ್ಥ ಯತ್ನ. ಮುದುಕಿಗೆ ನಿಜವಾಗಿಯೂ ಪೀಡೆ ತೊಲಗಿತು-ಎನಿಸಿರಬೇಕು. ಆದರೂ ಆಕೆ ಕಂಠಬಿರಿಯುವ ಹಾಗೆ ರೋದಿಸಿದಳು. ಅದು ನಾಟಕ. “ಆ ಅಜ್ಜಿ ನಿಜಕ್ಕೂ ಅಳ್ತಾ ಇದ್ದಾಳೇನಮ್ಮ?” ಎಂದು ನಮ್ಮ ಜಯಾ ಕೂಡ ಸಂದೇಹ ವ್ಯಕ್ತಪಡಿಸಿದಳು. ಆದರೆ, ಆ ಕಮಲೆ? ನಡುರಾತ್ರಿ ಕಳೆದ ಮೇಲೂ ಬೆಳಗು ಮುಂಜಾವದ ಹೊತ್ತಿಗೂ ಆಕೆಯ ಕ್ಷೀಣಸ್ವರದ ಯಾತನೆ ಅಲೆಯಲೆಯಾಗಿ ವಾತಾವರಣವನ್ನು ತುಂಬಿ ದೂರ ದೂರಕ್ಕೂ ಹೋಗುತ್ತಿತ್ತು.

ಒಂದು ವರ್ಷದ ಹಿಂದಿನ ಮಾತಾಯಿತು ಅದು. ಆ ಮೇಲೆ ಯಥಾ ಪ್ರಕಾರ ಶಾರೀರಿಕ ವ್ಯಾಪಾರ.

ನನ್ನಾಕೆ ಹೇಳುತ್ತಿದ್ದಳು:

“ದುಃಖವಾಗುತ್ತೇಂದ್ರೆ…. ಒಮ್ಮೆ ಯಾದರೂ ನಗೋದಿಲ್ಲ ಆಕೆ. ಶೃಂಗಾರವೂ ಇಲ್ಲ. ದಿನಾ ಆ ಪಿಶಾಚಿ ಜತೇಲಿ ಜಗಳಾನೇ. ಅದೇನು ಜೀವನವೋ ಏನು ಕಥೆಯೋ!…”

ಬೇರೆ ಬಯಕೆ ಇತ್ತೇನೋ ಅವಳಿಗೆ ಯಾರಿಗೆ ಗೊತ್ತು ತನ್ನ ಜೀವನಕ್ಕೆ ಊರುಗೋಲಾಗುವ ಗಂಡು ಮಗುವೊಂದು ತನಗೆ ಮುಕ್ತಿ ಕೊಡ ಬಲ್ಲ ವೀರ ಸಂತಾನ. ಮರ್ಯಾದೆಯ ಜೀವನವೆನ್ನುವುದು ಇನ್ನು ತನಗಿಲ್ಲ. ಆದರೂ ಬಿಡುಗಡೆ? ಸಾಧ್ಯವೇ ಇಲ್ಲವೇ ಅದು? ಎಂದೆಂದೆಗೂ?

ಬರೆಯುವ ಸಾಮರ್‍ಥ್ಯವಿದ್ದಿದ್ದರೆ ಆಕೆ ಅದೆಂಥ ಕೃತಿ ರಚಿಸುತ್ತಿದ್ದಳೋ ! ಕಲಾವಿದೆಯಾಗಿದ್ದಿದ್ದರೆ ಅದೆಂಥ ಬಣ್ಣಗಳಲ್ಲಿ ಯಾವ ಭಾವನೆಗಳನ್ನು ಕುಂಚ ಹೊರಗೆಡವುತ್ತಿತ್ತೋ! ತನ್ನಂಥ ಸಹಸ್ರ ಸೋದರಿಯರ ಜೀವನಸ್ಥಿತಿಯ ಮೂಲಕಾರಣ ಬಗೆ ಹರಿದಾಗ ಬಿಡುಗಡೆ ಸಾಧ್ಯವೆಂಬುದಾದರೂ ಆಕೆಗೆ ಗೊತ್ತಿದೆಯೋ ಇಲ್ಲವೋ!

ಆ ಹೃದಯ? ಎಂಥ ನೋವು ಅಡಗಿರಬೇಡ ಅಲ್ಲಿ? ದಹಿಸುವ ಎಂಥ ಉರಿ ಬೆಂಕಿ ಜ್ವಲಿಸುತ್ತಿರಬೇಡ! ಆಕೆ ಯಾರಿಗಾಗಿ ಕಾದಿದ್ದಳೋ! ಹೃದಯವನ್ನು ಕಸಿದುಕೊಂಡ ಯಾವ ಇನಿಯನ, ಕನಸಿನ ಯಾವ ಮೂರ್ತಿಯ, ಬರವನ್ನು ಇದಿರು ನೋಡುತ್ತಿದ್ದಳೋ!

ಹೃದಯ ಅನುಭವಗಳಿಲ್ಲದ ಯಂತ್ರವಾಗಿ ಮಾರ್‍ಪಟ್ಟಿದ್ದ ಆ ಮುದುಕಿ ಹೇಳುತ್ತಿತ್ತಂತೆ:

“ಒಳ್ಳೇ ಬೀದಿಯೇ ಅಲ್ಲ ಇದು. ಯಾರೇನು ಮಾಟ ಮಾಡಿದರೋ…. ಈ ಊರನ್ನೇ ಬಿಟ್ಟು ಹೊರಟೋಗ್ತೇವಿ….”

ಅಗೋ ಯಾವುದೋ ಕಾರು. ನಾಳೆ ದೀಪಾವಳಿಯಾದರೇನಂತೆ ನಮ್ಮ ಶ್ರೀಮಂತ ಪುತ್ರರಿಗೆ?

ಹೆಡ್ ಲೈಟಿನ ತೀಕ್ಷ್ಣ ಪ್ರಕಾಶ ಆಕೆಯ ಮೇಲೆ ಬಿದ್ದಿದೆ. ಆದರೆ ಕಮಲೆ ಆ ಮಹಾ ಪ್ರಕಾಶದೆದುರಲ್ಲಿ ಎಣ್ಣೆ ತೀರಿದ ಸೊಡರಿನ ಹಾಗಿದ್ದಾಳೆ. ಚಲಿಸದೆ ಅಲ್ಲೆ ನಿಂತಿದ್ದಾಳೆ. ಹಣೆ, ‘ಏನಿದು?’ ಎಂಬ ಪ್ರಶ್ನೆ ಕೇಳುತ್ತ ನೆರಿಗೆ ಕಟ್ಟಿದೆ. ಅಮೃತಶಿಲೆಯಲ್ಲಿ ಕಡೆದು ಮಾಡಿದಂತೆ ಕಾಣುವ ಆ ಕಪೋಲಗಳ ಮೇಲಿಂದ ಕಣ್ಣೀರಿನ ಧಾರೆ ಇಳಿದು ಬರುತ್ತಿದೆ-ಹರನ ಮುಡಿಯಿಂದ ಗಂಗೆ ಇಳಿದು ಬಂದಹಾಗೆ…

ಆಕೆಯ ತಾಯಿ ರಟ್ಟೆ ಹಿಡಿದು ಕುಲುಕುತ್ತಿದ್ದಾಳೆ:

“ಏಯ್ ನಡಿಯ ಒಳಗೆ, ಕಾರು ಬಂತು…. ರಾಯರು ಬಂದರು….. ಒಳಗೆ ನಡಿಯೇ!”

…. ನೋಡುತ್ತ ನೋಡುತ್ತ ನಾನೂ ನನ್ನಾಕೆಯ ಪರಸ್ಪರರ ಕೈ ಬಿಗಿಯಾಗಿ ಹಿಡಿದುಕೊಂಡೆವು. ನಿಶ್ಯಬ್ದವಾಗಿ ಮುಖ ತಿರುಗಿಸಿ ಮನೆಯೊಳಕ್ಕೆ ಕಾಲಿಟ್ಟೆವು. ಸಾಕು-ಈ ಜೀವನದ ಈ ಎಲ್ಲ ರುದ್ರ ದೃಶ್ಯಗಳಿಗೆ ನಾವಿಬ್ಬರೂ ಸಾಕ್ಷ್ಯಗಾರರಾದುದು ಸಾಕು.

ಅಗೋ ಜಯಾ! “ವರುಷಕ್ಕೆ ಬರುವುದು ದೀವಳಿ ಹಬ್ಬಾ-ಊರಿಗೆ ದೊಡ್ಡಾದ್ದು” ಎಂದು ಹಾಡುತ್ತ ಕುಣಿಯುತ್ತ ಬರುತ್ತಿದ್ದಾಳೆ. ಈ ವರ್ಷ ರೈಲು ಪ್ರವಾಸ ಮಾಡಿದಾಗ ಭಿಕ್ಷುಕನೊಬ್ಬನ ಬಾಯಿಂದ ಕೇಳಿ ನೆನಪಿಟ್ಟ ಹಾಡು ಅದು!

ಯಾಕೋ ಉದ್ವಿಗ್ನಳಾದಳಲ್ಲಾ ಜಯಾ?

ಅಣ್ಣಾ-ಅಮ್ಮಾ ಎಂಥವರೇ ನೀವು ನಮ್ಮನೆ ಮುಂದಿನ ಸಾಲು ದೀಪಗಳೆಲ್ಲ ಎಣ್ಣೆ ಇಲ್ದೆ ಆರಿ ಹೋಗ್ತಾ ಇವೆ…. ನೋಡ್ತಾನೋಡ್ತಾ ಸುಮ್ಮೇ ನಿಂತಿದೀರಲ್ಲ!

ಆಕೆಯನ್ನೆತ್ತಿಕೊಂಡು ಆ ಬಾಬ್ ಕ್ರಾಪನ್ನು ನಾನು ತೀಡಿದೆ. ಗೇಟಿನ ಬಲ ಭಾಗದಲ್ಲಿ ಗಾಳಿಯೊಡನೆ ಕ್ಷೀಣವಾಗಿ ಲಲ್ಲೆಯಾಡುತ್ತಿದ್ದ ದೊಡ್ಡ ದೊಂದು ಹಣತೆಯ ಕಿಳುಸೊಡರಿನ ಕಡೆಗೆ ಬೊಟ್ಟು ಮಾಡಿದೆ.

“ನೋಡಿದೆಯಾ ಜಯಾ…. ಎಣ್ಣೆ ತೀರ್ತಾ ಇದೆ…. ಆದರೂ ಬದುಕುವ ಬಯಕೆ ಆ ಸೊಡರಿಗೆ”

“ಹಿಹ್ಹಿ!”

“ಬದುಕಿ ಬೆಳಗಬೇಕೆನ್ನೋ ಆಸೆ.”

ಗದ್ಗದಿತ ಕಂಠದಿಂದ ನನ್ನಾಕೆ, “ಸಾಕು ನಿಮ್ಮ ಕವಿತೆ” ಎಂದಳು.

ಏನೂ ತಿಳಿಯದ ಜಯಾ, ‘ಜಾಣಮರಿ ನನ್ನಣ್ಣ’ ಎಂದು ಮೆಚ್ಚುಗೆಯ ಮಾತು ಹೇಳಿ ನನ್ನ ಮೂಗಿಗೆ ‘ಉಮ್ಮ’ ಕೊಟ್ಟಳು.

ತೇವಗೂಡಿದ್ದುವು ನನ್ನ ಕಣ್ಣುಗಳೆರಡೂ.

ಕಮಲೆಯ ಮನೆಯಲ್ಲಿ ಹೊರಗಿನ ದೀಪವಾರಿಸಿ ಬಾಗಿಲು ಮುಚ್ಚಿದರು.
*****c

Tagged:

Leave a Reply

Your email address will not be published. Required fields are marked *

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...