Home / ಕಥೆ / ಸಣ್ಣ ಕಥೆ / ವಿಸ್ಮಯಜನಕವಾದ ಹಿಂಸೆಯ ಕ್ರಮವು

ವಿಸ್ಮಯಜನಕವಾದ ಹಿಂಸೆಯ ಕ್ರಮವು

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳಿಗೆ ಹೋರಾಡುತ್ತಿರುವದನ್ನು ಮೇಲ್ ದೃಷ್ಟಿಯಿಂದ ನೋಡುತ್ತ ಕುಳಿತಿದ್ದನು. ಆಗ “Your presence makes, my heart rejoice and sing (ನಿನ್ನ ಮುಖವ ಕಂಡು ಹರುಷಮಾಗಿ  ಗಾನೋನ್ಮುಖಳಾಗಿರುವೆನು)” ಎಂದು ಇಂಗ್ಲಿಶದಲ್ಲಿ ಯಾರೋ ಬಹು ಮಂಜುಲವಾಗಿ ಹಾಡಿದರು. ಡಿಗ್ಬಿಯು ಚಕಿತನಾಗಿ ಎದ್ದು ಕುಳಿತು ಗಾಯಕಿಯನ್ನು ಕಂಡು “ಡಿಯಾನಾ!” ಎಂದು ಉದ್ಗಾರ ತೆಗೆದನು.
“ವ್ಹಾಲೆಂಟಾಯಿನ್, ಇಂದು ಮುಂಜಾವಿನಲ್ಲಿ ನನ್ನ ಮನೆಗೆ ಚಹ ಉಪಹಾರಕ್ಕೆ ಬರುವಿಯೆಂದು ನಂಬಿ ನಿನ್ನ ಮಾರ್‍ಗಪ್ರತೀಕ್ಷೆಯನ್ನು ಮಾಡಿ ಮಾಡಿ ಬೇಸತ್ತು ಹೋದೆನು. ಎಲ್ಲಿ ಹೋಗಿದ್ದಿ ನೀನು?” ಎಂದು ಡಿಯಾನಾ ಸುಂದರಿಯು ತನ್ನ ಸುಲಲಿತವಾದ ಹಸ್ತವನ್ನು ಆ ತರುಣನ ಭುಜದ ಮೇಲೆ ಒಯ್ಯಾರದಿಂದಿಟ್ಟು ಮಂದಸ್ಮಿತೆಯಾಗಿ ಕೇಳಿದಳು.
ಡಿಗ್ಬಿಯು ತನ್ನ ಸುಖಾಸನದಿಂದೆದ್ದು ಡಿಯಾನೆಯ ಕೈ ಹಿಡಿದು ಅವಳನ್ನು ಹಂಸತೂಲಿಕೆಯು ಮಂಚದ ಮೇಲೆ ಕುಳ್ಳಿರಿಸಿ “ಡಿಯಾನಾ, ಇಂದು ನನ್ನಿಂದ ಅನುಚಿತವಾಯಿತು; ಕ್ಷಮಿಸು. ನಾನು ಬೇಗನೆ ಇಂಗ್ಲಂಡಕ್ಕೆ  ತೆರಳುವವನಾಗಿರುವದರಿಂದ ಅನೇಕವಾದ ವ್ಯವಸ್ಥೆಗಳನ್ನು ಮಾಡಿಟ್ಟು ಕೊಳ್ಳುವದರಲ್ಲಿ ತೊಡಗಿದ್ದೆನು” ಎಂದು ನುಡಿದು ಆ ಸುಂದರಿಯ ಹಸ್ತವನ್ನು  ಗಟ್ಟಿಯಾಗಿ ಹಿಡಿದು ಕ್ಷಮೆ ಬೇಡಿದನು.
ಡಿಯಾನೆಯು ಆ ಸುಸಂಧಿಯನ್ನು ಸಾಧಿಸಿಕೊಂಡು ವ್ಹಾಲೆಂಟಾಯಿನನನ್ನು ಭರದಿಂದ ಜಗ್ಗಿ ತನ್ನ ಪಾರ್‍ಶ್ವದಲ್ಲಿ ಕುಳ್ಳಿರಿಸಿಕೊಂಡು “ಪುರುಷರಲ್ಲಿನ್ನು ವಿಶ್ವಾಸವನ್ನೇ ಇಡಬಾರದಾಯಿತು!” ಎಂದು ಅಧಿಕ್ಷೇಪಿಸುವ ನುಡಿಯಾಡಿದರೂ ಅವಳು ಆ ತರುಣನನ್ನು ಪ್ರೇಮದಿಂದ ಬಿಗಿದಪ್ಪುವಳೋ ಎಂಬಂತೆ ಅವನ ಹೆಗಲ ಮೇಲೆ ಕೈ ಹಾಕಿ ಮುದ್ದು ಬರುವಂತೆ ಮುಗುಳು ನಗೆ ನಕ್ಕಳು.
ಡಿಯಾನೆಯು ಬಲು ಚಲುವೆಯಾದ ಹೆಂಗಸು. ಅವಳ ಅಂಗ ಕಾಂತಿಯು  ತೇಜಸ್ಸುಳ್ಳದ್ದಾಗಿತ್ತು. ಸಶಕ್ತಳಾದ ಪ್ರೌಢೆಯು ಮೂವತ್ತು ಮೂವತ್ತೆರಡು ವರ್ಷದ ಪ್ರಾಯದವಳಾಗಿದ್ದರೂ ಅರಿಯದವರಿಗೆ ಅವಳು ಇಪ್ಪತ್ತು ವರ್ಷದ ನವತರುಣಿಯಂತೆ ಕಾಣುತ್ತಿದ್ದಳು. ಅವಳ ಉಡಿಗೆ ತೊಡಿಗೆಗಳು ಬೆಲೆಯುಳ್ಳವುಗಳೂ ಅಂದವಾಗಿ ಕಾಣುವಂತೆ ಮಾಡಿದ್ದವೂ ಆಗಿದ್ದವು. ಚಕಚಕನೆ ಹೊಳೆಯುವ ರತ್ನ ಖಚಿತವಾದ ದ್ರಾಕ್ಷಬಳ್ಳಿಯು  ಅವಳ ನೀಲಾಳಕಗಳನ್ನು ಬಂಧಿಸಿತ್ತು. ವಜ್ರದ ಪದಕದಿಂದ ಥಳಥಳಿಸುವ  ಮುಕ್ತಾಹಾರವು ಅವಳ ದಿವ್ಯವಾದ ಕಂಠದಿಂದ ಇಳಿಬಿದ್ದು, ಅರ್‍ಧ ವ್ಯಕ್ತವಾಗಿರುವ ಪೀನೋನ್ನತವಾದ ವಕ್ಷೋಜಗಳನ್ನು ಅಲಂಕರಿಸಿತ್ತು. ಕೆಂಡದಂತೆ  ಪ್ರಕಾಶಿಸುತ್ತಿರುವ ಮಾಣಿಕದ ಉಂಗುರವು ಆ ಸುಂದರಿಯ ಸುಲಲಿತವಾದ ಹಸ್ತಕ್ಕೆ ವಿಲಕ್ಷಣವಾದ ಶೋಭೆಯನ್ನು ಕೊಟ್ಟಿತ್ತು. ಆ ಮೀನಾಕ್ಷಿಯ ಕಟಾಕ್ಷಕ್ಷೇಪವು ಕಠೋರ ಹೃದಯರಾದ ಪುರುಷರ ಎದೆಗಳನ್ನು ಕ್ಷಣಮಾತ್ರದಲ್ಲಿ ಸೀಳಿಬಿಡುವಂತೆ ಕಂಡಿತು. ಪರಿಪಕ್ವವಾದ ಬಿಂಬದಂತೆ ಕೆಂಪಾಗಿ ತೋರುವ ಅವಳ ಅಧರದಲ್ಲಿ ಅಮೃತವೇ ಇರುವದೆಂದು ನಂಬಿ ಅಪ್ರೌಢರಾದ ತರುಣರು ಬಿಟ್ಟು ಬಿಡದಲೆ ಅವಳ ಮುಖವನ್ನೇ ನೋಡುತ್ತ ನಿಲ್ಲಬಹುದು. ಕೋಕಿಲಸ್ವರವನ್ನು ಹೀಯಾಳಿಸುವ ಅವಳ ಮಂಜುಲವಾದ ಧ್ವನಿಯನ್ನೂ ಅವಳ ವಿನೋದಯುತವಾದ ಸವಿನುಡಿಗಳನ್ನೂ ಕೇಳಿ ಮುಗ್ಧರು ಕೂಡ ಸ್ಫೂರ್ತಿಯನ್ನು ಹೊಂದಿ ಆಗ್ಗಳವಾದ ನುಡಿಗಳಿಂದ ಅವಳ ಸ್ತುತಿ ಮಾಡುವರು. ಅಂಥ ವಿಲಾಸಿನಿಯಾದ ಸುಂದರಿಯು ಮುಗುಳುನಗೆಯನ್ನು ತಾಳಿ ಮೋಹ ಬರುವಂತೆ ಪ್ರಶ್ನೆ ಮಾಡಿದಾಗ ವ್ಹಾಲೆಂಟಾಯಿನನು ನಿರ್‍ಜಿತನಾಗಿ “ನಾನು ಮಾಡಿದ ತಪ್ಪೇನು?” ಎಂದು ನುಡಿದು ಅವಳ ಪಾರ್‍ಶ್ವವನ್ನಾಶ್ರಯಿಸಿಕೊಂಡು ಕುಳಿತನು.
“ಏನೆಂದರೇನು ಹೇಳಲಿ? ಕಠೋರ ಹೃದಯನಾದ ತರುಣನೆ, ಕಾಮಿನಿಯರ ಹೃದಯವನ್ನು ಅಪಹರಿಸಿಕೊಂಡು ಹಾಗೆ ಮಹಾಸಾಗರದ ಆಚೆಯ ದಂಡೆಗೆ ಹೋಗಿ ಕುಳ್ಳಿರುವ ವಿಚಾರ ಮಾಡಿದರೆ ನನ್ನ ಗತಿಯೇನು?”
ವ್ಹಾಲೆಂಟಾಯಿನನು ಆ ಸುಂದರಿಯ ಕೆಂದುಟಿಯನ್ನು ರಭಸದಿಂದ ಚುಂಬಿಸಿ ನಕ್ಕು “ಡಿಯಾನಾ, ನಾನಿನ್ನೂ ಬಡವನು, ನಿನ್ನಂಥ ವಿಲಾಸಿನಿಯ ಪತಿಯಾಗಿ ನಿನ್ನ ಸಕಲಾಭೀಷ್ಟಗಳನ್ನು ಒದಗಿಸಿಕೊಡಬೇಕಾದರೆ ನನ್ನಲ್ಲಿ ಕುಬೇರನ ಸಂಪತ್ತು ಬೇಕು, ಮತ್ತು ಮಾಣಿಕ ವಜ್ರ ವೈಡೂರ್‍ಯಗಳಿಂದ ನಿನ್ನ ಪ್ರತ್ಯಂಗವನ್ನು ಅಲಂಕರಿಸದಿದ್ದರೆ ನಾನು ಸ್ತ್ರೀಸೌಂದರ್‍ಯದ ದ್ರೋಹಿಯಾಗುವೆನು” ಎಂದು ಮೆಲ್ಲನೆ ನುಡಿದನು.
“ಪ್ರಿಯನೆ, ನಮ್ಮ ಸಮಾಜದ ನಿಯಮಗಳನ್ನು ನೋಡಲಾಗಿ ಸ್ತ್ರೀಯು ತನ್ನ ಮನೋಗತವನ್ನು ಸ್ಪಷ್ಟೋಕ್ತಿಗಳಿಂದ ವ್ಯಕ್ತಪಡಿಸುವದು ಅಪರಾಧವಾಗಿದ್ದರೂ ನೀನು ನನ್ನನ್ನು ಬಿಟ್ಟು ಸಹಸ್ರಯೋಜನದಾಚೆಗೆ ಹೋಗುವ ನಿಶ್ಚಯವನ್ನು ಮಾಡಿದರೆ ನನ್ನ ಮನಸ್ಸು ನಿಲ್ಲುವದೆಂತು?” ಎಂದು ನುಡಿದು ಡಿಯಾನೆಯು ನೀರಿನಿಂದ ತುಂಬಿದ ತನ್ನ ಕಣ್ಣುಗಳನ್ನು  ಕರವಸ್ತ್ರದಿಂದ ಒರಿಸಿಕೊಂಡಳು.
ವ್ಹಾಲೆಂಟಾಯಿನನು ಪರವಶನಾಗಿ ಹೋದನು. ತಾನು ಹಿಂದೆ, ಮಾಡಿದ ಅನೇಕವಾದ ನಿಶ್ಚಯಗಳನ್ನೆಲ್ಲ ಮರೆತುಬಿಟ್ಟು ಅವನು ಡಿಯಾನೆಯನ್ನು ಭರದಿಂದ ಅಪ್ಪಿಕೊಂಡು ಅವಳ ಅಧರಾಮೃತದ ಸಂಚಯವನ್ನೆಲ್ಲ ಬರಿದಾಗಿ ಮಾಡಿದನು.
“ಡಿಯಾನಾ, ನಿನ್ನ ಸೌಂದರ್‍ಯಕ್ಕೆ ನಾನು ಸರ್‍ವಥಾ ಮೋಹಿತನಾಗಿರುವೆನು, ಆದರೆ ನಾನಿನ್ನೂ ಬಡವನೇ ಅಲ್ಲವೆ? ದೇವರು ನನ್ನ ಸಾಹಸಕ್ಕೆ ಅನುಕೂಲನಾದರೆ ನಾಲ್ಕಾರು ತಿಂಗಳಗಳಲ್ಲಿಯೇ ನಾನು ಶ್ರೀಮಂತರಲ್ಲಿ ಶ್ರೀಮಂತನಾಗತಕ್ಕವನು. ಅಲ್ಲಿಯವರೆಗೆ ತಡೆ, ಹೀಗೆ ಆತುರಳಾಗಬೇಡ” ಎಂದು ವಂಚನಾರಹಿತವಾದ ನುಡಿಗಳಿಂದ ಅವನು ಆ ರಮಣಿಗೆ ಆಶ್ವಾಸನವನ್ನಿತ್ತನು.
“ವ್ಹಾಲೆಂಟಾಯಿನ್; ನನ್ನ ಪೂರ್‍ವದ ಪತಿಯಾದ ಎಡ್ವರ್‍ಡ ಕ್ಯಾಂಬೆಲ್ಲನು ಲಗ್ನವಾದ ಎರಡೇ ತಿಂಗಳಲ್ಲಿ ಸಮುದ್ರದ ಪಾಲಾಗಿ ಸತ್ತು ಹೋಗಿ ನನ್ನನ್ನು ವೈಧವ್ಯದ ದುಃಖದಲ್ಲಿ ಮುಳುಗಿಸಿ ಹೋದನು. ಆತನಿಂದ ನನಗೆ  ಪ್ರಾಪ್ತವಾದ ಧನವಾದರೂ ವಿಪುಲವಾಗಿದೆ. ನಿನ್ನ ಧನವಿರದಿದ್ದರೇನಾಯಿತು? ನಾವು ದಂಪತಿಗಳಾಗಿ ಸುಖಿಗಳಾಗಿರಬಲ್ಲೆವಷ್ಟೆ? ಅದಿರಲಿ, ಆ ನಿನ್ನ ಸಾಹಸವಂಥದು?”
“ಇದೇ ಬ್ರೆಝಿಲ್ ದೇಶದಲ್ಲಿಯ ಕೆಲವೊಂದು ಅರಣ್ಯದಲ್ಲಿ ಎಷ್ಟು ಅಗಿದರೂ ಸವೆಯದಂಥ ಬಂಗಾರದ ಖನಿಗಳಿವೆ. ನಾನು ಆ ಪ್ರದೇಶದ ನಕಾಶವನ್ನು ಮಾಡಿಟ್ಟು ಕೊಂಡಿದ್ದೇನೆ.”
“ಆಹುದೇನು?” ಎಂದು ಡಿಯಾನೆಯು ಆಶ್ಚರ್‍ಯಯುತಳಾಗಿ ಉದ್ಗಾರ ತೆಗೆದು “ವ್ಹಾಲೆಂಟಾಯಿನ್, ಈ ಸುದ್ದಿಯನ್ನು ನನಗೆ ಹೇಳಿಯೇ ಇಲ್ಲ. ಇಂಥ ವಿಚಾರದಲ್ಲಿ ನೀನಿರುವಿಯೆಂದು ನಾನು ತರ್‍ಕಿಸಿಯೇ ಇದ್ದೆನು, ಆ ನಕಾಶವೆಲ್ಲಿ?” ಎಂದು ಕೇಳಿದಳು.
“ಅದನ್ನೀಗಲೇ ತೋರಿಸುವಂತೆ ಇಲ್ಲ. ಯಾರಿಗಾದರೂ ಇಂಥದೊಂದು ಸ್ಥಳದಲ್ಲಿ ಬಂಗಾರವಿದೆಯೆಂದು ತಿಳಿದರೆ, ಶೋಧ ಮಾಡಿದವನಾದ ನಾನು ಕಡೆಗುಳಿದು ವಂಚಕರೇ ಆ ಸಂಪತ್ತಿನ ಅಪಹಾರ ಮಾಡುವರು.”
“ಹೀಗೇನು? ನೀನು ಈಗ ಇಂಗ್ಲಂಡಕ್ಕೆ ಹೊರಟಿರುವದೇಕೆ? ಎಂದು ಡಿಯಾನೆಯು ವಿಲಾಸದಿಂದ ವ್ಹಾಲೆಂಟಾಯಿನನ ಭುಜಕ್ಕೆ ತನ್ನ ಮುಖವನ್ನಾನಿಸಿಕೊಂಡು ಕುಳಿತು ಕೇಳಿದಳು.
“ಬಂಗಾರದ ಖನಿಗಳಲ್ಲಿ ಕೆಲಸ ಮಾಡಬೇಕಾದರೆ ಯಂತ್ರಸಾಹಿತ್ಯ ರಸಾಯನಶಾಲೆ ಕೂಲಿಕುಂಬಳಿಗಳ ವ್ಯವಸ್ಥೆ ಮುಂತಾದವುಗಳಿಗಾಗಿ ಹೇರಳವಾದ ಹಣ ಬೇಕು. ಲಂಡನದ ಫೋರ್ಬ್ಸ ಬ್ಯಾಂಕಿನಲ್ಲಿ ಮಿತಿಮೀರಿದ ಧನರಾಶಿ ಒಟ್ಟಿದೆ. ಆ ಬ್ಯಾಂಕಿನವರಿಗೆ ನನ್ನ ವಿಚಾರವನ್ನು ತಿಳಿಸಿ ಅವರಿಂದ ಧನಸಹಾಯವನ್ನು ಪಡೆದೆನೆಂದರೆ, ನಾನು ಹೇಳಿದ ಅರಣ್ಯದಲ್ಲಿ ಉದ್ಯಮ ಶಾಲೆಗಳಿಂದಲೂ ಕೂಲಿಕಾರ ವ್ಯಾಪಾರಸ್ಥರ ಮನೆಗಳಿಂದಲೂ ತುಂಬಿದ ದೊಡ್ಡದೊಂದು ನಗರವೇ ಆಗುವದು. ಬಳಿಕ ನಾನೇ ಅಲ್ಲಿಯ ರಾಜನು. ಧನವಂತರ ಅರಸನಾದ ವ್ಹಾಲೆಂಟಾಯಿನ್ ಡಿಗ್ಬಿಯ ಪ್ರಿಯಪತ್ನಿಯಾದ ನೀನು ಉಡುಗಣದ ಮಧ್ಯದಲ್ಲಿ ತೆರೆಯುವ ಚಂದ್ರಮಂಡಲದಂತೆ  ವಿರಾಜಿಸುವಿ.”
“ಕೃತಾರ್‍ಥಳಾದೆನು ಪ್ರಿಯ ವ್ಹಾಲೆಂಟಾಯಿನ್! ಈ ವಚನವನ್ನು  ದೇವರಾಣೆಯಾಗಿ ಕಾಪಾಡುತ್ತಲಿರು. ನೀನು ಇಂಗ್ಲಂಡಕ್ಕೆ ಹೋಗುವದೇ ಆದರೆ ಒಬ್ಬನೇ ಹೋಗಬೇಡ. ಸಂಗಡ ಪರಲೋಕವಾಸಿಯಾದ ನನ್ನ ಗಂಡನ ಆಪ್ತನಾದ ಜಾರ್‍ಜ ಕ್ಯಾಂಬೆಲ್ಲನನ್ನು ಕಳಿಸುವೆನು. ಅವನು ರಸಾಯನ ಶಾಸ್ತ್ರ ನಿಪುಣನು, ಲಂಡನದಲ್ಲಿ ಒಂದು ರಸಾಯನ ಶಾಲೆಯನ್ನು ಹಾಕಿಕೊಂಡಿರುವನಂತೆ. ಹೋಗಲಿ, ನನಗೂ ಅವನ ಕಿಟಕಿಟ ತಪ್ಪಿದಂತಾಗುವದು, ಮಾರ್‍ಗದಲ್ಲಿ ನಿನಗೂ ಜೋಡಾಗುವನು.”
ಮುಂದೆ ಕೆಲಹೊತ್ತು ಆ ಮಾತು ಈ ಮಾತುಗಳಾದ ಬಳಿಕ ಡಿಯಾನೆಯು ಡಿಗ್ಬಿಯ ಅಪ್ಪಣೆಯನ್ನು ತೆಗೆದುಕೊಂಡು ತನ್ನ ಮನೆಗೆ ಹೊರಟು ಹೋದಳು.
ವ್ಹಾಲೆಂಟಾಯಿನ್ ಡಿಗ್ಬಿಯು ಲಂಡನಕ್ಕೆ ಬಂದು ಫೋರ್ಬ್ಸ ಬ್ಯಾಂಕಿನ  ಮುಖ್ಯ ವ್ಯವಸ್ಥಾಪಕನಾದ ಸರ ಆರಥರ ರಸೆತಲ್ಲನ ಮುಂದೆ ತನ್ನ ವಿಚಾರಗಳನ್ನೆಲ್ಲ ಪ್ರಕಟಗೊಳಿಸಿ ತಾನು ತಂದಿದ್ದ ಖನಿಗಳ ನಕಾಶೆಯನ್ನೂ ಬಂಗಾರದಿಂದ ಕೂಡಿದ ಅದುರಿನ ಮಣ್ಣನ್ನೂ ತೋರಿಸಿದನು. ಲಂಡನದ ವಿಖ್ಯಾತರಾದ ಭೂಗರ್‍ಭಶಾಸ್ತ್ರಜ್ಞರ ಅಭಿಪ್ರಾಯವನ್ನು ತೆಗೆದುಕೊಂಡು ರಸೆಲ್ಲನು ಡಿಗ್ಬಿಯ ವಿಚಾರಗಳಿಗೆ ಒಪ್ಪಿಕೊಂಡು ಧನಸಹಾಯವನ್ನು ಮಾಡಲು ಸಿದ್ಧನಾದನು. ಡಿಗ್ಬಿಯು ಚತುರನೂ ವಿನಯಶೀಲನೂ ಉದ್ಯಮ ದಕ್ಷನೂ ಆದ ತರುಣನಾಗಿದ್ದರಿಂದ ಸರಿ ಆರಥರ ರಸೆಲ್ಲನ ಪ್ರೇಮವು ಅವನ ಮೇಲೆ ಅಧಿಕವಾಯಿತು. ಹೊಸ ಕಂಪನಿಯ ರಚನೆಯಾಗಲಿಕ್ಕೂ, ಹೊಸ ಯಂತ್ರಗಳ ನಿರ್‍ಮಾಣವನ್ನು ಮಾಡಲಿಕ್ಕೂ ಕೆಲವು ಅವಧಿಯು ಬೇಕಾಗಿರುವದರಿಂದ ಡಿಗ್ಬಿಯು ತಿಂಗಳೆರಡು ತಿಂಗಳವರೆಗೆ ಲಂಡನದಲ್ಲಿಯೇ ಇರುವವನಾದನು. ಲಾಭಕರವಾದ ಕಂಪನಿಯು ಉತ್ಪಾದಕನೇ ಅವನಾಗಿರುವದರಿಂದ  ಲಂಡನದಲ್ಲಿ ಅವನ ಹೆಸರಾಯಿತು. ಶ್ರೀಮಂತರೂ, ಉದ್ಯಮಸಾಹಸಿಗಳೂ,  ಮದುವೆಗಾದ ಹೆಣ್ಣು ಮಕ್ಕಳುಳ್ಳ ತಾಯಂದಿರೂ ಡಿಗ್ಬಿಯ ಮನೆಗೆ  ಎಡತಾಕಲಾರಂಭಿಸಿದರು. ಸ್ನೇಹಿತರಾದರೂ ಅವನಿಗೆ ಅನೇಕರಾಗಿದ್ದರು.
ಒಂದು ದಿನ ಡಿಗ್ಬಿಯು ತಿರುಗಾಡಲಿಕ್ಕೆ ಹೋಗಿ ಮನೆಗೆ ಬಂದ ಕೂಡಲೆ ಅಂಚೆಯವನು ಕೆಲವು ಪತ್ರಗಳನ್ನು ತಂದು ಅವನ ಕೈಯಲ್ಲಿ ಕೊಟ್ಟನು. ಉಳಿದ ಪತ್ರಗಳನ್ನೆಲ್ಲ ಓದಿ ಓದಿ ಚಲ್ಲಿ ಅವನು ಒಂದು ಪತ್ರವನ್ನು ಮಾತ್ರ ಬಲು ಮನಸ್ಸುಗೊಟ್ಟು ಓದುತ್ತ ತಲೆ ಕೆಳಗೆ ಮಾಡಿಕೊಂಡು ಚಿಂತಾಗ್ರಸ್ತನಾಗಿ ಕುಳಿತನು. ಆಗ ಸರ್ ಆರಥರ ರಸೆಲ್ಲನು ಅವನ ಸ್ಥಿತಿಯನ್ನು ಕಂಡು “ಯಾಕೆ ಡಿಗ್ಬಿ, ಆ ಪತ್ರದಲ್ಲಿಯ ಸಮಾಚಾರವು ನಿನ್ನನ್ನು ಚಿಂತೆಗೀಡಾಗಿ ಮಾಡಿದಂತೆ ತೋರುತ್ತದೆ?” ಎಂದು ಕೇಳಿದನು. ಡಿಗ್ಬಿಯು ವಿಷಾದದಿಂದ  ನಕ್ಕು ರಸೆಲ್ಲನಿಗೆ ಏನೂ ಉತ್ತರವನ್ನು ಕೊಡದೆ ತನ್ನ ಕೈಯಲ್ಲಿರುವ ಪತ್ರವನ್ನು ಅವನ ಸ್ವಾಧೀನ ಮಾಡಿದನು.
ಲಂಡನ್
ವ್ಹಾ. ಡಿಗ್ಬಿ ಸಾಹೇಬರಿಗೆ,
ಡಿಯಾನಾ ಕ್ಯಾಂಬೆಲ್ಲ ಇವಳು ತಮ್ಮ ಪರಿಚಯದವಳಾಗಿರುವದು ಬ್ರಾಝಿಲದಲ್ಲಿ ಸರ್‍ವಶ್ರುತವಾದ ಮಾತು. ಪರಿಚಯವು ಹಾಗಿರಲಿ, ತಮ್ಮ ಪ್ರೇಮವನ್ನು ಸೆಳಕೊಂಡು ಅವಳು ತಮ್ಮೊಡನೆ ಪುನರ್‍ವಿವಾಹ ಮಾಡಿಕೊಳ್ಳಲಿಕ್ಕೆ ಒಪ್ಪಿಕೊಂಡಿರುವಳೆಂದು ಸುದ್ದಿಯಿದೆ. ಡಿಯಾನೆಯು ನಿಜವಾಗಿ ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತಿದ್ದರೆ ಈ ಪತ್ರವನ್ನು ಬರೆಯುವ ಕಾರಣವೇ ಇದ್ದಿಲ್ಲ. ಹೆಂಡತಿಗಿಂತ ಗಂಡನೇ ಹಿರಿಯನಿರಬೇಕೆಂಬ ನಿಯಮವೆಲ್ಲಿ? ಡಿಯಾನೆಯು ನಿಮಗಿಂತ ನಾಲ್ಕೈದು ವರುಷ ಹಿರಿಯಳಾಗಿದ್ದರೂ ಜಗತ್ತಿನ ಅನುಭವವುಳ್ಳ ಹೆಂಡತಿಯ ಸಹವಾಸದಲ್ಲಿ ನೀವು ಸುಖಿಗಳಾಗಿರ ಬಹುದಾಗಿತ್ತು. ಆದರೆ ಡಿಯಾನೆಯು ನಿಮ್ಮನ್ನು ಮದುವೆಯಾಲಿಚ್ಚಿಸುವದೇ ಇಲ್ಲ. ಜಾರ್‍ಜ ಕ್ಯಾಂಬೆಲ್ಲನಲ್ಲಿ ಅವಳ ಸರ್‍ವಸ್ವವಾದ ಪ್ರೇಮವು ನೆಲಿಸಿರುವದು. ಡಿಯಾನೆಯ ಪತಿಯಾದ ಎಡ್ವರ್‍ಡ ಕ್ಯಾಂಬೆಲ್ಲನು ಅಕಸ್ಮಾತ್ತಾಗಿ ಮರಣ ಹೊಂದಿದನು, ಡಿಯಾನೆಯೇ ಅವನಿಗೆ ವಿಷ ಕೊಟ್ಟಳೆಂದು ಜನರ ಗ್ರಹಿಕೆಯಾಗಿದೆ. ಜಾರ್‍ಜ ಕ್ಯಾಂಬೆಲ್ಲನೇ ವಿಷವನ್ನು ಸಿದ್ದಮಾಡಿ ಡಿಯಾನೆಯ ಕೈಯಲ್ಲಿ ಕೊಟ್ಟಿದ್ದನಂತೆ. ಏನೇ ಇರಲಿ; ನೀವು ಆ ಚಂಚಲೆಯ ಮೋಸಕ್ಕೀಡಾಗದಂತೆ ಜಾಗರೂಕರಾಗಿರುವದು ವಿಹಿತವೆಂದು ನಾನು ನಂಬುತ್ತೇನೆ. ನಿಮ್ಮಲ್ಲಿ ಬಂಗಾರದ ಖನಿಗಳ ನಕಾಶವಿರುವದೇನು? ಆ ಖನಿಗಳಿಗಾಗಿ ನೀವು ಪ್ರಾಣವನ್ನು ಕೊಡುವ ಸಮಯವು ಬಂದೊದಗಿದೆ. ಏನಾದರೊಂದು  ಉಪಾಯದಿಂದ ನಿಮ್ಮಲ್ಲಿರುವ ನಕಾಶವನ್ನು ಹೊತ್ತು ಹಾಕುವೆನೆಂದು ಪ್ರತಿಜ್ಞೆ ಮಾಡಿ ಡಿಯಾನೆಯು ಅಮೇರಿಕೆಯಿಂದ ಇಲ್ಲಿಗೆ ಬಂದು ಮೂರು ದಿವಸಗಳಾದವು. ನೀವು ನಿಮ್ಮ ಎಚ್ಚರಿಕೆಯಲ್ಲಿರಿರಿ. ವಂಚನೆಗೆ ಈಡಾಗಿ ಕೇಡು ತಂದುಕೊಳ್ಳುವಿರಿ. ಎಚ್ಚರಿಕೆ. ನಾನಾದರೂ ಮೊನ್ನೆಯೇ ಅಮೇರಿಕೆಯಿಂದ ಬಂದವಳು.    -ಎ. ಬಿ. ಸಿ.
ಸರ್ ಆರಥರನು ಪತ್ರವನ್ನೋದಿ ನಕ್ಕು “ಡಿಯಾನೆಯ ಪ್ರೇಮಪಾಶದಲ್ಲಿ ನೀವು ಸಿಕ್ಕಿರುವಿರೇನು? ಈ ಪತ್ರದಲ್ಲಿ ಬರೆದಂತೆ ಅವಳ ಕೃತಿಗಳು  ಸಂಶಯಾಸ್ಪದವಾಗಿವೆ ಏನು?” ಎಂದು ಕೇಳಿದನು.
“ಅಸಂಭವವಾದ ಮಾತು, ಡಿಯಾನಾ ಕ್ಯಾಂಬೆಲ್ಲಳು ಸುಸ್ವಭಾವದವಳಾದ ಸುಂದರಿಯು, ಮತ್ಸರಗ್ರಸ್ತಳಾದ ನಾರಿಯೋ, ನೀಚನಾದ ಪುರುಷನೋ ಈ ಪತ್ರವನ್ನು ಬರೆದಿರುವಂತೆ ತೋರುತ್ತದೆ” ಎಂದು  ಡಿಗ್ಬಿಯು ನಿಶ್ಚಿಂತನಂತೆ ನುಡಿದರೂ ಅವನ ಮನಸ್ಸಿನಲ್ಲಿಯ ಭೀತಿಯು ಬಿಟ್ಟಿದ್ದಿಲ್ಲ.
“ಈ ಪತ್ರವನ್ನು ನಾನು ಆಪರಾಧಿಗಳ ಶೋಧಕರಾದ ಅಧಿಕಾರಿಗಳ ಕಡೆಗೆ ಕೊಟ್ಟು, ಅಭಿಪ್ರಾಯವನ್ನು ತೆಗೆದುಕೊಳ್ಳಬಹುದಷ್ಟೆ?” ಎಂದು ಸರ್ ಅರಥರನು ಕೇಳಿದನು.
“ಅವಶ್ಯವಿಲ್ಲ. ತನ್ನ ಆಸ್ತಿಯನ್ನೆಲ್ಲ ನನಗೆ ಕೊಟ್ಟು ನನ್ನನ್ನು ಮದುವೆ ಮಾಡಿಕೊಳ್ಳಲಿಚ್ಚಿಸುವ ಆ ಸುಚರಿತೆಯ ವಿಷಯವಾಗಿ ಸಂಶಯವನ್ನು ತೆಗೆದುಕೊಳ್ಳುವದೆಂದರೆ ಪಾಪವೇ ಸರಿ.”
ಆ ಆಲೋಚನವು ಅಲ್ಲಿಯೇ ಉಳಿಯಿತು. ಡಿಯಾನಾ ಸುಂದರಿಯು ತಾನು ಬಂದಿರುವ ವರ್‍ತಮಾನವನ್ನು ತನ್ನ ಪ್ರಿಯನಾದ ವ್ಹಾಲೆಂಟಾಯಿನ್ ಡಿಗ್ಬಿಗೆ ತಿಳಿಸಿ ಇಂಥ ಓಣಿಯಲ್ಲಿರುವ ಇಂಥ ಮನೆಗೆ ಬಂದು ತನಗೆ ದರ್ಶನ ಕೊಡಬೇಕೆಂದು ತಿಳಿಸಿದ್ದರ ಮೇರೆಗೆ ಅವನು ಅವಳಿದ್ದಲ್ಲಿಗೆ ಧಾವಿಸಿ ನಡೆದನು. ಅವರ ಸಮಾಗಮವೆಂದರೆ ಹರ್‍ಷಾತಿರೇಕದ ಪ್ರದರ್‍ಶನವೇ ಆಗಿತ್ತು.  ಡಿಯಾನೆಯು ವ್ಹಾಲೆಂಟಾಯಿನನ ಮೈಗಡರಿ ಆನಂದಾಶ್ರುಗಳನ್ನು ಸುರಿಸಿದಳು; ಅವನಾದರೂ ಅವಳನ್ನು ಅಪ್ಪಿ ಚುಂಬಿಸಿ ಸಂತೋಷಗೊಳಿಸಿದನು.
“ಡಿಯಾನಾ, ಯಾವ ನೀಚರು ಈ ಪತ್ರವನ್ನು ಬರೆದಿರಬಹುದೆಂಬದನ್ನು ನೀನು ಊಹಿಸಬಲ್ಲಿಯಾ?” ಎಂದು ನುಡಿದು ಡಿಗ್ಬಿಯು ಎ ಬಿ ಸಿ. ಎಂಬ ಸಹಿಯುಳ್ಳ ಮೇಲ್ಕಂಡ ಪತ್ರವನ್ನು ಅವಳಿಗೆ ತೋರಿಸಿದನು.
ಡಿಯಾನೆಯು ಆ ಪತ್ರವನ್ನು ಒಮ್ಮೆ, ಎರಡಾವರ್ತಿ, ಮೂರಾವರ್ತಿ ತಿರಿತಿರಿವಿ ಓದಿ ಹುಬ್ಬು ಗಂಟಿಕ್ಕಿ ವಿಚಾರಗೈದು ಕಡೆಗೆ ಮೃದುಹಾಸವನ್ನು ತಳೆದು ಡಿಗ್ಬಿಯ ಮುಖವನ್ನು ನೋಡಿ, “ವ್ಹಾಲೆಂಟಾಯಿನ, ನಾನೊಂದು ಅಪರಾಧವನ್ನು ಮಾಡಿದ್ದಾದರೆ ನೀನು ಕ್ಷಮಿಸುವಿಯಷ್ಟೆ?” ಎಂದು ಕೇಳಿದಳು.
“ಪ್ರೇಮದರಸಿಯೇ, ನೀನೇನು ಅಪರಾಧವನ್ನು ಮಾಡಿದ್ದರೂ ನಾನು ವಿಚಾರಗೈಯದೆ ಕ್ಷಮಿಸಿದ್ದೇನೆ.” ಎಂದು ಡಿಗ್ಬಿಯು ಡಿಯಾನೆಯ ಹೆಗಲ ಮೇಲೆ ಕೈ ಹಾಕಿ ಅವಳ ಗದ್ದವನ್ನು ಬಹು ಪ್ರೇಮದಿಂದ ಹಿಡಿದು ಕುಲುಕುಲನೆ ನಗುತ್ತೆ ಆಶ್ವಾಸನವನ್ನಿತ್ತನು.
“ಪ್ರಿಯನೆ, ನಿನ್ನ ಮನಸ್ಸು ನೋಡಬೇಕೆಂದು ನಾನೇ ಓರ್ವ ದಾಸಿಯ ಕೈಯಿಂದ ಈ ಪತ್ರವನ್ನು ಬರೆಯಿಸಿದೆನು. ಇನ್ನು ಕ್ಷಮಿಸಲಿಕ್ಕೆ ಅಡ್ಡಿಯಿಲ್ಲವಷ್ಟೇ?” ಎಂದು ಆ ಸಮಯ ಚತುರೆಯಾದ ವಿಲಾಸಿನಿಯು ನುಡಿದು ಡಿಗ್ಬಿಯ ಪ್ರತ್ಯುತ್ತರವನ್ನು ಕೇಳಲುತ್ಸುಕಳಾಗಿ ಅವನ ಮುಖವನ್ನು ದಿಟ್ಟಿಸಿ ನೋಡಲಾರಂಭಿಸಿದಳು.
ಆಲಿಂಗನ ಚುಂಬನಗಳೇ ಅವನ ಪ್ರತ್ಯುತ್ತರಗಳು : ಪ್ರಿಯೆ, ಅನ್ಯರ  ಎದೆಯನ್ನೋಡಿಸುವಂಥ ರೀತಿಯಿಂದ ನೀನು ನನ್ನ ಮನಸ್ಸು ನೋಡ ಬಂದೆಯಾ? ಆದರೂ ನಾನು ನಿನ್ನನ್ನು ಕ್ಷಮಿಸಿದ್ದೇನೆ” ಎಂದು ನುಡಿದ ಅವನ ಆಭಿವಚನವು ಪುನರುಕ್ತಿಯೇ ಆಗಿತ್ತು.
ಜಾರ್‍ಜ ಕ್ಯಾಂಬೆಲ್ಲನು ಹಿಡಿದಿರುವ ವಿಸ್ತಾರವಾದ ಮನೆಯಲ್ಲಿ ಡಿಯಾನೆಯು ಬಂದು ಉಳುಕೊಂಡಿದ್ದಳು. ಕ್ಯಾಂಬೆಲ್ಲನ ರಸಾಯನ ವ್ಯಾಪಾರಗಳು ಒಳ್ಳೆ ವಿಜೃಂಭಣೆಯಿಂದ ನಡೆದಿದ್ದವು. ಒತ್ತಟ್ಟಿಗೆ ಸಲ್ಫ್ಯೂರಿಕ್ ಆಸಿಡಿನ ಭರಣೆಗಳು, ಮತ್ತೊತ್ತಟ್ಟಿಗೆ ನಾಯಟ್ರಿಕ್ ಆಸಿಡ್, ಒಂದೆಡೆಯಲ್ಲಿ ಫ್ರೂಟ ಸಾಲ್ಟಿನರಾಶಿ, ಮತ್ತೊಂದೆಡೆಯಲ್ಲಿ ಸಾನಾಟೋಜನ್ನದ ನಿರ್‍ಮಾಣ, ಕಾಡ್ ಲಿವ್ಹರದ ರಂಜಣಿಗೆಗಳು ಒಂದು ಪಡಸಾಲೆಯಲ್ಲಿ ಹೀಗೆ ಎಲ್ಲಿ ನೋಡಿದಲ್ಲಿ ಅನೇಕ ಪ್ರಕಾರದ ವಸ್ತುಗಳ ಸಂಗ್ರಹವು ತುಂಬಿಕೊಂಡಿತ್ತು.  ಡಿಗ್ಬಿಯು ಜಾರ್‍ಜ ಕ್ಯಾಂಬೆಲ್ಲನ ಸಾಹಸಕ್ಕೆ ಮೆಚ್ಚಿ ಅವನ ಉದ್ಯಮಶೀಲತೆಯನ್ನು ಕೊಂಡಾಡಿದನು.
“ಇಷ್ಟಕ್ಕೆ ತೀರಲಿಲ್ಲ. ಹವೆಯನ್ನು ಹಿಡಿದು ಭಟ್ಟಿಗೆ ಹಾಕಿ ಅದನ್ನು ನೀರಿನಂತೆ ಮಾಡಿ ಆ ರಸವನ್ನು ದೊಡ್ಡ ದೊಡ್ಡ ಭಾಂಡಗಳಲ್ಲಿ ತುಂಬಿಟ್ಟಿದ್ದೇನೆ. ಈ ವ್ಯಾಪಾರವು ಕೆಳಗೆ ನೆಲಮನೆಯಲ್ಲಿ ನಡೆದಿರುತ್ತದೆ, ಅಲ್ಲಿಯೇ ವಿದ್ಯುತ್ ಶಕ್ತಿಯಿಂದ ಚಮಚಮತ್ಕಾರವಾದ ರಸಾಯನದ್ರವ್ಯಗಳ ನಿರ್‍ಮಾಣವನ್ನು ಮಾಡುವ ಕೆಲಸ ನಡೆದಿರುತ್ತದೆ.” ಎಂದು ಕ್ಯಾಂಬೆಲ್ಲನು ಅಭಿಮಾನದಿಂದ ನುಡಿದನು.
“ಸಂತೋಷ! ಡಿಯಾನಾ, ನೀನು ನನಗೆ ಚಹ ಕೊಡುವಾಕೆ ಯಾಗಿದ್ದಿಯಲ್ಲವೆ? ನಡೆ” ಎಂದು ಡಿಗ್ಬಿಯು ಕೇಳಿದನು.
“ಚಹ ಸಿದ್ದವೇ ಆಗಿದೆ. ಅಮಲಿಯಾ ಬಾಯಿಯು ಚಹ ಸೋಸಿಟ್ಟು ಯಾವಾಗಿನಿಂದ ನಿನ್ನ ಮಾರ್‍ಗಪ್ರತೀಕ್ಷೆಮಾಡುತ್ತ ಕುಳಿತಿರುವಳು.”
“ಅಮೆಲಿಯಾ ಸುಂದರಿಯೂ ಬಂದಿರುವಳೇನು? ನಡೆ, ನಾನವಳ  ದರ್‍ಶನೋತ್ಸುಕನಾಗಿರುವೆನು.”
“ಅಹಹಾ, ಇಷ್ಟೇಕೆ ಆತುರತೆ? ತಾಯಿಮಕ್ಕಳನ್ನು ಕೂಡಿಯೇ ನೀನು ಮದುವೆಯಾಗಬೇಕಾಗಿಲ್ಲವಷ್ಟೆ?” ಎಂದು ಡಿಯಾನೆಯ ಪರಿಹಾಸ ಗೈದು ನುಡಿದಳು.
“ಏನು ಮಾತಾಡುವಿ, ಡಿಯಾನಾ?”
“ಅಮೆಲಿಯೆಯ ಪ್ರೇಮವನ್ನು ಅಪಹರಿಸಬೇಕೆಂದು ನೀನೊಂದು ಕಾಲ ಹವಣಿಸುತ್ತಿರುವದನ್ನು ನಾನರಿಯೆನೆ?” ಎಂದು ಡಿಯಾನೆಯು ಚಮತ್ಕಾರವಾದ ನಗೆ ನಗುತ್ತೆ ನುಡಿದಳು.
“ಆದರೇನಾಯಿತು? ಆಮೆಲಿಯೆಯ ಪ್ರಾಪ್ತಿಗಾಗಿ ನಿಮ್ಮ ಮನೆಗೆ ನಾನು ಬರುತ್ತಿದ್ದೇನೆಂದು ನಿನ್ನ ಪ್ರೇಮದ ವ್ಯಾಪ್ತಿಯು ನನಗಾಯಿತಷ್ಟೆ? ಬಂಗಾರವನ್ನು ಹುಡುಕಲಿಕ್ಕೆ ಹೋದ ಖನಿಯಲ್ಲಿ ರತ್ನವು ಪ್ರಾಪ್ತವಾದಂತಾಯಿತು. ಹಾನಿಯೇನು?” ಎಂದು ಡಿಗ್ಬಿಯು ಡಿಯಾನೆಯನ್ನು ಬಗಲಲ್ಲಿ ಬಿಗಿಯಾಗಿ ಹಿಡಿದು ನುಡಿದನು.
ಅಮೆಲಿಯೆಯು ತನ್ನ ಮಲತಾಯಿಗೂ ಡಿಗ್ಬಿಗೂ ಚಹ ಉಪಹಾರಗಳನ್ನು ನೀಡಿ ಅವರೀರ್‍ವರ ಸವಿಗಾರಿಕೆಯನ್ನು ಕಂಡು ದುಃಖಿತಳಾಗಿ ನಿಂತು ಕೊಂಡಿದ್ದಳು. ಡಿಯಾನೆಯು ಆ ಸರಿಯಾಗಿ ನಿಂತ ತನ್ನ ಮಲಮಗಳನ್ನು ನೋಡಿ ಹಲ್ಲು ಕರೆಯುತ್ತಿದ್ದರೂ ವ್ಹಾಲೆಂಟಾಯಿನನು ಆ ನವತರುಣಿಯನ್ನು ಪ್ರೇಮದಿಂದ ಮಾತಾಡಿಸಿ ತಾಯಿ ಮಕ್ಕಳೀರ್‍ವರ ಅಪ್ಪಣೆಯನ್ನು ಪಡಕೊಂಡು ತನ್ನ ನಿವಾಸಕ್ಕೆ ಹೊರಟು ಹೋದನು.
  * * * *
ಡಿಗ್ಬಿಗೆ ಇಂದಿನ ದಿವಸ ಮಿತಿ ಮೀರಿದ ಹರುಷವು. ಅರೆಕ್ಷಣವಾದರೂ  ಕುಳ್ಳಿರುವೆನೆಂದರೆ ಅವನಿಗೆ ಅವಕಾಶವಿಲ್ಲ. ಸಿಂಪಿಗನು ಹೊಸ ಕೋಟು  ಪ್ಯಾಂಟುಗಳನ್ನು ತಂದು ಅವನಿಗೆ ತೊಡಿಸಿ ನೋಡುತ್ತಿದ್ದನು. ಸೌದಾಗಾರನು  ಪ್ರಕಾಶವನ್ನುಗ್ಗುವ ಹರಳುಂಗುರಗಳನ್ನು ತಂದು ತೋರಿಸುತ್ತಿದ್ದನು. ಹೀಗೆ  ಅನೇಕರಾದ ವರ್ತಕರು ಅನೇಕವಾದ ವಸ್ತುಗಳನ್ನು ತಂದು ತಂದು ಕೊಡಲಾರಂಭಿಸಿದ್ದರು. ಇಂದು ಅವನು ಯಾರೊಡನೆಯೂ ಉಲ್ಲಾಸದಿಂದ  ನಡಕೊಳ್ಳುತ್ತಿದ್ದನು. ಇಂದು ಯಾರು ಏನು ಹೇಳಿದ್ದಕ್ಕೂ ಅವನು ಒಪ್ಪಿ ಕೊಳ್ಳುತ್ತಿದ್ದನು.
“ವಾಲೆಂಟಾಯಿನ್ ಡಿಗ್ಬಿ, ಇಂದೇಕೆ ನೀನಿಷ್ಟು ಉಲ್ಲಾಸದಲ್ಲಿರುವಿ?”  ಎಂದು ಸರ ಆರಥರ ರಸೆಲ್ಲನು ನಗೆಮುಖವನ್ನು ತಾಳಿ ಕೇಳಿದನು.
“ಸೌಭಾಗ್ಯವೇ ನನ್ನ ವಶವರ್‍ತಿಯಾಗಿ ನಡಕೊಳ್ಳಲಾರಂಭಿಸಿರುವದಲ್ಲವೆ? ಸರ ಆರಥರ, ನೀವೇ ನನ್ನ ಸೌಭಾಗ್ಯಕ್ಕೆ ಮುಖ್ಯ ಕಾರಣರಾಗಿರಲು ನನ್ನ ಮನೋಲ್ಲಾಸದ ಮೂಲವನ್ನು ನಿಮಗೆ ತಿಳಿಸದಿರುವೆನೆ?”
“ಯಾವಾಗ ಹೇಳುವಿ? ಇದಕ್ಕೆ ಇಷ್ಟೇಕೆ ಪೂರ್‍ವಪೀಠಿಕೆಯನ್ನು ಬೆಳಿಸುವಿ?”
“ಇಂದು ಜಾರ್‍ಜ- ಕ್ಯಾಂಬೆಲ್ಲನ ಪತ್ರ ಬಂದಿದೆ. ಇಂದೆಯೇ ನಮ್ಮ ಮದುವೆಯ ಬಗ್ಗೆ ಮಾತುಕಥೆಗಳನ್ನಾಡತಕ್ಕದೆಂದು ನನ್ನ ಪ್ರಿಯತಮೆಯಾದ ಡಿಯಾನೆಯು ಇಚ್ಚಿಸುವಳಂತೆ. ಅದಕ್ಕಾಗಿ ನಾನು ಆತುರನಾಗಿದ್ದೇನೆ.”
“ಸಂತೋಷ! ದೇವರು ನಿಮ್ಮ ಅಭೀಷ್ಟಗಳನ್ನೆಲ್ಲ ಕೈಗೂಡಿಸಿ ಕೊಡಲಿ” ಎಂದು ನುಡಿದು ಸರ ಆರ್‍ಥರನು ಡಿಗ್ಬಿಯ ಹಸ್ತವನ್ನು ಗಟ್ಟಿಯಾಗಿ ಹಿಡಿದು ಅಲ್ಲಾಡಿಸಿದನು.    ಮಧ್ಯಾಹ್ನದ ಊಟವಾಯಿತು, ಡಿಗ್ಬಿಯು ವರ್‍ತಮಾನಪತ್ರಗಳನ್ನೋದುತ್ತೆ ಕುಳಿತಿರುವಾಗ ಸೇವಕನೊಬ್ಬನು ಒಂದು ಪತ್ರವನ್ನು ತಂದು ಕೊಟ್ಟನು.
ಚಾರಿಂಗಕ್ರಾಸ್
ಪ್ರಿಯ ಡಿಗ್ಬಿ, ನಂಬರ ೧೫೭.
ಅನಿರ್‍ವಾಹಕ್ಕಾಗಿ ಈ ಪತ್ರವನ್ನು ಬರೆದಿರುವೆನು. ನಾನು ಬರೆದದ್ದು ನಿಮಗೆ ವಿಪರೀತವಾಗಿ ತೋರುವದು. ಆದರೂ ನೀವು ವಿಚಾರವಂತರಾಗಿ ನಡಕೊಳ್ಳುವಿರೆಂದು ಆಶಿಸುತ್ತೇನೆ. ಇಂದು ಸಾಯಂಕಾಲಕ್ಕೆ ಈ ಮನೆಗೆ ಬರಲು ನಿಮಗೆ ಆಮಂತ್ರಣವಿರುವದಷ್ಟೇ? ನೀವು ಬರಬೇಡಿರಿ. ಬಂದರೆ ನೀವು ಗಂಡಾಂತರದಲ್ಲಿ ಬೀಳುವದು ನಿಶ್ಚಯ, ಜಾರ್‍ಜ ಕ್ಯಾಂಬೆಲ್ಲನ್ನೂ ನನ್ನ ಮಲತಾಯಿಯಾದ ಡಿಯಾನಾ ಕ್ಯಾಂಬೆಲ್ಲಳೂ ಕೂಡಿ ಸಂಚು ಮಾಡಿ ನಿಮ್ಮ ಪ್ರಾಣವನ್ನೂ ನಿಮ್ಮ ಬಳಿಯಲ್ಲಿರುವ ನಕಾಶವನ್ನೂ ಕೂಡಿಯೇ ಅಪಹರಿಸಬೇಕೆನ್ನುವರು. ನಿಮ್ಮಲ್ಲಿ ನಾನು ಒಂದಾವರ್ತಿ  ಪಕ್ಷಪಾತವುಳ್ಳವಳಾಗಿದ್ದೇನೆಂದು ಒಪ್ಪಿಕೊಳ್ಳಲು ನಾನು ನಾಚಿಕೊಳ್ಳುತ್ತೇನೆ.  ಮೀರಿಬಂದ ಪ್ರಸಂಗದಲ್ಲಿ ಹಾಗೆ ಮಾಡಬೇಕಾಗಿದೆ. ಆ ಪಕ್ಷಪಾತವನ್ನು ಲಕ್ಷಿಸಿ ನಾನೇ ಪತ್ರವನ್ನು ಬರೆದಿದ್ದೇನೆ. ಇಂದಿನ ರಾತ್ರಿ ನೀವು ನಿಮ್ಮ ಪ್ರಾಣವನ್ನು ಕಳಕೊಳ್ಳುವದೇ ನಿಶ್ಚಯ. ಅದಕ್ಕಾಗಿ ನಾನು ನಿಮಗೆ ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ. ಇಂದಿನ ಆಮಂತ್ರಣವನ್ನು ನಿರಾಕರಿಸಿ ನೀವು ಇಲ್ಲಿಗೆ ಬರುವ ವಿಚಾರವನ್ನು ಬಿಟ್ಟು ಬಿಡಿರಿ. ಮೋಹಕ್ಕೊಳಗಾಗಬೇಡಿರಿ.”
  ತಮ್ಮ ವಿಧೇಯಳಾದ  ಅಮೆಲಿಯಾ ಕ್ಯಾಂಬೆಲ್ಲ.
ಡಿಗ್ಬಿಯು ಪತ್ರವನೋದಿ ದಂಗುಬಡಿದವನಾಗಿ ಕುಳಿತುಕೊಂಡನು. ಇದುವರೆಗೆ ಅವನ ಮನಸ್ಸಿನಲ್ಲಿ ಸುಳಿದಾಡುತ್ತಿರುವ ಸುಲಲಿತವಾದ ವಿಚಾರಗಳೆಲ್ಲ ಮಂಜಿನಲ್ಲಿ ಮುಸುಗಿದಂತಾಗಿ ಅಡಗಲಾರಂಭಿಸಿದವು.
“ಈ ಪತ್ರವನ್ನು ಕೂಡ ಡಿಯಾನೆಯೇ ಬರೆದಿರಲಿಕ್ಕಿಲ್ಲವಷ್ಟೆ? ಬರೆದಿದ್ದರೆ ಇಂಥ ಶುಭದಿವಸದಲ್ಲೇಕೆ ಬರೆದಳು? ಅಮೆಲಿಯೆಯೇ ಬರೆದಿರಬಹುದು. ಇರಬಹುದೇಕೆ, ಅವಳೇ ಬರೆದಿರುವಳೆಂಬದು ಸಹಿಯು ಮೇಲಿಂದ ಸ್ಪಷ್ಟವಾಗಿ ಕಾಣುವದಿಲ್ಲವೆ? ಆದರೂ ಡಿಯಾನೆಯು ಇಷ್ಟು ಘಾತಳಿರುವಳೆಂದು ನಾನೆಂದಿಗೂ ನಂಬಲಾರೆನು” ಎಂದು ವಿಚಾರಿಸುತ್ತೆ  ಅವನು ಚಿಂತೆಗೀಡಾಗಿ ಮಲಗಿಕೊಂಡನು.
ಮೂರು ಸಂಜೆಯ ಹೊತ್ತು, ನೊಗವನ್ನುಚ್ಚಿ ಬಿಟ್ಟ ದನಗಳಂತೆ, ಉದ್ಯೋಗಸ್ತರು, ಗುಮಾಸ್ತರು, ಅಧಿಕಾರಿಗಳು, ಸೇವಕರು ಮುಂತಾದವರು “ಇಂದಿನ ದಿವಸವನ್ನಂತೂ ಗೆದ್ದೆವೆ?” ಎಂಬ ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ಬಂದು ಉಪಹಾರಗಳನ್ನು ಸೇವಿಸಿ ಮೇಲಾದ ಬಟ್ಟೆಗಳನ್ನು ಧರಿಸಿ ತಂಗಾಳಿಯನ್ನು ಸೇವಿಸಲು ಒಯ್ಯಾರದಿಂದ ನಡೆದಿರುವರು. ಸರ ಆರಥರ ರಸೆಲ್ಲನು ಸಪತ್ನೀಕನಾಗಿ ದಿವ್ಯವಾದ ರಥದಲ್ಲಿ ಕುಳಿತುಕೊಂಡು ವಿಹಾರಕ್ಕಾಗಿ ಹೊರಟು ಹೋಗಿದ್ದನು. ಹೊರಗೆಲ್ಲ ಲೀಲಾವಿಲಾಸ ಆನಂದ ಒನಪು ಒಯ್ಯಾರಗಳು ನಡೆದಿರಲು ಡಿಗ್ಬಿಯೊಬ್ಬನೇ ಚಿಂತಾಕುಲನಾಗಿ ಮಂಚದ ಮೇಲೆ ಬಿದ್ದು ಕೊಂಡಿದ್ದನು. ಅಷ್ಟರಲ್ಲಿ ಜಗಜಗಿಸುವ ಪೋಷಾಕವನ್ನೂ ತಳತಳಿಸುವ ಮುತ್ತು ರತ್ನಗಳ ಆಭರಣಗಳನ್ನೂ ನೋಡುವವರ  ಮನಸ್ಸಿನ ವಿಷಾದವನ್ನು ದೂಡಿ ಹಾಕುವಂಥ ಮಂದಹಾಸವನ್ನೂ ತಳೆದವಳಾದ ಡಿಯಾನಾ ಸುಂದರಿಯು ಮಂಜುಲವಾದ ಧ್ವನಿಯಿಂದ ವ್ಹಾಲೆಂಟಾಯಿನನನ್ನು ಕೂಗುತ್ತ ಅವನ ಮಂಚದ ಸಮೀಪಕ್ಕೆ ಬಂದಳು. ಅಲ್ಲಿ ಅವನು ಚಿಂತಾಗ್ರಸ್ತನಾಗಿ ಉರುಳಾಡುತ್ತಿರುವದನ್ನು ಕಂಡು ಆ ಮಾನಿನಿಯು ಚಕಿತಳಾಗಿ “ವ್ಹಾಲೆಂಟಾಯಿನ್! ಪ್ರಿಯ ವ್ಹಾಲೆಂಟಾಯಿನ್!! ಏನು ಸಮಾಚಾರವಿದು?” ಎಂದು ಕೇಳಿದಳು.
ಹುಲಿಯ ಕೈಗೆ ಸಿಕ್ಕವನು ಶಸ್ತ್ರಪಾಣಿಯಾದ ತಾರಕನನ್ನು ಕಂಡಾ ಕ್ಷಣವೇ “ಬದುಕಲೆ ಜೀವವೆ” ಎಂದು ಧೈರ್‍ಯವನ್ನು ತಳೆವಂತೆ, ಡಿಯಾನೆಯನ್ನು ಕಂಡಾಕ್ಷಣಕ್ಕೆ ಡಿಗ್ಬಿಯ ಚಿಂತೆಯು ಅರ್‍ಧ ಹಿಮ್ಮೆಟ್ಟಿದಂತಾಗಿ, ಆವನು ತತ್‌ಕ್ಷಣವೇ ಎದ್ದು ಕುಳಿತು “ಬಾ, ಡಿಯಾನಾ, ನೀನೊಳ್ಳೇ ಸಮಯಕ್ಕೆ ಬಂದಿ” ಎಂದು ಮಂಚದಲ್ಲಿ ತುಸು ಸರಿದು ಅವಳಿಗೆ ಸ್ಥಳ ಮಾಡಿದನು.
ವಿಮನಸ್ಕನಾದ ಬಾಲಕನನ್ನು ಮನೆಯ ಹಿರಿಯಳು ಕಕ್ಕುಲತೆಯಿಂದ ತನ್ನ ಬಳಿಯಲ್ಲಿ ಕುಳ್ಳಿರಿಸಿಕೊಂಡು ಅವನ ಮುಂದಲೆಯ ಮೇಲೆ ಕೈಯಾಡಿಸಿ  ಸಮಾಧಾನಗೊಳಿಸುತ್ತಿರುವಂತೆ ಡಿಯಾನೆಯು ಡಿಗ್ಬಿಯ ಹೆಗಲಮೇಲೆ ಕೈ ಹಾಕಿ, ಮತ್ತೊಂದು ಕೈಯನ್ನು ಅವನ ಎದೆಯ ಮೇಲೆ ಪ್ರೇಮದಿಂದ ಆಡಿಸುತ್ತೆ “ಏನು ಸಮಾಚಾರವಿದು ನನ್ನ ಮನದಾಣ್ಮನೆ? ನೀನೊಳ್ಳೆ ಉಬ್ಬಿನಲ್ಲಿರುವಿಯೆಂದು ನಾನು ನೆನೆದು ನಿನ್ನೊಡನೆ ಯಥೇಷ್ಟವಾಗಿ ನಕ್ಕು ಕೆಲೆದು ಹೋಗಬೇಕೆಂದು ಬಂದಿದ್ದೆನು. ಏನಾಗಿದೆ ನಿನಗೆ? ನನ್ನ ಪಾಣಿಗ್ರಹಣವನ್ನು ಮಾಡಲು ನಿನ್ನ ಮನಸ್ಸು ಒಲ್ಲದೇನು?” ಎಂದು  ಕೇಳಿದಳು.
“ಪ್ರಿಯೆ, ನಿನ್ನನ್ನು ಒಲ್ಲದವನಾದ ನಾನು ನನ್ನ ಪ್ರಾಣವನ್ನು ಕೂಡ ಒಲ್ಲೆನೆಂದು ಹೇಳಬೇಕಾದೀತು. ಇಂಥ ಭಯಂಕರವಾದ ಶಂಕೆಯನ್ನು ನೀನು ಏನು ನಿಮಿತ್ತವಾಗಿ ತಳೆದಿ?” ಎಂದು ವ್ಹಾಲೆಂಟಾಯಿನನು ಡಿಯಾನೆಯ ಕೊಂಕುಗುರುಳನ್ನು ತನ್ನ ಬಟ್ಟಿಗೆ ಸುತ್ತುತ್ತೆ ಪ್ರಶ್ನೆ ಮಾಡಿದನು.
“ತೆಗೆ, ನೀನು ಸುಳ್ಳಾಡುವಿ!” ಎಂದು ಡಿಯಾನೆಯು ಕ್ರುದ್ಧಳಾದಂತೆ ನಟಿಸಿ ಹಿಂದಕ್ಕೆ ಸರಿದು ಕುಳಿತಳು.
ನಿರ್‍ಜಿತನಾದ ವ್ಹಾಲೆಂಟಾಯಿನನು ಆ ಒಯ್ಯಾರೆಯನ್ನು ತನ್ನ ಬಾಹು ಪಾಶದಲ್ಲಿ ಹಿಡಿದು ಅನೇಕವಾದ ಆಣೆ ಪ್ರಮಾಣಗಳನ್ನು ಮಾಡಿ ಆ ವರನು ವಧುವಿಗೆ ವಿವಾಹದ ವಾಗ್ದಾನ ಮಾಡಿದನು. ಡಿಯಾನೆಯು ಸಂಗಡಲೇ ಎದ್ದು ಕಪಾಟಿನೊಳಗಿಂದ ಪರಿಮಳವನ್ನು ಸೂಸುವ ಮದಿರಾಸವದ ಕುಪ್ಪೆಯನ್ನು ತೆಗೆದು ಒಯ್ಯಾರದಿಂದ ತುಂಬಿ ಆಗ್ರಹದೊಂದಿಗೆ ವ್ಹಾಲೆಂಟಾಲಿನನಿಗೆ ಕುಡಿಸಿದಳು. ಒಂದು ಗ್ಲಾಸಕ್ಕೆ ಎರಡು ಕುಡಿದು ಉದ್ರಿಕ್ತನಾದ  ಅವನನ್ನು ಡಿಯಾನೆಯು ರಥದಲ್ಲಿ ಕುಳ್ಳಿರಿಸಿಕೊಂಡು ಹಾಯಿಡಪಾರ್ಕವೆಂಬ ಭೂನಂದನದ ಕಡೆಗೆ ವಿಹಾರಾರ್ಥವಾಗಿ ನಡೆದಳು. ಅಲ್ಲಿ ವಿಹರಿಸುವಾಗ ಡಿಯಾನೆಯು ಡಿಗ್ಬಿಯ ಮನಸ್ಸಿನಲ್ಲಿಯ ಅನೇಕವಾದ ಶಂಕೆಗಳ ನಿವಾರಣವನ್ನು ಸಯುಕ್ತಿಕವಾಗಿ ಮಾಡಿದಳು.
ಮನೆಗೆ ಬಂದ ಕೂಡಲೆ ಡಿಗ್ಬಿಯ ಒಳ್ಳೇ ಸೊಬಗಿನ ಪೋಷಾಕು ಮಾಡಿಕೊಂಡು ಬಂಗಾರದ ಹಿಡಿಕೆಯ ಮಲಬಾರ ಬೆತ್ತವನ್ನು ಹಿಡುಕೊಂಡು ಡಿಯಾನೆಯ ಮನೆಗೆ ಹೋಗಲು ಸಿದ್ಧನಾದನು. ಸರ ಆರಥರ ರಸೆಲ್ಲನು ಅವನನ್ನು ತಡೆದು “ಓ ಸಾಹೇಬ, ಭೋಜನದ ಸಮಯದಲ್ಲಿ ನೀವೆಲ್ಲಿಗೆ ನಡೆದಿರಿ? ಈ ಹೊಸ ಉಲ್ಲಾಸವು ನಿಮಗೆಲ್ಲಿಂದ ಪ್ರಾಪ್ತವಾಯಿತು? ಮಧ್ಯಾಹ್ನದಲ್ಲಿ ನೋಡಿದರೆ ನೀವು ಚಿಂತೆಯಿಂದ ಹಿಂಡಿ ಹಿಪ್ಪೆಯಾಗಿ ತೋರುತ್ತಿದ್ದಿರಿ, ಏನಾಗಿತ್ತು ಆಗ ನಿಮಗೆ?” ಎಂದು ಕೇಳಿದನು.
ಈ ಮಾತಿನ ಬಗ್ಗೆ ವಿಶೇಷವಾದ ಚರ್ಚೆ ಮಾಡಲಿಕ್ಕೆ ನನಗೆ ಅವಸರವಿಲ್ಲ. ಆದರೂ ನನಗೆ ಚಿಂತೆಯನ್ನು ಹುಟ್ಟಿಸಿದ ಪತ್ರವನ್ನು ನಿಮಗೆ ತೋರಿಸುತ್ತೇನೆ ನೋಡಿರಿ ಡಿಯಾನೆಯು ಇದರಲ್ಲಿ ಬರೆದ ಮಾತಿನ ನಿರಾಕರಣವನ್ನು ಸಮಾಧಾನಕರವಾಗಿ ಮಾಡಿರುವಳು” ಎಂದು ಹೇಳಿ ಪತ್ರವನ್ನು ಜೇಬಿನೊಳಗಿಂದ ತೆಗೆದು ರಸೆಲ್ಲನಿಗೆ ತೋರಿಸಿದನು.
ಸರ ಆರಥರ ರಸೆಲ್ಲನು ಆ ಪತ್ರವನ್ನೋದಿ ಡಿಗ್ಬಿಯ ಕೈ ಹಿಡಿದು ಬಳಿಯಲ್ಲಿ ಕುಳ್ಳಿರಿಸಿಕೊಂಡು “ವ್ಹಾಲೆಂಟಾಯಿನ್, ಈ ಪತ್ರದಲ್ಲಿ ಸೂಚಿಸಿದಂತೆ ನೀನು ಇಂದಿನ ರಾತ್ರಿ ಅಲ್ಲಿಗೆ ಹೋಗುವದನ್ನು ಬಿಟ್ಟರೆ ಕೆಡುವದೇನು? ಡಿಯಾನೆಯಂತೂ ನಿನ್ನಲ್ಲಿ ಅತಿಶಯವಾದ ಆಸಕ್ತಿಯನ್ನು ತಳೆದವಳೆಂದು ಹೇಳುವಿ, ಇಂದಿಗಾಗುವ ಕೆಲಸವು ನಾಳಿಗಾದೀತು?” ಎಂದು ಸೂಚಿಸಿದನು.
“ಸರ ಆರಥರರೆ, ನೀವಾದರೂ ಒಂದಾವರ್ತಿ ವಧುವಿನ ಪ್ರೇಮದಲ್ಲಿ  ಸಿಲುಕಿದವರು, ಡಿಯಾನೆಯ ಆಶಾಭಂಗವನ್ನು ನಾನು ಹೇಗೆ ಮಾಡಲಿ?  ಮೇಲಾಗಿ ಅವಳ ಪ್ರೇಮವು ಆಕ್ಷೇಪಾರ್ಹವಾದದ್ದೆಂದು ನಂಬುವದೇ ಪಾಪವೆಂದು ನನಗೆ ತೋರುತ್ತದೆ. ಇದೊಂದು ಮಾತಿನಲ್ಲಿ ನಾನು ನಿಮ್ಮ ಆಜ್ಞೆಯನ್ನು ಮೀರಿದ್ದಕ್ಕೆ ಕ್ಷಮಿಸಿರಿ.”
“ನಿನ್ನಿಚ್ಛೆಯಂತಾಗಲಿ. ಆದರೂ ಅಲ್ಲಿ ಮಾದಕ ಪದಾರ್ಥಗಳನ್ನು ನೀನು ಸೇವಿಸುವದನ್ನು ಬಿಟ್ಟು ಬಿಡು, ಕೆಲಸ ತೀರಿದ ಕೂಡಲೆ ನಿರರ್ಥಕವಾಗಿ ಅಲ್ಲಿ ಹೊತ್ತು ಗಳೆಯದೆ ಮರಳಿ ಬಾ” ಎಂದು ರಸೆಲ್ಲಸಾಹೇಬರು ಸ್ನೇಹಪರವಶರಾಗಿ ಉಪದೇಶ ಮಾಡಿದರು.
ಹಾಗೆಯೇ ಆಗಲೆಂದು ಡಿಗ್ಬಿಯು ಹೊರಟು ಹೋದನು. ಇತ್ತ ಸರ ಆರಥರನು ಟೆಲಿಫೋನಿನಿಂದ ಕುಕರ್ಮಶೋಧಕನಾದ ಶರ್ಲಕ ಹೋಲ್ಮ್ಸನನ್ನು ಕರಿಸಿ ನಡೆದ ವರ್ತಮಾನವನ್ನೆಲ್ಲ ಅವನಿಗೆ ತಿಳಿಸಿ, ಡಿಗ್ಬಿಯು ತನಗೆ ತೋರಿಸಿರುವ ಎರಡೂ ಪತ್ರಗಳನ್ನು ಶರ್ಲಾಕನ ಸ್ವಾಧೀನ ಮಾಡಿದನು. ಹೋಲ್ಮ್ಸನು ಕ್ಷಣಹೊತ್ತು ವಿಚಾರಗೈದು ನನ್ನಿಂದಾದಷ್ಟು ಸಾಹಸವನ್ನು ಮಾಡಿ ಡಿಗ್ಬಿಯ ಜೀವಕ್ಕೆ ಅಪಾಯವಾಗದಂತೆ ವ್ಯವಸ್ಥೆ ಮಾಡುವೆನೆಂದು ಹೇಳಿ ಲಗಬಗೆಯಿಂದ ಹೊರಟು ಹೋದನು.
ರಾತ್ರಿಯ ಹತ್ತು ಗಂಟೆಗೆ ಚಾರಿಂಗ ಕ್ರಾಸಿನಲ್ಲಿ ೧೫೭ನೆಯ ನಂಬರಿನ ಮನೆಯ ಆವಾರಿನ ಸುತ್ತಲೂ ಪೊಲೀಸರ ಮುತ್ತಿಗೆ ಬಿದ್ದಿತು. ಬೆಕ್ಕಿನ ಪಿಳ್ಳೆಯನ್ನು ಅವರು ಒಳಗೆ ಹೋಗಗೊಡಲೂ ಇಲ್ಲ, ಹೊರಗೆ ಬರಲೂ ಕೊಡಲಿಲ್ಲ. ರಾತ್ರಿಯ ಹನ್ನೆರಡರೊಳಗಾಗಿ ಡಿಗ್ಬಿಯು ಆ ಮನೆಯನ್ನು ಬಿಟ್ಟು ಬಂದೇ ಬರುವನೆಂದು ಖಂಡಿತವಾಗಿ ಹೇಳಿದ್ದನು. ಹನ್ನೆರಡು ಬಡಿದು ಹೋದವು. ಡಿಗ್ಬಿಯು ಹೊರಗೆ ಬರಲಿಲ್ಲ.
ಘಾತವಾಯಿತೆಂದವನೇ ಶರ್ಲಾಕನು ನೆಟ್ಟಗೆ ಆ ಮನೆಯ ತಲೆ ಬಾಗಿಲಕ್ಕೆ ಬಂದು ಬಾಗಿಲವನ್ನು ಒದೆಯಲಾರಂಭಿಸಿದನು.
“ಯಾರವರು, ಇಷ್ಟು ರಾತ್ರಿಯಲ್ಲಿ ಉದ್ದಾಮತನದಿಂದ ನಿದ್ರಾಭಂಗವನ್ನು ಮಾಡುತ್ತಿರುವವರು?” ಎಂದು ಕ್ರುದ್ಧಳಾಗಿ ಕೇಳುತ್ತಿದ್ದರೂ ಆ ಕೇಳುವಾಕೆಯ ಧ್ವನಿಯು ಕೋಕಿಲದ ವಾಣಿಯಂತೆ ಮಂಜುಲವಾಗಿ ಕೇಳಿಸಿತು.
“ಇಲ್ಲಿ ವ್ಹಾಲೆಂಟಾಯಿನ್ ಡಿಗ್ಬಿ ಎಂಬ ಗೃಹಸ್ಥರು ಬಂದಿರುವರಷ್ಟೆ?” ಎಂದು ಶಾರ್ಲಾಕನು ಕೇಳಿದನು.
“ವಾಲೆಂಟಾಲಿನ್ ಡಿಗ್ಬಿ! ಎಲ್ಲಿಯವರವರು? ಇಲ್ಲಿಗೇಕೆ ಬರುವರವರು? ಡಿಗ್ಬಿ ಎಂಬವರ ಪರಿಚಯವೇ ನಮಗಿಲ್ಲ” ಎಂದು ಆ ಸ್ತ್ರೀಯು ಒಳಗಿನಿಂದಲೇ ನುಡಿದಳು.
“ಅದೇಕೆ? ಡಿಗ್ಬಿಯು ಇಲ್ಲಿ ಬಂದದ್ದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ನನ್ನ ಹೆಸರು ಶರ್ಲಾಕ್ ಹೋಲ್ಮ್ಸನು.”
“ಶರ್ಲಾಕ್ ಹೋಲ್ಮ್ಸ!” ಎಂದು ಉದ್ಗಾರ ತೆಗೆದವಳೇ ಡಿಯಾನೆಯು ಬಾಗಿಲವನ್ನು ತೆರೆದು “ಏನು ನಿಮಿತ್ತ ಬಂದಿರುವಿರಿ? ಒಳಗೆ ದಯ ಮಾಡಬೇಕು” ಎಂದು ವಿನಯದಿಂದ ನುಡಿದಳು.
ಶರ್ಲಾಕನು ಒಳಗೆ ಹೋಗಿ ಅಲ್ಲಿರುವದೊಂದು ಕುರ್ಚಿಯ ಮೇಲೆ ಕುಳಿತು “ಡಿಯಾನಾಬಾಯಿ, ಡಿಗ್ಬಿಯು ಇಲ್ಲಿ ಬರಲಿಲ್ಲವೆ? ಅವನು ಇದೇ ಮನೆಯೊಳಗೆ ಬಂದಂತಾಯಿತು” ಎಂದು ನುಡಿದನು.
“ಬರಲಿಲ್ಲ ಬಿಡಿರಿ. ಬೇಕಾದರೆ ನೀವು ನೋಡಿ ಕೊಳ್ಳಬಹುದು. ಮನೆ ತುಂಬ ಅಡ್ಡಾಡಿ ನೋಡಿರಿ. ನೀವೇಕೆ ಅವನ ವಿಷಯವಾಗಿ ವಿಚಾರಗೈಯುವಿರಿ ? ಅವನೇನಾದರೂ ಅಪರಾಧವನ್ನು ಮಾಡಿರುವನೋ?”  ಎಂದು ಕೇಳಿದಳು.
ಶರ್ಲಾಕನು ಡಿಯಾನೆಯ ಧೂರ್ತತನಕ್ಕೆ ಬೆರಗಾಗಿ ನಕ್ಕು “ಆವನ ಅಪರಾಧಗಳೇನೂ ಇಲ್ಲ. ಆದರೂ ಅವನಿಲ್ಲಿಗೆ ಬಂದನೆಂಬದನ್ನು ಅನೇಕ ಜನರು ಕಂಡಿರುವದಾಗಿ ಹೇಳುತ್ತಾರಾದ್ದರಿಂದ ನಾನು ಈ ಮನೆಯಲ್ಲೆಲ್ಲ ಶೋಧ ಮಾಡುವೆನು. ನೀವು ಪ್ರತಿಬಂಧ ಮಾಡಲಿಕ್ಕಿಲ್ಲ ಎಂದು ಆಶಿಸುತ್ತೇನೆ” ಎಂದು ಸೂಚಿಸಿದನು.
“ಅವಶ್ಯ, ಅವಶ್ಯ! ತಾಸೆರಡು ತಾಸು ನಿದ್ದೆಗೇಡಾಗುವೆನಲ್ಲದೆ ಮತ್ತೇನಿದೆ?”
ಸಂಗಡಲೆ ನಾಲ್ಕಾರು ಪೋಲೀಸ ಜನ ಶರ್ಲಾಕನೂ ಡಾಕ್ಟರ ವ್ಯಾಟ್‍ಸನ್ನನೂ ಮನೆಯಲ್ಲಿ ಹೊಕ್ಕು ಎಲ್ಲ ಕಡೆಯಲ್ಲಿಯೂ ಡಿಗ್ಬಿಯ ಶೋಧ ಮಾಡಿದರು, ಕೋಠಿ, ಅಡಿಗೆಮನೆ, ಬಚ್ಚಲ, ಹಿತ್ತಲಮನೆಗಳಲ್ಲಿ ಅಡ್ಡಾಡಿ ನೋಡಿದರು. ಪೆಟ್ಟಿಗೆ ಕಪಾಟಗಳನ್ನು ತೆರೆದಿಟ್ಟರು. ಹಾಸಿಗೆಯ ಸುರುಳಿಗಳನ್ನು ಉರುಳಿಸಿದರು. ಎಲ್ಲಿಯೂ ಡಿಗ್ಬಿಯ ತುಬ್ಬು ಇಲ್ಲ. ನೆಲದಲ್ಲಿ ಪೊಳ್ಳಿರುವದೋ ಎಂದು ಶಂಕಿಸಿ ಅಲ್ಲಲ್ಲಿ ಕುಣಿದಾಡಿ ನೋಡಿದರು. ಬೇಸತ್ತು ಅವರು ನೆಲಮನೆಗೆ ಬಂದರು. ಅಲ್ಲಿಯಾದರೂ ಏನಿದೆ? ಶರ್ಲಾಕನು ಬೆರಗಾಗಿ ನಿಂತನು. ದೊಡ್ಡದೊಂದು ಹಾವಾನಾ ಸಿಗರು ತೆಗೆದು ಅವನು ಅದನ್ನು ಹೊತ್ತಿಸಿ ಸೇದುತ್ತೆ ಮೂಢನಂತೆ ನೋಡುತ್ತ ನಿಂತನು. ಎಲ್ಲರ ಯತ್ನಗಳೆಲ್ಲ ನಿಂತವು. ಶರ್ಲಾಕನು ಹತ್ತೆಂಟು ಜುರಿಕೆ ಬತ್ತಿಯನ್ನು ಅವಸರವಸರದಿಂದ ಸೇದಿ ಸಾವಕಾಶವಾಗಿ ಹೆಜ್ಜೆಗಳನ್ನಿಕ್ಕುತ್ತೆ ಅಲ್ಲಿಟ್ಟಿರುವದೊಂದು ದೊಡ್ಡದಾದ ಹಿತ್ತಾಳೆಯ ಕಲಬತ್ತಿನ ಬಳಿಗೆ ಬಂದು ಅದರಲ್ಲಿ ಕೈ ಹಾಕಿ ನೋಡಲಾಗಿ ಪೈ ತೂಕದಷ್ಟು ಹಿಟ್ಟಿನಂಥ ಪದಾರ್ಥವು ಇದ್ದಿತು. ಒಂದು ಚಿಮಟಿಗೆಯನ್ನು ತೆಗೆದುಕೊಂಡು ಅವನು ಮೂಸಿನೋಡಿದನು.  ಮತ್ತೊಮ್ಮೆ ಮೂಸಿನೋಡಿ ಅದನ್ನು ಅವನು ಡಾಕ್ಟರ ವ್ಯಾಟ್ ಸನ್ನನಿಗೆ ತೋರಿಸಿದನು. “ಪ್ರಾಣಿಜ ಪದಾರ್ಥದಂತೆ ಕಾಣಿಸುತ್ತದೆ” ಎಂದು ವ್ಯಾಟ್ಸನ್ನನು ಅಭಿಪ್ರಾಯಪಟ್ಟ ಕೂಡಲೆ ಶರ್ಲಾಕನಿಗೆ ಹುಚ್ಚು ನಗೆ ತುಂಬಿತು. ಏನು ಮಾಡಿದರೂ ಅವನ ನಗೆ ನಿಂದಿರಲೊಲ್ಲದು. “ಹೀಗೇಕೆ ಮಾಡುವಿರಿ ಹೋಲ್ಮ್ಸ?” ಎಂದು ಡಾಕ್ಟರನು ಕೇಳಿದರೂ ಅವನ ನಗೆ ನಿಂದಿರಲಿಲ್ಲ. “ಮನುಷ್ಯನಿಗೆ ಹುಚ್ಚು ಹಿಡಿಸುವ ಪುಡಿಯು ಇದು ಬೇರೆ  ಅಲ್ಲವಷ್ಟೆ?” ಎಂದು ನುಡಿದು ವ್ಯಾಟ್ಸನ್ನನು ಅದನ್ನು ತಾನು ಮತ್ತೆ ಮೂಸಿನೋಡಿದನು, ಆಗ ಶರ್ಲಾಕನು “ಡಾಕ್ಟರ, ಇದು ಮನುಷ್ಯನಿಗೆ ಹುಚ್ಚು ಹಿಡಿಸುವ ಪುಡಿಯಲ್ಲ. ಇದು ಯಾತರ ಪುಡಿ ಎಂಬದು ತಿಳಿದರೆ ನಿಮಗಾದರೂ ಹುಚ್ಚು ಹಿಡಿಯಬಹುದು,” ಎಂದು ಹೇಳಿದನು.
ಬಳಿಕ ಶರ್ಲಾಕನು ಮತ್ತೊಂದು ಸಿಗರವನ್ನು ಹೊತ್ತಿಸಿ ಒಂದು ಕುರ್ಚಿಯನ್ನು ತೆಗೆದುಕೊಂಡು ಆರಾಮವಾಗಿ ಕುಳಿತುಕೊಂಡು ಹೇಳಲಾರಂಭಿಸಿದ್ದೇನೆಂದರೆ :
“ಡಾಕ್ಟರ, ಇಲ್ಲಿ ನೋಡಿರಿ, ನೀರಾಗಿ ಮಾಡಿದ ಹವೆಯ ರಸದಿಂದ ತುಂಬಿದ ಬುದ್ದಲಿಕೆಯಿಲ್ಲಿದೆ. ಇದರಲ್ಲಿ ಮೊಲ ಮುಂತಾದ ಪ್ರಾಣಿಗಳನ್ನು ಕೊಂದು ಚಲ್ಲಿ ಕೊಟ್ಟರೆ ಅವುಗಳ ಶರೀರಗಳು ರಾಳ ಕಲ್ಲು ಸಕ್ಕರೆ ಮುಂತಾದ ಪದಾರ್ಥಗಳಂತೆ ಹೊಡೆದರೆ ಪಳ ಪಳ ಪುಡಿಯಾಗುತ್ತವೆಂಬದನ್ನು ನೀವು ಬಲ್ಲಿರಷ್ಟೆ? ಹಾಗೆಯೇ ಈ ರಸದಲ್ಲಿ ಮನುಷ್ಯನ ದೇಹವನ್ನು ಚೆಲ್ಲಿ ಕೊಟ್ಟರೆ ಅದಾದರೂ ಕುಟ್ಟಿದ ಕೂಡಲೆ ಪುಡಿಪುಡಿಯಾಗಬಹುದಲ್ಲವೆ?”
ಈ ಮಾತು ಕೇಳಿದ ಕೂಡಲೆ ವ್ಯಾಟಸನ್ನನು ಹುಯ್ಯೆಂದು ಹುಚ್ಚನಂತೆ ಕುಣಿದನು. “ತಿಳಿಯಿತು ಶರ್ಲಾಕ್, ಈ ಕಲಬತ್ತಿನಲ್ಲಿಯ ಪುಡಿಯು ಮನುಷ್ಯನ ದೇಹವನ್ನು ಕುಟ್ಟಿ ಮಾಡಿದ ಪುಡಿಯ ಅವಶೇಷವೇ, ಸಂದೇಹವಿಲ್ಲ. ವ್ಹಾಲೆಂಟಾಯಿನ ಡಿಬ್ಗಿಯನ್ನು ಕೊಂದು ಅವನ ದೇಹವನ್ನು ಹೀಗೆ ಕುಟ್ಟಿ ಪುಡಿಪುಡಿಯಾಗಿ ಮಾಡಿರುವರಾದೀತೇನು?”
“ಸಂದೇಹವೇಕೆ? ಆದರೆ ಇಲ್ಲಿಯ ಜನರು ಡಿಗ್ಬಿಯನ್ನು ಕೊಂದು ಅವನ ದೇಹವನ್ನು ಕುಟ್ಟಿ ಹೀಗೆ ಪುಡಿ ಮಾಡಿರುವರೆಂದು ಸಿದ್ಧಮಾಡಿ ಕೊಡಲು ನಮ್ಮಲ್ಲಿ ಸಾಕಷ್ಟು ಪ್ರಮಾಣಗಳಿಲ್ಲ. ಈ ಗಾಳಿಯ ರಸದ ಬುದ್ದಲಿಕೆಯಲ್ಲಿ ಡಿಗ್ಬಿಯನ್ನು ಕೊಂದು ಹಾಕಿ ಆ ಹೆಣವನ್ನು ಡೋಣಿಯಂತಿರುವ ಕಲಬತ್ತಿನಲ್ಲಿ ಹಾಕಿ ಕುಟ್ಟಿ ಪುಡಿ ಮಾಡಿ ಅಕೋ ಅಲ್ಲಿ ಬಿದ್ದಿರುವ ತೊಗಲ ಕೊಳಿವೆಯಲ್ಲಿ ಹಾಕಿ ಯಂತ್ರ ಸಹಾಯದಿಂದ ಆ ಪುಡಿಯನ್ನೆಲ್ಲ ಗಾಳಿಗೆ ತೂರಿಬಿಟ್ಟಿರುವರು. ಇನ್ನು ನಾವು ಈ ಶೋಧದ ಕೆಲಸವನ್ನು ಹೆಚ್ಚಾಗಿ ಈ ಮನೆಯಲ್ಲಿ ನಡಿಸಿದರೆ ಮರವು ನಮ್ಮ ಮೈ ಮೇಲೆಯೇ ಕಡುಕೊಂಡು ಬೀಳುವದು. ಡಿಯಾನೆಯು ಕಣ್ಣಿಗೆ ಚಲುವೆಯಾಗಿ ಕಂಡಷ್ಟೆಯೇ ಅವಳು ದುಷ್ಟೆಯೂ ನಿರ್‍ದಯಳೂ ಆಗಿರುವಳು. ವ್ಹಾಲೆಂಟಾಯಿನ ಡಿಗ್ಬಿಯು ಅವಳ ಮೋಸಕ್ಕೊಳಗಾಗಿ ವ್ಯರ್‍ಥವಾಗಿ ಸತ್ತು ಹೋದನು. ನನ್ನಂಥವನನ್ನು ಕೂಡ ಸೋಲಿಸುವ ಹೆಂಗಸು ಹುಟ್ಟಿದಳು!
*****
Tagged:

Leave a Reply

Your email address will not be published. Required fields are marked *

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...