ಕನ್ನಡರ ಮನೆಮನೆಗೆ ಭಾರತದ ಸಂದೇಶ
ಗುಡುಗಾಡುವಂತೆಸಗಿ, ಚಪಲ ಕೃಷ್ಣನ ಮಾಟ,
ಗಂಡುಗಲಿ ಕಟ್ಟಾಳು ಭೀಮನುರು ಗದೆಯಾಟ,
ಕಲಿ ಸುಯೋಧನನ ಚಲ, ನರನ ವೀರಾವೇಶ
ಮೊದಲಾದವನು ತನ್ನ ‘ಭಾಮಿನಿ’ಯ ಮೋಡಿಯಲಿ,
ಹಲಗೆ-ಬಳಪವ ಬಳಸದಗ್ಗಳಿಕೆಯಲಿ ತೋರಿ,
ಅನ್ಯರೊಡ್ಡವ ಕೊಳ್ಳದಗ್ಗಳಿಕೆಯನು ಬೀರಿ,
ಮೆರೆದೆಯಲ ಕವಿ ಕುಮಾರವ್ಯಾಸ! ಲೀಲೆಯಲಿ
ಗದುಗಿನಲಿ ವೀರ ನಾರಾಯಣನ ಕಿ೦ಕರನು
ತಾನಾಗಿ, ದೇವನಡಿದಾವರೆಯ ಬಳಿ ಕುಳಿತು,
ಬರೆದೆಯೈ ಕನ್ನಡದ ತನ್ನ ತನವನ್ನೋತು!
ಭಾರತದಿ ರಸವಿರುವ ಮೊದಲ ದಶಪರ್ವವನು
ಕನ್ನಡಿಸಿ, ಪಾತ್ರಗಳು ಜೀವ ಕಳೆವೆತ್ತಂತೆ
ಎಸಗಿದೆ- ಕುರುಕ್ಷೇತ್ರ ಕಣ್ಮು೦ತೆ ಕುಣಿವಂತೆ!
*****
೧೯೪೧








