Home / ಕಥೆ / ಸಣ್ಣ ಕಥೆ / ಕತೆ ಬೇಕೆ ಕಥೆ

ಕತೆ ಬೇಕೆ ಕಥೆ

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್ತಿತ್ತು. ರಾಗೀ ಕಾಳು, ಅದರ ಉಪಯೋಗ, ಇವುಗಳನ್ನು ಕುರಿತು ಅವನು ನನಗೆ ಬಹು ಸ್ವಾರಸ್ಯವಾಗಿ ಬೋಧೆ ಮಾಡುತ್ತಿದನು. ನಾನೂ ನನ್ನ ಜತೆಯಲ್ಲಿದ್ದ ಇನ್ನು ಕೆಲವರು (ಚಿಕ್ಕ ಹುಡುಗಿ ಯಾಗಿದ್ದಾಗ) ರಾಗಿ ಹೇಗೆ ಬೆಳೆಯುತ್ತೆ? ಭತ್ತ, ರಾಗಿ ಇದ್ದ ಹಾಗೆ ಏಕಿಲ್ಲ? ಗೊಬ್ಬರ ಹಾಕದೆ ಇದ್ದರೆ ಏನಾಗುತ್ತದೆ ? ರಾಗಿಯನ್ನು ಅನ್ನ ಮಾಡಿದಂತೆ ಮಾಡಲು ಸಾಧ್ಯವೇ ?” ಇವೇ ಮೊದಲಾದ ವಿಚಿತ್ರ ಪ್ರಶ್ನೆಗಳನ್ನು ಹಾಕುತ್ತಿದ್ದೆವು. ನಮ್ಮ ತಾತನಂತೂ ಸ್ವಲ್ಪವೂ ಬೇಸರಪಡದೆ ಉತ್ತರ ಕೊಡುತ್ತಿದ್ದನು.

ಇಷ್ಟು ಹೊತ್ತಿಗೆ ಸರಿಯಾಗಿ ಶ್ಯಾನುಭೋಗ ಸುಬ್ಬಣ್ಣ ಅಲ್ಲಿಗೆ ಬಂದ. ಅಯ್ಯಾ ರಾಮಣ್ಣ ಏನು ಮಾಡುತ್ತಾ ಇದ್ದಿ? ಎಷ್ಟು ಖಂಡುಗ ಆಯಿತಪ್ಪಾ ರಾಗಿ ?” ಎನ್ನುತ್ತಾ ನಮ್ಮೊಡನೆ ಕುಳಿತುಕೊಂಡು, ನಮ್ಮ ತಾತನಿಂದ ಒಂದು ಚಿಟಿಕೆ ನಶ್ಯವನ್ನು ತೆಗೆದುಕೊಂಡು ಮೂಗಿಗೇರಿಸಿ, ಕಂದಾಯ ಬಾಕಿ -ಖಜಾನೆ-ಫಜೀತಿ-ಎಂಬುದಾಗಿ ಏನೇನೋ ಗೊಣಗುಟ್ಟಿದ. ನಮಗಂತೂ ಏನೂ ಅರ್ಥವಾಗಲಿಲ್ಲ. ನಮ್ಮ ತಾತ “ಕಂದಾಯ ವಸೂಲಿ ಮೊದಲು ಮಾಡಪ್ಪಾ ಆಮೇಲೆ ಎಲ್ಲಾ ಕೆಲಸ. ಈ ಊರಿನ ಕುಳವೆಲ್ಲಾ ಕೊಟ್ಟುಬಿಟ್ಟರು ತಾನೆ? ಯಾವುದಾದರೂ ಕುಳ ಬಾಕಿ ಇದ್ದರೆ ಕರೆಸು. ನಾನೂ ಹೇಳ್ತೇನೆ” ಎಂದ. ಸುಬ್ಬಣ್ಣ ಒಂದು ಕೂಗು ಹಾಕುವ ಹೊತ್ತಿಗೆ ಇಬ್ಬರು ತೋಟಿಗಳು ದೊಣ್ಣೆ ಹಿಡಿದುಕೊಂಡು ಹಾಜರಾದರು. ನನಗಂತೂ ನಾನು ಸ್ಕೂಲಿನಲ್ಲಿ ಓದುತ್ತಿದ್ದ ಕತೆಯೊಂದು ನೆನಪಿಗೆ ಬಂತು. “ಒಂದು ಯಕ್ಷಣಿ ಪಟ್ಟಗೆ, ಅದನ್ನು ಒತ್ತಿದರೆ ಇಬ್ಬರು ದೂತರು ಸಿದ್ದರಾಗಿ ‘ಏನಪ್ಪಣೆ’ ಎನ್ನುತ್ತಿದ್ದರು. ಇಲ್ಲಿಯೂ ಹಾಗೆಯೇ ಆಯಿತು. ಸುಬ್ಬಣ್ಣ ಸುಗ್ರೀವಾಜ್ಞೆ ಕೊಟ್ಟ. “ಲೋ ಕಾಳ, ಹೋಗಿ ಕೆಳಗಿನ ಬೀದಿ ರಂಗಪ್ಪ, ತಲೆಹರಟೆ ತಿಮ್ಮ, ಮೇಸ್ತ್ರಿ ಮುನಿಯಪ್ಪ ಇವರನ್ನು ಕರೆದುಕೊಂಡು ಬಾ. ಗೊತ್ತಾಯಿತೇನೋ, ಕೈಗೆ ಸಿಕ್ಕಿದ ಕುಳ ಹಿಡಿದುಕೊಂಡು ಬಾ, ಬಿಡಬೇಡ ” ಎಂದ. ನಮಗೆಲ್ಲಾ ನಗು ಬಂತು. ಸುಬ್ಬಣ್ಣ ಸುಮ್ಮನಿರದೆ “ಏಕಮ್ಮಾ ನನ್ನ ಮಾತು ಕೇಳಿ ನಗ್ತಿಯಾ ? ನಾಳೆ ನಿನ್ನ ಗಂಡ ಬಂದು ಅದು ಮಾಡು ಇದು ಮಾಡು ಅಂದರೆ ಆಗೇನು ಮಾಡ್ತೀ? ನಿಮ್ಮ ತಾತ ನಾನು ಇಬ್ಬರೂ ಸ್ನೇಹಿತರು. ನಾವೂ ಕೂಡ ಚಿಕ್ಕಂದಿನಲ್ಲಿ ನಿಮ್ಮ ಹಾಗೆಯೇ ಇದ್ದೆವು. ಆದರೆ ಈಗ ನಗುವೇ ಬಾರದು” ಎಂದ. ನನಗೆ ಏಕೋ ಸ್ವಲ್ಪ ಅವಮಾನವಾದಂತಾಯಿತು. ನನ್ನ ತಂಗಿ ಜಾನಕಿ “ಅಕ್ಕಾ ಅದೇನೇ ಸುಬ್ಬಣ್ಣ ಕುಳಾ ಕುಳಾ ಅಂತಾನೆ. ಮಾತು ಮಾತಿಗೂ ಕುಳಾ ಅನ್ನುತ್ತಾನಲ್ಲಾ? ಹಾಗಂದರೇನೇ ?” ಎಂದು ಮೆಲ್ಲನೆ ಕಿವಿಯಲ್ಲಿ ಪಿಸುಗುಟ್ಟಿದಳು. “ನಂಗೆ ಗೊತ್ತಿದ್ದರಲ್ವೆ ನಿಂಗೆ ಹೇಳೋದು” ಎಂದೆ.

ಈ ಮಾತು ಕೇಳಿ ನನ್ನ ತಾತನು “ಅದೇನು ?” ಅಂದ. ನಾನು- “ತಾತ, ಕುಳ ಅಂದರೇನು ಅನ್ನುತ್ತಾಳೆ ಜಾನಕಿ. ಅರ್ಥ ಹೇಳು. ಅವಳಿಗೆ ಬಹಳ ಆಶೆಯಂತೆ. ನನಗೂ ಗೊತ್ತಿಲ್ಲ….” ಎಂದೆ. ತಾತನು ನಕ್ಕು “ಆಗಲೇ ಯಾರೋ ಕತೆ ಹೇಳು ಅಂದರಲ್ಲಾ ಯಾರು? ಎಂದ. ಜಾನಕಿಯು “ನಾನು” ಎಂದು ಬೇಗನೆ ಉತ್ತರ ಕೊಟ್ಟಳು. ತಾತನು “ಕತೆ ಬೇಕೋ, ಕುಳದ ಅರ್ಥ ಬೇಕೋ ?” ಎಂದು ಕೇಳಿದ. ಜಾನಕಿ “ಕತೆ ಬೇಕು” ಎಂದಳು. ನಾನು ಕುಳದ ಅರ್ಥ ಬೇಕು” ಎಂದೆ. ನನಗೂ ಜಾನಕಿಗೂ ಕಣ್ಣಿನಲ್ಲಿಯೇ ಜಗಳವಾಯಿತು. ಈ ಸೂಕ್ಷ್ಮ ನಮ್ಮ ತಾತ ತಿಳಿದುಕೊಂಡು “ಕತೆ ಬೇಕೆ ಕತೆ, ಆಗಲಿ, ಕುಳದ ಅರ್ಥವನ್ನೂ ಹೇಳ್ತೇನೆ; ಕತೆಯನ್ನೂ ಹೇಳುತ್ತೇನೆ” ಎಂದು ಹೇಳುತ್ತಿರುವಾಗ್ಗೆ ಜಾನಕಿ ಬಾಯಿ ಹಾಕಿ, ಮೊದಲು ಕತೆ ಹೇಳಬೇಕು” ಎಂದಳು. ಅದಕ್ಕವನು “ಕತೆ ಕುಳದ ಅರ್ಥ, ಎರಡನ್ನೂ ಒಂದೇ ಸಲ ಹೇಳ್ತೇನೆ” ಎಂದನು. ನಾವಿಬ್ಬರೂ ‘ಹೂ’ ಎಂದೆವು. ಕತೆಯು ಆರಂಭವಾಯಿತು:-

“ಕೇಳಿ ಮಕ್ಕಳಿರಾ! ಕುಳದ ಕತೆ ಬಹಳ ಚೆನ್ನಾಗಿದೆ. ಹಳೇಬೀಡು ಅಥವಾ ದ್ವಾರಸಮುದ್ರದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ವಿಷ್ಣುವರ್ಧನ ಎಂದು. ಅವನು ಬಹಳ ಒಳ್ಳೆಯ ದೊರೆ, ಅವನ ಕಾಲದಲ್ಲಿ ಜನರೆಲ್ಲರೂ ಸುಖವಾಗಿದ್ದರು. ಎಲ್ಲಿ ನೋಡಿದರೂ ಹಸುರಾದ ಹೊಲ, ತುಂಬಿದ ಕೆರೆ, ಹಣ್ಣಿನ ಗಿಡಗಳು, ನೆಮ್ಮದಿಯ ಜನ. ಹೀಗಿರುವಾಗ ಒಬ್ಬ ಬ್ರಾಹ್ಮಣ ಈಶ್ವರನನ್ನು ನೋಡಬೇಕೆಂದು ಹೊರಟ. ಈಶ್ವರ ಸಿಗಲಿಲ್ಲ. ಇನ್ನೂ ಮುಂದೆ ಹೋದ. ಅಲ್ಲಿಯೂ ಕಾಣಲಿಲ್ಲ. ಕಡೆಗೆ ಚಂದ್ರದ್ರೋಣ ಪರ್ವತಕ್ಕೆ ಹೋದ. ಅಲ್ಲಿ ಕುಳಿತು ತಪಸ್ಸು ಮಾಡಿದ. ಈಶ್ವರನಿಗೆ ಬಹು ಸಂತೋಷವಾಯಿತು. ಬ್ರಾಹ್ಮಣನ ಹತ್ತಿರ ಬಂದ. ಏನು ಬೇಕಪ್ಪಾ ನಿನಗೆ ಎಂದ. ಬ್ರಾಹ್ಮಣನಿಗೆ ದಿಕ್ಕು ತೋಚಲಿಲ್ಲ. ಬೆಪ್ಪಾಗಿ ಮಂಕನಂತೆ ಕುಳಿತುಬಿಟ್ಟ. ಒಂದೆರಡು ಕ್ಷಣದಲ್ಲಿ ಜ್ಞಾನ ಬಂತು. ಸ್ವಾಮಿ ಎಂದು ಅಡ್ಡ ಬಿದ್ದ. “ಜಗದೀಶ್ವರ ! ನಾನು ಬಡವ, ನಿಮ್ಮ ಗುರುತಿಗಾಗಿ ಏನಾದರೂ ಒಂದು ಪದಾರ್ಥ ಕೊಟ್ಟರೆ ಸಾಕು ಅಷ್ಟೆ. ತಮ್ಮ ದರುಶನವೇ ನನಗೆ ಭಾಗ್ಯ. ಇಂದು ನಾನು ಧನ್ಯ” ಎಂದ. ಅಷ್ಟರಲ್ಲಿ ಈಶ್ವರನು “ಹಾಗೆಯೇ ಆಗಲಿ, ನಾನೊಂದು ವಿಧವಾದ ರಸವನ್ನು ಕೊಡುತ್ತೇನೆ. ಅದನ್ನು ಕಬ್ಬಿಣದ ಮೇಲೆ ಹಾಕಿದರೆ ಚಿನ್ನವಾಗುತ್ತದೆ” ಎನ್ನುತ್ತಾ ಮಾಯವಾದ. ಬ್ರಾಹ್ಮಣನು ಕಣ್ಣು ಮುಚ್ಚಿ ತೆಗೆಯುವುದರೊಳಗಾಗಿ ಒಂದು ಚಿನ್ನದ ಬಟ್ಟಲು ಕಣ್ಣಿಗೆ ಬಿತ್ತು. ಅದರ ತುಂಬಾ ಒಂದು ಬಗೆಯ ರಸ, ಅದನ್ನು ನೋಡಿ ಬ್ರಾಹ್ಮಣನಿಗೆ ಆಶ್ಚರ್ಯವಾಯಿತು. ಅದನ್ನು ತೆಗೆದುಕೊಂಡು ಹಳೇಬೀಡಿಗೆ ಬಂದ. ಸಮೀಪದಲ್ಲಿದ್ದ ಒಬ್ಬ ಕಮ್ಮಾರನ ಅಂಗಡಿಗೆ ಹೋದ. ಚಳಿಗಾಲವಾದ್ದರಿಂದ ಬೆಂಕಿಯ ಮುಂದೆ ಸ್ವಲ್ಪ ಹೊತ್ತು ಕುಳಿತ. ಅಷ್ಟು ಹೊತ್ತಿಗೆ ಸಂಜೆಯಾಗಲು ಸಂಧ್ಯಾವಂದನೆ ಮಾಡುವುದಕ್ಕೆ ನದಿಗೆ ಹೊರಡಬೇಕಾಯಿತು. ಆಗ ಅವನು ತನ್ನಲ್ಲಿದ್ದ ಗಂಟು ಮೂಟೆ, ಆ ಚಿನ್ನದ ಬಟ್ಟಲು ಇವುಗಳನ್ನು ಕಮ್ಮಾರನ ವಶಕ್ಕೆ ಕೊಟ್ಟು ಹೊರಟ. ಆದರೆ ಆ ಚಿನ್ನದ ಬಟ್ಟಲನ್ನು ಬಟ್ಟೆಯಲ್ಲಿಟ್ಟು ಗಂಟು ಹಾಕಿದ್ದನು. ಬ್ರಾಹ್ಮಣನ ಗಂಟಿನ ವೈಖರಿಯನ್ನು ತಿಳಿಯದ ಕಮಾರ ಗಂಟನ್ನು ಎತ್ತಿ ಪಕ್ಕದ ಕಬ್ಬಿಣದ ತುಂಡುಗಳ ಮೇಲೆ ಕುಕ್ಕಿದನು. ಆಗ ಚಿನ್ನದ ಬಟ್ಟಲಿನಿಂದ ಒಂದು ತೊಟ್ಟು ರಸ ಕಬ್ಬಿಣದ ತುಂಡುಗಳ ಮೇಲೆ ಬಿತ್ತು. ಆದರೆ ಅದನ್ನು ಯಾರೂ ಗಮನಿಸಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಕಮ್ಮಾರನ ಹೆಂಡತಿಯು ಊಟಕ್ಕೆಂದು ಕರೆಯಲು ಅಲ್ಲಿಗೆ ಬಂದಳು. ಅವಳ ಕಣ್ಣಿಗೆ ಬಂಗಾರ ಕಾಣಿಸಿತು. “ಕನಸೋ ಏನಿದು” ಎಂದುಕೊಂಡಳು. “ನಿಮ್ಮ ಅಂಗಡಿಯಲ್ಲಿ ಚಿನ್ನದ ತುಂಡುಗಳೂ ಇವೆಯಲ್ಲಾ” ಎಂದು ಹಿಗ್ಗಿ ಹೋದಳು. ಕಮ್ಮಾರನಿಗೆ ಈ ಮಾತು ಕೇಳಿ ಕಿವಿ ನೆಟ್ಟಗಾಯಿತು. ಅಲ್ಲಿದ್ದವರೆಲ್ಲಾ ಬೆರಗಾದರು. ಇವಳು ಮಾತ್ರ ಆ ಚಿನ್ನದ ತುಂಡುಗಳನ್ನೆಲ್ಲಾ ಆರಿಸಿಕೊಂಡು ಸೀರೆಯ ಮಡಲಲ್ಲಿ ಮುಚ್ಚಿಟ್ಟುಕೊಂಡಳು. ಕಮ್ಮಾರ ಅಚ್ಚರಿಯಿಂದ ಹುಡುಕತೊಡಗಿದ. ಇದಕ್ಕೆ ಕಾರಣವೇನು? ಕಬ್ಬಿಣ ಚಿನ್ನವಾಗಿದೆಯಲ್ಲಾ ಎಂದು ತನ್ನನ್ನು ತಾನೇ ಕೇಳಿಕೊಂಡ. ಎಷ್ಟು ಹುಡುಕಿದರೂ ಯಾವ ಪದಾರ್ಥದಿಂದ ಹೀಗಾಯಿತೆಂಬುದು ತಿಳಿಯಲಿಲ್ಲ. ಕಡೆಗೆ ಕಮ್ಮಾರನ ಹೆಂಡತಿಯೇ ಗೆದ್ದಳು. “ಇದೇನು ಗಂಟು ಮೂಟೆ ? ಇಗೋ ಇಲ್ಲಿದೆ ಚಿನ್ನದ ಕಳಶ ” ಎನ್ನುತ್ತಾ ಅದನ್ನು ತೆಗೆದುಕೊಂಡು ಕುಣಿದಳು. ಮತ್ತೊಂದು ತೊಟ್ಟು ಚೆಲ್ಲಿತು. ಬಿದ್ದ ಜಾಗದಲ್ಲಿದ್ದ ಕಬ್ಬಿಣ ಬಂಗಾರವಾಯಿತು. ಇದನ್ನು ನೋಡಿ ಕಮ್ಮಾರನಿಗೂ ಕಮ್ಮಾರನ ಹೆಂಡತಿಗೂ ಅತಿಶಯವಾದ ಆನಂದವಾಯಿತು” ಅಷ್ಟರಲ್ಲಿ ಜಾನಕಿ ಬಾಯಿಹಾಕಿ, “ಬ್ರಾಹ್ಮಣ ಬರಲೇ ಇಲ್ಲವೇ ? ಅವನೆಂತಹ ದಡ್ಡ? ಅಯ್ಯೋ ಹುಚ್ಚು ಬ್ರಾಹ್ಮಣ” ಎಂದಳು. “ ಕಮ್ಮಾರ, ಅವನ ಹೆಂಡತಿ ಇಬ್ಬರೂ ಮಾತನಾಡಿಕೊಂಡು ಗುಡಿಸಲಿಗೆ ಬೆಂಕಿ ಇಟ್ಟು ಬಿಟ್ಟರು. ಹೀಗೆ ಕಮ್ಮಾರನ ಗುಡಿಸಲು ಸುಡು ತ್ತಿರುವಾಗ್ಗೆ ಆ ಬ್ರಾಹ್ಮಣ ಬಂದ, ನೋಡಿದ; ಬೆಪ್ಪಾಗಿ ನಿಂತ. ಕಮ್ಮಾರನನ್ನು ಕೂಗಿದ. ಉತ್ತರ ಬರಲಿಲ್ಲ. “ಅಯ್ಯೋ ದೇವರೇ” ಎಂದು ಕೊರಗಿದ. ಇವನ ಪಾಡನ್ನು ನೋಡಿ, ದಾರಿಯ ಜನರು “ಏಕಪ್ಪಾ ಅಳುತ್ತೀಯೇ?” ಎಂದರು. ಇವನು ಕಮ್ಮಾರನನ್ನು ನೋಡಬೇಕು? ಎಂದ. ಕಮಾರನನ್ನು ಕರೆದರು. ಊರಿನ ಮುಖ್ಯಸ್ಥರೊಬ್ಬರು ನ್ಯಾಯ ಮಾಡಿದರು. ಅವನು “ಅಯ್ಯಾ ಬ್ರಾಹ್ಮಣ ನಾನೇನು ಮಾಡಲಿ ? ನಿನ್ನ ಸಾಮಾನುಗಳನ್ನು ನಾನು ಬಹು ಜೋಪಾನವಾಗಿಯೇ ಇಟ್ಟಿದ್ದೆ. ಆದರೆ ಬೆಂಕಿ ತಗುಲಿ ಎಲ್ಲವೂ ಸುಟ್ಟು ಹೋದವು. ನನ್ನ ಗುಡಿಸಲೂ ಸುಟ್ಟು ಹೋಯಿತು. ದಯವಿಟ್ಟು ಈ ಸಲ ನನ್ನನ್ನು ಕ್ಷಮಿಸಬೇಕು” ಎಂದು ಅಂಗಲಾಚಿ ಬೇಡಿಕೊಂಡ. ಎಷ್ಟು ಒಳ್ಳೆಯ ಮಾತುಗಳನ್ನು ಆಡಿದರೂ ಸತ್ಯವನ್ನು ಮಾತ್ರ ಹೇಳಲೇ ಇಲ್ಲ. “ಬ್ರಾಹ್ಮಣನಿಗೆ ಬುದ್ದಿ ಕೆಟ್ಟಿತು. ದೊರೆಯ ಬಳಿಗೆ ಹೋದ. “ದೊರೆಯ ತನಕ ದೂರು” ಎಂಬಂತೆ ಆಯಿತು. ಆ ದೊರೆ ಬಹಳ ಬುದ್ದಿವಂತ. ಹೊಯ್ಸಳ ರಾಜರಲ್ಲಿ ಇವನೇ ಅಗ್ರಗಣ್ಯ. ಮಹಾ ಪರಾಕ್ರಮಿ. ಅಲ್ಲದೆ ಧರ್ಮಿಷ್ಟ, ಬ್ರಾಹ್ಮಣನ ಮಾತನ್ನು ನಿದಾನವಾಗಿ ಕೇಳಿದ. ಅವನ ಕಷ್ಟವನ್ನು ತಿಳಿದ. ಆಮೇಲೆ ಸೇನಾಪತಿಯನ್ನು ಕರಿಸಿ, ಮಾತನಾಡಿ, ಒಂದು ಆಜ್ಞೆ ಹೊರಡಿಸಿದ “ಯಾರ ಮನೆಯಲ್ಲಿ ಚಿನ್ನದ ಪಾತ್ರೆ ಇದ್ದರೂ, ಅವರು ಕೂಡಲೇ ರಾಜನಿಗೆ ಒಪ್ಪಿಸಬೇಕು. ಇಲ್ಲವಾದರೆ ಅತಿ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಊರಿನಲ್ಲಿದ್ದ ಎಲ್ಲ ಬಂಗಾರದ ಪಾತ್ರೆಗಳೂ ಹೊರಕ್ಕೆ ಬಂದುವು. ಆದರೆ ಸಿದ್ಧರಸ (ಆ ರಸದ ಹೆಸರು) ಇದ್ದ ಪಾತ್ರೆ ಮಾತ್ರ ಬರಲಿಲ್ಲ. ದೊರೆಗೆ ಸಿಟ್ಟು ಬಂದಿತು. ಅಷ್ಟರಲ್ಲಿ ಒಬ್ಬ ರೈತ ಓಡಿಬಂದ. ಬಂದವನೇ ಅಡ್ಡ ಬಿದ್ದು ಹೀಗೆಂದ: “ಮಹಾ ಪ್ರಭೂ! ನನ್ನ ಮನೆಯಲ್ಲಿ ಯಾರೋ ನನಗೆ ತಿಳಿಯದೆ ಈ ಚಿನ್ನದ ಪಾತ್ರೆ ಇಟ್ಟಿದ್ದರು. ನನ್ನ ಹೆಂಡತಿಯನ್ನು ಕೇಳಿದೆ. ಅವಳು ಪಕ್ಕದ ಮನೆಯವರಿರಬಹುದು ಎಂದಳು. ಇದೋ ಇಲ್ಲಿದೆ ” – ಎಂದು ಹೇಳುತ್ತಾ ಆ ಚಿನ್ನದ ಪಾತ್ರೆಯನ್ನು ರಾಜನ ಮುಂದೆ ಇಟ್ಟನು. ಆಗ ರಾಜನಿಗೆ ಸಂತೋಷವಾಗಿ “ನೀನಾಗಿಯೇ ತಂದಿಯಾ ಅಥವಾ ಬಲವಂತಕ್ಕಾಗಿ ತಂದಿಯಾ?” ಎಂದು ಕೇಳಿದನು. ಅವನು ಭಯದಿಂದ ನಡುಗುತ್ತಾ “ಪ್ರಭೂ, ರಾಜರ ಅಧೀನ ಪ್ರಜೆಗಳು, ತಮ್ಮ ಆಜ್ಞೆಯನ್ನು ಮೀರಿದವರುಂಟೆ ? ಮೀರಿದರೆ ಗೊತ್ತೇ ಇದೆ. ಗಡೀಪಾರು. ಆದ್ದರಿಂದ ನಾನೆಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೋ ಎಂದು ಹೆದರಿ, ಇದನ್ನು ತಂದು ತಮ್ಮ ಪಾದಗಳಲ್ಲಿ ಅರ್ಪಿಸಿದ್ದೇನೆ. ನನ್ನನ್ನು ಮನ್ನಿಸಬೇಕು” ಎಂದು ಹೇಳಿ ದೂರ ಸರಿದನು.

ರಾಜನು ಕೂಡಲೇ ಆ ಬ್ರಾಹ್ಮಣನನ್ನು ಕರೆಯಿಸಿ “ಅಯ್ಯಾ, ವಿಷ್ಣು ಶರ್ಮ ಇಲ್ಲಿ ನೋಡು, ಈ ಪಾತ್ರ ನಿನ್ನದೇನು ?” ಎಂದು ಕೇಳಿದನು. ವಿಷ್ಣು ಶರ್ಮ ಅದನ್ನು ನೋಡಿ ಹಿಗ್ಗುತ್ತಾ “ಮಹಾಸ್ವಾಮಿಯವರೇ! ಇದು ನನ್ನದೇ. ಇದನ್ನು ತಂದವನು ಪ್ರಾಮಾಣಿಕ, ಕದ್ದವನು ಆ ಕಮ್ಮಾರ, ನಾನು ಕಮ್ಮಾರನ ಅಂಗಡಿಯಲ್ಲಿ ಇಟ್ಟ ಮೇಲೆ, ಅವನ ಹೆಂಡತಿ ಇವನ ಮನೆಯಲ್ಲಿ ಮುಚ್ಚಿಟ್ಟಿದ್ದಾಳೆ. ನಾನು ಕೇಳಿದಾಗ ಗಂಡ ಹೆಂಡಿರಿಬ್ಬರೂ ಇಲ್ಲವೆಂದು ಸಾಧಿಸಿದರು. ಆ ಕಮ್ಮಾರ ಹೀಗೆ ಸುಳ್ಳನ್ನು ಸಾಧಿಸಬಹುದೇ ? ತಮ್ಮಂತಹ ಸತ್ಯಸಂಧರೂ ಧರ್ಮನಿಷ್ಠರೂ, ಪ್ರಜೆಗಳಲ್ಲಿ ಪ್ರೀತಿಯುಳ್ಳವರೂ, ರಾಜ್ಯ ಆಳುತ್ತಿರುವಾಗ, ದೇಶದಲ್ಲಿ ಸುಳ್ಳು, ತಟವಟ, ಮೋಸ ಯಾವುವೂ ಇರಬಾರದು. ಹೀಗೆ ಇರಬೇಕಾದ ಪರಿಸ್ಥಿತಿಯಲ್ಲಿ ಆ ಕಮ್ಮಾರ ಸುಳ್ಳು ಸಾಧಿಸುವುದು ಎಂದರೇನು ? ಗ್ರಾಮಗಳಲ್ಲಿ ವಾಸಿಸುವ ಹನ್ನೆರಡು ಮಂದಿ ಆಯಗಾರರು (ಬಾರಾಬಲೂತಿ) ತಮ್ಮ ತಮ್ಮ ಕೆಲಸಗಳನ್ನು ಸರಿಯಾಗಿ, ಪ್ರಾಮಾಣಿಕತೆಯಿಂದ ಮಾಡಿದ್ದೇ ಆದರೆ ಅದೇ ಸ್ವರ್ಗ. ಗ್ರಾಮಕ್ಕೆ ನಾಯಕ ಗೌಡ ಅಥವಾ ಪಟೇಲ, ಲೆಕ್ಕಪತ್ರಗಳಿಗೆ ಆಧಾರಿ ಶ್ಯಾನುಭೋಗ, ಗ್ರಾಮಕ್ಕೂ ಹೊಲ ಗದ್ದೆಗಳಿಗೂ ಕಾವಲು ತೋಟಿ ತಳವಾರ, ಗದ್ದೆಗೆ ನೀರು ಬಿಡುವವನು ನೀರುಗಂಟಿ. ಬೇಸಾಯಗಾರನಿಗೆ ಬುದ್ದಿ ಹೇಳುವವನು ಜೋಯಿಸ, ರೈತರಿಗೆ ಉಪಕಾರಿ ಬಡಗಿ ಕಮ್ಮಾರ. ರೈತನ ಜೀವನದಲ್ಲಿ ಆಗಾಗ್ಗೆ ಬೇಕಾದವರೆಂದರೆ ಕುಂಬಾರ, ಅಗಸ, ಅಕ್ಕ ಸಾಲೆ ಮತ್ತು ನಾಯಿಂದ. ಇಷ್ಟಲ್ಲದೆ ಕೆಲವು ಹಳ್ಳಿಗಳಲ್ಲಿ ಕವಿಗಳೂ ಇರುತ್ತಾರೆ. ಹೀಗೆ ಗ್ರಾಮಗಳ ಬಾಳು ಈ ಹನ್ನೆರಡು ಜನರನ್ನೇ ಅವಲಂಬಿಸಿದೆ. ಇವರಲ್ಲಿ ಯಾರು ಹಿಂದಾದರೂ ಗ್ರಾಮಗಳು ಏಳಿಗೆಗೆ ಬರಲಾರವು. ಪ್ರಭೂ! ಮೊದಲು ಅವರು ಪ್ರಾಮಾಣಿಕರಾಗಿರಬೇಕು. ಯಾರಾದರೂ ಬಂಗಾರದ ಪದಕವನ್ನೋ ಬೆಳ್ಳಿಯ ಬಳೆಯನ್ನೋ ಅಕ್ಕ ಸಾಲೆಗೆ ಕೊಟ್ಟರೆ, ಅವನು ಅದನ್ನೇ ಮಾರಿಕೊಂಡರೆ ಇನ್ನು ಹಳ್ಳಿಯಲ್ಲಿ ಸತ್ಯವೆಲ್ಲಿಯದು. ಒಗ್ಗಟ್ಟು ಉಂಟಾದೀತೆ! ಕೂಡಲೇ ಜಗಳ ಹತ್ತಿ ಪ್ರಾಣಗಳನ್ನು ಕಳೆದುಕೊಳ್ಳುವರು. ಆದ್ದರಿಂದ ಗ್ರಾಮಗಳವರು ಇನ್ನಾದರೂ ನೀತಿ ಕಲಿಯಲಿ. ತಮ್ಮ ತಮ್ಮ ಕಾರ್ಯಗಳನ್ನು ನಿರ್ವಂಚನೆಯಿಂದ ಮಾಡಲಿ, ಧರ್ಮವನ್ನು ಬಿಟ್ಟು ಅಧರ್ಮಕ್ಕೆ ಮನಗೊಡಬಾರದು. ಆ ಕಮ್ಮಾರನಿಗೆ ಶಿಕ್ಷೆಯನ್ನು ವಿಧಿಸಿರಿ. ಈ ಪಾತ್ರೆಯನ್ನು ತಂದಾತನಿಗೆ ಬಹುಮಾನವನ್ನು ದಯಪಾಲಿಸಿರಿ” ಎಂದು ಹೇಳಿ ತನ್ನ ಆಸನದಲ್ಲಿ ಕುಳಿತನು.

ರಾಜನು ಬಹಳ ಸಂತೋಷಗೊಂಡು, “ಅಯ್ಯಾ ಬ್ರಾಹ್ಮಣನೇ ! ನಿನ್ನ ಸಲಹೆಯಂತೆಯೇ ನಾನೀಗ ಆಜ್ಞೆ ಕೊಡುತ್ತೇನೆ. ಅದಿರಲಿ. ನೀನು ಈಶ್ವರನನ್ನು ಕುರಿತು ತಪಸ್ಸು ಮಾಡಿ, ಈ ಸಿದ್ಧರಸವನ್ನು ಏಕೆ ತಂದೆ ?” ಎಂದು ಕೇಳಿದ. ವಿಷ್ಣು ಶರ್ಮನು “ಮಹಾಸ್ವಾಮಿಯವರಿಗೆ ಕೊಡುವುದಕ್ಕಾಗಿ ” ಎಂದ. ರಾಜ “ನನಗೇಕೆ, ನೀನು ಬಡವ ನಿನ್ನಲ್ಲಿರಬೇಕು” ಎಂದ. ವಿಷ್ಣುಶರ್ಮ ನಾನೇನೋ ಬಡವ, ಆದರೆ ಇದರಿಂದ ದೊರೆಯುವ ಬಂಗಾರವನ್ನು ನಾನು ಕಾಪಾಡಲಾರೆ. ಈ ಪಾತ್ರೆಯನ್ನು ಕಾಪಾಡಿಕೊಳ್ಳುವುದಕ್ಕೆ ಶಕ್ತಿಯಿಲ್ಲದೆ, ತಮ್ಮಲ್ಲಿಗೆ ಬರಬೇಕಾಯಿತು” ಎಂದ.

ರಾಜನು ನಗುತ್ತಾ “ಓಹೋ ಸರಿ ಹಾಗಾದರೆ ಈ ಪಾತ್ರೆ ನನಗೇ ಇರಲಿ, ನಿನಗೆ ಒಂದು ಗ್ರಾಮವನ್ನೇ ಕೊಡುತ್ತೇನೆ” ಎನ್ನುತ್ತಾ ಅಧಿಕಾರಿಯೊಬ್ಬನನ್ನು ಕರೆದು “ಕೂಡಲೇ ಈತನಿಗೆ ಒಂದು ಗ್ರಾಮವನ್ನು ಕೊಡುವ ಏರ್ಪಾಟು ಮಾಡಿರಿ” ಎಂದು ಆಜ್ಞಾಪಿಸಿದ.

ವಿಷ್ಣು ಶರ್ಮನು ದೊರೆಗೆ ಆಶೀರ್ವದಿಸಿ “ಮಹಾರಾಜಾ, ನಾನು ತಮಗೆ ಕೃತಜ್ಞ” ಎಂದು ಹೇಳಿ ಹೊರಟುಹೋದ.

ಅನಂತರ ದೊರೆಯು ಈ ಪವಿತ್ರ ಪಾತ್ರೆಯನ್ನು ಪದ್ಮಾವತಿ ಅಮ್ಮ ನವರ ದೇವಸ್ಥಾನದಲ್ಲಿರಿಸಿ, ತನಗೆ ಅವಶ್ಯಕವಾದಾಗ ಒಂದು ತೊಟ್ಟು ರಸವನ್ನು ಕಬ್ಬಿಣದ ತುಂಡಿನ ಮೇಲೆ ಹಾಕಿ ಚಿನ್ನವನ್ನು ಪಡೆಯುತ್ತಿದ್ದನು.

ಹೀಗಿರುವಾಗ ಒಂದು ದಿನ ಅವನಿಗೆ ಒಂದು ವಿಷಯ ಹೊಳೆಯಿತು. “ನನ್ನ ರಾಜ್ಯದಲ್ಲಿ ಸಾಗುವಳಿ ಇಲ್ಲದ ಬೀಡು ಜಮೀನು ಬೇಕಾದಷ್ಟಿದೆ. ಅದನ್ನೇಕೆ ಉಪಯೋಗಿಸಬಾರದು? ರೈತರಿಗೆ ಕಂದಾಯದ ಭಯವೇ ಭಯ. ಅದನ್ನು ತಪ್ಪಿಸಿಬಿಟ್ಟರೆ ಎಷ್ಟು ಜಮೀನು ಬೇಕಾದರೂ ಉಳುತ್ತಾರೆ. ಆದ್ದರಿಂದ ಕಂದಾಯವನ್ನು ಮೊದಲು ಕಿತ್ತು ಹಾಕಬೇಕು.”

ಇನ್ನು ಸ್ವಲ್ಪ ಹೊತ್ತು ಕಳೆಯಿತು. ರಾಜನು ಇದ್ದಕ್ಕಿದ್ದ ಹಾಗೆಯೇ “ಹೊಳೆಯಿತು! ಹೊಳೆಯಿತು!” ಎಂದು ಕೂಗಾಡಿದನು: ಅವನಿಗೆ ಹೊಳೆದದ್ದೇನು? “ರೈತರೆಲ್ಲಾ ದುಡ್ಡು ಅಥವಾ ಹಣ ಕೊಡುವುದರ ಬದಲು ನೇಗಲಿನ ಗುಳಗಳನ್ನು ಕೊಡಲಿ ಸಾಕು ನನಗೆ” ಎಂದು.

ಈ ಮಾತು ಕೇಳಿ ಜಾನಕಿಯು “ತಾತಾ, ಕುಳ ಅಂದನಲ್ಲಾ ಸುಬ್ಬಣ್ಣ ನೀನು ಗುಳ ಎನ್ನುತ್ತೀಯ” ಎಂದಳು. ತಾತನು “ಸ್ವಲ್ಪ ಸುಮ್ಮನೆ ಇರಮ್ಮಾ ಪೂರ್ತಿ ಕತೆ ಕೇಳು ಆಮೇಲೆ ತಿಳಿಯುತ್ತೆ” ಎಂದು ಹೇಳಿ ಮುಂದುವರಿಸಿದ. ನಾವೆಲ್ಲಾ ಕಿವಿಗಳನ್ನು ಹಾಗೆಯೇ ತೆರೆದು ಕೊಂಡು ಕುಳಿತಿದ್ದೆವು.

ಆಮೇಲೆ ವಿಷ್ಣುವರ್ಧನ ತನ್ನ ರಾಜಧಾನಿಯಾದ ಹಳೇಬೀಡು (ದ್ವಾರಸಮುದ್ರ) ಊರನ್ನೆಲ್ಲಾ ಸುತ್ತಾಡಿದ. ಊರ ಒಳಕ್ಕೂ ಹೊರಕ್ಕೂ ಸುತ್ತಾಡಿ ಬಂದ ಕುದುರೆಗೆ ಆಯಾಸವಾದರೂ ರಾಜನಿಗೆ ಆಯಾಸವೇ ಆಗಲಿಲ್ಲವಂತೆ. ಅಷ್ಟು ಅಭಿರುಚಿ ರಾಜನಿಗೆ. ಪುನಃ ಅರಮನೆಯಲ್ಲಿ ಕುಳಿತು ಮಂತ್ರಿಗೆ ಹೇಳಿ ಕಳುಹಿಸಿದ. ಮಂತ್ರಿಯ ಬಂದನು. ನಮಸ್ಕಾರ ಮೊದಲಾದ್ದೆಲ್ಲಾ ಆದ ಮೇಲೆ ರಾಜನು ಹೇಳಿದ, “ಮಂತ್ರಿಗಳೇ ನೀವು ಕೂಡಲೇ ಆಜ್ಞೆ ಹೊರಡಿಸಬೇಕು. ಪ್ರತಿಯೊಬ್ಬ ರೈತನೂ ತಾನೆಷ್ಟು ಭೂಮಿ ಬೇಕಾದರೂ ಸಾಗುವಳಿ ಮಾಡಬಹುದು. ಆದರೆ ಅವನು ಸರ್ಕಾರಕ್ಕೆ ಕಂದಾಯವನ್ನು ಹಣದ ರೂಪದಲ್ಲಿ ಕೊಡಬೇಕಾದ್ದಿಲ್ಲ, ವರ್ಷಕ್ಕೊಂದು ಸಲ ನೇಗಲಿನ ಸವೆದುಹೋದ ಗುಳಗಳನ್ನು ಅರಮನೆಗೆ ತಂದು ಒಪ್ಪಿಸಬೇಕು” ಎಂದನು.

ಮಂತ್ರಿಗೆ ಆಶ್ಚರ್ಯವಾಯಿತು. “ಸ್ವಾಮಿಯವರಲ್ಲಿ ಒಂದು ಅರಿಕೆ ” ಎಂದ. ರಾಜನು ‘ಏನು’ ಎನಲು, ಮಂತ್ರಿಯು ಹೀಗೆಂದ : “ತಮಗೆ ಸವೆದು ಹೋದ ಗುಳಗಳಿಂದ ಏನು ಪ್ರಯೋಜನ?” ರಾಜನ ಉತ್ತರ : ಪ್ರಯೋಜನವೇ…. ಬೇಕಾದಷ್ಟಿದೆ. ನನ್ನ ಹತ್ತಿರ ಒಂದು ವಿಧವಾದ ರಸವಿದೆ. ಅದರ ಹೆಸರು ಸಿದ್ಧರಸ. ಅದನ್ನು ಕಬ್ಬಿಣದ ಮೇಲೆ ಹಾಕಿದರೆ ಚಿನ್ನವಾಗುತ್ತದೆ. ಅದು ಈಶ್ವರನ ಕೃಪೆಯಿಂದ ಇಲ್ಲಿಗೆ ಬಂದಿದೆ.”

“ಹಾಗೇನು! ಸರಿ, ಆಗಲಿ, ಆಜ್ಞೆಯನ್ನು ಒಡನೆಯೇ ಹೊರಡಿಸುವೆನು” ಎಂದು ಹೇಳಿ ಹೊರಟುಹೋದ.

ಈಗ ರೈತರಿಗೂ ಸಂತೋಷ. ಬೇಕಾದಷ್ಟು ಬೀಡುಜಮೀನು ಸಾಗುವಳಿಗೆ ಬಂತು. ವರ್ಷ ಮುಗಿಯುತ್ತಲೇ ಸಾವಿರಾರು ಗುಳಗಳು ಅರಮನೆಯಲ್ಲಿ ಬಂದುಬಿದ್ದುವು. ರಾಜ ಅವನ್ನೆಲ್ಲಾ ಬಂಗಾರ ಮಾಡಿಕೊಳ್ಳುತ್ತಿದ್ದ. ಹೀಗೆ ಗುಳವನ್ನು ತರುವ ರೈತರನ್ನು ಅರಮನೆಯ ಅಧಿಕಾರಿಗಳು ಬಳಕೆಯಲ್ಲಿ ‘ಕುಳ’ ಎಂದು ಕರೆದರು. ಆ ಹೆಸರೇ ಈಗಲೂ ಬಳಕೆಯಲ್ಲಿದೆ. ಗುಳವನ್ನು ಅಥವಾ ಕಂದಾಯವನ್ನು ಕೊಡುವಾತನೇ ಕುಳ. ಅವನು ಕೊಡುವ ವಸ್ತುವೇ ಕುಳವಾಣ.
* * * *

ಈ ಕತೆ ಕೇಳಿ ಜಾನಕಿ ನಕ್ಕಳು. ನನಗೂ ನಗು ಬಂದಿತು. ತಾತನೂ ನಗುತ್ತಾ ನಶ್ಯವನ್ನೇರಿಸಿದ. ಸುಬ್ಬಣ್ಣ “ಏನು ರಾಮಣ್ಣ, ನನಗೆ ಇಷ್ಟು ವರ್ಷಗಳಾದರೂ ಈ ವಿಷಯ ತಿಳಿದೇ ಇರಲಿಲ್ಲವೇ? ‘ಕುಳ, ಕುಳ’ ಎಂದೇನೋ ಹೇಳುತ್ತೇನೆ, ಆದರೆ ಅದರ ಕಥೆ ತಿಳಿದಿರಲಿಲ್ಲ. ಎಂಥ ದಡ್ಡ ನಾನು” ಎಂದ.

ನಾನು “ತಾತ, ಇನ್ನೊಂದು ಕತೆ ” ಎಂದೆ. ಜಾನಕಿಯಂತೂ ಸ್ವಲ್ಪವೂ ಬೇಸರಪಡದೆ “ಅಕ್ಕನಿಗೆ ಹೇಳಿದೆ ಈಗ ನನಗೆ ಇನ್ನೊಂದು ಹೇಳು” ಎಂದು ಕೇಳಿಕೊಂಡಳು. ನಮ್ಮ ತಾತನು “ಕತೆ ಬೇಕೆ ಕಥೆ” ಎಂದು ಹೇಳುತ್ತಿರುವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ಒಂದು ಹಾವು ಕಾಣಿಸಿತು. ನಮ್ಮ ತಾತ “ಶಾರದೆ, ಜಾನಕಿ ನಡೆಯಿರಿ ಮನೆಗೆ ಹಾವು ಬಂದಿದೆ ಹಾವು!” ಎಂದು ಹೇಳಿದ. ನಾವು ಒಂದೇ ಒಂದು ನಿಮಿಷದಲ್ಲಿ ಮನೆಗೆ ಓಡಿದೆವು. ನಮ್ಮ ತಾತ, ಸುಬ್ಬಣ್ಣ ಮಾತ್ರ ಅಲ್ಲೇ ಇದ್ದರು.

ಹಾವನ್ನು ಹೊಡೆದರೋ ಇಲ್ಲವೋ ಗೊತ್ತಿಲ್ಲ.
*****

Tagged:

Leave a Reply

Your email address will not be published. Required fields are marked *

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...