Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ಸೆಪ್ಟೆಂಬರ ೨, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಬುಧವಾರ, ಸೆಪ್ಟೆಂಬರ ೨, ೧೯೪೨

ಪ್ರೀತಿಯ ಕಿಟಿ,

ವ್ಯಾನ್ಡ್ಯಾನ್ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ಭಯಂಕರವಾಗಿ ಜಗಳವಾಡಿದರು. ಈ ಹಿಂದೆ ನಾನೆಂದೂ ಇಂತಹ ಜಗಳ ನೋಡಿರಲಿಲ್ಲ. ಮಮ್ಮಿ ಮತ್ತು ಡ್ಯಾಡಿ ಎಂದೂ ಹೀಗೆ ಪರಸ್ಪರ ಕೂಗಾಡಿ ಕಾದಾಡುವುದನ್ನು ಕನಸಲ್ಲೂ ಕಂಡಿರಲಿಕ್ಕಿಲ್ಲ. ಈ ಜಗಳಕ್ಕೆ ತೀರಾ ಕ್ಷುಲಕ ಸಂಗತಿ ಕಾರಣವಾಗಿತ್ತು. ಇಡೀ ವಿಚಾರವೇ ಅನಗತ್ಯ ಆಕ್ರೋಶದ್ದಾಗಿತ್ತು. ಆದರೂ ಪ್ರತಿಯೊಬ್ಬನಿಗೂ ತನ್ನದೇ ಆದ ಇಷ್ಟಗಳಿರುತ್ತವೆ.

ಸಹಜವಾಗಿಯೇ ಇದು ಪೀಟರಗೆ ಸಂತೋಷದ್ದಾಗಿರಲಿಲ್ಲ. ಇದೆಲ್ಲವನ್ನು ಆತ ಸಹಿಸಬೇಕಿತ್ತು. ಯಾರೊಬ್ಬರೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆತ ಹೆದರಿಕೆ ಹುಟ್ಟಿಸುವಷ್ಟು ಭಾವುಕ ಮತ್ತು ಆಲಸಿ. ನಿನ್ನೆ ಆತ ತುಂಬಾ ಚಿಂತಿತನಾಗಿದ್ದ. ಕಾರಣವೆಂದರೆ ಆತನ ನಾಲಿಗೆ ಕೆಂಪಾಗಿರುವದರ ಬದಲು ನೀಲಿಯಾಗಿತ್ತು ಎಂದು ಆತ ತಿಳಿದಿದ್ದ. ಇಂತಹ ಸಾಮಾನ್ಯವೆನ್ನಿಸದ ಅತಿಶಯದ ಸ್ವಭಾವ ಬಂದಷ್ಟೇ ವೇಗವಾಗಿ ಅದೃಶ್ಯವಾಯಿತು. ಇವತ್ತು ಆತನ ಕುತ್ತಿಗೆ ಮರಗಟ್ಟಿದಂತಾದ ಕಾರಣ ಸ್ಕಾರ್ಪನ್ನು ಧರಿಸಿ ಹೋಗುತ್ತಿದ್ದಾನೆ. ಇದೆಲ್ಲದರ ಜೊತೆ ಈ ಕುಲೀನ ಹುಡುಗ ಸೊಂಟದ ನೋವೆಂದು ತಗಾದೆ ಎತ್ತುತ್ತಾನೆ, ಹೃದಯದ ಸುತ್ತ ನೋಯುತ್ತದೆ, ,ಮೂತ್ರಪಿಂಡ, ಶ್ವಾಸಕೋಶ, ಎರಡೂ ಸರಿಯಾಗಿಲ್ಲ ಎನ್ನುತ್ತಾನೆ. ನಿಜಕ್ಕೂ ಈತ ವ್ಯಾಧಿ ಭ್ರಾಂತಿಯ ವ್ಯಕ್ತಿ. [ಇಂತಹ ವ್ಯಕ್ತಿಗಳಿಗೆ ಹಾಗೆ ಕರೆಯುತ್ತಾರಲ್ಲವೇ] ಮಮ್ಮಿ ಮತ್ತು ಶ್ರೀಮತಿ ವ್ಯಾನ್ಡ್ಯಾನ್ ನಡುವೆ ಎಲ್ಲವೂ ಚೆನ್ನಾಗಿಯೇ ಇಲ್ಲ. ಪರಸ್ಪರ ಮನಸ್ತಾಪಕ್ಕೆ ಬೇಕಾದಷ್ಟು ಕಾರಣಗಳಿವೆ. ಸಣ್ಣ ಉದಾಹರಣೆ ನೀಡಬೇಕೆಂದರೆ ಲಿನಿನ್ ಕಪಾಟಿನಿಂದ ಮಿಸೆಸ್ ವ್ಯಾನ್ಡ್ಯಾನ್ ತನ್ನ ಎಲ್ಲ ಮೂರು ಹೊದಿಕೆಗಳನ್ನು ತೆಗೆದುಕೊಂಡಿದ್ದರು. ನಮಗೆಲ್ಲರಿಗೂ ಮಮ್ಮಿಯ ಬೆಡ್ ಶಿಟ್‌ಗಳೇ ಸಾಕಾಗಬಹುದೆಂಬಂತೆ ಅವರು ತನ್ನಷ್ಟಕ್ಕೆ ಅಂದುಕೊಂಡಿರುತ್ತಾರೆ. ಆದರೆ ಯಾವಾಗ ಮಮ್ಮಿ ಅವರ ಮಂತ್ರವನ್ನೆ ಪಾಲಿಸಿದಾಗ ಅದು ಅವರಿಗೆ ವಿಚಿತ್ರವಾಗಿ ಅನ್ನಿಸಿತ್ತು.

ಅಲ್ಲದೇ ಶ್ರೀಮತಿ ವ್ಯಾನ್ಡ್ಯಾನ್‌ರ ಡಿನ್ನರ ಸರ್ವಿಸ್ ಯಾರಿಗೂ ಇಷ್ಟವಾಗುತ್ತಿರಲಿಲ್ಲ. ಮತ್ತು ನಮ್ಮ ಡಿನ್ನರ ಸರ್ವಿಸ್‌ನ ಬಳಕೆಗೆ ಅವಕಾಶವಿರಲಿಲ್ಲ. ಅವರು ನಾವು ನಮ್ಮ ತಾಟುಗಳನ್ನು ಎಲ್ಲಿಟ್ಟಿದ್ದೇವೆ ಎಂಬುದನ್ನು ತಿಳಿಯಲು ಸದಾ ಪ್ರಯತ್ನಿಸುತ್ತಿದ್ದರು: ಅವರು ಅಂದುಕೊಂಡದಕ್ಕಿಂತ ಅವು ಸಮೀಪದಲ್ಲಿಯೇ ಇರುವವು. ನಮ್ಮ ಪ್ಲೇಟುಗಳು ನಾವಿಲ್ಲಿರುವವರೆಗೂ ಅವರ ಕೈಗೆ ಸಿಗಲಾರವು ಮತ್ತದು ಒಳ್ಳೆಯದು ಕೂಡಾ. ನನ್ನದು ಯಾವಾಗಲೂ ಕೆಟ್ಟ ಅದೃಷ್ಟ. ನಿನ್ನೆ ಅದು ಹೇಗೋ ನಾನು ಶ್ರೀಮತಿ ವ್ಯಾನ್ಡ್ಯಾನ್‌ರ ಸಾರಿನ ತಟ್ಟೆಯನ್ನು ಛಿದ್ರಗೊಳಿಸಿದೆ. ಓಹೋ! ಅವರು ಸಿಟ್ಟಲ್ಲಿ ಚೀರಿದರು. “ನಿನಗೆ ಒಮ್ಮೆಯಾದರೂ ಕಾಳಜಿಯಿಂದಿರಲು ಸಾಧ್ಯವಾಗುವುದಿಲ್ಲವೇ- ನನ್ನ ಹತ್ತಿರ ಇರುವುದು ಅದೊಂದೆ ಆಗಿತ್ತು”

ಇತ್ತೀಚೆಗೆ ವ್ಯಾನ್ಡ್ಯಾನ್‌ರು ನನಗೆ ಬಹಳ ಆಪ್ತರಾಗುತ್ತಾರೆ. ಅದು ಬಹಳ ದಿನಗಳವರೆಗೆ ಇರಬಹುದು. ಆದರೆ ಮಮ್ಮಿ ಈ ಬೆಳಿಗ್ಗೆ ನನಗೆ ಭಯಂಕರ ನೀತಿಪಾಠ ಹೇಳಿದರು. ನಾನದನ್ನು ಸಹಿಸಲಾರೆ. ನಮ್ಮ ಯೋಚನೆಗಳು ಅವರ ಯೋಚನೆಗಳಿಗಿಂತ ಸಂಪೂರ್ಣ ಭಿನ್ನ. ಡ್ಯಾಡಿ ನನ್ನ ಡಾರ್ಲಿಂಗ್, ಆದರೂ ಕೆಲವೊಮ್ಮೆ ಅವರೂ ನನ್ನೊಂದಿಗೆ ಸಿಟ್ಟಾಗುತ್ತಾರೆ. ಅದು ಬರಿ ಐದೇ ನಿಮಿಷ ಅಷ್ಟೇ. ಬದಲಾವಣೆಯಿಲ್ಲದೇ ಏಕತಾನತೆಯಿಂದ ಕೂಡಿದ ನಮ್ಮ ಬದುಕಿಗೆ ಕಳೆದ ವಾರ ಬೇರೊಂದು ಕಾರಣದಿಂದ ಕೊಂಚ ಅಡ್ಡಿಯಾಯಿತು. ಅದು ಮಹಿಳೆಯರ ಬಗ್ಗೆ ಬರೆದ ಪುಸ್ತಕ ಹಾಗೂ ಪೀಟರನಿಗೆ ಸಂಬಂಧಿಸಿದ್ದಾಗಿತ್ತು. ನಾನಿದನ್ನು ನಿನಗೆ ಹೇಳಲೇ ಬೇಕು. ಕೂಫಸ್ ನಮಗಾಗಿ ತಂದುಕೊಡುವ ಎಲ್ಲ ಪುಸ್ತಕಗಳನ್ನು ಓದಲು ಮಾರ್‍ಗೊಟ್ ಮತ್ತು ಪೀಟರಗೆ ಅನುಮತಿ ಇತ್ತು. ಆದರೆ ಹರೆಯದವರಿಗೆ ಹೆಣ್ಣಿನ ಕುರಿತಾದ ಇಂತಹ ಪುಸ್ತಕ ಓದಲು ಅನುಮತಿ ಇರಲಿಲ್ಲ. ಹೀಗಾಗಿ ಪೀಟರ್‌ನ ಕುತೂಹಲ ಕೆರಳಿತು. ಅವರಿಬ್ಬರಿಗೂ ಓದಲು ಅನುಮತಿಸದಂತಹ ಅದೆಂತಹ ಸಂಗತಿ ಆ ಪುಸ್ತಕದಲ್ಲಿತ್ತು? ಪೀಟರ ಗುಟ್ಟಾಗಿ ಹೇಗೋ ಆ ಪುಸ್ತಕ ಯಾಮಾರಿಸಿಕೊಂಡು, ಆತನ ತಾಯಿ ಕೆಳಗಡೆ ಯಾರೊಂದಿಗೊ ಮಾತನಾಡುತ್ತಿರುವಾಗ, ಈತ ಠಕ್ಕನಂತೆ ಕದ್ದ ಮಾಲಿನೊಂದಿಗೆ ಅಟ್ಟದ ಕೋಣೆಯೆಡೆಗೆ ಮಾಯವಾದ. ಕೆಲವು ದಿನ ಎಲ್ಲವೂ ಸರಾಗವಾಗಿಯೇ ನಡೆದವು. ಆತನೇನು ಮಾಡುತ್ತಿರುವನೆಂಬುದು ಆತನ ತಾಯಿಗೆ ತಿಳಿದಿತ್ತು. ಆದರೆ ಆತನ ತಂದೆಗೆ ಇದು ತಿಳಿಯುವವರೆಗೂ ಆಕೆ ಆ ಕಥೆ ಹೇಳಲಿಲ್ಲ. ಆತ ತುಂಬಾ ಕೋಪಗೊಂಡರು. ಪುಸ್ತಕವನ್ನು ಸೆಳೆದುಕೊಂಡರು. ಇಂತಹ ಪುಸ್ತಕ ಅವನನ್ನು ನಾಶಮಾಡಬಹುದೆಂದು ತಿಳಿದರು. ಮಗನ ಕುತೂಹಲ ತಣಿಸಲು ಅವನಿಗೆ ಅವಕಾಶ ಕೊಡಲಿಲ್ಲ. ತಂದೆಯ ವರ್ತನೆ ಆತನ ಕುತೂಹಲವನ್ನು ಕಡಿಮೆ ಮಾಡುವ ಬದಲು ಇನ್ನಷ್ಟು ಕೆರಳಿಸಿತು. ಪೀಟರ ಆ ಪುಸ್ತಕವನ್ನು ಓದಿ ಮುಗಿಸಲೇಬೇಕೆಂದು ತೀರ್ಮಾನಿಸಿದ. ರೋಮಾಂಚನಗೊಳಿಸುವ ಆ ಪುಸ್ತಕವನ್ನು ಹೇಗಾದರೂ ಪಡೆಯಲೇಬೇಕೆಂದು ಯೋಚಿಸಿದ. ಅದೇ ಕ್ಷಣ ಶ್ರೀಮತಿ ವ್ಯಾನ್ಡ್ಯಾನ್ ಇದೆಲ್ಲದರ ಬಗ್ಗೆ ಮಮ್ಮಿಯ ಅಭಿಪ್ರಾಯ ಕೇಳಿದರು. ಮಾರ್‍ಗೊಟ್‌ಳಿಗೆ ಈ ಪುಸ್ತಕ ಅಷ್ಟು ಒಳ್ಳೆಯದಲ್ಲವೆಂದು ಮಮ್ಮಿ ಅಂದುಕೊಂಡಿದ್ದರು. ಆದರೆ ಮಾರ್‍ಗೊಟ್‌ಳಿಗೆ ಎಂತಹ ಪುಸ್ತಕ ಓದಲು ಕೊಟ್ಟರೂ ತೊಂದರೆಯಾಗಿರಲಿಲ್ಲ ಎಂಬುದು ಅವರಿಗೆ ಗೊತ್ತಿತ್ತು.

ಮಮ್ಮಿ ಹೇಳಿದರು, ಶ್ರೀಮತಿ ವ್ಯಾನ್ಡ್ಯಾನ್, ಮಾರ್‍ಗೊಟ್ ಮತ್ತು ಪೀಟರ್ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ಮೊದಲನೆಯದಾಗಿ ಮಾರ್‍ಗೊಟ್ ಹುಡುಗಿ, ಮತ್ತು ಹುಡುಗಿಯರು ಸಹಜವಾಗಿಯೇ ಹುಡುಗರಿಗಿಂತ ಹೆಚ್ಚು ಪ್ರಬುದ್ಧರು, ಎರಡನೆಯದಾಗಿ ಮಾರ್‍ಗೊಟ್ ಈಗಾಗಲೇ ಬಹಳಷ್ಟು ಗಂಭೀರವಸ್ತುವನ್ನುಳ್ಳ ಪುಸ್ತಕಗಳನ್ನು ಓದಿದ್ದಾಳೆ. ಮತ್ತು ಆಕೆ ತನಗ್ಯಾವುದು ನಿರ್ಬಂಧಿಸಲ್ಪಟ್ಟಿದೆಯೋ ಅದನ್ನು ಹುಡುಕುವುದಿಲ್ಲ. ಮೂರನೆಯದಾಗಿ ಆಕೆ ಜಾಣೆ ಮತ್ತು ಬುದ್ದಿವಂತೆ ಎನ್ನುವುದು ಆಕೆ ಶಾಲೆಯಲ್ಲಿ ನಾಲ್ಕನೆಯ ತರಗತಿಯಲ್ಲಿರುವಾಗಲೇ ತೋರಿಸಿರುವಳು. ಎಂದರು. ಈ ಮಾತನ್ನು ವ್ಯಾನ್ಡ್ಯಾನ್ ಕೂಡಾ ಒಪ್ಪಿಕೊಂಡರು. ಆದರೂ ಹರೆಯದವರಿಗೆಂದೆ ಬರೆದಂತಹ ಇಂತಹ ಪುಸ್ತಕವನ್ನು ಚಿಕ್ಕ ಮಕ್ಕಳಿಗೆ ಓದಲು ಬಿಡುವುದು ತಾತ್ವಿಕವಾಗಿ ಸರಿಯಲ್ಲ ಎಂದೂ ಯೋಚಿಸಿದರು.

ಅದೇ ಹೊತ್ತಿನಲ್ಲಿಯೇ ಪೀಟರಗೆ ಸಮಯ ಸಿಕ್ಕಿತ್ತು. ಯಾರೊಬ್ಬರೂ ಆತನ ಬಗ್ಗೆಯಾಗಲಿ ಆ ಪುಸ್ತಕದ ಬಗ್ಗೆಯಾಗಲೀ ಲಕ್ಷ್ಯಿಸದೇ ಇರುವಾಗ, ಅದು ಸಂಜೆ ಏಳೂವರೆಯ ಸಮಯ. ಎಲ್ಲರೂ ಪ್ರೈವೇಟ್ ಆಫೀಸಿನಲ್ಲಿ ಕುಳಿತು ರೇಡಿಯೋ ಕೇಳುತ್ತಿರುವಾಗ, ಈತ ತನ್ನ ಈ ಸಂಪತ್ತಿನೊಂದಿಗೆ ಪುನಃ ಅಟ್ಟವೇರಿದ. ಆದರಾತ ಎಂಟೂವರೆಗೆ ಪುನಃ ಕೆಳಗಡೆ ಬರಬೇಕಿತ್ತು. ಆದರೆ ಪುಸ್ತಕ ಕೊಡುತ್ತಿದ್ದ ಥ್ರಿಲ್ ಎಷ್ಟಿತ್ತೆಂದರೆ ಆತನಿಗೆ ಸಮಯದ ಪರಿವೆಯೇ ಇರಲಿಲ್ಲ. ಮತ್ತು ಆತ ತನ್ನ ತಂದೆ ಮನೆಯೊಳಗೆ ಬರುವ ಸಮಯದಲ್ಲಿಯೇ ಕೆಳಗಿಳಿದು ಬಂದು ಸಿಕ್ಕಿಬಿದ್ದ. ಅದರ ಪರಿಣಾಮ ಹೇಗಿತ್ತೆಂದು ನೀನು ಊಹಿಸಬಲ್ಲೆಯಾ? ಆತನಿಗೊಂದು ಕೊಟ್ಟು, ಪುಸ್ತಕವನ್ನು ಸೆಳೆದುಕೊಂಡು ಮೇಜಿಗೆಸೆದರು. ಪೀಟರ್ ಮಾಳಿಗೆಯಲ್ಲಿಯೇ ಉಳಿದ. ನಾವು ಊಟಕ್ಕೆ ಟೇಬಲ್ಲಿಗೆ ಬಂದು ಕುಳಿತಾಗ ಇದೆಲ್ಲ ನಡೆಯಿತು. ಪೀಟರ ಅಟ್ಟದ ಮೇಲೇಯೇ ಉಳಿದ. ಯಾರೂ ಆತನ ಬಗ್ಗೆ ವಿಚಾರ ಮಾಡಲಿಲ್ಲ. ಆ ದಿನ ಊಟವಿಲ್ಲದೇ ಆತ ಮಲಗಬೇಕಿತ್ತು. ನಾವೆಲ್ಲ ಊಟ ಮಾಡುತ್ತ ಖುಷಿಯಾಗಿ ಹರಟುತ್ತಾ ಇರುವಾಗಲೇ ಆ ಕರ್ಕಶ ಶಿಳ್ಳೆಯ ಧ್ವನಿ ಕೇಳಿತು. ಊಟಮಾಡುವುದನ್ನು ನಿಲ್ಲಿಸಿ, ಒಮ್ಮೆಲೆ ಬದಲಾದ ಕಳಾಹೀನ ಮುಖದೊಂದಿಗೆ ಒಬ್ಬರನ್ನೊಬ್ಬರು ನೋಡಿಕೊಂಡೆವು. ಆಗಲೇ ನಮಗೆ ಪೀಟರ್‌ನ ದನಿ ಕೇಳಿಸಿತು. ಆತ ಚಿಮಣಿಯಿಂದ ಕರೆಯುತ್ತಿದ್ದ. “ಏನು ಮಾಡಿದರೂ ನಾ ಕೆಳಗೆ ಬರುವುದೇ ಇಲ್ಲ.” ವ್ಯಾನ್ಡ್ಯಾನ್ ಆತನ ಕಾಲಿಗೆ ಆತು ಹಿಡಿದಿದ್ದರು, ಆತನ ಕರವಸ್ತ್ರ ಕೆಳಗೆ ಬಿದ್ದಿತ್ತು. ಕೆಂಪಾದ ಮುಖದಲ್ಲಿ ಕಿರುಚಿದ. “ನನಗಿದು ಬೇಕಾದಷ್ಟಾಯಿತು.”

ಡ್ಯಾಡಿ ಮುಂದೇನಾಗುವುದೋ ಎಂಬ ಭಯದಲ್ಲಿ ಆತನ ತೋಳು ಹಿಡಿದರು. ಉಳಿದಿಬ್ಬರು ಅಟ್ಟ ಹತ್ತಿ ಹೋದರು. ಸಾಕಷ್ಟು ಪ್ರತಿಭಟನೆಯ ನಂತರ ಪೀಟರ್ ತನ್ನ ಕೋಣೆಗೆ ಇಳಿದು ಬಾಗಿಲು ಹಾಕಿಕೊಂಡ. ನಾವು ಊಟ ಮುಂದುವರೆಸಿದೆವು. ಶ್ರೀಮತಿ ವ್ಯಾನ್ಡ್ಯಾನ್ ಮುದ್ದಿನ ಮಗನಿಗಾಗಿ ಒಂದು ಬ್ರೆಡ್ ತುಂಡನ್ನು ತೆಗೆದಿಡಲು ಬಯಸಿದರು. ಆದರೆ ಆತನ ತಂದೆ ತಮ್ಮ ನಿರ್ಧಾರದಲ್ಲಿ ಖಡಕ್ ಆಗಿದ್ದರು. ಒಂದೊಮ್ಮೆ ಆತ ಕ್ಷಮಾಪಣೆ ಕೇಳದಿದ್ದರೆ ಆತ ಮಾಳಿಗೆಯಲ್ಲಿಯೇ ಮಲಗಬೇಕಾಗುವುದು. ನಾವೆಲ್ಲರೂ ಇದಕ್ಕೆ ಜೋರಾಗಿ ವಿರೋಧಿಸಿದೆವು. ‘ಆತನಿಗೆ ಊಟ ನೀಡದೇ ಇರುವುದೇ ದೊಡ್ಡ ಶಿಕ್ಷೆ ಎಂದು ನಾವೆಲ್ಲ ತಿಳಿದಿದ್ದೆವು. ಇನ್ನು ಹೆಚ್ಚಾಗಿ ಪೀಟರ್‌ಗೆ ಶೀತ ಹಿಡಿಯಬಹುದು. ಮತ್ತು ನಾವು ವೈದ್ಯರನ್ನು ಕರೆಯಲು ಸಾಧ್ಯವಿರಲಿಲ್ಲ.

ಪೀಟರ್ ಕೊನೆಗೂ ಕ್ಷಮೆ ಕೇಳಲಿಲ್ಲ: ಆತ ಮಾಳಿಗೆಯಲ್ಲಿಯೇ ಇದ್ದ. ವ್ಯಾನ್ಡ್ಯಾನ್ ಸುಮ್ಮನೇ ಇದ್ದರು. ಆದರೆ ಮಾರನೇ ದಿನ ಬೆಳಿಗ್ಗೆ ಆತ ತನ್ನ ಹಾಸಿಗೆಯಲ್ಲಿ ನಿದ್ರಿಸುತ್ತಿದ್ದ. ಏಳುಗಂಟೆಗೆಲ್ಲಾ ಪೀಟರ್ ಅಟ್ಟಕ್ಕೆ ವಾಪಸ್ಸಾದ. ಡ್ಯಾಡಿ ಸ್ನೇಹಪೂರ್ವಕವಾಗಿ ಆತನೊಂದಿಗೆ ವ್ಯವಹರಿಸಿ, ಪುನಃ ಆತ ಕೆಳಗೆ ಬರುವಂತೆ ಮನವೊಲಿಸಿದರು. ಆದರೂ ಆತನ ಗಂಟಿಕ್ಕಿದ ಮುಖ ಮತ್ತು ಹಠಮಾರಿ ಮೌನ ಮೂರು ದಿನಗಳವರೆಗೆ ಮುಂದುವರೆಯಿತು. ಪುನಃ ಮತ್ತೆಲ್ಲವೂ ಸರಿಯಾದವು.

ನಿನ್ನ
ಆನ್

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...