ತಂಬಿಟ್ಟು ತಿಳಿದುಪ್ಪ, ನಿ೦ಬಿ ಉಪ್ಪಿನಕಾಯಿ
ರಂಬಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||
ಬಂಗಾರ ಬಳಿಯೊತ್ತಿ, ದುಂಡ ಕಂಕಣವೊತ್ತಿ
ಗೊಂಡೇವು ಒತ್ತಿ ಮಲಗ್ಯಾಳ । ನನ ತಂಗಿ
ದಂಡನಾಳವನ ಬಂಕೀಲಿ ||
ಸಂತೋಷದ ಸುದ್ದಿ, ಸಂತ್ಯಾಗ ಕೇಳೀನಿ
ಕೆಂಚಿ ನನ ತಂಗಿ ಬಸರಂತ | ಹೇಳ್ಯಾನ
ಹಂಪಿಸಾಗರದ ಬಣಜೀಗ ||
ಸಜ್ಜೀಯ ರುಚಿ ರೊಟ್ಟಿ, ಸಜ್ಜಕದ ಹೋಳೀಗಿ
ಗಜ್ಜೂರಿ ಚೆಟ್ಟು ಎಳ್ಳೆಣ್ಣಿ | ತಂಗೆವ್ವ
ಗುಜ್ಚಿ ನಿನ ಬಂಕ ತಿಳಿಯಾವ ||
ಕ೦ದನೆ ಕೊಡುಶಿವನ, ಬಂದನ ಬಡಲಾರೆ
ಹಂಗಿನ ಬಾನ ಉಣಲಾರೆ | ಜನದಾಗ
ಬಂಜೆಂಬು ಸಬುದ ಹೊರಲಾರೆ ||
ಆಡುಮಕ್ಕಳ ಕಂಡು, ಬೇಡಿತ್ತ ನನ ಜೀವ
ಕೇಳಿದ್ದನೇನ ತಿವರಾಯ | ಹೊಟ್ಟ್ಯಾಗ
ಮೂಡಿದ್ದನೇನ ಮಗರಾಮ ||
ಹೆಣ್ಣು ಜನುಮಕ ಬಂದೆ, ಮಣ್ಣು ಮಾಡಲಿಬ್ಯಾಡ
ಹೆಣ್ಣುತನ ಶಿವನೆ ಜಗದಾಗ | ಕೈ ಮುಗಿವೆ
ಕಂಡಯ್ನ ಕೊಟ್ಟು ಕಡಿಮಾಡು ||
ಕೂಡಲ ಸಂಗಯ್ಯ, ನೀಡು ಮಕ್ಕಳ ನನಗ
ನನಗಲ್ಲ ನನ್ನ ಗೆಳತೀಗೆ | ಕೊಟ್ಟಽರ
ಬಾಗಿಲಕ-ಹೊನ್ನ ಬಡಿಸೇನ ||
ಬಂಜೀಯ ಮನಿಮುಂದ, ಸಿಂಗಾರ ಗಿಡ ಹುಟ್ಟಿ
ಕೊಂಗಿಕೊಂಗೀಲಿ ಗಿಳಿಕೂತು | ಓದ್ಯಾವ
ಬಂಜಿ ನಿನ ಬದಕು ಹೆರವರಿಗೆ ||
ಹತ್ತು ಗಂಡ್ಹಡದರೂ, ಮತ್ತೆ ಬಂಜೆಂಬೂರು
ದಟ್ಟೀಯ ಉಡುವ ಧರಣೀಯ | ಹಡೆದರ
ಹೆತ್ತಾಯಿಯೆಂದು ಕರೆದಾರ ||
ನಾಕ ಮಕ್ಕಳ ಕೊಟ್ಟು, ಸಾಕು ಮಾಡೊ ಶಿವನೆ
ನಾಕರ ಮ್ಯಾಲೆ ಆರೂತಿ | ಹಿಡಿಯಾಕ
ನಾರಿಯ ಕೊಟ್ಟು ಕಡಿಮಾಡೊ ||
ಗಂಡ ಮಗನ ಬೇಡಿ, ಬಂಡಿಲಿ ಬಾಗೇವ ಬೇಡಿ
ಗಂಡಗಾಸೇವ ಘನಬೇಡಿ | ನನ ಮಗಳು
ತಿಂಗಳೊಂದೊತ್ತು ಹಿಡಿದಾಳ ||
ಬಸರು ಇರುವೆನೆಂದು, ಖುಸಿ ಬಹಳ ಮನದಾಗ
ಹಡೆದೆ ನಾನೆಂಬ ಹವಣಿಕೆ | ಸಂಗಯ್ಯ
ಕರುಣ ತಪ್ಪಿದರ ಮರಣಾವು ||
*****

















