Home / ಕವನ / ಕವಿತೆ / ನೌಕಾಯಂತ್ರ

ನೌಕಾಯಂತ್ರ

ಹಡಗದ ಹಗೆಯಲ್ಲಿಳಿದಿಳೆದು ಗವಿಯನೊಳವೊಕ್ಕು ಸಾಗಿದೆವು ದೂರ, ಸುದೂರ,-
ನೀರೊಳಕೆ ಹಾಯ್ದ ಹಡಗದ ತಳದ ಗರ್ಭದೊಳು ನೂಕಿ.
ಇದೇನು ತಿಮಿಂಗಿಲ ತಿಮಿರ! ನಿಶಾಚರರ ದಿಶೆಯೇನಿದು! ಜಲಚರಗಳ ಜಗವು!
ಇಟ್ಟ ಕಾಲೆಳೆಯುತಿದೆ ಜಾರಿ ಯಮಲೋಕಕ್ಕೆ!
ಹರಿಯುತಿದೆ ನೋಡಲ್ಲಿ ಕೊಳಚಿ ನೀರು,-ರವರವ ನರಕದಲ್ಲಿ!
ಮೇಲೆ ತಲೆತಿರುಗಿ ಕಣ್ಣೆತ್ತಲು, ಕಾಣುವ ಕಪ್ತಾನನ ಕೋಣೆಯೇ ಮುಗಿಲಿಲ್ಲಿ!
ಇಲ್ಲಿಯ ಯಮರಾಜನವನು,-ಇಂದ್ರಚಂದ್ರನೀ ಲೋಕಕೆ:
ಅವ ಸನ್ನೆಗೆಯ್ದಂತೆ ವರ್ತಿಸುವವಿಲ್ಲರುವ ಪ್ರಾಣಿಗಳು.

ತೀರ ಕೆಳಗೆ ಸಮುದ್ರ,-ಅದರ ಮೇಲಿಹುದು ಸಿಹಿನೀರ ಕೆರೆ
ಕಬ್ಬಿಣದ ಹೊದಿಕೆಯಲಿ,-ಅದರ ಮೇಲಿಂತಿಹುದು ಯಮಲೋಕವಿದು.
ಹೀಗೆ ಬಾ, ಇತ್ತ ಬಾ, ಹಿಡಿದು ಸಾಗೀ ಕಬ್ಬಿಣದ ಕಂಬಿಯನು:
ಇಲ್ಲದಿರೆ ಪುಡಿಪುಡಿ ಮೂಡಿ ಚೆಲ್ಲೀತು ಸುತ್ತುತಿಹ ಚಕ್ರವದು:
ಇಲ್ಲಿಹುದು ನೋಡು ಚಕ್ರವ್ಯೂಹ: ಗರ್ರನೆ ತಿರುಗುತಿವೆ ಗಾಲಿಗಳು
ಯಮನ ಕಣ್ಣಾಲಿಗಳಂತೆ; ಅಣಿಗೊಳಿಸಲೆಂದು ನಿಂತಿಹರು ದೂತರಿವರು:
ಅವರಿಗುಸಿರೆಂಥ ಮರಣವು ನಿನ್ನದಿರಲೆಂದು. ಹಾ! ಬಾಗಿಲ್ಲಿ!
ಜಂತಿಭಿಂತಿಯ ಮೇಲೆ ಕೈಮೆಯ್ಯ ತಳಕಿಕ್ಕಿ
ಹೊಟ್ಟೆ ಸರಿದುಬ್ಬಿ ಬರುತಿವೆ ನೋಡು ಹೆಬ್ಬಾವು: ಏ ಗುಬ್ಬಿಮಾನವ!
ಏಳು! ಹಾರಿಲ್ಲಂದ! ಇಲ್ಲದಿರೆ ಮಡಿದೆಯೆಂದು ತಿಳಿ!
ಇದು ನೋಡು,-ವಾಯುವಿನ ನುಂಗಿ ನೀರ್‍ಕುಡಿದ ಘಟಸರ್ಪ;
ಬಾಯ್ದೆರೆದು ಗಾಳಿ ಬಿಡುತಿದೆ: ಇಲ್ಲಿಯದರ ವಿಷದುಸಿರು ಸಹ
ತಂಪಮೃತದಂತೆ: ಮತ್ತಿದು ಕಾಳಸರ್ಪ: ಉಗಿಯನೊಯ್ದು ಯಂತ್ರಕೆ ಮಂತ್ರಿಸಿ
ಹುಟ್ಟು ಕಡಿಸುವ ಮಹಾತಂತ್ರ!

ಅಲ್ಲಿ ಬೇಡ! ಹುಟ್ಟುತಿಹುದಲ್ಲಿ ಸಹಿಸಲಸಾಧ್ಯವಾದ ಬೆಳಕು,-
ವಿದ್ಯುತ್ತು; ಮಿಂಚಿನ ಹೊಂಚಿನಲಿ ಹಂಚಿನಂತೆ ನೀ ಹುರಪಳಿಸಬಹುದು.
ಉಗಿಯೆಲ್ಲ ಮಿಂಚಾಗುವದಿಲ್ಲಿ, ಇಲ್ಲಿಗೊ! ಸದ್ದಿಲ್ಲದೆ ತಮ್ಮ ಮೈಸುತ್ತ ಸುಳುಸುಳು ತಿರುಗುತ್ತ
ಬಿದ್ದುಕೊಂಡಿವೆ ಮೀನದಂಥ ಪ್ರಾಣಿಗಳು: ತಡವಬೇಡಿವುಗಳ ಹಸಿವನು,
ಉಗಿಮಾಡಿ ನುಗಿಸಬಹುದು ನಿನ್ನನು. ಮತ್ತಿಲ್ಲಿ! ಎಚ್ಚರಿಕೆ!
ಸುಧನ್ವನ ಕಾಸಿದಂಥ ಕೊಪ್ಪರಿಗೆಗಳಲಿ ಗಪ್ಪಾಗಬಹುದು ನೀನು!
ಮುಟ್ಟಬೇಡ ಆ ಹುಟ್ಟನು; ತರುವದು ನಿನ್ನ ಸಾವನದು ನಿಮಿಷದಲಿ.

ಧಗಧಗಿಸುವ ಸೆಕೆಯಲ್ಲಿ ಬೂದಿಯಾಗಿ ಬಿದ್ದೀ ನೀನು
ನಿಂತರೆ ಟರ್ಬ್ಬೆನಿನ ಹತ್ತಿರ!
ಹಲ್ಲುಗಟಕರಿಸಿ ಸೆಟೆದು ಮ೦ಜುಗಲ್ಲಾಗಿ ನಿಂತೀ ನೀನು
ಹೋದರೆ ಮಂಜಿನಾಗಾರಕೆ!
ಟಕಮಕನೆ ತಿರುಗಿ ಟಕ್‌ ಟಕ್‌ ಎಂದು ಶಕುನದ ಹಕ್ಕಿಯಂತೆ ಕಟಿಯುತಿದೆ ನೋಡು
ತಿರುಗುಮುರುಗಳೆಯುವ ತಿರುಪೊಂದು,
ಲೊಚ್‌ ಲೊಚ್‌ ಎಂದು ಹಿರಿಹಲ್ಲಿಯಂತೆ ಲೊಚಗುಡುತಿದೆ ನೋಡು
ಬೇರೊಂದು ಬಗೆಯ ಮಾಪೊಂದು!
ಹಸಿರು ಕೆಂಪು ಮಾಟದ ಗೊಂಬಿಗಳು ಮೂಡಿ ಮತ್ತೆ ಮಾಯವಾಗುತಿಹವಿಲ್ಲಿ
ಆಹುತಿಗಾಗಿ ಹಾತೊರೆದ ಮರುಳ್ಗಳ ಕುಣಿತ ನಡೆದಿಹುದಿಲ್ಲಿ!
ಅಯ್ಯೋ! ದೇವನಿಂದ ಜೀವಗುವರನನೆಳೆತಂದು
ನೀರುನೆಲದ ಮಮತೆಯ ಒಡಿಸಿ ಕೊಲ್ಲಲು ಹಾಕಿದ ಹೊಂಚಿದು ಕಾಣಿರೊ!
ಯಾವ ಮಾಂತ್ರಿಕನ ಮೋಸವಿದು? ಯಾವ ಯಾಂತ್ರಿಕನ ಕೃತಿಯಿದು?
ಹೇಗೆ ಬಂದೆನಿಲ್ಲಿ? ದಾರಿ ಯಾವುದು ಹೊರಗೆ? ಏನಿದು? ಏಕಿದು?
ಕಾಗೆಗಳ ಹಿಂಡಿನಲಿ ಸಿಕ್ಕ ಪರಪುಟ್ಟನಂತೆ ವಿಲಿವಿಲಿ ಒದ್ದಾಡಿದೆ,
ಅತ್ತುಕರೆದೆ, ಚೀರಿದೆ, ಹೆಬ್ಬಾವು ಬಂದು ಸುತ್ತಿದವು,
ಮೀನು ಬಂದು ಮುತ್ತಿದವು, ಗಾಲಿ ಬಂದು ಎತ್ತಿದವು,-
ನಿಲ್ಲಲು ನೆಲವಿಲ್ಲದಾಯ್ಕು, ಮರೆಹೊಗಲು ಮರುಕವಿಲ್ಲದಾಯ್ತು, ಕಣ್ಗೆ-ಕತ್ತಲೆಯಾಯ್ಕು-
ಅಯ್ಯೋ! ಸತ್ತೆ! ಸತ್ತೆ! ಸತ್ತೆ!!

ಅಲ್ಲ! ನರಕವಲ್ಲವಿದು: ಮಾನವನು ನಿರ್ಮಿಸಿದ ಯಂತ್ರಶಾಲೆ,-
ನಿಯಮಗಳನು ಪಾಲಿಸುವದಿದು : ಕಿವಿಯಲುಸುರಿದಂತೆ ಆಲಿಸುವದು.
ಮುಗಿಲೊಳಗಿಂದ ಕಪ್ತಾನನೆಳೆದ ಗೆರೆಯನು ದಾಟಿಲಾರದಿದು.
ಮತ್ತಿಲ್ಲಿ ನೋಡು : ದುಡಿಯುವರು ನಿನ್ನಂಥ ಮಾನವರಿಲ್ಲಿ ಸಂಬಳಕಾಗಿ.
ಈ ಮಹಾಯಂತ್ರದಿಂದ ಮುನ್ನಡೆಯುವದು ಹಡಗ,-
ಇಡಿಯ ಪಟ್ಟಣವೊಂದು ತೇಲುವದು ನೀರ ಮೇಲೆ!
ಇದು ನರಕವೆನ್ನುವದು ಕುರುಡುತನ, ಅಜ್ಞಾನ.
ಅಲ್ಲಿ ಮೇಲಿನ ಮಹಲಿನಲಿ ಕುಳಿತಿಹನು ನೋಡು ಕಪ್ತಾನನು,-
ಈ ಸೃಷ್ಟಿಯ ವಿಷ್ಣುವೀ ಜ್ಞಾನದ ಮಹರ್‍ಷಿ!
ಅವನ ಕೋಣೆಯಲ್ಲಿ ಸಂಚಿತವಹುದೀ ಯಂತ್ರದ ಮೂಲಮಂತ್ರ-
ವೀ ರಾಜ್ಯದ ಸೂತ್ರಗಳು, ರಾಕ್ಷಸೀ ವ್ಯಾಪಾರವಿದನು-
ಮತ್ತೀ ನಾವಿಗರ ಕ್ಷಾತ್ರ ತೇಜವನು-
ಅಂಕಿತದಲಿಡಬಹುದು ಅವನ ಬ್ರಹ್ಮಜ್ಞಾನ!
ಕಂಡಿರುವರಾರದನು? ಹಿತಕಾಗಿ ವ್ಯಯವಾಗುವೀ ತಾಮಸೀ ಶಕ್ತಿ
ರುದ್ರ ಭಯಂಕರವಾಗಬಹುದು, ಮುಂದೆ ಬೆಂಕಿಯ ಮಳೆಗರೆಯಬಹುದು.
ಇಂದು ಹೊಳೆದ ಚಮತ್ಕೃತಿಯೆ ಮುಳುವಾಗಬಹುದು ಮಾನವಗೆ ನಾಳೆ!
ತನ್ನ ತಂದೆಯನೆ ಮೆಟ್ಟಿ ತುಳಿಯಬಹುದದು ಬಬ್ರುವಾಹನನಂತೆ:
ಮುಳುಗಿಸಿಹುದಿಂದು ಮಾನವ ಜಾತಿಯನು ದಾಸ್ಯವೃತ್ತಿಯಲ್ಲಿ,
ಯುದ್ಧಗಳ ಪುನರಾವೃತ್ತಿಯಲ್ಲಿ, ನಾಳೆ ಸಂಹರಿಸಲದನು ಸಂಪೂರ್ಣ,-
ಆಗ ಮನುವಂಶವನು ಮತ್ತೆ ಬದುಕಿಸಬಲ್ಲ ಕೃಷ್ಣನಾರು?

ಏನಿಹುದೊ ದೈವದ ಮಡಿಲಲ್ಲಿ, ಇದ್ದಲ್ಲಿಯೇ ಮಡಗಿರಲಿ!
ಕಾಲ ಬರುವ ಮುನ್ನ ಕೀಳಬೇಡದನು ಸೋಜಿಗಕಾಗಿ.
ಕಾವ್ಯವನು ಬಗೆ,-ಅದರ ಪರಿಣಾಮ ಎಷ್ಟುಪಕಾರಿ,
ಎಷ್ಟುಪಕಾರಿಯೆಂಬುದನು ಹೇಳಬಲ್ಲವರಾರು?
ಎಲ್ಲದರ ದೈವದಂತಿಹುದೀ ವಿಜ್ಞಾನಚಮತ್ಕೃತಿಯ ದೈವ.
ಎಲ್ಲ ದೈವಾಧೀನ. ಫಲಜ್ಯೋತಿಷದ ಹಾದಿಯನೆ ಬಿಟ್ಟು
ಆಗು-ಹೋಗುವದರ ಸಾಮುದ್ರಿಕವನೆ ತೊರೆದು
ನೋಡು ಸಮುದ್ರವ ಕೊರೆದು ನಡೆದೀ ಮಹಾಯಂತ್ರವನು!
ಅನುಭವಿಸದರ ರುದ್ರಭಯಂಕರ ಸೌಂದರ್ಯವನು,
ಭವ್ಯ ವಿಭವವನು, ಕ್ರಮವನು, ಸಿಸ್ತನು!
ಯಂತ್ರಾಗಾರವಹುದಿದು ಕಬ್ಬಿಣದಿ ವಿಜ್ಞಾನ-ಕವಿಯೊರೆದ ಮಹಾಕಾವ್ಯ!
‘ಕಬ್ಬಿಗರ ಕಾವ’ವ ತಿಳಿದವನೆ! ತಿಳಿಯೀ ಕಬ್ಬಿಣದ ಕಾವ!
ಪದವಿಲಾಸವನರಿತವನೆ! ಕುರಿಯೀ ಧಾತುವಿನ ಹದವ!
ಇಲ್ಲಿದೆ ಜಕ್ಕಣಾರ್ಯರ ವಾಸ್ತುಶಿಲ್ಪ, ರವೀಂದ್ರರ ಚಿತ್ರಕಲೆ,
‘ಲೇಒಕೂಒನ್‌’ದಲ್ಲಿಯ ಮೂರ್ತಿಶಿಲ್ಪ, ತಾಂಡವನೃತ್ಯದ ನೆಲೆ,
ಪಂಪನ ಕಾವ್ಯರಚನೆಯ ಮಹಾದ್ಭುತ! ಕಲ್ಲು ಮಣ್ಣಿನಲ್ಲಿ,
ಬಣ್ಣದಲ್ಲಿ, ವರ್ಣಾಕ್ಷರದಲ್ಲಿ, ಮೆಯ್ಯ ವಿಧವಿಧದ ನಿಲುವಿನಲ್ಲಿ,-
ತನ್ನಲಿಹ ಬುದ್ಧಿ ವೈಭವವನರಳಿಸಲು ಬಾರದೆ
ಕಟ್ಟಿದನು ವಿಜ್ಞಾನಮಹರ್ಷಿ ಕಬ್ಬಿಣದಲೀ ಕಟ್ಟು ಕಥೆಯ!
ಅತಿ ಸರಸವಾಗಿ ಮಿಡಿದೀ ವೀಣೆಯನು-
ಗುರುತಿಸಿ ಸ್ವರಗಳನು ಕೈಯ್ಯಾಡಿಸೀ ಪಿಯಾನಿನ ಮೇಲೆ-
ಕಂಡದರ ಹ್ರಸ್ವದೀರ್‍ಘವನು, ಏರಿಳಿತವನೆಲ್ಲ-
ಸರಿ-ಗಮ ಸರಿ-ಗಮ ಎಂದೊರೆವ ಭೂಪನಿವ ಕಪ್ತಾನ,-
ಸಮುದ್ರಸಂಗೀತದ ಶಾಸ್ತ್ರವನೆಲ್ಲ ಬಲ್ಲ ರಸಿಕ!
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...