ಯಾಕ ಬುದ್ದಿ ಬಾರದ
ಹರ ಹರ ನಮಾ ದೇವರಿಗೆ ಯಾಕ ನಿದ್ರಿ ತೋರದ ಪ
ಯಾಕ ಬುದ್ದಿ ಬಾರದ, ಶಿವ ನಿಮಗ್ಯಾಕ ನಿದ್ರಿ ತೋರದ
ಲೋಕದವರ ಮುಂದ ಮಾರಿತೋರಬಾರದಮ್ಮ ||ಯಾ || ೧
ಔರಂಗದಲ್ಲಿದ್ದಾರು, ಮರಾತರ ಮನೆಯ ಕದ್ದಾರು
ನಾರೀಗೊಬ್ಬಳಿಗೆ ಮೆಚ್ಚಿ ಬಳಿಗೆ ಬಾರದಿದ್ದಾರಮ್ಮ || ಯಾ || ೨
ಕಟ್ಟಿಗಿ ಮಣ್ಣ ಹೊಕ್ಕಾರು, ತಾ ಹುಟ್ಟಿಲೆ ತಿವಿಸಿಕೊಂಡಾರು
ಗಟ್ಟ್ವಾಳ ಹರಳರಮುಂದ, ಹೊಟ್ಟೆ ಹೊರಕೊಂಡ ಜಂಗಮರಮ್ಮ || ಯಾ || ೩
ಮಂಟಪದೊಳಗ ಹೊಕ್ಕಾರು, ತಾ ಮದುವೆಯ ಕೆಡಸಿ ಹೋದಾರು
ಕಂಟಕಗೇಡೆಂದು ನೆಂಟರಮುಂದ ಹೇಳ್ಯಾರಮ್ಮ || ಯಾ || ೪
ಸೂಳಿಯ ಕಂಕಣ ಕಟ್ಯಾರು, ಹೇಳಿದ ಮನೆಯ ಸುಟ್ಟಾರ
ಬೇಡ ಬೇಡಂದರ ಜೂಜನಾಡಿ ಸೋತಾರಮ್ಮ || ಯಾ || ೫
ಚೆಂಗಳಿ ಮನಿಗೆ ಹೋದಾರು, ಹಸಗೂಸಿನ ಪ್ರಾಣ ತಿಂದಾರು
ಇಳೆಯ ಚಿತ್ತರದಲ್ಲಿ ಕೆಂಪಗ ತಿದ್ದಿ ನಲಿದಾರಮ್ಮ || ಯಾ || ೬
ಮಾದೇವಿ ಮನೆಗೆ ಹೋದಾರು, ಸಣ್ಣ ಬಾಲಾಗಿ ಮೊಲೆಯನುಂಡಾರು
ದೋಸಿ ಪಿಡ್ಡಕ್ಕನ ಮನೆಗೆ ಸಿಸುವಾಗಿ ಉಂಡು ಬಂದಾರಮ್ಮ || ಯಾ || ೭
ಯಾಕ ಬುದ್ಧಿ ಬಾರದ, ಶಿವ ನಿಮಗ್ಯಾಕ ನಿದ್ರಿ ತೋರದ
ಲೋಕದವರ ಮುಂದ ಮಾರಿ ತೋರಬಾರದಮ್ಮ || ಯಾ || ೮
*****

















