ಅನಾಥೆಯಾದ ಒಬ್ಬ ಮುದುಕಿಯಿದ್ದಳು ಒಂದೂರಿನಲ್ಲಿ. ಆಕೆಗೆ ಯಾರೂ ಇರಲಿಲ್ಲ. ದಿನಾಲು ರಾಟಿಯ ಮೇಲೆ ನೂಲುವಳು. ಬಂದಷ್ಟರಲ್ಲಿ ಉದರ ನಿರ್ವಾಹ ಸಾಗಿಸುವಳು.

ರಾತ್ರಿ ಸಹ ನಿದ್ರೆ ಬರುವವರೆಗೆ ನೂಲುತ್ತ ಕುಳಿತುಕೊಳ್ಳುವಳು. ಒಂದು ದಿವಸ ರಾತ್ರಿ ಬಹಳ ಹೊತ್ತು ನೂಲುತ್ತ ಕುಳಿತಳು. ಅಂದು ಸೋಮವಾರ. ಆಕೆಗೆ ಒಪ್ಪೊತ್ತು. ಸಂಜೆಯ ಊಟವಿರಲಿಲ್ಲ. ನೂಲುವುದು ಸಾಕಾದ ಬಳಿಕ ರಾಟಿಯನ್ನು ಒತ್ತಟ್ಟಿಗೆ ಸರಿಸಿಟ್ಟು, ಕೈ ಬಾಯಿ ತೊಳಕೊಂಡು, ನೀರು ಕುಡಿಯುವುದಕ್ಕೆ ಅಣಿಯಾದಳು. ಆಕೆಯ ಬಾಯಲ್ಲಿ ಹಲ್ಲು ಇರಲಿಲ್ಲ. ಕಾಳು ನುರಿಸುವದಕ್ಕೆ ಆಗದೆ ಅಬಡು ಜಬಡು ತಿಂದು ನೀರು ಕುಡಿಯುತ್ತ – “ಏನು ಹೋದೆಯೋ ನನ್ನ ರುಚಿಗಾರ, ನನ್ನ ಸವಿಗಾರ” ಎಂದು ಮೈಮರೆತು ನುಡಿದಳು.

ಆ ಮಾತು ನೆರೆಮನೆಯವರಿಗೆ ಕೇಳಿಸಿತು. – “ಈಕೆ ಯಾರೊಡನೆ ಮಾತಾಡುತ್ತಿದ್ದಾಳೆ? ಅವನೆಂಥ ರುಚಿಗಾರ ಸವಿಗಾರ ಇದ್ದಿರಬಹುದು ಈಕೆಗೆ” ಎಂದು ಸಂಶಯ ಪಟ್ಟರು.

“ಅಜ್ಜೀ, ನೀನು ಯಾರೊಡನೆ ಮಾತಾಡುತ್ತಿರುವಿ ?” ಎಂಬ ದನಿ ನೆರೆಮನೆಯವರಿಂದ ಕೇಳಿ ಬಂತು.

“ನಾನಾರೊಡನೆ ಮಾತಾಡಲೆವ್ವ! ನನಗಾರಿದ್ದಾರೆ ?”

“ರುಚಿಗಾರ ಸವಿಗಾರ ಅಂದೆಯಲ್ಲ, ಯಾರು ಅವರು ?” ನೆರೆಮನೆಯಿಂದ ಬಂದ ಪ್ರಶ್ನೆ.

“ಇನ್ನೆಲ್ಲಿಯ ರುಚಿಗಾರ. ಇನ್ನೆಲ್ಲಿಯ ಸವಿಗಾರ ! ಹೋಗಿಬಿಟ್ಟು ಬಹಳ ದಿನಗಳಾದವು” ಮುದುಕಿಯ ಮರುನುಡಿ.

“ಹಳೆ ಗೆಳೆತನದ ನೆನಪಾದಂತೆ ತೋರುತ್ತದೆ ಮುದುಕಿಗೆ” ಎಂದುಕೊಂಡಿದ್ದಾಳೆ ನೆರೆಯವಳು. “ಹೋದವರು ಮರಳಿ ಬರಲಾರರು ಅಜ್ಜೀ. ನಾವೂ ಒಮ್ಮೆ ಅದೇ ಹಾದಿಯಲ್ಲಿ ಹೋಗತಕ್ಕವರೇ ಅಲ್ಲವೇ ?” ಎಂದಳು.

“ನಾನು ಹುಚ್ಚಿ ಸತ್ತವರನ್ನು ನೆನೆಯಲಿಲ್ಲ. ಬಿದ್ದು ಹೋದ ಹಲ್ಲುಗಳನ್ನು ನೆನಪಿಸಿಕೊಂಡು ಹಾಗೆ ನುಡಿದೆ – ಏನು ಹೋದೆಯೋ ನನ್ನ ರುಚಿಗಾರ – ಸವಿಗಾರ ಎಂದು.” ಮುದುಕಿ ಅರ್ಥವನ್ನು ಸ್ಪಷ್ಟಗೊಳಿಸಿದಳು.

“ಅಹುದೇ ಅಜ್ಜಿ ? ನಾನು ಬೇರೆಯೇ ತಿಳಿದಿದ್ದೆನಲ್ಲ !” ಎಂದು ನೆರೆಯವಳು ವಿಷಯವನ್ನು ಪೂರ್ತಿಗೊಳಿಸಿದಳು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು