
೧
ಗಡಿಯಾರದಲಿ ಗಂಟೆ ಹತ್ತಾಯಿತು!
ತಲೆ ತುಂಬಿ ನಿಂತಿರುವ ಚಿಂತೆ ಬೆಂತರನೊಡನೆ
ಕೈಯ ಕುಲುಕಿಸಿ ಕಾಲ ಗೆಲುವಾಯಿತು;
ಕುಳಿತಿರುವ ಕೋಣೆಯಲಿ ಕಂದೀಲ ದೀಪವದು
ಕುರುಡು ಕುರುಡಾಗೆನಿತೊ ಉರಿಯುತ್ತಿದೆ.
ಎಣ್ಣೆ ತೀರಿರಬಹುದೊ ಬತ್ತಿ ಕಿರಿದಾಗಿಹುದೊ
ನೋಡಬೇಕೆಂಬಾಸೆ ಬೆಳೆಯುತ್ತಿದೆ.
ಆದರೂ ಮೈತುಂಬ ಆಲಸ್ಯ ಇಳಿದಿಹುದು
ಕೈಯ ಚಾಚಲು ಮನಸು ಬರದಾಗಿದೆ;
ಪೆನ್ನಿನಲಿ ಮಸಿಯಿದ್ದರೂನೂ ಒಂದಕ್ಷರವು
ಪೂರ್ಣ ಮೂಡದೆ ಬರೆಹ ಮುನ್ನಡೆದಿದೆ.
ಈ ಹಾಳು ಕಂದೀಲು ನಿಬ್ಬು ಕೆಟ್ಟಿಹ ಪೆನ್ನು
ದಿನದಿನದ ಬಾಳಿನಲಿ ಒಂದಾಗಿವೆ;
ಬಂದ ಬಾಳನ್ನೆನಿತೊ ನೂಕಬೇಕೆನುವಂತೆ
ಭುಜಕೆ ಭುಜವನ್ನಿತ್ತು ನಿಂದಾಗಿವೆ.
೨
ಅಡುಗೆ ಮನೆಯಲಿ ಅವಳು ಹೂಂ….ಅವಳೆ ನನ್ನವಳು
ಹೊಸ ಹೆಂಡತಿ!
ಗುಣುಗಣಿಸಿ ಹಾಡುವಳು ಜಾನಪದ ಕವಯಿತ್ರಿ
ಗೌರಿ-ಗರತಿ.
ಮೆಲ್ಲ ಮೆಲ್ಲನೆ ಅವಳು ಬಂದರೀಗೇನು ಗತಿ
ಈ ಬರಹ ಇಷ್ಟಕ್ಕೆ ನಿಲ್ಲಬಹುದು;
ಗಡಿಯಾರ ಟಕಟಕಿಸಿದಂತೆ ಮನ ಟುಕುಟುಕಿಸಿ
ಬಂದರೂ ಅವಳೇನು ಮಾಡಬಹುದು?
ಎಂಬ ನಿರ್ಧಾರದಲಿ ಪೆನ್ನು ಮುಂದೋಡಿತ್ತು.
ಯಾರ ಪರವೆಯು ಅದಕೆ ಇಲ್ಲದಾಯ್ತು.
೩
ಆದರೇನೊಂದು ಚಣ ಕಳೆದುದಾಯಿತೊ ಏನೊ
ಬಾಗಿಲಲಿ ಕೈಬಳೆಯ ಮಧುರ ನಾದ!
ರೋಮ ರೋಮಗಳೆಲ್ಲ ಕಿವಿಯಾಗಿ ಕಣ್ಣಾಗಿ
ಅವಳ ಬರುವಿಕೆಯನ್ನು ಪ್ರತಿರೂಪಿಸಿ;
ರೈಲು ನಿಲ್ದಾಣದಲ್ಲಿ ಗಾಡಿ ಬರುತಿರುವಾಗ
ಸೂಚನೆಯ ಗಂಟೆಯೊಲು ಢಣ್… ಢಣಣಿಸಿ!
೪
ಹೊರಳಿ ನೋಡಿತು ಮನಸು……..
ಮಲಗಿರುವ ನನ್ನವಳಿಗೇನೊ ಕನಸು
ಹುಣ್ಣಿಮೆಯ ಚಂದ್ರನಿಗು ಇಲ್ಲವೇ ಸೌಂದರ್ಯ
ಹಣೆಯ ಕುಂಕುಮ ಚಂದ್ರನಂತೆ ನೋಡು:
ಹೊಳೆವ ಗಾರುಡಿಗಣ್ಣು ಮುದ್ದಾದ ಮುಂಗುರುಳು
ಮನನ ಮೋಹಿಸುತ್ತಿರುವ ಎದೆಗಳೆರಡು.
ಮಗ್ಗುಲಲಿ ನೀಳಜಡೆ-ಮೈಸೋಂಕಿ ಮೈಮರೆತು
ತಳಕು ಹಾಕಿರುವೆರಡು ಕರಿನಾಗರ;
ನಿರ್ಧಾರ ಕರಕರಗಿ ಹರಿಯತೊಡಗಿತು ಚಿತ್ತ
ಮಧುವನದ ನಾಡಿನಲ್ಲಿ ಸ್ನೇಹಪೂರ.
೫
ಕಣ್ಣ ಮಿಟಕಿಸಿ ಕುರುಡು ದೀಪವಾರಿತು ಪಾಪ
ಪೆನ್ನು ಉರುಳಿತು ಹೊರಳಿ ಮೂರು ಸುತ್ತು
ಕಾಗದದ ಮೇಲೆಲ್ಲ ಚಿತ್ತಪಟ್ಟು
ಡೊಂಬರಾಟದ ಗತ್ತು ಅದಕೆ ಗೊತ್ತು!
ಬಾಯ್-ತುಂಬ ಆಕಳಿಸಿ ಕೊನೆಯ ಪ್ರಾರ್ಥನೆ ಸಲ್ಲಿಸಿ
ದೇಹ ಹಾಸಿಗೆ ಹುಡುಕಿ ಹೊರಳಾಡಿತು;
ಬಂದಿರುವ ಆಲಸ್ಯ ಗಾಢ ಸಮ್ಮಿಲನದಲಿ
ಕತ್ತಲೆಯ ಮಸಿಯಲ್ಲಿ ಮರೆಯಾಯಿತು.
*****
















