
ಬೇಸಗೆಯಲಿ ಸಂಜೆಯಾಯಿತು; ಕೆಲಸವ
ಮುತ್ತಜ್ಜ ತೀರಿಸಿಕೊಂಡ.
ಹಟ್ಟಿಯ ಬಾಗಿಲ ಬಳಿಯಲಿ ನೋಡುತ
ಹೊಂಬಿಸಿಲಲಿ ಕುಳಿತುಕೊಂಡ.
ಅಲ್ಲಿಯೆ ಹಸುರಮೇಲಾಡುತಲಿದ್ದಳು
ಅಜ್ಜನ ಮುದ್ದಿನ ಪುಟ್ಟ ಮೊಮ್ಮಗಳು.
ಕಂಡಳು ಕೂಗಿಕೊಂಡಣ್ಣನು ಬರುವುದ
ಆಡುತ, ಹೊಳೆಯಂಚಿನಿಂದ
ದಪ್ಪಗೆ, ದುಂಡಗೆ, ಏನನೊ ಒಂದನು
ಉರುಳಿಸಿಕೊಂಡವ ತಂದ.
ದಪ್ಪಗೆ, ನುಣ್ಣಗೆ, ದುಂಡಗೆ ಇರುವುದು,
ಅಜ್ಜ ಇದೇನೆಂದು ಕೇಳಲು ಬಂದ.
ಅಜ್ಜ ತೆಗೆದುಕೊಂಡ ಕೈಗದ, ಹುಡುಗನು
ನಿಂತ ಹತ್ತಿರ ಕಿವಿಗೊಟ್ಟು.
ನೋಡಿ, ಆ ಮುದುಕನು ತಲೆಯನಲ್ಲಾಡಿಸಿ,
ಮರುಗುತ ನಿಟ್ಟುಸಿರಿಟ್ಟು,
ಪಾಪ, ಇದಾರದೋ ತಲೆಯೋಡು-ಯಾವನೊ
ಬಿದ್ದವನಾ ದೊಡ್ಡ ಜಯದಲಿ ಎಂದ.
ಎಷ್ಟೋ ನೋಡಿರುವೆನು ನಮ್ಮ ತೋಟದಲೆಲ್ಲ,
ಬಿಸುಡುವೆನೊಕ್ಕಡೆಗಿಕ್ಕಿ.
ಉಳುತ ಹೋದಾಗೆಲ್ಲ ಮೇಲಕೆ ಬರುವುವು
ನೇಗಿಲ ಕುಳದಲಿ ಸಿಕ್ಕಿ.
ಸಾವಿರಗಟ್ಟಳೆ ಜನಗಳು ಕೊಲೆಯಾಗಿ
ಬಿದ್ದವರಾ ದೊಡ್ಡ ಜಯದಲಿ ಎಂದ.
ಆ ಕಥೆ ಏನದು? ನಮಗೆಲ್ಲ ಹೇಳಜ್ಜ ,
ಎಂದನು ಪುಟ್ಟ ಮೊಮ್ಮಗನು.
ಅಚ್ಚರಿ ಕಾಯುತ, ಅರಳಿದ ಕಣ್ಣೆತ್ತಿ
ನಿಂದಳು ಪುಟ್ಟ ಮೊಮ್ಮಗಳು.
ಯುದ್ಧದ ಕಥೆಯೇನು ನಮಗೆಲ್ಲ ಹೇಳಜ್ಜ
ಏತಕೆ ಕಾದಾಡಿದರೊ ಅದ ಹೇಳು.
ಮುತ್ತಜ್ಜ ಹೇಳಿದ – ಇಂಗ್ಲಿಷರಿರುವರೆ,
ಮುರಿದರು ಫ್ರೆಂಚರ ಪಡೆಯ.
ಏತಕೆ ಕಾದಾಡಿದರೊ ಅದ ನಾ ಬೇರೆ
ಕಾಣೆನು ಚೆನ್ನಾಗಿ ಅಡಿಯ.
ಆದರೆ ಯಾರನೆ ಕೇಳವರೆಲ್ಲರು
ಲೋಕಪ್ರಸಿದ್ದಿಯ ಜಯವೆಂಬರೆಂದ.
ನಮ್ಮಯ್ಯ ಗುಡಿಸಲ ಮಾಡಿಕೊಂಡಿದ್ದನು
ಆ ಹೊಳೆಯಂಚಿನನಾಗ,
ಸೂರೆ ಹೊಡೆದು ಬೀಡ ನೆಲಸಮ ಸುಟ್ಟರು;
ತಲೆಯ ತಪ್ಪಿಸಿಕೊಂಡು ಬೇಗ
ಹೆಂಡತಿ ಮಕ್ಕಳ ಕಟ್ಟಿಕೊಂಡೋಡಿದ
ನಿಂತಲ್ಲಿ ನಿಲ್ಲದೆ ನೆಲೆಗಾಣದಲೆದ.
ಬೆಂಕಿಯ, ಕತ್ತಿಯ ಬಾಯಿಗೆ ಬಲಿಯಾಗಿ
ದೇಶವೆ ಹಾಳಾಯಿತೆಲ್ಲ.
ತುಂಬುಬಸಿರಿಯರು, ಹಾಲುಮಕ್ಕಳು ಸತ್ತ
ಲೆಕ್ಕವ ದೇವರೆ ಬಲ್ಲ
ಅದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ಧಿಯ ಜಯದಲಿ ಎಂದ.
ನೋಡಲುಬಾರದು ಎಂಬರು ಘೋರವ
ಗೆದ್ದ ಮೇಲಾರಣದಲ್ಲಿ,
ಸಾವಿರಗಟ್ಟಳೆ ಹೆಣಗಳು ಕೊಳೆಯುತ
ಬಿಸಿಲಲಿ ಬಿದ್ದಿದ್ದುವಲ್ಲಿ.
ಆದರಂತಹುದೆಷ್ಟೊ ಆಗಲೇಬೇಕಲ್ಲ
ಲೋಕಪ್ರಸಿದ್ದಿಯ ಜಯದಲಿ ಎಂದ.
ದೇಶವೆ ಹೊಗಳಿತು ಗೆದ್ದ ನಾಯಕರನು,
ಸುರಿದುವು ಹೂವು ಮಳೆಗಳು-
ಛೀ ತೆಗೆ, ಏನದು, ಬಲುಕೆಟ್ಟ ಕೆಲಸವು!
ಎಂದಳು ಪುಟ್ಟ ಮೊಮ್ಮಗಳು.
ಅಲ್ಲವೆ, ಅಲ್ಲವೆ, ಪುಟ್ಟ ಹುಡುಗಿ. ಕೇಳು.
ಲೋಕಪ್ರಸಿದ್ಧಿಯ ಜಯವದು ಎಂದ.
ಎಲ್ಲರು ಹೊಗಳಿದರಾ ದೊಡ್ಡ ಯುದ್ಧವ
ಗೆದ್ದವರನು ಶೂರರನ್ನು-
ಒಳ್ಳೆಯದದರಿಂದ ಕಡೆಗಾದುದೇನಜ್ಜ?
ಎಂದನು ಪುಟ್ಟ ಮೊಮ್ಮಗನು.
ಅದ ನಾನು ಬಲ್ಲೆನೆ? ಯಾರನೆ ಕೇಳದು
ಲೋಕಪ್ರಸಿದ್ಧಿಯ ಜಯವೆಂಬರೆಂದ.
*****
SOUTHEY (1774 -1843) : After Blenheim















