
ಆದಿಯಲಿ, ದೈವಾಜ್ಞೆಯಲ್ಲಿ ಬ್ರಿಟನ್ ಭೂಮಾತೆ
ನೀಲಜಲರಾಶಿಯಿಂದುದ್ಭವಿಸಿದಂದು,
ಆದರಿಸಿ, ಅಭಿಮಾನದೇವತೆಗಳೊಲಿದು, ದಯ
ಪಾಲಿಸಿದರಾಕೆಗೀ ಶಾಸನವ ಹರಸಿ-
“ಆಳೌ, ಬ್ರಿಟಾನಿಯಾ! ಆಳ ತೆರೆಗಳನು!
ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!”
ನಿನ್ನ ಪುಣ್ಯದ ಪಡೆದು ಬಾರದಿಹ ಜನವೆಲ್ಲ
ಕ್ರೂರರಾಜರ ಬಾಧೆಯಿಂದ ಕೃಶವಾಗಿ,
ನಿನ್ನ ಮಹಿಮೆಗೆ ಹೆದರಿ, ಕರುಬಿ, ಮಿಡಿಯುತ್ತಿರಲು,
ಧೀರೆ, ಸ್ವಾತಂತ್ರ್ಯದಲಿ ನೀನು ವರ್ಧಿಸುವೆ!
ವೈರಿಗಳು ಹೊಡೆದಷ್ಟು, ಘೋರರೂಪವ ತಾಳಿ,
ಧೈರ್ಯಗಾಂಭೀರ್ಯದಲಿ ನಸುನಗುತ ನಿಲುವೆ:
ಕೀರಿ, ಗಗನವ ಸೀಳಿ, ಬಿರುಗಾಳಿ ಕಿತ್ತಷ್ಟು,
ಬೇರೂರಿಕೊಳುವಂತೆ ನಿನ್ನಡವಿತೇಗು!
ಮಲೆತು ದುರ್ನೀತಿಯಲಿ ನಿನ್ನ ರಾಜರು ಕೆಟ್ಟು,
ಹಿಡಿದು ಸಂಕಲೆಯಿಟ್ಟು ಜಗ್ಗಿಸಲು ಬರಲು,
ಮಲಗಿದ್ದ, ಸಿಂಹದಂತುರಿದೆದ್ದು ತೆಗೆದೋದರಿ,
ಬಿಡುಗಡೆಯ ಕೈಕೊಂಡು ಕೀರ್ತಿಯನು ಪಡೆವ!
ನಿನ್ನದೆಯೆ ಹೊಂಬಣ್ಣ ತುಂಬಿ ತೂಗುವ ಬಯಲು,
ನಿನ್ನದೆಯೆ ವರ್ತಕರ ಸಿರಿ ಮೆರೆವ ಹೊಳಲು;
ನಿನ್ನದೆಯೆ ಸಾಗರದ ಸತ್ವಸಾಮ್ರಾಜ್ಯವೂ,
ನಿನ್ನದೆಯೆ ತೆರೆ ಬಳಸಿಬರುವೆಲ್ಲ ಕರೆಯು!
ವಾಣಿಯರು ಸ್ವಾತಂತ್ರ್ಯ ದಕ್ಕರೆಗೆ ನಡೆತಂದು
ನಿನ್ನ ಭೋಗದ ಭೂಮಿಯಲ್ಲೆ ನೆಲಸುವರು;
ರಾಣಿದೀವಿಯೆ, ನಿನ್ನ ಚೆಲುವೆಯರ ಪ್ರೇಮದಲಿ
ನಿನ್ನ ವೀರರು ಧರ್ಮವನ್ನು ಕಾಯುತಿಹರು!
ಆಳೌ, ಬ್ರಿಟಾನಿಯಾ! ಆಳು ತೆರೆಗಳನು!
ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!”
*****
THOMSON (1700 -1748) : Rule Britannia















