
ಕಾಳೆ, ಹರೆ, ಕೊಂಬುಗಳ
ಏಳಿ, ಮೊಳಗಿ, ಏಳಿ,
ನಾಡುಗಳ ಕುಳಗಳನು
ಕೂಡಿಕೊಳ ಹೇಳಿ.
ಬನ್ನಿರಣ್ಣ, ಬನ್ನಿರಣ್ಣ,
ಅದೊ ಕೂಗು, ಕೇಳಿ.
ಮನ್ನೆಯರ, ಬಂಟರಿರ,
ಒದಗಿ, ಏಳಿ, ಏಳಿ.
ಕಣಿವೆಗಳ, ಬೆಟ್ಟಗಳ
ಗಡಿಯಿಂದ ಬನ್ನಿ.
ಕಣೆ, ಬಿಲ್ಲು, ಕುಡುಗೋಲು,
ಕೊಡಲಿಗಳ ತನ್ನಿ.
ಕೆಚ್ಚೆದೆಯ ಮಕ್ಕಳಿರ,
ಮೈಜೋಡ ತೊಡಿರೊ!
ಬಿಚ್ಚುಗತ್ತಿಯ ಝಳವ
ಕೈಝಾಡಿಸಿಡಿರೋ!
ಬಿಡಿ ಇರಲಿ ಮಂದೆಗಳು,
ಹೊಸ ಉತ್ತ ಮಣ್ಣು.
ಬಿಡಿ ಇರಲಿ ಸತ್ತ ಹೆಣ
ಹಸೆಮಣೆಯ ಹೆಣ್ಣು
ಬಿಡಿ ಹುಲ್ಲೆ, ಬಿಡಿ ಹಂದಿ,
ಬಲೆದೋಣಿಗಳನು,
ಹಿಡಿದುಕೊಳಿ ಮುಟ್ಟುಗಳ,
ಹಲಗೆ ಕತ್ತಿಯನು.
ಕಾಡ ಸೀಳುತ ಗಾಳಿ
ಬರುವಂತೆ ಬನ್ನಿ
ಓಡ ಕೊಚ್ಚುತ ಕಡಲು
ಬರುವಂತೆ ಬನ್ನಿ.
ಓಡಿ ಬನ್ನಿ, ಓಡಿ ಬನ್ನಿ,
ಓಡಿ ಓಡಿ ಬನ್ನಿ
ಗೌಡ, ಕುಳ ; ಆಳು , ದಣಿ ;
ನಾಡ ದಳ ಬನ್ನಿ.
ಬಂದರಣ್ಣ ಬಂದರಣ್ಣ
ಕಿಕ್ಕಿರಿದು ನೆರೆದು,
ಚೆಂದದಲಿ ಹೂವು ಗರಿ
ಸೆಕ್ಕಿ ತಲೆ ಮೆರೆದು-
ಹಿರಿ, ಕತ್ತಿ! ಇರಲಿ, ಸುರಗಿ!
ಸರಿ, ಮುಂದೆ. ಆಳು!
ಅರಿಯೆದೆಯ ಬಿರಿ, ಕಾಳೆ!
ತರಿ, ಕೊಲ್ಲ ಹೇಳು!
*****
SCOTT (1771 -1832 ) : Gathering Song















