ಆಗತಾನೆ ಕೆಲಸ ಸಿಕ್ಕ ಖುಷಿಯಲ್ಲಿದ್ದೆ. ಇನ್ನೇನು ಎರಡು ದಿನಗಳಲ್ಲಿ ಹಾಸನದ ಕಡೆ ರೈಲು ಹತ್ತುವುದಿತ್ತು. ಇದ್ದಕ್ಕಿದ್ದಂತೆ ೨-೩ ಜನ ನಮ್ಮ ಮನೆಗೆ ಬಂದವರೆ ಕಳ್ಳ ಸನ್ಯಾಸಿಗಳಿಗೆ ಅಡ್ಡ ಬೀಳವಂತೆ ನನ್ನ ಕಾಲಿಗೆ ಸಾಷ್ಟಾಂಗ ಹಾಕಿದರು. ನನಗೆ ಗಾಬರಿಯ ಜೊತೆಗೆ ಆಶ್ಚರ್‍ಯ. ನಾನು ಯಾವ ಪವಾಡವನ್ನು ಮಾಡಿರಲಿಲ್ಲ. ಅಥವಾ ಕಳ್ಳ ಸನ್ಯಾಸಿಯೂ ಆಗಿರಲಿಲ್ಲ. ಮನೆಯ ಜನ ಕುತೂಹಲದಿಂದ “ಯಾಕಿಂಗ ಅಡ್ಡ ಬೀಳ್ತಿರಿ?” ಎಂದರು. ಬಂದವರಲ್ಲಿ ಒಬ್ಬ ಮುಂದೆ ಬಂದ. ಥೇಟ್ ಭರಾಗಿಯಂಥಾ ಮುಖ ಕೆಂಡದ ಕಣ್ಣುಗಳು, ಅಜಾನುಬಾಹು. “ನಿಮ್ಮಗನಿಗೆ ಭೂಮಿಲಿ ಇರೋ ಕೊಪ್ಪರಿಗೆ ಹಣ, ಎಲ್ಲಿದೆ ಅಂತ ಕಾಣ್ತಾದೆ…… ಅಂಜನ ಹರೀತದೆ…. ಹಸಿರುಕಣ್ಣಿನವರಿಗೆ ಮಾತ್ರ ಇದು ಸಾಧ್ಯ. ದಯಮಾಡಿ ನನ್ನ ಜತೆ ಕಳಿಸಿಕೊಡ್ರಿ…” ಎಂದು ನಮ್ಮ ತಾಯಿಗೆ ಗೋಗರೆದ. ನನಗೆ ಹಸಿರುಗಣ್ಣಿಗಳಿರುವುದು ಖರೆ, ಆದ್ರೆ ಈವರೆಗೆ ಭೂಮಿಯಲ್ಲಿರೋ ಯಾವ ಕೊಪ್ಪರಿಗೆ ಹಣಾನೂ ಕಂಡಿಲ್ಲ… ನನಗೆ ಪುರುಸೊತ್ತಿಲ್ಲ ನನಗೆ ಕೆಲ್ಸ ಸಿಕ್ಕಿದೆ ಹಾಸನಕ್ಕೆ ಹೋಗಬೇಕಾಗಿದೆ. ನಾನು ಬರಲಿಕ್ಕಾಗೋದಿಲ್ಲವೆಂದೆ. ಆಗ ಮೂರು ಜನ ನಮ್ಮ ತಾಯಿಯವರಿಗೆ ದೈನಾಶಿಯಾಗಿ ಬೇಡಿ, ಕಾಡಿ ಒಪ್ಪಿಸಿದರು. ಮಾತ್ರವಲ್ಲ, “ಕೊಪ್ಪರಿಗೆ ಹಣದಲ್ಲಿ ನಿಮಗಿಷ್ಟು ಕೊಡ್ತೀವಿ…..” ಎಂದ್ರು, ಕಷ್ಟಪಡದೇ ಮನೆಗೆ ಬಂಗಾರ ಬರ್‍ತದೆ ಅಂದ್ರೆ ಯಾರೂ ಬ್ಯಾಡಂತಾರೆ…? ಭಾಗ್ಯಲಕ್ಷ್ಮಿ… ಇಡೀ ಬದುಕನ್ನೇ ಸವೆಸಿದರೂ ಒಂದು ತೊಲಿ ಬಂಗಾರ ಕಾಣದ ಹಳ್ಳಿಯ ಬಡ ಕುಟುಂಬವಾದ ನಮ್ಮ ಮನೆಯವರಿಗೆ “ಕೊಪ್ಪರಿಗೆ ಹಣದಲ್ಲಿ ಪಾಲು ಸಿಗ್ತಿದೆ, ಅಂದ್ರೆ ಬಿಡ್ತಾರೆಯೆ?” ಆಸೆ ಚಿಗುರೊಡೆಯಿತು.
“ಹೋಗಪ್ಪ ಒಬ್ಬೊಬ್ರ ಕಾಲಗುಣ. ಈಗ ಚಲೊಕಾಲದ ಬಾಗಿಲು ತೆರೆದೈತಿ ಅಂತ ಕಾಣ್ತದೆ… ಹಾಸನಕ್ಕೆ ಹೋಗೋದು ಇನ್ನೂ ೨ ದಿನ ತಡ ಐತಿ, ಹೋಗಿ ಬಾ” ಅಂದ್ರು. ಆಗ ನಾನಿನ್ನೂ ಪರತಂತ್ರ ಅಲ್ಲವೆ? ಮಜಾ ಅನ್ಸಿತು. ನನಗೊತ್ತಿಲ್ಲದ್ದನ್ನು ಇವ್ರು ಕಂಡಿರುವಾಗ ನೋಡೇ ಬಿಡುವುದು ಒಳ್ಳೆಯದೆಂದು ಅವರ ಬೆನ್ನು ಹತ್ತಿದೆ. ಎತ್ತಿನಗಾಡಿಯಲ್ಲಿ ಕೂರಿಸಿದ ನನ್ನನ್ನ ಅವ್ರು ಬಹಳ ಗೌರವ ಕೊಟ್ಟು ಬೆಣ್ಣೆಯಂತಹ ಮಾತನಾಡಿದ್ರು. ಅಂತೂ ಊರು ಬಂತು. ಕೆಳಗಿಳಿದ ತಕ್ಷಣ ಒಂದು ಮನೆಯ ಜನ ನನ್ನನ್ನ ಕಂಡೊಡನೆ ಸಾಕ್ಷಾತ್ ದೇವರನ್ನೇ ನೋಡಿದ ಖುಷಿ ವ್ಯಕ್ತಪಡಿಸಿದ್ರು, ಕರ್‍ಕೊಂಡು ಹೋಗಿ ಮಂಚದ ಮೇಲೆ ಕೂಡ್ರಿಸಿ ಹಾಲು, ಹಣ್ಣು, ಕೊಟ್ಟರು. ನಾನು ಒಂಥರಾ ಅವರ ದೃಷ್ಟಿಯಲ್ಲಿ ಅತಿ ಮಾನವನಂತೆ ಕಂಡಿದ್ದೆ. ನನ್ನಿಂದ ದ್ರವ್ಯ ತೆಗೆಸಿ ಕೋಟ್ಯಾಧಿಪತಿಯಾಗುವ ಕನಸಿನಲ್ಲಿ ಆ ಮನೆಯ ಒಡೆಯ ನನಗೆ “ನಿಮ್ಮಂತವ್ರು ಸಿಗೋದೇ ಅಪರೂಪ. ನಮ್ಮ ಪುಣ್ಯ ನೀವು ದೇವ್ರೇ ದೊರೆತಂತಾಯ್ತು…” ಎಂದು ಕೈ ಮುಗಿದು ಹೇಳಿದ. ನನ್ನನ್ನು ಕರೆದೊಯ್ದ ಮೂರು ಜನರಲ್ಲಿ ಇಬ್ಬರು ಮಂಚದ ಕೆಳಗೆ ಚಾಪೆ ಮೇಲೆ ಕೂತಿದ್ರು. ಅವ್ರಲ್ಲಿ ಒಬ್ಬ ಕೇರಳದವ್ರು, ಮಂತ್ರ ಮಾಟ ಮಾಡವ್ನು. ಇನ್ನೊಬ್ಬ ದ್ರವ್ಯನಾ ಭೂಮಿಯಿಂದ ಹೊರಗಡೆ ತೆಗೆಯುವಾಗ ಬರುವ ಆಪತ್ತುಗಳನ್ನು ಮಂತ್ರಶಕ್ತಿಯಿಂದ ನಿಗ್ರಹಿಸುವವನು. (ದ್ರವ್ಯವನ್ನು ಕಾಯುತ್ತಿರುವ ಕಾಳಿಂಗಸರ್‍ಪ, ಹುಲಿ, ಭೂತಗಳನ್ನು ಸದೆಬಡಿಯುವವನು) ಎಂದು ಮನೆಯಾತ ನನಗೆ ಪರಿಚಯಿಸಿದ. ಪಡ್ಡೆ ಹುಡುಗನಾಗಿದ್ದ ನಾನು ಸಂಪ್ರದಾಯದಲ್ಲೇ ಬೆಳೆದು ಬಂದದ್ದರಿಂದ ಭೂತ, ಪ್ರೇತ, ಮಂತ್ರ, ಎಂದಾಕ್ಷಣ ಹೆದರಿಕೊಂಡೆ. ಮೇಲ್ನೋಟದಲ್ಲಿಯೂ ಸಹ ಆ ಎರಡು ವ್ಯಕ್ತಿಗಳು ನನ್ನ ಕಣ್ಣೆದುರಿಗೆ ಕೀಚಕ, ಭಕಾಸುರರಂತೆ ಕಂಡದ್ದರಿಂದ ನನ್ನನ್ನ ಈ ಯಮಧೂತರು ದ್ರವ್ಯ ತೆಗೆಯಲು, ಬಲಿಕೊಡಬಹುದೆ ಎಂದು ಶಂಕಿಸಿದೆ. ನನ್ನ ಅವಸ್ಥೆ ನೋಡಿ “ಹೆದರ್‍ಕೊ ಬ್ಯಾಡ ಗುರುವೆ, ನೀನೆ ನಮಗೆ ಗುರುವು… ನಿನ್ನ ಹಿಂದೆ ನಾವಿದೀವಿ, ನೀವಿಲ್ಲದೆ ನಮ್ಮಾಟ ಏನೂ ನಡಿಯಂಗೆ ಇಲ್ಲ….” ಎಂದು ಭುಜು ತಟ್ಟಿದರು ದೈತ್ಯರು.
“ನೀವಿಲ್ಲದೆ ನಮ್ಮಾಟ ಏನೂ ನಡಿಯೋದಿಲ್ಲ” ಎಂಬ ಅವರ ಮಾತು ಕೇಳಿದ ನನಗೆ ಜಂಬ ಬಂತು ಧೈರ್‍ಯ ತಾಳಿದೆ. ಅವರ ಸಂಜ್ಞೆ, ಮಾತುಗಳಿಗೆ ಹೊಂದಿಕೊಂಡು ನಾಟಕ ಮಾಡುವುದೆ ಒಳಿತೆನಿಸಿತು. ನನಗೆ ಭೂಮಿಯೊಳಗಿನ ದ್ರವ್ಯ ಹೋಗಲಿ ಮಣ್ಣು ಕಾಣಲಾರದೆಂಬ ಸತ್ಯ ನನಗೆ ಗೊತ್ತಿತ್ತು. ಡೋಂಗಿ ವರ್‍ತನೆಯ ಮೂಲಕ ನಾನು ಈ ಮೂಢರ ಮಧ್ಯ ದೊಡ್ಡವನೆನಿಸಿಕೊಳ್ಳಬೇಕೆಂಬ ಹುಂಬುತನ ಬಂತು. ಅದು ಆಗ ಅನಿವಾರವೂ ಆಗಿತ್ತು. (ನಿಜ ಹೇಳಬೇಕೆಂದರೆ ನನ್ನ ಕಣ್ಣಿಗೆ ಭೂಮಿಯಲ್ಲಿಯ ತುಕ್ಕು ಹಿಡಿದ ಕಬ್ಬಿಣವೂ ಕಾಣುತ್ತಿರಲಿಲ್ಲ) ಸರಿ ನನ್ನನ್ನೇ ನಂಬಿದ್ದಾರೆ. ಅವರ ನಂಬಿಕೆಯನ್ನುಳಿಸಿಕೊಂಡೆ ನನ್ನ ಕೃತೀಮ ನಡತೆಯಿಂದ ಧಿಗ್‌ಭ್ರಮೆಗೊಳಿಸಬೇಕೆಂದು ಲೆಕ್ಕಹಾಕಿದೆ. ಮತ್ತವರ ಹತ್ತಿರ ಬಂದಾಗ ಆ ಮಂತ್ರವಾದಿಗಳು “ನೋಡು ನೋಡು ಇವ್ರು ತೋಟದಲ್ಲಿ ಕೊಪ್ಪರಿಗೆ ಹಣ ಇದೆ. ಎಂದು ತಿಳಿದು ಬಂದಿದೆ. ಇವೊತ್ತು ರಾತ್ರಿ ನೀನು ಆ ಸ್ಥಳ ಕಂಡುಹಿಡಿದು ಎಷ್ಟಿದೆ, ಯಾವ ಕಡೆ ಚಲಿಸ್ತದೆ. ಅದನ್ನ ಯಾವ ಯಾವ ದುಷ್ಟಮೃಗಗಳು ಕಾಯ್ತಾವೆ ಅಂತ ಹೇಳ್ತಾಹೋದ್ರೆ ಸಾಕು, ನಾವು ಅದನ್ನ ನಿಗ್ರಹಿಸಿ, ಮಂತ್ರಶಕ್ತಿಯಿಂದ ಹೊರತೆಗಿತೀವಿ. ಆಮೇಲೆ ಅದರಲ್ಲಿ ನಿನಗೂ ಒಂದು ಪಾಲು ಕೊಡ್ತೀವಿ…… ನೆನಪಿರಲಿ….” ಎಂದು ಉಸುರಿದರು… ಇದೆಲ್ಲ ಗುಟ್ಟಿನಲ್ಲಿಯೇ ನಡೆದ ಸಭೆಯಾಗಿತ್ತು.
ಸರಿ ರಾತ್ರಿಯಾಯಿತು. ಮನೆಯ ಒಡೆಯ, ಎರಡು ಆಳುಗಳನ್ನು ಗುಂಡಿ ತೋಡಲಿಕ್ಕೆ ಕಳುಸಿದ್ದ, ಮತ್ತೆ ಮಂತ್ರ, ತಂತ್ರವಾದಿಗಳು ಸೇರಿ ಮಧ್ಯರಾತ್ರಿ ೧೨ರ ಸುಮಾರಿಗೆ ಕಳ್ಳರಂತೆ ತೋಟಸೇರಿದೆವು. ಆಳುಗಳ ಕೈಯಲ್ಲಿ ೪-೫ ಕೋಳಿ, ನೂರಾರು ಲಿಂಬೆಹಣ್ಣು, ಬೇವಿನಸೊಪ್ಪು, ಕುಂಕುಮ, ಒಂದೆರಡು ಕಂಬಳಿ ಇದ್ದವು. ಆಗ ನಾನು ಆ ಜನರ ಮಧ್ಯ ಹೀರೋತರವಾಗಿದ್ದೆ. ನಾನಿಲ್ಲದೆ ಅವ್ರ ಕೆಲ್ಸ ನಡಿಯೋಲ್ಲ ಎಂದು ಅವ್ರಿಗೆ ಗೊತ್ತಿತ್ತು. ಹಳೆ-ಗುಡಿಸಿಲೊಳಗೆ ಹೋಗಿ ಕುಳಿತೆವು. ಏಕಧಂ ದೇವರು ಬಂದವ್ರಂತೆ ವಾಲಾಡಿದೆ. ಗಾಬರಿಗೊಂಡು ಮಂತ್ರವಾದಿಗಳು ನಿಜವಾದ ದೇವ್ರ ಮನ್ಸಾ ಇವ್ರು ಕೊಪ್ಪರಿಗೆ ಹಣ ಕರಿತದೆ. ಇವ್ರಿಗೆ, ಎಂದು ತಕ್ಷಣ ಒಂದು ಕೋಳಿಯನ್ನ ಕತ್ತರಿಸಿ, ಅದರ ನೆತ್ತರಿನಿಂದ ನನ್ನ ಹಣೆ ಸವರಿದರು. ವಾಸ್ತವ ಪ್ರಪಂಚದ ಅರಿವಿದ್ದರೂ ನನಗೆ “ಕಂಬಳಿ ಹೊದ್ದಿಸಿ” ಎಂದು ಉಸುರಿದೆ. ಕೂಡಲೇ ಹೊದಿಸಿದ್ದು, ಕಂಬಳಿ ಹೊದ್ದುಕೊಂಡು ಕತ್ತಲೆಯಲ್ಲಿ ಭೂತದಂತೆ ಮೂಲೆ, ಮೂಲೆ ವಾಲಿದೆ, ಅವರು ಹಿಂದೆ ಹಿಂದೆ ದೈನಾಸಿಗಳಂತೆ ಜೊಲ್ಲು ಸುರಿಸುತ್ತ ಟಾರ್‍ಚ್ ಬೆಳಕು ಬೀರುತ್ತ ಬರುತ್ತಲೇ ಇದ್ದರು.
ತಿರಗ್ತಾ ತಿರಗ್ತಾ ಹಳೆಗುಡಿಯೊಂದರ ಹತ್ರ ಬಂದು ನಿಂತ್ಕಂಡೆ ಯಾಕೆಂದ್ರೆ ಗುಡಿ ಗುಂಡಾತರ ಹತ್ರಾನೆ ದ್ರವ್ಯ ಹೂತಿಟ್ಟಿರುತ್ತಾರೆ, ಅಂತ ಮೊದ್ಲೇ ನನಗೆ ಅಲ್ಪ ಸ್ವಲ್ಪ ಗೊತ್ತಿತ್ತು. ಟಾರ್‍ಚ್ ಇಸ್ಕೊಂಡು, “ನೀವ್ಯಾರೂ ನನ್ನ ಬೆನ್ನ ಹಿಂದ ಬರಬೇಡಿ ಎಂದು ಆಜ್ಞಾಪಿಸಿದೆ. ಅಲ್ಲಿಯೇ ತಟಸ್ಥವಾದರು. ಗುಡಿಯ ಹಿಂದೆ ಟಾರ್‍ಚ್ ಬಿಡ್ತಾ ಹೋದೆ, ಕಾಂಕ್ರೆಟಿನ ಗೋಡೆ ಕಂಡಿತು. ಅದು ಗರ್‍ಭಗುಡಿಯ ತಳಪಾಯ, ಗರ್‍ಭಗುಡಿ ಹೂತುಹೋಗಿತ್ತು. ಪೊದೆ ಬೆಳೆದು ಈಗ ಮುಂದಿನ ಅಂಕಣ ಮಾತ್ರ ಉಳಿದಿದೆ, ಎಂದು ಅರ್‍ಥಮಾಡಿಕೊಂಡೆ. ಗರ್‍ಭಗುಡಿ ಅಂದ ಮೇಲೆ ಅದರೊಳಗೆ ಒಂದು ವಿಗ್ರಹ ಇರ್‍ಲೆ ಬೇಕಲ್ಲ… ಎಲ್ಲಾ ಭೂಗತವಾಗಿದೆ. ಇದೆಲ್ಲ ನನ್ನ ಮನಸ್ಸಿನಲ್ಲಿ ತರ್‍ಕ ಮಾಡಿಕೊಂಡೆ. ಕೂಡ್ಲೆ ಹ್ರಾಂ….ಹ್ರೂಂ… ಇಲ್ಲೀ.. ಇಲ್ಲೀ.. ಎಂದು ನರಿಯಂತೆ ಕಿರಿಚಿದೆ. ಸ್ವರ್‍ಗವೆ ಇಳಿದು ಬಂದಂತೆ ಓಡಿಬಂದ್ರು, ಅದರ ಪಕ್ಕದಲ್ಲಿ ಕೂತ್ಕಂಡು ಕಣ್ಣು ಕೆಕ್ಕರಿಸಿ, ಏನೇನೋ ಅಂದು ಇಲ್ಲಿದೆ ಕೊಪ್ಪರಿಗೆ ಹಣ.. ಎಂದೆ. ಕಂಬಳಿ ಮೇಲೆತ್ತಿ.. ಕೂಡ್ಲೆ ಮಂತ್ರ, ತಂತ್ರವಾದಿಗಳಿಬ್ಬರೂ ತಮ್ಮ ಕಟ್ಟು ಬಿಚ್ಚಿ ನಾನು ತೋರಿಸಿದ ಸ್ಥಳದಲ್ಲಿ ಮಂಡಲ ಹಾಕಿ ನಾಲ್ಕು ದಿಕ್ಕಿಗೆ ಲಿಂಬೆ ಹಣ್ಣುಗಳನ್ನ ಹೂತಿಟ್ಟು, ಬೇವಿನ ಸೊಪ್ಪನ್ನು ಆ ಸ್ಥಳದ ತುಂಬೆಲ್ಲಾ ಹಾಸಿ ಅದರ ಮೇಲೆ ಅರಿಶಿಣ, ಕುಂಕುಮವನ್ನು ಚೆಲ್ಲಿದ್ರು. ಇಬ್ಬರೂ ಒಂದೇ ಸ್ವರದಲ್ಲಿ ಅದೇನನ್ನೋ ವಟಗುಡುತ್ತ ಮತ್ತೊಂದು ಕೋಳಿ ಕುಯ್ದು ರಕ್ತವನ್ನು ಸಿಂಪಡಿಸಿದ್ರು, ಅವರು ಏರ್‍ಪಡಿಸಿದ್ದ ಸ್ಥಳ ರಣಭಯಂಕರ ಭೀಕರತೆಯಂತೆ ಕಂಡಿತು.
ಅರ್‍ಧಗಂಟೆಯಾದ ಮೇಲೆ ಇವರ ಮಂತ್ರವನ್ನೇ ಆಲಿಸುತ್ತಿದ್ದ ನಾನು ಏಕದಂ ತಡವಾಯ್ತು “ನೆಲ ಅಗಿಯಿರಿ” ಎಂದೆ. ತಕ್ಷಣ ಆಳುಗಳು ಆ ಸ್ಥಳದಲ್ಲಿ ಗುಂಡಿ ತೋಡಲಾರಂಭಿಸಿದ್ರು, ಮಾಲೀಕ ಕಣ್ಣು ಕೆಕ್ಕರಿಸಿಕೊಂಡು ಬಾಯಿಯೊಳಗೆ ಜೊಲ್ಲು ಸೋರಿಸಿಕೊಳ್ಳುತ್ತ ಬಿಟ್ಟಗಣ್ಣು ಬಿಟ್ಟಂತೆ ನಿಂತ, ಮಂತ್ರವಾದಿಗಳು ಘನಘೋರತೆಯಿಂದ “ಹ್ರಾಂ… ಹ್ರೂಂ… ನಿರ್‍ವಾಣಿ ಗಿರ್‍ವಾಣಿ ಧಿಗ್ಭಂಧನಹ” ಇನ್ನೂ ಏನೇನೋ ಹೇಳಲಾರಂಭಿಸಿದ್ರು, ಅವರ ಮೈಕೂದಲುಗಳು ಕೌತುಕದಿಂದ ನಿಂತಿದ್ದವು. ಅವರು ನನ್ನ ಸಂಜ್ಞೆ ಮಾತನ್ನೇ ಕಾಯುತ್ತಿದ್ದರು. ಆಗ ನನಗೆ ಆಟವಾಡಿಸಬೇಕೆನಿಸಿ ಸುಮ್ಮನೆ “ಆಂ ಬಂತು ಬಂತು ಕೊಪ್ಪರಿಗೆ ಕಾಣ್ತದೆ. ಸುತ್ತಲೂ ಏಳು ಹೆಡೆ ಸರ್‍ಪಕಾಯ್ತ ಇದೆ” ಎಂದು ಪೂರ್‍ತಿ ಕಂಬಳಿ ಹೊದ್ದುಕೊಂಡೆ. ತಕ್ಷಣ ಚುರುಕಾದ ಮಂತ್ರವಾದಿಗಳು ಮತ್ತೊಂದು ಕೋಳಿ ಬಲಿಕೊಟ್ಟು, “ಘಟಸರ್‍ಪ ಸರ್‍ವನಾಶಯ ದಿಗ್ಧಂಧನಂ” ಇತ್ಯಾದಿ ಹೇಳಿದ್ರು, ಕೂಡ್ಲೆ ನಾನು ಸರ್‍ಪ ಓಡಿಹೋಯ್ತು. ಈಗ ಹುಲಿಬಂತು ಹುಲೀ ಎಂದೆ ಮತ್ತೆ ಆದೆ ರೀತಿ ಮಾಡಿದ್ರು, ಅವರು ಆಗಲೆ ಸುಸ್ತು ಹೊಡೆದಿದ್ರು, ಆಗಲೆ ಆಳುಗಳು ೪ ಆಡಿ ನೆಲವನ್ನ ಆಗೆದಿದ್ರು, ಆಗ ತಕ್ಷಣ ಸಿಮೆಂಟು ಕಾಂಕ್ರೀಟಿನ ಗೋಡೆ ಹತ್ತಿದ್ದನ್ನು ಕಂಡ ಆಳುಗಳು ಖುಷಿಯಿಂದ ಗೌಡ್ರೆ ಕಾಂಕ್ರೀಟ್ ನೆಲಹತೈತಿ, ಎಂದು ಗೌಡ್ರಿಗೆ ಸ್ವರ್‍ಗಕ್ಕೆ ಮೂರೆಗೇಣು ಉಳಿದಂತೆ ಹೌದಾ ಇನ್ನೊಂದೀಟು ಆಗಿರಲೇ ಕಾಂಕ್ರೀಟ್? ಹಗೆ ಕಟ್ಟಿಸಿ ಒಳಗೆ ಕೊಪ್ಪರಿಗೆ ಹಣ ಇಟ್ಟಿದ್ದಾರಂತ ಕಾಣ್ತಾದೆ, ಎಂದ್ರು. ಕಾಂಕ್ರೀಟ್‌ನ್ನು ನೋಡಿದ ಮಂತ್ರವಾದಿಗಳಿಗೂ ಕೈಲಾಸದಲ್ಲಿ ಕೈಯಾಡಿಸಿದ ಅನುಭವ. ನಾನಿದೆಲ್ಲವನ್ನು ಕಂಬಳಿಯೊಳಗೆ ಕೇಳುತ್ತಲೇ ಇದ್ದೆ.
ಮೊದಲೇ ಗರ್‍ಭಗುಡಿಯ ಸ್ಥಳವಿದೆಂದು ನನಗೆ ಗೊತ್ತಿತ್ತಲ್ಲ ಹಾಗಾಗಿ ನನಗೇನೂ ಅನಿಸಲಿಲ್ಲ. ಹೀಗೆ ಕಾಂಕ್ರೀಟ್‌ನ್ನು ಅಗೀತಾ ಹೋದ್ರು, ಬೆಳಗಿನ ೫ ಗಂಟೆವರೆಗೆ ಆಗುದ್ರು, ಜೋರಾಗಿ ಗುದ್ದಲಿ, ಪಿಕಾಶಿ ಬಳಸಿ ಅಗಿಯುವ ಹಾಗಿಲ್ಲ. ಶಬ್ದವಾಗಿ ಯಾರಿಗಾದ್ರು ಗೊತ್ತಾದ್ರೆ ಹೂರಣ ಹೊರಬೀಳುತ್ತೆ. ನಿಧಾನವಾಗಿ ಅಗಿಯುದ್ರಲ್ಲೇ ಟೈಂ ಸಾಯ್ತಾ ಇತ್ತು. ಗುಂಡಿ ೫ ಅಡಿ ಆಳಕ್ಕೆ ಹೋದ್ರೂ, ಕೊಪ್ಪರಿಗೆ ಹಂಡೆ ಕಾಣದೆ ಇರೋದಕ್ಕೆ ಮಂತ್ರವಾದಿಗಳಿಗೆ ಮತ್ತೆ ಮಂಕು ಆವರಿಸಿ, “ಚಂದ್ರಣ್ಣ ಕೊಪ್ಪರಿಗೆ ಕಂಡು ಬಂದಿಲ್ಲೇನ್ರೀ..” ಎಂದು ನಿಟ್ಟುಸಿರು ಹಾಕಿದರು. ನಾನು ಡೋಂಗಿ ಮಾಡುತ್ತ “ಆಗ ಕಂಡಿತು ನೀವು ಮಂತ್ರ ತಪ್ಪು ತಪ್ಪಾಗಿ ಓದಿದಿರಿ. ಅದಕ್ಕೆ ಅದು ಸ್ಥಳ ಪಲ್ಲಟ ಆಗ್ತಿದೆ. ಉತ್ತರದಿಕ್ಕಿನ ಕಡೆ ಹೋಗ್ತಿದೆ ನೀವು ಮೈಲಿಗೆಯಿಂದ ಬಂದಿದ್ದೀರಿ”, ಎಂದೆ. ಅವರವರಲ್ಲಿಯೇ ತಾವು ತಪ್ಪು ಮಾಡಿದ್ದನ್ನ ಹುಡುಕಿಕೊಂಡ್ರು. ಮುಖದಲ್ಲಿ ಪ್ರೇತಕಳೆ ಮೂಡಿತು. ಗೊತ್ತಿಲ್ಲದ ಹಾಗೆ ಏನಾದ್ರೂ ಮೈಲಿಗೆಯಾಗಿರಭೌದು, ಚಂದ್ರಣ್ಣನ ಮಾತು ಸುಳ್ಳಲ್ಲ. ಸತ್ಯ ಹೇಳ್ರಿ? ಎಂದು ಗೌಡ್ರು ಕೇಳಿದರು.
ಆಗ ಅವರೆಲ್ಲಾ, ನಾನು ಸ್ನಾನ ಮಾಡಿರಲಿಲ್ಲ. ನಾನು ಇವತ್ತು ಕೋಳಿ ತಿಂದುಬಂದಿದ್ದೆ, ನಾನು ಇವತ್ತು ಪಂಚಾಯ್ತಿ ಮಾಡಿ ಪಾಪ ಆ ಬಡವನಿಗೆ ತೊಂದರೆ ಕೊಟ್ಟಿದ್ದೆ. ಹೀಗೆಲ್ಲಾ ಮಾಡಿದ್ದು ಮೈಲಿಗೆಯಲ್ಲದೆ ಇನ್ನೇನು? ನೀವೆಲ್ಲರೂ ಇನ್ನೊಂದು ಸಲ ಶುದ್ಧ ಮನಸ್ಸಿನಿಂದ ಏನೂ ತಪ್ಪುಗಳಾಗದಂತೆ ಬಂದರೆ ಪ್ರಯತ್ನಿಸೋಣ ಎಂದು ಹೇಳಿದೆ. ಅವರೆಲ್ಲರೂ “ಕೊಪ್ಪರಿಗೆ ಹಣ” ಇಲ್ಲೇ ಇದ್ರು ಅನುಭವಿಸಲಿಕ್ಕೆ ಆಗದಂತಾಯ್ತು, ಪ್ರತ್ಯಕ್ಷ ಸಹ ನೋಡುವ ಭಾಗ್ಯ ಈ ಸಲ ನಮಗೆ ಇಲ್ಲ. ನಡೀರಿ… ಮುಂದಿನ ಸಲ ಪ್ರಯತ್ನಿಸೋಣ, ಎಂದು ಹೊರಟುಹೋದರು. ನಾನು ನಮ್ಮೂರಿನೆಡೆಗೆ ಬಂದ.
ಇದೆಲ್ಲವೂ “ಕೊಪ್ಪರಿಗೆ ಹಣ” ತೆಗೆಯಲು ಮಂತ್ರವಾದಿಗಳು ಮಾಡಿಕೊಂಡ ನಾಟಕ ಎಂಬುವುದನ್ನು ತಿಳಿಸುವ ಉದ್ದೇಶದಿಂದ ನಾನೂ ಸಹ ನಾಟಕ ಮಾಡಿದ್ದು ಸರಿ, ಅನಿಸ್ತದೆ ಅಲ್ವಾ?
*****



















