ಅಧ್ಯಾಯ ಒಂಭತ್ತು
ಚಿನ್ನಾಸಾನಿಯು ಚಕ್ರವರ್ತಿಗಳ ಸನ್ನಿದಿಯಲ್ಲಿ ತಲೆಬಾಗಿ ನಿಂತು, “ಮಹಾಪಾದಗಳಿಗೆ ಜಯವಾಗಲಿ, ಈಗ ನಾನು ಮೊದಲು ಯಾರಿಗೆ ನಮಸ್ಕಾರ ಮಾಡಬೇಕು ಎನ್ನುವುದನ್ನು ಪ್ರಭುಗಳೇ ಅಪ್ಪಣೆ ಕೊಡಿಸಬೇಕು. ಇಲ್ಲಿ ಗುರುಗಳು. ಇಲ್ಲಿ ಸನ್ನಿಧಾನ. ಅಪ್ಪಣೆಯಾದಂತೆ ನಡಯಲು ಸಿದ್ಧಳಾಗಿದ್ದೇನೆ ಎಂದು ಕೈ ಮುಗಿದಳು. ಚಕ್ರವರ್ತಿಗಳು “ಮೊದಲು ಅಲ್ಲಿ ಆಮೇಲೆ ಇಲ್ಲಿ” ಎಂದರು. ಅದರಂತೆ ಅವಳು ನಾಟ್ಯದಿಂದ ಮೊದಲು ಗುರುಪೂಜೆಯನ್ನು ಒಪ್ಪಿಸಿ, ಅವರ ಅಪ್ಪಣೆ ಪಡೆದು ಸಮ್ರಾಜರಿಗೂ ನಾಟ್ಯದಿಂದಲೇ ಪೂಜೆ ಕಾಣಿಕೆಗಳನ್ನು ಒಪ್ಪಿಸಿದಳು. ಅವರ ಅಪ್ಪಣೆ ಯಾದಂತೆ ಹಾಸಿದ್ದ ರತ್ನಗಂಬಳಿಯಮೇಲೆಯೇ ಕುಳಿತುಕೊಂಡಳು. ಅವಳ ವಿನಯವನ್ನು ಕಂಡು ರಾಯರು “ನಿಜವಾಗಿಯೂ ಇವಳಲ್ಲಿ ನಮ್ಮ ಮಾತು ಕೇಳದಿರುವನ್ಟು ಹಟವಿದೆಯೇ?”ಎಂದು ಅಶ್ಚರ್ಯಪಟ್ಟರು.
ಚಿನ್ನಳು ಮತ್ತೆ ಎದ್ದು ಕೈಮುಗಿದುಕೊಂಡು “ಮಹಾಸನ್ನಿಧಾನದ ಅಪ್ಪಣೆಯಾಯಿತಂತೆ. ಮಹಾಪುದದ ಉಪ್ಪುತಿಂದ ದಾಸಿ ಅಪ್ಪಣೆಯನ್ನು ನೆರವೇರಿಸಲು ಸಿದ್ಧಳಾಗಿದ್ದಾಳೆ” ಎಂದು ಭಕ್ತಿಯಿಂದ ಕೈ ಮುಗಿದಳು.
ರಾಯರು ಕೇಳಿದರು. “ಚಿನ್ನಾಸಾನಿ, ನಿನ್ನಂದ ಈ ಸಲ ಈ ಸಾಮ್ರಾಜ್ಯವು ಒಂದು ಸೇವೆಯನ್ನು ಬಯಸುತ್ತಿದೆ. ಒಂದು ರಾಜಕಾರ್ಯವು ನಿನ್ನಿಂದ ಆಗಬೇಕಾಗಿದೆ. ಮಾಡಿಕೊಡುವೆಯಾ ? “
“ಮೊದಲೇ ಅರಿಕೆಮಾಡಿದ್ದೇನೇ ಮಹಾಪಾದದಲ್ಲಿ ನಮ್ಮಂಥವರ ಸ್ಮರಣೆ ಬರುವುದೇ ನಾವು ಮಾಡಿದ ಪುಣ್ಯದ ಗುರುತು. ಯಾವ ಜನ್ಮದಲ್ಲಿ ಮಾಡಿದ ಮಹತ್ಪುಣ್ಯದ ಫಲವೋ ಈ ಪಂಪಾಕ್ಷೇತ್ರದಲ್ಲಿ ಜನಿಸಿ, ಭಕ್ತ ಪರಾಧೀನನಾದ ಪಂಪಾಧೀಶ್ವರನ ಅನುಗ್ರಹಮೂರ್ತಿಯೆನ್ನಿಸಿಕೊಂಡಿರುವ ವಿಜಯನಗರಾಧೀಶ್ವರರನ್ನು ಸೇವಿಸುವ ಭಾಗ್ಯ ದೊರೆತಿದೆ. ಅದೇ ಪುಣ್ಯವೇ ಈಗ ಇನ್ನೂ ಒಂದು ವಿಧವಾಗಿ ಅತಿಶಯವಾದ ಸೇವೆಯನ್ನು ಸಲ್ಲಿಸಿ, ಕೃತಾರ್ಥಳಾಗುವ ಅವಕಾಶವನ್ನು ಒದಗಿಸಿಕೊಟ್ಟಿದ್ದರೆ ಅದನ್ನು ಬೇಡವೆನ್ನುವಷ್ಟು ಮೂರ್ಖಾಗಲೇ ? ದಾಸಿಯು ಚರಣ ಸೇವೆಗೆ ಸರ್ವಥಾ ಸಿದ್ದಳು.”
ರಾಯರು ಆಚಾರರ ಮುಖ ನೋಡಿದರು. ಅವರ ಅಭಿಪ್ರಾಯದಂತೆ ಅವರು ಕೇಳಿದರು, “ರಾಜಾಜ್ಞೆಯು ನಿನ್ನ ಮನಸ್ಸಿನಲ್ಲಿರುವುದಕ್ಕೆ ವಿರುದ್ಧ ವಾಾಗಿದ್ದರೂ ನಡೆಸುವೆಯಾ ಚಿನ್ನಮ್ಮ ?
“ಗುರುದೇವ, ಗುರುಗಳೂ ರಾಜರೂ ನಿಯೋಗವನ್ನು ಸರ್ವಥಾ ಬಲ್ಲರು. ನಹಿ ಚೂಡಾಮಣಿಃ ವಾದೇ ಪ್ರಭವಾಮೀತಿ ಬದ್ಧ್ಯತೇ, ಚೂಡಾ ಮಣಿಯನ್ನು ಯಾರೂ ಕಾಲಿಗೆ ಕಟ್ಟಿಕೊಳ್ಳುವುದಿಲ್ಲವಷ್ಟೆ ?”
ಆಚಾರರು ಅವಾಕ್ಕಾಗಿ, ಪೆಚ್ಚು ನಗೆ ನಗುತ್ತಾ ಮುಂದಿನ ಮಾತು ತಮ್ಮಿಂದ ಸಾಧ್ಯವಿಲ್ಲವೆಂಬುದನ್ನು ದೃಷ್ಟಿಯಿಂದಲೇ ಅರಿಕೆಮಾಡಲು, ರಾಯರೇ ಕೇಳಿದರು, “ಆಯಿತು. ಚಿನ್ನಾ ಸಾನಿಯವರೇ, ಅಗತ್ಯವಾಗಿ ಆಗಬೇಕಾದ ಕಾರ್ಯದಲ್ಲಿ ವಿಯೋಗ ಮಯ್ಯಾದೆಯು ಸಡಲಬಾರದೇನು ? ಪರ್ವಕಾಲಗಳಲ್ಲಿ ಮೇರೆಯನ್ನು ಮೀರುವುದು ಸಮುದ್ರಕ್ಕೆ ಭೂಷಣವೇ ಅಲ್ಲವೇನು ?”
ಮಹಾಪ್ರಭು, ಸಾಮಾನ್ಯವು ವಿಶೇಷದಿಂದ ಬಾಧಿತವಾಗುವುದೂ ಲಕ್ಷಣವೇ ಆದರೂ ರಾಜಧರ್ಮವು ಸಾಮಾನ್ಯವನ್ನು ಪಾಲಿಸುವುದಕ್ಕೆ ತಾನೇ ಇರುವುದು ? ”
“ಆಯಿತು, ಚಿನ್ನಾ, ಅಲಂಕಾರೋಕ್ತಿಗಳು ಸಾಕು. ನೇರವಾಗಿ ಒಂದು ಮಾತು ಹೇಳು. ನಿನ್ನ ಮನಸೊಪ್ಪದ ಕೆಲಸವೊಂದನ್ನು ನೀನುಮಾಡಿ, ನಮ್ಮ ಕಾರ್ಯವನ್ನು ಗೆಲ್ಲಬೇಕಾಗಿದೆ.”
* ಅಂತಹ ಋಶ್ಯಶೃಂಗನನ್ನು ಹಿಡಿದು ತರಬೇಕಾದ ಕೆಲಸ ಯಾವುದು ಇದೆಯೋ ಅಪ್ಪಣೆಯಾಗಲಿ, ನನ್ನಿಂದ ಆಗುವದಿದ್ದರೆ ಮಾಡಿಯೇ ಮಾಡುತ್ತೇನೆ. ಇನ್ನೇನು ನನ್ನ ಕೈಗೆ ಒಂದು ಸೈನ್ಯವನ್ನು ಕೊಟ್ಟು ಗೋಲ್ಕೊಂಡವನ್ನು ಗೆದ್ದು ಬಾ ಎನ್ನುವುದಿಲ್ಲವಲ್ಲ ?”
ನಿನ್ನ ರಕ್ಷಣೆಗೆ ಒಂದು ಸೈನ್ಯವನ್ನು ಕೊಟ್ಟು ಕಳುಹಿಸುವೆವು. ನೀನು ಗೋಲ್ಕೊಂಡವನ್ನೇ ಗೆದ್ದು ಬರಬೇಕು.”
“ಆ ವಿಚಾರ ಆಗಲೇ ಸನ್ನಿಧಾನದಲ್ಲಿ ಬಂದು ಇತ್ಯರ್ಥವಾಗಿ ಹೋಗಿದೆ ಯಲ್ಲಾ ? ”
“ಅದೇ ಈಗ ಮತ್ತೊಂದು ರೂಪವಾಗಿ ಬಂದಿದೆ. ಅದೇ ಸಂದರ್ಭ ರೂಪಾಂತರದಲ್ಲಿ ಒದಗಿದೆ.”
“ಅದೇ ಉತ್ತರವು ರೂಪಾಂತರದಲ್ಲಿ ಬಂದರೆ ಮಹಾಸನ್ನಿಧಿಗೆ ತೃಪ್ತಿ ಯಾಗುವುದೇನು ?”
“ಇಲ್ಲ. ಬೇರೆಯಾಗದಿದ್ದರೆ ಯತ್ನವಿಲ್ಲ.”
“ತಂತಿ ಕಿತ್ತುಹೋದರೆ ವೀಣೆ ಬಾರಿಸುವುದಿಲ್ಲವಷ್ಟೆ?“
“ನಿನ್ನ್ನ ಕಷ್ಟವೇನು ಹೇಳು. ಅದಕ್ಕೆ ಒಂದು ನಿವಾರಣೋಪಾಯವನ್ನು ಚಿಂತಿಸೋಣ. “
“ಮೊದಲು ಏನಾಗಬೇಕು ಅಪ್ಪಣೆಯಾಗಲಿ. ಅನಂತರ ಮಿಕ್ಕುದೆಲ್ಲ ಯೋಚಿಸೋಣ.”
“ಗೋಲ್ಕೊಂಡದ ನವಾಬರು ನಮ್ಮೊಡನೆ ಸಂಧಿಯನ್ನು ಮಾಡಿಕೊಳ್ಳಲು ಒಪ್ಪಿದ್ದಾರೆ. ಆದರೆ , ಸಂಧಿಯಾಗುವುದೂ, ಬಿಡುವುದೂ ನಿನ್ನ ಕೈಯಲ್ಲಿದೆ.”
“ಎಂದರೆ ನಾನೇನು ಮಾಡಬೇಕು ?”
“ನೀನು ಹೋಗಿ ಅಲ್ಲಿ ಹಾಡಿಬರಬೇಕು.”
“ಮಹಾಸನ್ನಿಧಾನದ ಅಪ್ಪಣೆಗೆ ಪ್ರತಿಯಾಗಿ ನುಡಿಯವುದು ನನ್ನಿಂದ ಸಾಧ್ಯವಿಲ್ಲ. ಪ್ರಭುಗಳ ಅಪ್ಪಣೆಯು ನೆರವೇರುವುದು; ಜೊತೆಯಲ್ಲಿಯೇ ಚಿನ್ನಳಿಗೆ ರಾಜಾಜ್ಞೆಯನ್ನು ಪಾಲಿಸಿದುದರ ಫಲವಾಗಿ ದಿವ್ಯ ಶರೀರವು ಲಭಿಸಿತೆಂಬ ಶುಭ ಸಮಾಚಾರವೂ ಸನ್ನಿಧಾನಕ್ಕೆ ತಲಪುವುದು.”
“ನೀನು ಹೀಗೆ ಹಟಮಾಡಿದರೆ ಆಗುವ ಹಾನಿಯೇನು ಬಲ್ಲೆಯಾ?”
“ಹಟವೇನು ಬಂತು? ಮಹಾಪ್ರಭು. ಸನ್ನಿಧಾನದ ಅಪ್ಪಣೆ ನೆರವೇರು ವುದು. ವಿಜಯನಗರದ ಒಂದೇ ಒಂದು ಅನಾಥ ಪ್ರಾಣಿಯು ಇಲ್ಲವಾದರೆ ರಾಜಧಾನಿಗೆ ಏನೂ ಹಾನಿಯಾಗುವುನಿಲ್ಲ.”
“ನಿನ್ನ ಕಷ್ಟವೇನು ಹೇಳು.”
“ನನ್ನ ಕಷ್ಟವೇನು ಮಹಾಪ್ರಭು. ಈ ಪ್ರಭುವಿಗೆ ಮುಗಿದ ಕೈಗಳು ಇನ್ನೊಬ್ಬ ಪ್ರಭುವೆನ್ನಿಸಿಕೊಂಡವರಿಗೆ ಮುಗಿಯುವುದಿಲ್ಲ. ಅದು ನನ್ನ ವ್ರತ. ಊರೂಭಂಗದಲ್ಲಿ ಹೇಳುವಂತೆ “ಯೇ ನೈವಮಾನೇನಭುವಿಪ್ರಸೂತೋ ತೇನೈವ ಮಾನೇನ ದಿನಂ ಪ್ರಯಾಮಿ.?
ತೆರೆಯ ಹಿಂದಿನಿಂದ ಯಾರೋ ಅವಸರವಸರವಾಗಿ ಹೊರಕ್ಕೆ ಓಡಿ ಬಂದು ಹೇಳಿದರು… * ಮಹಾಸ್ವಾಮಿ ತಮಗೆ ಖೊರ್‍ನಿಸಾತ್ ಮಾಡ. ಬೇಕಾಗಿಲ್ಲವೆಂದು ಸುಲ್ತಾನರು ಅಪ್ಪಣೆ ಕೊಡಿಸಿದ್ದಾರೆ”
ರಾಯರ ಮುಖನನ್ನು ಕಂಡು ತಾವು ಬಂದುದು ಅಪರಾಧವಾಯಿತೆಂದು ಸೆಟ್ಟರಿಗೆ ಎನ್ನಿಸಿತು. ಗಡಗಡ ನಡುಗಿಹೋದರು. ಮನ್ನಿಸಬೇಕೆಂದು ಅಡ್ಡ ಬಿದ್ದರು. ಚಿನ್ನಳಿಗೆ ಈ ಸೆಟ್ಟರು ಇಲ್ಲಿ ಇರುವುದಕ್ಕೇನು ಕಾರಣ? ಅದೂ ತಾನೂ ಅವರೂ ಮಾತಾಡುವಾಗ?” ಎನ್ನಿಸಿ ದೊರೆಯ ಮುಖವನ್ನು ನೋಡಿದಳು. ಅವಳ ಭಾವವನ್ನು ಗ್ರಹಿಸಿ, ಮನಸ್ಸಿನ ಆಸಮಾಧಾನವನ್ನೆಲ್ಲ ನುಂಗಿಕೊಂಡು, ಎಳೆನಗು ನಗುತ್ತ “ಈಗ ಯಜಮಾನ್ ಸೆಟ್ಟರು ನಮ್ಮ ರಾಯಭಾರಿಗಳಾಗಿ ದ್ದಾರೆ. ಇತರರು ಸಾಧಿಸುವುದಕ್ಕೆ ಆಸಾಧ್ಯವಾಗಿದ್ದ ಕಾರ್ಯವನ್ನು ಅವರು ಸಾಧಿಸಿ. ಕೊಂಡು ಬಂದಿದ್ದಾರೆ. ಅವರು ಸಾಧಿಸಿರುವ ಕಾರ್ಯ ಫಲಿಸುವುದೂ ಬಿಡುವುದೂ ನಿನ್ನನ್ನು ಸೇರಿದೆ. ನೀನು ಒಪ್ಪಿದರೆ ವಿಜಯನಗರಕ್ಕೆ ಒಂದು ಯುದ್ದ ನಿಂತಿತು. ಅದು ಲಾಭ. ನೀನು ಒಪ್ಪದಿದ್ದರೆ ಜಯನಗರಳ್ಳೆ ಒಂದು” ಯುದ್ಧ. ಸೆಟ್ಟರಿಗೆ ವಜ್ರದಗಣಿ ಹೋಯಿತು.?
ಚಿನ್ನಳು ಪೆಚ್ಚು ಮುಖ ಹಾಕಿಕೊಂಡು ಕೈ ಯಲ್ಲಿ ತಲೆಯಿಟ್ಟು ಕೊಂಡು ಕುಳಿತಳು. ಅವಳು ಹಾಗೆ ಕುಳಿತುದನ್ನು ಕಂಡು ಸರ್‍ವನಾಶವಾಯಿತೆಂದು ಕೊಂಡು ಸೆಟ್ಟರು ತಾವು ರಾಜಸಮ್ಮುಖದಲ್ಲಿ ಇರುವುದನ್ನು ಕೂಡ ಮರೆತು ಹಾಗೆಯೇ ಅಲ್ಲಿಯೇ ಒಂದು ಆಸನದಲ್ಲಿ ಕುಸಿದುಬಿದ್ದರು. ಆ ಒಳಗುದಿಯನ್ನು ಕಂಡು ಆಚಾರ್ಯರು ದೊರೆಗಳಿಗೆ ಕೈ ಮುಗಿದು, “ಮಹಾಪ್ರಭು, ಚಿನ್ನಮ್ಮನಿಗೆ ಕೊಂಚ ಅವಕಾಶ ಬೇಕು ಅಷ್ಟೆ.”ಅವಳ ರಾಜಭಕ್ತಿಯೂ, ವಿಜಯನಗರದ ಮೇಲಿನ ವಿಶ್ರಾಸವೂ ಆಪಾರವಾದವು” ಎಂದರು.
ರಾಯರು ಎತ್ತಲಿಂದಲೂ ಬಂದಿದ್ದ ಅಸಮಾಧಾನವನ್ನು ಪ್ರಕಟವಾಗಿ ತೋರಿಸುತ್ತ, ಬಿರಬಿರನೆ ಆಚಾರ್‍ಯರನ್ನು ನೋಡಿದರು. ಅವರು ರಾಜ ಪ್ರಸಾದವನ್ನು ಯಾಚಿಸುವ ವಿನಯದಿಂದ “ಮಹಾಪ್ರಭು, ಸಾಕಿದ ಗಿಣಿಯು ಕಡಿಯಿತೆಂದು ಅದನ್ನು ಯಾರೂ ಕಡಿದು ಹಾಕುವುದಿಲ್ಲ. ಹಾಗೇ, ಅವಳಿಗೆ ಮಹಾಸ್ವಾಮಿಯವರು. ನನಗೆ ವಿಧಿಸಿರುವ ಅಪ್ಪಣೆಯು ತಿಳಿಯದು. ಅದೂ ಅಪ್ಪಣೆಯಾಗಲಿ. ಅದು ತಿಳಿದರೆ, ಮುಂದಿನ ಕಲಸ ಸುಲಭವಾಗುವುದು.”
ರಾಯರು ತಲೆದೂಗಿ ತಮ್ಮ ಸಮ್ಮತಿಯನ್ನು ಸೂಚಿಸಿ, ಒಂದು ಗಳಿಗೆ ಏನೋ ಚಿಂತಿಸಿ, “ಏನು? ಸೆಟ್ಟರು ಏನು ಹೇಳುವರು? “ಎಂದರು.
“ಮಹಾಪ್ರಭು, ರಾಜಾಜ್ಞೆಯನ್ನು ಈಕೆಯು ನೆರವೇರಿಸಿದರೆ, ಈಕೆಯ ಹೆಸರಿನಲ್ಲಿ ಪಂಪಾಪತಿಗೆ ಒಂದುತಿಂಗಳು ಉತ್ಸವವನ್ನು ನಡೆಸುತ್ತೇನೆ ಮಹಾಸ್ರಾಮಿ. ಮತ್ತು ವಜ್ರದ ಗಣಿಯ ಲಾಭದಲ್ಲಿ ಒಂದು ಪಾಲು ಈಕೆಗೆ ಕೊಡುತ್ತೇನೆ.”
“ಪುಣ್ಯ, ಪುರುಷಾರ್ಥ, ಎರಡೂ ಲಾಭಗಳುಂಟು. ಇಹ, ಪರ ಗಳೆರಡಕ್ಕೂ ಸಾಧನ. ಆಯಿತು, ಆಚಾರ್ಯರೇ, ಏನು ಹೇಳಬೇಕೋ ತಾವೇ ಹೇಳೋಣವಾಗಲಿ.“
“ಚಿನ್ನಮ್ಮ , ನಿನ್ನೆಯದಿನ ನಡೆದುದೆಲ್ಲವನ್ನೂ ನೆನೆಸಿಕೊ. ಮಹಾ ಸ್ವಾಮಿಯವರ ಅಪ್ಪಣೆಯಂತೆ ನಾನು ಗೋಲ್ಕೊಂಡದ ಆಸ್ಪಾನಕ್ಕೆ ಹೋಗಿ ಬರಲು ಒಪ್ಪಿಕೊಂಡಿದ್ದೇನೆ. ಬಾಯಲ್ಲಿ ಹೇಳುತ್ತಿದ್ದ ವೇದಾಂತ ಕೈಯಲ್ಲಿ ಆಚರಿಸುವುದಕ್ಕೂ ಒಪ್ಪಿದ್ದೇನೆ. ಎಷ್ಟಾದರೂ ನೀನು ಹೆಂಗಸು. ಹಟ ಹಿಡಿಯಬಾರದು. ನಾನು ಇರುವುದಿಲ್ಲವೆ? ಬಾ. ಹೋಗಿಬರೋಣ.”
ಯತ್ನವಿಲ್ಲವೆಂದು ಮನಸ್ಸಿಗೆ ಖಚಿತವಾದಾಗ ಬರುವ ನಿಶ್ಚಿಂತೆಯ ಮನೋಭಾವದಲ್ಲಿ ಹೇಳಿದಳು. “ಗುರುಗಳು ಹೋಗುವಕಡೆ ಹೋಗುವುದಕ್ಕೆ ನನ್ನ ಅಭ್ಯಂತರವಿಲ್ಲ… ಅವರು ಮಾಡು ಎಂದ ಕೆಲಸ ಮಾಡಲು ಅಭ್ಯಂತರ ವಿಲ್ಲ. ಆದರೂ ಮಹಾಪ್ರಭು, ಬಲವಂತ ಮಾಡಬೇಡಿ. ನನಗೆ ಆ ತೋಳಗಳ ಗುಂಪಿಗೆ ಹೋಗುವುದಕ್ಕೆ ಇಷ್ಟವಿಲ್ಲ. ಅಲ್ಲಿಗೆ ಹೋದರೆ ನಾನು ಪ್ರಾಣ ಸಹಿತವಾಗಿ ಹಿಂತಿರುಗಿ ಬರುವ ಧೈರ್ಯ ನನಗಿಲ್ಲ.”
ರಾಯರು ಸೆಟ್ಟರ ಮುಖ ನೋಡಿದರು. ಅವರು ಹೇಳಿದರು. “ಮಹಾಸ್ವಾಮಿ ಸುಲ್ತಾನರ ಅಪ್ಪಣೆಯಾಗಿದೆ. ಅವರ ಮೂಲಬಲದ ಅಶ್ವ ದಳವೊಂದು ನಮ್ಮ ಜೊತೆಯಲ್ಲಿ ಅವರ ಗಡಿಯವರೆಗೂ ನಮಗೆ ಕಾವಲಾಗಿ ಬರುವುದು. ಅಲ್ಲದೆ, ಮಹಾಪ್ರಭು, ಈಕೆಯ ಒಂದು ಕೂದಲೂ ನೋಯದಂತೆ ಈಕೆಯನ್ನು ಇಲ್ಲಿಗೆ ತಂದು ಸೇರಿಸುವ ಭಾರ ನನ್ನದು. ಮಹಾಪ್ರಭು ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಆಸ್ತಿಯೆಲ್ಲವನ್ನೂ, ಒಂದುಕಾಸೂ ಬಿಡದೆ, ಅರಮನೆಯವರು ಮುಟ್ಟುಗೋಲು ಹಾಕಿಕೊಳ್ಳ ಬಹುದು.”
“ಅವಳು ಪ್ರಾಣದಹಂಗು ತೊರೆದು ಹೊರಡಲಿ. ಆ ಪ್ರಾಣನನ್ನು ಅವಳಿಗಿಂತ ಭದ್ರವಾಗಿ ನೋಡಿಕೊಳ್ಳುವ ರಕ್ಷಕರೊಬ್ಬರನ್ನು ನಾವು ಇಟ್ಟು ಕೊಂಡಿದ್ದೇವೆ. ಅವರನ್ನು ಆ ಕಾರ್ಯಕ್ನಾಗಿಯೇ ನಮ್ಮ ಅಂಗರಕ್ಷಕದಳವನ್ನು ಕೊಟ್ಟು ಕಳುಹಿಸಿಕೊಡುತ್ತೀವೆ. ಅವರು ನಮಗೆ ಬಂದಿದ್ದ ಆಪತ್ತನ್ನು ಪರಿಹರಿಸಿ ನಮ್ಮ “ಪ್ರಾಣರಕ್ಷಣ ಮಾಡಿದ್ದಾರೆ. ಆದರಿಂದ ಅವರು “ಈಕೆಯ ಪ್ರಾಣವನ್ನು ರಕ್ಷಿಸಬಲ್ಲರೆಂದು’ ನಮ್ಮ ನಂಬಿಕೆ. ಅವರೂ ಇಲ್ಲಿಯೇ ಇದ್ದಾರೆ. ರಾಯರೇ“
ಗೋಪಾಲರಾಯನು ಈಚೆಗೆ ಬಂದು, ನಾಚಿಕೆಯಿಂದ ಕೆಂಪೇರಿರುವ ಮುಖವನ್ನು ತಗ್ಗಿಸಿಕೊಂಡು, ರಾಯರಿಗೆ ನಿನ್ನೆಯದಿನ ಸೀರೆಯುಟ್ಟು ಹೆಣ್ಣಾಗಿ ನಮ್ಮನ್ನು ಕೊಲ್ಲಬೇಕೆಂದು ಕಾದಿದ್ದವರನ್ನು ನಗರರಕ್ಷಕರಿಗೆ ಹಿಡಿದುಕೊಟ್ಟು ನಮ್ಮ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ನಿಮ್ಮ ಜೊತೆಯಲ್ಲಿ ಗಂಡಾಗಿಯೇ ನಿಮ್ಮನ್ನು ಕಾಯುತ್ತಾರೆ. ಸಾಲದೆ ಗುರುಗಳ ಆಶ್ರಯ ವಂತೂ ಇದ್ದೇ ಇದೆ. ಜೊತೆಗೆ ಸೆಟ್ಟರ ಸರ್ವಕಾವಲು. ಈಗಲಾದರೂ ಹೋಗಿಬರುವಿರಾ ? ಒಪ್ಪಿಗೆಯೇ?”
ಚಿನ್ನಾಸಾನಿಯು ಎದ್ದು ಚಕ್ರವರ್‍ತಿಗಳಿಗೆ ಪ್ರಣಾಮಮಾಡಿ ಕೇಳಿ ಕೊಂಡಳು. “ಇಷ್ಟುಹೊತ್ತೂ ಸನ್ನಿಧಿಯಲ್ಲಿ ಚಂಡಿಸಿದ್ದನ್ನು ಮರೆತುಬಿಡ ಬೇಕು. ದಾಸಿಯ ಅಪರಾಧವನ್ನು ಮನ್ನಿಸಬೇಕು.”
ರಾಯರು ಏಕಾಂತದಲ್ಲಿ ಇದ್ದಿದ್ದರೆ ಅವಳನ್ನು ಹೇಗೆ ಸಂಭಾವಿಸು ತ್ತಿದ್ದರೋ? ಅಂತೂ ಅವರ ಕಣ್ಣುಗಳಲ್ಲಿ ಹೊಳೆದ ಮಮತೆಯ ಭಾವವನ್ನು ಕಂಡು ಅವಳು ನಾಚಿ ತಲೆ ಬಗ್ಗಿಸಿದಳು. ಕೂಡಲೇ ದೊರೆಗಳು ವಿಷಯಾಂತರ ಮಾಡಬೇಕು ಎಂದುಕೊಂಡು, ರಾಯರನ್ನು ಕರೆದು, “ಎಲ್ಲರೂ ನಮಗೆ ಇಂದು ಆತ್ಮೀಯರಾದಿರಿ. ಎಲ್ಲಿ? ನಿನ್ನೆಯ ದಿನದ ತಮ್ಮ ಸಾಹಸವನ್ನು ಇನ್ನೊಮ್ಮೆ ಹೇಳಿ. ಇವರೆಲ್ಲ ಕೇಳಿ ಸಂತೋಷಸಡಲಿ. ನಾವು ಇದುವರೆಗೂ ಯಾರಲ್ಲಿಯೂ ಹೇಳದೆ ಇದ್ದ ಒಂದು ವಿಶೇಷರಹಸ್ಯವನ್ನು ಹೇಳುತ್ತೇವೆ” ಎಂದರು.
ರಾಯರು ಹಿಂದಿನ ದಿನದ ರಾತ್ರಿಯಲ್ಲಿ ನಡೆದುದೆಲ್ಲವನ್ನೂ ವಿಸ್ತಾರವಾಗಿ ಚಾಚೂ ತಪ್ಪದೆ ಹೇಳಿದರು: ಎಲ್ಲರೂ ಕೇಳಿ ಅವಾಕ್ಕಾದರು. ರಾಜಧಾನಿಯಲ್ಲಿ ಅದೂ ಹಿಂದೂಗಳೇ, ರಾಯರ ಮೇಲೆ ಕೈಮಾಡುವುದಕ್ಕೆ ಸಿದ್ಧರಾಗಿದ್ದರು ಎಂಬುದನ್ನು ಕೇಳಿ ಅವರಿಗೆ ನಂಬುವುದೇ ಕಷ್ಟವಾಯಿತು. ಆ ವಿಚಾರವಾಗಿ ಅಷ್ಟುಹೊತ್ತು ಮಾತನಾಡಿ, ಅದನ್ನುಬಿಟ್ಟು ದೊರೆಗಳು ತಮ್ಮ ಅಂತರಂಗದಲ್ಲಿದ್ದ ಗುಟ್ಟನ್ನು ಬಿಚ್ಚಿ ಹೇಳಿದರು. “ನಾವು ಯುದ್ಧಕ್ಕೆ ಸಿದ್ಧರಾಗಿದ್ದೇವೆ. ನಮ್ಮ ಸೈನ್ಯವು ಆಗಲೇ ಗೋವೆಯಿಂದ ಹೊರಟು ಸಹ್ಯಾದ್ರಿಯ ನೆತ್ತಿಯ ಮೇಲೆ ಕಾದು ನಿಂತಿದೆ. ಆದರೂ ನಾವು ತಡೆಯಲು ಒಂದು ಕಾರಣವಿದೆ. ವಿಜಯ ನಗರವೆಂದು ಈಗ ಅಭಿಮಾನಪಡುತ್ತಿರುವವರು ಆಂಧ್ರ, ಕರ್ಣಾಟಕರು ಮಾತ್ರ. ಚೋಳ. ಕೇರಳ ಪಾಂಡ್ಯರಿಗೆ ನಾವು ಅಧಿರಾಜರು. ನಮ್ಮ ಏಟು ತಪ್ಪಿಸಿಕೊಳ್ಳುವಹಾಗಿಲ್ಲ. ಅದರಿಂದ ನಮ್ಮಮೇಲೆ ಭಕ್ತಿ. ವಿಜಯನಗರದ ಆರಸನ ವಜ್ರಮುಷ್ಟಿ ಸಡಿಲವಾದರೆ ಆಯಿತು. ಅವರು ಸ್ವತಂತ್ರರಾಗಲು ಯತ್ನಿಸುತ್ತಿದ್ದಾರೆ. ಕೃಷ್ಣಾ ತೀರದಿಂದ ಅಲ್ಲಿ ಮೇಲೆ ಹಿಮಾಲಯದವರೆಗೂ ವ್ಯಾಪಿಸಿರುವ ಈ ಮ್ಲೇಚ್ಛರು ಅವರನ್ನು ತಡೆಗಟ್ಟಿರುವ ವಿಜಯನಗರನನ್ನು ದಾಟಿ ಕೆಳಕ್ಕಿಳಿದರೆ,ಈ ಚೋಳ,ಪಾಂಡ್ಯ, ಕೇರಳರು ಇನ್ನೂ ನೂರರಷ್ಟಾ ದರೂ ಆ ಪ್ರವಾಹವನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಮರೆತಿದ್ದಾರೆ. ಅವರಲ್ಲಿ ಆಭಿಮಾನವಿಲ್ಲ. ಇದು ನಮ್ಮ ದುಃಖ. ನಾವು ಅತ್ತ ತುರಕರಮೇಲೆ ಯುದ್ಧಕ್ಕಿಳಿದರೆ, ದಕ್ಷಿಣದವರು ದಂಗೆಯೆದ್ದರೆ ನಾವು ಗೆಲ್ಲುವಂತಿಲ್ಲ. ಗೆದ್ದರೂ ಪ್ರಯೋಜನವಿಲ್ಲ. ಆದರಿಂದ, ನಾವು ಸಾಹಸ ಮಾಡಿ ಪುಣ್ಯನಗರವನ್ನು ಹಿಡಿದು, ಅಲ್ಲಿನ ಮಹಾರಾಷ್ಟ್ರ ಜನರಿಗೆ ಹುರಿ ದುಂಬಿಸಿ, ಅವರು ನಮ್ಮಲ್ಲಿ ಹಾಗ ಆದದಷ್ಟಾದರೂ ಅಭಿಮಾನಪಟ್ಟರೆ, ಈ ಬಹಮನೀ ಸುಲಾ ಾನರನ್ನು ‘ಬೊಕ್ಕೆಯಲ್ಳಿ ಹಾಕುವುದು ಬಹು ಸುಲಭವಾಗು ವುದು. ಆದರಿಮ ದೀರ್ಫ್ಥಕಾಲ ಸಾಧ್ಯ. ಹಿಂದಿನ ದೇವಗಿರಿಯ ಯಾದವರು, ಓರಂಗಲ್ಲಿನ ಕಾಕತೀಯರು, ಬೇಲೂರಿನ ಹೊಯ್ಸಳರು ಒಟ್ಟು ಸೇರಿ ಯಾವ ಕೆಲಸ ಮಾಡಬೇಕಾಗಿತ್ತೋ ಅದನ್ನು ಇಂದು ನಾವು ಸಾಧಿಸಲು ಯತ್ನಿಸುತ್ತಿ ದ್ದೇವೆ. ಪೃಥ್ವೀ ರಾಜನ ಡೆಲ್ಲಿಯಲ್ಲಿ ನಮ್ಮ ವರಾಹಧ್ವಜವನ್ನು ಸ್ಥಾಪಿಸಿ, ಸೂರೆ ಹೋಗಿರುವ ಸೌರಾಷ್ಟ್ರದ ಸೋಮನಾಥ್ ದೇವಾಲಯದಲ್ಲಿ ಮತ್ತೆ ಲಿಂಗವನ್ನು ಪ್ರತಿಷ್ಠಾಪಿಸಿ, ಅಂಗವಂಗಗಳಿಂದ ಹಿಡಿದು ಕಾಬೂಲ್ ಕಂದಹಾರದವರೆಗೆ ಮತ್ತೆ ಹಿಂದೂರಾಜ್ಯವನ್ನು ಕಟ್ಟದಿದ್ದರೆ ಪೂಜ್ಯ ವಿದ್ಯಾರಣ್ಯರ ಆತ್ಮಕ್ಕೆ ಶಾಂತಿ ಯಾಗುವುದು ಎಂದೆಣಿಸಿದಿರಾ ? ಶ್ರೀ ಕೃಷ್ಣ ದೇವರಾಯರು ಯಾವ ಸಾಹಸ ದಿಂದ ಇತ್ತ ಓಢ್ರದೇಶದವರೆಗೂ ಸಾಧಿಸಿದರೋ ಅದೇ ಸಾಹಸವನ್ನು ಇನ್ನೂ ನಮ್ಮ ಸೇನೆಗಳು ಮರೆತಿಲ್ಲ. ಇನ್ನೂ ಆ ಹುರುಪು ಅಳಿದಿಲ್ಲ. ಆ ಬಿಗಿ ಸಡಿಲಿಲ್ಲ. ಹಿಂದೆ ಚಾಲುಕ್ಯಸಾಮ್ರಾಟ್ ಪುಲಿಕೇಶಿಯು ಉತ್ತರದ ಶ್ರೀಹರ್ಷಸಮ್ರಾಟನು ನರ್ಮದೆಯ ದಕ್ಷಿಣಕ್ಕೆ ಕಾಲಿಕ್ಕದಂತೆ ತಡೆದು, ಗಂಗಾನದಿಯವರೆಗೆ ಅಟ್ಟಿ ಕೊಂಡು ಹೋಗಿದ್ದನೆಂಬ ಕಥೆಯನ್ನು ಈಗ ನಿಜಮಾಡುವ ಕಾಲಬಂದಿದೆ. ಅಲ್ಲಿ ಆರಾವಳಿ ಬೆಟ್ಟದ ಸಾಲಿನಲ್ಲಿ ರಾಜಪುತ್ರರು ಹುಲಿಗಳ ಹಾಗೆ ಕಾದಿದ್ದಾರೆ. ಈಗ ಪವಿತ್ರ ಭರತಖಂಡವು ಗೋಮಾಂಸಭಕ್ಷಕರಾದ ಈ ಮೇಚ್ಛರ ಹಿಡಿತ ದಿಂದ ಪಾರಾಗುವ ಶುಭದಿನಗಳು ಸಮೀಪಿಸುತ್ತಿವೆ. ಇದಕ್ಕಾಗಿ ವಿಜಯನಗರವು ಈ ಬಹಮನೀ ಸುಲ್ತಾನರನ್ನು ಮೊದಲು ಸ್ವಾಹಾ ಮಾಡಿ ಮುಂದೆ ಹೊರಡ ಬೇಕಾಗಿದೆ. ಅವರೂ ದೀಪಜ್ವಾಲೆಯಲ್ಲಿ ಬೀಳಬರುವ ಪತಂಗಗಳಂತೆ ನಮ್ಮ ಮೇಲೆ ಬೀಳಲು ಯತ್ನಿಸುತ್ತಿದ್ದಾರೆ. ನಾವೂ ಕಾಯುತ್ತಿದ್ದೇವೆ. ಪಂಪಾಪತಿಯ ಕೃಪೆಯಿರಲಿ, ಭುವನೇಶ್ವರಿಯ ಅನುಗ್ರಹವಿರಲಿ. ಈಗ ಒದಗಿರುವ ಈ ಸಂಧಿಯ ಸುಯೋಗವನ್ನು ಉಪಯೋಗಿಸಿಕೊಂಡು ಪುಣ್ಯ ನಗರದ ಮಹಾರಾಷ್ಟ್ರ ರನ್ನೂ, ಓಢ್ರದೇಶದ ಉರಿಯರನ್ನೂ ಮಡುಲಿಗೆ ಹಾಕಿಕೊಂಡು, ನಮ್ಮ ಇಷ್ಟಾರ್ಥವನ್ನು ಸಾಧಿಸಿಕೊಳ್ಳೋಣ. ಅದರಿಂದ ತಾವೆಲ್ಲರೂ ದೊಡ್ಡ ಮನಸ್ಸು ಮಾಡಿ ಗೋಲ್ಕೊಂಡಕ್ಕೆ ಹೋಗಿಬನ್ನಿ. ಈಗ ನಾನು ಹೇಳಿದುದು ರಾಜ ರಹಸ್ಯ. ಗೋಪ್ಯವಾಗಿರಲಿ ಎಂದು ನಾವು ಹೇಳಬೇಕಾಗಿಲ್ಲವಲ್ಲ” ಎಂದರು.
ಆಚಾರರು ಅದನ್ನು ಕೇಳಿ ನೀರವವಾಗಿ ರೋದಿಸಿದರು. ಚಿನ್ನಾ ಸಾನಿಯು ಬುಡುಬುಡಿಕೆಯವನು ಹೇಳಿದುದು ಇದೇನೋ ಎಂದು ಯೋಚಿಸು ತ್ತಿದ್ದಳು. ಯಜಮಾನ್ ವೀರಪ್ಪ ಸೆಟ್ಟರು ಹಾಗಾದರೆ ಈ ಸಂಧಿ ಮುಂದಿನ ಮಹಾಯುದ್ಧದ ಪೀಠಿಕೆ ಎಂದು ಚಿಂತಾಗ್ರಸ್ತರಾಗಿ ಕೇಳುತ್ತಿದ್ದರು. ಒಬ್ಬನ ಮನಸ್ಸು ಮಾತ್ರ ತನ್ನ ಮನೋರಮೆಯೊಡನೆ ಏಕಾಂತದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ, ಶೃಂಗಾರಸಾಗರದಲ್ಲಿ ಮುಳುಗಿ ತೇಲುತ್ತ. ಇವಳನ್ನು ಬಿಟ್ಟು ಹೋಗಿಬರಬೇಕಲ್ಲ ಎಂದು ಚಿಂತಿಸುತ್ತಿತ್ತು.
ರಾಜವೀಳೆಯಗಳು ಎಲ್ಲರಿಗೂ ಯಥೋಚಿತವಾಗಿ ಸಂದುವು. ರಾಜಾಜ್ಞೆಯಿಂದ ಎಲ್ಲರಿಗೂ ಶಾಲುಜೋಡಿಗಳ ಖಿಲ್ಲತ್ತುಗಳೂ ದೊರೆತುವು. ಎಲ್ಲರೂ ಚಕ್ರವರ್ತಿಗಳ ಅಪ್ಪಣೆಯನ್ನು ಪಡೆದು ಬೀಳ್ಕೊಂಡು ಬಂದರು.
ಚಿನ್ನಾಸಾನಿಯು ಎಲ್ಲರಿಗಿಂತ ಹಿಂದೆ ಹೋದಳು. ಹೋಗುತ್ತಿದ್ದವಳು ಹಿಂದಿರುಗಿ ನೋಡಿ, ದರ್ಶನಮಂದಿರದಲ್ಲಿ ಯಾರೂ ಇಲ್ಲದುದನ್ನು ಕಂಡು ರಾಯರ ಮುಖದ ಕಡೆಗೆ ಕೈಯೆತ್ತಿ ಮೋಹದಿಂದ ನೋಡಿ, ಮೂತಿಯನ್ನು ಕುದುರೆಯಂತೆ ಮಾಡಿಕೊಂಡು, ತಲೆಯ ಪಕ್ಷದಲ್ಲಿ ನೆಟಕೆ ಮುರಿದು, ನಕ್ಕು ಹೊರಟುಹೋದಳು. ರಾಯರಿಗೆ ಆ ಹೋಗುವ ವೈರಿಯನ್ನು ಕಂಡು “ಆ ಹಾಳು ಪ್ರಾರಬ್ರ ಇಲ್ಲದಿದ್ದರೆ ಇವಳನ್ನು ಸುಖವಾಗಿ ರಾಣಿವಾಸಕ್ಕೆ ಸೇರಿಸಿಕೊಳ್ಳಬಹುದಾಗಿತ್ತು. ಈ ರೂಪ, ಈ ಲಾವಣ್ಯ, ಈ ಸೊಗಸು ಯಾರಿಗುಂಟು ? ರಾಜಸ್ತ್ರೀಯರಿಗೂ ಈ ಸೌಭಾಗ್ಯವಿಲ್ಲವಲ್ಲಾ !”ಎಂದು ನಿಟ್ಟುನಿರು ಕರೆಯುತ್ತಾ ನಿಂತುಕೊಂಡರು.
ಹಾಗೇ ಒಂದು ಅಷ್ಟು ಹೊತ್ತು ಅದೇ ಧ್ಯಾನದಲ್ಲಿದ್ದು ಎಚ್ಚರಗೊಂಡು ಕೈತಟ್ಟದರು. ರಾಯರ ಸ್ವಂತ ಕಾರಭಾರಿಯು ಬಂದು ಕೈಮುಗಿದನು. ರಾಯರು ಹೇಳಿದರು, “ಇದು ಅವಸರದ ಕಾರ್ಯ. ಕೂಡಲೇ ಆಗಬೇಕು. ಸೆಟ್ಟರು ರಾಜಧಾನಿಯಿಂದ ಹೊರಡುವಾಗಲೇ ರಾಯಭಾರಿಯ ಮರ್ಯಾದೆ ಗಳೂಡನೆ ಒಂಟಿಯ ಸಾರೋಟನಲ್ಲಿ ಹೊರಟು ನೇರವಾಗಿ ಗೋಲ್ಕೊಂಡಕ್ಕೆ ಹೋಗಲಿ. ಅಲ್ಲಿರುವ ರಾಯಭಾರಿಯು ಸೆಟ್ಟರನ್ನು ಮಾನಸ್ಕಂಧರಂತೆ ಭಾವಿಸಿ ನಡೆಯತಕ್ಕುದು. ಭರತಾಚಾರ್ಯರು ಅವರ ಶಿಷ್ಕರೊಡನೆಯೂ, ಮಿತ್ರರೊಡನೆಯೂ; ಕುದುರೆಯ ಸಾರೋಟುಗಳಲ್ಲಿ, ನಮ್ಮ ಮೂಲಬಲದ ಆಶ್ವವೊಂದರ ರಕ್ಷಣೆಯಲ್ಲಿ ಸುಖಪ್ರಯಾಣ ಬೆಳೆಸತಕ್ಕುದು. ದಾರಿಯುದ್ದಕ್ಕೂ ಆಚಾರ್ಯರಿಗೆ ಒಂದುದಿನವೂ ದೇವರಪೂಜೆ ತಪ್ಪಕೂಡದು. ಆಚಾರ್ಯರ ರಾಯರೂ ಆರಮನೆಯ ಬಿರುದು ಪಡೆದವರು. ಚಿನ್ನಾಸಾನಿಯು ನಮ್ಮ ವಿಶೇಷಾನುಗ್ರಹಕ್ಕೆ ಪಾತ್ರಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ವರೂ ಅವರಲ್ಲಿ ಅವರಿಗೆ ಸಂತೋಷವಾಗುವಂತೆ ನಡೆಯಬೇಕೆಂದು ನಮ್ಮಾಜ್ಞೆ. ಸೆಟ್ಟರು ಹೊರಡುವ ವೇಳೆಗೆ ಪಂಪಾಪತಿಗೂ, ಭುವನೇಶ್ವರಿಗೂ ವಿಶೇಷ ಪೂಜೆ ನಡೆದ್ದು ರಾಜಮರ್ಯಾದೆಗಳೊಡನೆ ಪ್ರಸಾದವು ಅವರಿಗೆ ತಲಪಿರಬೇಕು.
ಅವರ ದಾರಿಯವೆಚ್ಚಕ್ಕೆ ಐದು ಥೈಲಿಗಳು. ಭರತಾಚಾರ್‍ಯರಿಗೆ ದಾರಿಯ ವೆಚ್ಚಕ್ಕೆ ಹತ್ತು ಥೈಲಿಗಳು. ಇಲ್ಲಿ ದೇವಸ್ಥಾನಗಳಲ್ಲಿ ವಿಶೇಷಪೂಜೆ ನಡೆಸಿ, ಒಂದು ಸಮಾರಾಧನನನ್ನು ಮಾಡಿ, ಅವರು ಹೊರಡುವರು.
ಕಾರಭಾರಿಯು ಎಲ್ಲವನ್ನೂ ಗುರುತಿಸಿಕೊಂಡು ಹೊರಡುತ್ತಿದ್ದ ಹಾಗೆಯೇ ಚಿನ್ನಳು ಮತ್ತೆ ಬಾಗಿಲಲ್ಲಿ ಕಾಣಿಸಿಕೊಂಡಳು. ರಾಯರು ಪ್ರೀತಿ ಯಿಂದ ಕರೆದರು. ಬಂದು ಮತ್ತೆ ಕಾಲು ಮುಟ್ಟಿ ಕಣ್ಣಿಗೆ ಒತ್ತಿಕೊಂಡು, “ನನ್ನ ದೇವರ ಅಪ್ಪಣೆಯಾದರೆ ಶಿ ಶ್ರೀಶೈಲದ ದೇವರ ದರ್ಶನಮಾಡಿ ಬರುತ್ತೇನೆ” ವಿನಯವಾಗಿ ಬೇಡಿದಳು.
ರಾಯರು ಅವಳನ್ನು ಅಸೂಯೆಯಿಂದ ನೋಡುತ್ತ, “ಏನು ಹೇಳಲೋ? ದೇವರು. ದೇವರು. ಆದರೆ ನಿನ್ನ ಪೂಜೆಯೆಲ್ಲಾ ಇನ್ನಾವುದೋ ದೇವರಿಗೆ” ಎಂದು ಮೂದಲಿಸಿದರು.
ಆವಳು ಆ ಮೂದಲೆಯಿಂದ ಗೌರವಿತಳಾದಂತೆ ಸಂತೋಷಿಸುತ್ತಾ “ಜಗತ್ಕರ್ತನು ಕೈಗೆ ಸಿಕ್ಳುವುದಿಲ್ಲವೆಂದು ಒಂದು ಮೂರ್ತಿಯನ್ನು ಪೂಜೆಗೆ ಇಟ್ಟು ಕೊಳ್ಳುವುದಿಲ್ಲವೆ ? ಹಾಗೆ. ಅದೂ ಇದೂ ಎರಡೂ ನಿನ್ನದೇ!” ಎಂದು ಭಾವವಾಗಿ, ಅಭಿನಯಿಸುವಳಂತೆ ನುಡಿದಳು.
ಆರಸರಿಗೆ ಆ ಭಾವ, ಆ ಅಭಿನಯ, ಬಲುಮೆಚ್ಛಾಯಿತು. ರಂಗು ಏರಿತು. ಆದರೂ ಗಾಂಭೀರ್ಯವನ್ನು ಬಿಡದೆ ಕೇಳಿದರು, ಹಾಗಾದರೆ ಶ್ರೀ ಶೈಲವನ್ನೇರಿ ಮಲ್ಲಿಕಾರ್ಜುನನ ತಪೋಭಂಗ ಮಾಡಿಬರಬೇಕು ?”
ಅವಳು ಆ ವಚೋಭಂಗಿಯನ್ನಿತು “ಅಂಗವನ್ನು ಸುಟ್ಟು ಅನಂಗನನ್ನು ಮಾಡಿ ಅವನಿಗೇ ವರನಾದವನಿಗೆ ತಪೋಭಂಗವೇನು 1 ತಪಸ್ಸಿದ್ಧಿಯೇನು ? ಆದರೂ ತಲೆಯಮೇಲೊಬ್ಬಳನ್ನು ಪಕ್ಕದಲ್ಲೊಬ್ಬಳನ್ನು ಇಟ್ಟುಕೊಂಡು ಕುಣಿಯುವ ಆ ಬಟ್ಟೆಗೆಟ್ಟವನನ್ನು ನೋಡಿದರೆ ಇತರರಿಗಿಂತ ಉತ್ತಮವಾಗ ಬಹುದೇನೋ ಎಂದು ಆಸೆ? ಎಂದು ಭಾವಭಂಗಿಯಿಂದ ಏನೇನೋ ಅರ್ಥಗಳಾಗುವಂತೆ, ವಿನಯವನ್ನು ಬಿಡದೆ ನುಡಿದಳು.
ರಾಯರು ಆ ವಿನಯ, ಆ ಭಾವಭಂಗಿಗಳನ್ನು ಕಂಡು ಆನಂದಪರ ರಾದರು. ಅವಳು ಸೊಟ್ಟಗೆ ತಲೆಬಾಗಿಸಿಕೊಂಡು, ಕೈಮುಗಿದುಕೊಂಡು, ನಿಲು ಗೌರಿಯ ಬೊಂಬೆಯಂತೆ ನಿಂತಿದ್ದರೆ, ರಾಯರಿಗೆ ಮದನನ ಉಪಾಸನಾ ದೇವತೆಯೇ ಪ್ರತ್ಯಕ್ಷವಾದಂತಾಯಿತು. ರಾಯರು ಆವೇಶಗೊಂಡು ಅವಳನ್ನು ಮೇಲೆಬಿದ್ದು ಅಪ್ಪಿಕೊಂಡರು. ಅವಳು ಆ ಆಲಿಂಗನನನ್ನು ಒಪ್ಪಿಕೊಳ್ಳುತ್ತಾ “ಆಯ್ಯೋ ಪ್ರಾರಬ್ಬವೇ, ದರ್ಶನಮಂದಿರ. ಕಂಭಕಂಭಕ್ಕೂ ಕಾವಲು ಗಾರರಲ್ಲಾ !” ಎಂದು ಹಲ್ಲುಮಡಿ ಕಚ್ಚಿಕೊಂಡು ಹೇಳಿದಳು.
“ಅರಸನಿಗೂ ಅಂಕೆಯೇನು?” ಎಂದು ನಿರ್ಲಕ್ಷ್ಯವಾಗಿ. ಸಣ್ಣ ಹಕ್ಕಿಯನ್ನು ಹಾರಿಸಿಕೊಂಡು ಹೋಗುವ ಗಿಡಗನಂತೆ ಅವಳನ್ನೆತ್ತಿ ಕೊಂಡು ಸಸೀತ್ಕಾರವಾಗಿ ಚುಂಬಿಸುತ್ತಾ ರಾಯರು ಆ ವಿಶಾಲಮಂದಿರದಲ್ಲಿ ಎಲ್ಲಿಯೋ ಮರೆಯಾದರು.
*****
ಮುಂದುವರೆಯುವುದು


















