Home / ಕಥೆ / ಕಾದಂಬರಿ / ಅವಳ ಕತೆ – ೪

ಅವಳ ಕತೆ – ೪

ಅಧ್ಯಾಯ ನಾಲ್ಕು

ತುಂಗಭದ್ರೆಯ ತೀರದಲ್ಲಿ ಆ ದೊಡ್ಡ ದೊಡ್ಡ ಬಂಡೆಗಳ ಅತ್ತಕಡೆ, ಮತಂಗಾಶ್ರಮದ ಹತ್ತಿರ ಹಸ್ತಿರವಾಗಿ ಒಂದು ಸಣ್ಣ ತೋಟದಲ್ಲಿ ಭರತಾ ಚಾರ್ಯರ ಆಶ್ರಮ. ಅವರ ನಿಜವಾದ ಹೆಸರು ಶ್ಯಾಮಾಚಾರ್ಯರು ಎಂದು. ಆದರೆ ಅವರ ಭರತಶಾಸ್ತ್ರದ ಅಪಾರ ಪಾಂಡಿತ್ಯಕ್ಕೆ ತಲೆದೂಗಿ ಶ್ರೀ ಕೃಷ್ಣದೇವ ರಾಯರು ಅವರಿಗೆ ಭರತಾಚಾರ್ಯ ಎಂದು ಹೆಸರಿಟ್ಟು ರತ್ನದ ಥೋಡಾ ಹಾಕಿಸಿದ್ದರು. ಅಂದಿನಿಂದ ಅವರನ್ನು ವಿದ್ವಾಂಸರೆಲ್ಲ ಭರತಾಚಾರ್ಯರು ಎಂದು ಕರೆದರೆ ಸಾಮಾನ್ಯ ಜನರೆಲ್ಲ ಥೋಡಾದ ಗುರುಗಳು ಎಂದು ಕರೆಯುವರು.

ಅವರಿಗೆ ದೇವರಲ್ಲಿ ಅಪಾರವಾದ ಭಕ್ತಿ. ಅವರಿಗೆ ದೇವರ ನಾಮ ಹಾಡುವುದರಲ್ಲಿ ಅನಂತವಾದ ಆದರ. ಅದರಲ್ಲಿಯೂ ದಾಸರಾಯರದು, ರಾಯರದು ದೇವರನಾಮ ಹಾಡುವುದು ಎಂದರೆ ಅವರಿಗೆ ಎರಡು ಬಾಯಾಗು ವುದು. ವ್ಯಾಸರಾಜರಿದ್ದಾಗಲಂತೂ ಅವರಿಗೆ ಮಠದಲ್ಲಿ ಬಹಳ ಗೌರವ. ವಿದ್ವಾಂಸರು “ನಟುವನಾಗಿ ಹುಟ್ಟಿ ಬೇಕಾಗಿದ್ದು ತಪ್ಪಿ ಬ್ರಾಹ್ಮಣನಾಗಿದ್ದಾನೆ. ಇವನಿಗೆ ಇಷ್ಟು ಗೌರವವೋ !”ಎಂದು ಮೂಗುಮುರಿದರು. ರಾಯರೊಮ್ಮೆ (ರಾಯರು ಎಂದರೆ ಶ್ರೀ ವ್ಯಾಸರಾಯರು) ತುಂಬಿದ ಸಭೆಯಲ್ಲಿ ಭರತಾಚಾರ್ಯರ ಸಂಗೀತ ಮಾಡಿಸಿದರು. ಶ್ರೀ ಕೃಷ್ಣದೇವರ ಸನ್ನಿಧಿಯಲ್ಲಿ ರಾಯರ ಎದುರಿಗೆ ಕುಳಿತು ಹಾಡುತ್ತ ಹಾಡುತ್ತ “ಕೃಷ್ಣಮೂರ್ತಿ ಕಣ್ಣು ಮುಂದೆ ನಿಂತಿದಂತಿದೆ. ಎಂಬ ಕೀರ್ತನೆಯನ್ನು ಹಾಡುವಾಗ ಆಚಾರ್ಯರಿಗೆ ಮೈಮರೆಯಿತು. ಹಾಗೇ ಸೊಪ್ಪಾಗಿ ಬೀಳುವುದರಲ್ಲಿದ್ದರು. ರಾಯರು ಥಟ್ಟನೆದ್ದು “ಕೃಷ್ಣದೇವರ ಅಪ್ಪಣೆಯಾಗಿದೆಯಪ್ಪಾ ! ಪೂರ್ಣವಾಗಲಿ’ ಎಂದು ತೀರ್ಥವನ್ನು ತಳೆದರು“ ಆಚಾರ್ಯರು ಎದ್ದು ಕುಳಿತು ಹಾಡಿದರು. ಕೇಳುತ್ತ ಕೇಳುತ್ತ ಸಭೆ ಮೈಮರೆ ಯಿತು. ಎಲ್ಲರಿಗೂ ಯಾವುದೋ ಲೋಕದಲ್ಲಿ ಇದ್ದ ಹಾಗೆ ಆಗಿಹೋಯಿತು. ಏನು ಕೇಳುವೆನೆಂಬ ಅರಿವು ಯಾರಿಗೂ ಇಲ್ಲ… ಯಾವುದೋ ಒಂದು ಅಪಾರ ವಾದ ಗಂಭೀರವಾದ ಗಾನಸಾಗರದಲ್ಲಿ ತಾವೆಲ್ಲ ಮೀನುಗಳಾಗಿರುವಂತೆ ಭಾಸವಾಗುತ್ತಿದೆ. ಆಚಾರ್ಯರು ರಾಗರಾಗಗಳಲ್ಲಿ ತಾಳತಾಳಗಳಲ್ಲಿ “ಕೃಷ್ಣ ಮೂರ್ತಿ” ಹಾಡುತ್ತಿದಾರೆ. ಸಭೆಗೆ ಸಭೆಯೇ ಪರವಶವಾಗಿಹೋಗಿದೆ. ಕೊನೆಗೆ ಆಚಾರ್ಯರು ಅದನ್ನೇ ಪಲ್ಲವಿಯಾಗಿಯೂ ಹಾಡಿದರು. ಆಗಲೂ ಎಲ್ಲರೂ ತಲೆತೂಗುತ್ತಿದ್ದಾರೆ. ತಾಳ ಹಾಕುತ್ತಿದ್ದಾರೆ. ಹಾ! ಎನ್ನುತ್ತಾರೆ. ಆದರೂ ಮಂತ್ರವ ಮುಗ್ಧರಹಾಗೆ ಇದ್ದಾರೆ.

ಹೀಗೆ ಒಂದು ಝಾವ ಕಳೆದುಹೋಯಿತು. ಎಲ್ಲರ ಕಣ್ಣುಗಳು ನೀರು ಸುರಿಸಿ ಸುರಿಸಿ ಇಷ್ಟಿಷ್ಟುಗಾತ್ರವಾಗಿವೆ. ಆನಂದದಿಂದ ಮುಖಗಳು ಅರಳಿದೆ ಪದ್ಯಗಳಹಾಗಾಗಿವೆ. ಬಾಯಿ ಮುಚ್ಚದೆ ಬಾಯೊಳಕ್ಕೆ ನೊಣ ಹೋಗುವುದೂ ಅರಿವಿಲ್ಲದೆ ಆನಂದನಡುತ್ತಿದ್ದಾರೆ. ಮೃದಂಗದವನಿ ಗೆ ಎಚ್ಚರವಿಲ್ಲ. ಬಾರಿಸುವುದು ತಪ್ಪಿಲ್ಲ ಗೋಟುವಾದ್ಯದವನಿಗೆ ಅರಿವಿಲ್ಲ: ಒಂದು ಸ್ವರ ತಪ್ಪಿಲ್ಲ. ಆಚಾರ್ಯರಿಗೆ ಏನು ಹಾಡಬೇಕು ಎಂಬುದಿರಲ್ಲಿ, ಏನು ಹಾಡುತ್ತಿದ್ದೇನೆಂಬುದೂ ಅರಿವಿಲ್ಲ.

ಕೊನೆಗೆ ಗಾನಮದ ತನಗೆ ತಾನೇ ಇಳಿಯಿತು. ಗುರುಗಳು ಮಂಗಳಾರತಿ ಮಾಡಿದರು. ಎಲ್ಲರಿಗೂ ಮೈ ಅರಿವು ಬಂತು. ಆ ದಿನ ಗುರುಗಳು ಶ್ಯಾಮಾ ಚಾರ್ಯರನ್ನು ಕರೆದು ಚಕ್ರವರ್ತಿಗಳು ಮೆಚ್ಚಿಕೊಟ್ಟ ಭರತಾಚಾರ್ಯ ಎಂಬ ಬಿರುದು ಈ ದಿನ ಸಾರ್ಥಕವಾಯಿತು. ಶೀ ಕೃಷ್ಣರಾಯರು ಅಂದು ಮೆಚ್ಚಿ ದಷ್ಟು ಇಂದು ಶ್ರೀ ಕೃಷ್ಣಪರಮಾತ್ಮನೂ ಮೆಚ್ಚಿದ್ದಾನೆ. ಈ ಭಕ್ತಿ ಕಾಪಾಡಿಕೊಳ್ಳಿ ಎಂದು ಪ್ರಸಾದದೊಡನೆ ಒಂದು ಸಾವಿರ ರೂಪಾಯಿ ಕರುಣಿ ಸಿದರು. ಆಚಾರ್ಯರು ಒಂದು ರೂಪಾಯಿ ತೆಗೆದುಕೊಂಡು ಕಣ್ಣಿಗೆ ಒತ್ತಿ ಕೊಂಡು ಮುಕ್ಕುದನ್ನೆಲ್ಲಾ ಶ್ರೀ ಕೃಷ್ಣದೇವರ ಸೇವೆಗೆ ಸಮರ್ಪಿಸಿ, ಗುರುಗಳಿಗೆ ನಮಸ್ಕಾರಮಾಡಿ, “ತಮ್ಮ ಪ್ರಸಾದದಿಂದ ಈ ವಿದ್ಯೆಯ ಆಳ ಕಂಡೆ. ಇನ್ನು ಮುಂದೆ ಶ್ರೀ ಕೃಷ್ಣದೇವರ ಮುಂದೆ ಮಾತ್ರ ನನ್ನ ಪಾಟುಕಛೇರಿ ನಡೆಯಬೇಕು. ಇನೆಲ್ಲಿಯೂ ಕೂಡದು ಎಂದು ಅನುಗ್ರಹವಾಗಬೇಕು. ಗುರುಗಳ ಪ್ರಸಾದವಾಗಿ ಲಭಿಸಿದ ಈ ವಿದ್ಯೆ ದೇವರಲ್ಲಿಯೇ ಅರ್ಪಣವಾಗಬೇಕು” ಎಂದು ಪ್ರಾರ್ಥಿಸಿ ಕೊಂಡರು. ಗುರುಗಳು ಆಗಲಿ ಎಂದು ಹೇಳಿದರು. ಅಂದಿನಿಂದ ವಿಜಯ ನಗರದ ಚಕ್ರವರ್ತಿಗಳೂ ಕೂಡ ರಾಯರ ಅಪ್ಪಣೆಯನ್ನು ಮನ್ನಿಸಿದರು. ಕೃಷ್ಣಾಷ್ಟಮಿ, ವಿನಾಯಕ ಚತುರ್ಥಿ, ಬಲೀಂದ್ರ ಪಾಡ್ಯ, ಶಿವರಾತ್ರಿಗಳಲ್ಲಿ ಅಲ್ಲದೆ ಇನ್ನು ಯಾವಾಗಲೂ ಅವರು ಅರಮನೆಯಲ್ಲಿ ಹಾಡುತ್ತಿರಲಿಲ್ಲ ಅವರ ಮನೆಯಲ್ಲಿ ನಿತ್ಯವೂ ಬೆಳಿಗ್ಗೆ ಮೊದಲನೆಯಝಾವದೊಳಗಾಗಿ ದೇವರ ಪೂಜೆಯಾಗುವುದು. ಆಚಾರ್ಯರು ತಂಬೂರಿ ತಾಳಗಳನ್ನು ಇಟ್ಟು ಕೊಂಡು ದಿನವೂ ದೇವರ ಮುಂದೆ ಹಾಡುವರು. ಅವರ ಸಂಗೀತ ಕೇಳ ಬೇಕೆಂದನರು ಆ ಹೊತ್ತಿನಲ್ಲಿ ಬಂದು ಹೊರ ಆವರಣದಲ್ಲಿ ಕುಳಿತು ಕೃತಾರ್ಥ ರಾದೆವು, ಇದು ನಿಜವಾಗಿಯೂ ಭರತಾಶ್ರಮವೆಂದುಕೊಂಡು ಹೋಗುವರು.

ಅವರು ಮಾಧ್ಯಾಹ್ನಿಕವನ್ನು ಮುಗಿಸಿ ಊಟಮಾಡಿ ಅತ್ತ ಮಗ್ಗುಲಾಗಿ ಅಷ್ಟು ಹೊತ್ತು ವಿಶ್ರಾಂತಿ ಪಡೆಯುವ ವೇಳೆಗೆ ಗಾಡಿಯು ಬರುವುದು. ಅಲ್ಲಿಂದ ಹೋಗಿ ಶಿಷ್ಯಳ ಬಳಿಯಲ್ಲಿ ಕುಳಿತು ಆ ಶಾಸ್ತ್ರ ಈ ಶಾಸ್ತ್ರ ಎಂದು ವಿಚಾರ ಮಾಡುತ್ತ ಸಂಜೆಯವರೆಗಿದ್ದು ಮತ್ತೆ ಮನೆಗೆ ಬರುವರು. ಅವರಿಗೆ ಎಷ್ಟೋ ಜನ ಶಿಷ್ಯರುಂಟು. ಯಾರ ಮೇಲೂ ಚಿನ್ನಾಸಾನಿಯ ಮೇಲಿರುವ ಅಭಿಮಾನ ಇಲ್ಲ. ಅವರನ್ನು ಕೇಳಿದರೆ “ಭರತಶಾಸ್ತ್ರ ಗಂಧರ್ವರ ವಿದ್ಯೆ. ಆದರಲ್ಲಿ ಸಹಜನಾಗಿ ಕಾಮವನ್ನು ಕೆರಳಿಸುವ ಪ್ರವೃತ್ತಿಯುಂಟು. ಅದಕ್ಕೆ ವಶವಾದರೆ ವಿದ್ಯೆ ಬೆಳೆಯುವುದು ಮುಗಿಯಿತು. ಹರಿಯುವ ನೀರಿಗೆ ಅಡ್ಡ ಕಟ್ಟಿ ಹಾಕ ಬೇಕು, ಕಾಲುವೆಗೆ ತಿರುಗಿಸಬೇಕು. ಹಾಗೆ, ಭರತಶಾಸ್ತ್ರ ಕೆರಳಿಸಿದ ಕಾಮವನ್ನು ತಡೆದು ದೇವರತ್ತ ತಿರುಗಿಸಿದರೆ ಅದೇ ಭಕ್ತಿ. ಅದನ್ನು ಆಶ್ರಯಿ ಸಿದವರಿಗೆ ಇಹದಲ್ಲಿ ಭುಕ್ತಿ, ಪರದಲ್ಲಿ ಮುಕ್ತಿ. ಇದು ಬಿಟ್ಟು ಕಾಮಪರಾ ಯಣರಾದವರಿಗೆ ಇಹದ್ದೆಷ್ಟೋ ಅಷ್ಟೆ ! ನಾವು ಇಲ್ಲಿಂದಾಚೆಗೆ ಅಷ್ಟು ಇದೆ ಎಂದು ನಂಬಿರುವವರು. ನಾವು ನಮ್ಮ ನಂಬಿಕೆಗೆ ತಕ್ಕಂತೆ ನಡೆಯಬೇಡವೇ ?” ಎನ್ನುವರು. ಚಿನ್ನುಸಾನಿಯೂ ಅಷ್ಟೇ ಗುರುವೆಂದರೆ ಅವಳಿಗೆ ಪರದೈವ.

ಗಾಡಿಯು ಎಂದಿನಂತೆ ಬಂದಿತು. ಆಚಾರ್ಯರು ನಿತ್ಯಕ್ಕಿಂತ ಕೊಂಚ ಹೊತ್ತು ಹೆಚ್ಚಾಗಿ ಮಲಗಿದ್ದರು. ಎದ್ದು ಮುಖ ತೊಳೆದುಕೊಂಡು ಯಥೋ ಚಿತವಾಗಿ ಉಟ್ಟು ಹದೆದು ಹೊರಟರು ಗಾಡಿಯವನು “ಇವೊತ್ತು ಬೇಗ ಬರಬೇಕು ಎಂತ ಹೇಳಿದ್ದರು ಬುದ್ಧೀ !’ ಎಂದನು. “ನೋಡಿದೆಯಾ ಮತ್ತೆ! ಹೇಳಬೇಕಾಗಿತ್ತೋ ಇಲ್ಲವೋ? ಮಲಗಿದ್ದರೆ ತಾನೇ ಏನು? ಏಳಿಸಿದ್ದರೆ ಆಗುತ್ತಿರಲ್ಲಿವೇ; ಪಾಸ! ನಿಮ್ಮ ಅಮ್ಮಣ್ಣಿಯವರು ಎಷ್ಟು ಕಾದಿರುತ್ತಾರೋ?“ ಚಿನ್ನಳು ಗುರುವಿನ ಹಾದಿಯನ್ನು ನೋಡುತ್ತ ಮಹಡಿಯಿಳಿದು ಬಂದು ತೋಟದಲ್ಲಿಯೇ ನಿರೀಕ್ಷಿಸುತ್ತ ನಿಂತಿದ್ದಳು. ಗಾಡಿಯು ಬರುತ್ತಿದ್ದಹಾಗೆಯೇ ಇತರರು ಬರುವುದಕ್ಕಿಂತ ಮುಂಚೆ ತಾನೇ ಬಂದು ಬಾಗಿಲು ತೆಗೆದು ಗಾಡಿಯಿಂದ ಅವರನ್ನು ಇಳಿಸಿಕೊಂಡು ಕರೆದುಕೊಂಡುಹೋದಳು. “ಇವೊತ್ತೇಕೆ ಇಷ್ಟು ಹೊತ್ತಾಯಿತು? ಆರೋಗ್ಯವಾಗಿದ್ದೀರಿ ತಾನೇ? ಯಾರಾದರೂ ನೆಂಟರಿಷ್ಟರು ಬಂದಿದ್ದಾರೇನು?? ಎಂದು ಹಲವಾರು ಪ್ರಶ್ನೆಗಳನ್ನು ಒಂದೇಸಮನೆ ಕೇಳಿದಳು.

ಶ್ಯಾಮಾಚಾರ್ಯರು ಮಗಳನ್ನು ಮಾತನಾಡಿಸುವ ತಾಯಿಯಂತೆ ವಾತ್ಸಲ್ಯದಿಂದ, “ಇಷ್ಟು ಪ್ರಶ್ನೆ ಒಟ್ಟಿಗೆ ಮುಂಗಾರು ಮಳೆ ಹಾಗೆ ಸುರಿದರೆ ಯಾವುದಕ್ಕೆ ಉತ್ತರ ಹೇಳುವುದು? ಯಾವುದನ್ನು ಬಿಡುವುದು? ಆರೋಗ್ಯವಾಗಿದ್ದೇನೆ. ಏನೋ ಬೆಳಿಗ್ಗೆ ಊಟಕ್ಕೆ ಮುಂಚೆ ಯಾರನ್ನೋ ನೋಡುವುದಕ್ಕೆ ಹೋಗಿದ್ದೆ. ಬಂದು ಊಟ ಮಾಡುವುದು ಕೊಂಚ ಹೊತ್ತಾಯಿತು. ಸರಿ. ನಿದ್ದೆಯಿಂದ ಏಳುವುದೂ ಹೊತ್ತಾಯಿತು. ಗಾಡಿ ಕಾದಿತ್ತು. ನೀನು ಬೇಗ ಬರಬೇಕು ಎಂದಿದ್ದೆಯಂತೆ. ಹಣ್ಣೆಲೆ ಪುರಾಣ ಹಾಗಿರಲಿ, ನೀನು ಹೇಳು. ಅದೇನು ಬೇಗ ಬರಬೇಕು ಎಂದದ್ದು. ಏತಕ್ಕೆ ಆದು ಹೇಳು.”

“ಏನವಸರ? ದಯಮಾಡಿಸಿ, ಹಜಾರದಲ್ಲಿ ಕುಳಿತುಕೊಳ್ಳೋಣ. ಎಲ್ಲಾ ಹೇಳುತ್ತೇನೆ. ನನಗಿನ್ನಾರು? ಅಪ್ಪನೇ? ಅಮ್ಮನೇ? ಎಲ್ಲಾ ನೀವೇ,”‌

“ಚಿನ್ನನ್ಮಾ! ನೀನು ಆಸ್ತಿಕಳು. ಹಾಗೆನ್ನಬಾರದು. “ತ್ವಯಿ ಮಯಿಸರ್ವತ್ರೈಕೋವಿಷ್ಣುಃ”. ವಿಷ್ಣು ಎಂದರೇನು? ವ್ಯಾಪಕ ಎಂದು. ನೋಡು. ನಾವಾಡುವ ಗಾಳಿಗೂ ಅವನೇ ಉಸಿರು ಕಣಮ್ಮ, ಆ ಧ್ಯಾನ ದಲ್ಲಿದ್ದವರಿಗೆ “ದೆರಿರೇವ ಜಗ ಸಿತೃಮಾತೃಗತಿಃ ಅಲ್ಲವೇ ?”

ಅಭಿನಯ ಮಾಡಿಕೊಂಡು ಆಡಿದ ಮಾತು, ಆ ಮುಪ್ರೆ, ಆ ಭಂಗಿ ಎಲ್ಲವೂ ಅವಳಿಗೆ ವಿಷ್ಣುವು ಸರ್ವವ್ಯಾಪಿಯಾಗಿದ್ದಾನೆ, ಎಂಬ ಭಾವವನ್ನು ಅನುಭನಕ್ಕೆ ತಂದುಕೊಟ್ಟಿತು. “ಅಂತರ್ಬಹಿಶ್ಚತತ್ಸರ್ವಂವಾಸ್ಯನಾರಾಯಣ ಸ್ಥಿತಃ’ ಎಂಬ ಉಪನಿಷತ್ತಿನ ಮಾತೂ ನಿಜವಾಗಿ ಒಂದು ಗಳಿಗೆ ಅಲೌಕಿಕವಾದ ಧೈರ್ಯವನ್ನು ಕೊಟ್ಟಿತು. “ನಿಜ, ಭಯಕೃದ್ಭಯನಾಶನಃ “ಎಂದು ಕೊಂಡಳು. ಆನಂದವಾಗಿ ಕಣ್ಣಲ್ಲಿ ಒಂದು ದೆರಿಯುರುಳಿತು. ಚಿನ್ನಳು ಗುರುವನ್ನು ಕರೆದುಕೊಂಡು ಹೋಗಿ ಕೃಷ್ಣಾಜಿನ ಹಾಸಿದ್ದ ಮೆತ್ತೆಗಳ ಮೇಲೆ ಕೂರಿಸಿದಳು. “ಏನು ಗುರುಗಳೇ, ಫಲಾಹಾರಕ್ಕೆ ಏನು?” ಎಂದಳು. ಗುರುಗಳು ತಲೆಯಲ್ಲಾಡಿಸಿ “ಸರಿ, ಅತಿನಿನಯಂ ಧೂರ್ತಲಕ್ಷಣಂ, ಇವೊತ್ತು ನಮಗೆ ವ್ರತ, ನಮ್ಮ ಅಮ್ಮಣ್ಣಿ ಮಾಡಿದ್ದು ಬಿಟ್ಟು ಇನ್ನೇನೂ ತಿನ್ನುವುದಿಲ್ಲ“ಎಂದು, ರಾಗ ಹಾಡುತ್ತಿರುವಾಗ, ಮೃದಂಗದ ಶ್ರುತಿಯನ್ನು ನೋಡಬೇಕೆಂದು ವಿದ್ವಾಂಸನು ಮೃದುವಾಗಿ ಹಾಗೆನ್ನುವ ಹಾಗೆ ತರ್ಜಿನಿ ಯಿಂದ ಅವಳ ತಲೆಯ ಮೇಲೆ ಹಾಗೆಂದರು.

ಚಿನ್ನಳು ಸಕ್ಕರೆ ಬೊಂಬೆಯಾಗಿದ್ದರೆ ಆ ಆನಂದದ ಪ್ರವಾಹದಲ್ಲಿ ಕರಗಿ ಹೋಗುತ್ತಿದ್ದಳು. ಓಡಿಹೋಗಿ ಒಂದು ತಟ್ಟೆಯ ತುಂಬಾ ಮುಸ್ಸೊರೆ, ಮೃದುವಾಗಿ ಗಮ್ಮೆನ್ನುತ್ತಿರುವ ರವೆಯ ವಾಂಗೀಭಾತು, ಆವರಿಕೆ ಹೂವಿನ ಕಷಾಯ ತಂದಿಟ್ಟ. ಗುರುವು “ನಾನು ಗಾಡಿಯಲ್ಲಿ ಬಂದಿದ್ದೇನೆ, ಮೈಲಿಗೆ ಮುಟ್ಟುವುದಿಲ್ಲ.” ಎಂದು ಬಾಯನ್ನು ತೆಗೆದರು. ಚಿನ್ನಳೇ ಅದನ್ನೆಲ್ಲಾ ಬಾಯಿಗಿಟ್ಟು ಅವರು ಬಾಯಿ ಮುಕ್ಕುಳಿಸಿದ ನೀರನ್ನು ಅತ್ತ ತೆಗೆದಿಟ್ಟು ತಾನು ಕೈತೊಳೆದುಕೊಂಡು ಕಷಾಯವನ್ನು ಬೊಗ್ಗಿಸಿ ಕೊಟ್ಟಳು. ಎಲ್ಲವೂ ಮುಗಿದ ಮೇಲೆ, ತುಂಟಿತನದ ನಗುನಕ್ಕು “ಏನು ಗುರುಗಳೇ, ನಾನು ಸೂಳೆ. ನಾನು ಮಾಡಿದ್ದ ತಿಂಡಿ ನನ್ನ ಕೈಯ್ಯಿಂದ ತಿಂದುಬಿಟ್ಟರಲ್ಲಾ ! ಇನ್ನು ನಿಮ್ಮ ಜಾತಿಯ ಗತಿ?”ಎಂದಳು.

“ಅಯ್ಯೋ ಹುಚ್ಚಿ, ನಮ್ಮ ಜಾತಿ ನಮ್ಮ ಮನೆಯಲ್ಲಿ ಭದ್ರವಾಗಿದೆ. ಆಯಿತು. ನೀನು ಯಾರಿಗೆ ಕೊಟ್ಟೆ ಹೇಳು.”

“ನಾನು ಗುರುರೂಪದಲ್ಲಿ ಎದುರು ಕುಳಿತಿರುವ ಮಹಾವಿಷ್ಣುವಿಗೆ ಕೊಟ್ಟೆ. “

“ಸರಿ, ಕೊಟ್ಟವಳು ನೀನು ತಿಂದವನು ಮಹಾವಿಷ್ಣು. ಮಧ್ಯೆ ನನ್ನ ಜಾತಿಗೇನು ಬಂತು? ಭದ್ರವಾಗಿದ್ದೇಯಿದೆ. ಅಲ್ಲದೆ ಚಿನ್ನಮ್ಮ, ನೀನು ನನ್ನ ಹೊಟ್ಟೆ ಯಲ್ಲಿ ಹುಟ್ಟಿಲ್ಲ ನಿಜ. ಆದರೆ ಸಾಂಗವಾಗಿ ಗುರುಸೇವೆ ಮಾಡಿ ಸಾಧಿಸಿದ ವಿದೈಯೆಲ್ಲ ಅರೆದು ಹೊಯ್ದಿರುವ ನೀವೇ ನನ್ನ ಮಕ್ಕಳಲ್ಲದಿದ್ದರೆ ಇನ್ನಾರನ್ನು ಮಕ್ಕಳು ಎನ್ನಲಿ? ನನಗೆ ನೀನೂ, ಅವಳು, ಅವಳೆಲ್ಲಿ, ರನ್ನಮ್ಮ ಎಲ್ಲಿ?”

“ಅವಳು ಹೊರಗಿದ್ದಾಳೆ. ಗುರುಗಳೇ!”

“ಬಂದು ಅಲ್ಲಿ ಕುಳಿತುಕೋ ಎನ್ನು. ನಮ್ಮ ಮಕ್ಕಳು ಎದುರಿಗಿದ್ದು ಕಣ್ಣಿಗೆ ಬೀಳುತ್ತಿದ್ದರೆ ಹೃದಯದಲ್ಲಿ ಯೌವನ ಉಕ್ಕಿ ಬರುತ್ತಮ್ಮಾ! ?

ಸರಿ. ರನ್ನಳೂ ಬಂದು ಕುಳಿತುಕೊಂಡಳು.

“ಅದೇನಮ್ಮ ಅವಸರಪಟ್ಟುದು?

“ಇವೊತ್ತು ಬೆಳಗಿನ ಝಾವದಲ್ಲಿ ಒಂದು ವಿಶೇಷವಾಯಿತು. ಗುರುಗಳೇ ! ಬುಡುಬುಡುಕೆ ಸಣ್ಣ ಹೈದ ಅಗಾಗ ಬರುತ್ತಾನಲ್ಲ. ಇವೊತ್ತು ಅವನು ಬರುವ ವೇಳೆಗೆ ಎಚ್ಚರವಾಗಿದ್ದೆ . ಬುಡುಬುಡಿಕೆ ನುಡಿಸುತ್ತಾ “ಎಚ್ಚರಿಕೆ, ಎಚ್ಚರಿಕೆ ಮುಂಬಾಗಿಲಲ್ಲಿ ಬಂದ ಒಳ್ಳೇದ ಕಂಡು ಹಿಂಬಾಗಿಲಲ್ಲಿ ನುಗ್ಗಿ ಬಂದ ಕೆಡಕು ಓಡೀತು. ಹೆದರದಿರು ಹೆದರದಿರು ಎಚ್ಚರಿಕೆ.” ಎಂದು ಹೇಳಿಕೊಂಡು ಹೋದ. ಮತ್ತೆ ಬೆಳಿಗ್ಗೆ ಅಷ್ಟುಹೊತ್ತಿಗೆ ತೋಟದಲ್ಲಿ ಹೂವು ಕೊಯ್ಯುತಿ ರುವಾಗ ಬಂದು ಕಾಣಿಸಿಕೊಂಡ. ನಾನು ಏನು ಸಣ್ಣ ಹೈದ, ಗೌಳಿ ಏನು ನುಡಿಯಿತು? ಎಂದೆ. ಅವನು ನಕ್ಕು ಬೆಳಿಗ್ಗೆಯೇ ಕೇಳಿದೆಯೆಲ್ಲವ್ವಾ? ಎಂದ. ನಾನು ಹಾಸಿಗೆ ಬಿಟ್ಟಿರಲಿಲ್ಲವಲ್ಲೋ ಎಂದೆ. ಅವನು ಆ, ಉಂಟಾ? ಗೌಳಿ ನುಡಿಕಾರ ಸುಳ್ಳಾದರೆ, ನನ್ನ ನಾಲಗೆ ಸೆಳೆದು ಹೋಗೋಕಿಲ್ವಾ ? ನಿಜ ಹೇಳು. ಹಂಗಾದರೆ ನೀ ಕೇಳಲಿಲ್ವಾ ಎಂದ. ಹೌದೋ, ನಾ ಕೇಳಿದೆ. ಹಾಗಾದರೆ ಅದು ನನಗೆ ಏನು ಎಂದೆ. ಅವನು ನಗುತ್ತಾ ನೀನೇನು ನಮ್ಮ ರಂಗಪ್ಪನ ಪೂಜೆ ಚೆನ್ನಾಗಿ ಮಾಡಿದವಳು. ಮಾದೇಶ್ವರದ ಉಲಿ ಅಂಗೆ ಬಂದು ಊವಿನ ಆರವಾಗಿ ಮುಡಿಗೇರಬೇಡವಾ ? ಎಂದು ನಗುತ್ತಾ ನಿಂತುಬಿಟ್ಟ. ನನಗೆ ಎಲ್ಲೂ ಇಲ್ಲದ ಕುತೂಹಲವಾಗಿ ಹುಲಿ ಹಾರವಾಗೋದು ಅದೇನು ಹೇಳೋ ಎಂದೆ. ಅದೆಲ್ಲಾ ನಾವು ನರಮನುಸರು. ಹೇಳೋದಾ? ಗೌಳಿ ನುಡಿದಷ್ಟೇ ನಮಗೂ ಗೊತ್ತು. ಈಗ ನುಡದ್ದು ಅಷ್ಟೇ. ಎಲ್ಲಿ ಏನಾದರೂ ಕೊಡು, ಬರೋ ತಿಂಗಳು ಈ ದಿನ ಬರ್ತೀನಿ. ಅವೊತ್ತು ಸಣ್ಣೈದನಿಗೆ ಜೋತ್ರ, ಚೀರೆ, ಜೋಬುತುಂಬ ರೂಪಾಯಿ… ಕಾಸಲ್ಲ ರೂಪಾಯಿ–ಕೊಡಬೇಕು ಎಂದ. ಎಲ್ಲಿಂದ ಬರುತ್ತದೆಯೋ ಎಂದೆ. ದೊರೆ ಮಂಕ್ರೀ ಮಂಕ್ರೀ ತುಂಬಿಕೊಡ್ತಾನೆ. ನಂಗೊಂದು ಹಿಡಿ ಯಾದರೂ ಕೊಡು ಎಂದ. ಏನೋ ಸಂತೋಷವಾಗಿ. ಐದು ರೂಪಾಯಿ ಕೊಟ್ಟು ಕಳುಹಿಸಿಬಿಟ್ಟಿ. ಗುರುಗಳೇ! ಇದನ್ನು ಹೇಳುವುದಕ್ಕೇ ಹೇಳಿ ಕಳುಹಿಸಿದ್ದು. “

“ಇವೊತ್ತು ನಾನೂ ಒಂದು ಹೇಳಬೇಕು ಎಂದು ಬಂದಿದ್ದೇನೆ. ಹಿಂದೆ ಕುಹೂ ಯೋಗ ಬಂದಿದ್ದಾಗ. ರಾಯರು ಸಿಂಹಾಸನದ ಮೇಲೆ ಕುಳಿತು ಚಕ್ರವರ್ತಿಗಳ ದುರ್ಯೋಗ ಕಳೆದ ಕಥೆ ಕೇಳಿದ್ದೀಯಲ್ಲ. ಈಗ ವಿಜಯನಗರಕ್ಕೆ ಅಂಥಾ ಒಂದು ದುರ್ಯೋಗ ಬರುವುದಂತೆ. ನಾನು ಮನಸ್ಸು ಮಾಡಿದರೆ ಇನ್ನು ಹತ್ತು ವರ್ಷ ಅದನ್ನು ಮುಂದಕೆ ತಳ್ಳ ಬಹುದುತೆ. “

“ಹಾಗೆಂದರೇನು ಗುರುಗಳೇ ? “

“ನೋಡು, ಚಿನ್ನಮ್ಮ, ಈ ನಗರವನ್ನು ವಿದ್ಯಾರಣ್ಯರು ಕಟ್ಟದರು. ಆಗ ಅವರ ಶಂಖಧ್ದನಿ ಕೇಳುವುದಕ್ಕೆ ಕೊಂಚ ಹೊತ್ತಿ ನ ಮುಂಚೆ ದಾಸಸಯ್ಯನ ಶಂಬ ಕೇಳಿ ಗುದ್ದಲಿ ಪೂಜೆ ಮಾಡಿದರು. ಆಆಗ ಯತೀಶ್ವರರು ‘ಸರಿ ದೈವ ಚಿತ್ತ ಈ ನಗರಕ್ಕೆ ಆಯುಸ್ಸು ಇಷ್ಟು. ಬಂದಿದ್ದ ಗಂಡ ಎರಡು ಸಲ ತಪ್ಪುತ್ತದೆ. ಮೂರನೆಯ ಸಲ ತಪ್ಪವುದಿಲ್ಲ. ತಪ್ಪಿದರೆ ಅನಂತಕಾಲ ಬಾಳುತ್ತದೆ’ ಎಂದು ನುಡಿದರಂತೆ. ಈಗ ಎರಡನೆಯ ಸಲ ಬಂದಿರುವ ದುರ್ಯೋಗ ನನ್ನಿಂದ ತಪ್ಪುತ್ತದೆ, ಎಂದರೆ ಆಶ್ಚರ್ಯವಾಯಿತು. ಅದು ನಿಜವಾದರೆ ನನ್ನ ಸರ್ವಸ್ವವೂ ಅಲ್ಲ ಜನ್ಮಜನ್ಮಾಂತರದಲ್ಲಿ ನಾನು ಮಾಡಿರುವ ಪುಣ್ಯವಿದ್ದರೆ ಅದ್ದು ಮುಂದೆ ಜನ್ಮಜನ್ಮಾ೦ತರಗಳಲ್ಲಿ ಮಾಡುವ ಪುಣ್ಯ ಎಲ್ಲ ಕೊಟ್ಟು ಬಿಡುತ್ತೇನೆ. ಎಂದು ಶ್ರ್ರೀಹರಿಗುರು ಸಾಕ್ಷಿಯಾಗಿ ಪ್ರಮಾ ಮಾಡಿಬಂದೆ.“

ಹೇಳಿದವವರು ಯಾರು?”

“ಹಿಂದೆ ಈ ನಮ್ಮ ಊರಿನಲ್ಲಿಯೇ ನನ್ನ ಜೊತೆಯಲ್ಲಿಯೇ ಒಬ್ಬ ಶಂಭು ಎಂಬ ಹುಡುಗನಿದ್ದ. ನನಗಿಂತ ಅವನು ಒಂದು ವರ್ಷ ಚಿಕ್ಕವನು. ಅವನೂ ನಾನೂ ಇಬ್ಬರೇ ಕುಳಿತುಕೊಂಡರೆ “ಲೋ, ಶ್ಯಾಮ ದೇರರನ್ನು ಪ್ರತ್ಯಕ್ಷ ಮಾಡಿಕೊಳ್ಳ ಬೇಕು ಕಣೋ” ಎನ್ನುತ್ತಿದ್ದ… ಅವನಿಗೆ ಉಪನಯನ ವಾದ ಒಂದು ಎರಡು ವರ್ಷ ಇಲ್ಲಿ ಇದ್ದ. ಅಮೇಲೆ ಎಲ್ಲಿಯೋ ದೇಶಾಂತರ ಹೋದ. ಈಗ ನಲನತ್ತು ವರ್ಷವಾದ ಮೇಲೆ ಶಾಂಭವಾನಂದನಾಗಿ ಬಂದಿದ್ದಾನೆ. ಅವನು ಬಂದು ಒಂದು ತಿಂಗಳಾಯಿತಂತೆ. ವಿರೂಪಾಕ್ಷನನು ಮಾತನಾಡಿಸಿದನಂತೆ. ವಿರೂಪಾಕ್ಷ ದೇವ ಪಂಪಾ ಹೋಗುತ್ತದೆ; ಪಂಪಾಪತಿ ಉಳಿಯುತ್ತಾನೆ ಎಂದನಂತೆ. ವಿಟ್ಠಲನನ್ನು ಮಾತನಾಡಿಸಿದನಂತೆ; “ನಾನು ಇಲ್ಲಿರುವ ಕಾಲ ಮುಗಿಯುತ್ತಾಬಂತಪ್ಪ! ಯಾರಾದರೂ ಅಡ್ಡಬಿದ್ದರೆ ಇನ್ನು ಹತ್ತುವರ್ಷ. ಇಲ್ಲದಿದ್ದರೆ ಬರುವವರ್ಷ ನಾನು ಭೀಮಾತೀರಕ್ಕೆ ಹೋಗು ತೇನೆ” ಎಂದನಂತೆ. ಭುವನೇಶ್ವರಿಯನ್ನು ಕೇಳಿದರೆ, ಆಕೆ ಹಳೆಯ ಮಡಕೆ ಒಡೆಯವಿದ್ದರೆ ಹೊಸ ಮಡಕೆಗೆ ತಾವೆಲ್ಲಿ ಎಂದಳಂತೆ. ಕೊನೆಗೆ ಏನೇನೋ ಲೆಕ್ಕಮಾಡಿ, ನನಗೆ ಈ ವನು ಹೇಳಿದ್ದಾನೆ.?

“ಈ ಸುದ್ದಿ ಅರಮನೆಗೆ ತಿಳಿಯಿತೆ?”

“ಏನು ದೊಡ್ಡ ದೊರೆಗಳ ಕಾಲವೇನು? ಹೇಳಿದರೆ ಕೇಳುವುದಕ್ಕೆ ? ಈಗ ಚಕ್ರ ರ್ತಿಗಳಗೆ ತಮ್ಮನ್ನು ಬಿಟ್ಟರೆ ಇನ್ನಿಲ್ಲ ಎನ್ನುವ ಬುದ್ಧಿ ಬಂದಿದೆಯಲ್ಲ.”

“ಏನು ದುರ್ಬುದ್ಧಿಯಿದ್ದರೇನು ಗುರುಗಳೆ! ನಾನಿಲ್ಲವೆ, ಅಪ್ಪಣೆ ಯಾಗಲಿ. ಬಿರುಡೆ ತಿರುಗಿಸಿ ತಂತೀ ಶ್ರುತಿಮಾಡುವ ಹಾಗೆ ಕಿವಿ ಹಿಡಿದು ತಿರುಗಿಸಿ ಬಿಡುತ್ತೇನೆ.”

“ಮಗಳೇ, ನನಗೆ ಗೊತ್ತಿದೆ. ನನ್ನಿಂದ ದುರ್ಯೋಗ ತಪ್ಪುವುದು ಎಂದರೆ ಅದು ನಿನ್ನಿಂದಲೇ ಎಂದಾ ನಾನೂ ಎಂದುಕೊಂಡೆ. ದೊರೆ ಕೈಯ್ಯಲ್ಲಿದ್ದಾನೆ ಎಂದು ದುಡಕುವುದಕ್ಕುಂಟೆ? ಶಾಂಭವಾನಂದರು ಏನೋ ಪೂಜೆಯಲ್ಲಿದ್ದಾರೆ. ಇನ್ನು ಎರಡು ದಿನಕ್ಕೆ ಆದು ಮುಗಿಯುತ್ತದೆ. ಆಗ ಇನ್ನೂ ವಿವರಗಳು ತಿಳಿಯುತ್ತವೆ. ಆಮೇಲೆ ಮುಂದಿನ ಮಾತು.”

“ಸಣ್ಣ ಹೈದನ ಮಾತೂ ಇದಕ್ಕೆ ಹೊಂದಿಕೆಯಾಗಿಲ್ಲವೆ ಗುರುಗಳೇ !“

“ನನಸೂ ಅದೇ ಆಶ್ಚರ್ಯವಾದುದು. ನೋಡು, ಚಿನ್ನಮ್ಮ, ದೇವರು. ಸರ್ವಾಂತರ್ಯಾಮಿ ಅವನೇ ಕಾಲ ಸ್ವರೂಪಿ. ನಿಜವಾಗಿ ನೋಡಿದರೆ, ನೋಡುವ ಕಣ್ಣು ಒಂದಿದ್ದರೆ. ಹೊಳೆಯ ದಡದ ಮರಳ ಕಣದಲ್ಲಿ ವಿಶ್ವದ ಭೂತ ಭವಿಷ್ಯತ್ತೆಲ್ಲ ಕಾಣಿಸುತ್ತದೆ. ನೀನು ಈಗ ಬೇಕೆಂದರೆ ಒಂದೆರಡು ಸ್ವರಗಳಲ್ಲಿಯೇ ರಾಗಭಾವವೆಲ್ಲ ಬರುವಂತೆ ಹಾಡುವುದಿಲ್ಲವೆ? ಬದುಶಃ ನಾವು ಹಾಡುವಾಗ ಕುಣಿಯುವಾಗ ಒಂದನೆಯ ಕಾಲ, ಎರಡನೆಯ ಕಾಲ, ಮೂರನೆಯ ಕಾಲ, ತೋರಿಸುವಂತೆಯೇ ಇರಬೇಕು. ಈ ಕಾಲವೂ ತಾನೇ ಏನು? ನಾವು ಕಾಲ ಕಾಣುವುದು ಯಾವಾಗ? ತಾಳ ಹಾಕಿದಾಗ. ರಾಗ ಹಾಡುವಾಗ ಕಾಲ ಎಲ್ಲಿ ಬಂತು? ಹಾಗೆಯೇ ಬಹುಶಃ ಈ ಕಾಲವನ್ನೂ ಹಿಂದೆ ಮುಂದೆ ತಳ್ಳ ಬಹುದೋ ಏನೋ?”

“ನನಗೆ ಅವರ ದರ್ಶನ ಮಾಡಿಸುವುದಿಲ್ಲವೇ ಗುರುಗಳೇ?“

“ಉಹುಂ. ಖಂಡಿತವಾಗಿಯೂ ಇಲ್ಲ. ಇನ್ನೆರಡುದಿನ ನಾನು ಈ ವಿಚಾರವೇ ಹೇಳಬಾರದಾಗಿತ್ತು. ಆದರೇನು ಮಾಡಲಿ? ಆ ವಿಕ್ರಮೋರ್ವಶೀಯದ ವಿದೂಷಕನು ಹೇಳುವಹಾಗೆ ಎಂಥಾರಾಜ ರಹಸ್ಯ ವಿದ್ದರೂ ಇವಳನ್ನು ಕಂಡಕೂಡಲೇ ಆದು ಹೃದಯ ಬಡಿದುಕೊಂಡು ಬಂದು ಬಿಡುತ್ತದೆ. ಏನು ರನ್ನಮ್ಮ? ನೀನು ನಿಮ್ಮ ಅಕ್ಕನಿಗೆ ಹೇಳು. ಇನ್ನೆರಡು ದಿನ ನಾನು ಇವಳೊಡನೆ ಮಾತನಾಡುವುದಿಲ್ಲ ಎಂದು “

ರನ್ನಳು ನಕ್ಕು ಹೇಳಿದಳು. “ಸರಿ ಗುರುಗಳೇ! ಇನ್ನೆರಡುದಿನ ಈ ವಿಷಯವಾಗಿ ಖಂಡಿತವಾಗಿ ಒಂದು ಚಕಾರಕೂಡ ನುಡಿಯಬೇಡಿ. ಆದರೇನು? ನೀವು ನೀವು ಮಾತನಾಡಿಕೊಳ್ಳುವುದಕ್ಕೆ ಇನ್ನೂ ಎಷ್ಟೋ ವಿಷಯಗಳಿವೆಯಲ್ಲ?”

“ಹಾಗಾದರೆ, ಅವಳೇ ಏನಾದರೂ ಹೇಳಲಿ, ನಾನು ಕೇಳುತ್ತೇನೆ.”

“ಆಗಲಿ, ಗುರುಗಳೇ, ಹೇಳಬೇಕಾದ್ದೂ ಇದೆ. ರನ್ನ ಬಾಗಿಲಲ್ಲಿ ನಿಂತುಕೋ. ಯಾರಾದರೂ ಬಂದರೆ ಹೇಳಿಬಿಡು. ಗುರುಗಳೇ! ಅವೊತ್ತು ರಾಯನ ಸನ್ಮಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸದೆ ಗೋಲ್ಕೊಂಡಕ್ಕೆ ಓಡಿ ಹೋಗಿದ್ದ ಸೆಟ್ಟಿ ಸುಲ್ತಾನರನ್ನು ಕಂಡಿದ್ದನಂತೆ. ಸುಲ್ತಾನರು ಗೋಲ್ಕೊಂಡದ ವಜ್ರದ ಗಣಿಯನ್ನು ಗುತ್ತಿಗೆಗೆ ತಕೋ ಎಂದಿದ್ದಾರೆಯಂತೆ. ಇತ್ತ ಬಿದರೆ ಅಹಮ್ಮದ್‌ ನಗರ, ಬೀರಾರಿನ ಸುಲ್ತಾನರು ನಿಜಯನಗರದಮೇಲೆ ರಕ್ತ ಕಾರುತ್ತಿರುವರಂತೆ. ಅಹಮ್ಮದ್‌ ನಗರದವನಂತೂ ದೆಹಲಿಗೂ ಕೂಡ ಬರೆದಿದ್ದಾನಂತೆ, ಸೈನ್ಯ ಕಳುಹಿಸಿಕೊಡಿ, ಎಂತ. ಬಿಜಾಪುರದವನು ಹಿಂದೆ ಮುಂದೆ ತುಳಿಯುತ್ತಿದ್ದಾನೆ. ಗೋಲ್ಕೊಂಡದನನು ಮಾತ್ರ ಮಗ್ಗುಲ ರಾಜ್ಯದವರೊಡನೆ ಯುದ್ಧ ಬೇಡ ಎಂದು ಸ್ಪಷ್ಟವಾಗಿ ಹೇಳುತ್ತಿರುವನಂತೆ. ಕರ್ನಾಟಕದಿಂದ ಸೈನ್ಯ ಇನ್ನು ಎರಡು ಮೂರು ದಿನದಲ್ಲಿ ಗೋವೆಗೆ ಹೋಗುತ್ತದೆ. ಅಹಮ್ಮದ್‌ ನಗರದನನು ಸೈನ್ಯ ನಡೆಸಿದನೆಂದರೆ ಗೋವೆಯ ಸೈನ್ಯ ಮುನ್ನುಗ್ಗುವುದಕ್ಕೆ ಸಿದ್ಧವಾಗಿರುತ್ತದೆ.”

“ಅಲ್ಲಿಂದಲೇ ಬಂತೋ ಸುದ್ದಿ ?7

“ಇನ್ನೆಲ್ಲಿಂದ? ಅವರಿಗೆ ನನಗೆ ಹೇಳದಿದ್ದರೆ ಹೊಟ್ಟೆಯುಬ್ಬರವಲ್ಲ!?

“ಏನು ಚಿನ್ನಮ್ಮ! ಈ ಹಾಳಾದವನ ಹೊಟ್ಟೆಯಲ್ಲಿ ಒಬ್ಬ ಮಗನಾಗಲಿಲ್ಲ!”

“ಗುರುಗಳೇ, ಈ ವೇಳೆಗೆ ಆಗಿದ್ದರೆ ಚೆನ್ನಾಗಿತ್ತು. ಆಗಿಲ್ಲ. ಆಗೆ ದಿದ್ದರೇನು? ಅವನಿದ್ದಾನಲ್ಲ ರುಸ್ತುಂ. ಅವನು ಮುಂದಕ್ಕೆ ಚಕ್ರವರ್ತಿ ಯಾಗುತ್ತಾನೆ.”

ರನ್ನಳು ಕೆಮ್ಮಿದಳು. ಇಬ್ಬರೂ ಮಾತು ಬಿಟ್ಟರು. ದಾಸಿಯು ಬಂದು ““ಯಜಮಾನ್‌ ವೀರಪ್ಪಸೆಟ್ಟರು ಬಂದಿದ್ದಾರೆ. ದಿವಾನ್‌ ಖಾನೆಯಲ್ಲಿ ಕುಳ್ಳಿರಿಸಿದ್ದೇನೆ.? ಎಂದು ಅರಿಕೆ ಮಾಡಿದಳು.

ರನ್ನಳಂತೂ ಸರಿಯೇ ಸರಿ. ಚಿನ್ನಳೂ ಆಲಂಕಾರ ಮಾಡಿಕೊಂಡಿರ ಲಿಲ್ಲ. ದಂತದ ಮುಖಕ್ಕೆ ಕೆಂಪು ತೇಗದ ಚೌಕಟ್ಟು ಜೋಡಿಸಿದಂತೆ ಇರುವ ಆ ಜೇಪರಿಶಿನ, ತಿದ್ದಿದಂತಿರುವ ಕುಂಕುಮದ ಬೊಟ್ಟು, ಬಾಚಿದ್ದರೂ ಕೆದರಿರುವ ಕುರುಳು ಸಣ್ಣ ಕಲಾಬತ್ತಿನಂಚಿನ ರೇಶ್ಮೆಯ ಎಣ್ಣೆಯಬಣ್ಣದ ಸೀರೆ, ಕೈಯ್ಯಲ್ಲಿ ಎರಡೆರಡು ವಜ್ರದ ಬಳೆಗಳು, ಕಿವಿಯಲ್ಲಿ ವಜ್ರದ ಓಲೆ“ ತುರುಬಿನಲ್ಲಿ ಒಂದು ಕುಂದಣದ ಜಡೆಬಿಲ್ಲೆ. ಇನ್ನೇನೂ ಇಲ್ಲ. ಒಂದು ಗಳಿಗೆ ಯೋಚನೆಮಾಡಿ, ಹಾಗೆಯೇ ನೋಡುವುದು ಎನ್ನಿಸಿ, ಕರೆದುಕೊಂಡು ಬರುತ್ತೇನೆ ಗುರುಗಳೇ! ಎಂದು ಹೊರಟಳು.

ಆಚಾರ್ಯರು “ಹೀಗೇ ನೋಡುತ್ತೀಯೇನು?”ಎಂದರು.

“ನಮಗೆ ಈ ಬೇಟೆ ಬೇಕಿಲ್ಲವಲ್ಲ.” ಎಂದು ನಕ್ಕು ದಾಸಿಯೊಡನೆ ಮೆಟ್ಟಿಲಿಳಿದು ಹೋದಳು. ರನ್ನಳು ಅಲ್ಲಿಯೇ ಇದ್ದ ತಿರಸ್ಕರಿಣಿಯ ಹಿಂದೆ ಕುಳಿತುಕೊಂಡಳು.

ಚಿನ್ನಳು ಸೆಟ್ಟರಿಗೆ ಸಹಜವಾಗಿ ಕೈಮುಗಿದು “ನಮ್ಮ ಮನೆಗೆ ಭಾಗ್ಯ ಲಕ್ಷ್ಮಿ ಬಂದಂತಾಯಿತು. ದಯಮಾಡಿಸಬೇಕು” ಎಂದು ಮಹಡಿಯ ಮೇಲಿನ ಸಭಾಂಗಣಕ್ಕೆ ಕರೆದುಕೊಂಡು ಬಂದಳು. ದಾಸಿಯು ಎರಡ ಊದುಬತ್ತಿಯನ್ನು ಹಚ್ಚಿ ತಂದು ಒಂದು ಮೂಲೆಯಲ್ಲಿಟ್ಟಳು. ಇನ್ನೊಬ್ಬಳು ಚಿನ್ನದ ತಟ್ಟೆಯಲ್ಲಿ ವೀಳ್ಯವನ್ನು ತಂದಿಟ್ಟಳು. ಗೋಮೇಧಿಕದ ಸಣ್ಣ ಡಬ್ಬಿ ಯಲ್ಲಿ ಸುಣ್ಣವಿಟ್ಟಿದೆ. ಪಚ್ಚೆಯ ಡಬ್ಬಿಯಲ್ಲಿ ಅಡಕೆಯನ್ನಿಟ್ಟಿದೆ. ಎಲೆಗಳ ನ್ನೆಲ್ಲಾ ಸುಣ್ಣ ಹಚ್ಚಿ ಮಡಿಸಿಟ್ಟದೆ. ಅಡಕೆ ಉಜ್ಜಡಿಕೆ. ಅದಕ್ಕೆ ಪರಿಮಳ ಕಟ್ಟಿದೆ ಚಿನ್ನದವರ್ತಿ ಹಚ್ಚಿದೆ.

ಸೆಟ್ಟರು ತಮ್ಮನ್ನು ಕರೆದುಕೊಂಡು ಮೆಟ್ಟಿಲು ಹತ್ತಿಬಂದ ರೂಪರಾಶಿ ಯನ್ನು ಸಮೀಪವಾಗಿ ಇದುವರೆಗೆ ನೋಡಿರಲಿಲ್ಲ. ಮಾಟವಾಗಿ ಕಡೆದಿಟ್ಟರು ವಂತದ ದುಂಡು ದುಂಡಾದ ತೋಳು ಕೈಗಳು ತೊಡೆ ಕಾಲ್ಗಳು ಎದೆಯ ಆಭೋಗ, ನಿತಂಬದ ವಿಸ್ತಾರ, ನಡುವಿನ ಸೆಳೆಕು, ಅಂಗಲತೆಯ ಬಳುಕು, ಆ ಲಾವಣ್ಯ, ಆ ಕತ್ತು, ಆ ತುರುಬು, ಅವಳು ಮುಂದೆ ಹೋಗುತ್ತ ಹೋಗುತ್ತ ಹಿಂತಿರುಗಿ ನೋಡುವಾಗ, ನಗೆ ಮೊಗದಲ್ಲಿ ಮಿರುಗುವ ಮೀನುಗಳಂತೆ ಕಾಣುವ ಆ ಕಣ್ಣುಗಳು, ಎಲ್ಲವೂ ಸೆಟ್ಟರ ಮನಸ್ಸನ್ನು ಅಪಹರಿಸಿದವು. “ಇಷ್ಟಲ್ಲದೆ ಆ ದೊರೆ ಇವಳು ಹೇಳಿದ ಹಾಗೆ ಕುಣಿಯುವನೇ ?”ಎನ್ನಿಸಿತು. ಜೊತೆಗೆ “ಆ ಮಗ ಏನು ಅದೃಷ್ಟ ಮಾಡಿದ್ದ? ಎಷ್ಟು ಭಾರಿಯ ಶಿನಪೂಜೆ ಮಾಡಿದ್ದ?” ಎಂದು ಎದುರಿಗಿಲ್ಲದ ಇನ್ನೊಬ್ಬನ ಮೇಲೆ ಮತ್ಸರವೂ ಹುಟ್ಟಿತು. “ಏನಾದ ರೇನು? ಆಕಾಶದ ತಾರೆ. ಕೈನೀಡಿದರೂ ಸಿಕ್ಕುವುದಿಲ್ಲವಲ್ಲ” ಎಂದು. ನಿಟ್ಟುಸಿರೂ ಬಂತು.

ಸೆಟ್ಟಿಗೆ ಅವಳ ಹಿಂದೆ ಬರುತ್ತಿದ್ದಾಗ ದಿಗಿಲೂ ಆಯಿತು. “ಸುಲ್ತಾನನಿಗೆ ಇವಳನ್ನು ಕಂಡು ಬುದ್ಧಿ ಕೆಟ್ಟು ಹೋದರೆ ತಾನಾಗಿ ಸುಲ್ತಾನನಿಗೂ ಚಕ್ರವರ್ತಿಗೂ ಜಗಳ ತಂದಿಟ್ಟಿದಂತಾಗುವುದಲ್ಲ! ಹೇಗೆ?” ಎಂದು ಮನಸ್ಸು ಅಂಜಿತು. ಸೆಟ್ಟರು ಕಾಮದೇವನ ಕಟ್ಟೆಯಲ್ಲಿ ಕಾಣಿಕೆ ಕಟ್ಟದಂತಹ ವೈರಾಗ್ಯ ಶೇಖರರೇನಲ್ಲ. ಆದರೂ ‘ಇಂತಹ ರಪರಾಶಿಯೂ ತಮ್ಮ ಕಣ್ಣೆದರೂ ಸುಳಿ ದಿಲ್ಲ’ವೆಂದು ತಮ್ಮಲ್ಲಿಯೇ ಒಪ್ಪಿಕೊಂಡರು. ‘ ಹೋಗಲಿ. ಈಗಲಾದರೂ ನೋಡಿದೆನಲ್ಲ’ ಎನ್ನಿಸಿತು. ಸುಲ್ತಾನ ಇವಳ ಸಂಗೀತಕ್ಕೆ ಒಂದು ಲಕ್ಷ ಕೊಟ್ಟರೆ, ಇವಳಿಗೆ ತಾನು ಹತ್ತು ಲಕ್ಷ ಕೊಟ್ಟರೂ ತಪ್ಪಿಲ್ಲ ಎಂದು ಆಸೆ ಕುಣಿಯಿತು. ಈ ಹೊಯ್ಲಿನಲ್ಲಿ ಅವರಿಗೆ ಎದುರಿಗೆ ಏನು ಇರುವುದು ಎನ್ನು ವುದೂ ಕೂಡ ತಿಳಿಯಲೊಲ್ಲದು: ಹೀಗಿರುವಾಗ ಎದುರಿಗೇ ಕುಳಿತಿದ್ದ ಭರತಾಚಾರ್ಯರು ಅವರ ಕಣ್ಣಿ ಗೆ ಬೀಳುವುದೆಂತು? ಅವರಿಗೆ ಚಿನ್ನಳೇ ಎಲ್ಲೆಲ್ಲೂ ಕಾಣುತ್ತಿದ್ದಳು.

ಚಿನ್ನಳು ನೋಡುತ್ತಿದ್ದ ಹಾಗೆಯೇ ಆವರ ಮನಸ್ಸಿನಲ್ಲಿ ಆಗಿರುವ ಅಲ್ಲೋಲ ಕಲ್ಲೋಲವನ್ನು ಕಂಡುಕೊಂಡಳು. ಒಳಗೊಳಗೇ ನಗುತ್ತ, ತನ್ನ ರೂಪರಾಶಿಯು ಅಷ್ಟು ಸುಲಭವಾಗಿ ಪಡೆದ ಗೆಲುವಿನಿಂದ ಸಂತೋಷಪಟ್ಟು ಕೊಳ್ಳುತ್ತ “ಯಜಮಾನರು ಇತ್ತ ನೋಡಬೇಕು. ನಮ್ಮ ಪೂರ್ವ ಪುಣ್ಯ. ಜನ್ಮ ಜನ್ಮಾಂತರಗಳಿಂದ ಸಂಪಾದಿಸಿದ ಭಾಗ್ಯ. ನಮ್ಮ ಗುರುಗಳು” ಎದು ವೈಯ್ಯಾರವಾಗಿ ಕೈಯನ್ನು ಅತ್ತ ತಿರುಗಿಸಿದಳು.

ಸೆಟ್ಟರು ನಿಜವಾಗಿಯೂ ಅವರು ಅಲ್ಲಿರುವುದನ್ನು ನೋಡಲಿಲ್ಲ. ಥಟ್ಟನೆ ಎದ್ದು ಕೈಮುಗಿದು “ಗುರುಗಳಿಗೆ ಸಾಷ್ಟಾ೦ಗ ಶರಣಾರ್ತಿ. ತಮ್ಮ ದರ್ಶನ ಆದುದು ಭಾಗ್ಯ “ಎಂದರು. ಆಚಾರ್ಯರು ಎದ್ದು ಥೋಡಾಗಳಿಂದ ಭಾರ ವಾಗಿರುವ ಎರಡು ಕೈ ಎತ್ತಿ ಮುಗಿದು “ಯಜಮಾನರ ದರ್ಶನವಾದುದು ನಮ್ಮ ಭಾಗ್ಯ “ಎಂದರು. ಇಬ್ಬರೂ ಸಣ್ಣಗೆ ನಗುತ್ತ ತಮ ತಮ್ಮ ಸುಖಾ ಸನಗಳಲ್ಲಿ ಕುಳಿತುಕೊಂಡರು. ಚಿನ್ನಳ ಪ್ರಾರ್ಥನೆಯಂತೆ ಸೆಟ್ಟರು ತಾಂಬೂಲವನ್ನು ಪರಿಗ್ರಹಿಸಿದರು. ಲೋಕಾಭಿರಾಮವಾಗಿ ಎರಡೆರಡು ಮಾತು ನಡೆಯಿತು.

ಚಿನ್ನಳು ವಿನಯನಮ್ರಳಾಗಿ ಸುಖವಾಗಿ ಮೃದುವಾದ ದನಿಯಲ್ಲಿ ಹೇಳಿದಳು, “ಯಜಮಾನರು ಈ ದಾಸಿಯ ಮೇಲೆ ಇಷ್ಟು ಕೃಪೆ ಮಾಡಿ ಇಲ್ಲಿಯವರೆಗೆ ದಯಮಾಡಿಸಿದುದು ನಮ್ಮ ಪುಣ್ಯ. ಸನ್ನಿಧಾನ ಇಷ್ಟು ಶ್ರಮ ವಹಿಸಬೇಕಾದ ಆ ಕಾರ್ಯಗೌರವವೇನೋ ಆಪ್ಪಣೆಯಾಗಬೇಕು. ನೋಡ ಬೇಕು ಎಂದು ಅಪ್ಪಣೆಯಾಗಿದ್ದರೆ ನಾನೇ ಬರುತ್ತಿದ್ದೆ.“

ಸೆಟ್ಟರು ಗಹಗಹಿಸಿ ನಕ್ಕು ಕೇಳಿದರು, ಏನು ಗುರುಗಳೇ ಇಷ್ಟು ಹುಸಿಯನ್ನು ಇಷ್ಟು ಹಸನಾಗಿ ಒಕ್ಕಣಿಸುವವವರು ಈ ಭೂಲೋಕದಲ್ಲಿ ಇನ್ನು ಯಾರಾದರೂ ಉಂಟೆ ತಾವು ಹೇಳಿ.”

ಚಿನ್ನಳಿಗೆ ‘ಸೆಟ್ಟಿ ಲಲ್ಲೆ ಹೊಡೆಯುನ ಮನಸ್ಸಿನಲ್ಲಿದ್ದಾನೆ ; ಸಾಧ್ಯವಾದರೆ ವಜ್ರದ ಗಣಿಯ ವೃತ್ತಾಂತ ಆತನಿಂದಲೇ ಸಂಗ್ರರಹಿಸಬೇಕು’ ಎನ್ನಿಸಿತು. ತಾನೂ ಕೊಂಚ ಅದೇ ಭಾವವನ್ನು ವಹಿಸಿ “ನಿಜ, ನಮ್ಮ ಹುಸಿ ಹೊತ್ತು ಹೋಗಲಿ ಎಂತ. ಅತ್ತಕಡೆಯಿಂದ ಬರುವ ಹುಸಿ ಲಾಭ ತರಲಿ ಎಂತ. ಅಷ್ಟೇ ತಾನೇ ವ್ಯತ್ಯಾಸ ?“ಎಂದಳು.

ಸೆಟ್ಟರು ಕೈಮುಗಿದರು. “ನಾನು ನಿಮ್ಮ ವಿಚಾರ ಕೇಳಿದ್ದೆ. ಏನೋ ಅರಮನೆಯಲ್ಲಿ ದೂರದಿಂದ ಮೋಡದ ಮಿಂಚು ಕಂಡಹಾಗೆ ನೋಡಿದ್ದುದು. ಆದರೆ, ತಮ್ಮ ರೂಪ ಎಷ್ಟು ಸೊಗಸೋ ಬುದ್ದಿಯೂ ಅಷ್ಟೇ ತೀವ್ರ ಎನ್ನುವುದು ಚೆನ್ನಾಗಿಯೂ ಮನಸ್ಸಿಗೆ ತಾರ್ಕಣೆಯಾಯಿತು. ನಿಜವಾಗಿಯೂ ನೀವು ಗೆದ್ದಿರಿ.”

ಚಿನ್ನಳು ಗೆಲುವನ್ನು ಅಂಗೀಕರಿಸಿಕೊಂಡೂ ಸೋತವಳಂತೆ ನಟಸುತ್ತಾ “ಏನು ಗುರುಗಳೇ, ಇವರು ರಾಜರಾಜರಿಗೆಲ್ಲ ಮಂಕುಬೂದಿ ಎರಚಿ ಕಲ್ಲು ಕೊಟ್ಟು ಚಿನ್ನ ತಂದು ತುಂಬಿಕೊಳ್ಳುವ ಧೀರರು. ನಾನು ತಂಬೂರಿ ಮೀಟ ಕೊಂಡು ಸಾರಿ ಗಾ ಮ ಎಂದುಕೊಂಡು ಮೂಲೆಯಲ್ಲಿ ಕುಳಿತುಕೊಂಡಿರುವ ಹೆಣ್ಣು ಹೆಂಗಸು. ಇವರಿಗೆ ಸೋಲಂತೆ. ನಮಗೆ ಗೆಲುವಂತೆ. ತಾವು ಒಪ್ಪುತ್ತೀರಾ ಗುರುಗಳೇ?” ಅವರು ನಗುತ್ತಾ “ಅವರು ಹೇಳಿದ್ದು ಬುದ್ಧಿಯ ವಿಚಾರ. ಹಿಂದೆ ಮುಂದೆ ತಿಳಿಯದೆ ನಾನು ಮಾತನಾಡುವುದು ನ್ಯಾಯವೇ?” ಎಂದರು.

ಸೆಟ್ಟರು “ಇನ್ನು ಯಾವುದೂ ಅಲ್ಲ ಗುರುಗಳೇ, ಸನ್ಮಾನಸಭೆ ವಿಚಾರ. ನಾನು ನಮ್ಮ ಚಿನ್ನಾಸಾನಿಯವರ ಸಂಗೀತ ರಾಜಧಾನಿಯವರೆಲ್ಲ ಕೇಳಲಿ ಎಂದು ಇವರ ಸಂಗೀತ ಇಡಿಸಿ ಎಂದೆ ಸ್ವಾಮಿ. ತಾವು ಹಿರಿಯರು ಹೇಳಿ. ನಾಟಕ ಸಾಹಿತ್ಯ, ‘ಅಮ್ಮನವರಿಗೆ ಸಂಗೀತ ಸಾಹಿತ್ಯ ಎರಡೂ ಎರಡು ಸ್ತನಗಳು’ ಎನ್ನುತ್ತಾ ರೆ. ಒಂದಕ್ಕೆ ಗೌರವ ಮಾಡುವಾಗ ಇನ್ನೊಂದು ಜೊತೆ ಸೇರಬೇಕು; ಸೇರಲಿ, ಎನ್ನುವುದು ನನ್ನ ಭಾವ. ಅಲ್ಲದೆ, ಇಂಥಾ ಸಂಗೀತಗಾರಳು ಗೋಲ್ಕೊಂಡ, ಬಿಜಾಪುರ. ಬಿದರೆ, ಅಹಮ್ಮದ್‌ನಗರ ಬಿಹಾರ್‌, ಕೊನೆಗೆ ದಿಳ್ಳಿ ದ್ವೀಪಾಂತರಗಳಲ್ಲೂ ಇಲ್ಲವಲ್ಲ. ಈಕೆಗೆ ಶುಭವಾಗಿ ಒಂದು ತಾಂಬೂಲ ಕೊಟ್ಟು ಎರಡು ಒಳ್ಳೆ ಮಾತು ಹತ್ತು ಜನರಲ್ಲಿ ಆಡುವುದಕ್ಕೆ ಅವಕಾಶವಾಗಲಿ ಎಂದು ನಾನೇ ಈಕೆಯ ಸಂಗೀತ ಏರ್ಪಾಡು ಮಾಡಿ ಎಂದರೆ ಏನು ತಪ್ಪು? ಅದೇ ಸಮಯ ಸಾಧಿಸಿ ಈಕೆ ನಮಗೇ ತಾಂಬೂಲ ಓದಿಸಿದಳು. ಹತ್ತು ಜನರಲ್ಲಿ ನಾನು ಮುಖ ಇಟ್ಟು ಕೊಂಡು ಬರುವುದಕ್ಕೇ ಆಗದಹಾಗೆ ಮಾಡಿಬಿಟ್ಟಳು. ತಾನು ಸಂಗೀತ ಮುಫತ್ತಾಗಿ ಹಾಡುತ್ತೇನೆ ಎಂದವಳು ಈಕೆ ಚಂದಾನೂ ಕೊಡಬಹುದೇ ? ಅದೂ ಎಷ್ಟು? ಯಜಮಾನ್ ವೀರಪ್ಪಸೆಟ್ಟಿ ಕೊಟ್ಟಿರುವುದರ ಹತ್ತರಷ್ಟು. ಎಲ್ಲಾದರೂ ಉಂಟೆ? ತಾವು ಹೇಳಿ ಗುರುಗಳೇ! ಈಕೆ ಹೀಗೆ ಮಾಡಿದ್ದರೆ ಅರ್ಥ ಏನು? ಏ, ವೀರಪ್ಪಾ, ಅವೊತ್ತು ನೀನು ಬರಬೇಡ ಎಂತ ಬಾಯಿಬಿಟ್ಟು ಹೇಳಿದ ಹಾಗೆ ತಾನೇ? ಅದಕ್ಕಾಗಿಯೇ ಈದಿನ ಬಂದುದು. “ಪುಣ್ಯಾತ್ಮಗಿತ್ತಿ, ನಮ್ಮ ಮಾನ ನೀನು ಕೊಂಡುಕೊಂಡುಬಿಟ್ಟಿದ್ದೀಯೆ, ದಯವಿಟ್ಟು ಅದನ್ನು ನಮಗೆ ಹಿಂದಕ್ಕೆ ಕೊಟ್ಟು ಬಿಡು’ ಎಂದು ಹೇಳುವುದಕ್ಕೆ. ಇಗೋ, ಕಾಣಿಕೆಕೂಡ ತಂದಿದ್ದೀನಿ. ಈ ವಜ್ರಗಳು ಬ್ರಹ್ಮಜಾತಿಯವು. ಬಹು ಶ್ರೇಷ್ಠವಾದವು. ಆರಿಸಿ ತೆಗೆದರೂ ಸಿಕ್ಕುವಂಥವಲ್ಲ. ಇವು ಒಂದೊಂದೂ ಕಳ್ಳನ ಕೈಗೆ ಕೊಟ್ಟರೂ ಒಂದೊಂದು ಥೈಲಿ ಆಗುವಂಥವು. ಇದೋ ಐವತ್ತು ಇವೆ. ದಯವಿಟ್ಟು ಒಪ್ಪಿಸಿಕೊಳ್ಳ ಬೇಕು.” ಎಂದು ಒಂದು ಪೊಟ್ಟಣವನ್ನು ತಟ್ಟೆಯಲ್ಲಿಟ್ಟು ಮುಂದಿ ತಳ್ಳಿದರು.

ಚಿನ್ನಳು ಪೊಟ್ಟಣವನ್ನು ಬಿಚ್ಚಿ ರತ್ನಪಡಿವ್ಯಾಪಾರಿಗಿಂತ ಹೆಚ್ಚಾಗಿ ಅವುಗಳನ್ನು ಪರೀಕ್ಷಿಸಿದಳು. ಎಲ್ಲವೂ ಚೋಳದೇಶದ ಸಾಣೆಹಿಡಿದಿರುವ ಸುಂದರವಾದ ರತ್ನಗಳು. ಹಿಡಿದಿಟ್ಟ ಮಿಂಚಿನತುಂಡುಗಳಂತೆ ಹೊಳೆಯುತ್ತ ನೋಡುವವರ ಕಣ್ಮನಗಳನ್ನು ಕೂಡಲೇ ಅಪಹರಿಸುವಂತದ ಸೊಗಸಿನ ಕಲ್ಲುಗಳು. ನೋಡಿ ಸಂತೋಷಸಟ್ಟು ಗುರುಗಳಕೈಗೆ ಕೊಟ್ಟು ಅವರು ಏನು ಹೇಳುವರೋ ಎಂದು ಕಾದುಕುಳಿತಳು. ಅನರೂ ಅಷ್ಟು ಹೊತ್ತು ನೋಡಿ “ಭೇಷ್‌! ಭೇಷ್‌ ! ಯಜಮಾನರು ಹೇಳಿದುದು ನಿಜ. ಹುಡುಕಿದರೂ ಸಿಕ್ಕುವ ಜಾತಿಯಲ್ಲ ಈ ರತ್ನಗಳು” ಎಂದು ಮೆಚ್ಚಿಕೊಂಡರು. ಗುರುಗಳು ಕೊಟ್ಟ ಪೊಟ್ಟಣವನ್ನು ಮತ್ತೆ ತಟ್ಟೆಯಲ್ಲಿಟ್ಟು, ಸೆಟ್ಟರಕಡೆ ಸರಿಸಿದಳು. ಅವಳು ಮಾತನಾಡದೆ ಮೌನವಾಗಿರುವುದನ್ನು ಕಂಡು ಸೆಟ್ಟರಿಗೆ ಆಶ್ಚರ್ಯವಾಯಿತು. ಅವಳು ಅವುಗಳನ್ನು ನೋಡುವುದರಲ್ಲೇ ಅವಳಿಗೆ ರತ್ನಪರೀಕ್ಷೆ ಗೊತ್ತು ಎನ್ನುವುದು ಆ ಖದೀಮನಿಗೆ ಗೊತ್ತಾಯಿತು. ಅಂಥಾದ್ದರಲ್ಲೂ ಅವಳು ಏನೂ ಹೇಳದೆ ಇರುವುದನ್ನು ನೋಡಿ “ಏನ್ರಿ ನಿಜವೋ ಸುಳ್ಳೋ ಇಂಥಾ ರತ್ನಗಳು ಹುಡುಕಿದರೂ ಸಿಕ್ಕುವುದಿಲ್ಲ. ಇದನ್ನು ತಾವು ಒಪ್ಪಿಸಿಕೊಳ್ಳಿ ಎಂದು ತಂದಿದ್ದೇನೆ. “ಎಂದರು.

“ರತ್ನಗಳೇನೋ ಪ್ರಶಸ್ತವಾದವು ಸಂದೇದವಿಲ್ಲ. ಯಾರಾದರೂ ಗಣಿಯಿದ್ದವರು ಮಾತ್ರ ಇಂಥಾರತ್ನಗಳನ್ನು ತರಬಹುದೇ ಹೊರತು ಇತರರಿಗೆ ಸಾಧ್ಯವಿಲ್ಲ. “

ಚಿನ್ನಳ ಬಾಣ ಗುರಿಯನ್ನು ಭೇದಿಸಿತು. ಸೆಟ್ಟರು ಆ ಸ್ತೋತ್ರವನ್ನು ಸ್ವೀಕರಿಸುತ್ತಾ ಹೇಳಿದರು. “ನಿಮ್ಮ ದಯೆಯಿದ್ದರೆ ವಜ್ರದಗಣಿಯೂ ನಮ್ಮ ಕೈಗೆ ಬರುತ್ತದೆ. ಅದೇನು ದೊಡ್ಡವಿಷಯ ! ನಮ್ಮ ಗುರುಗಳಂತಹ ಹಿರಿಯರು ಆಶೀರ್ವಾದ ಮಾಡಿದ ವಜ್ರಗಣಿಯೆನ್ನುವುದು ಇಲ್ಲಿಂದ ನದಿಗೆ ಹೋಗಿ ನೀರು ತುಂಬಿಕೊಂಡು ಬರುವಷ್ಟು ಸುಲಭ.”

ಚಿನ್ನಳು ಮೈಯೆಲ್ಲ ಕಿವಿಯಾಗಿ ಕೇಳಿದಳು. ಸೆಟ್ಟರ ಮಾತಿನಲ್ಲಿ ಒಳಾ ಒಳಗೆ ಏನೋ ಗೂಢವಾದ ಅರ್ಥವಿದ್ದ೦ತೆ ತೋರಿತು. ಆದರೂ ಅದು ಸಿಕ್ಕಲಿಲ್ಲ ಅದರಿಂದ ಕಣ್ಣಿನ ನೋಟದಿಂದ ಅವರ ಹೃದಯಾಂತರಾಳವನ್ನೆಲ್ಲಾ ಪರೀಕ್ಷಿಸುವವಳಂತೆ ತೀವ್ರವಾಗಿ ನೋಡುತ್ತ, ಅನೋಟದ ತೀವ್ರತೆಯನ್ನು ಮಂದಹಾಸದಿಂದ ಪರಿಪರಿಸುತ್ತಾ ಕೇಳಿದಳು, “ಅಪ್ಪಣೆಯಾಗಲ್ಲಿ, ತಮಗೆ ವಜ್ರದಗಣಿ ಸಿಕ್ಬುವುದಕ್ಕೆ ನಾವು ಯಾವ ಬೆಟ್ಟಕ್ಕೆ ಕಲ್ಲು ಹೊರಬೇಕು? ಯಾನನದಿಗೆ ನೀರು ಹೊರಬೇಕು? ?

ಸೆಟ್ಟರು“ಭಲೆ ಭಲೆ! ಎಂತಹಮಾತು! ಏನು ಚತುರಿ! ಪುಣ್ಯಾತ್ಮಗಿತ್ತಿ! ನೀವು ಗೆಲ್ಲಿರಿ ಎಂದು ಒಂದುಸಲ ಜೈ ಎಂದರೆ ಸಾಕು. ನಿಮ್ಮ ಬಾಯಹರಕೆ ಸಾಕು. ನಿಮ್ಮ ಹತ್ತಿರ ಮುಚ್ಚಿಡಬೇಕಾದುದೇನು? ಗೋಲ್ಕೊಂಡದ ಸುಲ್ತಾನರೇ ಬಾಯಿಬಿಟ್ಟು, ಆ ಗಣಿಯನ್ನು ‘ಗುತ್ತಿಗೆಗೆ ಕೊಡುವುದಾಗಿ ಹೇಳಿದ್ದಾರೆ. ನಿನ್ನೆಯದಿನ ನಾವು ವರ್ತಕರೆಲ್ಲ ಸೇರಿ ಐದು ಕೋಟಿ ಅದಕ್ಕಾಗಿ ಬಂಡವಾಳ ಹಾಕುವುದಕ್ಟೂ ಮಾತನಾಡಿ ಆಯಿತು. ಇನ್ನು ಚಕ್ರವರ್ತಿಗಳ ಅಪ್ಪಣೆ ಪಡೆಯಬೇಕು. ಇನ್ನೊಂದೆರಡು ವಿಷಯ. ಅವೂ ಸರಿಹೋಗುತ್ತವೆ ಎನ್ನಿ. ಒಂದುವೇಳೆ ನಮಗೆ ಅಸಾಧ್ಯವಾದರೆ ಗುರುಗಳಂಥಾ ಹಿರಿಯರಿಲ್ಲಿವೆ? ಅವರೇನು ಮಹಾತಪಸ್ವಿಗಳು. ದಾಸರಾಯರನ್ನೂ ವ್ಯಾಸರಾಯರನ್ನೂ ಮೆಚ್ಚಸಿದ ಮಹಾನುಭಾವರು, ಅವರು ಒಂದುಸಲ ತಲೆಯಮೇಲೆ ಕೈಯಿಟ್ಟು ಗೆಲ್ಲು ಎಂದರೆ ನಾನು ಸೋಲುವುದು ಎಲ್ಲಿಂದ ಬಂತು? ಎಲ್ಲಕ್ಕಿಂತ ಹೆಚ್ಚಾಗಿ ನಮ್ಮದು ವಿಜಯನಗರ ನಾವು ಎಲ್ಲಿಹೋದರೂ ವಿಜಯ ನಮ್ಮ ಪಾಲಿಗೆ ಕಟ್ಟಿಟ್ಟದ್ದು. ಈ ತುರುಕದೊರೆಗಳ ಹಾವಳಿಯಲ್ಲಿ ಯಾವುದು ಏನಾಗುತ್ತದೆಯೋ ಏನೋ. ಗೋಲ್ಕೊಂಡದಲ್ಲಿ ನಮ್ಮದೊಂದು ಠಾಣಾ ಇರಲಿ ಎಂದು ಇಷ್ಟು ಪ್ರಯತ್ನ. ಏನು ಗುರುಗಳೇ!” ಎಂದು ಸೆಟ್ಟರು ಆಪ್ತವಾಳಿಕೆಯನ್ನು ಮೆರೆಯುತ್ತ ಕೊಂಚದೀರ್‍ಘವಾಗಿಯೇ ಮಾತನಾಡಿದರು.

ಮತ್ತೆ ತಟ್ಟೆಯಲ್ಲಿದ್ದ ವಜ್ರಗಳ ಪ್ರಸ್ತಾಪವೆತ್ತಿ ಬಲು ಸಲಿಗೆಯಿಂದ “ಚಿನ್ನಾಸಾನಿ, ತಮಗೆ ನಾವು ಸೋತಿದ್ದೇವೆ. ಆ ಸೋಲಿನ ಸೊಂಕು ಕಳೆಯಲಿ ಎಂದು ತಮ್ಮ ಬುದ್ಧಿಗೆ ಕಾಣಿಕೆಯಾಗಿ ಈ ವಜ್ರಗಳನ್ನು ಒಪ್ಪಿ ಸಿದ್ದೇವೆ. ಇವು ನಮ್ಮದಾಗಿ ತಮ್ಮಲ್ಲಿರಲಿ. ಮತ್ತೆ ಯಾವಾಗಲಾದರೂ ಸಂದರ್ಭವೊದಗಿ ನಾವೇನಾದರೂ ಪ್ರಾರ್ಥನೆ ಮಾಡಿಕೊಂಡರೆ, ಹೋದ ಸಲ ಮಾಡಿದೆ ಹಾಗೆ ಮಾಡಿ ನಮಗೆ ಅವಮಾನ ಮಾಡಬೇಡಿ, ಸಲ್ಲಿಸಿಕೊಡಿ ಎಂದು ಈಗಲೇ ಕೈಮುಗಿದು ಕೇಳಿಕೊಳ್ಳುತ್ತೇವೆ. ದಯವಿಟ್ಟು ಒಪ್ಪಿಸಿಕೊಳ್ಳಿ “ ಎಂದು ಪರಮಾದರದಿಂದ ಹೇಳಿದರು.

ಇನ್ನೂ ಚಿನ್ನಾಸಾನಿಯು ಮನಸ್ಸು ಮಾಡದಿವುದನ್ನು ನೋಡಿ, “ಗುರುಗಳೇ, ತಮ್ಮ ಪಾಡಸಾಕ್ಷಿಯಾಗಿ. ಈಕೆಯಲ್ಲಿ ನಮಗೆ ಇನ್ನೇನೂ ದುರಭಿಪ್ರಾಯವಿಲ್ಲ. ಇದನ್ನು ತೆಗದುಕೊಳ್ಳುವಹಾಗೆ ತಾವಾದರೂ ಹೇಳಿ “ ಎಂದು ಅವರ ನೆರವನ್ನು ಕೋರಿ ಏನೋ ಥಟ್ಟನೆ ನೆನಪಿಗೆ ಬಂದಹಾಗೆ ಮಾಡಿ, “ಇವೊತ್ತು ನಮ್ಮ ವರ್ತಕಮಂಡಲಿಯವರು ಮತ್ತೆ ಸೇರುತ್ತಾರೆ. ನಾನು ಅಲ್ಲಿಗೆ ಹೊತ್ತಿಗೆ ಸರಿಯಾಗಿ ಹೋಗಬೇಕು. ದಯವಿಟ್ಟು ಅಪ್ಪಣೆ ಕೊಡಿ” ಎಂದು ಎದ್ದು ವೀಳಯವನ್ನು ಮುಟ್ಟಿ ಹೊರಟೇಬಿಟ್ಟಿರು. ಚಿನ್ನಳು ಸದಾಚಾರವನ್ನು ಪಾಲಿಸಲು ಬಾಗಿಲಿಂದೀಚೆಗೆ ಎರಡು ಹೆಜ್ಜೆ ಬಂದಳು.

ಸೆಟ್ಟರು ತಟಕ್ಕನೆ ಹಿಂತಿರುಗಿ “ಇನ್ನು ಯಾವಾಗಲಾದರೂ ಬಂದರೆ ತಪ್ಪಿಲ್ಲವಲ್ಲ?” ಎಂದರು. ಚಿನ್ನಳು ಆ ಪ್ರಶ್ನೆಗೆ ಸಿದ್ದಳಾಗಿರಲಿಲ್ಲ. ಆ ಅಸಿದ್ದತೆಯಲ್ಲಿ ಅರ್ಧ ಚದುರಿದ ಮನಸ್ಸಿನಲ್ಲಿ ತಾನೇನು ಹೇಳುವೆನೆಂಬುದನ್ನು ತಾನೇ ಅರಿಯದೆ “ಅದಕ್ಕೇನಂತೆ?”ಎಂದಳು. ಸೆಟ್ಟರೂ ರಸಿಕರಾಜನ ಸೊಗಸಿನ ನಗುನಕ್ಕು ಅವಳು ಏನಾಗುವುದು ಎಂದು ಅರಿಯುವುದಕ್ಕಿಂತ ಮುಂಚಿತವಾಗಿ ಕೈಹಿಡಿದು ಅದನ್ನು ಮುತ್ತಿಟ್ಟು ಕೊಂಡು ಸರಸರನೆ ಹೊರಟು ಹೋದರು.

ಚಿನ್ನಳಿಗೆ ದಿಗ್ಭ್ರಾಂತಿಯಾಗಿಹೋಯಿತು. ಅರ್ಧ ಕೋಪ, ಅರ್ಧ ವಿಸ್ಮಯಗಳಿಂದ ನಿದಾನವಾಗಿ ಒಳಕ್ಕೆ ಬಂದಳು. ತೆರೆಯ ಹಿಂದಿದ್ದ ರನ್ನಳೂ ಈಚೆಗೆ ಬಂದಳು. ಗುರುಗಳಿಗಾಗಲಿ ಆ ಶಿಷ್ಯರಿಗಾಗಲಿ ಸೆಟ್ಟಿಯ ವರ್ತನೆ ಎಳ್ಳಷ್ಟೂ ಅರ್ಥವಾಗಲಿಲ್ಲ.

*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...