Home / ಕವನ / ನೀಳ್ಗವಿತೆ / ಸೂರ್‍ಯಚಕ್ರ

ಸೂರ್‍ಯಚಕ್ರ

(ಪ್ರತಿ ಸಾಲಿನ ಕೂನಗೆ ‘ತಂದಾನಂದಾನಾವೇ’ ಅನ್ನಬೇಕು)

ಸೂಲಿ ಚಕ್ಕರಾ ಪರದಾಣಿ ತಮ್ಮಾ | ತಂದಾನಂದಾನಾವೇ
ಇಂದ್ರಜ್ಯೋತ್ಯಂಚೂ ಯೇ ಅರಸೂ ಅಣ್ಣಾ
ವಂದಲ್ಲಾ ವಂದೂ ರಾಜ್ಯಾದಲ್ಲೋ
ವಂದಲ್ಲಾ ವಂದೂ ಸಿಮ್ಯಾದಲ್ಲೀ
ಕಾಗತ ಪತ್ತುರವೇ ಬಂದಿತೂ ಸಿವನೇ ||೧||

ಬಂದಾ ಕಾಗಿತವಾ ವಡದು ವೋದವನೇ
ಬೂಮಿಗೆ ಮುರಜ್ಯಾಗೀ ಬಿದ್ದೀದಾ ಅಣ್ಣಾ
ಅಣ್ಣ ಸಂತರಸೀ ಕುಳಸೀದ ತಮ್ಮಾ
“ಕೇಳಲ್‌ ಕೇಳಲ್ಲೋ ನನ್ನಾ ತಮ್ಮಾ ||೨||

ದಂಡೀಗಾದಾರೇ ಬರಬೇಕು ಲಂದೀ
ಕಾಗತ ಪತ್ತರವೇ ಬಂದೀತು ನೋಡೂ
ದಂಡೀ ಗಾದಾರೆ ಬಾರಾದಿದ್ದಾರೇ
ನಮ್ಮ ರಾಜಗಳಾ ಬಿಟ್ಟೀಕೊಡಬೇಕೂ ||೩||

ನಮ್ಮ ರಾಜಗಳಾ ಬಿಟ್ಟೀಕೊಡದೀರೇ
ಹೆಣ್‌ ಹೆಂಗ್ಸ್ರಕಿಂದೂ ಕಡಿಯಾಂತ್ತೋ ತಮ್ಮಾ
ನಾ ದಂಡೀಗಾದಾರೇ ಹೋಗಿನ್ನು ಬರುತೇ”
ಅಂದೇಳಿ ಲೇಗೇ ನುಡಿದಾನೇ ಲಣ್ಣಾ ||೪||

“ಕೇಳಲ್‌ ಕೇಳಲ್ಲೋ ನನ್ನಾಲು ಅಣ್ಣಾ
ಆಯಿದ್ಯಗಳು ನಿನಗೇ ತಿಳಿಯವೊ ಲಣ್ಣ
ನಾನೂಲಾದಾರೇ – ಹೋಗಿನ್ನು ಬತ್ತೆ ತಿಳಿಯವಾ ಲಣ್ಣ”
ಅಂದೇಳೀಲಿನ್ನೇ ನುಡಿದಾನೆ ತಮ್ಮಾ ||೫||

ಲಣ್ಣನಾದಾರೇ ಲೇನ ಹೇಳೀದಾ?
“ನಿನ್ನಾಲು ಮಡದೀ ಚಿಕ್ಕವ್ಳು ತಮ್ಮಾ
ನನ್ನಾಲು ಮಡದೀ ಸಮುರಂತಿ ತಮ್ಮಾ
ನಾ ದಂಡೀ ಗೋಗೀ ಬರುತೇ” ನಂದಾ ||೬||

ಯೇನೇನ್‌ ಹೇಳಿದರೂ ಕೇಳುದೆಲ್ಲಾ ತಮ್ಮಾ
“ತಾನೇ ಲಾದಾರೇ ಹೋಗಿನ್ನೆ ಬರುತೇ”
ಅಟ್ಟಂಬೂ ಮಾತಾ ಹೇಳೀದರು ಯೇಗೇ
ವಳಗಿದ್ದ ತಾಯಾ ಹೆರುಗೇ ಕರುದಾರೇ ||೭||

“ಕೇಳಲ್‌ ಕೇಳಲ್ಲೇ ನೀ ಕೇಳೇ ತಾಯೇ
ಗಾಡಾದಿಂದಡಗೀ ಮಾಡಾಬೇಕಂ’ದಾ
“ದಂಡೀಗಾದಾರೇ ಸವ್ನವ್ನೇ ನಾನೂ”
ಅಟ್ಟಂಬೂ ಮಾತಾ ಕೇಳೀತು ತಾಯೀ ||೮||

ಮುತ್ತೀನ ಕಣ್ಣೀರಾ ಶಡದಾಳೂ ತಾಯೀ
ಬಚ್ಚಲಕೇ ಕಿಚ್ಚಾ ನುರುದೀತು ತಾಯೀ
ಮಿಂದಳೇ ವಗುದಾಳೇ ಚಂದ್ರ ಬಟ್ಟಿಟ್ಟೀ
ಮಿಂದೆಲ್ಲೀ ಮಡಿಯಾ ವಗೂದುಟ್ಟೀ ||೯||

ಮಾಳೂಗೀ ವಳಗೇ ಬರುವದೂ ತಾಯೀ
ಗಾಡಾದಿಂದಡಗೀ ಮಾಡೀತೂ ತಾಯೀ
ಮಾಳೂಗೀ ಹೆರಗೇ ಬಂದೀತೂ ತಾಯೀ
“ಆಯೀತೂ ಅಡಗೀ ಕಾದೀತು ಬಿಸಿನೀರೂ ||೧೦||

ವೋಟಾಕಾದಾರೇ ಬರಬವ್‌ದೋ ಮಗನೇ”
ಅಟ್ಟಂಬೂ ಮಾತಾ ಕೇಳಿರು ಮಗದೀರೂ
ಮಿಂದರೆ ವಗೆದಾರೇ ಚಂಡೂಕಿ ಸಳದೀ
ಮಿಂದಲ್ಲೇ ಮಡಿಯಾ ವಗೂದುಟ್ಟೀ ||೧೧||

ದ್ಯೇವರ ಪುರಕಿನ್ನೀ ಬಂದರೆ ಮಗದೀರೂ
ದ್ಯೇವರ ಪೋಜೀಯಾ ಮಾಡವ್ರೇ ಲೇಗೇ
ಮಾಳೂಗೀ ವಳಗೇ ನೆಡವರೆ ಮಗದೀರೂ
ಯೇಯ್ಡ ಜನ ಅಣ್ಣದೀರೂ ವೋಟಕ್‌ ಕೂತಾರೇ ||೧೨||

ತಂಗಿನು ತಾಯಿನೂ ವೋಟಕ್‌ ಕೂತಾರೇ
ವೋಟಾನಾದಾರೇ ಮಾಡವ್ರೇ ಲೇಗೇ
ಮಾಳೂಗೀ ಹೆರುಗೇ ಬಂದವ್ರೇ ಲೇಗೇ
ಕೈಬಾಯಾಲಿನ್ನೇ ತೊಳುದವ್ರೇ ಲೇಗೇ ||೧೩||

ಮಾಳೂಗಿ ವಳುಗೇ ನೆಡದಾರು ಯೇಗೇ
ಪಟ್ಟೀ ಮಂಚದಲ್ಲೀ ಕುಂತೀಕಂಡವ್ರೇ
ಹೊಳೂ ಬೆಳಿಯೆಲಿಯಾ ಮೆಲಿದವ್ರೇ ಅವರೂ
“ಕೇಳಲ ಕೇಳಲ್ಲೋ ನನ್ನಾಲು ಅಣ್ಣಾ ||೧೪||

ನಮ್ಮಿಬ್ಬರಾ ನೆಡುಗೇ ವಬ್ಬಾಳೂ ತಂಗೀ
ತೆಂಗೂ ಸಿಂಗರವೇ ನಮಗುಂಟು ತಮ್ಮಾ
ನಮ್ಮಲರವಾಸೀ ತಂಗೀನ್‌ ಬಳುವಳೀ
ಆರೂ ಸಾವಿರದಾ ಗೋಪಾದೇವೀ ||೧೫||

ನಮ್ಮಲರವಾಸೀ ತಂಗೀಗ್‌ ಬಳವಳೀ
ಮೂರು ಸಾವಿರದಾ ಕರಗೋಳ್‌ ಹಿಂಡೂ
ನಮ್ಮಲರವಾಸೀ ತಂಗೀಗ್‌ ಬಳುವಳೀ
ಯೇಳು ಕೊಪ್ಪರಕೀ ದುರವ್ಯಾಗಳುಂಟೂ ||೧೬||

ನಮ್ಮಲರವಾಸೀ ತಂಗೀಗ್‌ ಬಳವಳೀ
ಸೋದರತ್ತೀಯಾ ಮಗಗೇ ಕೊಡಬೇಕೊ”
ಅದೇಳೀಲಿನ್ನೇ ನುಡದಾನೆ ತಮ್ಮಾ
“ಕೇಳಲ್‌ ಕೇಳಲ್ಲೇ ನಾಸಾಕಿದ ಗಿಳಿಯಾ ||೧೭||

ನಿಮ್ಮಲೂ ವಡಿಯಾ ದಂಡೀಗ್‌ ಸವ್ನವ್ನೇ
ಬಿಂಬೀ ರೂಪದಲ್ಲಿ ಹೋಗಬೇಕು ನೀನೂ
ವಡತೀಗೆ ಕರಿಯಾ ಕೊಡಬೇಕೋ ನೀನೂ
ದಂಡೀಗಾದರೇ ಸವ್ನವ್ನ” ಅಂದೇಳಿ ||೧೮||

ಅಟ್ಟಂಬೂ ಮಾತಾ ಕೇಳಿತೂ ಗಿಳಿಯಾ
ಹಾರೀಕುಂತಳ್‌ ವಡತೀ ಮನಿಯಾಲು ಮುಂದೇ
“ಮಾಳುಗೀ ವಳುಗೇ ಹಾಲ್‌ ಕಾಸೂ ವಡತೀ” ||೧೯||

ಅಟ್ಟಂಬೂ ಮಾತಾ ಕೇಳೀತೂ ಹೆಣ್ಣೂ
ಮಾಳೂಗೀ ಹೆರಗೇ ಬಂದೀತೂ ಹೆಣ್ಣೂ
ಕೊಟ್ಟಾವಾಲೀಯಾ ತಟ್ಟೇ ವೋದೀತೂ
ಮುತ್ತಿನ ಕಣ್ಣೀರಾ ಬಿಡವದೂ ಮಡದೀ ||೨೦||

ಕಟ್ದಸಿರಿ ಮೂಡಿಯಾ ಬಿಚ್ಚೀ ಬೀರಾಡೀ
ರಾಜಂಗಳ ಮೆಟ್ಟಾ ಇಳುದಾಳೆ ಹೆಣ್ಣೂ
ಬಿದ್ದಾ ಮಾರಿಗವಾ ಹಿಡಿದಾಳೆ ಹೆಣ್ಣೂ
ತನ್ನಲೂ ಮನಿಗೇ ಬಂದೀತೂ ಹೆಣ್ಣೂ ||೨೧||

ಕೈಕಾಲು ಸಿರಿಮೊಕವಾ ತೊಳದೀತು ಹೆಣ್ಣೂ
ವಳಗೆ ನಾವಾರೇ ಸಿಡದೀತೇ ಹೆಣ್ಣೂ
ಮುತ್ತಿನ ಕಣ್ಣೀರಾ ಬಿಡವದು ಹೆಣ್ಣೂ
ಗಂಡಾಲೂ ಲಿನ್ನೇ ಯೇನ ನುಡುದಾನೇ? ||೨೨||

“ಕೇಳಲ್‌ ಕೇಳಲ್ಲೇ ನನ್ನಾಲು ಮಡದೀ,
ನಾ ದಂಡೀಗಾದಾರೇ ಹೋಗಿನ್ನು ಬತ್ತೇ
ಹೋಗೀ ಬಾರಂದೀ ಯೇಳ್ಯ ಕೊಡು ಮಡದೀ,”
“ಹರಹಾರಾ” ಲಂತೂ “ಶಿವಶೀವಾ” ಲಂತೂ ||೨೩||

ಮುತ್ತಿನ ಕಣ್ಣೀರಾಶಡದಾಳೂ ಹೆಣ್ಣೂ
“ನನ್ನ ತರವಾಗೇ ಚಿಕ್ಕವಳಾಗಿದ್ದೆ
ಯೇಗೆ ನಾದಾರೇ ಸಮರಂತೀ ನಾವೂ
ಕೂತೊಂದ ಯೇಳ್ಯಾವಾ ಮೆಲಿಲಿಲ್ಲ ಸ್ವಾಮೀ ||೨೪||

ವಂದೂ ಚೆಂಬೂದಿಕಾ ಚೆಲಲಿಲ್ಲಾ ಸ್ವಾಮೀ,
ಇಂದೋಗೂ ಪಯಶಾ ನಾಳೆ ಹೋಗ ಬಿಡುದೂ
ಇಂದೊಂದೂ ದಿವಸೇ ಲುಳದೋಗೀ ಸ್ವಾಮೀ”
“ಇಂದೀನಾದಿವಸಾ ನಾಳೀಕೆ ಶಿಕ್ಕಾ ||೨೫||

ಪೆಟ್ಟೂಗೀ ವಳುಗೇ ಪಟ್ಟೀದೇ ಮಡದೀ
ಲುಟ್ಟೀ ಕಂಡಿನ್ನೇ ಲಿರಬವುದೂ ಮಡದೀ”
“ಪಟ್ಟೂಗೀವಳಗೇ ಪಟ್ಟೀಲಿದ್ದಾರೇ
ನೀವಿದ್ರೆ ನನ್ನಾ ಪಟ್ಟೀಯೇ ಸ್ವಾಮೀ”
“ಪೆಟ್ಟೂಗೇ ವಳಗೇ ಚೆನ್ನೀದೇ ಮಡದೀ ||೨೬||

ಇಟ್ಟೀಕಂಡಿನ್ನೇ ಲಿರಬವದೂ ಮಡದೀ”
“ಪೆಟ್ಟೂಗೀವಳಗೇ ಚಿನ್ನಾಲಿದ್ದಾರೇ
ಚಿನ್ನಾಕ್ಕೇ ಬೆಂಕಿ ಹಚ್ಚಾರೂ ಹೋಗೀ
ನೀವಿದ್ರೆ ನನ್ನಾ ಚಿನ್ನಾವೆ ಸ್ವಾಮೀ” ||೨೭||

ಯೇನೇನ್‌ ಹೇಳಿದರೂ ಕೇಳೂದಲ್ಲಾ
“ಕೇಳಲ್‌ ಕೇಳಲ್ಲೇ ಯೇ ನನ್ನ ತಾಯೀ,
ನಿಂಬೀಕಾಯ್ನಂತಾ ಬುತ್ತೀನೇ ಕಟ್ಟೂ
ಕಣಬೀ ಕಾಯ್ನಂತಾ ರೊಟ್ಟೀನೇ ಸುಡೂ ||೨೮||

ಕೇಳಲ್‌ ಕೇಳಲ್ಲೇ ನನ್ನಾಲೂ ತಾಯೇ
ಹೋಗೀಬಾರಂದೀ ಯೇಳ್ಯಕೊಡು ತಾಯೇ”
ಬೂಮೀ ಮುರುಚ್ಯಾಗೀ ಬಿದ್ದೀತೂ ತಾಯೀ
ತಾಯ ಸಂತರುಸೀ ಕುಳಸೀದಾ ಮಗನೂ ||೨೯||

ಯೆಡಗೈಲ್‌ ಕಣ್ಣೀರಾ ಬಲಗೈಲೀ ಯೇಳ್ಯಾ
“ಹೋಗೀ ಬಾರಂದೀ” ಯೆಳ್ಯಾ ಕೊಟ್ಟಿತು
ಆಡೂಕ್‌ ಹೋದಾ ತಂಗೀ ವೋಡೇ ಬಂದೀತೂ
ಇಬ್ಬರ ನೆಡಗೇ ವಬ್ಬಳೂ ತಂಗೀ ||೩೦||

“ನಾ ದಂಡೀಗಾದಾರೇ ಹೋಗಿನ್ನೆ ಬತ್ತೇ
ಹೋಗೀ ಬಾರಂದೀ ಲೀಳ್ಯಕೊಡೆ ತಂಗೀ”
ಬೂಮೀಗ್‌ ಮುರಚಾಗೀ ಬಿದ್ದೀತೂ ತಂಗೀ
ತಂಗೀ ಸಂತುರುಸೀ ಕುಳಸೀದಾ ಲಣ್ಣ ||೩೧||

ಯೆಡಗೈಲ ಕಣ್ಣೀರೂ ಬಲಗೈಲಿ ಲಿಳ್ಯಾ
“ಹೋಗೀ ಬಾರಂದೀ” ಲೀಳ್ಕಾ ಕೊಟ್ಟಿತೇ
“ಕೇಳಲ್‌ ಕೇಳಲ್ಲೋ ನನ್ನಾಲೂಲಣ್ಣಾ
ನಾ ದಂಡೀಗಾದಾರೇ ಹೋಗಿನ್ನೂ ಬರುತೇ ||೩೨||

ಹೋಗೀ ಬಾರಂದೀ ಲೇಳ್ಯ ಕೊಡೂ ಲಣ್ಣಾ’
ಯೆಡಗೈಲಿ ಕಣ್ಣೀರೂ, ಬಲಗೈಲೀ ಯೇಳ್ಯಾ
“ಹೋಗೀ ಬಾರಂದೀ” ಲೇಳ್ಯಾ ಕೊಟ್ಟವ್ನೇ
“ಕೇಳಲ್‌ ಕೇಳಲ್ಲೇ ನನ್ನಾಲೂ ಲತ್ಗೀ ||೩೩||

ನಾದಂಡೀಗಾದಾರೇ ಹೋಗಿನ್ನೇ ಬತ್ತೇ
ಹೋಗೀ ಬಾರಂದೀ ಲೇಳ್ಯ ಕೊಡೇಲತ್ತಗೀ”
ಯಡಗೈಲಿ ಕಣ್ಣಿರೂ ಬಲಗೈಲೀ ಯೇಳ್ಯಾ
“ಹೋಗೀ ಬಾರಂದೀ” ಯೇಳ್ಯ ಕೊಟ್ಟೀತೂ ||೩೪||

“ಕೇಳಲ್‌ ಕೇಳಲ್ಲೇ ನನ್ನಾಲು ಮಡದೀ,
ನಾದಂಡೀಗಾದಾರೇ ಹೋಗಿನ್ನೇ ಬತ್ತೇ
ಹೋಗೀಬಾರಂದೀ ಲೀಳ್ಯ ಕೊಡೆ ಮಡುದೀ”
ಯೇನೇನೇಳಿದರೂ ಕೇಳೂವದೆಲ್ಲಾ ||೩೫||

ಯಡಗೈಲ ಕಣ್ಣೀರೂ ಬಲಗೈಲಿ ಲೇಳ್ಯಾ
“ಹೋಗೀ ಬಾರಂದೀ” ಲೇಳ್ಯ ಕೊಟ್ಟೀತೂ
ಬೇಕಾದ್‌ ವಸ್ತ್ರಲೂ ಮೈಯಾರ ದರಸೀದ
ದೆಟ್ಟೀನಾದಾರೇ ಸೊಂಟಕೆ ಬಿಗದೀವಾ ||೩೬||

ಪಟವಾನಾದಾರೇ ಜಗಲಾಗಿಟ್ಟೀದಾ
ರಾಜಂಗಳ ಮೆಟ್ಟಾ ಇಳದವ್ನೇ ಲೀಗೇ
ಕಟ್ಟೂಗೀ ಹೊರಿಯಾ ಹೊತ್ತೀ ಬಂದವ್ರೇ
“ಹರಹರ” ನಂತೂ “ಶಿವಶೀವಾ” ನಂತೂ ||೩೭||

“ಇಂದೋಗೂಪಯಣಾ ನಾಳ್‌ ಹೋಗಬವದೂ
ಇಂದೀನಾ ಸಕಣಾ ಮಾಹಾಳಂ’ತೂ
ಮುತ್ತೀನ ಕಣ್ಣೀರಾ ಬಿಡುತಾದೆ ಮಡದೀ
“ಇಂದೀನ ಸೊರೀ ತಾ ನಾಳೀಕೆ ಸಿಕ್ಕಾ” ||೩೮||

ಮತ್ತೈದೂ ಹಜ್ಜೀ ಗಳದಾಲೀಗೇ
ಹೊಸ ಮಡಕೀ ಹೊರಿಯಾ ಹೊತ್ತೀ ಬಂದವ್ರೇ
“ಇಂದ್‌ ಹೋಗೂ ಪೆಯಣಾ ನಾಳೆ ಹೋಗಬವ್ದೂ
ಇಂದೀನಾ- ಸಕಣಾ ಮಾಹಾಳಂ’ತೂ ||೩೯||

ಮುತ್ತಿನ ಕಣ್ಣೀರಾ ಬಿಡುತಾದೆ ಮಡದೀ
“ಇಂದಿನ ಮೊರಿತಾ ನಾಳೀಕೆ ಸಿಕ್ಕಾ”
ಮತ್ತೈದೂ ಹೆಜ್ಜೆ ಗಳದಾ ಲೀಗೇ
ಸತ್ತಾಲೂಹೆಣವಾ ಹೊತ್ತೀ ಬಂದವ್ರೇ ||೪೦||

“ಹರಹರಾ” ಲಂತೂ “ಶಿವಶೀವಾ” ಲಂತೂ
ಮುತ್ತಿನ ಕಣ್ಣೀರಾ ಶಡದೀತೂ ಮಡದೀ
“ಇಂದೋಗೂ ಪಯಣಾ ನಾಳೆ ಹೋಗಬವದೂ
ಇಂದೊಂದು ದಿನವೇ ಉಳದೋಗೀ ಸ್ವಾಮೀ” ||೪೧||

ಮತ್ತೈದೂ ಹೆಜ್ಜೀ ಗಳದಾನೇ ಲೀಗೇ
ತಾನೆ ಹೇರೂ ಚೇಜೀ ಹೇರಿದಾನೋಡೂ
ಬಿದ್ದಾ ಮಾರಿಗವಾ ಹಿಡಿದಾ ನೇ ಲೀಗೇ
ಮೂರೂ ದಿವ್ಸಾಕೇ ದಾರೀ ತೊಳದೀವಾ ||೪೨||

ಮಾರ್‍ನಮೀ ಬಯ್ಲಾಕ್‌ ಹೋಗೀ ನಿತ್ತಾನೇ
ಪಾರ್‌ವಾರಾ ದಂಡೊಂದ ಹಾರಾಡೀ ಕಡದಾ
ಮುಗುಲಾರ ದಂಡಾ ಮುಡುಗಾಡೀ ಕಡದಾ
ದಂಡಂಬೂ ದಂಡ ಸವ್ರಾಣೀ ಮಾಡಿ ||೪೩||

ಅಸ್ವಂತಯೆಳ್ಳೀಯಾ ಕಟ್ಟೀ ಬುಡದಲ್ಲೀ
ಗಾಳೀಗಾದಾರೇ ಬಂದೀ ನಿತ್ತೀದಾ
ಹತ್ತೇವಾ ಜೇಜೀ ಇಳದಾ ನೀಗೇ
ಸೊಂಟಾನಾ ಹೆಚ್ಚೇ ಬಿಡಸೀದಾಲೀಗೇ ||೪೪||

ಕಳ್ಳರ ಪೋಕಾರೂ ಮೊಕ ಸಾರನಿತ್ತೀರೂ
ಅಳ್‌ ಹೊಟ್ಟೀಮೆನೆ ಗುಂಡಾ ಹೊಡದಾರೋಲಿನ್ನೇ
ಅಯ್ಯಯ್ಯಾ ಅಪ್ಪಾ – ಸತ್ತೇ ನಂದಾ
ಬಿಚ್ಚೀದಾ ದಟ್ಟೀ ಸುತ್ತೇದಾ ಸೊಂಟಾ ||೪೫||

ಇಳ್ದಾ ಜೇಜೀಯಾ ಹತ್ತೀದಾ ನೋಡೂ
“ಕೇಳಲ್‌ ಕೇಳಲ್ಲೋ ನಾಸಾಕಿದ ಜೇಜೀ
ನನಗೇ ನಿನಗೇಯಾ ವಂದೇ ನೊಡ್ಲೀಯೇ
ಮೂರೂ ದಿವ್ಸದ ದಾರೀ ಮೂರ ತಾಸಿಗೆ ತುಳಿಯೇ” ||೪೬||

ಕೊದುರೀಗೇ ಚಿಮಕಾ ಹೊಡುವಾನೇ ಲೀಗೆ
ಮೂರೂ ದಿವ್ಸನ ದಾರೀ ಮೂರ್‌ ತಾಸೀಗ್‌ ತುಳಿತೂ
ಹಿಂತಿರುಗೀ ಮನಿಗೇ ಬಂದೀ ನಿತ್ತೀದಾ
ಹನ್ನೈಯ್ಡಾ ಗಂಟೇಯಾ ರಾತೂರೀದಲ್ಲೀ ||೪೭||

“ತಾಯೆ ತಾಯೇ” ನಂದಿ ಮೂರ ವಾಕ್ಯಾ ಕರಿದಾ
ಮರದೀ ಬಿದ್ದೀನ್ನೇ ಸತ್ತಾನೂ ನೋಡು ||೪೮||
*****

ಕೆಲವು ಪದಗಳ ವಿವರಣೆ:

ಮುರಜ್ಯಾ = ಮೂರ್‍ಛೆ
ಸವ್ನವ್ನೇ = ತಯಾರಾಗಿದ್ದೇನೆ

ಹೇಳಿದವರು: ದಿ. ನಾಗಮ್ಮ ಗೋವಿಂದ ನಾಯ್ಕ, ತಾರಿಬಾಗಿಲ, ಹೆಗಡೆ ಊರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...