Home / ಕಥೆ / ಸಣ್ಣ ಕಥೆ / ಕಾಳಿಯ ಬಗಲಲ್ಲಿ

ಕಾಳಿಯ ಬಗಲಲ್ಲಿ

ಇವತ್ತೆಲ್ಲಾ ಜೋರು ಮಳೆ ದಬದಬ ಬೀಳ್ತಾನೆ ಇದೆ. ದಿಗಿಲು ಹುಟ್ಸಿದ್ಹಂಗೆ, ನನ್ನ ಕೈಯಲ್ಲಿ ಹೊರಗೆ ಬರೋಕ್ಕು ಆಗಲ್ಲ, ಒಂದೇ ಸಮಗೆ ಉಸಿರು ಕಟ್ಟಿದ್ಹಾಂಗೂ ಆಗ್ತಿದೆ ಕಣ್ರೀ. ಕುಂಜಳಿ ತೆಕ್ಕೆಗೆ ಬಂದ ಪಾಂಜನ ಕೊಕ್ಕಲ್ಲಿ ಕೊಕ್ಕಿಟ್ಟು ನೋವ ಉಲಿಯಿತು. ಯಾಕೋ? ಮೈ ಹುಷಾರಿಲ್ವಾ? ಹಾಗಾದ್ರೇ ಬೆಚ್ಚ್ಹಗೆ ಮಲ್ಕೋ. ನಾನೊಂದಿಷ್ಟು ಅತ್ತಿತ್ತ ಸುತ್ತಾಡಿ ಬಂದೆ, ಇರು‌ಎಂದ ಪಾಂಜ ಎಲ್ಲಿಗೆ? ಎಂದು ಕುಂಜಳಿ ಕೇಳುವ ಮುನ್ನ ಪುರ್ರನೇ ಹಾರೇಬಿಟ್ಟ.

ಅರೇ! ನಾನೊಬ್ಬನೆ ಬಂದೆ, ಕುಂಜಳಿ ಜೊತೆ ಇಲ್ಲಂದ್ರೇ ಈ ಆಟ, ಹಾರಾಟ, ಹೊಂಚು ಹಾಕೋದು ಎಲ್ಲ ಬರೀ ನೀರಸ. ಜೊತೆಗೆ ಅವಳಿದ್ರೇ ಜಗತ್ತನ್ನೆ ಹಾರಬಲ್ಲೆ ನಾನು. ನನಗಾಗೇ ಹುಟ್ಟಿದಂತಹ ಹೆಣ್ಣಾಕೆ. ಈ ಗಿಡ ಮರ ಬಳ್ಳಿಗಳೆಲ್ಲಾ ಅದೆಂಥ ಮೋಜಿನ ಜಾಗ ಆಗಿತ್ತಲ್ವಾ? ಸರಸ ಅಂದ್ರೇ ಏನು ಅನ್ನೋದನ್ನು ಕುಂಜಳಿ ಕಲಿಸಿಕೊಟ್ಟಿದ್ಳು. ನನ್ನ ಸೌಭಾಗ್ಯ ಅವಳನ್ನ ಪಡೆದಿದ್ದು, ಸುಂದರಿ ನನ್ನ ಕುಂಜಳಿ. ಎದೆಯಲ್ಲಿ ಮಧುರಭಾವ ಮೂಡಿ ಪಾಂಜ ಖುಷಿಯಾದ. ಪಾಂಜನ ಯೋಚನೆಯ ಹರಿವು ದೀರ್ಘವಾಯಿತು.

ಪಾಂಜ ಆ ಸಣ್ಣ ಮನೆಯಲ್ಲಿ ಸುಖವಾಗಿ ನಲಿದ ಜೀವ. ನಿರ್ಲಿಪ್ತ ಶಾಂತ ಜೀವನದ ಆಕಾಂಕ್ಷೆ ಅವನದು. ಹಾಗಾಗಿ ತನ್ನ ನೆಲೆ ಎಲ್ಲ ಜಂಜಾಡಕ್ಕೆ ತೆರೆದುಕೊಳ್ಳದಿರಲೆಂದು ದೂರ ಊರಾಚೆ ಮನೆ ಕಟ್ಟಿಕೊಂಡ. ಊರಲ್ಲಿದ್ದರೆ ಎಲ್ಲರ ಮಾತಿಗೆ ಸದಾ ಗುಣುಗುಡುತ್ತಾ ಗಳಹುತ್ತಾ ಬಾಯಿಯ ಆಹಾರವಾಗುವುದು, ಮತ್ತದೇ ಜಾಯಮಾನ ತಮಗೂ ಚಟವಾಗುವುದು ಬೇಡವೆಂದುಕೊಂಡ. ಕುಂಜಳಿ ಕೂಡಾ ಅಲ್ಲಿ ಖುಷಿಯಿಂದ ಅವನೊಂದಿಗೆ ಕಲೆತು ಬೆರೆತು ಸುಖಪಟ್ಟಿದ್ದಳು.

ಪಾಂಜನಿಗೆ ಮೊದಲ ಸಲ ಆಕೆ ಮೊಟ್ಟೆ ಇಟ್ಟ ಸಡಗರ ನೆನಪಾಯಿತು ಎಷ್ಟೊಂದು ಸಂಭ್ರಮಿಸಿದ್ದೆವು. ಸುರತಸುಖದ ಮಧುರ ಅನುಭವದ ಆ ವಿನೋದ ಅಬ್ಬಾ .. ಹೆಣ್ಣೆ ಕುಂಜಳಿ. ನೀನೆಷ್ಟು ಕಾಡುವೆ ನನ್ನ? ಈ ಮಳೆಯ ಆರ್ಭಟದ ನಡುವೆಯೂ ಪಾಂಜನ ಮೈ ಬೆಚ್ಚಗಾಯಿತು. ಮಧು ನೀಡುವ ಅವಳ ಸುತ್ತಮುತ್ತ ಸುಳಿಯುವುದೇ ತನ್ನ ಕಸುಬಾಗಿತ್ತಲ್ಲ. ನೆನೆದು ಪಾಂಜ ನಾಚಿದ. ಸುತ್ತಮುತ್ತ ನೋಡಿದ. ತನ್ನ ವರ್ತನೆ ತನಗೆ ನಗು ತರಿಸಿತು. ಆಕೆ ರಂಭೆ ಊರ್ವಶಿಯರ ಕುಲದವಳೋ ಎಂಬಂತಿದ್ದಳು. ಆ ರೆಕ್ಕೆಗಳೋ.. ಮೃದು ಮೈ, ಮುದ್ದಾದ ಚುಂಚು, ರಕ್ತ ಚಿಮ್ಮುವ ತೆಳು ಪಾದಗಳು, ಹೂವಿಗಿಂತ ಹಗುರವಾದ ಆಕೆ ಆತನ ಪ್ರೇಮದರಗಿಣಿ. ಆದರೆ ಆ ಸುಖ ನಿಲ್ಲಲಿಲ್ಲ. ಮೊಟ್ಟೆ ಇಟ್ಟ ಮೂರನೇ ದಿನವೇ ತಾವಿಬ್ಬರು ಆಹಾರ ಹುಡುಕಿ ಹೊರ ಹೋದ ಹೊತ್ತು ಅದೇನೋ ತಿಳಿಯದಂತೆ ಗೂಡು ಅಸ್ತವ್ಯಸ್ತಗೊಂಡಿತ್ತು. ಮೊಟ್ಟೆಗಳು ನೆಲಕ್ಕೆ ಸೇರಿದ್ದವು. ಗೂಡಿದ್ದ ಪೊದೆಯೊಳಗೆ ಯಾರೋ ಬಂದು ಹೋದಂತೆ ಇತ್ತು. ಅದೂ ಅವರೇ ಎರಡು ಕಾಲಲ್ಲಿ ನೆಟ್ಟಗೆ ನಡೆವ ಅವರೇ ಎಂಬುದು ನಿಚ್ಚಳವಾಗಿತ್ತು. ಎಲ್ಲವನ್ನು ಕೊಚ್ಚಿಕೊಲ್ಲುವ ಅವರ ಜಾಯಮಾನ ಆತನಿಗೆ ರೋಷ ಉಕ್ಕಿಸಿತು. ಆದರೆ ಏನೂ ಮಾಡಲಾಗದ ಅಸಹಾಯಕತೆ ಅವನದು. ಎಷ್ಟೋ ದಿನಗಳವರೆಗೆ ಕುಂಜಳಿ ಬದುಕುವ ಆಸೆಯನ್ನೆ ಕಳೆದುಕೊಂಡು ನಿರಾಶಳಾಗಿದ್ದಳು. ಅವಳನ್ನು ಪುನಃ ಬದುಕಿಗೆ ಬೆಸೆದುಕೊಳ್ಳುವಂತೆ ಮಾಡುವಲ್ಲಿ ಹೆಣಗಿದ್ದ ಪಾಂಜ. ಮತ್ತೆ ಮರುಕ್ಷಣ ಮನಸ್ಸು ಮನ ಮುದುಡಿತು. ’ಆದ್ರೇ ಪಾಪ ಈಗಾಕೆಗೆ ಯಾಕಿಂತ ನೋವು ,ಕೈ ಕಾಲು ಸೆಳೆತ ಹೆಚ್ಚಾಗ್ತಿದೆ. ಅಂಥ ವಯಸ್ಸಾಯ್ತ ನಮಗೆ? ಛೇ! ಇಲ್ಲ ಬಿಡು. ಏನೋ ಹೆಚ್ಚು ಕಡಿಮೆ ಆದಂಗ್ಹಿದೆ. ಸರಿ ಹೋಗ್ತಾಳೆ.’ಎಂದುಕೊಂಡ.
ಪುರ್.. ಪುರ್… ಸದ್ದು ಗದ್ದಲ ಎಲ್ಲ ಕಡೆಯಲ್ಲೂ ಕೇಳಿ ಬರುತ್ತಲೂ ಆಚೀಚೆ ನೋಡಿದ. ತನ್ನಂತೆ ಅದೆಷ್ಟು ಜೀವಗಳು ಹುಡುಕುತ್ತಿವೆ ಹೊಟ್ಟೆಗೆ. ಈ ಹೊಟ್ಟೆಗಾಗೆ ಎಲ್ಲ ಎಂದುಕೊಳ್ಳುತ್ತಾ ಇದ್ದ. ಅಷ್ಟೇ ಹೊತ್ತಿಗೆ ಅಲ್ಲೊಂದು ದಡ್ಡ.. ಎನ್ನುವಂತೆ ಜೋರಾದ ಸದ್ದಿಗೆ ಆತನ ಎದೆ ಜಿಲ್ಲೆಂದಿತು. ಅಯ್ಯೋ!! ಎನ್ನುವಷ್ಟರಲ್ಲೇ ತನ್ನ ನೆರೆಮನೆಯ ಕಾಕ ಮಾಮ ವಿದ್ಯುತ್ ತಂತಿಗೆ ಬಡಿಸಿಕೊಂಡೇ ಬಿಟ್ಟ. ಪಾಪ.. ಸುಟ್ಟುಹೋದ ಅರೆ ಕ್ಷಣದಲ್ಲೇ! ಎಲ್ಲ ಮಿತ್ರರೂ ಸೇರಿ ಚೀರಾಡತೊಡಗಿದರು. ಹಾಗೆ ಒಳಗೊಳಗೆ ನೋವು ಬಲಿಯುತ್ತಲೇ ಇತ್ತು. ಅಸಹಾಯಕ ನಿರುಪದ್ರವಿ ಜೀವಿಗಳ ಬದುಕು ಎಷ್ಟು ಘೋರವಾಗುತ್ತಿದೆ. ಹೋದಲ್ಲಿ ಬಂದಲ್ಲಿ ಹಾರುವಾಗೆಲ್ಲ ಕಾಲಿಗೆ ಅಡರಿಕೊಳ್ಳುವ ಈ ತಂತಿಗಳ ದಾಟಿ ಹೋಗುವುದೇ ಮಹಾ ಪ್ರಯಾಸವಾಗಿತ್ತು. ಅವನಿಗೂ ಒಮ್ಮೆಲೆ ಅದೇನೋ ಎದೆಯಲ್ಲಿ ಸಳಕ್ಕನೇ ಸೆಳೆದಂತಾಯ್ತು. ವಿದ್ಯುತ್ ಶಾಕ್ ಆದ್ಹಾಂಗೆ, ಇನ್ನೇನು ಬಿದ್ದು ಬಿಟ್ಟೆ ಅನ್ನೋವಷ್ಟರಲ್ಲಿ ಮತ್ತೆ ಸಾವರಿಸಿಕೊಂಡ ಪಾಂಜ. ಮಳೆ ಕಡಿಮೆ ಆಗಿದೆ. ಇಲ್ಲೇ ಎಲ್ಲಾದ್ರೂ ಏನಾದ್ರೂ ಸಿಕ್ಕಿತು. ಮನೆಯ ಏಕ ಕಿಟಕಿಯಂಚಿನ ವಾರೆಯಲ್ಲಿ ಆಗಾಗ ಇಣುಕಿ ಸಂಭ್ರಮಿಸುವ ಕುಂಜಳಿ ನೆನಪಾದಳು. ಬೇಗ ಬೇಗ ಏನಾದರೂ ಹೆಕ್ಕಿ ಕೊಳ್ಳಬೇಕು. ಸಂಗ್ರಹವಾದರಲ್ಲಿಯೇ ಇಂದು ಇಬ್ಬರ ಹೊಟ್ಟೆಗೆ ಹಿಟ್ಟು. ಈ ಬಿರು ಬೇಸಿಗೆಯ ದಿನ ಮಳೆಗಾಲಕ್ಕೂ ಹೆಚ್ಚಾಗಿ ಸುರಿಯುವ ಸಡಗರವೇನೋ? ಈ ಮಳೆಗೆ ಈಗೀಗ ಕಾಲದ ಹಂಗೇ ಇಲ್ಲ. ಎಲ್ಲವೂ ಹೀಗೆ. ಯಾರೂ ಯಾರಿಗೂ ಕಾಯುವುದಿಲ್ಲ. ತಮಗೆ ಬೇಕೆಂದಾಗ ತಮ್ಮದೇ ತೀರ್ಮಾನ. ಹೊಂದಾಣಿಕೆಯೇ ಸತ್ತು ಹೋಗಿದೆ. ಸಹಬಾಳ್ವೆ ಎಲ್ಲಿಯದು? ಸಾಕ್ಷಿಗೆ ಇಳೆಗೂ ಮಳೆಗೂ ಇರಬೇಕಾದ ಸಾಂಗತ್ಯದಲ್ಲಾದ ಈ ವೈರುಧ್ಯವೇ ಸಾಕಲ್ಲ ?
ಆದರೆ ಆ ಮನುಷ್ಯರು ನಮ್ಮಂತೆ ಬರೀ ಹೊಟ್ಟೆಗೆ ಬದುಕುತ್ತಿಲ್ಲ. ಅದೇನೋ ಜಯಿಸಹೊರಟಿದ್ದಾರಂತೆ. ಇಡೀ ಬ್ರಹ್ಮಾಂಡ ಅವರದ್ದಂತೆ. ಅವರೇ ಯಜಮಾನರಂತೆ. ರಾತ್ರಿಯೂ ಇನ್ನೊಬ್ಬ ಸೂರ್ಯನ ಸೃಷ್ಟಿಸಿಕೊಂಡವರು. ಅದಕ್ಕೆ ಈ ನಮ್ಮ ಜೀವದಾತೆ ಕಾಳಿಯೇ ಒಡಲಂತೆ. ಅಷ್ಟೇ ಅಲ್ಲ ನಮ್ಮಂತೆ ಹಾರಲು ಜೀವವಿಲ್ಲದ ಹಾರುವ ಹಕ್ಕಿಯನ್ನು ಇಟ್ಟುಕೊಂಡಿದ್ದಾರೆ. ಬಹಳ ಯೋಗ್ಯರು. ನಾವಾದರೋ ಅವರ ಗಾಳಕ್ಕೆ ಬರೀ ದಾಳಗಳು. ಅದ್ಹಾಕೋ ಮನಸ್ಸು ಸರಿಯಿಲ್ಲ. ಕಾಕಮಾಮ ಹೇಗೆ ಕ್ಷಣದಲ್ಲಿ ಹೊರಟೇಹೋದ. ಜೀವದ ಬೆಲೆ ಇಷ್ಟೇನಾ? ಎಲ್ಲರೂ ಈ ಭೂಮಿಯ ಮಕ್ಕಳೇ. ಇದು ಅವರಿಗೆ ತಿಳಿದಿಲ್ಲವೇ? ಅವರೇನು ಮೂಢರೇ? ನಮ್ಮ ನೆಲ ಜಲವನ್ನೆಲ್ಲಾ ಹೇಗೆಲ್ಲ ಆವರಿಸುತ್ತಿದ್ದಾರೆ, ಏನು ಮಾಡೋಣ? ತಪ್ಪಿಸಿಕೊಳ್ಳುವುದು ಅದು ಹೇಗೆ? ಅವರಿಗೆ ಬುದ್ದಿ ಹೇಳುವರಾರು? ಅಲ್ಲಿಲ್ಲಿ ಅದೇನೋ ಕಾಡಿನ ದಾರಿಯುದ್ದಕ್ಕೂ ಸಾಲುಗಂಬಗಳು ನಿಂತಿರುತ್ತವೆ. ಆ ಸದ್ದಿಗೆ ಹತ್ತಿರ ಹೋಗಲು ಭಯವಾಗುತ್ತಪ್ಪ, ಅದ್ಹೇನೋ ವಿಚಿತ್ರವಾಗಿ ಸದ್ದು ತೆಗೆಯುವುದು. ಏನದು? ಹಲವು ಸಲ ಕುಂಜಳಿ ಆ ಕಂಬಗಳ ತೋರಿಸಿ ಪ್ರಶ್ನಿಸಿದ್ದಾಳೆ. ಅದರೆ ಅದು ತನಗೆ ಗೊತ್ತಿದ್ದರಲ್ಲವೇ? ಆದರೀಗ ಒಂದಂತೂ ಅರಿವಾಯ್ತು. ಹತ್ತಿರ ಹೋದರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟದ್ದು ಎಂದು. ಕಾಕಮಾಮ ಕ್ಷಣದಲ್ಲೇ ಸೀದು ಹೋದ.

ಪಾಂಜನಲ್ಲಿ ಒಮ್ಮೆಲೆ ತಳಮಳ ಆವರಿಸಿತು. ಕುಂಜಳಿ ಏನು ಮಾಡುತ್ತಿದ್ದಾಳೋ? ಒಂದಾನುವೇಳೆ ಮನೆಯಲ್ಲಿ ಈ ಮಳೆ ರಾದ್ಧಾಂತ ಎಬ್ಬಿಸಿದ್ರೇ? ಪಾಪ ಆಕೆಗೆ ಹುಷಾರಿಲ್ಲ. ಅವಸರಿಸಿತು ಮನ. ಆದರೆ ಏನೂ ಸಿಗುತ್ತಿಲ್ಲ ಬರಿಗೈಯಲ್ಲಿ ಹೋಗಲು ಮನಸ್ಸಾಗಲಿಲ್ಲ. ಅತ್ತ ಇತ್ತ ಹಾರೇ ಹಾರಿದ ಪಾಂಜ. ಎದೆಯಲ್ಲಿ ಎಲ್ಲಿಂದಲೋ ವಿದ್ಯುತ್ ಶಾಕ್ ಕೊಟ್ಟಂತೆ, ಆಗಾಗ ಸೆಳೆತ ಕಾಡಿದಂತಾಯ್ತು. ಅಷ್ಟೇ ಅಲ್ಲೇ ಕುಸಿದ. ಯಾವ ಎಳೆತ ಹೀಗೆ ತನ್ನ ಜರ್ಜರಿತವಾಗಿಸುತ್ತಿದೆ ಎಂದೆನ್ನಿಸಿತು. ಏಳಬೇಕೆನ್ನಿಸಿದರೂ ಏಳಲಾಗುತ್ತಿಲ್ಲ. ಇನ್ನೊಮ್ಮೆ ಎದ್ದೆ ಬಿಟ್ಟ. ಕುಂಜಳಿ ಹೆದರಿಯಾಳು ತಾನು ಬರಲು ಹೊತ್ತಾದರೆ ಪಾಪ. ತಾನು ಬಿಟ್ಟರೆ ಆಕೆಗ್ಯಾರಿಲ್ಲ. ಸಾವರಿಸಿಕೊಂಡ. ಧೈರ್ಯಮಾಡಿ ಹಾರಿದ. ಅಷ್ಟೇ ಅಲ್ಲೇ ಸ್ವಲ್ಪ ದೂರಕ್ಕೆ ಕಾರಗದ್ದೆಯ ಭತ್ತದ ತೆನೆಗಳು ತೂಯ್ದಾಡುತ್ತಿದ್ದವು.

ಪಾಂಜ ತುರಾತುರಿಯಲ್ಲಿ ಒಂದಿಷ್ಟು ಗಬಗಬನೆ ಹೆಕ್ಕಿಕೊಂಡು ಮನೆಯತ್ತ ಧಾವಿಸತೊಡಗಿದ. ಆಕಾಶದ ಉದ್ದಗಲಕ್ಕೂ ಮುಕುರಿದ ಕರಿಮೋಡಗಳ ದಂಡು ಭ್ರಾಂತಿಗೆ ಒಳಗಾದಂತೆ ಒಂದರ ಹಿಂದೊಂದು ಚಲಿಸತೊಡಗಿದ್ದವು. ಇನ್ನೇನು ಆಕಾಸವೇ ಹರಿದು ಭೂಮಿಯ ಮೇಲೆ ಬೀಳುತ್ತದೆಯೋ ಎಂಬಂತೆ ಪ್ರಳಯಕಾಲದ ಮಳೆ ಜಪ್ಪರಿಸಿ ಸುರಿವ ಸುಳಿವು ಕೊಡತೊಡಗಿದವು. ಪುರ.. ಪುರ್.. ಪುರ್.. ಹಕ್ಕಿಗಳ ದಂಡು ಧಾವಂತದಲ್ಲಿ ಗೂಡು ಸೇರುವ ತವಕದಲ್ಲಿತ್ತು. ಪಾಂಜ ಯೋಚಿಸುತ್ತಲೇ ಹಾರುತ್ತಿದ್ದ.

* * * * * *

ಪಶ್ಚಿಮಘಟ್ಟದಲ್ಲಿ ಮೈತುಂಬಿ ಹರಿಯುವ ಕಾಳಿನದಿ ಹೆಸರಿಗೆ ತಕ್ಕಂತೆ ಕಪ್ಪುಹೆಣ್ಣು. ಇಕ್ಕೆಲಗಳಲ್ಲಿ ಕಡು ಹಸಿರು ವನರಾಶಿ. ಆಗೆಲ್ಲ ಈ ಎರಡು ಕಾಲಿನವರು ಅದೇ ಮನುಷ್ಯರು ತಮ್ಮ ದನಕರುಗಳ ಜೊತೆಗೆ ನಮ್ಮೊಂದಿಗೆ ಬೆರೆತು ಬಾಳುತ್ತಿದ್ದರು. ಬರಿಗಾಲಿನಲ್ಲೇ ಇಲ್ಲವೇ ಸಣ್ಣ ಪುಟ್ಟ ಗಾಡಿಗಳ ತರುತ್ತಿದ್ದರು. ಸಹಜೀವನ ಎಂತಹ ಸುಂದರವಾಗಿತ್ತು. ಕಾಡಿನ ನಡುವಿನ ಆ ಗೂಡಲ್ಲಿ ಪಲ್ಲಕ್ಕಿ ತನ್ನ ಪುಟ್ಟ ಮರಿಗೆ ಉಣಿಸು ನೀಡುತ್ತಿದ್ದಳು. ಅಲ್ಲೆ ಸ್ವಲ್ಪ ದೂರ ಪರಮ ಸುಮ್ಮನೆ ಅಲ್ಲಿ ಇಲ್ಲಿ ಸುತ್ತುತ್ತ ಸಣ್ಣ ಹುಳಹುಪ್ಪಡಿಗಳ ತಂದು ಸುರುವುತ್ತಿದ್ದ. ಮಗು ಪಾಂಜ ಹೊಸ ಉತ್ಸಾಹದಲ್ಲಿ ಪುಟ ಪುಟ ನೆಗೆದು ಜಿಗಿದು ಮೋಜಿನಲ್ಲಿ ಕುಪ್ಪಳಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ತಂದೆಯ ಹಿಂದೆ ಹಾರುತ್ತ ಮತ್ತೆ ಬೆದರಿ ತಾಯಿಯ ಬಳಿಗೋಡಿ ಬರುತ್ತಿದ್ದ. ಅಪೂರ್ವ ಜೀವನದ ಕಸುವನ್ನು ಹೊಂದಿದ ಬದುಕು. ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ. ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು, ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು, ಹುಚ್ಚಾಟ ಮಾಡುವುದು ಶುರುವಾಗಿತ್ತು. ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ . ಆದರೆ ಪರಮ ವಿಷಾದಪಡುತ್ತಿದ್ದ. ಓ.. ದೇವರೇ ಮುಂದೇನಾಗುವುದೋ? ಈ ಜನ ಇಲ್ಲಿಗೂ ಬಂದರು. ಇವರಿದ್ದಲ್ಲಿ ನದಿಯೂ ಬತ್ತುವುದು, ಹಸಿರು ಸಾಯುವುದು. ಏನೇನು ಅನುಭವಿಸಬೇಕೋ ನಿಟ್ಟುಸಿರು ಹಾಕುವಾಗ ಪಾಂಜನಿಗೆ ಕೊಂಚ ಕೊಂಚ ಅರ್ಥವಾಗುತ್ತಿತ್ತು. ಅವರುಗಳು ಪ್ಲಾಸ್ಟಿಕ್ಕು ಪೊಟ್ಟಣಗಳಲ್ಲಿ ಏನೇನೋ ತಂದು ತಿಂದು ಬಿಸಾಕಿ ಹೋಗುತ್ತಿದ್ದರು. ಅವುಗಳ ತಿಂದ ಒಂದೆರಡು ದನಕರುಗಳು ನೆಟ್ಟಗೆ ಶಿವನ ಪಾದ ಸೇರಿದ್ದವು. ಆಮೇಲೆ ಪಾಂಜ ಅವರನ್ನು ಕಂಡರೆ ಬೆದರತೊಡಗಿದ. ಇವರು ನವನವೀನರು. ಹಾಲು ಹೈನು ಮಾಡುವ ಆ ಮನುಷ್ಯರಲ್ಲ ಎಂದುಕೊಂಡ.

ಅದಾಗಿ ಸ್ವಲ್ಪೇ ದಿನಗಳಲ್ಲಿ ಮತ್ತೆ ದೊಡ್ಡದೊಡ್ಡ ವಾಹನಗಳ ಆರ್ಭಟ ಜೋರಾಗಿತ್ತು. ಇಚಲು ಮರದೆತ್ತರದ ಕಂಬಗಳು ಕಾಡಿನ ಮರಗಳ ಉರುಳಿಸಿ ನಡುನಡುವೆ ಎದ್ದು ನಿಂತವು. ಅವನ್ನು ನೆಡುವಾಗ ಅದೇನೋ ಸದ್ದು ಮಾಡುವ ಭಯಂಕರಾಕಾರದ ಯಂತ್ರಗಳು ಎದೆ ಜಲ್ಲೆನ್ನಿಸುವಂತೆ ಕರ್ಕಶವಾಗಿ ನುಡಿಯುತ್ತಿದ್ದವು. ಪಲ್ಲಕ್ಕಿ, ಪರಮ ಮತ್ತು ಪಾಂಜ ಸ್ವಲ್ಪದಿನ ಮನೆ ಬಿಟ್ಟು ದೂರದ ಒಳ ಕಾಡಿನ ಜಾಡು ಹಿಡಿದರು. ಅವರಂತೆ ಹಲವರು ಹಿಂದೆ ಬಂದರು. ಅದೊಂದು ದಿನ ಆದರೆ ಎಷ್ಟು ದಿನವೆಂದು ಹೀಗೆ ಬದುಕುವುದು. ಈ ಮನುಷ್ಯರು ನಮ್ಮ ಗೂಡನ್ನು ಚಿಂದಿ ಉಡಾಯಿಸುವರು. ಅಲ್ಲಿಗೇ ಹೋಗೋಣ. ಪಲ್ಲಕ್ಕಿ ಧೈರ್ಯ ಮಾಡಿ ಎಲ್ಲರನ್ನೂ ಹೊರಡಿಸಿದಳು. ನಾಲ್ಕಾರು ದಿನಗಳಾಗಿದ್ದವು. ಪಾಂಜ ಗೆಳೆಯರೊಡನೆ ಹೊರ ಹೋಗಿದ್ದ. ದೂರವೆಲ್ಲೂ ಹೋಗಬೇಡ ಪಲ್ಲಕ್ಕಿ ಮಗನಿಗೆ ಎಚ್ಚರಿಸಿದ್ದಳು. ಪರಮ ಮತ್ತು ಪಲ್ಲಕ್ಕಿ ಅಲ್ಲೆ ಗೂಡ ಸಮೀಪವೇ ಮಾತಾಡುತ್ತ ಕಲ್ಲುಸಕ್ಕರೆಯಾಗಿದ್ದರು. ನೋಡನೋಡುತ್ತ ಅವರಿದ್ದ ಕಾಡಿನ ಸುತ್ತಲೂ ತರಗೆಲೆಗಳಿಗೆ ಬೆಂಕಿ ಹೊತ್ತಿಕೊಂಡಿತು. ಅದ್ಯಾರೋ ಮನುಷ್ಯರು ಸಿಗರೇಟಿನ ತುಂಡು ಬಿಸಾಡಿರಬೇಕು. ಬೇಸಿಗೆಯ ಆ ಧಗೆಗೆ ಕಾಳ್ಗಿಚ್ಚು ಕಾಡನ್ನೆ ಸುತ್ತಿಬಿಟ್ಟಿತು. ಪಾಂಜ ಹೊರ ನಿಂತು ಬೊಬ್ಬಿರಿಯತೊಡಗಿದ. ಅರಚತೊಡಗಿದ. ಆದರೆ ಅವರ ಗೂಡಿನ ಸುತ್ತಮುತ್ತ ಆವರಿಸಿದ ಬೆಂಕಿಗೆ ಕ್ಷಣಾರ್ಧದಲ್ಲಿ ಗೂಡು ಸಹಿತ ಪರಮ ಪಲ್ಲಕ್ಕಿ ಭಸ್ಮವಾಗಿದ್ದರು. ತಾನೆಂದು ಮತ್ತೆ ಆ ಕಾಡಿನತ್ತ ಹೋಗಲಿಲ್ಲ. ಹೆತ್ತವರ ಬಲಿಪಡೆದ ಆ ಜನ ಆ ಕಾಡು ಆತನ ನೆಮ್ಮದಿ ಕಸಿದಿದ್ದವು. ಮುಂದೆ ಪಾಂಜನಿಗೆ ಕುಂಜಳಿ ಮನದನ್ನೆಯಾಗಿ ಬಂದಿದ್ದಳು. ನೆನೆಪು ಪಾಂಜನ ಕಣ್ಣಂಚನ್ನು ಒದ್ದೆಯಾಗಿಸಿತು. ಹನಿ ಉದುರಿದವು. ಕಣ್ಣು ಮಂಜಾಯಿತು. ಅರೇ ಮನೆ ಬಂದೇ ಬಿಟ್ಟಿತು. ನಾನು ಅಳುವುದನ್ನು ಕುಂಜಳಿ ನೋಡಿದರೆ? ಬೇಡ.. ಸಮಾಧಾನ ಹೇಳಿಕೊಂಡ. ಕಣ್ಣಿರೊರೆಸಿಕೊಂಡ. ಹೊಸ್ತಿಲ ಕಡೆ ನೋಡಿದರೆ ಇತನ ದಾರಿ ಕಾಯುತ್ತ ಕಿಟಕಿಯಂಚಲ್ಲಿ ಮುಖವಿಕ್ಕಿದ ಕುಂಜಳಿ ಕಾಣಿಸಿದಳು. ಏನೋ ತೃಪ್ತಿ ಮನಸ್ಸಿಗೆ ಆವರಿಸಿತು. ಮೈ ಹುಷಾರಿಲ್ಲವೆಂದ ಕುಂಜಳಿ ಖುಷಿಯಲ್ಲಿದ್ದಳು. ಮೊಟ್ಟೆ ನಾಶವಾಗಿದ್ದಕ್ಕೋ, ಕೂತೂ ಕೂತೂ ಕಾವು ಕೊಟ್ಟಿದ್ದಕ್ಕೋ ಕೃಶವಾದಂತೆ ಕಾಣುತ್ತಿದ್ದಳು. ಆದರೂ ಮುಖದಲ್ಲಿ ಕಳೆ ಹೆಚ್ಚಿತ್ತು. ಕೊಕ್ಕೆತ್ತಿ ಬಾಯಗಲಿಸಿದಳು ಕುಂಜಳಿ. ಪಾಂಜ ಸತಾಯಿಸಿದ. ಹುಸಿಮುನಿಸು ತೋರಿದಳು. ಮತ್ತೆ ಬಾಯಗಲಿಸಿ ನಿಂತಾಗ ಕಾಳು ಉಣಿಸಿದ ಪಾಂಜ. ಆಕೆಯನ್ನು ಮಗುವಿನಂತೆ ಪಾಲಿಸುತ್ತಿದ್ದ. ತಮ್ಮ ದಾಂಪತ್ಯ ಕ್ಷಣಕ್ಷಣದ ನವೀನತೆಗೊಂದು ಸಾಕ್ಷಿ ಎಂದುಕೊಂಡ.
ಇಬ್ಬರೂ ಆ ದಿನ ಮಳೆಯಲ್ಲಿ ನೆನೆದರು. ಕುಂಜಳಿ ಏನನ್ನೋ ಬಯಸುತ್ತಾ ವೈಯಾರ ತೋರುತ್ತಿದ್ದಳು. ಆಕೆ ಹಾಗೆ ನರ್ತಿಸುತ್ತಿದ್ದರೆ ಪಾಂಜ ಉನ್ಮಲಿತನಾದ. ಆಕೆಯ ಕಣ್ಣುಗಳ ಮಧುರಭಾವ ಸೆಳೆಯತೊಡಗಿತು. ಆಕೆಯ ಬಾಯಲ್ಲಿ ಕಾಳು ಇಳಿಸಿ ತಾನು ಮೆದ್ದ. ನಿಧಾನಕ್ಕೆ ಆಕೆಯ ಕೊಕ್ಕಲ್ಲಿ ಕೊಕ್ಕು ತೂರಿದ. ಆಕೆ ರೋಮಾಂಚನಗೊಂಡಳು. ಮೃದುವಾಗಿ ಒತ್ತಿ ಮುದ್ದಿಸಿದ. ಆಕೆಯ ಪಕ್ಕೆಗಳು ಹರಹಿಕೊಂಡವು ವಿಸ್ತಾರವಾದವು ಬಯಕೆ ಬಿಚ್ಚಿತು.ಎದೆಬಡಿತ ಹೆಚ್ಚಿತು. ಕುಂಜಳಿ ತೆರೆದುಕೊಂಡಳು. ಉಲ್ಲಸಿತನಾದ ಪಾಂಜ ಆಕೆಯನ್ನಾಕ್ರಮಿಸಿದ. ಜಗತ್ತು ಮರೆತು ಹೋಗಿತ್ತು. ಸುರತ ಸುಖ ಸ್ವರ್ಗದ ಅಮಲನ್ನೆ ಇಳಿಸಿತ್ತು. ಕುಂಜಳಿಯ ಮೈ ಹಿಗ್ಗಿತು. ಮತ್ತೆ ಮೊಟ್ಟೆ ಇಟ್ಟಳು.

ನಿನಗೆ ನಾನೆಂದರೆ ಇಷ್ಟವೇ? ಅದೊಂದು ದಿನ ಆತನ ಎದೆಗೊರಗಿ ಕೇಳಿದಳು. ಪಾಂಜ ನಸುನಕ್ಕ. ಯಾವ ಮಳೆ ಗಾಳಿಗೂ ನನ್ನ ನಿನ್ನ ದೂರ ಮಾಡಲಾಗದು. ಎಂದ. ಮನಸ್ಸಿನಲ್ಲಿ ಮನುಷ್ಯರ ಆ ಚಿತ್ರಗಳು ಮೂಡಲಾರಂಬಿಸಿದವು. ಮಕ್ಕಳು ಮರಿ ಮಾಡಿಕೊಂಡು ನೂರಾರು ವರ್ಷ ಹೀಗೆ ನಿನ್ನ ಜೊತೆಜೊತೆಯಾಗಿ ನನಗಿರಬೇಕು. ಮುದ್ದಾಗಿ ಉಲಿದಳು ಕುಂಜಳಿ. ಪಾಂಜ ಏನೋ ಹೇಳುವವನಿದ್ದ. ಅಷ್ಟರಲ್ಲಿ ಅದೇ.!. ಅವರೇ.. ಬಂದೇ ಬಿಟ್ಟರು.! ಹುಯ್ಯ್ಲೆಬ್ಬಿಸುತ್ತಾ …ಅವರೇ.. ಅಯ್ಯೋ! ದೇವರೇ.. ಇನ್ನೇನು ಗತಿನೋ? ತಳಮಳಗೊಂಡ ಪಾಂಜ. ಅವರ ಕೈಯಲ್ಲಿ ಅದೇನೋ ಫೋಟೋ ತೆಗೆಯುವ ಕ್ಯಾಮರಾ ಅಂತೆ. ಮತ್ತೊಂದು ಮಗದೊಂದು ಅಂತೆ. ಕುಂಜಳಿ ಬೆದರಿದಳು. ನಮ್ಮ ಚಿತ್ರವನ್ನು ತೆಗೆದು ಪತ್ರಿಕೆಗಳಲ್ಲಿ ಹಾಕ್ತಾರಂತೆ ಇವರು. ಅದನ್ನು ಬೇರೆ ಜನ ಓದಿ ನೋಡಿ ಶಹಬ್ಬಾಸ್‌ಗಿರಿ ಕೊಡ್ತಾರಂತೆ ಸಣ್ಣ ದನಿಯಲ್ಲಿ ಪಾಂಜ ತನಗೆ ಗೊತ್ತಿದ್ದ ಸಂಗತಿ ಹೇಳಿದ. . ಪೇತಲನಂತವನೊಬ್ಬ ಇವರಿದ್ದ ಗಿಡದ ಹತ್ತಿರ ಬಂದು ಸದ್ದು ಗದ್ದಲವಾಗದಂತೆ ನಿಧಾನವಾಗಿ ಫೋಟೋ ಕ್ಲಿಕ್ಕಿಸಿಕೊಂಡ. ಈ ಸಲ ಪೇಪರಿಗೆ ಗುಬ್ಬಿಗಳ ಬಗ್ಗೆ ಬರೀತಿಯೇನೋ? ಸಣ್ಣ ಚಡ್ಡಿ ತೊಟ್ಟ ಅವನೊಂದಿಗಿದ್ದ ಪ್ರಾಯದ ಹುಡುಗಿ ಕೇಳಿದಳು. ಹೌದು ಕಣೇ! ಅವುಗಳ ಜೀವನ ಕ್ರಮ ಬಹಳೇ ಸ್ವಾರಸ್ಯಭರಿತ. ಎಂದನಾತ.

ಅವರೇನೇನೋ ಮಾತನಾಡುತ್ತಿದ್ದರು. ಚರ್ಚಿಸುತ್ತಿದ್ದರು. ಕುಂಜಳಿ ಪಾಂಜನ ಎದೆಗೊರಗಿ ಆ ಜನರತ್ತಲೇ ಬೆರಗಿನ ಕಣ್ಣುಗಳಿಂದ ನೋಡುತ್ತಲೇ ಇದ್ದಳು. ಅದೇಕ್ಷಣ ಆ ಹುಡುಗಿಯ ಕೈಲಿದ್ದ ಅದೇನೋ ವಸ್ತು ರಿಂಗುಣಿಸತೊಡಗಿತು. ಮರುಕ್ಷಣ ಕುಂಜಳಿ ಬೆವರತೊಡಗಿದಳು. ಕೃಶವಾಗಿದ್ದ ಶರೀರ ಕಂಪಿಸಲಾರಂಭಿಸಿತು. ಆ ರಿಂಗುಣದ ತರಂಗಾಂತರಗಳು ಅಲೆ‌ಅಲೆಯಾಗಿ ಏರಿದಷ್ಟೂ ಆಕೆ ನಿತ್ರಾಣಗೊಳ್ಳತೊಡಗಿದಳು. ಆ ಹುಡುಗಿ ಅದ್ಯಾವುದೋ ಭಾಷೆಯಲ್ಲಿ ನುಲಿಯುತ್ತಾ ಮಾತನಾಡುತ್ತಿದ್ದರೆ ಕುಂಜಳಿಯ ನರನರಗಳು ಜರ್ಜರಿತವಾಗತೊಡಗಿದವು. ಪಾಂಜನಿಗೂ ಕೂಡಾ ಅಸ್ವಸ್ಥತೆ ಕಾಡಿದಂತೆನ್ನಿಸಿತು. ಆ ಕಂಬಗಳ ಹತ್ತಿರ ಹೋದಾಗಲೆಲ್ಲಾ ತನಗೂ ಅಂತಹ ಅನುಭವ ಆದದ್ದು ಇತ್ತಲ್ಲ. ಈ ಕಾಡಿನ ನಡುನಡುವೆ ತಲೆ ಎತ್ತಿದ ಆ ಕಂಬಗಳು… ಎತ್ತರದ ಗೋಪುರಗಳು.. ಅದೇನನ್ನೋ ಮಾಟ ಮೋಡಿ ಶಕ್ತಿಯನ್ನು ನಮ್ಮ ಮೇಲೆ ಛೂ.. ಬಿಟ್ಟಿವೆ ಎಂದುಕೊಳ್ಳುತ್ತಿದ್ದ ಪಾಂಜ. ಈಗದು ಸತ್ಯವಾಗತೊಡಗಿತು. ಆ ತರಂಗಗಳು ಗಿರಕಿ ಹೊಡೆಯಲಾರಂಭಿಸಿದವು. ಕುಂಜಳಿಯ ಉಸಿರು ನಿಧಾನವಾಗಿ ಕುಸಿಯತೊಡಗಿತು. ಆ ಹುಡುಗಿ ಮೋಜಿನಲ್ಲಿ ಕುಲುಕಿ ಬಳುಕಿ ಪೋನಿನ ಸಂಭಾಷಣೆಯಲ್ಲಿದ್ದರೆ ಗೋಪುರದ ತುದಿಯಿಂದ ಹೊರಡುವ ಆ ತರಂಗಗಳು ಕುಂಜಳಿಯ ಉಸಿರನ್ನು ನಿಧಾನವಾಗಿ ಹೀರತೊಡಗಿದವು. ಪಾಂಜ ಉಮ್ಮಳಿಸಿದ. ಮೊಟ್ಟೆಗಳ ಕಡೆಗೊಮ್ಮೆ ನೋಡಿದ. ಕುಂಜಳಿ.. ಕುಂಜಳಿ… ಪ್ರಲಾಪಿಸಿದ. ಕಣ್ಣ್ತೆರೆಯುತ್ತಿಲ್ಲ ಕುಂಜಳಿ. ಕತ್ತು ನಿಧಾನವಾಗಿ ವಾಲತೊಡಗಿತು. ಆಕೆಯ ಮೈ ತಣ್ಣಗೆ ತಾಕಿದಂತಾಗಿ ಪಾಂಜ ಭಯವಿವ್ಹಲಿತನಾದ. ಆಗಬಾರದ್ದು ಆಗೇ ಹೋಯಿತು. ಪಾಂಜ ಮೈ ಪರಚಿಕೊಂಡ. ಕುಂಜಳಿಯ ಕೊಕ್ಕಿಗೆ ತನ್ನ ಕೊಕ್ಕು ತೂರಲು ನೋಡಿದ. ಕತ್ತಿನ ಸುತ್ತ ಕೊಕ್ಕಿನಿಂದ ಮುದ್ದಿಸಹೋದ. ಮೋಹದ ಮಡದಿ ನುಡಿಗೊಡಲಿಲ್ಲ. ಕಣ್ಣರಳಿಸಲಿಲ್ಲ.

* * * * * *

ಹೆಜ್ಜೆ ಇಟ್ಟೇ ಬಿಟ್ಟಿತು ಕಾಳಿ ಕಣಿವೆಗೆ ಪ್ರವಾಸೋದ್ಯಮದ ಬೃಹತ್ ಯೋಜನೆ- ಕಾಳಿ ಕಯಾಕಿಂಗ್. ದೇಶವಿದೇಶದ ನೂರಾರು ಜನ ನಾಡಿಗೆ ಬೆಳಕು ನೀಡುವ ಕಾಳಿಯ ಒಡಲ ನೀರಲ್ಲಿ ಮಿಂದೇಳುವ ಸೌಭಾಗ್ಯ ನೆನೆದು ಹುರುಪುಗೊಂಡರು. ಹೊಟೆಲ್ಲು. ಅಂಗಡಿಕಾರರು, ರೆಸಾರ್ಟ ಮಾಲಿಕರು ಹಣದ ಹರಿವಿನ ಖುಷಿಯಲ್ಲಿ ಮುಳುಗೆದ್ದರು. ಬಣ್ಣ ಬಣ್ಣದ ಅಂಗಿಗಳ ತೊಟ್ಟ ಅವರುಗಳೆಲ್ಲ ಅಷ್ಟೇ ಬಣ್ಣದ ಕಯಾಕ್‌ಗಳ ಮೇಲೆ ನೀರಲ್ಲಿ ಕಸರತ್ತು ಮಾಡುತ್ತ ಮಸ್ತಿಯಲ್ಲಿ ತೊಡಗಿದ್ದರೆ ಕಾಡಿನ ಜೀವ ಜಗತ್ತು ಸಣ್ಣಗೆ ನಡುಗುತ್ತಿತ್ತು. ಅಲ್ಲಲ್ಲಿ ಪೊದೆಗಳಲ್ಲಿ ಅವಿತು ಕೂತು ಬೆರಗುಗಣ್ಣು ಬೆದರುಗಣ್ಣುಗಳಿಂದ ಅದೆಷ್ಟೋ ಜೀವಗಳು ಭಯದ ಹೊದಿಕೆಯಡಿ ಸ್ತಬ್ಧವಾಗಿದ್ದವು. ಬಣ್ಣದ ಕಯಾಕ್‌ಗಳು ಕಾಳಿಯ ಭೋರ್ಗೆರೆಯುವ ನೀರಿನಲ್ಲಿ ಹುಟ್ಟು ಹಾಕುತ್ತ ನೀರ ಧಾರೆಯ ಮೇಲೂ ಕೆಳಗೂ ಸಾಗುತ್ತಿದ್ದರೆ ಅಲ್ಲೊಂದು ಗಿಡದ ಮೇಲೆ ಕುಳಿತ ಏಕಾಂಗಿ ಮೂಕ ಗುಬ್ಬಿಯ ಕಣ್ಣೀರ ಹನಿ ನದಿನೀರಿನೊಂದಿಗೆ ಬೆರೆತು ಹೋಗುತ್ತಿತ್ತು.
*****

Tagged:

One Comment

  • ಕಾಳಿಯ ಬಗಳಲ್ಲಿ ನಿಜಕ್ಕೂ ರೋಮಾಂಚಕ ಕಥೆ ಪೂರ್ಣ ಗೊಳ್ಳುವವರೆಗೂ ಓದುಗರನ್ನು ಸೆಳೆಯುತ್ತದೆ . ಲೇಖಕರಿಗೆ ಶುಭಾಷಯಗಳೊಂದಿಗೆ ಧನ್ಯವಾದಗಳು

Leave a Reply to ಅನುಪಮ Cancel reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...